ಸ್ವತಃ ತಾವೇ ತಯಾರಿಸಿ, ಮೃದಂಗವನ್ನು ನುಡಿಸುವ ನೈಪುಣ್ಯತೆಯನ್ನು ಪಡೆದಿರುವವರು ವಿರಳ. ಇದಕ್ಕೆ ಅಪವಾದ ಎಂ. ಆರ್. ರಂಗಸ್ವಾಮಿ. ಚಾಮರಾಜನಗರದ ಹಳ್ಳಿಯೊಂದರಲ್ಲಿ ೧೯೩೧ರಲ್ಲಿ ಜನಿಸಿದ ರಂಗಸ್ವಾಮಿಯವರಿಗೆ ಲಯವಾದ್ಯ ವಂಶಪಾರಂಪರ್ಯವಾಗಿ ಬಂದಿದೆ. ತಂದೆ ರಂಗಯ್ಯ ಸಹ ತಾಳವಾದ್ಯಗಳ ತಯಾರಿಕೆಯಲ್ಲಿ ನಿಪುಣ. ತಾವೇ ತಬಲ ಮೃದಂಗ ನುಡಿಸುತ್ತಿದ್ದರು. ಆದರೆ ರಂಗಸ್ವಾಮಿಯವರ ಶಿಕ್ಷಣ ಅವರ ದೊಡ್ಡಪ್ಪನವರಲ್ಲಿ ಆರಂಭ. ಸೀನಪ್ಪ ಸುಬ್ಬು ಇವರ ನಂತರದ ಗುರುಗಳು. ತಮ್ಮ ೧೦ನೇಯ ವಯಸ್ಸಿನಿಂದಲೆ ಕಚೇರಿ ಜೀವನಕ್ಕೆ ಧುಮುಕಿದ ರಂಗಸ್ವಾಮಿ ಶಾಸ್ತ್ರೀಯ ಸಂಗೀತವಲ್ಲದೇ ಲಘು ಸಂಗೀತ, ಚಿತ್ರ ಸಂಗೀತಗಳಿಗೂ ತಬಲಾ-ಮೃದಂಗ ನುಡಿಸುತ್ತಾ ಬಂದಿದ್ದಾರೆ.

ಆದರೆ ಇವರು ಹೆಚ್ಚಾಗಿ ಹಚ್ಚಿಕೊಂಡಿರುವುದು ನೃತ್ಯ ಕ್ಷೇತ್ರವನ್ನು ರಾಜ್ಯದ ಭರತನಾಟ್ಯ ಕಲಾವಿದರಲ್ಲಿ ಶ್ರೀಯುತರನ್ನು ಅರಿಯದ ನರ್ತಕರು ವಿರಳ. ಆ ಕ್ಷೇತ್ರಕ್ಕೆ ಇವರ ಕೊಡುಗೆ ಗಮನೀಯ. ಸಾದಿರ್ ಕಾರ್ಯಕ್ರಮಗಳಲ್ಲದೇ, ನೃತ್ಯ ಶಾಲೆಗಳು ನಿರ್ಮಿಸುವ ನೃತ್ಯ-ನಾಟಕಗಳಿಗೂ ತಮ್ಮ ಸುಲಲಿತ ವಾದನದಿಂದ ಮೆರಗನ್ನು ಹೆಚ್ಚಿಸಿದ್ದಾರೆ. ಅವುಗಳ ಯಶಸ್ಸಿಗೆ ಭಾಗ್ಯದಾರಿಗಳಾಗಿದ್ದಾರೆ ರಂಗಸ್ವಾಮಿ.

ಈ ದಿಕ್ಕಿನಲ್ಲಿ ಇವರು ಭಾರತದ ವಿವಿಧ ಭಾಗಗಳಲ್ಲದೇ ಯೂರೋಪಿನ, ಅರೇಬಿಯಾದ ಅನೇಕ ನಗರಗಳಲ್ಲೂ ಸಂಚರಿಸಿದ್ದಾರೆ. ವಿಶ್ವ ವಿದ್ಯಾಲಯದ ಸಂಗೀತ-ನಾಟಕ-ನೃತ್ಯ ವಿಭಾಗದಲ್ಲಿ ಕೆಲ ಕಾಲ ಮೃದಂಗ ಉಪನ್ಯಾಸಕರಾಗಿದ್ದ ಇವರು, ನಮ್ಮ ಅಕಾಡೆಮಿ ಏರ್ಪಡಿಸಿದ್ದ “ನಾಟ್ಯಕ್ಕೆ ಮೃದಂಗ” ಕಾರ್ಯಾಗಾರದ ಮುಖ್ಯಸ್ಥರಾಗಿ ಹಲವಾರು ಎಳೆಯರಿಗೆ ಮಾರ್ಗದರ್ಶನವಿತ್ತಿದ್ದಾರೆ. ನಗರದಲ್ಲಿ ಮೃದಂಗ ತಯಾರಿಕೆಯ, ರಿಪೇರಿಯ ಮಳಿಗೆ ಹೊಂದಿರುವ ಇವರಿಗೆ ಅನೇಕ ಸನ್ಮಾನಗಳು ಬಂದಿವೆ. ಈಗ ನಮ್ಮ ಅಕಾಡೆಮಿಯು ತನ್ನ ೧೯೯೨-೯೩ರ ಪ್ರಶಸ್ತಿ ಹಾಗು “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.