ಎಂ.ಆರ್. ರಾಜಪ್ಪನವರ ಜನನ ೧೯೧೯ರಲ್ಲಿ. ಕರ್ನಾಟಕದ ಮೃದಂಗ ವಿದ್ವಾಂಸರ ಸಾಲಿನಲ್ಲಿ ಹಿರಿಯ ಸ್ಥಾನ ಗಳಿಸಿರುವ ರಾಜಪ್ಪನವರ ಗುರುಗಳು ಕೀರ್ತಿಶೇಷ ಶ್ರೀ ಸುಬ್ಬಯ್ಯ, ಅಣ್ಣ ಶ್ರೀ.ಎಂ.ಎಸ್‌. ರಾಮಯ್ಯ ಮತ್ತು ಮೈಸೂರು ಅರಮನೆಯ ಕಲಾವಿದರಾಗಿದ್ದ ಶ್ರೀ ಹೆಚ್‌. ರಾಮಯ್ಯನವರು. ಐದು ದಶಕಗಳಿಗೂ ಮೀರಿ ಸಂಗೀತ ಕ್ಷೇತ್ರದಲ್ಲಿ ತಮ್ಮ ಮೃದಂಗ ವಾದನದ ಸಹಕಾರ ನೀಡಿ ನೂರಾರು ಯಶಸ್ವಿ ಕಛೇರಿಗಳ ಹಿರಿಮೆಗೆ ಪಾತ್ರರಾದವರು.

ಮೃದಂಗ ಹಾಗೂ ಇತರ ಲಯ ವಾದ್ಯಗಳ ತಯಾರಕರಾಗಿಯೂ ಸುಪ್ರಸಿದ್ಧಿ ಹೊಂದಿರುವ ಇವರು ೧೯೬೧ ರಿಂದ ೧೯೭೨ ರವರೆಗೆ ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸರಾಗಿಯೂ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರು.

ಅಷ್ಟೋತ್ತರ ಶತ ತಾಳ, ಪಲ್ಲವಿಗಳ ನಿರೂಪಣೆಗೆ ಮೃದಂಗ ನುಡಿಸಿದ ಕೀರ್ತಿ ಇವರದು. ಪ್ರತಿಷ್ಠಿತ ಸಭೆ-ಸಂಸ್ಥೆಗಳ ಸಮ್ಮೇಳನಗಳಲ್ಲಿ ಇವರ ಪ್ರತಿಭೆ ವಿಮರ್ಶಕರ ಮೆಚ್ಚುಗೆ ಗಳಿಸಿದೆ.

ಲಯವಾದ್ಯ ಶಿಕ್ಷಣ ಕ್ಷೇತ್ರದ ಏಳಿಗೆಗಾಗಿಯೇ ಹಗಲಿರುಳೂ ಶ್ರಮಿಸಿದ ಕಲಾವಿದನೆಂದು ರಾಜ್ಯ ಸಂಗೀತ ನೃತ್ಯ ಅಕಾಡೆಮಿ ೧೯೮೮-೮೯ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ‘ಕರ್ನಾಟಕ ಕಲಾತಿಲಕ’ ಎಂದು ಸನ್ಮಾನಿಸಿತು.

೧೯-೯-೨೦೦೨ ರಂದು ರಾಜಪ್ಪನವರು ಕಾಲವಶರಾದರೂ ಅವರು ಬೆಳೆಸಿದ ಲಯವಾದ್ಯ ಕಲಾವಿದರ ಪರಂಪರೆ ಮುಂದುವರೆದಿದೆ.