ನಾಡಿನ ಹೆಸರಾಂತ ಸಿತಾರ ವಾದಕರಲ್ಲೊರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿ, ಅನೇಕ ಶಿಷ್ಯರಿಗೆ ಸಿತಾರ ವಿದ್ಯೆ ನೀಡುತ್ತ ಹಿಂದೂಸ್ಥಾನಿ ಸಂಗೀತದ ಸೇವೆಯಲ್ಲಿ ನಿರತರಾಗಿರುವ ಶ್ರೀ ಎಂ.ಆರ್. ರಾಜಶೇಖರ್ ಅವರು ನಾಡಿನ ಶ್ರೇಷ್ಠ ಕಲಾವಿದರು. ೧೯೪೪ರಲ್ಲಿ ಜನಿಸಿದ ಶ್ರೀ ಎಂ. ಆರ್. ರಾಜಶೇಖರ್ ಒಮ್ಮೆ ಜಗದ್ವಿಖ್ಯಾತ ಸಿತಾರ್ ಕಲಾವಿದ ಪಂ. ರವಿಶಂಕರ್‍ರವರ ಸಿತಾರ್ ಕಛೇರಿಯನ್ನು ಕೇಳಿ ಆಕರ್ಷಿತರಾದರು. ನಂತರ ಆ ವಿದ್ಯೆಯನ್ನು ಕರಗತ ಮಾಡಿಕೊಳ್ಳಬೇಕೆಂಬ ಹಂಬಲದಿಂದ ಪಂ. ಆರ್.ವಿ. ಶೇಷಾದ್ರಿ ಗವಾಯಿ ಅವರಲ್ಲಿ ಶಿಕ್ಷಣ ಪ್ರಾರಂಭಿಸಿದರು. ತಮ್ಮ ಮಾನಸ ಗುರು ರವಿಶಂಕರ್ ಅವರ ಪ್ರಮುಖ ಶಿಷ್ಯರಲ್ಲೊಬ್ಬರಾದ ಪಂ.ಎನ್‌. ಆರ್. ರಾಮರಾಯರು ಬೆಂಗಳೂರಿನಲ್ಲೇ ಇದ್ದುದರಿಂದ ಅವರಲ್ಲಿ ಹೆಚ್ಚಿನ ಶಿಕ್ಷಣ ಪಡೆಯುವ ಅವಕಾಶ ರಾಜಶೇಖರ್ ಅವರಿಗೆ ದೊರೆಯಿತು.

ಅಖಿಲ ಭಾರತೀಯ ಗಂಧರ್ವ ವಿದ್ಯಾಲಯದ ಸಂಗೀತ ವಿಶಾರದ ಪದವೀಧರರಾದ ರಾಜಶೇಖರ್, ಕೋಟೆ ಶ್ರೀರಾಮ ಸೇವಾ ಮಂಡಲಿ, ಶೇಷಾದ್ರಿಪುರಂ ಶ್ರೀರಾಮ ಸೇವೆ ಮಂಡಲಿ, ಹಿಂದೂಸ್ಥಾನಿ ಕಲಾಕಾರ ಮಂಡಲಿ, ಸಂಗೀತ ಕೃಪಾ ಕುಟೀರ ಮುಂತಾದ ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಮೈಸೂರು ದಸರಾ ಉತ್ಸವ, ೧೯೮೫ರ ವಿಶ್ವಕನ್ನಡ ಸಮ್ಮೇಳನದಲ್ಲಿ ನಡೆದ ಬಹು ಸಿತಾರ್ ವಾದನದ ನಿರ್ವಹಣೆ, ಆಗ್ರಾ, ಜೈಪುರ, ಕೇರಳ, ನಾಗಪುರ ಮುಂತಾದ ಕಡೆ ನಡೆದ ಇವರ ಕಾರ್ಯಕ್ರಮಗಳು ಜನಾನುರಾಗ ಪಡೆದಿವೆ.

ಸುಮಾರು ಮೂರು ದಶಕಗಳಿಂದ ಪಾಶ್ಚಿಮಾತ್ಯರೂ ಸೇರಿದಂತೆ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಎಂ.ಆರ್. ರಾಜಶೇಖರ್ ಅವರ ಅನೇಕ ಶಿಷ್ಯರು ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೦-೦೧ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.