ಎಂ. ಎಸ್. ಕೃಷ್ಣನ್ —ಭಾರತದ ಪ್ರಸಿದ್ಧ ಭೂ ವಿಜ್ಞಾನಿ.  ದೇಶದ-ವಿದೇಶಗಳಲ್ಲಿ ಖ್ಯಾತಿಗಳಿಸಿದರು. ಭೂ ವಿಜ್ಞಾನದ ವಿಭಾಗಕ್ಕೆ ಅಮೂಲ್ಯ ಸೇವೆ ಸಲ್ಲಿಸಿದರು. ಒಳ್ಳೆಯ ಅಧ್ಯಾಪಕರು. ವಿನಯವಂತರು. ಸಂಗಿತ, ವೇದಗಳ ಅಧ್ಯಯನ, ಇಂಗ್ಲಿಷ್ ಸಾಹಿತ್ಯ ಹೀಗೆ ಹಲವು ಆಸಕ್ತಿಗಳನ್ನು ಬೆಳೆಸಿಕೊಂಡಿದ್ದರು.

ದೇಶದ ಭೂಮಿಯೇ ಒಂದು ಆಸ್ತಿ, ಅಲ್ಲವೇ?

ನಾವು ವಾಸ ಮಾಡುವುದು ಭೂಮಿಯ ಮೇಲೆ. ಬೆಳೆ ಬರುವುದು ಭೂಮಿಯಿಂದ.

ಇಷ್ಟೆ ಅಲ್ಲ, ಭೂಮಿ ಒಂದು ಅಸಾಧಾರಣ ನಿಧಿಗಳ ಭಂಡಾರ. ಭೂಮಿಯೊಳಗೆ ಕಬ್ಬಿಣ, ಕಲ್ಲಿದ್ದಲುಗಳಿಂದ ಹಿಡಿದು ಬಂಗಾರ, ವಜ್ರಗಳವರೆಗೆ ಎಷ್ಟು ಬಗೆಯ ಲೋಹಗಳು, ಖನಿಜಗಳು ಅಡಗಿವೆ ! ಯಾವ ದೇಶದಲ್ಲಿ ನಿಸರ್ಗ ಹೀಗೆ ಭೂಮಿಯಲ್ಲಿ ಅಪಾರ ಸಂಪತ್ತನ್ನು ಕೂಡಿಟ್ಟಿದೆಯೋ ಅದು ನಿಜವಾಗಿ ಅದೃಷ್ಟವಂತ ದೇಶ. ಅರಬ್ ದೇಶಗಳನ್ನು ನೋಡಿ. ತೀರ ಮರುಭೂಮಿಯಲ್ಲಿ ವಾಸಿಸುವ ಆ ಜನ ಹಣದಲ್ಲಿ ತೇಲಿ ಮುಳುಗುತ್ತಿರುವುದು ಅವರ ಭೂಮಿಯಲ್ಲಿರುವ ಪೆಟ್ರೂಲ್‌ನ ಶ್ರೀಮಂತಿಕೆಯಿಂದ.

ಇದು ನೈಸರ್ಗಿಕ ಸಂಪತ್ತಿನ ಒಂದು ಉದಾಹರಣೆ, ಅಷ್ಟೆ. ತಮ್ಮ ದೇಶದಲ್ಲಿ ಕಬ್ಬಿಣ, ಕಲ್ಲಿದ್ದಲು, ಬಂಗಾರ, ಬಾಕ್ಸೈಟ್ ಮೊದಲಾದವುಗಳು ಸಿಕ್ಕುವಂತಿದ್ದರೆ ಜನ ಬೇರೆ ಬೇರೆ ದೇಶಗಳನ್ನು ಅವಲಂಬಿಸದೆ ಕೈಗಾರಿಕೆಗಳನ್ನು ಬೆಳೆಸಿಕೊಳ್ಳಬಹುದು, ಅಲ್ಲವೆ? ಕೈಗಾರಿಕೆಗಳು ಬೆಳೆದುವೆಂದರೆ ದೇಶದ ಐಶ್ವರ್ಯ ಹೆಚ್ಚುತ್ತದೆ, ಸಾವಿರಾರು ಜನರಿಗೆ ಕೆಲಸಗಳು ದೊರೆಯತ್ತವೆ.

ಭೂ ವಿಜ್ಞಾನಿ

ಆದರೆ ಭೂಮಿ ತನ್ನ ಸಂಪತ್ತನ್ನು ಬಚ್ಚಿಟ್ಟು ಕೊಂಡಿರುತ್ತದೆ. ಎಲ್ಲಿ ಪೆಟ್ರೋಲ್ ಇದೆ, ಎಲ್ಲಿ ಚಿನ್ನ ಇದೆ, ಎಲ್ಲಿ ಕಲ್ಲಿದ್ದಲು ಇದೆ ಎಂದು ಕಂಡುಹಿಡಿದು ಹೇಳುವವರು ಬೇಕು.

ಭೂಮಿಯನ್ನು ವಿಶೇಷವಾಗಿ ಅಧ್ಯಯನ ಮಾಡುವ ವಿಜ್ಞಾನಿಗಳು ನಿಸರ್ಗದ ಸಂಪತ್ತನ್ನು ಅಧ್ಯಯನ ಮಾಡಿ ಎಲ್ಲೆಲ್ಲಿ ಯಾವ ಯಾವ ಖನಿಜಗಳು, ಲೋಹಗಳು ಇವೆ ಎಂದು ಹೇಳುವುದಷ್ಟೆ ಅಲ್ಲ, ಇತರ ರೀತಿಗಳಲ್ಲಿಯೂ ದೇಶಕ್ಕೆ ಉಪಕಾರ ಮಾಡುತ್ತಾರೆ.

ಒಂದು ದೊಡ್ಡ ಅಣೆಕಟ್ಟನ್ನು ಕಟ್ಟಬೇಕು ಎಂದು ಕೊಳ್ಳಿ, ಒಂದು ಸ್ಥಳದಲ್ಲಿ ಅಪಾರವಾಗಿ ನೀರು ನಿಂತರೆ ಅಲ್ಲಿ ಭೂಮಿ ಅದನ್ನು ತಡೆದುಕೊಳ್ಳಬಲ್ಲದೆ, ಸುತ್ತ ಮುತ್ತಲಿನ ಪ್ರದೇಶಕ್ಕೆ ಅದರಿಂದ ಅಪಾಯ ಇಲ್ಲವೇ ಎಂದು ಆಣೆಕಟ್ಟಿಗೆ ಸ್ಥಳವನ್ನು ಆರಿಸುವ ಮೊದಲು ಪರೀಕ್ಷೆ ಮಾಡಿ ನಿರ್ಧರಿಸ ಬೆಕು. ಇಲ್ಲವಾದರೆ ಅಣೆಕಟ್ಟನ್ನು ಕಟ್ಟಿದ ಮೇಲೆ ಅದು ಕೆಲವೇ ವರ್ಷಗಳಲ್ಲಿ ಒಡೆಯಬಹುದು ಅಥವಾ ಸುತ್ತಮುತ್ತ  ಭೂಕಂಪ ಆಗಬಹುದು.

ಹೊಸದೊಂದು ಊರನ್ನು ಕಟ್ಟಬೇಕು, ಅಥವಾ ಇರುವ ನಗರಕ್ಕೆ ಹೊಸ ಬಡಾವಣೆಗಳನ್ನು ಕಟ್ಟಬೇಕು ಎಂದರೆ ಭೂಮಿಯನ್ನು ಅಧ್ಯಯನ ಮಾಡಿ ನೋಡಬೇಕು.

ಭೂಮಿ ಕೋಟ್ಯಂತರ ವರ್ಷಗಳಿಂದ ಇದೆ, ಅಲ್ಲವೆ? ಇದು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ಹೇಗಿತ್ತು, ಯಾವ ಬದಲಾವಣೆಗಳಾದವು ಎಂದು ಅಭ್ಯಾಸ ಮಾಡಿ ಜಗತ್ತಿನ ಚರಿತ್ರೆಯನ್ನು ತಿಳಿದು ಕೊಳ್ಳಬಹುದು. ಒಂದು ಕಾಲದಲ್ಲಿ ಹಿಮಾಲಯ ಪರ್ವತವೇ ಭೂಮಿಯ ಮೇಲಿರಲಿಲ್ಲ, ಅದರ ಬಂಡೆ ಗಳೆಲ್ಲ ನೀರಿನಲ್ಲಿ ಮುಳುಗಿದ್ದವು. ಲಕ್ಷಾಂತರ ವರ್ಷಗಳ ಕಾಲ ಭೂಕಂಪಗಳು, ಅಗ್ನಿ ಪರ್ವತಗಳು ಹಾವಳಿ ಮಾಡಿದ ಮೇಲೆ ಈ ಪರ್ವತ ಶ್ರೇಣಿ, ಸುಮಾರು ನಾಲ್ಕು ಕೋಟಿ ವರ್ಷಗಳ ಹಿಂದೆ, ಮೇಲಕ್ಕೆ ಬಂದಿತು.

ಇದನ್ನೆಲ್ಲ ಭೂವಿಜ್ಞಾನಿಗಳು ಅಧ್ಯಯನ ಮಾಡುತ್ತಾರೆ. ಹೀಗೆ ಜ್ಞಾನದ ದೃಷ್ಟಿಯಿಂದಾಗಲಿ ಭೂವಿಜ್ಞಾನಿಗಳ ಪಾತ್ರ ಬಹು ದೊಡ್ಡದು.

ನಮ್ಮ ದೇಶದ ಶ್ರೇಷ್ಠ ಭೂ ವಿಜ್ಞಾನಿಗಳಲ್ಲಿ ಒಬ್ಬರು ಡಾಕ್ಟರ್ ಎಂ.ಎಸ್. ಕೃಷ್ಣನ್.

ಡಾಕ್ಟರ್ ಎಂ.ಎಸ್. ಕೃಷ್ಣನ್ ತಮ್ಮ ನಲವತ್ತು ವರ್ಷಗಳ ಜೀವನವನ್ನು ಭೂ ವಿಜ್ಞಾನಕ್ಕಾಗಿ ಮೀಸಲಿಟ್ಟ ಅಗ್ರಗಣ್ಯ ಭೂ ವಿಜ್ಞಾನಿ. ವಿದೇಶದಲ್ಲೂ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಪ್ರತಿಭಾವಂತ. ವೈಜ್ಞಾನಿಕ ಮನೋಭಾವವನ್ನು ಇತರರಲ್ಲೂ  ಬೆಳೆಸಿದ ಶ್ರೇಷ್ಠ ವಿಜ್ಞಾನಿ.

ಪ್ರತಿಭಾವಂತ ವಿದ್ಯಾರ್ಥಿ

ಎಂ. ಎಸ್. ಕೃಷ್ಣನ್ ಅವರ ಪೂರ್ಣ ಹೆಸರು ಮಹಾರಾಜಪುರಂ ಸೀತಾರಾಂ ಕೃಷ್ಣನ್. ತಮಿಳು ನಾಡಿನ ತಂಜಾವೂರು ಜಿಲ್ಲೆಯಲ್ಲಿ ಮಹಾರಾಜಪುರಂ ಎಂಬುದು ಒಂದು ಚಿಕ್ಕ ಹಳ್ಳಿ. ಈ ಹಳ್ಳಿಯ ವೈದಿಕ ವಿದ್ವಾಂಸರ ಮೆನತನವೂಂದರಲ್ಲಿ ಕೃಷ್ಣನ್ ೧೮೯೮ ನೇ ಇಸವಿ ಆಗಸ್ಟ್ ೨೪ ರಂದು ಜನ್ಮ ತಳೆದರು.

ಬಾಲ್ಯದಿಂದಲೂ ಕೃಷ್ಣನ್ ಓದಿನಲ್ಲಿ ಅತೀವ ಆಸಕ್ತಿ ತೋರಿದ ಪ್ರತಿಭಾವಂತ. ನಿಸರ್ಗದ ರಮಣೀಯ ದೃಶ್ಯಗಳೆಂದರೆ ಮೊದಲಿಂದಲೂ ಕೃಷ್ಣನ್‌ಗೆ ತುಂಬ ಅಚ್ಚುಮೆಚ್ಚು. ನಿಸರ್ಗದ ಬಗ್ಗೆ ತಮಗೆ ಒಲವಿದ್ದುದರಿಂದ ಕಾಲೇಜಿನಲ್ಲಿ ಭೂ ವಿಜ್ಞಾನವನ್ನು ವಿಶೇಷ ವಿಷಯವನ್ನಾಗಿ ಆರಿಸಿಕೊಂಡು ಅಧ್ಯಯನ ಮಾಡಿದರು. ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಕೃಷ್ಣನ್ ಅವರಿಗೆ ಬಿ.ಎ.ಆನರ್ಸ್ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆಯುವುದು ಕಷ್ಟವಾಗಲಿಲ್ಲ. (ಅಂದಿನ ಕಾಲದಲ್ಲಿ ವಿಜ್ಞಾನ ಪದವಿ ಯನ್ನೂ ಬಿ. ಎ. ಎಂದೇ ಕರೆಯುತ್ತಿದ್ದರು.) ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ೧೯೧೯ ರಲ್ಲಿ ಭೂವಿಜ್ಞಾನದಲ್ಲಿ ಆನರ್ಸ್ ಪದವಿ ಪಡೆದ ನಂತರ ಕೃಷ್ಣನ್ ಅವರು ಮದರಾಸು ವಿಶ್ವ ವಿದ್ಯಾಲಯದಲ್ಲಿ ೧೯೨೧ ರಲ್ಲಿ ಎಂ.ಎ. ಪದವಿಯನ್ನೂ ಪಡೆದು ಒಂದು ಹಂತದ ವಿದ್ಯಾಭ್ಯಾಸ ವನ್ನು ಮುಗಿಸಿದರು.

ಅಧ್ಯಾಪಕ

ಎಪ್ಪತ್ತಮೂರು ವರ್ಷದ ತರುಣ ಕೃಷ್ಣನ್ ಪ್ರಾರಂಭದಲ್ಲಿ ತಾವು ವಿದ್ಯಾಭ್ಯಾಸ ಪಡೆದ ಪ್ರಸಿಡೆನ್ಸಿ ಕಾಲೇಜಿನಲ್ಲೆ ಪ್ರಯೋಗ ಪ್ರದರ್ಶನಕಾರ ಹುದ್ದೆಯನ್ನು ಪಡೆದು ಭೂ ವಿಜ್ಞಾನಕ್ಕೆ ಪಾದರ್ಪಣೆ ಮಾಡಿದರು. ಎರಡು ವರ್ಷಗಳ ಕಾಲ ಇದೇ ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಕಾರ್ಯಕ್ಷೇತ್ರಕ್ಕೆ ಹೋಗಿ ಭೂವಿಜ್ಙಾನವನ್ನು ಅಧ್ಯಯನ ಮಾಡುವ ಅವಕಾಶ ಲಭ್ಯವಾಯಿತು. ಭಾರತದ ಕೇಂದ್ರ ಪ್ರಾಂತದಲ್ಲಿ ಭೂ ವಿಜ್ಞಾನಿಯಾಗಿ ತಮ್ಮ ಅಧ್ಯಾಪಕ ವೃತ್ತಿಯ ನಡುವೆ ಬಿಡುವು ಮಾಡಿಕೊಂಡು ಐದು ತಿಂಗಳುಗಳ ಕಾಲ ಕಾರ್ಯತತ್ಪರರಾದರು. ಇದರಿಂದ ಭೂವಿಜ್ಞಾನದಲ್ಲಿ ಅಭಿರುಚಿ ಮತ್ತಷ್ಟು ಹೆಚ್ಚಿತಲ್ಲದೆ ಅನುಭವ ಕೂಡಿಬಂತು.

ಇಂಗ್ಲೆಂಡಿನಲ್ಲಿ

ಕೃಷ್ಣನ್ ಅವರು ಭೂವಿಜ್ಞಾನದಲ್ಲಿ ಬೆಳೆಸಿ ಕೊಂಡಿದ್ದ ಆಸಕ್ತಿ, ಅಭಿರುಚಿ ಮುಂದೆ ವಿದೇಶಕ್ಕೆ ಹೆಚ್ಚಿನ ಅಧ್ಯಯನ ಕೈಗೊಳ್ಳಲು ಹೋಗುವ ಅವಕಾಶವನ್ನು ತಂದುಕೊಟ್ಟಿತು. ೧೯೨೧ರಲ್ಲಿ ಕೃಷ್ಣನ್ ಲಂಡನ್ನಿನ ಪ್ರಖ್ಯಾತ ಕಾಲೇಜು ಎಂದು ಹೆಸರು ಪಡೆದಿದ್ದ ಇಂಪೀರಿಯಲ್ ವಿಜ್ಞಾನ ಮತ್ತು ತಾಂತ್ರಿಕ ಕಾಲೇಜಿನಲ್ಲಿ ವ್ಯಾಸಂಗವೇತನ ಪಡೆದು ಉನ್ನತ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು. (ಅಂದಿನ ಇಂಪೀರಿಯಲ್ ವಿಜ್ಞಾನ ಮತ್ತು ತಾಂತ್ರಿಕ ಕಾಲೇಜು ಇಂದು ರಾಯಲ್ ವಿಜ್ಞಾನ ಕಾಲೇಜು ಎಂದು ಹೆಸರು ಪಡೆದಿದೆ.) ಕೃಷ್ಣನ್ ಅವರ ಪರಿಶ್ರಮದ ಫಲವಾಗಿ ೧೯೨೨ ರಲ್ಲಿ ರಾಯಲ್ ವಿಜ್ಞಾನ ಕಾಲೇಜಿನ ಕೂಟದ ಸದಸ್ಯತ್ವ ದೊರೆಯಿತು. ಎ. ಆರ್. ಸಿ. ಎಸ್ ಎಂಬುದು ಈ ಪದವಿಯ ಸಂಕ್ಷಿಪ್ತ ರೂಪ. ಮರುವರ್ಷ ತಮ್ಮ ವ್ಯಾಸಂಗ ವನ್ನು ಮೊದಲ ದರ್ಜೆಯಲ್ಲಿ ಮುಗಿಸಿ ಅದೇ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಪಡೆದು ತಮ್ಮ ಜ್ಞಾನದ ಪರಧಿಯನ್ನು ಹೆಚ್ಚಿಸಿಕೊಂಡರು. ಕೃಷ್ಣನ್ ಅವರ ಜ್ಞಾನದಾಹ ಇದಿಷ್ಟರಿಂದಲೇ ತೃಪ್ತಿಯಾಗಲಿಲ್ಲ. ಭೂವಿಜ್ಞಾನ ಸಂಶೋಧನೆ ಮಾಡಬೇಕೆಂಬ ಹೆಬ್ಬಯಕೆ ಅಂಕುರಿಸಿತು. ಇದಕ್ಕೆ ತಕ್ಕಂತಹ ವಾತಾವರಣ ಈ ದೇಶದ ವಿದ್ಯಾಭ್ಯಾಸದ ಅವಧಿಯಲ್ಲೇ ದೊರೆಯಿತು.  ಪ್ರೊಫೆಸರ್ ಡಬ್ಲಿಯು. ವ್ಯಾಟ್ಸ್ ಮತ್ತು ಡಾಕ್ಟರ್ ಜೆ.ಡಬ್ಲುಯು. ಈವಾನ್ಸ್, ಕೃಷ್ಣನ್ ಅವರು ಭೂವಿಜ್ಞಾನದಲ್ಲಿ ತೋರಿದ ಆಸಕ್ತಿ, ಅವರಲ್ಲಿದ್ದ ಪ್ರತಿಭೆಯನ್ನು ಗುರ್ತಿಸಿ ಮಾರ್ಗದರ್ಶನ ನೀಡಲು ಒಪ್ಪಿಸಿಕೊಂಡರು. ಭೂವಿಜ್ಞಾನದಲ್ಲಿ ಹಲವು ವಿಭಾಗಗಳಿವೆ. ಕೃಷ್ಣನ್ ಅವರು ಶಿಲಾಶಾಸ್ತ್ರವನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡರು.

ಭಾರತದ ಗುಜರಾತ್ ರಾಜ್ಯ ಭೂವಿಜ್ಞಾನದ ದೃಷ್ಟಿಯಿಂದ ಕೂಡ ಪ್ರಮುಖವಾದ ರಾಜ್ಯ. ಕೃಷ್ಣನ್ ಈ ರಾಜ್ಯದ ಕಾಥೇವಾಡಕ್ಕೆ ಸೇರಿದ ಗಿರ‍್ನಾರ್ ಮತ್ತು ಓಷಾಮ್ ಬೆಟ್ಟಗಳ ಶಿಲೆಗಳ ಮಾದರಿಗಳನ್ನು ಸಂಗ್ರಹಿಸಿ ಅವುಗಳ ಉಗಮ ಸ್ವರೂಪವನ್ನು ಕುರಿತಂತೆ ಮಹಾಪ್ರಬಂಧ ವೊಂದನ್ನು ರಚಿಸಿದರು. ಸುದೀರ್ಘ ಸಂಶೋದನೆಯ ಫಲವಾಗಿ ೧೯೨೪ರಲ್ಲಿ ಕೃಷ್ಣನ್ ಶಿಲಾಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಮುಂದೆ ಭೂವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಲು ಅವರು ಈ ಅವಧಿಯಲ್ಲಿ ಪಡೆದ ಜ್ಞಾನ ತುಂಬ ಉಪಯುಕ್ತವಾಯಿತು.

ಮರಳಿ ಭಾರತಕ್ಕೆ

ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಭೂವಿಜ್ಞಾನಕ್ಕೆ ಸಂಬಂಧಿಸಿದ ಯಾವುದೇ ವಿಚಾರ ವಿಷಯವಾಗಿರಲಿ ಅದರತ್ತ ಕೃಷ್ಣನ್ ಅವರ ತೀವ್ರ ಗಮನ ಹರಿಯಲು ಪ್ರಾರಂಭಿಸಿತು. ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲೇ ಗಣಿ ಭೂವಿಜ್ಞಾನದಲ್ಲಿ ವಿಶೇಷ ತರಬೇತಿ ಪಡೆದರು. ಡಾಕ್ಟರೇಟ್ ಪದವಿ ಪಡೆದನಂತರ ಆಗ ಲಂಡನ್ನಿನ ವಸ್ತು ಪ್ರದರ್ಶನಾಲಯದಲ್ಲಿದ್ದ ಭಾರತೀಯ ಮಳಿಗೆಯೊಂದರಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದರು. ಭಾರತ ಸರ್ಕಾರದ ಉನ್ನತ ಹುದ್ದೆಗೆ ಕೃಷ್ಣನ್ ಆಯ್ಕೆಯಾದರು. ಇದರೊಂದಿಗೆ ೧೯೨೪ ರಲ್ಲಿ ಕೃಷ್ಣನ್ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಗೆ ಭೂವಿಜ್ಞಾನಿಯಾಗಿ ಕಾಲಿಟ್ಟರು. ಡಾಕ್ಟರೇಟ್ ಪದವಿ ಪಡೆದ ಭೂವಿಜ್ಞಾನಿಯೊಬ್ಬ ಈ ಸಂಸ್ಥೆಗೆ ಬಂದದ್ದು ಇದೇ ಮೊಟ್ಟಮೊದಲು. ಅಂದಿಗಾಗಲೇ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸ್ಥಾಪನೆಯಾಗಿ ಮುಕ್ಕಾಲು ಶತಮಾನವೇ ಕಳೆದಿತ್ತು.

ಸಮೀಕ್ಷೆಗಾಗಿ ಪ್ರವಾಸಗಳು

ಕೃಷ್ಣನ್ ಭೂವಿಜ್ಞಾನಿಯಾಗಿ ಬಂದಾಗ ಥೈಲೆಂಡೂ ಸೇರಿದಂತೆ ಆಫ್ಘಾನಿಸ್ಥಾನ ಗಡಿಯಿಂದ ಚೀನದ ಗಡಿಯವರೆಗೆ, ಕಾಶ್ಮಿರದಿಂದ ಕನ್ಯಾಕುಮಾರಿಯವರೆಗೆ  ರಾಷ್ಟ್ರಾದ್ಯಂತ ಕೇವಲ ನಲವತ್ತು ಭೂವೈಜ್ಞಾನಿಕ ಸಮೀಕ್ಷಾಲಯಗಳಿದ್ದವು. ಅತ್ಯಂತ ದುರ್ಗಮವಾದ ಪ್ರದೇಶಗಳ ಸಮೀಕ್ಷಾ ಕಾರ್ಯವನ್ನು ಕೆಲವೇ ಭೂ ವಿಜ್ಞಾನಿಗಳು ಕೈಗೊಂಡಿದ್ದರು. ಕೃಷ್ಣನ್ ಅವರು ತಮ್ಮ ಸಹೋದ್ಯೋಗಿಗಳೊಡಗೂಡಿ ತಿಂಗಳುಗಟ್ಟಲೆ ದುರ್ಗಮ ಪ್ರದೇಶದಲ್ಲಿ ಸಮೀಕ್ಷೆಗಾಗಿ ಹೊರಡುತ್ತಿದ್ದರು. ತಮಗೆ ಅವಶ್ಯಕವಿದ್ದ ಬಟ್ಟೆಬರೆ, ತಿಂಡಿ ತೀರ್ಥ, ಸಮೀಕ್ಷೆಗೆ ಬೇಕಾದ ತಾಂತ್ರಿಕ ಉಪಕರಣ ನಕ್ಷೆಗಳನ್ನು ಇಪ್ಪತ್ತು ಮೂವತ್ತು ಪೆಟ್ಟಿಗೆ ಗಳಲ್ಲಿ ತುಂಬಿ ಕಾರ್ಯಕ್ಷೇತ್ರಗಳಿಗೆ ಹೊರಡುತ್ತಿದ್ದರು. ಭೂವಿಜ್ಞಾನ, ನಿಸರ್ಗದ ಮಡಿಲಲ್ಲೇ ಅಭ್ಯಾಸ ಮಾಡ ಬೇಕಾದ ವಿಜ್ಞಾನ. ಸಮೀಕ್ಷೆ ಮಾಡಲು ವಿಸ್ತಾರವಾದ ಪ್ರದೇಶದಲ್ಲೆಲ್ಲಾ ಸುತ್ತಬೇಕಾಗುತ್ತದೆ. ಕೃಷ್ಣನ್ ಅವರ ಸಮೀಕ್ಷಾ ಕ್ರಮ ವಿಶಿಷ್ಟವಾದದ್ದು. ದಿನವೊಂದರಲ್ಲಿ ಸುಮಾರು ಹದಿನೈದು ಮೈಲಿಗಳಷ್ಟು ದೂರವನ್ನು ಕಾಲ್ನಡಿಗೆಯಿಂದಲೇ ಕ್ರಮಿಸುತ್ತಿದ್ದರು. ಇದರ ಜೊತೆಗೆ ಸಾವಿರಾರು ಅಡಿಗಳಷ್ಟು ಎತ್ತರದ ಕೋಡುಗಲ್ಲುಗಳನ್ನು ಹತ್ತಿ ಸಮೀಕ್ಷಿಸಿದ ಸಂದರ್ಭ ಇವರ ಜೀವನದಲ್ಲಿ ಹಲವಾರು. ಸಮೀಕ್ಷೆ ಮುಗಿಸಿ ತಮ್ಮ ಕಛೇರಿಗೆ ಮರಳಿದಾಗ ಹಿರಿಯ ಅಧಿಕಾರಿಗಳು ಬಹು ಎಚ್ಚರಿಕೆಯಿಂದ ಇವರು ತಂದ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದರು. ಸಮೀಕ್ಷಿಸಿ ತಂದ ಶಿಲಾಮಾದರಿ, ಕ್ಷೇತ್ರದ ಛಾಯಾ ಚಿತ್ರಗಳೊಂದಿಗೆ ಕೂಲಂಕುಷವಾದ ವರದಿಯನ್ನು ತಯಾರಿಸ ಬೇಕಾಗುತ್ತಿತ್ತು. ಇಂದಿಗೂ ಈ ಕ್ರಮ ಬಹುಮುಖ್ಯ ವಾದದ್ದೆಂದೇ ಪರಿಗಣಿಸಲಾಗಿದೆ. ಕೃಷ್ಣನ್ ಅವರ ಭೂವಿಜ್ಞಾನ ಜೀವನದಲ್ಲಿ ಅಂದು ಈ ಸಂಸ್ಥೆಯಲ್ಲಿ ತುಂಬ ಪ್ರಸಿದ್ಧಿ ಹೊಂದಿದ್ದ ಸರ್ ಲೆವಿಸ್ ಫರ್ಮರ್ ಮತ್ತು ಸರ್ ಸಿರಿಲ್ ಫಾಕ್ಸ್ ಎಂಬ ಬ್ರಿಟಿಷ್ ಭೂವಿಜ್ಞಾನಿಗಳು ತುಂಬ ಉಪಯುಕ್ತ ಮಾರ್ಗದರ್ಶನ ನೀಡಿದರು. ತಾವೇ ಸ್ವತಂತ್ರ ವಾಗಿ ವಿಚಾರ ಮಾಡಿ, ತಮ್ಮ ನಿಲುವುಗಳನ್ನು ಸಮರ್ಥಿಸಿ ಕೊಂಡು ಕಾರ್ಯಭಾರ ನಿರ್ವಹಿಸಿದರೆ ಅಂತವರಿಗೆ ಮೆಚ್ಚುಗೆಯ ನುಡಿಗಳು ಸಲ್ಲುತ್ತಿದ್ದವು. ಕೃಷ್ಣನ್ ಇಂತಹ ವಾತಾವರಣದಲ್ಲಿ ಶ್ರೇಷ್ಠ ಭೂವಿಜ್ಞಾನಿಯಾಗಿ ರೂಪು ಗೊಂಡ ವ್ಯಕ್ತಿ. ಇವರ ಮುಂದಿನ ಸೇವೆ, ಸಾಧನೆಗೆ ಈ ವಾತಾವರಣ ತುಂಬ ಪರಿಣಾಮ ಮಾಡಿತು.

೧೯೩೦ ನೇ ಇಸವಿಯ ಹೊತ್ತಿಗೆ ಭಾರತದ ವಿವಿಧ ಭಾಗಗಳಲ್ಲಿ ಬಸ್ಸುಗಳು ಓಡಲು ಪ್ರಾರಂಬಿಸಿದವು. ಈ ಹೊತ್ತಿಗೆ ಕೃಷ್ಣನ್ ಅವರ ಕಠಿಣ ಪರಿಶ್ರಮದ ಅರ್ಧ ಪಾಲು ಕೆಲಸ ಮುಗಿದಿತ್ತು. ಕ್ರಮೇಣ ಭೂವೈಜ್ಞಾನಿಕ ಸಮೀಕ್ಷೆಯಲ್ಲಿ ಜೀಪುಗಳು ಬಳಕೆಗೆ ಬಂದು ಕಾರ್ಯಕ್ಷೇತ್ರವನ್ನು ಮಿತ ಸಮಯದಲ್ಲೇ ಸಮೀಕ್ಷೆ ಮಾಡಲು ಅನುಕೂಲ ವಾಯಿತು. ಈ ವೇಳೆಗೆ ಕೃಷ್ಣನ್ ಒರಿಸ್ಸಾದ ದುರ್ಗಮ ಭಾಗಗಳ ಸಮೀಕ್ಷೆ ನಡೆಸಿ ನಕ್ಷೆ ತಯಾರಿಸಿದ್ದರು. ತಮ್ಮ ಪಾಲಿನ ಕೆಲಸವನ್ನು ಯಶಸ್ವಿ ಯಾಗಿ ನಿರ್ವಹಿಸಿದ ಕೃಷ್ಣನ್ ಅವರ ಬಗ್ಗೆ ಹಿರಿಯ ಅಧಿಕಾರಿ ಗಳಿಗೆ ವಿಶೇಷ ಅಭಿಮಾನ. ಕಾಡುಮೇಡು, ಹಳ್ಳ ತಿಟ್ಟು ಕಲ್ಲು ಮಣ್ಣುಗಳೇ ಕೃಷ್ಣನ್ ಅವರಿಗೆ ಪಾಠಶಾಲೆ, ಪ್ರಯೋಗಶಾಲೆ. ಅವುಗಳ ಸ್ವರೂಪ, ಸಂಪನ್ಮೂಲತೆ, ರಚನೆ, ಉಗಮ ವಿಕಾಸಗಳನ್ನು ಅಧ್ಯಯನಿಸುವಾಗಲೆಲ್ಲ ಕೃಷ್ಣನ್ ಪ್ರಕೃತಿಯಲ್ಲಿ ಮೈ ಮರೆಯುತ್ತಿದ್ದರು.

ಮತ್ತೆ ವಿದೇಶಗಳಿಗೆ

ಕ್ಷೇತ್ರ ಸಮೀಕ್ಷೆಯಲ್ಲಿ ತೊಡಗಿ  ಸುಮಾರು ಹತ್ತು ವರ್ಷಗಳ ಕಾಲ ಅಧ್ಯಯನ ಬಿಡುವಿಲ್ಲದ  ನಡೆಸಿದರು. ಈ ಅವಧಿಯಲ್ಲಿ ಕೃಷ್ಣನ್ ಅವರು ಅಪಾರವಾದ ಜ್ಞಾನ ಸಂಪಾದಿಸಿದರು. ಇವರ ಕಾರ್ಯದಕ್ಷತೆ, ಪ್ರತಿಭಾ ಸಂಪನ್ನತೆಯನ್ನು ಗುರ್ತಿಸಿದ ಸರ್ಕಾರ ಭೂವಿಜ್ಞಾನದಲ್ಲಿ ಉನ್ನತ ಅಧ್ಯಯನಕ್ಕಾಗಿ ಲಂಡನ್ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳಿಗೆ ಇವರನ್ನು ಕಳಿಸಿಕೊಟ್ಟಿತು. ಈ ಸದವಕಾಶವನ್ನು ಕೃಷ್ಣನ್ ಸಂಪೂರ್ಣವಾಗಿ ಉಪಯೋಗಿಸಿ ಕೊಂಡರು. ಅನೇಕ ಪ್ರಯೋಗ ಶಾಲೆ ಗಳನ್ನು ಸಂದರ್ಶಿಸಿದ್ದೇ ಅಲ್ಲದೆ ಗಣಿ ಕಾರ್ಯಾಚರಣೆ ಗಳನ್ನು ಖುದ್ದಾಗಿ ಕಂಡು ಅವುಗಳ ರೂಪುರೇಷೆಯನ್ನು ಮನನಮಾಡಿಕೊಂಡರು. ಖನಿಜ ಶಾಸ್ತ್ರದ ನೂತನ ತಾಂತ್ರಿಕತೆಗೆ ಆಗ ಅಮೆರಿಕದ ಹಾರ್ವರ್ಡ್ ಮತ್ತು ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯಗಳು ತುಂಬ ಹೆಸರುವಾಸಿಯಾಗಿದ್ದವು. ಕೆಲವು ಕಾಲ ಈ ಎರಡು ವಿಶ್ವವಿದ್ಯಾಲಯಗಳಲ್ಲಿ ಖನಿಜ ಶಾಸ್ತ್ರದಲ್ಲಿ ಹೆಚ್ಚು ನೈಪುಣ್ಯ ಗಳಿಸಿದರು. ಅಮೆರಿಕದಿಂದ ಮರಳುವಾಗ ಆಸ್ಟ್ರಿಯಾ ದೇಶಕ್ಕೂ ಭೇಟಿ ನೀಡಿದರು. ಈ ದೇಶದ ಪ್ರಖ್ಯಾತ ಶಿಲಾಶಾಸ್ತ್ರಜ್ಞ ಪ್ರೊಫೆಸರ್ ಬ್ರುನೋ ಸ್ಯಾಂಡರ್ ಅವರ ಬಳಿ ಶಿಲಾಕಣ ವಿನ್ಯಾಸದ ವಿಶ್ಲೇಷಣೆಗೆ ಅನುವಾಗುವ ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಂಡರು.

ಒಂದು ಪರೀಕ್ಷೆ

ವಿದೇಶದಿಂದ ಮರಳಿದ ಕೃಷ್ಣನ್ ಅವರ ಕಾರ್ಯದಕ್ಷತೆ ಪರೀಕ್ಷೆಗೆಗೊಳಗಾಗುವ ಸಂದರ್ಭ ವೊಂದು ಎದುರಾಯಿತು. ಆಗ ಭಾರತದ ಕಲ್ಲಿದ್ದಲು ಕೈಗಾರಿಕೆ ಬಹಳ ಆತಂಕಪರಿಸ್ಥಿತಿಯಲ್ಲಿತ್ತು.  ಇಡೀ ಕೈಗಾರಿಕೆ ಹಲವು ಸಮಸ್ಯೆಗಳ ತವರಾಗಿತ್ತು. ಸರ್ಕಾರ ಇದನ್ನರಿತು ೧೯೩೭-೩೮ ರ ನಡುವೆ ಕೃಷ್ಣನ್ ಅವರನ್ನು ಕಲ್ಲಿದ್ದಲು ಕಮಿಷನ್‌ಗೆ ಸದಸ್ಯರನ್ನಾಗಿ ನೇಮಿಸಿತು. ಕಲ್ಲಿದ್ದಲು ಕೈಗಾರಿಕೆಯ ಕೂಲಂಕಷ ಅಧ್ಯಯನ ಮಾಡುವ ಹೊಣೆ ಇವರ ಮೇಲೆ ಬಿತ್ತು. ಸುದೀರ್ಘವಾಗಿ ಸಮಸ್ಯೆಯನ್ನು ಅಧ್ಯಯನ ಮಾಡಿದ ಕೃಷ್ಣನ್ ಅವರು ಕಲ್ಲಿದ್ದಲು ಗಣಿಗಳನ್ನು ರಾಷ್ಟ್ರೀಕರಣ ಮಾಡುವುದೊಂದೇ ಸಮಸ್ಯೆಗೆ ಉತ್ತರವೆಂದು ತಮ್ಮ ವರದಿಯಲ್ಲಿ ತಿಳಿಸಿದರು. (ರಾಷ್ಟ್ರೀಕರಣ ಮಾಡುವುದು, ಎಂದರೆ ಅದರ ಆಡಳಿತವನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳುವುದು. ಇದರಿಂದ ಖಾಸಗಿಯವರು ಸಾಮಗ್ರಿಯ ಸರಬರಾಜನ್ನು ಪಡೆದು ಬೆಲೆ ಏರಿಸಿ ಲಾಭ ಮಾಡಿಕೊಳ್ಳುವುದು ತಪ್ಪುತ್ತದೆ.) ಕೃಷ್ಣನ್ ಅವರ ದೃಢ ನಿಲುವು, ಕಾರ್ಯದಕ್ಷತೆ ಬೆಳಕಿಗೆ ಬಂದದು ಈ ಸಂದರ್ಭದಲ್ಲಿ.

ಖನಿಜ ಸಂಪನ್ಮೂಲದ ಪತ್ತೆ

ಕೃಷ್ಣನ್ ಅವರ ಆಸಕ್ತಿ ಭಾರತದ ಆರ್ಥಿಕ ಖನಿಜ ಸಂಪನ್ಮೂಲಗಳ ಸಮೀಕ್ಷೆಯತ್ತ ಕೇಂದ್ರೀಕೃತವಾಯಿತು. ಬಿಹಾರ ಮತ್ತು ಒರಿಸ್ಸಾ ರಾಜ್ಯಗಳ ಬಾಕ್ಸೈಟು ನಿಕ್ಷೇಪ (ಅಲ್ಯುಮಿನಿಯಂ ಅದುರು)ವನ್ನು ಪತ್ತೆಹಚ್ಚಿ ಗಣಿ ಮಾಡುವ ಸಾಧ್ಯತೆಯನ್ನು ತೋರಿಸಿಕೊಟ್ಟರು. ವಿಕಿರಣಶೀಲ ಖನಿಜವಾದ ರೇಡಿಯಂ ಮತ್ತು ರಸಗೊಬ್ಬರವಾಗಿ ಉಪಯುಕ್ತವಾದ ಫಾಸ್ಫೇಟ್ ಖನಿಜಗಳ ದೀರ್ಘ ಅಧ್ಯಯನವನ್ನು ಮಾಡಿ ಭಾರತದಲ್ಲಿ ಅವು ದೊರೆಯುವು ದರ ಬಗ್ಗೆ ಅಪೂರ್ವ ಮಾಹಿತಿಯನ್ನು ನೀಡಿದರು. ಕೈಗಾರಿಕಾ ರಂಗದ ಪ್ರಮುಖ ಇಂಧನ ವೆನ್ನಿಸಿರುವ ಕಲ್ಲಿದ್ದಲಿನ ಬಗ್ಗೆ ಕೃಷ್ಣನ್ ಅವರಿಗೆ ವಿಶೇಷವಾದ ಆಸಕ್ತಿ. ಭಾರತದ ಕಲ್ಲಿದ್ದಲು ಸಂಪನ್ಮೂಲದ ಪ್ರಮಾಣ ನಿರ್ಧರಿಸಿ ಗಣಿ ಅಭಿವೃದ್ಧಿಗೆ ನೆರವಾಗುವಂತಹ ಅನೇಕ ಯೋಜನೆ ಗಳನ್ನು ರೂಪಿಸಿದರು. ಒರಿಸ್ಸದ ಬಾಮ್ರ ಪ್ರದೇಶದ ಮ್ಯಾಂಗನೀಸು ಕೃಷ್ಣನ್ ಅವರ ಶೋಧನೆಯ ಫಲವಾಗಿ ಪತ್ತೆಯಾದ ಮುಖ್ಯ ನಿಕ್ಷೇಪಗಳಲ್ಲೊಂದು. ಇದಲ್ಲದೆ ಮಧ್ಯಪ್ರಾಂತದ ಇಡೀ ಶಿಲಾಪ್ರದೇಶಗಳನ್ನು ಅಧ್ಯಯನ ಮಾಡಿ ಅಲ್ಲಿನ ಖನಿಜ ಸಂಪನ್ಮೂಲವನ್ನು ಪರಿಚಯಿಸಿದರು.

೧೯೪೦ರಲ್ಲಿ ತಮಿಳು ನಾಡಿನ ನೈವೇಲಿ ಲಿಗ್ನೈಟ್ ಯೋಜನೆಯ ಕಾರ್ಯಭಾರವನ್ನು ವಹಿಸಿಕೊಂಡರು.

ಈಗ ಭಾರತದಲ್ಲಿ ಮುಖ್ಯವಾದ ಕಲ್ಲಿದ್ದಲು ಕ್ಷೇತ್ರಗಳಲ್ಲಿ ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿರುವ ನೈವೇಲಿ ಒಂದು. ಇಲ್ಲಿ ಕಲ್ಲಿದ್ದಲಿನ ವ್ಯಾಪ್ತಿ ಐದೂವರೆ ಚದುರ ಮೈಲಿಗಳಷ್ಟು. ಇಲ್ಲಿ ಲಿಗ್ನೈಟ್ ಇದೆ ಎಂದು ತಿಳಿದ ನಂತರವೂ ಅದನ್ನು ಭೂಮಿಯಿಂದ ಹೊರಕ್ಕೆ ತೆಗೆಯುವುದು ತುಂಬಾ ಕಷ್ಟವಾಯಿತು. ಕಾರಣ ಅಲ್ಲಿ ಬಹಳ ನೀರಿದ್ದದ್ದು. ಕೃಷ್ಣನ್ ಅವರು ಆಗ ಮದರಾಸು ಸರ್ಕಾರಕ್ಕೆ ಸಲಹೆಗಾರರಾಗಿದ್ದ ಸರ್ ಎಸ್. ವಿ. ರಾಮಮೂರ್ತಿ ಅವರ ಸಹಕಾರ ಪಡೆದು ನೈವೇಲಿಯಲ್ಲಿ ಭೈರಿಗೆ ಕಾರ್ಯಾಚರಣೆ ಮಾಡಿಸಿದರು. ಇದರ ಫಲವಾಗಿ ಇಲ್ಲಿನ ಕಲ್ಲಿದ್ದಲು ಸಂಪನ್ಮೂಲ ಅತ್ಯಂತ ಉತ್ಕೃಷ್ಟ ವಾಗಿದ್ದುದು ಬೆಳಕಿಗೆ ಬಂತಲ್ಲದೆ ಮುಂದೆ ಇದೊಂದು ಅತಿ ದೊಡ್ಡ ಗಣಿ ಕಾರ್ಯಾಚರಣೆಯ ಕೇಂದ್ರವಾಗಿ ಅಭಿವೃದ್ಧಿ ಹೊಂದಿತು.

ಉನ್ನತ ಅಧಿಕಾರಿಗಳ ಕೀರ್ತಿ, ಪ್ರತಿಷ್ಠೆ, ಹುದ್ದೆಗಳಿಗೆ ಬಾಗಿ ಕೃಷ್ಣನ್ ಅವರು ತಮ್ಮ ನಿಲುವನ್ನು, ತಾವು ಸತ್ಯವೆಂದು ಮನವರಿಕೆ ಮಾಡಿಕೊಂಡ ಅಂಶಗಳನ್ನು ಎಂದಿಗೂ ಬದಲಾಯಿಸುತ್ತಿರಲಿಲ್ಲ. ಇಂತಹ ನಿಷ್ಠೆಯನ್ನು ಕಿರಿಯ ರಿಂದಲೂ ಬಯಸುತ್ತಿದ್ದರು.

ಹಿಮಾಲಯದ ಅಧ್ಯಯನ

ಭಾರತದ ಉತ್ತರದಲ್ಲಿ ಹಿಮಾಲಯ ಶ್ರೇಣಿ ಹೆಬ್ಬಾವಿನಂತೆ ಹಾದಿದೆ. ಇದರ ದಕ್ಷಿಣದಲ್ಲಿ ಸಿಂಧೂ-ಗಂಗಾ-ಬ್ರಹ್ಮಪುತ್ರ ನದಿ ಬಯಲುಗಳ ಮಧ್ಯ ಸಿವಾಲಿಕ್ ಎಂಬ ಬೆಟ್ಟ ಶ್ರೇಣಿಯೊಂದಿದೆ. ಈ ಬೆಟ್ಟದ ಶಿಲೆಗಳು ಪ್ರಾಚೀನ ಜೀವಿಗಳ ಹಾಗೂ ಮಾನವನ ಅವಶೇಷಗಳನ್ನು ಹೊಂದಿವೆ. ಪ್ರಪಂಚದ ವಿವಿಧ ಭಾಗಗಳಿಂದ ಪ್ರಾಚೀನ ಜೀವಿಗಳನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ಇಲ್ಲಿಗೆ ಬಂದು ಅಧ್ಯಯನ ಮಾಡಿದ್ದಾರೆ. ಇಲ್ಲಿನ ಶಿಲೆಗಳು ಸಂಚಯನಗೊಂಡು ಅನಂತರ ಒತ್ತಡಕ್ಕೆ ಸಿಲುಕಿ ಮಡಿಕೆ ಗೊಂಡಿರುವುದನ್ನು ಈ ಪ್ರದೇಶದಲ್ಲಿ ಕಾಣಬಹುದು. ೧೯೧೯ ರಲ್ಲಿ ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆಯ ಮೂವತ್ತು ವರ್ಷದ ಪ್ರಾಯದ ಇ. ಎಚ್ ಪ್ಯಾಸ್ಕೊ ಮತ್ತು ಮೂವತ್ತೈದು ವರ್ಷ ಪ್ರಾಯದ ಜಿ.ಇ ಪಿಲಿಗ್ರಿಂ ಎಂಬ ಇಬ್ಬರು ಭೂ ವಿಜ್ಞಾನಿಗಳು ಈ ಕ್ಷೇತ್ರದ ಅಧ್ಯಯನ ನಡೆಸಿದರು. ಇಡೀ ಸಿವಾಲಿಕ್ ಬೆಟ್ಟಗಳು, ಅಸ್ಸಾಮಿನ ಈಶಾನ್ಯ ಭಾಗದಿಂದ ಹಿಮಾಲಯದ ತಪ್ಪಲಿನ ಮೂಲಕ ಕಾಶ್ಮೀರದಲ್ಲಿ ಹರಿದು ಮತ್ತೆ ದಕ್ಷಿಣಕ್ಕೆ ತಿರುಗಿ ಅರಬ್ಬೀ ಸಮುದ್ರ ಸೇರುವ ಬಹುದೊಡ್ಡ ನದಿಯೊಂದು ಸಂಚಯಿಸಿರುವ ಶಿಲೆಗಳಿಂದ ಆದ ಬೆಟ್ಟಗಳೆಂದು ಅಭಿಪ್ರಾಯಪಟ್ಟರು. ಅಲ್ಲದೆ ಈ ನದಿಗೆ, ಸಿಂಧೂ, ಬ್ರಹ್ಮಪುತ್ರ ಎಂಬ ಹೆಸರನ್ನೂ ನೀಡಿದರು. ಕೃಷ್ಣನ್ ಅವರು ಈ ಅಭಿಪ್ರಾಯವನ್ನು ಒಪ್ಪಲಿಲ್ಲ.  ೧೯೪೦ ರವರೆಗೆ ನಡೆಸಿದ್ದ ಶೋಧನೆಗಳನ್ನು ವಿಶದವಾಗಿ ಪರಿಶೀಲಿಸಿ ಸಿಂಧೂಬ್ರಹ್ಮ ಎಂಬ ನದಿ ಹಿಮಾಲಯದ ಪ್ರತ್ಯೇಕ ನದಿಯಾಗಿ ಹರಿದಿರುವ ಸಾಧ್ಯತೆಯೇ ಇಲ್ಲವೆಂದು ಸ್ಪಷ್ಟವಾಗಿ ನುಡಿದರು. ಹಿಮಾಲಯ ಪರ್ವತವು ಭೂಚರಿತ್ರೆಯ ವಿವಿಧ ಕಾಲಗಳಲ್ಲಿ ಸಾವಧಾನವಾಗಿ ಮೇಲೇಳಲು ಪ್ರಾರಂಭಿಸಿತು. ಈ ಕ್ರಿಯೆಯ ಕೊನೆಯ ಹಂತದಲ್ಲಿ ಹಿಮಾಲಯದ ಮುಂಭಾಗದಲ್ಲಿ ಬೃಹತ್ ತಗ್ಗೊಂದು ರೂಪುಗೊಂಡು ಸಿವಾಲಿಕ್ ಬೆಟ್ಟದ ಶಿಲೆಗಳು ಅದರಲ್ಲಿ ಸಂಚಯಿಸಿದವು ಎಂಬ ಅಭಿಪ್ರಾಯವನ್ನು ಕೃಷ್ಣನ್ ವ್ಯಕ್ತಪಡಿಸಿದರು. ತಮ್ಮ ಅಭಿಪ್ರಾಯವನ್ನು ವೈಜ್ಞಾನಿಕ ಮಾಹಿತಿ ಅಧ್ಯಯನ ಅವಲೋಕನೆಯಿಂದ ಸಮರ್ಥಿಸಿಕೊಂಡರು.

ಹೊಸ ಹೊಣೆಗಳು

ಮೇಲ್ವಿಚಾರಣಾ ಭೂವಿಜ್ಞಾನಿಯಾಗಿ ಕೃಷ್ಣನ್ ಅವರು ಮಾಡಿದ ಕಾರ್ಯಗಳು ಅಸಂಖ್ಯ. ಯೋಜನೆ ಗಳನ್ನು ರೂಪಿಸುವುದೇ ಅಲ್ಲದೆ ಅವುಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ನೆಮ್ಮದಿ ಈ ಬಿಡುವಿಲ್ಲದ ಭೂ ವಿಜ್ಞಾನಿಗೆ. ಮದರಾಸಿನಲ್ಲಿ ಭಾರತೀಯ ಭೂವಿಜ್ಞಾನ ಸಮೀಕ್ಷೆಯ ವೃತ್ತ ಕಛೇರಿ ತೆರೆಯಲು ಕೃಷ್ಣನ್ ಸರ್ಕಾರಕ್ಕೆ ಸಲಹೆ ನೀಡಿದರು. ಸರ್ಕಾರ ಕೃಷ್ಣನ್ ಅವರ ಸಲಹೆಯನ್ನು ಒಪ್ಪಿತು. ಮದರಾಸಿನಲ್ಲಿ ಪ್ರಪ್ರಥಮ ಬಾರಿಗೆ ವೃತ್ತ ಕಛೇರಿ ತೆರೆಯಲ್ಪಟ್ಟಿತು. ಕೃಷ್ಣನ್ ಇದಿಷ್ಟರಿಂದಲೇ ಸಂತೃಪ್ತರಾಗಲಿಲ್ಲ. ಇಲಾಖೆಗೆ ಆಗ ಹೊಸದಾಗಿ ನೇಮಕವಾಗಿದ್ದ ಭೂ ವಿಜ್ಞಾನಿಗಳ ತಂಡವೇ ಇತ್ತು. ಈ ಭೂ ವಿಜ್ಞಾನಿಗಳಿಗೆ ಕಾರ್ಯಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಅಧ್ಯಯನವನ್ನು ತಿಳಿಯಪಡಿಸುವ ಮಾರ್ಗದರ್ಶನ ನೀಡಲು ಕೃಷ್ಣನ್ ಸ್ವತಃ ಮುಂದಾದರು. ಇದರ ಜೊತೆಗೆ ಭೂವಿಜ್ಞಾನದಲ್ಲಿ ಎದುರಿಸಬೇಕಾದ  ಇತರ  ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕೆಂದು ತಿಳಿಸಿಕೊಡಲು ತರಬೇತಿ ನೀಡಿದರು. ಭೂವಿಜ್ಞಾನಿಗಳಿಗೆ ಅವರ ಕಾರ್ಯಕ್ಷೇತ್ರಗಳಲ್ಲಿ ನೆರವಾಗಿದ್ದೇ ಅಲ್ಲದೆ ಮರಳಿ ಕಛೇರಿಗೆ ಬಂದಾಗ ಮಾಹಿತಿಗಳನ್ನು ಕಲೆಹಾಕಿ ಅವುಗಳನ್ನು ವೈಜ್ಞಾನಿಕವಾಗಿ ಹೇಗೆ ಶುದ್ಧ ಭಾಷೆಯಲ್ಲಿ ಸ್ಪಷ್ಟವಾಗಿ ನಿರೂಪಿಸಬೇಕೆಂಬ ಜಾಣ್ಮೆಯನ್ನೂ ಕಲಿಸಿ ಕೊಡು ತ್ತಿದ್ದರು. ಕೃಷ್ಣನ್ ಅವರು ತಾವು ಹಿರಿಯ ಅಧಿಕಾರಿಗಳಿಂದ ಪಡೆದ ವೈಜ್ಞಾನಿಕ ತಿಳಿವನ್ನು ಕಿರಿಯರಿಗೆ ನೀಡುತ್ತಿದ್ದುದು ಅವರು ವಿಜ್ಞಾನದಲ್ಲಿಟ್ಟಿದ್ದ ನಿಷ್ಠೆಯನ್ನು ಸಾರುತ್ತದೆ. ಪ್ರತಿ ಭೂ ವಿಜ್ಞಾನಿಯ ಸಮಸ್ಯೆಗಳನ್ನು ವೈಯಕ್ತಿಕವಾಗಿ ವಿಚಾರಿಸಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದ ಕೃಷ್ಣನ್ ಕಿರಿಯರ ಪ್ರೀತಿಪಾತ್ರರಾಗಿದ್ದರು. ಇವರಿಂದ ಮಾರ್ಗದರ್ಶನ ಪಡೆದ ಅನೇಕ ಭೂವಿಜ್ಞಾನಿಗಳು ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆಯ ಪ್ರತಿಷ್ಠಿತ ಹುದ್ದೆಗಳಲ್ಲಿ ಸೇವೆ ಮಾಡಿದ್ದಾರೆ. ಇಂದಿಗೂ ಸೇವೆ ಸಲ್ಲಿಸುತ್ತಿರುವ ಒಂದು ಪೀಳಿಗೆಯೇ ಈ ಸಂಸ್ಥೆಯಲ್ಲಿದೆ.

ಇಂಡಿಯನ್ ಬ್ಯೂರೊ ಆಫ್ ಮೈನ್ಸ್

ಈ ವೇಳೆಗೆ ಭಾರತದ ಗಣಿ ಕಾರ್ಯಕ್ಷೇತ್ರಗಳ ಕಾರ್ಯಭಾರವನ್ನು ನೋಡಿಕೊಳ್ಳುವ ‘ಇಂಡಿಯನ್ ಬ್ಯೂರೋ ಆಫ್ ಮೈನ್ಸ್’ ಎಂಬ ಸಂಸ್ಥೆಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿತು. ೧೯೪೮ ರಲ್ಲಿ ಸರ್ಕಾರ ಕೃಷ್ಣನ್ ಅವರನ್ನು ಈ ಹುದ್ದೆಯಲ್ಲಿ ನೇಮಕಮಾಡಿತು. ೧೯೫೧ನೇ ಇಸವಿಯವರೆಗೆ ಕೃಷ್ಣನ್ ನಿರ್ದೇಶಕರಾಗಿ ಈ ಸಂಸ್ಥೆಯಲ್ಲಿಯೇ ಮುಂದುವರೆದರು. ಬ್ಯೂರೋದ ಏಳ್ಗೆಗಾಗಿ ಕೃಷ್ಣನ್ ಅವರು ಅನೇಕ ಯೋಜನೆಗಳನ್ನು ಹಾಕಿದರು. ಕೃಷ್ಣನ್ ಅವರ ಜೀವನದ ಈ ಅವಧಿಯಲ್ಲಿ ಪ್ರಮುಖ ಬದಲಾವಣೆಯಾಯಿತು. ಇವರು ಬ್ಯೂರೋದ ನಿರ್ದೇಶಕರಾಗಿದ್ದ ಸಮಯದಲ್ಲಿ ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆಯ ನಿರ್ದೇಶಕರಾಗಿ ಬ್ರಿಟನ್ನಿನಲ್ಲಿ ಹುಟ್ಟಿದ ಡಾಕ್ಟರ್ ಡಬ್ಲಿ ಯು.ಡಿ.ವೆಸ್ಟ್ ಅಧಿಕಾರದಲ್ಲಿದ್ದರು. ೧೯೪೫ನೇ ಇಸವಿಯಲ್ಲಿ ನಿರ್ದೇಶಕ ಹುದ್ದೆಗೆ ಬಂದ ವೆಸ್ಟ್ ಅವರು ೧೯೪೯ ರಲ್ಲಿ ನಾಲ್ಕು ತಿಂಗಳುಗಳ ಕಾಲ ರಜೆ ಪಡೆದರು. ಕಾಯಾಭಾರ ನೋಡಿಕೊಳ್ಳಲು ಕೃಷ್ಣ ಅವರನ್ನು ಅವರ ಈ ಹುದ್ದೆಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಯಿತು. ಭೂವಿಜ್ಞಾನದ ಇತಿಹಾಸದಲ್ಲೇ ಇದೊಂದು ಚಾರಿತ್ರಿಕ ಘಟನೆ ಎನ್ನಬಹುದು. ಅಂದಿಗಾಗಲೇ ಭೂ ವೈಜ್ಞಾನಿಕ ಸಮೀಕ್ಷೆ ಸ್ಥಾಪಿತವಾಗಿ ನೂರು ವರ್ಷಗಳೇ ಸಮೀಪಿಸುತ್ತಿದ್ದವು. ಸ್ಥಾಪಿತವಾದಂದಿನಿಂದ ಈ ಹುದ್ದೆ ಇಂಗ್ಲೆಂಡಿನಿಂದ ಬಂದ ಭೂ ವೈಜ್ಞಾನಿಗಳಿಗಲ್ಲದೆ ಮತ್ತಾರಿಗೂ ದೊರೆತಿರಲಿಲ್ಲ. ಕೃಷ್ಣನ್ ಅವರ ನೇಮಕ ದಿಂದ ಭಾರತೀಯ ಭೂ ವಿಜ್ಞಾನಿಯೊಬ್ಬ ಪ್ರಪಂಚದಲ್ಲೇ ಮೂರನೆಯ ಹಳೆಯ ಸಂಸ್ಥೆ ಹಾಗೂ ದೊಡ್ಡ ಸಂಸ್ಥೆಗಳಲ್ಲೊಂದು ಎನ್ನಿಸಿರುವ ಭೂವೈಜ್ಞಾನಿಕ ಸಮೀಕ್ಷೆಯ ಉನ್ನತ ಹುದ್ದೆಯನ್ನು ಪಡೆದಂತಾಯಿತು; ಅಂತೆಯೇ ಕೆಟ್ಟ ಒಂದು ಸಂಪ್ರದಾಯ ವನ್ನು ಮುರಿದಂತಾಯಿತು.

೧೯೫೧ರಲ್ಲಿ ಕೃಷ್ಣನ್ ಅವರು ಭಾರತೀಯ ಭೂ ವೈಜ್ಞಾನಿಕ  ಸಮೀಕ್ಷೆಯ ಖಾಯಂ ನಿರ್ದೇಶಕರಾಗಿ ನೇಮಕವಾದರು.

ಭಾರತ ಮತ್ತು ಬರ್ಮದ ಭೂವಿಜ್ಞಾನ

ಕೃಷ್ಣನ್ ಅವರು ತಾವು ವೀಕ್ಷಿಸಿದ, ಸಮೀಕ್ಷಿಸಿದ ಪ್ರದೇಶ, ಅವುಗಳ ಭೂವಿಜ್ಞಾನವನ್ನು ಅನೇಕ ಲೇಖನಗಳ ಮೂಲಕ ಪ್ರಕಟಿಸಿದರು. ಇಡೀ ಭೂವಿಜ್ಞಾನ ಸಂತತಿ ಹೆಚ್ಚು ಲಾಭ ಪಡೆಯುವಂತಹ ಯೋಜನೆಯೊಂದು ಕೃಷ್ಣನ್ ಅವರ ಮನದಾಳದಲ್ಲಿ ಅಂಕುರಿಸಿತು. ತಮ್ಮ ದೀರ್ಘ ಅವಧಿಯ ಅಧ್ಯಯನ, ಅನುಭವವನ್ನು ಕೃತಿರೂಪದಲ್ಲಿ ಪ್ರಕಟಿಸಲು ಯೋಜಿಸಿ ಪ್ರಪ್ರಥಮವಾಗಿ ೧೯೪೩ ರಲ್ಲಿ ‘ಭಾರತ ಮತ್ತು ಬರ್ಮದ ಭೂವಿಜ್ಞಾನ’ ಎಂಬ ಮೇರು ಕೃತಿಯನ್ನು ರಚಿಸಿದರು. ಕೇವಲ ಭಾರತ ಉಪಖಂಡದ ಭೂ ವಿಜ್ಞಾನವೇ ಅಲ್ಲದೆ ಪಾಕಿಸ್ತಾನ, ಬರ್ಮ, ಬಾಂಗ್ಲಾದೇಶಗಳ ಭೂವಿಜ್ಞಾನವನ್ನು ಕೂಲಂಕಷವಾಗಿ ಚರ್ಚಿಸಿರುವ ಉನ್ನತ ಮಟ್ಟದ ಭೂವಿಜ್ಞಾನ ಕೃತಿ ಇದು. ಈ ಪ್ರದೇಶಗಳ ಶಿಲಾವರ್ಗದ ಜೊತೆಗೆ ಖನಿಜ ಸಂಪನ್ಮೂಲವನ್ನು ಅತ್ಯಂತ ಶಾಸ್ತ್ರೀಯವಾಗಿ ನಿರೂಪಿಸುವ ಈ ಕೃತಿ ಭೂವಿಜ್ಞಾನ ವಿದ್ಯಾರ್ಥಿ ಇಂದಿಗೂ ಬಳಸುತ್ತಿರುವ ಅದ್ವೀತಿಯ ಕೃತಿಯಾಗಿದೆ. ಬ್ರಿಟಿಷ್ ಮತ್ತು ಅಮೆರಿಕದ ಭೂ ವಿಜ್ಞಾನಿಗಳು ಈ ಕೃತಿಯ ಮೌಲ್ಯವನ್ನು ಬಹು ಹಿಂದೆಯೇ ಎತ್ತಿಹಿಡಿದಿದ್ದಾರೆ. ಹೇರಳ ಮಾಹಿತಿಗಳಿಂದ ಕೂಡಿದ ಈ ಕೃತಿ ರಷ್ಯನ್ ಭಾಷೆಗೂ ತರ್ಜುಮೆಯಾಯಿತು. ೧೯೫೪ ರ ವೇಳೆಗೆ ರಷ್ಯದ ವಿಶ್ವವಿದ್ಯಾಲಯಗಳಲ್ಲಿ ಪರಾಮರ್ಶನ ಕೃತಿ ಎಂದು ಇದನ್ನು ಪರಿಗಣಿಸಲಾಯಿತು. ಪದವಿ ತರಗತಿಗಳ ವಿದ್ಯಾರ್ಥಿಗಳಷ್ಟೇ ಅಲ್ಲದೆ ಸ್ನಾತಕೋತ್ತರ ವಿದ್ಯಾರ್ಥಿಗಳೂ ಇಂದು ಈ ಕೃತಿಯನ್ನು ಅಭ್ಯಾಸ ಮಾಡುವುದು ಕೃಷ್ಣನ್ ಅವರ ದುಡಿಮೆಯ ದ್ಯೋತಕ. ತಮ್ಮ ಈ ಕೃತಿಯನ್ನು ಕೃಷ್ಣನ್ ಅವರು ‘ಭಾರತ ಮತ್ತು ಬರ್ಮದ ಭೂ ವಿಜ್ಞಾನ ಪರಿಚಯ’ ಎಂಬ ಕಿರುಹೊತ್ತಗೆ ರೂಪದಲ್ಲಿ ತಂದರು. ಪದವಿ ತರಗತಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಶ್ಯಕ ವೆನ್ನಿಸುವಷ್ಟು ಮಾಹಿತಿಗಳನ್ನು ನೀಡುವುದು  ಈ ಕೃತಿ ರಚನೆಯ ಹಿನ್ನೆಲೆಯಾಗಿತ್ತು. ಭಾರತ ಸರ್ಕಾರ ಈ ಕೃತಿಯ ತಾಂತ್ರಿಕ ಮೌಲ್ಯವನ್ನು ಗುರ್ತಿಸಿ ಅದನ್ನು ಹಿಂದಿ ಭಾಷೆಗೆ ಅನುವಾದ ಮಾಡಿಸಿತು. ತಾಂತ್ರಿಕ ಕೃತಿಯೊಂದು ಹಿಂದಿ ಭಾಷೆಗೆ ಅನುವಾದಗೊಂಡದ್ದು ಇದೇ ಮೊತ್ತಮೊದಲು.

ಸೇವೆಯ  ಕ್ಷೇತ್ರ  ವಿಸ್ತಾರವಾಯಿತು

ಕೃಷ್ಣನ್ ಅವರ ಸೇವೆ ಅನೇಕ ಸಂಸ್ಥೆಗಳಿಗೆ ದೊರೆಯಿತು. ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆಯಲ್ಲಿ ನಿರ್ದೇಶಕರಾಗಿದ್ದ ಸಮಯದಲ್ಲೆ ಭಾರತ ಸರ್ಕಾರಕ್ಕೆ ಖನಿಜ ಸಲಹೆಗಾರರಾಗಿ ಸೇವೆ ಸಲ್ಲಿಸಲು ಕರೆ ಬಂತು. ಬಿಡುವಿಲ್ಲದ ಕೆಲಸ ಕಾರ್ಯದ ನಡುವೆಯೂ ಡೆಹ್ರಾಡೂನ್ನಲ್ಲಿರುವ ಇಂಪೀರಿಯಲ್ ಫಾರೆಸ್ಟ್ ಕಾಲೇಜಿನಲ್ಲಿ ಪ್ರೊಫೆಸರ್ ಹುದ್ದೆ ಅಂಗೀಕರಿಸಿ ಬೋಧನೆ ಮಾಡುತ್ತಿದ್ದರು. ತಮಗೆ ನಿಲುಕುವ ಯಾವುದೇ ವಿಷಯವಾಗಲಿ ಅದನ್ನು ಚರ್ಚಿಸಿ ಜ್ಞಾನ ಹಂಚಿಕೊಳ್ಳಲು ಕೃಷ್ಣನ್ ಎಂದೂ ಹಿಂದುಮುಂದು ನೋಡಿದವರಲ್ಲ. ಈ ಅವಧಿಯಲ್ಲಿ ಕಲ್ಕತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕೃಷ್ಣನ್ ಪ್ರೊಫೆಸರ್ ಹುದ್ದೆ ಸ್ವೀಕರಿಸುವಂತೆ ಆಹ್ವಾನ ಬಂದಾಗ ಅದಕ್ಕೂ ಸಮ್ಮತಿಸಿ ತಮ್ಮ ಜ್ಞಾನವನ್ನು ಹಂಚಿದರು. ಭೂ ವಿಜ್ಞಾನಿಯಾಗಿ, ಅಧ್ಯಾಪಕ ವೃತ್ತಿಯಲ್ಲೂ ಪಳಗಿದ ಕೃಷ್ಣನ್ ಅಂದಿಗೇ ತುಂಬ ಅಪರೂಪದ ವ್ಯಕ್ತಿತ್ವವುಳ್ಳ  ವಿಜ್ಞಾನಿ ಎಂಬ ಹೆಸರು ಪಡೆದಿದ್ದರು.

ಖನಿಜ ಸಲಹೆಗಾರರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ನಂತರ ಆಗಸ್ಟ್ ೧೯೫೫ರಿಂದ ಏಪ್ರಿಲ್ ೧೯೫೭ರ ವರೆಗೆ ನೈಸರ್ಗಿಕ ಸಂಪನ್ಮೂಲ ಮತ್ತು ವೈಜ್ಞಾನಿಕ ಸಂಶೋಧನೆಯ ಮಂತ್ರಿಗಳ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಸರ್ಕಾರ ಇವರನ್ನು ಪ್ರತ್ಯೇಕ ವಾಗಿ ವಿನಂತಿಸಿಕೊಂಡು ಧನ್‌ಬಾದ್‌ನಲ್ಲಿರುವ ಗಣಿ ಮತ್ತು ಆನ್ವಯಿಕ ಭೂ ವಿಜ್ಞಾನ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಿತು. ೧೯೫೭ ರಲ್ಲಿ ಈ ಹುದ್ದೆಯಲ್ಲೂ ಒಂದು ವರ್ಷ ಸೇವೆಸಲ್ಲಿಸಿದ ಕೃಷ್ಣನ್ ಅವರ ಮನದಲ್ಲಿ ನಿವೃತ್ತರಾಗುವ ಯೋಚನೆ ಸುಳಿಯಿತು. ೧೯೫೮ ರಲ್ಲಿ ನಿವೃತ್ತರಾದರು.

ವಾಸ್ತವವಾಗಿ ಅವರು ಅಧಿಕಾರದಿಂದ ನಿವೃತ್ತರಾದರೇ ಹೊರತು ಭೂವಿಜ್ಞಾನಕ್ಕೆ ಸಂಬಂಧಿಸಿದ ಚಿಂತನೆ, ಕಾರ್ಯ ಚಟುವಟಿಕೆಗಳಂದಲ್ಲ.

ಆಂಧ್ರ ಪ್ರದೇಶದಲ್ಲಿ

ಧನ್‌ಬಾದ್ ಗಣಿ ಮತ್ತು ಆನ್ವಯಿಕ ಭೂ- ವಿಜ್ಞಾನ ವಿಭಾಗದಿಂದ ನಿವೃತ್ತರಾದಂತರ ಆಂಧ್ರ ವಿಶ್ವವಿದ್ಯಾಲಯ ತಡಮಾಡದೆ ಕೃಷ್ಣನ್ ಅವರ ಪ್ರತಿಭೆ ಯನ್ನು ಬಳಸಿಕೊಂಡಿತು. ಕೃಷ್ಣನ್ ಅವರ ಜೀವನದಲ್ಲಿ ಇದೊಂದು ಉತ್ತಮ ಅವಕಾಶವೆಂದೇ ಹೇಳಬಹುದು. ಕೃಷ್ಣನ್ ಈ ಸದವಕಾಶವನ್ನು ಉಪಯೋಗಿಸಿಕೊಂಡು ಭೂವಿಜ್ಞಾನ ಮತ್ತು ಭೂ ಭೌತವಿಜ್ಞಾನದಲ್ಲಿ ವಿದ್ಯಾರ್ಥಿ ಗಳಿಗೆ ವಿಶೇಷ ತರಬೇತಿ ನೀಡಿದರು.

ವಿಜ್ಞಾನಿಯ ಹೊಣೆ

ವೈಜ್ಞಾನಿಕ ಅಭಿಪ್ರಾಯಗಳಿಗೆ ಮೊದಲಿಂದಲೂ ಕೃಷ್ಣನ್ ತುಂಬಾ ಬೆಲೆ ಕೊಡುತ್ತಿದ್ದರು. ವಿಜ್ಞಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ತಮ್ಮ ಮನಸ್ಸಿಗೆ ಬಂದ ಹೇಳಿಕೆಗಳನ್ನು ಕೊಡುವವರನ್ನು ಕಂಡರೆ ಕೃಷ್ಣನ್ ಬಿಚ್ಚು ಮನಸ್ಸಿನಿಂದ ಅಂತಹ ಭಾವನೆಗಳನ್ನು ತರಬಹುದಾದ ಕೆಡಕನ್ನು ಉದಾಹರಣೆಗಳ ಮೂಲಕ ವಿವರಿಸುತ್ತಿದ್ದರು.

ಕೃಷ್ಣ ಜಿಲ್ಲೆಯ ಜಗ್ಗಯ್ಯ ಪೇಟ ಬಳಿ ಕಲ್ಲಿದ್ದಲಿನ ನಿಕ್ಷೇಪವಿರುವುದಾಗಿ ಅಲ್ಲಿದ್ದ ಸೈನ್ಯಾಧಿಕಾರಿ ಎಫ್. ಅಪ್ಲೆಗಾತ್ ಇದ್ದಕ್ಕಿದ್ದಂತೆ ದೊಡ್ಡ ಸುದ್ಧಿಯನ್ನು ಹಬ್ಬಿಸಿದ. ಈ ಪ್ರದೇಶದಲ್ಲಿ ಕಲ್ಲಿದ್ದಲು ದೊರೆಯುವುದೆಂದು ಎಲ್ಲರನ್ನು ನಂಬಿಸಲು ಪ್ರಾರಂಭಿಸಿದ. ವಾಸ್ತವವಾಗಿ ಆ ಪ್ರದೇಶದಲ್ಲಿ ಅತ್ಯಂತ ಪುರಾತನ ಶಿಲೆಗಳು ಮಾತ್ರ ದೊರೆಯುತ್ತವೆ. ಇದನ್ನೆಲ್ಲ ಗಮನಿಸಿದ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ಎಚ್. ಬಿ. ಮೆಡ್ಲಿಕಾಟ್ ಅವರು ೧೮೮೨ ರಲ್ಲಿ ಜುಲೈ ತಿಂಗಳಲ್ಲಿ ಸರ್ಕಾರಕ್ಕೆ ಪತ್ರವೊಂದನ್ನು ಬರೆದು ಕಲ್ಲಿದ್ದಲು ದೊರೆಯುವ ಒಂದು ನಿದರ್ಶನವೂ ಇಲ್ಲಿ ದೊರೆಯುವುದಿಲ್ಲ. ಈಗಾಗಲೇ ಈ ಸೈನಾಧಿಕಾರಿಯ ಮಾತನ್ನು ನಂಬಿ ಸಾರ್ವಜನಿಕರ ಹಣವನ್ನು ಧಾರಾಳವಾಗಿ ಪೋಲು ಮಾಡಲಾಗಿದೆ. ಒಂದು ವೇಳೆ ಸರ್ಕಾರ ಅಪ್ಲೆಗಾತ್‌ನ ಮಾತು ನಂಬಿ ಇಲ್ಲಿ ಕಲ್ಲಿದ್ದಲು ನಿಕ್ಷೇಪದ ಗಣಿ ಕಾರ್ಯಾಚರಣೆ ಪ್ರಾರಂಭಿಸಿದರೆ ಅದೊಂದು ವ್ಯರ್ಥ ಪ್ರಯತ್ನ ಎಂದು ತಿಳಿಸಿದರು.

ಈ ಹೊತ್ತಿಗಾಗಲೇ ಈ ಸೈನ್ಯಾಧಿಕಾರಿ ಈ ಪ್ರದೇಶದ ಬಣ್ಣ ಬಣ್ಣದ ನಕ್ಷೆ ನೀಡಿದನಲ್ಲದೆ ತನ್ನ ಕ್ಯಾಂಪಿನ ಬಳಿ ಗಣಿ ಮಾಡಿ ಒಂಬತ್ತರಿಂದ ಹತ್ತು ಟನ್ನುಗಳಷ್ಟು ಕಲ್ಲಿದ್ದಲನ್ನು ಹೊರತೆಗೆದು ಅದನ್ನು ಉರಿಸಿರುವುದಾಗಿ  ಸಾರಿದ. ಕಲ್ಲಿದ್ದಲು ಗಣಿ ಮಾಡಲು ತನಗೆ ಎಲ್ಲ ನೆರವನ್ನೂ ಕೊಡಬೇಕೆಂದು ಮದರಾಸ್ ಸರ್ಕಾರಕ್ಕೆ ಬರೆದ. ಸರ್ಕಾರ ಭೂವಿಜ್ಞಾನಿಗಳ ಅಭಿಪ್ರಾಯ ಕೇಳಿತು. ಅವರೆಲ್ಲ ಅಪ್ಲೆಗಾತನ ಅಭಿಪ್ರಾಯವನ್ನು ಅಲ್ಲಗಳೆದರು. ಆದರೂ ಸರ್ಕಾರ ಅವನಿಗೆ ಕಲ್ಲಿದ್ದಲು ಗಣಿ ಮಾಡಲು ಅನುಮತಿ ಯನ್ನೂ ಹಣವನ್ನೂ ನೀಡಿತು. ಕಲ್ಲಿದ್ದಲು ಸಿಕ್ಕಲಿಲ್ಲ, ಹಣ ದಂಡವಾಯಿತು, ಮತ್ತೇ ಅಪ್ಲೆಗಾತ್ ತನಗೆ ಗುರುತಿದ್ದವರನ್ನು ಕಂಡು, ಪ್ರಭಾವ ಬೀರಿ, ನೆರವು ಪಡೆದ. ಸರ್ಕಾರ ಅಲ್ಲಿ ಭೈರಿಗೆ ಹಾಕಿಸಿತು. ಮತ್ತೇ ಪ್ರಯತ್ನ, ಹಣ ಎಲ್ಲ ವ್ಯರ್ಥವಾದವು.

ಕೃಷ್ಣನ್ ಈ ಪ್ರಸಂಗವನ್ನು ನೆನೆದು ತಮ್ಮ ಖೇದವನ್ನು ವ್ಯಕ್ತಪಡಿಸಿದರು. ‘ಆಂಧ್ರಪ್ರದೇಶದಲ್ಲಿ ಕಲ್ಲಿದ್ದಲು’ ಎಂಬ ಪ್ರಬಂಧವೊಂದರಲ್ಲಿ ಕೃಷ್ಣನ್ ಅವರ ಅನಿಸಿಕೆಗಳು ಹೀಗಿವೆ:

‘ಈ ಘಟನೆಯಿಂದ ನಾವು ಪಾಠವೊಂದನ್ನು ಕಲಿಯುವುದಿದೆ. ಸರ್ಕಾರದ ಸಚಿವಾಲಯದಲ್ಲಿ ಅಧಿಕಾರ ದಲ್ಲಿರುವ ವ್ಯಕ್ತಿಗಳನ್ನು ಪ್ರಭಾವೀ ಜನ ಬೆಂಬತ್ತಿ ಅವರನ್ನು ಸುಪ್ರೀತಗೊಳಿಸಬಲ್ಲರು. ಅಂತಹವರ ಅಭಿಪ್ರಾಯಗಳಿಗೆ ಸರ್ಕಾರ ಮನ್ನಣೆಯನ್ನು ಕೊಡುತ್ತಿದೆ. ತಾಂತ್ರಿಕ ಸಲಹೆಗಳ ಬೆಲೆ ಏನೆಂಬುದೇ ಇವರಿಗೆ ತಿಳಿಯದು. ತಾಂತ್ರಿಕ ನಿಪುಣರ ಅಭಿಪ್ರಾಯವನ್ನು ಕಡೆಗಣಿಸಬಾರದು. ಇಂತಹ ಮನೋಭಾವವನ್ನು ಕಿತ್ತೊಗೆಯದ ಹೊರತು ನಾವು ಖಂಡಿತವಾಗಿ ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಪ್ರಗತಿ ಸಾಧಿಸಲಾರೆವು’.

ಆಂಧ್ರ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುವ ಸಮಯದಲ್ಲಿ ಕೃಷ್ಣನ್ ಅವರು ಕಲ್ಲಿದ್ದಲ್ಲದೆ ದೊಡ್ಡ ಪ್ರಮಾಣದ ಭೂಲಕ್ಷಣಗಳನ್ನೂ ಅಧ್ಯಯನ ಮಾಡಿದರು. ಪ್ರಪಂಚದ ಸಾಗರ ತಳಗಳಲ್ಲಿ ಒಟ್ಟು ೪೫,೦೦೦ ಮೈಲಿಗಳಷ್ಟು ಉದ್ದವಿರುವ ಪರ್ವತದ ಸಾಲೇ ನೆಲೆಯಾಗಿದೆ. ಇವುಗಳು ಸಾಗರದ ಮೇಲೂ ತಲೆಯೆತ್ತಿ ದ್ವೀಪಗಳೆನ್ನಿಸಿವೆ. ಈ ಪ್ರದೇಶಗಳಲ್ಲಿ ಭೂಕಂಪಗಳು ಹೆಚ್ಚು ಅಲ್ಲದೆ ಇವು ಜ್ವಾಲಾಮುಖಿಗಳ ಉಗಮ ಸ್ಥಾನವಾಗಿವೆ. ಇವುಗಳಿಗೆ ಮಧ್ಯಸಾಗರ ಪರ್ವತಗಳೆಂದೆ ಹೆಸರು. ವ್ಯಾಪ್ತಿಯಲ್ಲಿ ನಮ್ಮ ಹಿಮಾಲಯ ಪರ್ವತ ಶ್ರೇಣಿ ಕೂಡ ಮಧ್ಯಸಾಗರ ಪರ್ವತಗಳಿಗೆ ಸರಿಸಾಟಿಯಾಗಲಾರದು. ಕೃಷ್ಣನ್ ಈ ಗುಪ್ತ ಪರ್ವತ ಮಾಲೆಗಳ ಸುದೀರ್ಘ ಅಧ್ಯಯನ ಮಾಡಿ ತುಂಬ ಮಾಹಿತಿಯುಳ್ಳ ಲೇಖನ ಬರೆದರು.

ಭಾರತದ ಮೇಲ್ಮೈಲಕ್ಷಣ ಅದರಲ್ಲೂ ಪರ್ವತ ಭಾಗಗಳ ಉಗಮ, ವಿಕಾಸವನ್ನು ಕುರಿತಂತೆ ಕೃಷ್ಣನ್ ಪಾಂಡಿತ್ಯಪೂರ್ಣ ಲೇಖನ ಮಾಲೆಯನ್ನೇ ಬರೆದರು. ಈ ಅವಧಿಯಲ್ಲೇ ಭೂ ಹೊರಚಿಪ್ಪು, ಅದರ ಸಂಯೋಜನೆ, ರಚನೆಗಳನ್ನು ಅತ್ಯಂತ ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಅನೇಕ ಲೇಖನಗಳನ್ನು ಬರೆದರು. ಈ ಅವಧಿಯಲ್ಲಿ ಕೇಂದ್ರ ಭೂ ಭೌತಮಂಡಳಿ ಕೃಷ್ಣನ್ ಅವರ ಸೇವೆಯನ್ನು ಬಯಸಿತು. ೧೯೬೧ ರಲ್ಲಿ ಕೃಷ್ಣನ್ ಈ ಸಂಸ್ಥೆಯ ಪ್ರಥಮ ನಿರ್ದೇಶಕರಾಗಿ ಅಧಿಕಾರ ವಹಿಸಿದರು. ಮುಂಬಯಿ, ಕಾಥೇವಾಡ ಮತ್ತು ಮಧ್ಯ ಪ್ರದೇಶಗಳಲ್ಲಿ ಸುಮಾರು ೨೦,೦೦೦ ಚದರ ಕಿಲೋ ಮೀಟರ್ ವ್ಯಾಪ್ತಿ ಹೊಂದಿರುವ ಪ್ರಸ್ಥಭೂಮಿ ಇದೆ. ಇದನ್ನೇ ನಾವು ಡೆಕ್ಕನ್ ಅಥವಾ ದಕ್ಷಿಣದ ಪ್ರಸ್ಥಭೂಮಿ ಎನ್ನುವುದು. ಲಕ್ಷಾಂತರ ವರ್ಷಗಳ ಹಿಂದೆ ಜ್ವಾಲಾಮುಖಿಗಳು ಸೂಸಿದ ಶಿಲಾರಸದಿಂದ ಈ ಭಾಗವೆಲ್ಲಾ ಗುಡ್ಡರೂಪದಲ್ಲಿ ತಲೆ ಎತ್ತಿ ನಿಂತಿತ್ತು. ಗಾಳಿ ಬಿಸಿಲಿಗೆ ಒಡ್ಡಿ ಶಿಲೆಗಳು ಸವೆಯಲು ಪ್ರಾರಂಭಿಸಿ ಪ್ರಸ್ಥಭೂಮಿಯಾಗಿ ಮಾರ್ಪಟ್ಟವು. ಕೃಷ್ಣನ್ ಈ ಅಂಶಗಳನ್ನೆಲ್ಲಾ ಸಂಗ್ರಹಿಸಿ ಫ್ರಾನ್ಸಿನ ಒಂದು ಪತ್ರಿಕೆಗೆ ಒಂದು ಲೇಖನವನ್ನು ಈ ಸಂಸ್ಥೆಯಲ್ಲಿದ್ದಾಗ ಬರೆದರು. ಕೃಷ್ಣನ್ ಅವರ ಅನುಭವವನ್ನು ನಿರೂಪಿಸುವಂತೆ ಕೇಳಿ ಅಮೇರಿಕಾದ ರಾಷ್ಟ್ರೀಯ ಸಂಶೋಧನಾ ಮಂಡಳಿ ಪ್ರಾರ್ಥಿಸಿಕೊಂಡು ಉಪನ್ಯಾಸವನ್ನು ಏರ್ಪಡಿಸಿದರು. ಕೃಷ್ಣನ್ ಮತ್ತೊಮ್ಮೆ ಭಾರತೀಯ ವಿಜ್ಞಾನಿಗಳ ಪ್ರತಿಭೆಯನ್ನು ವಿದೇಶಿಯರಿಗೆ ಪರಿಚಯಿಸಿದರು.

ಮೂರು ವರ್ಷಗಳ ಕಾಲ ಕೇಂದ್ರ ಭೂ ಭೌತಮಂಡಳಿಯಲ್ಲಿ ಸೇವೆ ಸಲ್ಲಿಸಿ ಕೃಷ್ಣನ್ ಅವರು ೧೯೬೩ ರಲ್ಲಿ ನಿವೃತ್ತರಾದರು.

ಶಿಕ್ಷಣ ತಜ್ಞರು

ಕೃಷ್ಣನ್ ಅವರು ಕೇವಲ ಭೂವಿಜ್ಞಾನಿಯಷ್ಟೇ ಅಲ್ಲ; ಶ್ರೇಷ್ಠ ಮಟ್ಟದ ಶಿಕ್ಷಣ ತಜ್ಞರೂ ಆಗಿದ್ದರು. ಈಗ್ಗೆ ಹದಿನೈದು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಗಣಿತಂತ್ರ ಜ್ಞಾನದ ಕೊರತೆ ಇರುವುದನ್ನು ಪ್ರಸ್ತಾಪಿಸಿ ಇಡೀ ನಮ್ಮ ಶಿಕ್ಷಣ ವಿಧಾನವೇ ಬದಲಾಗಬೇಕೆಂದು ವಾದಿಸಿದರು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತಾವೇ ಸ್ವತಃ ಕಂಡು ಅಧ್ಯಯನ ಮಾಡಿದ ಗಣಿಗಳು ಅನೇಕ. ಅಲ್ಲಿಯ ಗಣಿ ತಂತ್ರಜ್ಞಾನ ವನ್ನು ಮೆಚ್ಚಿಕೊಂಡ ಕೃಷ್ಣನ್ ಅವರು ಭಾರತದಲ್ಲಿ ಗಣಿಪರೀಕ್ಷಾ ನೀತಿ, ವಿದ್ಯಾರ್ಥಿ ಅಧ್ಯಾಪಕರುಗಳ ಜ್ಞಾನದ ಮಟ್ಟ, ಅವರಿಗಿರುವ ಅನುಕೂಲತೆಗಳು ಮುಂತಾದ ಅಂಶಗಳ ಬಗ್ಗೆ ವಿಷದವಾಗಿ ಅಧ್ಯಯನ ಮಾಡಿ ಗಣಿ ಅಧ್ಯಯನ ಕೇಂದ್ರಗಳಲ್ಲಿ ವಿದ್ಯಾಭ್ಯಾಸ ಹೇಗಿರಬೇಕೆಂದು ನಿಯಮಾವಳಿಯನ್ನು ಸೂಚಿಸಿದರು.

ಆಸಕ್ತಿಯ ವಿಸ್ತಾರ, ವೈವಿಧ್ಯ

ಕೃಷ್ಣನ್ ಅವರು ಭೂವಿಜ್ಞಾನಿಯಾಗಿ ಅನೇಕ ಜನರಿಗೆ, ರಾಷ್ಟ್ರಕ್ಕೆ ಪರಿಚಿತರು. ಅವರ ಪ್ರತಿಭಾ ಸಂಪನ್ನತೆ ಈ ಕ್ಷೇತ್ರಗಳಲ್ಲಿದ್ದುದು ಬಹಳ ಜನರಿಗೆ ಗೊತ್ತಿರಲಾರದು. ಕೃಷ್ಣನ್ ಪುಸ್ತಕ ಹಿಡಿದು ಕುಳಿತರೆಂದರೆ ಗಂಟೆಗಟ್ಟಲೆ ತಮ್ಮನ್ನು ತಾವು ಮರೆತು ತಲ್ಲೀರಾಗುತ್ತಿದ್ದರು. ಭೂವಿಜ್ಞಾನ ದಲ್ಲಷ್ಟೇ ಅಲ್ಲ ಅವರಿಗೆ ಹದಿನೆಂಟು, ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಇಂಗ್ಲಿಷ್ ಸಾಹಿತ್ಯದ ಆಳವಾದ ಪರಿಚಯವಿತ್ತು ಭಾರತೀಯ ವೇದಗಳ ಬಗ್ಗೆ ಕೃಷ್ಣನ್ ಪಾಂಡಿತ್ಯಪೂರ್ಣವಾಗಿ ಚರ್ಚಿಸ ಬಲ್ಲವ ರಾಗಿದ್ದರು. ಶ್ಲೋಕಗಳು ಮತ್ತು ಸ್ತೋತ್ರಗಳ ಬಗ್ಗೆ ಕೃಷ್ಣನ್ ಅವರಿಗಿದ್ದ ಪಾಂಡಿತ್ಯ ಎಂಥವರನ್ನೂ ಬೆರಗುಗೊಳಿಸುತ್ತದೆ. ಕರ್ನಾಟಕ ಸಂಗೀತವನ್ನು ಮೆಚ್ಚುತ್ತಿದ್ದುದೇ ಅಲ್ಲದೆ ಅದನ್ನು ವಿಮರ್ಶಿಸಬಲ್ಲ ರಸಜ್ಞಾನ ಹೊಂದಿದ್ದರು. ಪಾಶ್ಚಿಮಾತ್ಯ ಸಂಗೀತದ ಬಗ್ಗೆ ಒಲವನ್ನು ಬೆಳಸಿಕೊಂಡಿದ್ದ ಕೃಷ್ಣನ್ ಅವರದ್ದು ಸಮರಸ ಜೀವನ. ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದ ಮಾನವೀಯ ಗುಣ ಅವರಲ್ಲಿ ಮನೆ ಮಾಡಿತ್ತು. ಆದರೆ ಎಂದೂ ಪ್ರಚಾರ ಬಯಸದ ಸರಳ ಜೀವಿ. ಅದರಲ್ಲೂ ಹಣಕಾಸಿನ ಮುಗ್ಗಟ್ಟನ್ನು ಅನುಭವಿಸುತ್ತಿದ್ದ ವಿದ್ಯಾರ್ಥಿಗಳ ಬಗ್ಗೆ ಅಪಾರ ಕನಿಕರ. ಅಂತೆಯೇ ಅವರಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಅನೇಕರಿದ್ದರು. ಕಛೇರಿಯಲ್ಲಿ ಕೃಷ್ಣನ್ ತಮ್ಮ ಕೆಳಗಿನ ಅಧಿಕಾರಿಗಳನ್ನು ಕಾಣುತ್ತಿದ್ದ ರೀತಿಯೇ ವಿಶಿಷ್ಟ. ಅಧಿಕಾರವಾಣಿಯಿಂದ ಕಾರ್ಯ ಗೆಲ್ಲುವ ತತ್ವವನ್ನು ಎಂದೂ ಅವರು ರೂಢಿಸಿ ಕೊಂಡವರಲ್ಲ. ಅನೇಕ ಕಿರಿಯರ ಕಷ್ಟ ಸುಖಗಳನ್ನು ವೈಯಕ್ತಿಕವಾಗಿ ವಿಚಾರಿಸಿ ಪರಿಹಾರ ನೀಡುತ್ತಿದ್ದರು. ಹುದ್ದೆ, ಪ್ರತಿಷ್ಠೆ, ಗೌರವಗಳು ಎಂದೂ ಅವರ ಮನಸ್ಸನ್ನು ಕಲಕಲಿಲ್ಲ. ಬದಲಾಗಿ ಅವರ ಕಾರ್ಯಭಾರವನ್ನು ಹೆಚ್ಚಿಸಿದವು. ಯಾವುದೇ ಕೆಲಸವಾಗಲಿ ಕ್ರಮಬದ್ಧತೆಗೆ ಕೃಷ್ಣನ್ ಅವರು ಹೆಸರಾಗಿದ್ದರು; ಕೃಷ್ಣನ್ ಅವರ ಓದುವ ಹವ್ಯಾಸ ಎಷ್ಟಿತ್ತೆಂದರೆ ಭಾರತದಲ್ಲೇ ಅತ್ಯಂತ ದೊಡ್ಡ ಭೂವಿಜ್ಞಾನ ಕೃತಿಗಳ ಸಂಗ್ರಹಣೆಗೆ ಕೃಷ್ಣನ್ ಅವರ ಗ್ರಂಥಾಲಯ ಹೆಸರುವಾಸಿ.

ವಿದೇಶಗಳಲ್ಲಿ ಮನ್ನಣೆ

ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ಯಿಂದ ನಿವೃತ್ತರಾದ ನಂತರವೂ ಕೃಷ್ಣನ್ ಅಂತರ ರಾಷ್ಟ್ರೀಯ ಸಂಘಸಂಸ್ಥೆಗಳೊಡನೆ ತಮಗಿದ್ದ ಹಿಂದಿನ ಸಂಪರ್ಕವನ್ನು ಮುಂದುವರೆಸಿದರು. ಭೂವಿಜ್ಞಾನಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿಗಳಿಗೆ ಕೃಷ್ಣನ್ ಅವರಿಗೆ ಎಂದೂ ಆಮಂತ್ರಣವಿರುತ್ತಿತ್ತು.  ೧೯೬೨ ರಲ್ಲಿ ಅಮೆರಿಕಾದ ಹೂಸ್ಟನ್‌ನಲ್ಲಿ ಲವಣದ ಬಗ್ಗೆ ವಿಚಾರಗೋಷ್ಠಿ ಯೊಂದು ಏರ್ಪಟ್ಟಿತು. ಕೃಷ್ಣನ್ ಅವರಿಗೆ ಆಮಂತ್ರಣ ಬಂತು. ಪಂಜಾಬ್ ಮತ್ತು ವಾಯವ್ಯ ‘ಭಾರತದ ಲವಣ ಬೆಟ್ಟಗಳ ಚಲನೆ’ ಎಂಬ ಬಗ್ಗೆ ಶ್ರೇಷ್ಠಮಟ್ಟದ ಉಪನ್ಯಾಸ ನೀಡಿದರು. ಇವರ ಪಾಂಡಿತ್ಯ ಪೂರ್ಣ ಉಪನ್ಯಾಸ ವಿದೇಶಿಯರನ್ನು ಬೆರಗುಗೊಳಿಸಿತು. ಅದು ಭಾರತೀಯ ವಿಜ್ಞಾನಿಯೊಬ್ಬನಿಗೆ ಸಂದ ಗೌರವ. ಲಂಡನ್ನಿನ ಕಾಮನ್ ವೆಲ್ತ್ ಫೌಂಡೇಷನ್ ಕೃಷ್ಣನ್ ಅವರನ್ನು ವಿನಂತಿಸಿಕೊಂಡು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಪ್ರವಾಸಿ ಉಪನ್ಯಾಸ ಕೊಡಲು ಕೇಳಿಕೊಂಡಿತು. ೧೯೬೯ ರ ಮಾರ್ಚ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಕೃಷ್ಣನ್ ಉಪನ್ಯಾಸ ನೀಡಲು ಪ್ರವಾಸಮಾಡಿದರು. ಈ ಅವಧಿಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳ ಎಲ್ಲ ವಿಶ್ವವಿದ್ಯಾಲಯ ಹಾಗೂ ಭೂವೈಜ್ಞಾನಿಕ ಸಮೀಕ್ಷೆಗಳಿಗೆ ಭೇಟಿ ಇತ್ತರು. ಯಾವುದೇ ಪೂರ್ವಸಿದ್ಧತೆ ಇಲ್ಲದೆ ನಿರರ್ಗಳವಾಗಿ ಭೂವಿಜ್ಞಾನದ ಸಮಸ್ಯೆಗಳನ್ನು ಪರಿಹರಿಸುವ ಇವರ ಉಪನ್ಯಾಸ ಕೇಳಿ ವಿದೇಶಿಯರಿಗೆ ಅವರ ಬಗ್ಗೆ ಇದ್ದ ಮೊದಲ ಗೌರವ ಇಮ್ಮಡಿಯಾಯಿತು.

ಗೌರವಗಳು

ಕೃಷ್ಣನ್ ಅವರ ಸೇವೆಯನ್ನು ಗೌರವಿಸಿ ನೀಡಿದ ಪ್ರಶಸ್ತಿ, ಗೌರವಗಳು ಒಂದಲ್ಲ. ೧೯೩೫ ರಲ್ಲಿ ನಡೆದ ಇಂಡಿಯನ್ ಸೈನ್ಸ್ ಕಾಂಗ್ರೆಸ್‌ನ ವಿಭಾಗಕ್ಕೆ ಅಧ್ಯಕ್ಷ ರಾಗಿದ್ದರಲ್ಲದೆ ೧೯೫೮ರ ಸಮ್ಮೇಳನದಲ್ಲಿ ಪ್ರಧಾನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಪ್ರಪಂಚದ ಅನೇಕ ಖ್ಯಾತ ಭೂ ವಿಜ್ಞಾನ ಕೇಂದ್ರಗಳು ಕೃಷ್ಣನ್ ಅವರಿಗೆ ಆಜೀವ ಸದಸ್ಯತ್ವ ನೀಡಿ ಅವರ ಕಾರ್ಯಗಳನ್ನು ಗೌರವಿಸಿವೆ. ಭೂವಿಜ್ಞಾನ ಕ್ಷೇತ್ರದಲ್ಲಿ ಅವರ ಅನನ್ಯ ದುಡಿಮೆಯನ್ನು ಮೆಚ್ಚಿ ಲಂಡನ್ನಿನ ಭೂ ವೈಜ್ಞಾನಿಕ ಸಂಸ್ಥೆ ೧೯೬೭ ರಲ್ಲಿ ಕಾಮನ್‌ವೆಲ್ತ್ ಫೆಲೋಷಿಪ್ ನೀಡಿ ಗೌರವವನ್ನು ವ್ಯಕ್ತಪಡಿಸಿತು. ಅದೇ ವರ್ಷ ಅಮೆರಿಕದ ಖನಿಜಾಧ್ಯಯನ ಸಂಘ ಅಜೀವ ಸದಸ್ಯತ್ವವನ್ನು ನೀಡಿತು. ಇಪ್ಪತ್ತು ವರ್ಷಗಳ ಕಾಲ ‘ಆರ್ಥಿಕ ಭೂವಿಜ್ಞಾನ’ ನಿಯತಕಾಲಿಕೆಗೆ ಸಂಪಾದಕರಾಗಿದ್ದರು. ಈ ಪತ್ರಿಕೆಯ ಗುಣಮಟ್ಟ ಏರಲು ಕೃಷ್ಣನ್ ಬಹುವಾಗಿ ಕಾರಣರಾದರು. ಭಾರತೀಯ ಭೂ ವೈಜ್ಞಾನಿಕ ಸಂಘಕ್ಕೆ ಕೃಷ್ಣನ್ ಸ್ಥಾಪಕ ಸದಸ್ಯರಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಅನಂತರ ಅದರ ಉಪಾಧ್ಯಕ್ಷರಾಗಿಯೂ ದುಡಿದರು. ಭಾರತೀಯ ಭೂ ವಿಜ್ಞಾನಕ್ಕೆ ಇವರು ಸಲ್ಲಿಸಿರುವ ಸೇವೆಗಾಗಿ ಬಂಗಾಳದ ರಾಯಲ್ ಏಷ್ಯಾಟಿಕ್ ಸೊಸೈಟಿಯು ಪಿ. ಎನ್. ಬೋಸ್ ಪಾರಿತೋಷಕ ನೀಡಿ ಗೌರವಿಸಿತು.

ಕೆಲವರ ಜೀವನದಲ್ಲಷ್ಟೇ ತಮ್ಮ ಸಾಧನೆಯನ್ನು ನೆನಪು ಮಾಡಿಕೊಳ್ಳುವ ಯೋಗ ಲಭಿಸುತ್ತದೆ. ಕೃಷ್ಣನ್ ಅಂತಹ ಪುಣ್ಯಶಾಲಿಗಳಲ್ಲೊಬ್ಬರು. ೧೯೬೩ ನೇ ಇಸವಿ ಆಗಸ್ಟ್ ೨೩ ರಂದು ಕೃಷ್ಣನ್ ಅರವತ್ತೈದನೆಯ ವರ್ಷಕ್ಕೆ ಕಾಲಿಟ್ಟರು. ಈ ಪುಣ್ಯ ಪುರುಷನನ್ನು ಸನ್ಮಾನಿಸುವ ದೊಡ್ಡ ಯೋಜನೆಯೊಂದು ಸಿದ್ಧವಾಯಿತು. ರಾಷ್ಟ್ರಾದ್ಯಂತ ಭೂ ವಿಜ್ಞಾನಿಗಳು ಭೂಭೌತ ವಿಜ್ಞಾನಿಗಳು ಕಲೆತರು. ಕೃಷ್ಣನ್ ಅವರ ಅರವತ್ತೈದನೇ ಜನ್ಮದಿನದ ನೆನಪಿಗೆಂದು ಕೃತಿಯೊಂದನ್ನು ತರುವ ಕಾರ್ಯ ಭರದಿಂದ ಸಾಗಿತು. ಇಂಗ್ಲೆಂಡ್, ಅಮೆರಿಕ, ರಷ್ಯ, ಕೆನಡ ಮೊದಲಾದ ಹಲವು ದೇಶಗಳ ಗಣ್ಯ ಭೂವಿಜ್ಞಾನಿಗಳು ಲೇಖನಗಳನ್ನು ಬರೆದು ಕೃಷ್ಣನ್ ಅವರ ವಿಷಯದಲ್ಲಿ ತಮ್ಮ ಅಭಿಮಾನವನ್ನು ತೋರಿಸಿದರು. ಅಂದಿನ ಭಾರತದ ರಾಷ್ಟ್ರಪತಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಈ ಸಂಭಾವನಾ ಗ್ರಂಥವನ್ನು ಬಿಡುಗಡೆ ಮಾಡಿ ಕೃಷ್ಣನ್ ಅವರಿಗೆ ತಾವೇ ಕೈಯಾರ ನೀಡಿದರು. ಇದಲ್ಲದೆ ಕೃಷ್ಣನ್ ಅವರ ಹೆಸರಿನಲ್ಲಿ ಪಾರಿತೋಷಕವೊಂದನ್ನು ಇಡಲಾಯಿತು.

ಕೃಷ್ಣನ್, ಆತುರಪಟ್ಟು ಎಂದೂ ಸ್ನೇಹ ಮಾಡಿಕೊಂಡವರಲ್ಲ. ನಂಬಿದ ಸ್ನೇಹಿತರಿಗೆ ಎಂದೂ ಎರಡು ಬಗೆದವರಲ್ಲ. ತೀರ ಆತ್ಮೀಯರಲ್ಲಿ ಮಾತ್ರ ಕೃಷ್ಣನ್ ‘ಮಾತುಗಾರ’ ಎನ್ನಿಸಿಕೊಂಡಿದ್ದರು. ಸಂಪ್ರದಾಯದ ಮನೆತನದಿಂದ ಬಂದಿದ್ದರೂ ಇತರರ ಸಂಪರ್ಕಕ್ಕೆ ಸ್ನೇಹ ವರ್ಧನೆಗೆ ಇದು ಎಂದೂ ಅಡ್ಡಬರಲಿಲ್ಲ ‘ಅವರ ಅವಿರತ ದುಡಿತ, ಯಶಸ್ಸಿಗೆ’  ಪತ್ನಿಯ ಸಹಕಾರವೂ ಕೃಷ್ಣನ್ ಅವರಿಗಿತ್ತು. ಕೃಷ್ಣನ್ ಅವರಿಗೆ ಮೂರು ಮಂದಿ ಹೆಣ್ಣು ಮಕ್ಕಳು ಅವರಲ್ಲಿ ಹಿರಿಯ ಮಗಳನ್ನು ಭೂ ವಿಜ್ಞಾನಿ ಯೊಬ್ಬರಿಗೇ ಕೊಟ್ಟು ಲಗ್ನ ಮಾಡಿದ್ದಾರೆ. ತಮ್ಮ ಬಾಳಿನ ಕೊನೆಯ ದಿನಗಳಲ್ಲೂ ರಷ್ಯನ್ ಭಾಷೆ ಕಲಿಯುತ್ತಿದ್ದರು. ಜ್ಯೋತಿ ಶಾಸ್ತ್ರ, ಖಗೋಳ ಶಾಸ್ತ್ರದಲ್ಲಿ ಅವರಿಗಿದ್ದ ಆಸಕ್ತಿ ಕುಂದಲೇ ಇಲ್ಲ. ಭೂವಿಜ್ಞಾನದ ಮೂಲಭೂತ ಅಂಶಗಳ ಬಗ್ಗೆ ಗಮನಹರಿಸಲು ತಮ್ಮ ಜೀವಿತಕಾಲದಲ್ಲಿ ಸದಾ ಕಿರಿಯರಿಗೆ ನೆನಪಿಸುತ್ತಿದ್ದರು.

೧೯೭೦ ನೇ ಇಸವಿ ಏಪ್ರಿಲ್ ೨೪ ರಂದು ಕೃಷ್ಣನ್ ತೀರಿಕೊಂಡರು.

ನಲವತ್ತು ವರ್ಷಗಳ ಕಾಲ ಅವಿಶ್ರಾಂತವಾಗಿ ಭೂ ವಿಜ್ಞಾನಕ್ಕಾಗಿ ದುಡಿದ ಮಹಾನ್ ವ್ಯಕ್ತಿ ಕಣ್ಮರೆಯಾದರು. ಆದರೆ ಅವರು ಮಾಡಿರುವ ಅಪ್ರತಿಮ ಕಾರ್ಯ ಕೃಷ್ಣನ್ ಅವರನ್ನು ಎಂದೂ ಅಮರವಾಗಿಸುತ್ತದೆ; ಅವರದೊಂದು ಸಾರ್ಥಕ ಬಾಳು.