ತಮ್ಮ ೫ನೇ ವಯಸ್ಸಿನಿಂದಲೇ ತಾಳವಾದ್ಯಗಳಲ್ಲಿ ಆಸಕ್ತಿ ತೋರಿಸಿದ ಮೈಸೂರು ಅನಂತಸ್ವಾಮಿ ಅವರು ೧೯೨೩ರಲ್ಲಿ ಜನಿಸಿದರು. ಕಲಾವಿದರ ಮನೆತನದಲ್ಲಿ ಹುಟ್ಟಿ ಬೆಳೆದ ಈ ಕಲಾವಿದರು ತಮ್ಮ ಮೃದಂಗ ಶಿಕ್ಷಣವನ್ನು ಶ್ರೀ ಸುಬ್ಬಣ್ಣನವರಲ್ಲಿ ಪ್ರಾರಂಭಿಸಿದರು. ನಂತರ ಹೆಚ್ಚಿನ ಕಲಾಭ್ಯಾಸವನ್ನು ಶ್ರೀ ಶ್ರೀನಿವಾಸಲು ನಾಯ್ಡು ಅವರ ಬಳಿ ಪಡೆದರು.

ಅನಂತಸ್ವಾಮಿ ತಮ್ಮ ೯ನೇ ವಯಸ್ಸಿನ ಮೃದಂಗ ಹಾಗೂ ತಬಲಾವಾದನದಲ್ಲಿ ಪರಿಣತಿಯನ್ನು ಗಳಿಸಿಕೊಂಡು ಸಂಗೀತ ಕಚೇರಿಗಳಲ್ಲಿ ಭಾಗವಹಿಸತೊಡಗಿದರು. ೧೯೩೪ರಲ್ಲಿ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಏರ್ಪಡಿಸಿದ್ದ ಬೃಹತ್ ಸಂಗೀತ ಸಮ್ಮೇಳನದಲ್ಲಿ ಗಣ್ಯ ಕಲಾವಿದರಿಗೆ ಸಮರ್ಥ ತಾಳವಾದ್ಯ ನೆರವು ನೀಡಿದ ಅನಂತಸ್ವಾಮಿ ಅವರಿಗೆ ಬೆಳ್ಳಿ ಬಟ್ಟಲು ಹಾಗೂ ಪ್ರಶಸ್ತಿ ಪತ್ರಗಳನ್ನು ಮಹಾರಾಜರು ನೀಡಿರುವುದು ಅವರ ಪ್ರತಿಭೆಯ ಪ್ರತಿಬಿಂಬ.

ನಂತರ ಸುಮಾರು ೩೫ ವರ್ಷ ಕಾಲ ಮೈಸೂರಿನಲ್ಲಿರುವ ಕುರುಡರ ಮೂಗರ ಪಾಠಶಾಲೆಯಲ್ಲಿ ಮೃದಂಗ ಉಪಾಧ್ಯಾಯರಾಗಿ ಸೇವೆಸಲ್ಲಿಸಿದ ಹಿರಿಮೆ ಇವರದು. ೧೯೬೦ರಿಂದ ೧೯೭೦ ರವರೆಗೆ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಮೂಲಕ ಶ್ರೀ ಎಂ. ಎಸ್.ನಟರಾಜನ್ ಶ್ರೀಮತಿ ಮಾಯಾರಾವ್ ಅವರ ಮಾರ್ಗದರ್ಶನದಲ್ಲಿ ಅನಂತಸ್ವಾಮಿ ಅಂತರರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾಡಿಗೆ ಕೀರ್ತಿ ತಂದಿದ್ದಾರೆ.

ಮೈಸೂರು ಆಕಾಶವಾಣಿ ಪ್ರಾರಂಭವಾದಾಗಿನಿಂದ ಇತ್ತೀಚಿನವರೆಗೂ ಅಂದರೆ ೧೯೮೪ರವರೆಗೆ ನಿಲಯದ ಕಲಾವಿದರಾಗಿ ಅನಂತಸ್ವಾಮಿ ಸೇವೆಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಅನಂತಸ್ವಾಮಿ ಭರತನಾಟ್ಯ, ಕಥಕ್ಕಳಿ ಹಾಗೂ ಕಥಕ್‌ನೃತ್ಯ ಕಾರ್ಯಕ್ರಮಗಳಿಗೆ ಮೃದಂಗ ತಬಲ ವಾದ್ಯಗಳನ್ನು ಸೊಗಸಾಗಿ ನುಡಿಸಿ ಜನಮನ ಗೆದ್ದಿದ್ದಾರೆ.

೬೮ ವರ್ಷದ ಈ ತಾಳವಾದ್ಯ ಕಲಾವಿದರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇಂದು ತನ್ನ ೧೯೮೯-೯೦ನೇ ಸಾಲಿನ ಗೌರವ ಪ್ರಶಸ್ತಿ ಹಾಗು ’ಕರ್ನಾಟಕ ಕಲಾ ತಿಲಕ’ ಬಿರುದನ್ನು ನೀಡಿ ಗೌರವಿಸಿದೆ.