ಸ್ವತಃ ಗಾಯಕ ಹಾಗೂ ವೀಣಾ-ತಬಲಾ ವಾದಕರಾಗಿದ್ದ ಲಿಂಗಪ್ಪ ಶಾಸ್ತ್ರಿ – ಗೌರಮ್ಮ ದಂಪತಿಗಳ ಸುಪುತ್ರರಾಗಿ ೩-೭-೧೯೧೫ ರಂದು ಜನಿಸಿದವರು ವೀರಭದ್ರಯ್ಯ. ಖ್ಯಾತ ಪಿಟೀಲು ವಿದ್ವಾಂಸರಾಗಿದ್ದ ಪಿ. ಭುವನೇಶ್ವರಯ್ಯನವರ ತಂದೆ ಕೆ.ವೈ. ಪಿಲ್ಲಯ್ಯನವರು ಈ ಬಾಲಕನಿಗೆ ಮೊದಲು ತಬಲಾ ವಾದನದಲ್ಲಿ ಶಿಕ್ಷಣ ನೀಡಿದರು. ಪುದುಕೋಟೆಯಿಂದ ಬಂದಿದ್ದ ಸುಬ್ರಹ್ಮಣ್ಯ ಅಯ್ಯರ್ ಇವರ ಪ್ರಥಮ ಮೃದಂಗ ಗುರುಗಳು, ನಂತರ ಗುರುಗಳೊಡನೆಯೇ ಪಾಲ್ಘಾಟಿಗೆ ಹೋಗಿ ಟಿ.ಎಸ್‌. ಮಣಿ ಅಯ್ಯರ್ ಅವರ ಮನೆಯಲ್ಲಿ ಗುರುಕುಲ ಪದ್ಧತಿಯಲ್ಲಿ ವಿದ್ಯೆ ಕಲಿತರು. ಮಣಿಯವರು ತಮ್ಮ ನಿವಾಸವನ್ನು ತಂಜಾವೂರಿಗೆ ವರ್ಗಾಯಿಸಿದಾಗ ಅಲ್ಲಿದ್ದ ವೈದ್ಯನಾಥ ಅಯ್ಯರ್ (ಮಣಿ ಅವರ ಗುರುಗಳು) ಅವರಲ್ಲಿ ಉನ್ನತ ಶಿಕ್ಷಣ ಪಡೆದು ಮೊದಮೊದಲು ಗುರು ಮಣಿ ಅವರೊಡನೆ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೇಳಿ ಎಲ್ಲಾ ಮರ್ಮಗಳನ್ನು ಅರಿತು ಬೆಂಗಳೂರಿಗೆ ಮರಳಿದರು.

ಶ್ರೀ ಜಯಚಾಮರಾಜೇಂದ್ರ ಒಡೆಯರು ಇವರ ವಾದನಕ್ಕೆ ಮೆಚ್ಚುಗೆ ಸೂಸಿ ಸತ್ಕರಿಸಿದರು. ೧೯೪೦ ರಿಂದ ೧೯೮೦ರವರೆಗೂ ಯಾವ ಪ್ರಸಿದ್ಧ ವಿದ್ವಾಂಸರ ಕಛೇರಿಗೂ ವೀರಭದ್ರಯ್ಯನವರದೇ ಮೃದಂಗ ವಾದನ. ಮುಖ್ಯ ಕಲಾವಿದರು ಕೇಳಿ ಇವರನ್ನು ಪಕ್ಕ ವಾದ್ಯವಾಗಿ ಹಾಕಿಸಿಕೊಳ್ಳುತ್ತಿದ್ದರು. ಇವರ ಅಸಾಧಾರಣ ಪಾಂಡಿತ್ಯ, ಹೃದಯವಂತಿಕೆ, ಸ್ನೇಹಪರತೆ ಮೃದಂಗದ ಬಗೆಗಿನ ನಿರ್ಭರತೆ ಹಾಗೂ ಸಾಧನೆ ಅನುಸರಣೀಯ. ಟಿ. ಚೌಡಯ್ಯನವರ ಸ್ನೇಹ, ಒಡನಾಟ ದೊರೆತು ಇವರ ಜೀವನವಿಡೀ ನಾದವಾಹಿನಿಯನ್ನೇ ಹರಿಸಿತು.

ತಬಲಾ ಹಿಂದಕ್ಕೆ ಸರಿದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಮೃದಂಗ ರಾರಾಜಿಸಲು ಮುಖ್ಯ ಕಾರಣರೇ ವೀರಭದ್ರಯ್ಯ. ಹಾಗೆಯೇ ಮೃದಂಗದೊಡನೆ ಒಂದಾದರೂ ಉಪ ತಾಳವಾದ್ಯವಿರುವುದನ್ನು ಸಮರ್ಥಿಸಿ ಉತ್ತೇಜನ ನೀಡಿದವರೂ ಇವರೇ. ಆಕಾಶವಾಣಿಯಿಂದ ಇವರ ವಾದನದ ಅನೇಕಾನೇಕ ಕಾರ್ಯಕ್ರಮಗಳು ಮೂಡಿ ಬರುತ್ತಿದ್ದವು.

ದೇಶ-ವಿದೇಶಗಳಲ್ಲೂ ಪ್ರವಾಸ ಮಾಡಿ ತಮ್ಮ ವಾದನ ವೈಖರಿಯಿಂದ ಅತಿಶಯವಾದ ಕೀರ್ತಿ. ಹಿರಿಮೆಗಳನ್ನು ಗಳಿಸಿದ ಇವರ ಶಿಷ್ಯ ಸಂಪತ್ತೂ ಆಯಿತವಾದುದು. ‘ಲಯವಾದ್ಯ ಪ್ರವೀಣ’, ‘ಕಲಾ ಜ್ಯೋತಿ’, ‘ಲಯವಾದ್ಯ ದುರಂಧರ’, ‘ಕರ್ನಾಟಕ ಕಲಾ ತಿಲಕ’, ‘ಗಾನ ಕಲಾ ಭೂಷಣ’, ‘ಮೃದಂಗ ಕಲಾರತ್ನ’, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ – ಇತ್ಯಾದಿ ನಾನಾ ಗೌರವಗಳಿಂದ ಸುಭೂಷಿತರಾಗಿದ್ದ ವೀರಭದ್ರಯ್ಯನವರು ೧೬-೪-೧೯೮೯ ರಂದು ಲಯ ಬ್ರಹ್ಮನಲ್ಲಿ ವಿಲೀನರಾದರು.