ಜನನ : ೧೦-೮-೧೯೩೦ ರಂದು ಹಾಸನ ತಾಲೂಕು ಮದಗೆರೆಯಲ್ಲಿ

ಮನೆತನ :  ಸಾಹಿತ್ಯಾಭಿರುಚಿ ಸಂಗೀತಾಸಕ್ತರ ಮನೆತನ ತಂದೆ ಶ್ರೀನಿವಾಸಭಟ್ಟ ತಾಯಿ ಲಕ್ಷ್ಮಮ್ಮ.

ಗುರುಪರಂಪರೆ : ಹಾಸನದಲ್ಲಿ ಕನ್ನಡ ಪಂಡಿತರಾಗಿದ್ದ ಗಮಕಿ ನಂ. ಅಶ್ವತ್ಥನಾರಾಯಣ ಅವರಲ್ಲಿ ಗಮಕಾಭ್ಯಾಸ ಮಾಡಿದ್ದಾರೆ. ಸಂಗೀತವನ್ನು ಕಲಿತಿದ್ದಾರೆ.

ಕ್ಷೇತ್ರ ಸಾಧನೆ : ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ. ಹೊಳೆನರಸೀಪುರದ ಸರಕಾರಿ ಪ್ರಾಥಮಿಕ ಶಾಲಾ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಗಮಕ ಪ್ರಚಾರ ಕಾರ್ಯವನ್ನು ಕೈಗೊಂಡು ಹೊಳೆನರಸೀಪುರ, ಹಾಸನ, ಬೇಲೂರು, ಚನ್ನರಾಯಪಟ್ಟಣ ಮುಂತಾದೆಡೆ ಹಲವಾರು ಬಾರಿ ವಾಚನ- ವ್ಯಾಖ್ಯಾನಗಳನ್ನು ನಡೆಸಿದ್ದಾರೆ. ಜೊತೆಯಲ್ಲೇ ಸಾಹಿತ್ಯಾಭಿರುಚಿಯನ್ನೂ ಬೆಳೆಸಿಕೊಂಡು ಅನೇಕ ಕಥೆ -ಕವನಗಳನ್ನು ರಚಿಸಿರುತ್ತಾರೆ. ಆಕಾಶವಾಣಿ ಕಲಾವಿದೆ. ಗದುಗಿನ ಭಾರತ, ಜೈಮಿನಿ ಭಾರತ, ಕಾವ್ಯಗಳು ಇವರ ಅಚ್ಚುಮೆಚ್ಚು. ಹಾಸನ ಜಿಲ್ಲಾದ್ಯಂತ ನಡೆಯುವ ಗಣೇಶೋತ್ಸವ, ರಾಮೋತ್ಸವ, ಕವಿ ಜಯಂತ್ಯುತ್ಸವಗಳಲ್ಲಿ ವಾಚನ – ವ್ಯಾಖ್ಯಾನ ನಡೆಸಿರುತ್ತಾರೆ. ಗಮಕ ತರಗತಿಗಳನ್ನೂ ನಡೆಸುತ್ತಾ ಅನೇಕ ಶಿಷ್ಯರನ್ನು ಹೊಂದಿದ್ದಾರೆ. ಹೊಳೆನರಸೀಪುರದಲ್ಲಿ ಅನೇಕ ಗಮಕ ರೂಪಕಗಳನ್ನೂ ನೆರವೇರಿಸಿದ್ದಾರೆ. ಮೈಸೂರು ಸರಕಾರದ ಪಠ್ಯ ಪುಸ್ತಕ ವಿಭಾಗ ಹಾಗೂ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖಾ ವತಿಯಿಂದ ಅಧಿಕೃತ ಕಲಾವಿದೆಯಾಗಿ ಇವರ ಕಾರ್ಯಕ್ರಮ ಜಿಲ್ಲಾಧ್ಯಂತ ನಡೆದಿದೆ. ಸುಮಾರು ೩ ದಶಕಗಳಿಂದ ಗಮಕ ಸೇವಾ ಕಾರ್ಯದಲ್ಲಿ ನಿರತರಾಗಿದ್ದ ಜಯಲಕ್ಷ್ಮಮ್ಮನವರು ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಪಡೆದ ನಂತರ ಪೂರ್ಣ ಪ್ರಮಾಣದಲ್ಲಿ ಗಮಕ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೭೬ ವರ್ಷದ ಇಳಿವಯಸ್ಸಿನಲ್ಲೂ ಅವರ ಉತ್ಸಾಹ ಬತ್ತಿಲ್ಲ.

ಪ್ರಶಸ್ತಿ – ಪುರಸ್ಕಾರ : ಹಾಸನದ ದನ ಜಾತ್ರೆ ವಸ್ತು ಪ್ರದರ್ಶನದಲ್ಲಿ ಇವರನ್ನು ಗೌರವಿಸಲಾಗಿದೆ. ಕನ್ನಡ ರಾಜ್ಯೋತ್ಸವ ಸಮಿತಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರಿಗೆ ’ಕಾವ್ಯ ಕೋಗಿಲೆ’ ಎಂಬ ಬಿರುದಿನೊಂದಿಗೆ ಸನ್ಮಾನಿಸಿದೆ. ಕೃಷ್ಣರಾಜ ನಗರದ ಯೋಗಾನಂದ ಸರಸ್ವತೀ ಪೀಠದಿಂದ ಇವರು ಸನ್ಮಾನಿಸಲ್ಪಟ್ಟು ಪ್ರಶಸ್ತಿ ಪತ್ರ ನೀಡಲಾಗಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೫-೦೬ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.