ಹೊಸಗನ್ನಡ ಗದ್ಯದ ಮುನ್ನಡೆಗೆ ಮುನ್ನುಡಿಯನ್ನು ಬರೆದ ಹಿರಿಯ ಮಹನೀಯರಲ್ಲಿ ಎಂ.ಎಸ್.ಪುಟ್ಟಣ್ಣ (ಮೈಸೂರು ಸೂರ್ಯನಾರಾಯಣ ಭಟ್ಟ ಪುಟ್ಟಣ್ಣ) ಒಬ್ಬರು. ಪುಟ್ಟಣ್ಣನವರ ತಾತ ಲಕ್ಷ್ಮೀಕಾಂತಭಟ್ಟರು ಚನ್ನಪಟ್ಟಣದ ನಾಗವಾರ ಗ್ರಾಮದವರು, ವೇದವಿದ್ಯೆ ತಿಳಿದವರು, ಜ್ಯೋತಿಷದಲ್ಲಿ ಪಾರಂಗತರು. ಅವರ ಮಕ್ಕಳು ನರಹರಿಭಟ್ಟರು, ಸೂರ್ಯನಾರಾಯಣ ಭಟ್ಟರು. ಇಬ್ಬರೂ ವೈದಿಕ ವೃತ್ತಿಯವರು. ಸೂರ್ಯನಾರಾಯಣ ಭಟ್ಟರ ಒಬ್ಬರೇ ಮಗ ಎಂ.ಎಸ್. ಪುಟ್ಟಣ್ಣನವರು ೧೮೫೪ ರಲ್ಲಿ ತಾಯಿಯ ತವರಾದ ಮೈಸೂರಿನಲ್ಲಿ ಜನಿಸಿದರು. ಹುಟ್ಟಿದ ಹತ್ತು ದಿನಗಳ ಒಳಗೆ ತಾಯಿಯನ್ನು ಕಳೆದುಕೊಂಡ ಈ ಮಗುವನ್ನು ಸೋದರಮಾವ ಸಾಕಿದರು. ಜೊತೆಗೆ ಇನ್ನೊಬ್ಬ ಸೋದರತ್ತೆಯ ಆರೈಕೆಯ ಭಾಗ್ಯವೂ ಸಿಕ್ಕಿತು. ತಂದೆ ಜೀವನದಲ್ಲಿ ಜುಗುಪ್ಸೆ ಹೊಂದಿ ಕಾಶಿಗೆ ಹೋಗಿ ಸನ್ಯಾಸಿಯಾದರು. ಪುಟ್ಟಣ್ಣನವರಿಗೆ ದೊಡ್ಡವರಾದ ಮೇಲೆ ತಂದೆಯ ಮುಖದರ್ಶನವಾಗಲೇ ಇಲ್ಲ.

ಪುಟ್ಟಣ್ಣನವರ ನಿಜ ನಾಮಧೇಯ ಲಕ್ಷ್ಮೀನರಸಿಂಹಶಾಸ್ತ್ರೀ. ಎಳೆವರೆಯದ ಚುರುಕು ಗಣ್ಣುಗಳ ತಬ್ಬಲಿ ಮಗುವನ್ನು ಕಂಡವರೆಲ್ಲ ಕರೆದ ಮುದ್ದಿನ ಹೆಸರು ಪುಟ್ಟಣ್ಣ. ಮುಂದೆ ಅದೇ ಹೆಸರು ಗಟ್ಟಿಯಾಯಿತು. ಸಂಪ್ರದಾಯಸ್ಥ ಮನೆತನದ ಪುಟ್ಟಣ್ಣನವರ ವಿದ್ಯಾಭ್ಯಾಸ ಪ್ರಾರಂಭದಲ್ಲಿ ಪಂತರ ಖಾಸಗಿ ಮಠಗಳಲ್ಲಿ ನಡೆಯಿತು. ಅನಂತರ ರಾಜಾ ಸ್ಕೂಲಿನಲ್ಲಿ (ಈಗಿನ ಮಹಾರಾಜ ಕಾಲೇಜು) ಎಫ್.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೋಲಾರದ ಪ್ರೌಢ ಶಾಲೆಯಲ್ಲಿ ಸಹಾಯೋಪಾಧ್ಯಾಯರಾಗಿ ನೇಮಕಗೊಂಡರು. ಒಂದೆರಡು ವರ್ಷಗಳ ನಂತರ ತಾವೇ ಓದಿದ್ದ ರಾಜಾ ಸ್ಕೂಲಿಗೆ ವರ್ಗವಾಗಿ ಬಂದರು.

ಪುಟ್ಟಣ್ಣನವರ ಮೊದಲ ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದೆ ಗಂಡ ಹೆಂಡಿರು ಬೇರ್ಪಟರು. ಪತ್ನಿಯ ಶೀಲಶಂಕೆಯವರೆಗೆ ಪತಿಯ ಮನಸ್ಸು ವಿಮುಖವಾದ ಮೇಲೆ ಹಾಗಾಗದೆ ವಿಧಿಯಿರಲಿಲ್ಲ. ಎರಡನೆಯ ಮದುವೆ ಮಾಡಿಕೊಳ್ಳಲು ಕೇಳುತ್ತಿದ್ದ ಮಿತ್ರರ, ಬಂಧುಗಳ ಒತ್ತಾಯ ಬಲವಾಗಿತ್ತು. ಆದರೆ ಬೇರೆಯಾರ ಆಯ್ಕೆಯಲ್ಲೂ ಪುಟ್ಟಣ್ಣನವರಿಗೆ ನಂಬಿಕೆ ಹೊರಟು ಹೋಗಿತ್ತು. ಅಂತಸ್ತು, ದುಡ್ಡು ಎಂಬ ಜಂಬಕ್ಕೆ ಬಲಿ ಬೀಳದೆ ಸಂಪ್ರದಾಯಶೀಲೆಯೂ ಗುಣವಂತೆಯೂ ಆದ ಹುಡುಗಿಯನ್ನು ಆರಿಸುವ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡರು. ಎಲ್ಲ ರೀತಿಯಲ್ಲೂ ತಮಗೆ ಮೆಚ್ಚುಗೆಯಾದ ಒಂದು ಬಡ ಕುಟುಂಬದ ಚಿಕ್ಕ ಹುಡುಗಿಯನ್ನು ಆರಿಸಿದರು, ಮದುವೆಯಾದರು. ತಮ್ಮ ಎಳೆಯ ವಯಸ್ಸಿನ ಹೆಂಡತಿಯನ್ನು ಕೆಲವು ವರ್ಷಗಳ ಕಾಲ ತಮ್ಮ ವಿದ್ಯಾರ್ಥಿನಿಯನ್ನಾಗಿ ಮಾತ್ರ ಕಂಡರು. ವೇಳಾಪಟ್ಟಿಯ ಪ್ರಕಾರ ಸಂಸ್ಕೃತ, ಇಂಗ್ಲಿಷ್‌ಗಳನ್ನು ಹೇಳಿಕೊಟ್ಟರು. ವ್ಯವಹಾರಕ್ಕೆ ಅಗತ್ಯವಾದ ಲೆಕ್ಕವನ್ನು ಹೇಳಿಕೊಟ್ಟರು. ಕರ್ಣಾಟಕ ಸಂಗೀತ ಪಾಠ ಹಾಗೂ ಪಿಯಾನೋ ಪಾಠಗಳಿಗೆ ಏರ್ಪಾಡು ಮಾಡಿದರು. ತಮ್ಮ ಮಡದಿಯ ವ್ಯಕ್ತಿತ್ವವನ್ನು ಪ್ರತಿ ಹಂತದಲ್ಲೂ ತಾಳ್ಮೆಯಿಂದ ರೂಪಿಸಿದರು. ಈ ಎರಡನೆಯ ದಾಂಪತ್ಯದಲ್ಲಿ ಅವರಿಗೆ ಮೂವರು ಗಂಡು ಮಕ್ಕಳು ಮೂವರು ಹೆಣ್ಣುಮಕ್ಕಳು ಜನಿಸಿದರು. ಮಕ್ಕಳ ಶಿಕ್ಷಣ, ಮದುವೆ ಮುಂತಾದ ಹೊಣೆಗಳನ್ನು ಪುಟ್ಟಣ್ಣನವರು ದಕ್ಷತೆಯಿಂದ ನಿರ್ವಹಿಸಿದರು. ಹಲವು ಮೊಮ್ಮಕ್ಕಳನ್ನು ಕಂಡ ಪುಟ್ಟಣ್ಣನವರಿಗೆ ಕೌಟುಂಬಿಕವಾದ ಪ್ರೀತಿ ವಿಶ್ವಾಸಗಳನ್ನು ಮನಸಾರೆ ಸವಿಯುವ ಭಾಗ್ಯವಿತ್ತು.

ತಮ್ಮ ವೃತ್ತಿಯೊಂದಿಗೆ ಅಧ್ಯಯನಕ್ಕೂ ಮನಸ್ಸು ಕೊಟ್ಟು ಪುಟ್ಟಣ್ಣನವರು ೧೮೮೫ ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದ ಬಿ.ಎ. ಪದವಿಯನ್ನು ಪಡೆದರು. ಮರುವರ್ಷವೇ ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಜೆ. ಭಾಭಾ ಅವರೊಡನೆ ಭಿನ್ನಾಭಿಪ್ರಾಯವುಂಟಾಗಿ ರಾಜಿ ಮಾಡಿಕೊಳ್ಳಲಿಚ್ಛಿಸದೆ ತಮ್ಮ ಹುದ್ದೆಗೆ ರಾಜೀನಾಮೆ ಇತ್ತರು. ಕೆಲವು ಕಾಲ ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ (ಈಗಿನ ಹೈಕೋರ್ಟ್‌) ಭಾಷಾಂತರಕಾರರಾಗಿ ದುಡಿದರು. ೧೮೯೭ ರಲ್ಲಿ ಅವರನ್ನು ಚಿತ್ರದುರ್ಗದ ಅಮಲ್ದಾರರನ್ನಾಗಿ ನೇಮಿಸಲಾಯಿತು. ನೆಲಮಂಗಲ, ಚಾಮರಾಜ ನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗಗಳಲ್ಲಿಯೂ ಅವರು ಅಮಲ್ದಾರರಾಗಿ ಕಾರ್ಯವನ್ನು ನಿರ್ವಹಿಸಿದರು. ಅತ್ಯಂತ ಶಿಸ್ತಿನಿಂದಿದ್ದ, ಋಜುಮಾರ್ಗದಲ್ಲಿ ನಂಬಿಕೆಯಿದ್ದ ಪುಟ್ಟಣ್ಣನವರಿಗೆ ಕಡೆಗೂ ಸರಕಾರದ ನೌಕರಿ ನೋವು, ಬೇಸರಗಳನ್ನು ತಂದಿತು. ೧೮೦೮ ರಲ್ಲಿ ಅವರು ತಮ್ಮ ವೃತ್ತಿಗೆ ರಾಜೀನಾಮೆ ನೀಡಿದರು. ಪುಟ್ಟಣ್ಣನವರಿಗೆ ಸರಕಾರವೇ ದೇವರು, ಪ್ರಜಾಭಿವೃದ್ಧಿಯೇ ಗುರಿ. ಅವರಿಗೆ ಕೆಲಸದ ಅವಧಿ ವಿಸ್ತರಣೆ ಸಿಗುವುದು ನ್ಯಾಯವಾಗಿತ್ತು. ಹಾಗಿರುವಾಗ ಪೂರ್ಣಾವಧಿ ಕೆಲಸವನ್ನು ಮಾಡದೆ ರಾಜೀನಾಮೆ ಕೊಟ್ಟಿದ್ದು ಒಂದು ವ್ಯಂಗ್ಯ. ಅನಂತರ ಅವರು ಸ್ವಲ್ಪ ಕಾಲ ವಕೀಲರಾಗಿದ್ದರು. ತಮ್ಮ ಬೇರೆ ಬೇರೆ ವೃತ್ತಿಗಳಲ್ಲಿದ್ದಾಗಲೂ ಅವರು ಸಾರಸ್ವತ ಸೇವೆಯನ್ನು ನಿಲ್ಲಿಸಲಿಲ್ಲ. ವಿಶ್ವವಿದ್ಯಾಲಯ, ಶಿಕ್ಷಣ ಮಂಡಳಿಗಳಲ್ಲಿ ಪರೀಕ್ಷಕರಾಗಿ, ಪಠ್ಯಪುಸ್ತಕ ಸಮಿತಿಗಳಲ್ಲಿ ಸದಸ್ಯರಾಗಿ, ಭಾಷೆಯ ಸಾಧು-ಅಸಾಧು ರೂಪಗಳನ್ನು ಚರ್ಚಿಸುವ ಸಮಿತಿಯಲ್ಲಿ ಒಬ್ಬರಾಗಿ ಅವರು ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅವರು ಕೆಲಕಾಲ ಅದರ ಕಾರ್ಯದರ್ಶಿಯಾಗಿಯೂ ದುಡಿದರು. ಸಾರ್ವಜನಿಕ ಚಟುವಟಿಕೆಗಳಲ್ಲಿ ಅವರಿಗೆ ಅಪಾರವಾದ ಆಸಕ್ತಿಯಿತ್ತು. ಬೆಂಗಳೂರಿನ ತೆರಿಗೆದಾರರ ಸಂಘದ ಸಂಘಟಕರಾಗಿದ್ದ ಅವರು ಆ ದಿನಗಳಲ್ಲಿ ದಾಖಲೆಗಳು ಕನ್ನಡದಲ್ಲೇ ಇರಲು ಕಾರಣರಾದರು.

ವೃತ್ತಿ ಜೀವನದಲ್ಲಿ ಅವರು ಅತ್ಯಂತ ಪರಿಶುದ್ಧರಾಗಿದ್ದರು. ಅವರು ಎಂತಹ ಸತ್ಯನಿಷ್ಠರಾಗಿದ್ದರೆಂಬುದನ್ನು ಈ ಕೆಳಗಿನ ಕೆಲವು ಘಟನೆಗಳು ತೋರಿಸುತ್ತವೆ.

ಪುಟ್ಟಣ್ಣನವರು ಅಮಲ್ದಾರರಾಗಿದ್ದಾಗ ತಿಂಗಳಿಗೆ ಹತ್ತು ದಿನ ಸಂಚಾರಕ್ಕೆ ಹೋಗ ಬೇಕಾಗಿತ್ತು. ಹೋದ ಕಡೆಗೆಲ್ಲ ಪಾತ್ರೆಗಳು, ಅಕ್ಕಿ, ಬೇಳೆ, ಸಾಂಬಾರ ವಸ್ತುಗಳು, ಒಂದು ಕಬ್ಬಿಣದ ಮಡಿಸುವ ಮಂಚ ತೆಗೆದುಕೊಂಡು ಹೋಗುತ್ತಿದ್ದರು. ಅಡಿಗೆಯವನು ಜೊತೆಯಲ್ಲಿ ಇರುತ್ತಿದ್ದ. ಗ್ರಾಮವಾಸಿಗಳು ಎಷ್ಟು ಒತ್ತಾಯ ಮಾಡಿದರೂ ಅವರು ತರುತ್ತಿದ್ದ ತರಕಾರಿ, ಹಣ್ಣು, ಹಾಲು, ಬೆಣ್ಣೆ, ತುಪ್ಪ ಮೊದಲಾದುವನ್ನು ಮುಟ್ಟುತ್ತಿರಲಿಲ್ಲ. ಹಾಗೆ ಬೇಕಾದರೆ ದುಡ್ಡು ಕೊಟ್ಟು ಕೊಳ್ಳುತ್ತಿದ್ದರು. ಪುಕ್ಕಟೆ ಎಂದಿಗೂ ಬೇಡ ಎನ್ನುತ್ತಿದ್ದರು. ಒಂದು ಸಲ ಗ್ರಾಮಸ್ಥರು ಅಮಲ್ದಾರರಿಗೆ ಪದಾರ್ಥಗಳನ್ನು ಬೆಲೆಗೆ ಕೊಡಬಾರದು ಎಂದು ನಿಶ್ಚಯಿಸಿದರು. ಈ ಬಾರಿ ಪುಟ್ಟಣ್ಣನವರು ಅಡಿಗೆಯವನನ್ನೂ ಕರೆದೊಯ್ದಿರಲಿಲ್ಲ. ಆದರೂ ಅವರು ಜಗ್ಗಲಿಲ್ಲ. ತಮ್ಮ ಅಧಿಕಾರವನ್ನು ಚಲಾಯಿಸಲಿಲ್ಲ. ತಮ್ಮ ನಂಬಿಕೆಗೆ ಊನವನ್ನೂ ತಂದುಕೊಳ್ಳಲಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೂ ಉಪವಾಸವೇ ಇದ್ದು ಕೆಲಸ ಮುಗಿಸಿ ಹೋದರು.

ಒಮ್ಮೆ ಅವರ ಪಕ್ಕದ ಮನೆಯವರು ಮನೆಯ ಖಾಲಿ ಮಾಡಿ ಹೋದರು. ಇವರ ಮನೆ ಪಕ್ಕದ ಮನೆ ಎರಡೂ ಸರ್ಕಾರದವರು ಇಲಾಖೆಯವರಿಗಾಗಿ ಕಟ್ಟಿಸಿಕೊಟ್ಟವು. ಪುಟ್ಟಣ್ಣನವರ ಹೆಂಡತಿ ಆ ಹೊತ್ತಿಗೆ ಅವಶ್ಯವೆನಿಸಿದ್ದರಿಂದಲೂ ಮನೆಯಲ್ಲಿ ಇಲ್ಲದೆ ಹೋದುದರಿಂದಲೂ ಸಾರಿನ ಮೆಣಸಿನ ಪುಡಿಗೆ ಬೇಕಿದ್ದ ಕರಿಬೇವನ್ನು ಅಲ್ಲಿಂದ ಕಿತ್ತು ತಂದರು. ಅದನ್ನು ಪುಟ್ಟಣ್ಣನವರು ಕಂಡರು. ಆ ದಿನ ಹೊಸ ಮೆಣಸಿನ ಪುಡಿ ಹಾಕಿದ ಸಾರನ್ನು ತಿನ್ನಲಿಲ್ಲ. ಕರಿಬೇವು ಹಾಕಿದ್ದ ಮಜ್ಜಿಗೆಯನ್ನು ಮುಟ್ಟಲಿಲ್ಲ. ಉಪ್ಪಿನಕಾಯೊಡನೆ ಊಟದ ಶಾಸ್ತ್ರ ಮುಗಿಸಿದರು. ಎಂದಿನಂತೆ ಕೋರ್ಟಿಗೆ ಹೋದರು. ಅಲ್ಲಿಂದ ಹೆಂಡತಿಗೆ ಸಮನ್ಸ್ ಬಂದಿತು. ಇದ್ದ ಹಾಗೇ ಬರಬೇಕೆಂಬ ಆಜ್ಞೆ, ಹೆಂಡತಿ ಗಾಬರಿಯಾಗಿ ಕೋರ್ಟಿಗೆ ಹೋದರು. ಅಲ್ಲಿ ಒಂದು ರೂಪಾಯಿ ದಂಡ ಅಥವಾ ಬೆಳಿಗ್ಗೆಯಿಂದ ಸಂಜೆಯವರೆರೆ ಕೋರ್ಟಿನಲ್ಲಿ ಇರಬೇಕು ಎಂದು ಪುಟ್ಟಣ್ಣನವರು ತೀರ್ಪು ಕೊಟ್ಟರು. ಆಕೆಯ ಬಳಿ ಬಂದು ರೂಪಾಯಿ ಎಲ್ಲಿಂದ ಬರಬೇಕು? ಆಳುಗಳುಕೊಟ್ಟು ಬಿಡಿಸಿಕೊಂಡು ಬಂದರು. ಮನೆಗೆ ಬಂದ ಮೇಲೆ ಆಳುಗಳು ಖರ್ಚು ಮಾಡಿದ್ದ ಆ ಒಂದು ರೂಪಾಯಿಯನ್ನು ಪುಟ್ಟಣ್ಣನವರು ಕೆಲಸದವರಿಗೆ ಕೊಟ್ಟು ದಂಡವನ್ನು ತಾವೇ ತೆತ್ತರು.

ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದ ಸಂಬಂಧಿಯೊಬ್ಬನನ್ನು ವಜಾ ಮಾಡಿದವರು ಅವರು. ಕೆಲಸವಿಲ್ಲದ್ದರಿಂದ ಕಳ್ಳತನಕ್ಕಿಳಿದೆ ಎಂಬ ಕಳ್ಳನೊಬ್ಬನಿಗೆ ಮನೆಯಲ್ಲೇ ಕೆಲಸ ಕೊಡುವ ಧೈರ್ಯ ಮಾಡಿದವರು. ಮೇಲಧಿಕಾರಿಗಳಿಗೆ ವಸ್ತುಗಳನ್ನು ಸರಬರಾಜು ಮಾಡಬೇಕಾಗಿ ಬಂದರೆ ಅವರಿಗೆ ಬಿಲ್ಲು ಕಳಿಸಿ ಹಣ ವಸೂಲಿ ಮಾಡಿದವರು ಅವರು. ಹೀಗೆ ಖಂಡಿತವಾದಿಗಳಾಗಿದ್ದುದರಿಂದ ಪುಟ್ಟಣ್ಣನವರಿಗೆ ಹಲವು ನ್ಯಾಯವಾದ ಅವಕಾಶಗಳೂ ತಪ್ಪಿ ಹೋದವು.

೧೯೩೦ರಲ್ಲಿ ಕಡೆಯುಸಿರೆಳೆಯುವವರೆಗೂ ಪುಟ್ಟಣ್ಣನವರು ಬರವಣಿಗೆ, ಸಾರ್ವಜನಿಕ ಸೇವೆಗಳಲ್ಲಿ ತೊಡಗಿದ್ದರು.

ಪುಟ್ಟಣ್ಣನವರದು ಕನ್ನಡದ ಪುನರುಜ್ಜೀವನದ ಕಾಲ. ಸಾಹಿತ್ಯರಚನೆಗೆ ರಾಜಾಶ್ರಯ ಸಮೃದ್ಧವಾಗಿದ್ದ ಕಾಲ. ಆ ದಿನಗಳಲ್ಲಿ ಹಳೆಯ ಕಾವ್ಯಗಳ ಪ್ರಕಟಣೆ, ಭಾಷಾಂತರ ರೂಪಾಂತರಗಳ ಹಾಗೂ ಸ್ವತಂತ್ರ ಕೃತಿಗಳ ರಚನೆ ಒಟ್ಟೊಟ್ಟಿಗೇ ಕಾಣಿಸಿಕೊಂಡವು. ಇಂಗ್ಲಿಷ್‌ ಶಿಕ್ಷಣ, ಸಂಸ್ಥಾನದ ಅಭಿವೃದ್ಧಿಯಲ್ಲಿ ಆಸಕ್ತರಾಗಿದ್ದ ದಿವಾನರುಗಳ ಪ್ರೋತ್ಸಾಹಗಳು ಕನ್ನಡದ ಕೆಲಸಗಳಿಗೆ ವೇಗವರ್ಧಕ ಅಂಶಗಳಾಗಿ ಒದಗಿಬಂದವು.

ಬ್ರಿಟಿಷರ ಆಳ್ವಿಕೆಯಿಂದ ಭಾರತೀಯರ ಆಡಳಿತ, ವಿದ್ಯಾಭ್ಯಾಸ, ಸಾಮಾಜಿಕ ಜೀವನ ಮುಂತಾದ ಪ್ರತಿಯೊಂದು ರಂಗದಲ್ಲೂ ಬದಲಾವಣೆಗಳು ಕಂಡು ಬಂದವು. ನಿರಂಕುಶ ಅರಸೊತ್ತಿಗೆಯಿಂದ ಸಾಂಕುಶವಾದ ಅರಸೊತ್ತಿಗೆ ಕಡೆಗೆ ರಾಜಕೀಯವಾಗಿ; ವರ್ಣಾಶ್ರಮದ ಕಟ್ಟುಪಾಡುಗಳಲ್ಲಿ ಶೈಥಿಲ್ಯ, ವಿದ್ಯಾಭ್ಯಾಸ ನೌಕರಿಗಳಲ್ಲಿ ಹೊಸಧೋರಣೆಗಳು, ಬಾಲ್ಯ ವಿವಾಹ ರದ್ಧತಿ ಹಾಗೂ ಸ್ತ್ರೀ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಸಾಮಾಜಿಕವಾಗಿ; ಪದ್ಯದಿಂದ ಗದ್ಯದೆಡೆಗೆ ಒಲವು, ಬಿಗುವಿನಿಂದ ನಾಜೂಕು ಸಾಹಿತ್ಯಕವಾಗಿ ಮೊದಲಾದ ಸ್ಥಿತ್ಯಂತರಗಳು ಕಂಡು ಬಂದುವು. ಹಳೆಯದಕ್ಕೆ ಇತಿಶ್ರೀ ಹೇಳುತ್ತಿದ್ದಂತೆ ಹೊಸದಕ್ಕೆ ಶ್ರೀ ಗಣೇಶ ಪೂಜೆ ನಡೆಯಿತು.

ಇಂಗ್ಲಿಷಿನ್ ಹಲವು ಪ್ರಭಾವಗಳು ಸಾಂಸ್ಕೃತಿಕ ಭಿನ್ನತೆಯಿಂದ ಕೂಡಿದ್ದರೂ ಅವುಗಳನ್ನು ರುಚಿ ಭೇದದಂತೆ ಪುಟ್ಟಣ್ಣನವರೂ ಅವರ ಸಮಕಾಲೀನರೂ ಬಳಸಿಕೊಂಡರು. ಮಾರ್ಗವನ್ನು ಬಿಡದೆ, ದೇಸಿಯನ್ನು ಒಳಗೊಂಡ ಹೊಸ ಹೊಗರಿನ ಶೈಲಿಯ ಮಹತ್ತ್ವವನ್ನು ಅಂದಿನವರು ಕಂಡುಕೊಂಡರು. ತಾಯ್ನುಡಿಯ ಹಾಗೂ ಆಡುಮಾತಿನ ಮಹತ್ತ್ವ ಕ್ರಮೇಣ ಹೆಚ್ಚಾಯಿತು. ಜೊತೆಗೆ ಜೀವನವನ್ನೂ ದೈವವನ್ನೂ ಒಪ್ಪಿಕೊಂಡು ತಮ್ಮ ಸಂಸ್ಕೃತಿಯಲ್ಲಿ ಬೆಳಕು ಕಾಣುವ ಈ ಗುಂಪಿಗೆ ಇಂಗ್ಲಿಷ್ ಸಾಹಿತ್ಯದ ಅರಿವಿನಿಂದ ಹೊಸ ಹೆಬ್ಬಾಗಿಲು ತೆರೆಯಿತು. ದೇಶವೇ ಪಾರತಂತ್ರ‍್ಯದಲ್ಲಿರುದ್ದರೂ ವೈರಾಗ್ಯವಾಗಲೀ ನಿರಸನತೆಯಾಗಲೀ ಇವರುಗಳನ್ನು ಬಾಧಿಸಲಿಲ್ಲ. ಮೌಲ್ಯಗಳ ಬಗ್ಗೆ ಗಟ್ಟಿ ನಿಲುವಿತ್ತು. ಹೊಣೆಗೆ ಹಿಂಜರಿಯದ ಮನಸ್ಸು ಇವುಗಳ ಕೊಡುಗೆ  ಯಾಗಿತ್ತು.

* * *

ಪುಟ್ಟಣ್ಣನವರ ಗದ್ಯಕೃಷಿ ವಿವಿಧ ರೀತಿಗಳಲ್ಲಿ ತನ್ನ ಅಭಿವ್ಯಕ್ತಿಯನ್ನು ಕಂಡುಕೊಂಡಿತು. ಕಥೆ ಕಾದಂಬರಿ (‘ಮಾಡಿದ್ದುಣ್ಣೋ ಮಹಾರಾಯ’, ‘ಮುಸುಗ ತೆಗೆಯೇ ಮಾಯಾಂಗನೆ’, ‘ಅವರಿಲ್ಲದೂಟ’, ‘ಪೇಟೆ ಮಾತೇನಜ್ಜಿ’, ‘ನೀತಿ ಚಿಂತಾಮಣಿ’ ಮತ್ತು ‘ಪುಟ್ಟಣ್ಣ ಹೇಳಿದ ಕಥೆಗಳು’); ಜೀವನ ಚರಿತ್ರೆ, ‘ಕಾಂಪೂಪನ ಚರಿತ್ರೆ’, ‘ಕುಣಿಗಲ ರಾಮಶಾಸ್ತ್ರಿಗಳ ಚರಿತ್ರೆ’, ‘ಸರ್‌ ಸಾಲಾರಜಂಗನ ಚರಿತ್ರೆ’, ‘ಮಹಮೂದ್ ಗವಾನನ ಚರಿತ್ರೆ’ ಮತ್ತು ‘ಛತ್ರಪತಿ ಶಿವಾಜಿ ಮಹಾರಾಜನ ರೂಪಾಂತರ/ಭಾಷಾಂತರ (‘ಜಯಸಿಂಹರಾಜ ಚರಿತ್ರೆ’, ‘ಹೇಮಚಂದ್ರರಾಜ ವಿಲಾಸ’, ‘ಹೇಮಲತ’, ‘ಸುಮತಿ ಮದನಕುಮಾರರ ಚರಿತ್ರೆ’ ಮತ್ತು ‘ಹಾತಿಂತಾಯ್‌ನ ಸಾಹಸಗಳು’); ಸಂಶೋಧನೆ (‘ಪಾಳೆಯಗಾರರು’, ‘ಚಿತ್ರದುರ್ಗದ ಪಾಳೆಯಗಾರರು’, ‘ಗುಮ್ಮನಾಯಕನ ಪಾಳೆಯದ ಪಾಳೆಯಗಾರರು’, ‘ಹಾಗಲವಾಡಿ ಪಾಳೆಯಗಾರರು’ ಮತ್ತು ‘ಇಕ್ಕೇರಿ ಸಂಸ್ಥಾನದ ಚರಿತ್ರೆ’); ಪಠ್ಯಪುಸ್ತಕಗಳು (‘ಹಿಂದೂ ಚರಿತ್ರ ದರ್ಪಣ’, ‘ಹಿಂದೂ ಚರಿತ್ರ ಸಂಗ್ರಹ’, ‘ಕನ್ನಡ ಒಂದನೆಯ ಪುಸ್ತಕವು’ ಮತ್ತು ‘ಕನ್ನಡ ಲೇಖನ ಲಕ್ಷಣ’); ಪತ್ರಿಕೋದ್ಯಮ ‘ಹಿತಬೋಧಿನಿ’ ಹಾಗೂ ಲೇಖನ ವ್ಯವಸಾಯ (‘ಎಂ.ಎಸ್.ಪುಟ್ಟಣ್ಣನವರ ಕನ್ನಡ ಮತ್ತು ಇಂಗ್ಲಿಷ್ ಲೇಖನಗಳು’) – ಈ ಪ್ರಕಾರಗಳಲ್ಲಿ ಅವರು ಕೆಲಸ ಮಾಡಿದರು. ‘ಜಯಸಿಂಹರಾಜ ಚರಿತ್ರೆ’, ‘ಹಿಂದೂ ಚರಿತ್ರ ದರ್ಪಣ’, ‘ಹಿಂದೂ ಚರಿತ್ರ ಸಂಗ್ರಹ’ ಹಾಗೂ ‘ನೀತಿ ಚಿಂತಾಮಣಿ’ಗಳ ರಚನೆಯಲ್ಲಿ ಮತ್ತು ಹಿತಬೋಧಿನಿ ಪತ್ರಿಕೆಯನ್ನು ನಡೆಸುವಲ್ಲಿ ಎಂ.ಬಿ. ಶ್ರೀನಿವಾಸಯ್ಯಂಗಾರು ಪುಟ್ಟಣ್ಣನವರ ಸಹಕರ್ತೃವಾಗಿದ್ದರು.

* * *

ಮಾರ್ಗಕಾವ್ಯದ ತೆರಪಾಗುತ್ತಿದ್ದ ಜಾಗಕ್ಕೆ ಇಂದಿಗೂ ಜನಪ್ರಿಯವಾದ ಕಾದಂಬರಿಯ ಪ್ರಕಾರವನ್ನು ಕನ್ನಡದಲ್ಲಿ ಯಶಸ್ವಿಯಾಗಿ ತಂದವರಲ್ಲಿ ಪುಟ್ಟಣ್ಣನವರು ಮೊದಲ ಸಾಲಿನವರು. ಕಾದಂಬರಿಗಳಿಗೆ ವಸ್ತು ನಮ್ಮಲ್ಲೇ ವಿಫುಲವಾಗಿದೆ ಎಂಬುದನ್ನು ಕಂಡುಕೊಂಡ ಮೊದಲಿಗರಲ್ಲಿ ಪುಟ್ಟಣ್ಣನವರೂ ಒಬ್ಬರು. ಕಾದಂಬರಿ ಪ್ರಕಾರ ಕನ್ನಡಕ್ಕೆ ತೀರ ಹೊಸದಾಗಿದ್ದ ಕಾಲದಲ್ಲಿ, ಆ ಪ್ರಕಾರ ಕನ್ನಡ ಜಾಯಮಾನಕ್ಕೆ ಒಗ್ಗೀತೇ ಎಂಬ ಸಂಶಯವೂ ಪೂರ್ಣ ಬಗೆಹರಿದಿರಲಿಲ್ಲ ಎಂಬ ಹೊತ್ತಿನಲ್ಲಿ ಅವರು ತಮ್ಮ ಕಾದಂಬರಿಗಳ ಮೂಲಕ ಕನ್ನಡ ಕಾದಂಬರಿಗಳಿಗೆ ಸುಭದ್ರವಾದ ಅಡಿಪಾಯವನ್ನು ಹಾಕಿದರು. ಪುಟ್ಟಣ್ಣನವರು ಇತರ ಹಲವು ಗದ್ಯ ಪ್ರಕಾರಗಳಲ್ಲಿ ಅನೇಕ ರಚನೆಗಳನ್ನು ಆ ವೇಳೆಗೆ ಪೂರೈಸಿದ್ದು ತಮ್ಮ ಆಯುಸ್ಸಿನ ಅರವತ್ತು ವರ್ಷಗಳ ನಂತರ ಕಾದಂಬರಿಗಳ ರಚನೆಗೆ ಕೈ ಹಾಕಿದರು, ಪ್ರಯೋಗವನ್ನು ತೃಪ್ತಿಕರವಾಗಿ ನೆರವೇರಿಸಿದರು.

ಪುಟ್ಟಣ್ಣನವರು ‘ಮಾಡಿದ್ದುಣ್ಣೋ ಮಹಾರಾಯ’ (೧೯೧೫), ‘ಮುಸುಗ ತೆಗೆಯೇ ಮಯಾಂಗನೆ’ (೧೯೨೮) ಮತ್ತು ‘ಅವರಿಲ್ಲದೂಟ’ (೧೯೫೯) ಎಂಬ ಮೂರು ಕಾದಂಬರಿಗಳನ್ನು ರಚಿಸಿದ್ದಾರೆ. ಕಡೆಯದು ಮರಣೋತ್ತರ ಪ್ರಕಟಣೆ. ಈ ಕಾದಂಬರಿಗಳಲ್ಲಿ ಪುಟ್ಟಣ್ಣನವರು ಚಿತ್ರಿಸಿರುವುದು ಬ್ರಿಟಿಷ್ ಆಧಿಪತ್ಯದ ಆಶ್ರಿತ ಸಂಸ್ಥಾನವಾದ ಮೈಸೂರು. ಆ ದಿನಗಳ ಕನ್ನಡಿಗರ ಬಾಳು ಬದುಕು, ಅರಮನೆ ಗುರುಮನೆಗಳ ಪರಿಸರ, ಅವರ ಪೂರ್ವಾಚಾರ ಶ್ರದ್ಧೆ, ವಿದ್ಯಾಭ್ಯಾಸ, ಕುಟುಂಬ ಕಲಹಗಳು, ಜನರ ನೇರ ಕೊಂಕುಗಳು ಮುಂತಾದುವು ಇಲ್ಲಿ ಚಿತ್ರಿತವಾಗಿವೆ.

ಪುಟ್ಟಣ್ಣನವರ ಮೂರೂ ಕಾದಂಬರಿಗಳ ವಸ್ತು ಹಾಗೂ ಅದರ ವಿಶ್ಲೇಷಣೆ ಹಲವು ಕುತೂಹಲಕರ ಅಂಶಗಳನ್ನು ಹೊರಚೆಲ್ಲುತ್ತದೆ. ವಸ್ತುವಿನ ಮೂಲಕ ಪುಟ್ಟಣ್ಣನವರು ಧ್ವನಿಸುವ ಸಾಮಾಜಿಕ ಸಂಬಂಧಗಳು, ಪರಿಸ್ಥಿತಿಗಳ ಚಿತ್ರಣ ಮುಖ್ಯ. ನ್ಯಾಯಕ್ಕೆ ಗೆಲುವು ಅನ್ಯಾಯಕ್ಕೆ ಸೋಲು ಎಂಬುದು ಇಲ್ಲಿನ ಮುಖ್ಯ ಸ್ಥಾಯಿ. ನ್ಯಾಯ ಎಂಬುದು ಪ್ರಾಮಾಣಿಕತೆಯ ಯಾವ ಒಂದು ರೂಪವಾದರೂ ಆಗಬಹುದು. ಹೆಚ್ಚಿನ ಮಟ್ಟಿಗೆ ಸ್ತ್ರೀಯ ಪ್ರಾತಿವ್ರತ್ಯ ಇದಕ್ಕೆ ರೂಪ ಕೊಡುತ್ತದೆ. ಹೆಣ್ಣಿನ, ಹಣದ ಆಸೆಗೆ ಬಿದ್ದು ಸಮಾಜದ ನಿಯಮಗಳನ್ನು ಮೀರಲೆತ್ನಿಸುವವರಿಗೆ ಉಳಿಗಾಲವಿಲ್ಲ. ಕಥೆಯ ಸಂವಿಧಾನ ಚಾಳಲ್ಲವಾದುದರಿಂದಲೂ, ಆಡುನುಡಿಯ ಬನಿಯಿಂದಲೂ ಕಾದಂಬರಿಯಲ್ಲಿ ಅಂತರ್ಗತವಾದ ನೀತಿಬೋಧೆ ಕೃತಿಗೆ ಹೊರೆಯಾಗಿಲ್ಲ. ಬಿತ್ತಿದಂತೆ ಬೆಳೆ ಎಂಬ ಕರ್ಮಸಿದ್ಧಾಂತಪರವಾದ ನಿಲುವು ಇಲ್ಲಿ ಕಾಣುತ್ತದೆ. ಮೊದಲ ಕಾದಂಬರಿಗೆ ಈ ಧೋರಣೆಯೇ ‘ಮಾಡಿದ್ದುಣ್ಣೋ ಮಹಾರಾಯ’ ಎಂಬ ಹೆಸರಾಗಿದೆ ಎಂಬುದು ಗಮನಾರ್ಹ. ಪುಟ್ಟಣ್ಣನವರ ರಚನೆಗಳಲ್ಲಿ ಸಾಹಿತ್ಯಕ ಯಶಸ್ಸು ದಕ್ಕಿರುವುದರಲ್ಲಿ ಸಿಂಹಪಾಲು ಈ ಕಾದಂಬರಿಗಳದು.

ಪುಟ್ಟಣ್ಣನವರು ತಮ್ಮ ಮೊದಲ ಕಾದಂಬರಿಯನ್ನು ಬರೆಯುವ ಮೊದಲೇ ಕನ್ನಡದಲ್ಲಿ ಸ್ವತಂತ್ರ ಕಾದಂಬರಿಗಳು ಬಂದಿದ್ದವು. ಪ್ರಮುಖವಾಗಿ ೧೮೯೯ರಲ್ಲಿ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’, ೧೯೦೫ ರಲ್ಲಿ ಬೋಳಾರ ಬಾಬೂರಾಯರ ‘ವಾಗ್ದೇವಿ’, ೧೯೦೮ರಲ್ಲಿ ಕೆರೂರ ವಾದುದೇವಾಚಾರ್ಯರ ‘ಇಂದಿರಾ’ ಕಾದಂಬರಿಗಳು ಬಂದಿದ್ದವು. ಪುಟ್ಟಣ್ಣನವರು ತಮ್ಮ ಕಾದಂಬರಿಯಲ್ಲಿ ಪ್ರಪ್ರಥಮವಾಗಿ ಸಾಧಿಸಿದ್ದರೆಂದರೆ ಆಡುನುಡಿಯ ಬನಿಯನ್ನು ಕಾದಂಬರಿಯಲ್ಲಿ ಬಳಸಿಕೊಂಡಿದ್ದು, ನಿಜದ ನೆಲೆಯಿಂದ ಬಂದ ಪಾತ್ರಗಳನ್ನೇ ಕಾದಂಬರಿಯಲ್ಲೂ ಸ್ಥಾಪಿತವಾಗಿಸಿದ್ದು. ಕನ್ನಡ ಜನತೆಗೆ ಅಪರಿಚಿತವಾದ ಯಾವುದೋ ಸಮಾಜ ಚಿತ್ರಣಗಳಿಂದ ತುಂಬಿದ ಅನುವಾದಿತ ಕಾದಂಬರಿಗಳ ನಡುವೆ ಕನ್ನಡ ಜನರ ಆಚಾರ ವಿಚಾರಗಳನ್ನು ಕನ್ನಡದ ನುಡಿಗಟ್ಟಿನಿಂದ ಶ್ರೀಮಂತವಾದ ಶೈಲಿಯಲ್ಲಿ ನಿರೂಪಿಸಿದ್ದು. ಇದೇ ಲಕ್ಷಣ ಅವರ ಇನ್ನೆರಡು ಕಾದಂಬರಿಗಳಲ್ಲೂ ಮುಂದುವರೆಯಿತು. “ಪುಟ್ಟಣ್ಣನವರ ಕಾದಂಬರಿಗಳು ಇಂಗ್ಲಿಷ್ ನಾವೆಲ್‌ಗಳಂತೆ ಪ್ರತ್ಯಕ್ಷ ಜೀವನ ಚಿತ್ರಗಳು”[1] ಎಂದು ಡಿ.ವಿ.ಗುಂಡಪ್ಪನವರು ಹೇಳಿದ್ದಾರೆ.

ಮೂರೂ ಕಾದಂಬರಿಗಳ ಕಥೆ ಮತ್ತು ಸಂವಿಧಾನ

ಮಾಡಿದ್ದುಣ್ಣೋ ಮಹಾರಾಯ

ಮೈಸೂರಿನಲ್ಲಿ ರಾಜಾಸ್ಥಾನದ ಕೃಪೆಗೆ ಪಾತ್ರನಾದ ಸದಾಶಿವ ದೀಕ್ಷಿತನ ಪತ್ನಿ ಒಂದು ಗಂಡು ಮಗುವನ್ನು ಹೆತ್ತು ಸತ್ತು ಹೋಗಿದ್ದಳು. ಈತನ ಮುದಿತಾಯಿಯೇ ಮಗುವನ್ನು ಪೋಷಿಸುತ್ತಿದ್ದಳು. ದೀಕ್ಷಿತ ಮುಂದೆ ಸಂಜವಾಡಿಯ ನೀಲಕಂಠ ಜೋಯಿಸರ ಮಗಳು ತಿಮ್ಮಮ್ಮನನ್ನು ಮದುವೆಯಾದನು. ಜೋಯಿಸರು ತಮ್ಮ ಮಗ ಕಿಟ್ಟುವಿಗೆ ಆಸ್ತಿಯ ನಿರ್ವಹಣೆ ಸಾಧ್ಯವಿಲ್ಲವೆಂದು ಮನಗಂಡು ಎಲ್ಲ ಹೊಣೆಯನ್ನು ಅಳಿಯನಿಗೆ ವಹಿಸಿ ನಿಶ್ಚಿಂತೆಯಿಂದ ಸಾಯುತ್ತಾರೆ. ದೀಕ್ಷಿತನ ಮಗ ಮಹಾದೇವ ತಿಮ್ಮಮ್ಮನ ಪೋಷಣೆಯಲ್ಲಿ ಸುಖವಾಗಿ ಬೆಳೆಯುತ್ತಾನೆ. ಇವನ ವಿದ್ಯಾಭ್ಯಾಸ ಊರಿನ ಪಂತ ನಾರಪ್ಪಯ್ಯನ ಬಳಿ ಸಾಗುತ್ತಿತ್ತು. ಏಟು ಮುಂಚು ಮಾತು ಹಿಂಚು ಎಂಬುದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ನಾರಪ್ಪಯ್ಯನಿಗೆ ಮಠದ ಹಿರಿಯ ಹುಡುಗರು ತೀರಿಸಿಕೊಂಡ ಸೇಡಿನ ಫಲವಾಗಿ ಪ್ರಾಣಕ್ಕೆ ಕಷ್ಟವಾಗಿ ಚೇತರಿಸಿಕೊಳ್ಳಲು ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಬೇಕಾಯಿತು. ಊಟ ಉಪಚಾರವೆಲ್ಲ ಸದಾಶಿವ ದೀಕ್ಷಿತನ ಮನೆಯಲ್ಲಿ ನಡೆಯಿತು. ಆ ವೇಳೆಯಲ್ಲಿ ಮಕ್ಕಳನ್ನು ಒಲಿಸಿಕೊಂಡು ಪಾಠ ಹೇಳಬೇಕು. ಪೆಟ್ಟಿನಿಂದಲ್ಲ ಎಂಬ ದೀಕ್ಷಿತನ ಮಾತನ್ನು ತಪ್ಪು ತಿಳಿದು ನಾರಪ್ಪಯ್ಯ ಮನಸ್ಸಿನಲ್ಲೇ ಕತ್ತಿ ಮಸೆಯುತ್ತಿದ್ದ.

ಮಹಾದೇವ ಬೆಳೆದು ದೊಡ್ಡವನಾದ, ವಿದ್ಯಾವಂತನಾದ. ದೀಕ್ಷಿತನ ಸೋದರಮಾವ ಪಶುಪತಿ ಸಾಂಬಶಾಸ್ತ್ರಿಯ ಮೊಮ್ಮಗಳು ಸೀತೆಯೊಂದಿಗೆ ಮದುವೆಯಾಯಿತು. ಸೀತೆ ಸಾತ್ತ್ವಿಕಳು, ಗುಣವಂತೆ, ಸುಂದರಿ, ಗಂಡನಿಗೆ ಒಪ್ಪಿದ ಮಡದಿ. ಮಾವನಿಗೆ ಅಚ್ಚುಮೆಚ್ಚಿನ ಸೊಸೆ ಮತ್ತು ಮನೆಯಲ್ಲಿನ ಇಬ್ಬರು ಹಿರಿಯ ಮುದುಕಿಯರಿಗೆ ಬಹಳ ಸಂತಸ ಕೊಟ್ಟವಳು. ತನ್ನ ಸಂಬಂಧದ ಹುಡುಗಿಯನ್ನು ತಂದುಕೊಳ್ಳಬೇಕೆಂಬ ಆಸೆಯು ಮುರಿದು ಬಿದ್ದುದರಿಂದ ತಿಮ್ಮಮ್ಮನಿಗೆ ಸೀತೆಯನ್ನು ಕಂಡರೆ ಅಸಹನೆ, ಅನಾದರ. ಮಹಾದೇವನ ಮೇಲಿನ ಪ್ರೀತಿಯೂ ಇದರಿಂದ ಹಿಂದೆ ಸರಿಯಿತು. ತಿಮ್ಮಮ್ಮನ ಮಗಳು ಸಾತಿ ಬೇರೆ ಪಕ್ಕೆಯಲ್ಲಿ ಚುಚ್ಚಿಕೊಂಡ ಮುಳ್ಳಿನಂತೆ ಸೀತೆಗೆ ಬಹುವಾಗಿ ಬಾಧೆ ಕೊಡುತ್ತಿದ್ದಳು. ಸೀತೆ ಒಂದು ಗಂಡು ಮಗವಿನ ತಾಯಾಗಿ, ಸಾತಿ ಗಂಡನ ಮನೆಗೆ ಹೋದ ಮೇಲೆ ಅತ್ತೆಯ ಕಾಟ ಸ್ವಲ್ಪ ಕಡಿಮೆಯಾಯಿತು.

ಊರಿನ ಅಮ್ಮನ ಗುಡಿಯ ಪೂಜಾರಿ ಸತ್ತ ಮೇಲೆ ಅವನ ಸಂಬಂಧವೆಂದು ಹೇಳಿಕೊಂಡು ಬಂದ ಸಿದ್ದ ಊರಿನಲ್ಲಿ ದಿನೇ ದಿನೇ ಪ್ರಬಲವಾಗಿ ಬೆಳೆದು ಬೇರು ಬಿಟ್ಟಿದ್ದ. ಈಗ ಅಪ್ಪಾಜಿ ಎಂಬ ಹೆಸರಿನಿಂದ ಮೆರೆಯುತ್ತಿದ್ದ. ಊರಿನಲ್ಲಿದ್ದ ಕಳ್ಳರ ಹುತ್ತಕ್ಕೂ ಇವನೇ ಪ್ರಧಾನ ಪೋಷಕ. ದೇವಾಲಯದ ಬಳಿಯೇ ಇದ್ದ ಅರುಂದಮ್ಮನ ಸಮಾಧಿಗೆ ನಿತ್ಯಪೂಜೆಗೆಂದು ಹೋಗಿ ಬರುತ್ತಿದ್ದ ಸಾಧ್ವಿ ಸೀತೆಯ ಮೇಲೆ ಈ ಪೂಜಾರಿಯ ವಕ್ರದೃಷ್ಟಿ ಬಿತ್ತು. ಮರುಳಿಗೆ ಧೂಪ ಹಾಕುವಂತೆ ಶಕುನಿ ಬುದ್ಧಿಯ ನಾರಪ್ಪಯ್ಯನ ಮಾತುಗಳು ಅವನ ಹೀನವಾದ ಆಸೆಗೆ ಒತ್ತಾಸೆ ಮಾಡಿದವು. ಪೂಜಾರಿಯ ಯಾವ ಆಮಿಷಕ್ಕೂ ಸೀತೆ ಒಳಗಾಗದೇ ಇದ್ದುದು ಅವನ ಮನಸ್ಸಿನಲ್ಲಿದ್ದ ಕಾಮಕ್ಕೆ ಕ್ರೋಧವನ್ನೂ ಬೆರೆಸಿತು. ಕಡೆಗೆ ಸೀತೆಯ ಮೇಲೆ ಮಾಟ ಮಂತ್ರಗಳ ಪ್ರಯೋಗ ನಡೆಯಿತು. ಸೀತೆ ಹಲವು ದಿನಗಳು ಮಾತುಕತೆಯಿಲ್ಲದೆ ನೆಲ ಹಿಡಿದು ಮಲಗಿದಳು. ಯಾವ ಔಷಧಿಗೂ ಅವಳ ವ್ಯಾಧಿ ತಹಬಂದಿಗೆ ಬರಲಿಲ್ಲ. ಕೊನೆಗೊಂದು ದಿನ ಕಣ್ಮುಚ್ಚಿದಳು. ಆದರೆ ಆಯುಸ್ಸು ಮುಗಿದಿರಲಿಲ್ಲ. ಶವಕ್ಕೆ ಅಗ್ನಿ ಸಂಸ್ಕಾರವಾದ ಮೇಲೆ ಹಸಿಕಟ್ಟಿಗೆ ನಿಧಾನವಾಗಿ ಹತ್ತಿಕೊಳ್ಳುವುದೆಂದು ಬಂಧುಗಳು ಮನೆಗೆ ಹೋದರು. ಆ ಕಾಲದಲ್ಲಿ ಶ್ಮಶಾನದ ಸಮೀಪದಲ್ಲೇ ಕೊಯಮುತ್ತೂರು ಪ್ರಾಂತಕ್ಕೆ ಹೋಗುವ ಹಾದಿಯಲ್ಲಿ ಭಟಜಿಯೊಬ್ಬನು ಆತನ ಸ್ನೇಹಿತನೊಂದಿಗೆ ಬರುತ್ತಿದ್ದನು. ಭಟಜಿ ಮಂತ್ರವಿದ್ಯೆಯಲ್ಲಿ ನುರಿತವನು. ಚಿತೆಯ ಮೇಲಿದ್ದ ಕಳೇಬರಕ್ಕೆ ಪ್ರಾಣವಿದೆ ಎಂದರಿತು ಭಟಜಿ ಮಾಟಪರಿಹಾರಕ ಮಂತ್ರಗಳನ್ನು ಜಪಿಸಿ ಸೀತೆಯನ್ನು ಮೇಲೇಳುವಂತೆ ಮಾಡಿದನು. ಮಂತ್ರಶಕ್ತಿಗೆ ಒಳಗಾದ ಅಪ್ಪಾಜಿ ಅರಚುತ್ತ ಓಡಿ ಬಂದು ತಾನು ಮಾಟ ಮಾಡಿ ಸೀತೆ ತಿರುಗಾಡುವ ಜಾಗದಲ್ಲಿ ಹೂಳಿದ್ದ ಬೊಂಬೆಯನ್ನು ತಂದುಕೊಟ್ಟನು. ಭಟಜಿ ಅದನ್ನು ಬೆಂಕಿಯಲ್ಲಿ ಹಾಕಿಸಿ, ಅಪ್ಪಾಜಿಯ ಹಲ್ಲುಗಳನ್ನೆಲ್ಲ ಉದುರಿಸಿ ಮುಂದೆ ಯಾರಿಗೂ ಅವನಿಂದ ಕೇಡಾಗಬಹುದಾದ ಅವಕಾಶವನ್ನು ತಪ್ಪಿಸಿದನು. ಸೀತೆಯನ್ನು ಕಂಡ ಮನೆಯ ಜನಕ್ಕೆ ಆನಂದಬಾಷ್ಪ ಸುರಿಯಿತು. ಕಳ್ಳರ ಕೂಟದ ಕಿರಿಯ ಸದಸ್ಯನಾದ ಅಮಾಸೆ ಸರ್ಕಾರದವರ ಕೈಗೆ ಸಿಕ್ಕಿದ ಮೇಲೆ ಗುಟ್ಟೆಲ್ಲ ಬಯಲಾಯಿತು. ಅಮಾಸೆಯೊಬ್ಬನ ಹೊರತು ಇಡೀ ಗುಂಪು ಸೆರೆಮನೆಗೆ ಹೋಗಬೇಕಾಯಿತು. ಉಪಾದ್ರಿಗೂ ಪೂಜಾರಿಗೂ ತಕ್ಕ ಶಿಕ್ಷೆಯಾಯಿತು. ಸಂಜವಾಡಿಯ ಜನರೆಲ್ಲಾ ಊರು ಬಿಟ್ಟರು. ಸದಾಶಿವ ದೀಕ್ಷಿತನು ಮನೆಯವರೆಲ್ಲರೊಡನೆ ಸಂಜವಾಡಿಯಿಂದ ಮೈಸೂರಿಗೆ ವಲಸೆ ಹೋದನು.

ಕಥೆ ನಡೆಯುವುದು ಚಾಮರಾಜನಗರದ ಬಳಿಯ ಸಂಜವಾಡಿಯಲ್ಲಿ. ಕಥೆಯ ಪ್ರಾದೇಶಿಕವಾದ ಹಿನ್ನೆಲೆ ಸ್ಪಷ್ಟವಾಗಿ ತಿಳಿಯುತ್ತದೆ. “ಲಂಚಕೋರರು ಅವರಿಂದುಂಟಾಗುವ ಪ್ರಮಾದಗಳು; ಗ್ರಾಮಗಳಲ್ಲಿ ಕಕ್ಷಿ ಅದರ ದೋಷಗಳು; ಮೈಸೂರ ಮುಮ್ಮಡಿ ಶ್ರೀಕೃಷ್ಣರಾಜ ಪ್ರಭುವಿನ ಆಸ್ಥಾನ, ಅವರ ಮಹತ್ತರವಾದ ಔದಾರ್ಯ; ಆಸ್ಥಾನದ ನಕಲಿ; ಹೇಳಿದ್ದನ್ನೆಲ್ಲಾ ನಂಬುವ ಗ್ರಾಮವಾಸಿಗಳು; ಪತಿವ್ರತಾ ಚರಿತ್ರೆ; ಸಹಗಮನ; ಗ್ರಾಮಗಳ ಕೊಳಚೆ; ಅತ್ತೆ ಸೊಸೆಯರ ಪರಸ್ಪರ ಕಿರುಕುಳ; ಮಠದ ಉಪಾಧ್ಯಾಯ, ಅವನ ಕ್ರೌರ್ಯ, ಬಾಲಕರಿಗೆ ಅವ ಕೊಡುವ ಶಿಕ್ಷೆ, ಅವನ ಮಹತ್ತರವಾದ ಕೃತಘ್ನತೆ, ವಿದ್ಯಾರ್ಥಿಗಳಿಗೆ ಮಾಡುವ ಕ್ರೂರವಾದ ಶಿಕ್ಷೆ, ಅದರ ಧರ್ಮಸೂಕ್ಷ್ಮ; ಕಾಪಟ್ಟ, ಅದರ ನೀಚಕೃತ್ಯಗಳು; ನಿಜವಾದ ಸೌಂದರ್ಯವನ್ನು ಸೌಂದರ್ಯವಲ್ಲವೆಂದು ಮಾಡುವ ವರ್ಣನೆ; ಪಾತಿವ್ರತ್ಯವನ್ನು ಭಂಗ ಮಾಡಲು ನಡೆಸಿದ ಅತಿ ಹೇಯವಾದ ಪ್ರಯತ್ನ; ಶಾಬರ ಪ್ರಯೋಗದ ನೀಚಕೃತ್ಯ; ಒಬ್ಬ ಐಲು ಮನುಷ್ಯನ ಹರಟೆಯಿಂದ ಹುಟ್ಟುವ ಹಾಸ್ಯ; ಒಬ್ಬ ಹುಟ್ಟು ಕಳ್ಳ ಹೇಳಿಕೊಳ್ಳುವ ಸ್ವವಿಚಾರದ ಕಥೆ; ಶ್ಮಶಾನದಲ್ಲಿ ನಡೆದ ಅತಿಭಯಂಕರವಾದ ವಿಷಯ; ಒಬ್ಬ ಮಹಾಮಂತ್ರವಾದಿ ಮಾಡಿದ ಅದ್ಭುತವಾದ ಕಾರ್ಯ; ಮತ್ತು ಅವನ ಪಾರಮಾರ್ಥಿಕತೆ; ಆದ್ಯಂತವಾಗಿರುವ ನೀತಿಯ ಸಾರಾಂಶ; ಇವೇ ಮೊದಲಾದ ಸಂಗತಿಗಳನ್ನೆಲ್ಲಾ ಆಯಾ ಸ್ಥಳಗಳಲ್ಲಿ ವಿವರಿಸಿದ್ದೇನೆ” ಎಂದು ಪುಟ್ಟಣ್ಣನವರು ಪೀಠಿಕೆಯಲ್ಲಿ ಹೇಳಿದ್ದಾರೆ. ಕಾದಂಬರಿಯ ಘಟನೆಗಳ ಅನುಪೂರ್ವಿ ಹೆಚ್ಚು ಕಡಿಮೆ ಇದೇ ಆಗಿದೆ. ಸಂಗತಿಗಳು ಕಾಲಾನುಸಾರಿಯಾಗಿಯೂ ಇವೆ.

ಮುಸುಗ ತೆಗೆಯೇ ಮಾಯಾಂಗನೆ

ಈ ಕಾದಂಬರಿಯ ಕಥೆಯ ಕಾಲವೂ ಮುಮ್ಮಡಿಯವ ಕಾಲಮಾನಕ್ಕೆ ಸೇರಿದುದೇ. ಅಪರಾಧಿಯ ಬದಲು ನಿರಪರಾಧಿಗೆ ಶಿಕ್ಷೆಯಾಗುವುದನ್ನು ತಪ್ಪಿಸಿ ಹದಗೆಟ್ಟ ಪರಿಸ್ಥಿತಿಯನ್ನು ತಿದ್ದುವುದು ಕಾದಂಬರಿಯ ವಸ್ತು. ರಾಜಾಸ್ಥಾನದ ಇಬ್ಬರು ಅಧಿಕಾರಿಗಳು ದೇಪಣ್ಣ ಮತ್ತು ಬಸಪ್ಪ ತಮ್ಮ ಕೈತಪ್ಪಿ ಹೋದ ದೌಲತ್ತು ಮರಳಿ ಕೈ ಸೇರಲು ರಾಜತಂತ್ರಗಳನ್ನು ನಡೆಸಲು ಶಕ್ತನೂ ಸಹಾಯಕನೂ ಆಗಿದ್ದಾನೆಂಬ ಕಾರಣದಿಂದ ದೊರೆಗಳಿಗೆ ದೇಪಣ್ಣನಲ್ಲಿ ಹೆಚ್ಚು ವಿಶ್ವಾಸ. ದೇಪಣ್ಣನ ಸಂಬಂಧ ಬೆಳೆಸಿದ್ದ ನಾಗರತ್ನಳೆಂಬ ವೇಶ್ಯೆಯ ಮೇಲೆ ಬಸಪ್ಪನ ಕಣ್ಣು ಬೀಳುತ್ತದೆ. ಅವನ ಪ್ರಯತ್ನ ಫಲಿಸುತ್ತದೆ. ಈತನ ದೌರ್ಬಲ್ಯ ದೊರೆಗಳಿಗೆ ತಿಳಿದು ಬಸಪ್ಪನಿಗೆ ಅವರಿಂದ ಭೀಮಾರಿಯಾಗುತ್ತದೆ. ಬಸಪ್ಪ ಹಾವಿನಂತೆ ಕೆರಳಿ ಛಲ ಸಾಧಿಸಲುದ್ಯುಕ್ತನಾಗುತ್ತಾನೆ.

ಇಂಗ್ಲಿಷರು ಟಿಪ್ಪುವನ್ನು ಮೋಸದಿಂದ ಸೋಲಿಸಿದಾಗ ಇಂಗ್ಲಿಷರಿಗೆ ನೆರವಾದ ಮೀರ್‌ ಸಾಧಕನನ್ನು ಎದುರಿಸಿ ಕೊಂದ ತುಕಡಿಯ ಪಡೆಗೆ ಸೇರಿದ್ದ ಒಬ್ಬ ಮರಾಠಾವೀರ ಹನುಮಂತ ರಾವ್ ರಣನವರೆ. ಬಾಜೀರಾವ್ ಪೇಶ್ವೆ ಮೈಸೂರು ದೇಶದೊಳಗೆ ಬಂದಾಗ ಅವನನ್ನು ಸೆರೆ ಹಿಡಿಯಲು ಇಂಗ್ಲಿಷರು ಮೈಸೂರಿನ ದೊರೆಗಳ ಸಹಾಯವನ್ನು ಬಯಸುತ್ತಾರೆ. ಬಕ್ಷಿ ರಾಮರಾವ್ ಮತ್ತು ಬಕ್ಷಿ ಭೀಮರಾವ್ ಅವರು ದೊರೆಯ ಅಪ್ಪಣೆಯಂತೆ ಈ ಕೆಲಸವನ್ನು ಆಗ ಮಾಡುತ್ತಾರೆ. ಆ ಪಡೆಯಲ್ಲಿ ಹನುಮಂತರಾವ್ ರಣನವರೆ ಕೂಡ ಇದ್ದನು. ಹಲವು ಯುದ್ಧಗಳಲ್ಲಿ ಭಾಗವಹಿಸಿ ಜಯ ಲಭಿಸಲು ಈತ ಕಾರಣನಾದರೂ ಈತನಿಗೆ ತಕ್ಕ ಸನ್ಮಾನ ಸಿಗದೆ ಸಿಡಿಮಿಡಿಯಾಗಿರುತ್ತಾನೆ. ಯುದ್ಧಗಳಲ್ಲಿ ಹೋರಾಡುವಾಗ ಹೊಡೆದ ಕೊಳ್ಳೆಮಾಲು ಇವನ ಬಳಿ ಸಾಕಷ್ಟು ಸಂಗ್ರಹವಾಗಿರುತ್ತದೆ. ಯುದ್ಧ ಮುಗಿದ ಮೇಲೆ ಈತ ಸಾತಾರೆಯ ದುರ್ಗಾಬಾಯಿ ಎಂಬಾಕೆಯನ್ನು ಮದುವೆಯಾಗಿ ಮೈಸೂರಿನಲ್ಲಿ ವಾಸವಾಗಿರುತ್ತಾನೆ. ಅಪ್ರಮೇಯ ಎಂಬುವ ತರುಣ ಈತನ ಆಡಳಿತಕ್ಕೆ ಸಂಬಂಧಿಸಿದ ಕಾಗದ ಪತ್ರಗಳ ವ್ಯವಹಾರವನ್ನು ನೋಡಿಕೊಳ್ಳುವ ನಂಬಿಕೆಗೆ ಅರ್ಹನಾದ ವ್ಯಕ್ತಿ. ಇಂಗ್ಲಿಷ್ ಸರದಾರರೊಡನೆ ಬಳಕೆಯಿರುವ ವ್ಯಕ್ತಿಗಳೊಡನೆ ದೇಪಣ್ಣ ಸಂಪರ್ಕ ಬೆಳೆಸಲುದ್ಯುಕ್ತನಾಗುತ್ತಾನೆ. ಹನುಮಂತರಾವ್ ರಣನವರ ಅವರಲ್ಲೊಬ್ಬ.

ದೇಪಣ್ಣನನ್ನು ಈಗಿನ ಸ್ಥಾನದಿಂದ ಉರುಳಿಸಬೇಕಾದರೆ ರಣನವರೆಯನ್ನು ಆ ಸಂಚಿಗೆ ಬಲಿಪಶುವನ್ನಾಗಿಸಿಕೊಳ್ಳಬೇಕೆಂದು ಬಸಪ್ಪ ಮತ್ತು ಅವನ ಅನುಯಾಯಿಗಳು ತೀರ್ಮಾನಿಸುತ್ತಾರೆ. ಇವರಿಗೆ ಇಂಗ್ರೇಜಿ ಹಯಾತ್‌ಖಾನ್ ಎಂಬ ಭಂಡನಾದ ಸುಲಿಗೆಗಾರನ ನೆರವು ಸಿಗುತ್ತದೆ. ಪೇಶ್ವೆಯಿಂದ ಕಸಿದುಕೊಂಡ ಕಳ್ಳಮಾಲನ್ನು ಒಪ್ಪಿಸದಿದ್ದರೆ ಇಂಗ್ಲಿಷ್ ಸರಕಾರದವರ ಶಿಕ್ಷೆಗೊಳಗಾಗಬೇಕಾಗುತ್ತದೆ ಎಂಬ ಪ್ರವಾದವನ್ನು ಇವರುಗಳು ಹುಟ್ಟಿಸುತ್ತಾರೆ. ಹನುಮಂತರಾವ್ ವೀರನಾದರೂ ಶ್ರೀಮಂತನಾದರೂ ಚಾತುರ್ಯ ಸಂಬಂಧವಾದ ಲೌಕಿಕ ವಿಷಯಗಳಲ್ಲಿ ಮುಗ್ಧನಾದುದರಿಂದ ಈ ಪ್ರವಾದ ಅವನನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಡವುತ್ತದೆ. ರತ್ನಗಳ ಪರೀಕ್ಷೆಯಲ್ಲಿ ನುರಿತವನಾದ ಅವನನ್ನು ನಂಬಿಸಿ ಒಂದುದಿನ ಒಂದು ರಹಸ್ಯ ಸ್ಥಳಕ್ಕೆ ಕರೆದೊಯ್ದು ಹಿಂತಿರುಗುವ ಕಾಲದಲ್ಲಿ ಪುಂಡರು ಮುತ್ತುವಂತೆ ಮಾಡುತ್ತಾರೆ. ಕೊಳ್ಳೆ ಮಾಲಿನ ಸಂಬಂಧದಲ್ಲಿ ಭಯಪಡುತ್ತಿದ್ದ ರಣನವರೆ ಸದಾಕಾಲವೂ ಅದೇ ಆತಂಕದಲ್ಲಿ ತೊಳಲುತ್ತಿದ್ದುದರಿಂದ ತನ್ನನ್ನು ಇಂಗ್ಲಿಷ್ ಸರಕಾರದವರು ಬಂಧಿಸುತ್ತಿದ್ದಾರೆಂದು ತಿಳಿದು ಸಾಧ್ಯವಾದಷ್ಟು ಜನರನ್ನು ಹೊಡೆದು ಓಡಿ ಹೋಗುತ್ತಾನೆ. ಅವನ ಹೆಣ ಕಾಲುವೆಯೊಂದರಲ್ಲಿ ದೊರಕಿತೆಂಬ ಸುದ್ದಿ ಹರಡುತ್ತದೆ. ರಣನವರೆಯ ಎಡದ ಕಾಲಿನಲ್ಲಿ ಹೆಬ್ಬೆರಳು ಮಧ್ಯದಲ್ಲಿ ಕುಯ್ದು ತಗ್ಗಿದಂತೆ ಇತ್ತೆಂದೂ ಈ ಹಣದಲ್ಲಿ ಆ ಚಿಹ್ನೆ ಇಲ್ಲವೆಂದೂ ಅಪ್ರಮೇಯ ಮಾಡಿದ ಸೂಚನೆ ವಿಶೇಷವಾಗಿ ಗಮನಿಸಲ್ಪಡುವುದಿಲ್ಲ. ರಣನವರೆಯ ಪತ್ನಿ ದುರ್ಗಾಬಾಯ ಮಾಡಿದುದೆಂದು ಹೇಳಲಾದ ಕೊಲೆಯ ಆರೋಪದಿಂದ ಕೊಲೆಯ ಸಂಚು ದೇಪಣ್ಣನ ಮೇಲೆ ಬರುತ್ತದೆ. ಆಸ್ಥಾನದಲ್ಲಿ ಉದ್ಯೋಗ ಕೊಡಿಸುತ್ತೇನೆಂದು ದೇಪಣ್ಣ ಹೇಳಿ ಐನೂರು ರೂಪಾಯಿ ಪಡೆದದ್ದಾಗಿಯೂ ದೇಪಣ್ಣನಿಂದ ಯಾವುದೇ ಕೆಲಸ ದೊರಕದಿದ್ದಾಗ ಹಣವನ್ನು ಹಿಂತಿರುಗಿಸೆಂದು ತನ್ನ ಪತಿ ಕೇಳಿದನೆಂದೂ ಅದಕ್ಕಾಗಿ ದೇಪಣ್ಣನಿಂದ ತನ್ನ ಗಂಡನ ಕೊಲೆಯಾಯಿತೆಂದೂ ಆ ಆಪಾದನೆಯಲ್ಲಿರುತ್ತದೆ. ಈ ಆಪಾದನೆಗೆ ಹಲವು ಸಿದ್ಧ ಸಾಕ್ಷ್ಯಗಳ ದೊರಕಿ ದೇಪಣ್ಣ ಮತ್ತು ಅವನ ಗೆಳೆಯರು ಸೆರೆಮನೆಗೆ ಹೋಗಬೇಕಾಗಿ ಬರುತ್ತದೆ.

ಅಪ್ರಮೇಯ ಮುಂದೆ ಕಾರ್ಯೋದ್ಯುಕ್ತನಾಗುತ್ತಾನೆ. ತನ್ನ ಒಡೆಯನಿಗಾಗಿ ದೇಶ ಸುತ್ತುತ್ತ ಅಲೆಯುತ್ತಾನೆ. ಹಲವು ದಿನಗಳ ಶ್ರಮದ ನಂತರ ಆತ್ಮಾರಾಂ ಬಾವಾಜಿ ಎಂಬಾತನಿಂದ ತನ್ನ ಕಾರ್ಯ ಕೈಗೂಡುತ್ತದೆಂಬ ಸೂಚನೆ ಸಿಗುತ್ತದೆ. ನರಬಲಿ ಕೊಡುವ ಕರಾಟಿಗರ ಗುಂಪಿಗೆ ಸಿಕ್ಕಿ ತಪ್ಪಿಸಿಕೊಂಡು, ಜನ್ನೈಯ್ಯಂಗಾರಿ ಎಂಬ ವ್ಯಕ್ತಿಯಂತೆ ನಟಿಸಿ ತಾನು ಅಪ್ರಮೇಯನ ವೈರಿ ಎಂದು ಹೇಳಿಕೊಂಡು ಬಸಪ್ಪನ ಕೂಟಕ್ಕೆ ಸೇರಿ ಗುಟ್ಟುಗಳನ್ನು ತಿಳಿಯುತ್ತಾನೆ. ನ್ಯಾಯಾ ಸ್ಥಾನದಲ್ಲಿ ಮರುವಿಚಾರಣೆಗೆ ಏರ್ಪಾಟಾಗುತ್ತದೆ. ಗೋಷಾದಲ್ಲಿರುವ ರಣನವರೆಯ ಪತ್ನಿ ದುರ್ಗಾಬಾಯಿ ಎಂದು ಹೇಳಲಾದ ಹೆಂಗಸಿನ ಹೇಳಿಕೆಗೆ ಬೆಲೆ ಬರುತ್ತದೆಯೇ ಹೊರತು ಅಪ್ರಮೇಯನ ಪ್ರಯತ್ನವೆಲ್ಲ ನಿರುಪಾಯವಾಗುತ್ತದೆ. ಆ ಹೊತ್ತಿಗೆ ಸರಿಯಾದ ರಣನವರೆ ತನ್ನ ಹೆಂಡತಿಯೊಡನೆ ನ್ಯಾಯಾಲಯಕ್ಕೆ ಬರುತ್ತಾನೆ. ಮುಸುಕು ಹಾಕಿದ್ದಾಕೆ ದುಷ್ಟರ ಕೂಟಕ್ಕೆ ಸೇರಿದ್ದ ಚೆನ್ನಿ ಎಂಬ ಹೆಂಗಸು ಎಂದು ತಿಳಿದು ಬರುತ್ತದೆ. ಈ ಮಾಯಾಂಗನೆಯ ಮುಸುಕು ತೆಗೆದಾಗ ಅಪ್ರಮೇಯನ ಪ್ರಯತ್ನ ಸಫಲವಾಗುತ್ತದೆ. ನಿಜಾನಿಜಗಳು ಎಲ್ಲರ ಅರಿವಿಗೆ ಬರುತ್ತವೆ. ಬಸಪ್ಪ ಮತ್ತು ಅವನ ಗೆಳೆಯರಿಗೆ ಸೆರೆಮನೆಯೇ ಗತಿಯಾಗುತ್ತದೆ. ದೇಪಣ್ಣನ ಮೇಲಿರುವ ಅಪವಾದ ತೊಲಗಿ ಸೆರೆಮನೆಯಿಂದ ಬಿಡುಗಡೆಯಾಗುತ್ತದೆ. ರಾಜಾಸ್ಥಾನದ ಗೌರವಕ್ಕೆ ಹನುಮಂತರಾವ್ ಮತ್ತು ಅಪ್ರಮೇಯ ಪಾತ್ರರಾಗುತ್ತಾರೆ.

‘ಮುಸುಗ ತೆಗೆಯೇ ಮಾಯಾಂಗನೆ’ಯ ಹೆಸರು ಈ ಕಾದಂಬರಿ ಪತ್ತೇದಾರಿ ಕಥೆಯನ್ನೋ ರಂಜನೀಯವಾದ ಸರಸ ಕಥೆಯನ್ನೋ ಹೇಳುತ್ತದೆ ಎನಿಸುವಂತೆ ಮಾಡುತ್ತದೆ. ಇಲ್ಲಿ ಪತ್ತೇದಾರಿ ಎಳೆಯಿರುವುದೇನೋ ನಿಜವೇ. ಜೊತೆಗೆ ಕಾದಂಬರಿಯ ತೆಳುವಾದ ಕಥೆಯ ಹಂದರದಲ್ಲಿ ರಾಜಕೀಯದ ಎಳೆಗಳಿವೆ. ಬ್ರಿಟಿಷರ ಕೈಯಿಂದ ಮೈಸೂರು ಅರಸೊತ್ತಿಗೆಯನ್ನು ಬಿಡಿಸಿ ಪುನಃ ಅದನ್ನು ಮುಮ್ಮಡಿಯವರಕ್ಕೆ ಸೇರುವಂತೆ ಮಾಡಲು ಬ್ರಿಟಿಷ್ ಸರದಾರರನ್ನು ತಮ್ಮ ಕಡೆಗೆ ಒಲಿಸಿಕೊಳ್ಳುವ ಒಂದು ಹವಣು ಕಾಣುತ್ತದೆ. ಕಥೆ ನಡೆಯುವುದು ಮೈಸೂರಿನಲ್ಲಿ. ಮುಮ್ಮಡಿಯವರ ರಾಜಾಸ್ಥಾನವೇ ಕಥೆಯ ಮೂಲವೇದಿಕೆ. ಅಂದಿನ ಮೈಸೂರಿನ ರಾಜಕೀಯ ಸ್ಥಿತಿಯಲ್ಲಿನ ಒಳಜಗಳಗಳು, ಅಸೂಯೆ, ಪಿತೂರಿ ಮೊದಲಾದ ಎಲ್ಲ ಗೊಂದಲಗಳೂ ಸ್ಪಷ್ಟವಾಗಿ ಚಿತ್ರಿತವಾಗಿದೆ. ಸಾಮಾಜಿಕ ವಿವರಗಳು ಪ್ರಾಮಾಣಿಕವಾಗಿ ಚಿತ್ರಿತವಾಗಿವೆ. ಕಥೆಯ ಮುಖ್ಯಪಾತ್ರವಾದ ಅಪ್ಪಮೇಯನ ನೈತಿಕ ಶಕ್ತಿಯೊಂದೇ ಅವನ ಬಲ. ಪುರುಷ ಪ್ರಯತ್ನದ ಪ್ರತೀಕವಾಗಿ ಅಪ್ರಮೇಯ ಇಲ್ಲಿ ಕಾಣಿಸಿಕೊಳ್ಳುತ್ತಾನೆ.

 

[1]ಡಿ.ವಿ.ಗುಂಡಪ್ಪ; ಕನ್ನಡ ಕಾದಂಬರಿ ಪ್ರವರ್ತಕರು ಎಂ.ಎಸ್. ಪುಟ್ಟಣ್ಣನವರು; ಕನ್ನಡ ನುಡಿ, ಸಂಪುಟ ೨೬, ಸಂಚಿಕೆ ೬ ;ಜೂನ್ ೧೯೬೩: ಪು. ೧೨೮.