ವೀಣಾ ಕಲಾವಿದ ಎಂ.ಎನ್‌. ಲಿಂಗಪ್ಪ (ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಕೆಲಸದಲ್ಲಿದ್ದುಕೊಂಡು ಗಾಯನ, ತಬಲದಲ್ಲಿ ಪರಿಶ್ರಮಹೊಂದಿದ್ದವರು) ಮತ್ತು ಗೌರಮ್ಮನವರ ಪುತ್ರ ಎಂ.ಎಲ್‌. ವೀರಭದ್ರಯ್ಯ. ಮೊದಲು ತಬಲ ಕಲಿಸಿದವರು ದೊಡ್ಡಣ್ಣ ನಂಜುಂಡ ಶಾಸ್ತ್ರಿ. ನಂತರ ಕೆ .ವೈ ಪಿಳ್ಳಯ್ಯ. ಆಗ ಬೆಂಗಳೂರಿನಲ್ಲಿ ನೆಲೆಸಿದ್ದ ಪುದುಕೋಡು ಸುಬ್ರಹ್ಮಣ್ಯ ಅಯ್ಯರವರ ಬಳಿ ಮೃದಂಗ ಅಭ್ಯಾಸ ಪ್ರಾರಂಭ. (ಕೆಲವುಕಾಲ ಸಿ.ಕೆ. ಅಯ್ಯಾಮಣಿ ಅಯ್ಯರವರಲ್ಲೂ ಪಾಠ ಮುಂದುವರಿಸಿದರು.) ಮುಂದೆ ಅವರು ಸ್ವಗ್ರಾಮಕ್ಕೆ ಹಿಂದಿರುಗುವಾಗ ೧೨ ವರ್ಷದ ವೀರಭದ್ರಯ್ಯನವರನ್ನೂ ಕರೆದುಕೊಂಡು ಹೋಗಿ ಪಾಲಘಾಟ್‌ ಮಣಿ ಅಯ್ಯರ್ ರವರ  ಬಳಿ ಬಿಟ್ಟರು. ತಂಜಾವೂರು ವೈದ್ಯನಾಥ ಅಯ್ಯರ ಮಣಿ ಅಯ್ಯರವರ ಗುರುಗಳು. ಅವರ ಮನೆಯಲ್ಲಿ ಮೃದಂಗ ಸಾಧನೆ ಮುಂದುವರಿಸುವ ಸುಯೋಗ ವೀರಭದ್ರಯ್ಯನವರಿಗೆ. ತಂಜಾವೂರು ವೈದ್ಯನಾಥ ಅಯ್ಯರ್ ಬಳಿ ಮೃದಂಗ ಅಭ್ಯಾಸ ಚೆನ್ನಾಗಿ ಮುಂದುವರೆಯಿತು. ಎಲ್ಲ ಲಯವಾದ್ಯಗಳ ನುಡಿಕರ ಒಂದೇ ಆಗಿ ಕೇಳಿದರೂ ನುಡಿಸುವ ಪ್ರಕಾರಗಳು ವಿಭಿನ್ನ. ಪ್ರತಿವಾದ್ಯಕ್ಕೂ ಪ್ರತ್ಯೇಕವಾದ ವಿಶಿಷ್ಟವಾದ ಸ್ವರೂಪ, ಗುಣ ಉಂಟು. ಅದನ್ನರಿತು ವಾದ್ಯ ನುಡಿಸುವ ಕಲೆ ಸಾಧಿಸಬೇಕು ಎಂಬ ಸಂಪ್ರದಾಯಬದ್ಧ ಮೃದಂಗವಾದನಶೈಲಿ ವೈದ್ಯನಾಥ ಅಯ್ಯರ್ ರವರದು. ಈ ರೀತಿಯ ಉತ್ತಮ ಮಟ್ಟದ ಬೋಧನೆ ಸಾಧನೆಗಳ ನಂತರ ಗುರುಗಳ ಆಶೀರ್ವಾದ ಪಡೆದು ತಮಿಳುನಾಡಿನಲ್ಲೆಲ್ಲಾ ಮೃದಂಗ ಪಕ್ಕವಾದ್ಯ ನುಡಿಸಲಾರಂಭಿಸಿದರು. ಮಣಿ ಅಯ್ಯರ್ ರ ಜೊತೆ ನಾಡೆಲ್ಲಾ ಸಂಚರಿಸುತ್ತಾ ಹಿರಿಯ ವಿದ್ವಾಂಸರೆಲ್ಲರ ಕಚೇರಿಗಳನ್ನು ಬಹುವಾಗಿ ಕೇಳಿ ಅವರ ನುಡಿಸಾಣಿಕೆಯ ವಿಧಾನಗಳನ್ನು ಗಮನಿಸಿ ಕಚೇರಿಗೆ ನುಡಿಸುವ ಕ್ರಮ ಅಳವಡಿಸಿಕೊಂಡು ಕರಗತಮಾಡಿಕೊಂಡು ಬೆಂಗಳೂರಿಗೆ ಹಿಂತಿರುಗಿದರು.

ತಮ್ಮ ಗುರುಗಳು ನುಡಿಸಿದ ನೂರಾರು ಕಚೇರಿಗಳಲ್ಲೂ ಕೇಳಿದ ವರ್ಣ, ಕೀರ್ತನೆ, ಪಲ್ಲವಿ, ಪದ, ಜಾವಳಿ, ತಿಲ್ಲಾನ ಮುಂತಾದ ಬೇರೆ ಬೇರೆ ರೀತಿಯ ರಚನೆಗಳಿಗೆ ರಸಭಾವಪೋಷಕವಾಗುವಂತೆ ಗಾಯಕ-ವಾದಕರ ಮನೋಧರ್ಮ ಕೆಡದಂತೆ ಕಚೇರಿ ಜಮಾವಣೆಯಾಗುವಂತೆ, ಕಳೆಗಟ್ಟುವಂತೆ ನುಡಿಸುವ ಕಲೆ ಸಿದ್ಧಿಸಿತು ವೀರಭದ್ರಯ್ಯನವರಿಗೆ. ಆಗಿನ ಪಿಟೀಲು ಮಾಂತ್ರಿಕ ಮೈಸೂರು ಚೌಡಯ್ಯನವರ ಪರಿಚಯವಾದ ಮೇಲೆ ಅವರ ಪ್ರಭಾವದಿಂದ ಚೌಡಯ್ಯನವರ ತನಿ ಕಚೇರಿಗಳಿಗೆ ಮೊದಲ ಆದ್ಯತೆ ವೀರಭದ್ರಯ್ಯನವರಿಗೆ. ೩೫ ವರ್ಷಗಳಿಗೂ ಮೀರಿ ಅವರೊಟ್ಟಿಗೆ ಕಚೇರಿಗಳನ್ನು ಮಾಡಿದ್ದಾರೆ. ಚೌಡಯ್ಯನವರ ಪ್ರೀತಿ, ವಿಶ್ವಾಸ, ಅಭಿಮಾನ, ಆದರ ದೊರೆತದ್ದು ಒಂದು ಪುಣ್ಯ ವಿಶೇಷವೆಂದು ಭಾವಿಸಿದ್ದರು ವೀರಭದ್ರಯ್ಯನವರು.

ಅಪಾರ ದೈವಭಕ್ತಿ, ಗುರುಭಕ್ತಿ, ಹಿರಯರಲ್ಲಿ ಗೌರವ, ಕಿರಿಯರಲ್ಲಿ ಅಭಿಮಾನ, ವಿಶ್ವಾಸದಿಂದ ಕೂಡಿದ ವೀರಭದ್ರಯ್ಯನವರ ಅಚಲ ವಿಶ್ವಾಸ, ಸರಳತೆ ಸೌಜನ್ಯಶೀಲ ಸ್ವಭಾವ ಗಮನಾರ್ಹ. ಮೃದಂಗವಾದ್ಯಕ್ಕಾಗಿ ದಿನವಿಡೀ ದುಡಿಯುವುದೇ ಇವರ ಕಾಯಕವಾಗಿತ್ತು.

ಉತ್ತಮವಾದ್ಯಗಳಿಗಾಗಿ, ವಾದ್ಯಗಳ ರಿಪೇರಿ ದುರಸ್ತಿಗಳಿಗಾಗಿ ತಂಜಾವೂರು, ಪಾಲಘಾಟ್‌ಗಳಿಂದ ಖ್ಯಾತ ನುರಿತ ಅನುಭವೀ ವಾದ್ಯಗಾರನ್ನು ಬರಮಾಡಿಕೊಂಡು ಹೇರಳವಾಗಿ ಖರ್ಚುಮಾಡಿ ವಾದ್ಯಗಳ ಗುಣಮಟ್ಟ ಕಾಪಾಡಿಕೊಂಡು ಬರುತ್ತಿದ್ದರು . ಆಗಿನ ಕಾಲದಲ್ಲಿ ಇವರಲ್ಲಿದ್ದಷ್ಟು ವಾದ್ಯಗಳು, ಪ್ರತಿ ಶ್ರುತಿಗೂ ವಿಶೇಷ ವಾದ್ಯಗಳು, ಆಗಿಂದಾಗ್ಗೆ ಬಾರಮೂಟ್ಟುಗಳ ಬದಲಾವಣೆ ಇತ್ಯಾದಿಗಳು ಮತ್ತಾವ ಕಲಾವಿದರಲ್ಲೂ ಇರಲಿಲ್ಲ.

ಕರ್ನಾಟಕ ಸಂಗೀತದ ಮಹಾವಿದ್ವಾಂಸರುಗಳಾದ ಮೈಸೂರು ವಾಸುದೇವಾಚಾರ್, ಮುಸುರಿ ಸುಬ್ರಮಣ್ಯ ಅಯ್ಯರ್‌, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಅರಿಯಕ್ಕುಡಿ ರಾಮಾನುಜ ಅಯ್ಯಂಗಾರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಜಿ.ಎನ್‌.ಬಿ.ಅಲತ್ತೂರು ಸೋದರರು , ಮಧುರೈ ಮಣಿ ಅಯ್ಯರ್, ಕೊಳಲು ಮಹಾಲಿಂಗಂ, ವೀಣೆ ಈ ಮನಿ ಶಂಕರಶಾಸ್ತ್ರಿ, ಮೈಸೂರು ದೊರೆಸ್ವಾಮಿ ಅಯ್ಯಂಗಾರ್, ಎಂ.ಡಿ. ರಾಮನಾಥನ್‌ ಆರ್.ಕೆ. ಶ್ರೀಕಂಠನ್‌ ಮುಂತಾದ ಎಲ್ಲ ಹಿರಿಯ ವಿದ್ವಾಂಸರಿಗೂ ಮೃದಂಗ ಪಕ್ಕವಾದ್ಯ ಒದಗಿಸಿ ಯಶಸ್ವಿಯಾದರು .

ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ನೃತ್ಯ ನಾಟಕ ವಿಭಾಗದಲ್ಲಿ ಮೃದಂಗ ಪ್ರಾಧ್ಯಾಪಕರಾಗಿ ಕರ್ನಾಟಕ ಸರ್ಕಾರದ ಗೌರವಧನ ಪಡೆದು, ಕರ್ನಾಟಕ ಗಾನ ಕಲಾ ಪರಿಷತ್ತಿನ ೧೧ನೆಯ ಸಂಗೀತ ವಿದ್ವಾಂಸರ ಸಮ್ಮೇಳನ ಅಧ್ಯಕ್ಷತೆ ವಹಿಸಿ ಗಾನ ಕಲಾಭೂಷಣ ಆದರು. ಆಗ ಡಾ. ಎಂ.ಬಾಲಮುರಳೀಕೃಷ್ಣ ಅವರ ಗಾಯನಕ್ಕೆ ಇವರೂ ಘಟಂ ಮಂಜುನಾಥನ್‌ ರವರೂ ನುಡಿಸಿದ ಲಯವಿನ್ಯಾಸ ಇಂದಿಗೂ ಸ್ಮರಣೀಯ. ಇವರ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ “ತಾಳವಾದ್ಯ ವಿದ್ವಾಂಸರು ಗಮನಕ್ಕೆ ಬರುವುದು ಅಪರೂಪ (ಮದರಾಸ್‌ ಮ್ಯೂಸಿಕ್‌ ಅಕಾಡೆಮಿಯಂತಹ ಹಿರಿಯ ಸಂಸ್ಥೆ ೫೦ ಸಮ್ಮೇಳನಗಳಲ್ಲಿ ಅವರೆಗೆ ಕೇವಲ ಒಬ್ಬರೇ ಒಬ್ಬ ತಾಳವಾದ್ಯ ವಿದ್ವಾಂಸರನ್ನು ಅಧ್ಯಕ್ಷತೆಗೆ ಆರಿಸಿತ್ತು.) ಅಂತಹುದರಲ್ಲಿ ಗಾನಕಲಾ ಪರಿಷತ್ತು ತಾಳವಾದ್ಯ ವಿದ್ವಾಂಸರಾದ ನನ್ನನ್ನು ಆರಿಸಿರುವುದು, ಪರಿಷತ್ತಿನ ವಿದ್ವಾಂಸರು ತಾಳವಾದ್ಯಗಳ ಬಗ್ಗೆ ಇಟ್ಟಿರುವ ಅಭಿಮಾನಸೂಚಕವಾಗಿದೆ.” ಎಂದು ತಿಳಿಸಿದರು. ಅವರು ಗುರುಕುಲ ವಾಸಮಾಡುತ್ತಿದ್ದ ಸಮಯದಲ್ಲಿ ಕಲಿಯಲು ಸಂಗೀತ ವಿದ್ಯೆ ಮಾತ್ರವಲ್ಲದೇ, ವಿದ್ವಾಂಶರು ಅನುಸರಿಸಬೇಕಾದ ನಡವಳಿಕೆ, ರೀತಿ ನೀತಿಗಳು, ಸಭಾ ಮರ್ಯಾದೆ ಇವೆಲ್ಲದರಲ್ಲೂ ಶಿಕ್ಷಣ ಲಭಿಸಿತು. ತಮಗೆ ತಿಳಿದಂತೆ, ಹಿಂದಿನ ಕಾಲದಲ್ಲಿ ಮೃದಂಗವಾದನ ಸಂಪ್ರದಾಯ ಒಬ್ಬೊಬ್ಬರಲ್ಲೂ ಒಂದೊಂದು ಶೈಲಿಯಾಗಿ ಕಾಣುತ್ತಿತ್ತು. ಮೃದಂಗ ವಿದ್ವಾಂಸರಾದ ಪಾಲಘಾಟ್‌ ಸುಬ್ಬಯ್ಯರ್ ರವರ ಶೈಲಿ, ತಂಜಾವೂರು ವೈದ್ಯನಾಥಯ್ಯರ್ ರವರ ಶೈಲಿ ಬೇರೆ ಬೇರೆ ಕಾಣುತ್ತಿತ್ತು. ಇದು ಹಿಂದೆ ಅವರ ವಾದನವನ್ನು ಕೇಳಿದಂತಹ ಮಹನೀಯರಿಗೆ ಚೆನ್ನಾಗಿ ತಿಳಿದಿರುತ್ತದೆ. ಆದರೆ ಇವರೆಲ್ಲರಿಗಿಂತಲೂ ಅತಿಶಯವಾದ ರೀತಿಯಲ್ಲಿ ಮೃದಂಗವಾದನವನ್ನು ಸರ್ವತೋಮುಖವಾಗಿ ಬೆಳೆಸಿದ ಕೀರ್ತಿ ಸಂಗೀತ ಕಲಾನಿಧಿ ಪಾಲ್‌ಘಾಟ್‌ ಮಣಿ ಅಯ್ಯರ್ ರವರಿಗೆ ಸಲ್ಲುತ್ತದೆ. ಅವರ ಶಿಷ್ಯರಾಗಿ ವೀರಭದ್ರಯ್ಯನವರು ತಮ್ಮ ಶೈಲಿಯನ್ನು ಉತ್ತಮವಾಗಿ ರೂಪಿಸಿಕೊಂಡರು. ಸೌಖ್ಯವಾಗಿ ಹಾಡುವಾಗ ಅಡ್ಡೇಟುಗಳನ್ನು ನುಡಿಸಿದರೆ ಅಥವಾ ಹುಮ್ಯಸ್ಸಿನಿಂದ ಹಾಡುತ್ತಿರುವಾಗ ಸಪ್ಪೆಯಾಗಿ ಬರೀ ಟೇಕಾಗಳನ್ನು ನುಡಿಸಿದರೆ ಕಚೇರಿ ಶೋಭಿಸುವುದಿಲ್ಲವೆಂಬುದು ಅವರ ಅಭಿಪ್ರಾಯ. ಯಾವ ಸಂದರ್ಭದಲ್ಲಿ ಹೇಗೆ ನುಡಿಸಬೇಕೆಂಬುದನ್ನು ಹಿರಿಯ ವಿದ್ವಾಂಸರು ನುಡಿಸುವಾಗ ಕೇಳಿ, ತಾವೂ ಸಹ ಅನೇಕ ಕಚೇರಿಗಳನ್ನು ನುಡಿಸಿ ಅನುಭವದಿಂದ ಸಾಧಿಸಿದಾಗ ಈ ಉತ್ತಮಿಕೆ ಬರಲು ಸಾಧ್ಯ .

“ಹಿಂದೆ ಮೃದಂಗದೊಂದಿಗೆ ತಾಳವಾದ್ಯದಲ್ಲಿ ಕೊನಗೋಲು, ಮೋರ್ಚಿಂಗ್‌, ಖಂಜರಿ, ಘಟಂ ಮುಂತಾದ ಅನೇಕವಾದ್ಯಗಳು ಉಪಯೋಗಿಸಲ್ಪಡುತ್ತಿದ್ದವು. ಕಾಲಕ್ರಮೇಣ ಕೊನಗೋಲು ಮರೆಯಾಯಿತು. ಮೋರ್ಚಿಂಗ್‌ ವಾದ್ಯದ ಬಳಕೆಯೂ ಕಡಿಮೆಯಾಗುತ್ತಿದೆ. ಕೆಲವು ಹಿರಯ ಸಂಗೀತ ಸಂಸ್ಥೆಗಳಲ್ಲಿ ಈ ತಾಳವಾದ್ಯದ ಉಪವಾದ್ಯ ವಿದ್ವಾಂಸರನ್ನು ಆಹ್ವಾನಿಸುತ್ತಿಲ್ಲ ಎಂಬುದನ್ನು ಕಾಣುತ್ತಿದ್ದೇವೆ. ಇದು ಹೀಗೆ ಮುಂದುವರಿದಲ್ಲಿ, ಖಂಜರಿ, ಘಟಂ ವಾದ್ಯಗಳ ಉಪಯೋಗವು ನಶಿಸಿಹೋಗಬಹುದು. ಆದ್ದರಿಂದ ಈ ಸಂದರ್ಭದಲ್ಲಿ ನನ್ನ ಕಳಕಳಿಯ ಪ್ರಾಮಾಣಿಕ ಪ್ರಾರ್ಥನೆ ಏನೆಂದರೆ, ಎಲ್ಲಾ ಪ್ರಮುಖ ಗಾಯಕ-ವಾದಕರು ತಮ್ಮ ತಮ್ಮ ಕಾರ್ಯಕ್ರಮಗಳಲ್ಲಿ ಮೃದಂಗದೊಂದಿಗೆ ಒಂದಾದರೂ  ಉಪ ತಾಳವಾದ್ಯವನ್ನು ಅವಶ್ಯವಾಗಿ ಉಪಯೋಗಿಸಿಕೊಳ್ಳಬೇಕು” ಎಂದು ಕರೆಕೊಟ್ಟಿದ್ದರು.

ವೀರಭದ್ರಯ್ಯನವರ ಶಿಷ್ಯವರ್ಗ ತುಂಬಾ ದೊಡ್ಡದು, ಶ್ರೀಯುತರಾದ ಕೆ.ಎನ್‌.ಕೃಷ್ಣಮೂರ್ತಿ, ಎ. ರಾಜಾಚಾರ್, ದಿವಂಗತರಾದ ಡಿ.ಕೆ. ನ್ಯಾತಪ್ಪ, ಅರ್ಧನಾರೀಶ್ವರ, ಮಾಳಿಗಾಚಾರ್, ದೊಡ್ಡಬಳ್ಳಾಪುರದ ವಿ. ಪ್ರಕಾಶ, ಈಗ ಚೆನ್ನೈನಲ್ಲಿರುವ ಬಿ.ಎಸ್‌. ಪುರುಷೋತ್ತಮ್‌ ಮುಂತಾದವರು. ಇವರ ಪುತ್ರ ವಿ. ಪ್ರವೀಣ್‌ರವರು ‘ಗಾನಕಲಾಶ್ರೀ’ ಬಿರುದು ಪಡೆದು ಪುಟ್ಟಾಚಾರ್ ಸ್ಮಾರಕ ‘ಲಯ ಕಲಾ ಪ್ರತಿಭಾಮಣಿ’ ಬಿರುದನ್ನು ಪಡೆದು ಪ್ರಸಿದ್ಧರಾಗಿದ್ದಾರೆ.

ವೀರಭದ್ರಯ್ಯನವರು ಲಯ ವಾದ್ಯ ಧುರಂಧರ, ಲಯವಾದ್ಯ ಪ್ರವೀಣ, ಕಲಾಜ್ಯೋತಿ, ಕರ್ನಾಟಕ ಕಲಾತಿಲಕ ಪ್ರಶಸ್ತಿ, ಮೃದಂಗ ಕಲಾರತ್ನ, ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದರು. ಆಕಾಶವಾಣಿ ದೂರದರ್ಶನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಪ್ರಸಾರಗಳಲ್ಲೂ, ರೇಡಿಯೋ ಸಂಗೀತ ಸಮ್ಮೇಳನಗಳಲ್ಲೂ ನುಡಿಸಿ ಪ್ರಖ್ಯಾತರಾದ ಈ ಮಹಾನ್‌ ಲಯ ವಿದ್ವಾಂಸರು ೧೬.೪.೧೯೮೯ರಲ್ಲಿ ದೈವಾಧೀನರಾದರು.