ಬೆಂಗಳೂರಿನ ಕರ್ನಾಟಕೀ ಸಂಗೀತ ಮನೆತನದಲ್ಲಿ ಹುಟ್ಟಿ ಹಿಂದೂಸ್ಥಾನಿ ಸಂಗೀತಕ್ಕೆ ಮಾರು ಹೋಗಿ ಹಿಂದೂಸ್ಥಾನಿ ಸಂಗೀತದಲ್ಲಿ ಸಾಧನೆಗೈದು, ಸಂಗೀತದಲ್ಲಿ ಎರಡು ಪಿ.ಹೆಚ್‌.ಡಿ. ಪದವಿ ಪಡೆದು ವಿಶ್ವವಿದ್ಯಾಲಯದ ಸಂಗೀತ ಪ್ರಾಧ್ಯಾಪಕರಾಗಿ, ಸಂಗೀತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿ ಬೆಂಗಳೂರಿನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿರುವ ಖ್ಯಾತ ಹಿಂದೂಸ್ಥಾನಿ ಗಾಯಕ ಹಾಗೂ ಶ್ರೇಷ್ಠ ಸಂಗೀತ ಶಾಸ್ತ್ರಜ್ಞ ಡಾ. ಎಂ. ಆರ್. ಗೌತಮ ಅವರ ರಾಷ್ಟ್ರ ಖ್ಯಾತಿಯ ಕನ್ನಡಿಗರು.

ಡಾ. ಎಂ.ಆರ್. ಗೌತಮರು ಜನಿಸಿದ್ದು ಬೆಂಗಳೂರಿನಲ್ಲಿ. ಅವರ ತಂದೆ ಸಂಗೀತ ಪ್ರಿಯರು. ಗೌತಮರಿಗೆ ಆರು ಜನ ಸಹೋದರಿಯರು. ಕೊನೆಯವರೇ ಗೌತಮ. ಆರು ಜನ ಸಹೋದರಿಯರು ಕರ್ನಾಟಕೀ ಸಂಗೀತ ಕಲಿತವರು. ಮನೆಯಲ್ಲಿ ಸದಾ ಕರ್ನಾಟಕೀ ಸಂಗೀತದ ನಾದ ಝೇಂಕಾರ. ಅದೇಕೋ ಗೌತಮರಿಗೆ ಕರ್ನಾಟಕೀ ಸಂಗೀತ ಹಿಡಿಸಲಿಲ್ಲ. ಮಗನ ಕೋರಿಕೆಯ ಮೇರೆಗೆ ತಂದೆ ಗೌತಮರನ್ನೂ ಬೆಂಗಳೂರಿನಲ್ಲಿ ಹಿಂದೂಸ್ಥಾನಿ ಸಂಗೀತ ಶಾಲೆ ನಡೆಸುತ್ತಿದ್ದ ಪಂ. ಗೋವಿಂದ ಭಾವೆಯವರಲ್ಲಿ ಕರೆದೊಯ್ದು ಹಿಂದೂಸ್ಥಾನಿ ಸಂಗೀತ ಕಲಿಕೆಗೆ ಅನುವು ಮಾಡಿದರು. ಹೀಗಾಗಿ ಗೌತಮರು ಆರಂಭದಲ್ಲಿ ಕೆಲವು ದಿನ ಗೋವಿಂದ ಭಾವೆಯವರಲ್ಲಿ ನಂತರ ಆಗ್ರಾ ಘರಾಣೆಯ ಖ್ಯಾತ ಗಾಯಕ ಪಂ. ರಾಮರಾವ ವ್ಹಿ. ನಾಯಕರಲ್ಲಿ ೧೨ ವರ್ಷ ಹಿಂದೂಸ್ಥಾನಿ ಸಂಗೀತ ತಾಲೀಮು ಪಡೆದುಕೊಂಡರು.

ಹಿಂದೂಸ್ಥಾನಿ ಸಂಗೀತದಲ್ಲಿ ಅಪೃ ಸಾಧನೆ ಗೈದಿರುವ ಗೌತಮರು ಸಂಗೀತ ವಿಷಯದಲ್ಲಿ ಎರಡು (ಪಿ.ಹೆಚ್‌.ಡಿ. ಹಾಗೂ ಡಿ. ಮ್ಯೂಜಿಕ್‌) ಸಂಶೋಧನ ಪ್ರಬಂಧ ಮಂಡಿಸಿದ್ದಾರೆ. ದೆಹಲಿ ಆಕಾಶವಾಣಿ ಕೇಂದ್ರದಲ್ಲಿ ಮ್ಯೂಜಿಕ್‌ ಪ್ರೊಡ್ಯೂಸರ್ ಆಗಿ (೧೯೫೫-೧೯೯೩) ಕೆಲಸ ಮಾಡಿದರು. ವೃತ್ತಿಯ ಜೊತೆ ಜೊತೆಯಲ್ಲಿಯೇ ಅವರು ಅನೇಕ ಮಹಾನ್‌ ಸಂಗೀತ ದಿಗ್ಗಜರಿಂದ ಸಂಗೀತ ವಿದ್ಯೆ ಕಲಿಯುತ್ತ ಸಂಗೀತದಲ್ಲಿ ಅಪಾರ ಹೆಸರು ಪಡೆದರು. ಪಂ. ದಿಲೀಪ ಚಂದ ವೇದಿಯವರಿಂದ ಖಯ್ಯಾಲ್‌, ಡಾಗರ ಸಹೋದರರಿಂದ ಧ್ರುಪದ್‌-ಧಮಾರ್. ಶ್ರೀಮತಿ ಸಿದ್ಧೇಶ್ವರ ದೇವಿಯವರಿಂದ ಠುಮರಿ ಮತ್ತು ದಾದ್ರಾ, ಉಸ್ತಾದ್‌ ಅನ್ವರ್ ಹುಸೇನ್‌ ಖಾನರಿಂದ ಆಗ್ರಾ ಘರಾಣೆ, ಗಯಾದ ಪಂ. ರಾಮುಜಿ ಮಿಶ್ರಾ ಅವರಿಂದ ಟಪ್ಪಾ, ಪಂ. ಠಾಕೂರ ಜಯದೇವ ಸಿಂಗಜೀಯವರಿಂದ ಸಂಗೀತದ ಶಾಸ್ತ್ರಜ್ಞಾನ, ಡಾ. ಜೀನ್‌ ಕ್ಲೇಯಿನ್‌ರಿಂದ ಧ್ವನಿ ಶಾತ್ರ – ಹೀಗೆ ಅನೇಕ ದಿಗ್ಗಜರಿಂದ ಸಂಗೀತ ಜ್ಞಾನ ಪಡೆದ ಡಾ. ಎಂ.ಆರ್. ಗೌತಮರು ಕಾಶಿಯ ಬನಾರಸ ಹಿಂದು ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿ, ಡೀನ್‌ ಆಗಿ (೧೯೬೩-೧೯೮೪) ಖೈರಾಗಡದ ಇಂದಿರಾ ಸಂಗೀತ ವಿಶ್ವವಿದ್ಯಾಲಯದ (ಮಧ್ಯಪ್ರದೇಶ) ಕುಲಪತಿಗಳಾಗಿ (೧೯೮೦-೧೯೮೩) ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಈಗ ಬೆಂಗಳೂರಿನಲ್ಲಿ ನೆಲೆಸಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಪ್ರೊಡ್ಯೂಸರ್ ಎಮಿರಟಸ್‌ ಆಗಿ ಕೋಲ್ಕತ್ತಾದ AIR ಮತ್ತು ದೂರದರ್ಶನದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಸಂಗೀತ ಸೆಮಿನಾರ್, ನಡೆಸಿದ್ದು ಅವರ ಹೆಗ್ಗಳಿಕೆ. ICCR ವತಿಯಿಂದ ವಿದೇಶಗಳಲ್ಲಿ ಸಂಗೀತ ಪ್ರಸಾರ ಮಾಡಿದ್ದಾರೆ. ಅವರು ಬರೆದ `The MusicAl Heritage of India’, `The evolution of raga and tala in indian music’ – ಈ ಎರಡು ಇಂಗ್ಲೀಷ್‌ ಗ್ರಂಥಗಳನ್ನು ದೆಹಲಿಯ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.

ಅವರಿಗೆ ಲಂಡನ್ನಿನ ರಾಯಲ್‌ ಏಶಿಯಾಟೆಕ್‌ ಸೋಸಾಯಿಟಿ ಫೆಲೋಶಿಪ್‌ ನೀಡಿ ಗೌರವಿಸಿದೆ. Voice culture (ಧ್ವನಿ ಸಂಸ್ಕಾರ) ಬಗ್ಗೆ ಆಳವಾದ ಅಧ್ಯಯನ ಮಾಡಿ ದೇಶದ ಕೆಲವೇ ಸಂಗೀತ ಶಾಸ್ತ್ರಜ್ಞರಲ್ಲಿ ಒಬ್ಬರೆನಿಸಿದ್ದಾರೆ. ಇಂತಹ ಅಪೂರ್ವ ಸಾಧನೆಗೈದಿರುವ ಡಾ. ಎಂ.ಆರ್‍. ಗೌತಮ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ (೨೦೦೦-೦೧) ಗೌರವಿಸಿದೆ.