ಸಂಗೀತಕ್ಕೆ ಹೆಸರಾದ ಮನೆತನದಲ್ಲಿ ೧೯೨೨ರಲ್ಲಿ ಜನಿಸಿದ ದೊರೆಸ್ವಾಮಿಯವರು ಚಿಕ್ಕಪ್ಪ ಎಂ. ಜಿ. ರಂಗಯ್ಯ ಹಾಗೂ ಸೋದರ ಸಂಬಂಧಿಗಳಾದ ಎಂ.ಎಸ್‌. ಭೀಮರಾವ್‌ ಅವರಲ್ಲಿ ವೀಣಾ ವಾದನವನ್ನು ಅಭ್ಯಾಸ ಮಾಡಿದರು. ನಂತರ ಕೊಳಲು ವಿದ್ವಾನ್‌ ನರಸಿಂಹರಾಯರ ಮಾರ್ಗದರ್ಶನದಲ್ಲಿ ಕ್ರಮವಾಗಿ ಸಂಗೀತಾಭ್ಯಾಸ ಮಾಡಿದರು. ಮದರಾಸಿನ ಟೈಮ್ಸ್ ಕಾಲೇಜ್‌ ಆಫ್‌ ಮ್ಯೂಸಿಕ್‌ನಲ್ಲಿ ಪ್ರೊ. ಪಿ. ಸಾಂಬಮೂರ್ತಿ ಪಾಪನಾಶಂ ಶಿವನ್‌ ರವರ ಅಧ್ಯಾಪಕತ್ವದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿ, ಗಾಯನ ವೇಣು ವಾದನಗಳೆರಡರಲ್ಲೂ ಪ್ರಬುದ್ಧರಾಗಿ ಆ ಕಾಲೇಜಿನ ಆನರ್ಸ್‌  ಡಿಪ್ಲೊಮಾ ಪದವಿ ಗಳಿಸಿದರು. ಮರಳಿದ ನಂತರ ಬೆಂಗಳೂರಿನಲ್ಲಿ ವಿದ್ವಾನ್ ಡಿ. ಸುಬ್ಬರಾಮಯ್ಯನವರಲ್ಲಿ ಉನ್ನತಾಭ್ಯಾಸ ಮಾಡಿ ತಮ್ಮ ವಿದ್ವತ್ತು, ಪ್ರೌಢಿಮೆ, ಪ್ರತಿಭೆಗಳನ್ನು ಪೂರ್ಣವಾಗಿ ವಿಕಾಸ ಮಾಡಿಕೊಂಡರು.

ಕೆ.ಜಿ.ಎಫ್‌.ನಲ್ಲಿ ದೊರೆಸ್ವಾಮಿಯವರ ವೇಣುವಾದನವನ್ನು ಕೇಳಿ ಆಕರ್ಷಿತರಾದ ಅಂದಿನ ಹೆಸರಾಂತ ನೃತ್ಯಪಟುಗಳಾದ ಮೃಣಾಲಿನಿ ಸಾರಾಭಾಯಿ, ರಾಂಗೋಪಾಲ್‌, ತಾರಾ ಚೌಧುರಿ ಇವರುಗಳು ತಮ್ಮ ವಾದ್ಯ ವೃಂದಗಳಲ್ಲಿ ದೊರೆಸ್ವಾಮಿಯವರನ್ನು ವೇಣು ವಾದಕರಾಗಿ ಸೇರಿಸಿಕೊಂಡರು. ಈ ತಂಡಗಳೊಡನೆ ದೊರೆಸ್ವಾಮಿಯವರು ಭಾರತದ ಹಲವೆಡೆಗಳಲ್ಲಿಯೂ, ಶ್ರೀಲಂಕಾದಲ್ಲಿಯೂ ಪ್ರವಾಸ ಮಾಡಿದರು. ಬೆಂಗಳೂರಿನ ಅಯ್ಯನಾರ್ ಕಲಾ ಶಾಲೆಯ ವೇಣು ವಾದನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಶಿಷ್ಯ ವೃಂದ ಬಹಳ ಹಿರಿದಾದುದು.

೧೯೫೪ರಲ್ಲಿ ಯೂರೋಪ್‌ ಪ್ರವಾಸ ಮಾಡಿದ ಸಾಂಸ್ಕೃತಿಕ ತಂಡದ ಸದಸ್ಯರಾಗಿದ್ದು ನಮ್ಮ ನಾಡಿನ ಸಂಗೀತ ಸೌರಭವನ್ನು ಹರಡಿದ್ದಾರೆ. ಆಕಾಶವಾಣಿಯ ಮೂಲಕವೂ, ಪ್ರತಿಷ್ಠಿತ ವೇದಿಕೆಗಳಿಂದಲೂ ಇವರ ಮಧುರ ವೇಣು ವಾದನ ನಡೆದಿದೆ. ಇವರಿಗೆ ಸಂದ ಗೌರವ ಸನ್ಮಾನಗಳೂ ಅಸಂಖ್ಯಾತವಾದುವು. ೧೯೭೮-೭೯ರ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪುರಸ್ಕೃತರಾಗಿದ್ದ ಶ್ರೀಯುತರು ೨೦೦೬ರಲ್ಲಿ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರು.