ಜನನ:೨೮-೮-೧೯೨೮-ಹುಬ್ಬಳ್ಳಿಯಲ್ಲಿ

ಮನೆತನ: ಸಂಗೀತಾಸಕ್ತರ ಮನೆತನ. ಮಕ್ಕಳಲ್ಲಿ ಸುಧಾ ಭರತನಾಟ್ಯ ಕಲಾವಿದೆ. ಎಂ.ಎಸ್. ಶೀಲಾ ನಾಡಿನ ಪ್ರಸಿದ್ಧ ಸಂಗೀತ ವಿದುಷಿ.

ಗುರುಪರಂಪರೆ: ಆರಂಭದಲ್ಲಿ ವಾಸುದೇವ ಶಾಸ್ತ್ರಿಗಳಲ್ಲಿ ಶಿಕ್ಷಣ ಪಡೆದು ಅನಂತರ ಬಾಗಲೂರು ಕೃಷ್ಣಮೂರ್ತಿ ಅವರಲ್ಲಿ ಹೆಚ್ಚಿನ ಶಿಕ್ಷಣ ಪಡೆದಿದ್ದಾರೆ.

ಸಾಧನೆ: ಮಹಿಳೆಯರು ಸಾರ್ವತ್ರಿಕವಾಗಿ ವೇದಿಕೆಗಳಲ್ಲಿ ಹಾಡಲು ತುಂಬಾ ಮಡಿವಂತಿಕೆ ಇದ್ದಕಾಲದಲ್ಲಿ ಧೈರ್ಯದಿಂದ ವೇದಿಕೆ ಏರಿ ಕಚೇರಿ ದಾಖಲೆ ಇವರದು. ಶಾಸ್ತ್ರೀಯ ಸಂಗೀತದಲ್ಲಿ ಪಡೆದಷ್ಟೆ ಪ್ರೌಢತೆಯನ್ನು ಸುಗುಮ ಸಂಗೀತದಲ್ಲೂ ಸಾಧಿಸಿದ್ದಾರೆ. ನಗರದ ಹಾಗೂ ಹೊರ ಊರುಗಳಲ್ಲೂ ಸಂಚರಿಸಿ ಅಲ್ಲಿನ ಪ್ರತಿಷ್ಠಿತ ಸಂಗೀತ ಸಭೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕನ್ನಡ ಭಾವಗೀತೆಗಳು ಅಷ್ಟಾಗಿ ಜನಪ್ರಿಯವಾಗಿರದ ಕಾಲದಲ್ಲಿ ಅದಕ್ಕೆ ಒಂದು ರೂಪು ಕೊಟ್ಟು -ಶಾಸ್ತ್ರೀ ಸೊಗಡನ್ನು ನೀಡಿ ಹಾಡಿ ಜನಪ್ರಿಯರಾದರು. ಬಸವೇಶ್ವರ ವಚನಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡುವ ಕೆಲವೇ ಗಾಯಕರ ಸಾಲಿನಲ್ಲಿ ಇವರಿಗೆ ಅಗ್ರಸ್ಥಾನ. ಅಷ್ಟೆ ಸಾಲದೆಂಬಂತೆ ರಂಗಗೀತೆ, ಭರತನಾಟ್ಯಗಳಿಗೆ ಹಿನ್ನೆಲೆ ಗಾಯನವನ್ನು ನೀಡುತ್ತಿದ್ದರು. ತಮ್ಮ ಮಕ್ಕಳು ಸುಧಾ-ಶೀಲಾ ಇವರ ನೃತ್ಯಕಾರ್ಯಕ್ರಮಗಳಿಗೆ ತಾವೇ ಹಾಡುತ್ತಿದ್ದರು. ಕೆಲವೊಂದು ಚಲನಚಿತ್ರಗಳಿಗೂ ಹಿನ್ನೆಲೆ ಗಾಯಕರಾಗಿ ಹೆಸರು ಮಾಡಿದವರು. ರಾಷ್ಟ್ರದಾದ್ಯಂತ ಇವರ ಕಾರ್ಯಕ್ರಮ ನಡೆದಿದೆ. ೧೯೮೭ರಲ್ಲಿ ಅಮೆರಿಕಾ ಪ್ರವಾಸ ಮಾಡಿ ವಾಷಿಂಗ್ಟನ್ನ ’ಕಾವೇರಿ ಸಂಘ’ದಲ್ಲಿ ಯಶಸ್ವಿ ಕಾರ್ಯಕ್ರಮ ನೀಡಿದ್ದಾರೆ. ಆಕಾಶವಾಣಿಯ ’ಏ’ ದರ್ಜೆ ಕಲಾವಿದೆಯಾಗಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಮೈಸೂರು ಅರಸರ ಅರಮನೆಯಲ್ಲೂ ಹಾಡಿರುವ ಹಿರಿಮೆ ಇವರದು.

ಪ್ರಶಸ್ತಿ-ಸನ್ಮಾನ: ನಾಡಿನ ಅನೇಕ ಸಂಘ ಸಂಸ್ಥೆಗಳಿಂದ, ಅರಮನೆ ಗುರು ಮನೆಗಳಿಂದ ಗೌರವಿಸಿ ಸನ್ಮಾನಿಸಲ್ಪಟ್ಟಿದ್ದಾರೆ. ೧೯೮೯-೯೦ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.