ಮನೆತನ : ತಂದೆ ಎಂ. ರಾಘವೇಂದ್ರರಾವ್‌ರವರಿಂದಲೇ ಈ ಪ್ರಾಚೀನ ಕಲೆಯ ಅಭ್ಯಾಸ ಮಾಡಿದ್ದಾರೆ.

ಕ್ಷೇತ್ರ ಸಾಧನೆ : ಪಂಪನಿಂದ ಕುಮಾರವ್ಯಾಸನವರಿಗೆ ಕನ್ನಡ ಕಾವ್ಯ ಪರಂಪರೆಯನ್ನು ಗಮಕ ಮಾಧ್ಯಮದ ಮುಖಾಂತರ ಸಮರ್ಥವಾಗಿ ಪ್ರಸಾರ ಮಾಡಿದ್ದಾರೆ. ನಾಡಿನಾದ್ಯಂತ ಪ್ರದರ್ಶನಗೊಂಡು ರಸಿಕರ ಮೆಚ್ಚುಗೆ ಪಡೆದ ’ಪಂಪ ಕಾವ್ಯ ವೈಭವ’ ಹೆಸರಿನ ಗಮಕ – ನೃತ್ಯ ರೂಪಕವನ್ನು ರಚಿಸಿ ನಿರ್ದೇಶಿಸಿರುವುದಲ್ಲದೆ, ಮಾಯಾಲಾಸ್ಯ, ಶರ್ಮಿಷ್ಠೆ, ಭಕ್ತಿಕುಸುಮಾಂಜಲಿ, ವಿಶ್ವೋದ್ಭವ, ವೆಂಕಟೇಶ ವೈಭವ ಮುಂತಾದ ನೃತ್ಯ ರೂಪಕಗಳನ್ನು ರಚಿಸಿದ್ದಾರೆ.

ಆಕಾಶವಾಣಿಯಲ್ಲಿ ಅಧಿಕಾರಿಯಾಗಿರುವ ಶ್ರೀ ಸತ್ಯನಾರಾಯಣ ಅವರು ಅಲ್ಲೂ ಗಮಕ ಕಲೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಲು ಅಮೃತ ಸಿಂಚನ, ದಾಸಾಮೃತ, ಲೋಕೋಕ್ತಿ ಮುಂತಾದ ಅನೇಕ ಕಲಾತೃಕ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ಬೆಂಗಳೂರು ದೂರದರ್ಶನದಲ್ಲಿ ಗಮಕ – ವ್ಯಾಖ್ಯಾನ ಸರಣಿ ಕಾರ್ಯಕ್ರಮವನ್ನು ನಡೆಸಿಕೊಡುವುದರ ಮೂಲಕ ಹಲವಾರು ಗಮಕ ಕಲಾವಿದರನ್ನು ಮುಖ್ಯವಾಹಿನಿಗೆ ಪರಿಚಯಿಸಿದ್ದಾರೆ. ಹಲವು ನಾಟಕ ರೂಪಪಕಗಳನ್ನೂ ನಿರ್ದೇಶಿಸಿರುವ ಸತ್ಯ ನಾರಾಯಣ ಅವರು, ತಮ್ಮ ತಂದೆಯಿಂದ ಸ್ಥಾಪನೆಗೊಂಡ ’ಕಾವ್ಯಗಾಯನ ಕಲಾಮಂದಿರ’ ಸಂಸ್ಥೆಯ ಮೂಲಕ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ, ಉದಯಭಾನು ಕಲಾಸಂಘ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮುಂತಾದ ಪ್ರತಿಷ್ಠಿತ ಸಂಸ್ಥೆಗಳು ಅವರು ರಚಿಸಿರುವ ಹಲವು ಮೌಲಿಕ ಕೃತಿಗಳನ್ನು ಪ್ರಕಟಿಸಿವೆ. ಆಸಕ್ತರಿಗೆ ಗಮಕಾಭ್ಯಾಸ ಮಾಡಲು ಕಮ್ಮಟಗಳನ್ನು ಏರ್ಪಡಿಸುವುದರ ಮೂಲಕ ಈ ಕಲೆಯ ಬಗ್ಗೆ ನಿರಂತರ ದುಡಿಯುತ್ತಿದ್ದಾರೆ.

ಪ್ರಶಸ್ತಿ – ಪುರಸ್ಕಾರ : ೨೦೦೫ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ, ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.