ರಾಜಾಸ್ಥಾನದ ಚಿತ್ರಣ

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮೈಸೂರು ಕವಿ, ಪಂಡಿತ, ಕಲಾವಿದರಿಗೆ ಹೆಚ್ಚು ಕಡಿಮೆ ಏಕಮಾತ್ರ ಆಶ್ರಯಸ್ಥಾನವಾಗಿ ಪ್ರಕಾಶಗೊಂಡಿತು. ಈ ಗುಣ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮೊದಲ ಬಾರಿ ಕಂಡದ್ದು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ. ಅವರು ಸ್ವತಃ ಕವಿಗಳೂ ಕವಿ ಪೋಷಕರೂ ಆಗಿದ್ದವರು. ಜೊತೆಗೆ ಸಾಂಸ್ಕೃತಿಕವಾದ ಒಂದು ಪರಂಪರೆಯನ್ನು ಮುಂದುವರಿಸುವ ಕೆಲಸ ಮುಮ್ಮಡಿಯವರಿಂದ ಸತತವಾಗಿ ನಡೆಯಿತು. ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ನಿರ್ಮಾಣ, ನಂಜನಗೂಡಿನ ನಂಜುಡೇಶ್ವರ ದೇವಾಲಯ ಹಾಗೂ ಚಾಮುಂಡಿ ಬೆಟ್ಟದ ಮೇಲೆ ಚಾಮುಂಡೇಶ್ವರಿ ಅಮ್ಮನವರ ಗುಡಿಯ ಹೊರ ಪ್ರಾಕಾರದ ವಿಸ್ತರಣೆ ಇವುಗಳು ಜರುಗುತ್ತಿದ್ದವು. ದಾನಧರ್ಮಗಳಲ್ಲಿ ಪ್ರಭುಗಳ ಕೈ ಬಹು ಧಾರಾಳ ಎಂಬುದು ಜನಜನಿತವಾಗಿತ್ತು.

ಆದರೆ ಆಡಳಿತದಲ್ಲಿನ ಸ್ಥಿತಿ ತೀರ ವಿರುದ್ಧವಾಗಿತ್ತ. ಬ್ರಿಟಿಷರು ಕೇಳಿ ಕೇಳಿದಾಗೆಲ್ಲ ಯುದ್ಧಕ್ಕೆಸಹಾಯ ಮಾಡಿ ಸೈನ್ಯದ ವೆಚ್ಚ ಮಿತಿ ಮೀರಿತ್ತು. ಕ್ಷಾಮದ ಹಾವಳಿಯೂ ಕಾಡಿತ್ತು. ಕಲಾ ಸಾಹಿತ್ಯಗಳಿಗೆ ಪ್ರಧಾನ ಪೋಷಕರಾಗಿದ್ದುದು ವೆಚ್ಚ ಹೆಚ್ಚಲು ಇನ್ನೊಂದು ಕಾರಣವಾಗಿತ್ತು. ಈ ಎಲ್ಲ ಕಾರಣಗಳಿಂದ ಅವರು ಸಂಸ್ಥಾನದ ಆರ್ಥಿಕ ಹೊಣೆಯನ್ನು ನಿರ್ವಹಿಸಲು ಅಶಕ್ತರೆಂಬ ಆಪಾದನೆಯನ್ನು ಹೊತ್ತು ರಾಜ್ಯಕ್ಕೆ ಎರವಾಗಬೇಕಾಯಿತು. ದೌಲತ್ತು ಅವರ ಕೈ ತಪ್ಪಿ ಹೋದದ್ದು ಸಾಮಾನ್ಯರಿಗೆ ಯಾವ ಭೇದವನ್ನೂ ಕಾಣಿಸಿಲ್ಲ ಬಿಂಕ ಬಿಗುಮಾನಗಳಿಲ್ಲದೆ ಸಾರ್ವಜನಿಕರೊಡನೆ ಬೆರೆಯುತ್ತಿದ್ದುದರಿಂದ ಮುಮ್ಮಡಿಯವರಿಗೆ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ದೊರೆತಿತ್ತು. ರಾಜನೆಂದರೆ ಪ್ರತ್ಯಕ್ಷ ದೇವರು ಎಂಬ ಭಾವನೆ ಪ್ರಜೆಗಳಲ್ಲಿತ್ತು. ಇಂಥ ದೊರೆಯ ಸುತ್ತ ಸಮಯ ಸಾಧಕರ, ಕೈಲಾಗದವರ ಲೋಲುಪರ, ಉದಾಸೀನರ ಪರಿವಾರ ಸಂತೋಷಕರವಾದ ಪರಿಸ್ಥಿತಿಯ ದ್ಯೋತವಾಗಿರಲಿಲ್ಲ.

ದೌಲತ್ತು ತಮ್ಮ ಕೈ ತಪ್ಪಿ ಕಂಪನಿ ಸರ್ಕಾರದವರ ಕಯ ಸೇರಿರುವುದು ಮುಮ್ಮಡಿಯವರನ್ನು ಬಹುವಾಗಿ ಕೊರೆಯುವ ಅಂಶ. ಹೇಗಾದರೂ ಅದನ್ನು ಪಡೆದು ಪ್ರಜೆಗಳಲ್ಲಿ, ತಮ್ಮ ಸಮಾನರಾದ ರಾಜವಾಡೆಯವರಲ್ಲಿ ತಮ್ಮ ಗೌರವವನ್ನುಳಿಸಿಕೊಳ್ಳಬೇಕೆಂಬುದು ಅವರ ವಿಚಾರ. ಬ್ರಿಟಿಷ್ ಸರದಾರರಲ್ಲಿ ಬಳಕೆಯಿರುವವರ ಸ್ನೇಹ ಅದಕ್ಕೆ ಅಗತ್ಯವಾಗಿತ್ತು. ಆದರೆ ಸಮರ್ಥ ವ್ಯಕ್ತಿಗಳು ರಾಜರ ಬಳಿ ಸುಳಿಯಲೂ ಆಗದಂತೆ ಸಮಯಸಾಧಕರ ವ್ಯೂಹ ರಚನೆಯಾಗಿತ್ತು. ಇದು ರಾಜರಿಗೂ ತಿಳಿದ ವಿಷಯವೇ ಆಗಿತ್ತು.

ರಾಜ್ಯದಲ್ಲಿ ನಡೆಯುತ್ತಿರುವ ಕಳ್ಳತನಗಳನ್ನು ಅಡಗಿಸಲಾಗಲೀ ಕಳ್ಳರನ್ನು ಹಿಡಿಯ ಲಾಗಲೀ ಆಗದೆ ಅಧಿಕಾರಿಗಳು ಅಶಕ್ತರಾಗಿರುವುದು (ಮುಸುಗ ತೆಗೆಯೇ ಮಾಯಾಂಗನೆ, ಪು. ೮೩), ಹಲವೆಡೆ ಕಳ್ಳರಿಗೆ ಅಧಿಕಾರಗಳೇ ಒತ್ತಾಸೆಯಾಗಿರುವುದು (ಮಾಡಿದ್ದುಣ್ಣೋ ಮಹಾರಾಯ, ಪು. ೧೮೩), ಅಂಥ ಅಧಿಕಾರಿಗಳು ಅರಮನೆಯಲ್ಲಿ ರಾಜಪೂಜ್ಯತೆಯನ್ನು ಹೊಂದಿರುವುದು (ಮಾಡಿದ್ದುಣ್ಣೋ ಮಹಾರಾಯ ಪು.೩೧) ಇತ್ಯಾದಿ ಸಂಗತಿಗಳಿಂದ ರಾಜಾಸ್ಥಾನದ ವಿಲಕ್ಷಣ ಪರಿಸ್ಥಿತಿ ತಿಳಿಯುತ್ತದೆ. ಚಾಮರಾಜನಗರದ ಅಮೀಲನಂತಹ ಧೂರ್ತನನ್ನು ರಾಜರು ನಂಬಿದ್ದು ನಿಜಾನಿಜಗಳನ್ನರಿಯಲಾಗದ ರಾಜಸ್ಥಾನಾದ ಸ್ಥಿತಿಯನ್ನು ಗುರುತಿಸುತ್ತದೆ. ಕುತಂತ್ರಿಗಳು ನಟನೆಯಿಂದ ರಾಜರ ಅಂತರಂಗದ ಸಚಿವರಾಗುತ್ತಿದ್ದ ಸ್ಥಿತಿಯಲ್ಲಿ ಅರಸೊತ್ತಿಗೆಯಲ್ಲಿನ ವ್ಯಂಗ್ಯವಿದೆ. ತಮ್ಮ ಆಸ್ಥಾನದ ಇಬ್ಬರ ನಡುವಿನ ಕಲಹದ ಮೂಲವನ್ನು ಗುರುತಿಸಲು ಸೋತಿದ್ದು, ತಪ್ಪು ತಿದ್ದಲೂ ಆಗದುದು. ಜಾತಿಯ ಗಲಭೆಗಳನ್ನು ತಡೆಹಿಡಿಯಲಾಗದುದು ಮತ್ತು ವ್ಯಕ್ತಿಗಳ ಗುಣಗಳನ್ನು ಇಡೀ ಜಾತಿಗೇ ಆರೊಪಿಸುವುದು ಈ ಎಲ್ಲ ರೀತಿಗಳಲ್ಲೂ ಪ್ರಭುತ್ವ ಎಡವುತ್ತಿರುವುದು ಸ್ಪಷ್ಟ. ಜೊತೆಗೆ ಗುಣಮನ್ನಣೆಯಲ್ಲೂ ತಡವಾಗುತ್ತಿರುವುದು (‘ಮಾಡಿದ್ದುಣ್ಣೋ ಮಹಾರಾಯ. ಪು.೨೫) ಇನ್ನೊಂದು ದೌರ್ಬಲ್ಯ.

ವಿದ್ವಾಂಸರಿಗೆ, ಪಂಡಿತರಿಗೆ, ಕಲಾಸಕ್ತರಿಗೆ, ರಾಜಕಾರಣದಲ್ಲಿ ಆಸಕ್ತಿಯಾಗಲೀ ಸಾಮರ್ಥ್ಯವಾಗಲೀ ಇಲ್ಲ. ರಾಜಕಾರಣದಲ್ಲಿ ತೊಡಗಿದವರಿಗೆ ಸ್ವಾರ್ಥ, ಅಸೂಯೆಗಳು ಮೈಗಂಟಿವೆ. ಈ ಬಿಕ್ಕಟ್ಟಿನಲ್ಲಿ ರಾಜರು ಒಂದು ಕಥೆ ಅತ್ಯುಜ್ವಲ ವ್ಯಕ್ತಿತ್ವದವರಾಗಿದ್ದಾರೆ, ಇನ್ನೊಂದೆಡೆ ಸೋತು ಕೈ ಚೆಲ್ಲಿದ್ದಾರೆ.

ಇಷ್ಟು ಸಾಲದೆಂಬಂತೆ ರಾಜರೊಡನೆ ಆತ್ಮೀಯರಾಗಿದ್ದು, ರಾಜಕಾರ್ಯ ಸಮರ್ಥರಾಗಿರುವವರಲ್ಲಿ ನೈತಿಕವಾದ ಗಟ್ಟಿತನವಿಲ್ಲ. ರಾಜರ ಅಂತರಂಗಕ್ಕೆ ಸೇರಿದ ದೇಪಣ್ಣ ಶಕ್ತನಾದವ. ಆದರೆ ಚಾಪಲ್ಯಗಳಿಗೆ ಬಲಿಯಾದ ವಿಟಪುರುಷ. ಅವನು ನೆಚ್ಚಿರುವ ನಾಗರತ್ನಾಸಾನಿಯ ಇನ್ನೊಬ್ಬ ವಿಟ ಎದುರುಪಕ್ಷಕ್ಕೆ ಸೇರಿದವನು. ದೇಪಣ್ಣನ ಸ್ನೇಹಿತ ರಣನವರ ಲೂಟಿ ಮಾಲು ಹೊಂದಿರುವವನು. ರತ್ನಪಡಿ ವ್ಯವಹಾರದಲ್ಲಿ ಆಸಕ್ತಿ ಹೊಂದಿದವನು. ಕಾನೂನಿಗೆ ಇಂಥ ಚಟುವಟಿಕೆಗಳು ವಿರುದ್ಧವಾದುವು. ಇದರ ಮೇಲೆ ಅವನಿಗೆ ಧೈರ್ಯವಾಗಿ ದಕ್ಕಿಸಿಕೊಳ್ಳುವ ಬುದ್ಧಿ ಚಾತುರ್ಯಗಳು ಇಲ್ಲದಿರುವುದು ಪರಿಸ್ಥಿತಯ ಇನ್ನೊಂದು ಮುಖವನ್ನು ವಿಡಂಬಿಸುವಂಥದು. ತಾನು ಮಾಡಿದ್ದು ಅಪರಾಧ ಎಂದು ರಣನವರೆಗೆ ತಿಳಿಯದೆ ಇಲ್ಲ. ಅವನಿಗೆ ಕೊಳ್ಳೆಯಲ್ಲಿ ಲೋಭ, ಆದರೆ ಸಿಕ್ಕಿಕೊಳ್ಳುವ ಭಯ. ಜವಾಹಿರು ಪರೀಕ್ಷೆಯಲ್ಲಿ ರಣನವರೆ ಸೋಲುವುದು, ದೇಶತ್ಯಾಗ ಮಾಡುವುದು ಸಹ ಈ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗಿದೆ. ರಣನವರೆಗೆ ಅಪ್ರಮೇಯದ ಬೆಂಬಲ ಸಿಕ್ಕಿದಂತೆ ಮುಮ್ಮಡಿಯವರಿಗೆ ಯಾರೂ ಇಲ್ಲ. ಸ್ವತಃ ರಣನವರೆಯೂ ಅಪ್ರಮೇಯನ ಸಾಮರ್ಥ್ಯವನ್ನು ಪೂರ್ಣ ತಿಳಿಯದವನು. ಅದೇ ರೀತಿ ರಾಜಾಸ್ಥಾನವೂ ತನ್ನ ನಿಷ್ಠಾವಂತ ಸೇವಕರನ್ನು ಗುರುತಿಸುವುದರಲ್ಲಿ ಸೋಲುತ್ತದೆ. ಸಾಮಾನ್ಯ ಜನರ ದ್ವೇಷಾಸೂಯೆಗಳು ಮೇಲಿನ ವಲಯಗಳಲ್ಲಿ ರಾಜಕಾರಣವನ್ನು ಹೇಗೆ ಕಲಕಬಹುದು ಎಂಬುದು ಸ್ಪಷ್ಟ ನಿರೂಪಿತವಾಗಿವೆ. ದೇಪಣ್ಣ, ಬಸಪ್ಪ ಮುಂತಾದವರ ಜಗಳದಲ್ಲಿ ಹಯಾತ್‌ಖಾನನ ಬೆಂಬಲ ದೊರೆಗಳ ವಿರುದ್ಧ ಪಕ್ಷಕ್ಕೇ ಸಲ್ಲುತ್ತದೆ. ಈ ಎಲ್ಲ ದಿವ್ಯಗಳ ನಡುವೆ ದೊರೆತನ ನಡೆಸುವುದು ಎಂಥ ತೊಡಕಿನ ಕಾರ್ಯ ಎಂದು ಬೇರೆ ಹೇಳಬೇಕಿಲ್ಲ. ಒಳ್ಳೆಯ ಮನಸ್ಸಿರುವವರಿಗೆಲ್ಲ ಒಂದು ಬಗೆಯ ಮಿತಿಗಳು ಅಂಟಿಕೊಂಡಿವೆಯೇನೋ ಎಂಬಂತೆ ಭಾಸವಾಗುತ್ತದೆ. ರಾಜ್ಯವನ್ನು ಕಾಪಾಡಿಕೊಳ್ಳಲು, ಮಿತಿಮೀರಿದ ಒಳ್ಳೆಯತನದಿಂದಲೇ ಸೋತ ದೊರೆಯ ಈ ಸೋಲು ಪ್ರಾತಿನಿಧಿಕ ಎಂಬ ಅನಿಸಿಕೆಯುಂಟಾಗುತ್ತದೆ. ಪ್ರಭುತ್ವ ಕೂಡ ಸ್ಥಿರತೆಗೆ ಎರವಾಗುತ್ತಿದ್ದುದನ್ನು ಪುಟ್ಟಣ್ಣನವರು ಹೀಗೆ ಹೇಳಿದ್ದಾರೆ: “ಒಂದೊಂದು ವೇಳೆ ಗಾಳಿಗೆ ಹಿಡಿದ ದೀಪದಂತೆ ಚಿತ್ತ ಚಂಚಲವಾದರೂ ಕೊನೆಯಲ್ಲಿ ಸರಿಯಾದ ದಾರಿಯಲ್ಲಿ ನಿಲ್ಲುತ್ತಾ ಇದ್ದದ್ದು ಕೃಷ್ಣರಾಜ ಒಡೆಯರ ಪೂರ್ವಾರ್ಜಿತ ಪುಣ್ಯದೆಂದು ಹೇಳಬೇಕು” (ಮುಸುಗ ತೆಗೆಯೇ ಮಾಯಾಂಗನೆ, ಪು.೭೭).

ಮುಮ್ಮಡಿಯವರ ಪಾತ್ರ ಮೂರು ಕಾದಂಬರಿಗಳಲ್ಲೂ ಹಿನ್ನೆಲೆಯನ್ನು ಒದಗಿಸುವ ಒಂದು ಸಮರ್ಥ ಪಾತ್ರ. ಅವರ ಕಲ್ಪವೃಕ್ಷದಂತಹ ಔದಾರ್ಯ, ವಿದ್ವತ್ಪಕ್ಷಪಾತ, ಆಶ್ರಿತರಲ್ಲಿ ಮಮತೆ, ಶಾಸ್ತ್ರ, ಪಾಂಡಿತ್ಯ, ಕಲೆ, ಸಾಹಿತ್ಯಗಳಿಗೆ ಮನ್ನಣೆ, ಆತ್ಮೀಯ ವ್ಯವಹರಣೆಗಳು ಅವರನ್ನು ಅಂತಃಕರುಣೆಯನ್ನಾಗಿ ಚಿತ್ರಿಸಿವೆ. ಹಲವು ಶಾಸ್ತ್ರಗಳಲ್ಲಿ ಪಳಗಿದ ಶೇಷಯ್ಯ, ವಿಲಕ್ಷಣ ಸಂಗತಿಗಳಲ್ಲಿ ಶಕ್ತಿ ಇದ್ದ ಹಗಲುವೇಷದ ಕೃಷ್ಣಯ್ಯ ಮುಂತಾದವರ ವಿವರಗಳು ರಂಜನೀಯವಾಗಿವೆ. ರಾಜರ ಸಾಮರ್ಥ್ಯಾಸಾಮರ್ಥ್ಯಗಳನ್ನು ಪುಟ್ಟಣ್ಣನವರು ದಟ್ಟ ವಿವರಗಳೊಂದಿಗೆ ಚಿತ್ರಿಸುತ್ತಾರೆ. ರಾಜಾಸ್ಥಾನದಲ್ಲಿನ ಸಮಯಸಾಧಕರಿಂದ ಹಿಡಿದು ನಿಜವಾದ ರಾಜಭಕ್ತರವರೆಗೂ ವಿವಿಧ ಜನಗಳ ಪರಿಚಯ ಇಲ್ಲಿದೆ. ಸಾಮಾನ್ಯ ಜನಗಳಲ್ಲಿ ರಾಜಕೀಯರ ಒಂದು ಅರಿವು ಸಾಮಾನ್ಯವಾಗಿ ಇಲ್ಲ. ಅಂಥದೇನಿದ್ದರೂ ನಮಗೆ ಕಾದಂಬರಿಯಲ್ಲಿ ಪುಟ್ಟಣ್ಣನವರು ನಿರೂಪಕರಾಗಿ ತಿಳಿಸುವ ವಿವರಗಳಿಂದ ಮಾತ್ರ ತಿಳಿಯುತ್ತದೆ.

ಪುಟ್ಟಣ್ಣನವರ ಕಾದಂಬರಿಗಳಷ್ಟು ಸಮರ್ಥವಾಗಿ (ಮುಖ್ಯವಾಗಿ ‘ಮಾಡಿದ್ದುಣ್ಣೋ ಮಹಾರಾಯ’) ಕನ್ನಡದ ಬೇರಾವ ಕಾದಂಬರಿಯೂ ಮುಮ್ಮಡಿಯವರ ಆಸ್ಥಾನದ ವಿವರಗಳನ್ನು ಹಿಡಿದಿಟ್ಟಿಲ್ಲ. ಪುಟ್ಟಣ್ಣನವರ ಬಾಲ್ಯ ಮುಮ್ಮುಡಿಯವರಿದ್ದ ಮೈಸೂರಿನಲ್ಲಿಯೇ ಕಳೆದುದರಿಂದ ಅವರಿಗೆ ರಾಜಾಸ್ಥಾನದ ನಿಕಟ ಪರಿಚಯವಿತ್ತು. ಮುಮ್ಮಡಿಯವರು ದಿವಂಗತರಾದಾಗ ಪುಟ್ಟಣ್ಣನವರಿಗೆ ಹದಿನಾಲ್ಕು ವರ್ಷ ವಯಸ್ಸು. ಸೂಕ್ಷ್ಮ ಸಂವೇದನೆಗಳ ಪುಟ್ಟಣ್ಣನವರು ಮುಮ್ಮಡಿಯವರ, ಅವರ ಸುತ್ತಮುತ್ತಲಿನವರ ಹಲವು ಸಂಗತಿಗಳನ್ನು ತಿಳಿದಿರಬೇಕು. ಅವರನ್ನು ಸಮೀಪದಿಂದ ಕಂಡಿರಬೇಕು. ಅಲ್ಲದೆ ರಾಜರ ಸುತ್ತಲಿನವರ ನಿಕಟ ಪರಿಚಯವೂ ಅವರಿಗಿದ್ದ ಸಂಭವವೂ ಇದೆ. ಮುಮ್ಮಡಿಯವರನ್ನು ಕುರಿತು ಅನೇಕ ವಿಚಾರಗಳ ಸಂಗ್ರಹಣೆ ಅನುದ್ದೇಶಿತವಾಗಿಯೇ ಆದರೂ ಆವೇಳೆಗೆ ಸಾಕಷ್ಟು ಆಗಿರಬಹುದು. ಮುಂದೆ ರಾಜಾಸ್ಥಾನದ ಸಂಪರ್ಕವೂ ಬಂತು. “ಪುಟ್ಟಣ್ಣನವರ ಕಾದಂಬರಿಗಳಿಗೆ ನಿಜವಾದ ಪರೋಕ್ಷ ನಾಯಕರೆಂದರೆ ಮುಮ್ಮಡಿ ಕೃಷ್ಣರಾಜ ಒಡೆಯರು. ಆ ಪ್ರಭುವಗಳ ವ್ಯಕ್ತಿ ವರ್ಚಸ್ಸು ಪುಟ್ಟಣ್ಣನವರ ಮನಸ್ಸನ್ನು ಸೂರೆಗೊಂಡಿದೆ. ಕಥೆಗಳು ನಡೆಯುವುದು ಮೈಸೂರಿನಲ್ಲಿ ಅಥವಾ ಸಮೀಪದ ಊರುಗಳಲ್ಲಿ. ಇಲ್ಲಿಯ ಪಾತ್ರಗಳೆಲ್ಲ ಒಮದಲ್ಲ ಒಂದು ರೀತಿಯಲ್ಲಿ ಅವರ ಆಸ್ಥಾನಕ್ಕೆ ಸಂಬಂಧಪಟ್ಟವರು, ಅವರ ಆಶ್ರಿತ ವರ್ಗಕ್ಕೆ ಸೇರಿದವರು. ಹೀಗಿರುವುದರಿಂದ ಮುಮ್ಮಡಿಯವರ ಪ್ರಸ್ತಾಪ ಇಲ್ಲಿ ಮತ್ತೆ ಮತ್ತೆ ಬರುತ್ತದೆ. ಅದು ಬಂದಾಗ ಪುಟ್ಟಣ್ಣನವರ ಲೇಖನಿಗೆ ತಡೆಯಿಲ್ಲ. ಅವರ ಉತ್ಸಾಹಕ್ಕೆ ಮಿತಿಯಿಲ್ಲ. ಮುಮ್ಮಡಿಯವರ ಔದಾರ್ಯ, ಸರಳ ಮನಸ್ಸು, ಗಂಭೀರ ವರ್ಚಸ್ಸು ಇವನ್ನೆಲ್ಲ ವ್ಯಕ್ತ ಪಡಿಸುವ ಎಷ್ಟು ಸಂಗತಿಗಳು ಇಲ್ಲಿ ಅಡಕವಾಗಿವೆ. ಹೀಗೆಂದರೆ ಪ್ರಭುಗಳನ್ನು ಪುಟ್ಟಣ್ಣನವರು ಅಮಾನುಷ ವ್ಯಕ್ತಿಯಾಗಿ ಚಿತ್ರಿಸಿದ್ದಾರೆಂದು ಅರ್ಥವಲ್ಲ. ಹತ್ತಿರವಿದ್ದವರ ಮಾತು ಕೇಳಿ ದೊರೆಗಳ ಚಿತ್ತ ಒಮ್ಮೊಮ್ಮೆ ವ್ಯತ್ಯಾಸವಾಗುತ್ತಿತ್ತೆಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಅಂಥ ಸಂದರ್ಭದಲ್ಲಿ ಅವರ ನಿಷ್ಕಪಟ ಹೃದಯವನ್ನು ತೆರೆದಿಡಲು ಮರೆತಿಲ್ಲ”[1] ಎಂಬ ತೀ.ನಂ.ಶ್ರೀಕಂಠಯ್ಯನವರ ಮಾತು ಸೂಕ್ತವಾದುದು.

ಒಟ್ಟಿನಲ್ಲಿ ‘ರಾಜಾ ಪ್ರತ್ಯಕ್ಷ ದೇವತಾ’ ಎಂಬುದು ಪುಟ್ಟಣ್ಣನವರು ಒಪ್ಪಿದ ಧೋರಣೆ, ತಮಗಿಂತ ದೊಡ್ಡದನ್ನು ಕಂಡುಕೊಂಡು ಅದಕ್ಕೆ ನಿಷ್ಠರಾಗಿರುವ ಪುಟ್ಟಣ್ಣನವರ ಪ್ರವೃತ್ತಿ ಇಲ್ಲಿ ಸುಸ್ಪಷ್ಟ.

ಹಾಸ್ಯ

ಪುಟ್ಟಣ್ಣನವರ ಕಾದಂಬರಿಗಳಲ್ಲಿ ಹಾಸ್ಯದ ವಿವಿಧ ಛಾಯೆಗಳು ಕಾಣುತ್ತವೆ. ವಸ್ತು ನಿರೂಪಣೆಯ ಒಂದು ಭಾಗವಾಗಿ ಇದರ ನಿರ್ವಹಣೆ ಅಚ್ಚುಕಟ್ಟಿನದು. ಸಾಮಾಜಿಕವಾದ ಅಸಮತೆ ಕಂಡಾಗ ಅಸಹನೆ ರೋಷಗಳು ವ್ಯಂಗ್ಯದಲ್ಲಿ ಧ್ವನಿತವಾಗುತ್ತವೆ. ಈ ಕಟಕಿಯ ಖಾರಕ್ಷಾರಗಳು ಕಾದಂಬರಿಕಾರರ ಉದ್ದೇಶಕ್ಕೆ ತಕ್ಕಂತೆ ಅಭಿವ್ಯಕ್ತವಾಗುತ್ತವೆ.

ಪುಟ್ಟಣ್ಣನವರ ಪರಮಾದರ ಗೌರವಗಳಿಗೆ ಪಾತ್ರವಾದ ಮುಮ್ಮಡಿಯವರ ಆಸ್ಥಾನದ ನಕಲಿ ನಾರಣಪ್ಪನ ಹಾಸ್ಯ ಅಂದಿನ ರಾಜಾಸ್ಥಾನಗಳ ವಿದೂಷಕರ ಕಸಬುದಾರಿಕೆಯ ಹಾಸ್ಯ. ಸರಸ ಸನ್ನಿವೇಶವನ್ನು ಸಹಜವಾಗಿ ಈತ ನಿರ್ಮಿಸಬಲ್ಲನೆಂಬುದಕ್ಕೆ ಸೀತೆ ಮಹಾದೇವರ ಮದುವೆಯ ಚಿತ್ರಣ (ಮಾಡಿದ್ದುಣ್ಣೋ ಮಹಾರಾಯ, ಪು. ೭೬-೭೯) ಸಾಕ್ಷಿ ನುಡಿಯುತ್ತದೆ. ‘ಮುಸುಗೆ ತೆಗೆಯೇ ಮಾಯಾಂಗನೆ’ ಯ ಆಸ್ಥಾನದ ಹಾಸ್ಯಗಾರ ಪಾರಿಜಾತ ಕೇಶವ, ಆಸ್ಥಾನಿಕರು ತಮ್ಮ ನಿಲುವನ್ನು ಪ್ರಭುಗಳಿಗೆ ತಿಳಿಸಬೇಕೆಂದಾಗ ಸಹಕರಿಸುತ್ತಾನೆ. ನಿರ್ವಾಣದಯ್ಯನವರ ಮೆರವಣಿಗೆ ಇದಕ್ಕೆ ಸಾಕ್ಷಿ (ಪು. ೬೦-೬೧). ಬಸಪ್ಪನಂತಹ ಆಸ್ಥಾನಿಕರನ್ನು ಪುಟ್ಟಣ್ಣನವರು ನೇರವಾಗಿಯೂ ಗೇಲಿ ಮಾಡುತ್ತಾರೆ. ದೇಪಣ್ಣನ ಆಗಮನವನ್ನು ಅರಿತ ಬಸಪ್ಪ ವಿಧಿಯಿಲ್ಲದೆ ಒಮ್ಮೆ ಧಾನ್ಯ ತುಂಬುವ ಗಳಿಗೆಯಲ್ಲಿ ಗಂಟೆಗಟ್ಟಲೆ ಅಡಗಿ ಕೂರಬೇಕಾಯಿತು. ಇನ್ನೊಮ್ಮೆ ಮೂಲೆಯಲ್ಲಿನ ಹಳೆಯ ಹಾಸಿಗೆಯಲ್ಲಿ ಮುದುಡಿ ಕೂರಬೇಕಾಯಿತು. ಮತ್ತೊಮ್ಮೆ ಜುಟ್ಟು, ಮೀಸೆ, ಹುಬ್ಬುಗಳನ್ನು ಬೋಳಿಸಿಕೊಂಡು ಬಿಳಿ ಕೆಂಪು ನಾಮ ಹಾಕಿಕೊಂಡು ನೀರು ಹಾಕುವವನ ವೇಷದಲ್ಲಿ ತಪ್ಪಿಸಿಕೊಂಡು ಹೋಗಬೇಕಾಯಿತು. ಇಲ್ಲೆಲ್ಲ ಅವನ ಪಾತ್ರ ಲೇವಡಿಗೆ ಗುರಿಯಾಗಿದೆ.

ಸಾಮಾಜಿಕ ವಿರೋಧಾಭಾಸಗಳನ್ನು ಪುಟ್ಟಣ್ಣನವರು ತಮ್ಮ ಹಾಸ್ಯಕ್ಕೆ ಈಡು ಮಾಡುತ್ತಾರೆ. ಅಮ್ಮನಗುಡಿಯ ಲಟ್ಟರು, ಉಂಡಾಡಿಗಳು, ಸಮಯ ಸಾಧಕರು, ಕೆಲಸಗಳ್ಳರ ನಡುವೆ ಕಿಟ್ಟ ಜೋಯಿಸನ ಭದ್ರವಿಲ್ಲದ ಬಾಯಿಯಿಂದ ವೈಷ್ಣವ, ಶ್ರೀವೈಷ್ಣವ, ಸ್ಮಾರ್ತ ಪಂಗಡಗಳ ಮಡಿಯ ಗುಟ್ಟನ್ನು ಬಯಲಿಗೆಳೆಯುವ ರೀತಿ ಆಯಾ ಪಂಗಡದವರೇ ನಗುವಂತೆ ಮಾಡುತ್ತದೆಯೇ ಹೊರತು ಬೇರೆ ಅಲ್ಲ. ಅವುಗಳ ಅಸಂಬದ್ಧತೆಯನ್ನು ಟೀಕೆಗೊಳಗಾಗಿಸುವುದು ಒಬ್ಬ ಪೆದ್ದನೆನಿಸಿಕೊಂಡ ವ್ಯಕ್ತಿಯ ಮೂಲಕ – ಆಗ ಎದುರು ಪಕ್ಷದಿಂದ ಲೋಕಾಚಾರದಂತೆ, ಕುಲಾಚಾರದಂತೆ ನಡೆಯುತ್ತದೆ ಎಂಬ ಹಾರಿಕೆಯ ಮಾತು ಹೇಳಿಸುವುದು ಪಟ್ಟು ಸಡಲಿಸದ ಪುಟ್ಟಣ್ಣನವರ ನಿರ್ದಾಕ್ಷಿಣ್ಯಕ್ಕೆ ಪ್ರತೀಕವಾಗಿದೆ.

ವ್ಯಂಗ್ಯ ಇನ್ನಷ್ಟು ಮೊನಚಾಗುವುದು ಏನು ಅರಿಯದ ಮನೆಯಾಳಿನಂತೆ ಬಂದು ಸೇರಿಕೊಂಡಿದ್ದ ಕಿಸ್ ಎಲ್ಲ ರೀತಿಯ ದುರ್ಗುಣಗಳಿಗೆ ಆಗರವಾಗಿದ್ದ ಮನೆಯೊಡತಿಯೊಡನೆ, ಅಂಥವನೇ ಆದ ಒಡೆಯನ ವಿಚಾರವನ್ನು ಹೇಳುತ್ತಾ “ಜೂಜಾಡುವುದೇ ಕೆಟ್ಟದು. ಅದರಲ್ಲಿ ಅನ್ಯಾಯ ಮಾಡಿದರೇನಾಯಿತು?” (ಅವರಿಲ್ಲದೂಟ, ಪು. ೧೫೪) ಎನ್ನುವಂಥ ಸನ್ನಿವೇಶಗಳಲ್ಲಿ. ತಪ್ಪಿತಸ್ಥರ ಬಳಿ ನ್ಯಾಯವಾಗಿರುವನೊಬ್ಬನು ನೀವು ಮಾಡಿದ್ದರಲ್ಲಿ ಅಸಹಜವಾದದ್ದೇನೂ ಇಲ್ಲ ಎಂದು ಬಾಯಲ್ಲಿ ಹೇಳುತ್ತಾ ತಪ್ಪುಗಳನ್ನು ಅವರ ಮುಖಕ್ಕೇ ರಾಚುವ ವಿಧಾನ ಇದು.

ಜನರ ಅಸಂಗತ ಸ್ವಭಾವಗಳನ್ನು ತಮ್ಮ ಹಾಸ್ಯಪ್ರಜ್ಞೆಯ ಭೂತಗನ್ನಡಿಯಲ್ಲಿ ವಿಚಿತ್ರವಾಗಿ ಕಾಣುವಂತೆ ಪುಟ್ಟಣ್ಣನವರು ಸೆರೆ ಹಿಡಿಯುತಾರೆ. ತಿಮ್ಮಮ್ಮ ಸೊಸೆಯ ಸೌಂದರ್ಯವನ್ನು ಕುರೂಪ ಎಂಬಂತೆ ವರ್ಣಿಸುವುದು (ಮಾಡಿದ್ದುಣ್ಣೋ ಮಹಾರಾಯ, ಪು. ೧೩೨-೧೩೪), ರುಚಿಯಾದ ಊಟವನ್ನು ವಿಧಿಯಿಲ್ಲದೆ ತಿನ್ನುವಂತೆ ನಟಿಸುವ ನಾಗರತ್ನಳ ಸೋಗು (ಅವರಿಲ್ಲದೂಟ ಪು. ೧೧೨-೧೧೪) ಇತ್ಯಾದಿಗಳು ಪುಟ್ಟಣ್ಣನವರ ಚಿಕಿತ್ಸಕ ಪ್ರವೃತ್ತಿಗೆ ತಕ್ಕ ಪರಿಕರಗಳನ್ನು ಒದಗಿಸುತ್ತವೆ. ಪುಟ್ಟಣ್ಣನವರು ಕೌಟುಂಬಿಕ ಸರಸ ಸನ್ನಿವೇಶಗಳಿಗೆ ಹಾಸ್ಯದ ಲೇಪವನ್ನು ಸವರಿ ಮಧುರ ವಾತಾವರಣವನ್ನು ನಿರ್ಮಿಸಬಲ್ಲರು. ಕಟಕಿ, ವ್ಯಂಗ್ಯ, ಲೇವಡಿ, ಗೇಲಿ, ಅಪಹಾಸ್ಯ, ಕುಟುಕುಗಳ ಚುರುಕ ಬಿಸಿಗೆ ದೂರವಾಗಿ, ಎಳೆ ಬಿಸಿಲಿನಂತೆ ಮನೋಹರವೂ ಆಪ್ಯಾಯಮಾನವೂ ಆದ ಶಾಖ ಮನಸ್ಸುನ್ನು ಬೆಚ್ಚಗೆ ಮಾಡಿ ಮುದ ನೀಡುವಂತೆ ತಿಳಿಹಾಸ್ಯದ ಕಚಗುಳಿಯನ್ನು ಜಾನಕಿ ನರಸಿಂಹಾಚಾರಿಯ ಪ್ರಮಾಣದಲ್ಲಿ ತಂದಿದ್ದಾರೆ (ಅವರಿಲ್ಲದೂಟ, ಪು. ೫೬-೫೮). ಮಿನುಗುವ ಈ ಹಾಸ್ಯದ ಮಿಂಚಿನ ಅಂಚಿನಲ್ಲಿ ಈ ದಂಪತಿಗಳಿಗಾಗಿ ಕಾದಿರುವ ಕರಾಳ ಕತ್ತಲೆಯ ಅರಿವಾದಾಗ ಇಡೀ ಸನ್ನಿವೇಶಕ್ಕೆ ನಾಟಕೀಯ ವ್ಯಂಗ್ಯದ ಲಗತ್ತಾಗುತ್ತದೆ.

ಪುಟ್ಟಣ್ಣನವರದು ಒರಟು ಹಾಸ್ಯವಲ್ಲ. ಮೈ ಚಳಿ ಬಿಟ್ಟ, ಬಿಡಿಸುವ ಹಾಸ್ಯ ಅದು. ಸಾಮಾಜಿಕ ವಿಚಾರಗಳಲ್ಲಿ ವಿಲಕ್ಷಣವಾದದ್ದೆಲ್ಲವೂ ಅವರ ಹಾಸ್ಯದ ಮೊನೆಗೆ ಪಕ್ಕಾಗುತ್ತದೆ. ಅವರು ತಮ್ಮನ್ನೇ ಹಾಸ್ಯ ಮಾಡಿಕೊಳ್ಳಬಲ್ಲ ಆರೋಗ್ಯಕರ ಪ್ರವೃತ್ತಿಯವರು. ಹಾಗಾಗಿ ಲವಲವಿಕೆ, ನೆಮ್ಮದಿಗಳು ತುಳುಕುತ್ತಿರುವ ಹಾಸ್ಯ ಒಂದೆಡೆ. ಹಾಗಿಲ್ಲದೆಡೆ ವ್ಯಂಗ್ಯ. ಆದರೆ ಎಲ್ಲೂ ಕಳಪೆಯಲ್ಲ.

ಸಾಮಾಜಿಕ, ಜನಪದ ವಿಚಾರಗಳು

ಪುಟ್ಟಣ್ಣನವರು ತಮ್ಮ ಬರವಣಿಗೆಯಲ್ಲಿ ಸಾಮಾಜಿಕ ಪರಿಸರವನ್ನು ಅಚ್ಚರಿಗೊಳಿಸುವಂತೆ ಸೆರೆಹಿಡಿಯುತ್ತಾರೆ. ಅಂದಿನ ವ್ಯವಸ್ಥೆಯ ಹಲವು ಮುಖಗಳನ್ನು ಗುರುತಿಸುತ್ತಾರೆ.,

ಅಂದು ಮಹಾರಾಷ್ಟ್ರ ಅಥವಾ ಹಿಂದವಿ ಭಾಷೆಯ ಪ್ರಾಬಲ್ಯವೇ ಹೆಚ್ಚಾಗಿತ್ತು. ದರ್ಬಾರಿ ಕಾಗದ ಪತ್ರಗಳೆಲ್ಲ ಹಿಂದವಿಯಲ್ಲಿ ನಡೆಯುತ್ತಿತ್ತು. ಸರ್ಕಾರದ ಉದ್ಯೋಗಗಳು ಹಿಂದವಿ ಬಲ್ಲವರಿಗೇ ದೊರೆಯುತ್ತಿದ್ದವು. ಹಿಂದವಿ ಸಂತೋಜಿಗಳಿಗೆ ಕನ್ನಡ ಉಪಾಧ್ಯಾಯರಿಗಿಂತ ಹೆಚ್ಚು ಗೌರವವಿತ್ತು. (ಮಾಡಿದ್ದುಣ್ಣೋ ಮಹಾರಾಯ, ಪು. ೪೦). ಅಂದಿನ ಮಠಗಳಲ್ಲಿ ಪಾಠ ಹೇಳಿ ಕೊಡುತ್ತಿದ್ದವರು ಸಾಧಾರಣವಾಗಿ ಕುಂಟ ಉಪಾದ್ರು, ಕುರುಡು ಉಪಾದ್ರು, ಚೊತ್ತ ಉಪಾದ್ರು, ಇಂಥವರು. ಸಾಮಾಜಿಕವಾಗಿ ಪಾಠಶಾಲೆಗಳ ಪರಿಸ್ಥಿಯನ್ನು ಪುಟ್ಟಣ್ಣನವರು ಗುರುತಿಸುತ್ತಾರೆ. ಉದಯರಾಗ ಹೇಳಿಸುವುದು. ಹಾಲಗೆಯಲ್ಲಿ ಬರೆಸುವುದು, ಕಾಗದಗಳನ್ನು ಓದಿಸುವುದು, ಇಚ್ಛೆ ಟವಣೆ ಹಾಕಿಸುವುದು, ಇದು ಆಗಿನ ವಿದ್ಯಾಭ್ಯಾಸ ಕ್ರಮ. ಇದರಲ್ಲಿ ಜೈಮಿನಿ ಭಾರತ, ಯಕ್ಷಗಾನದ ಕಥೆಗಳನ್ನು ರಾಗವಾಗಿ ಓದಿಸತಕ್ಕವನೇ ಬಹಳ ನಿಪುಣ ಉಪಾಧ್ಯಾಯ (ಮುಸುಗ ತೆಗೆಯೇ ಮಾಯಾಂಗನೆ, ಪು.೫). ಉಪಾಧ್ಯಾಯರು ಮಕ್ಕಳಿಗೆ ಕೊಡುತ್ತಿದ್ದ ಶಿಕ್ಷೆ, ಪುಂಡ ಹುಡುಗರ ಸೇಡು. ಶಿಕ್ಷಣದಲ್ಲಿನ ಅನಗತ್ಯ ಕ್ರೌರ್ಯ (ಮಾಡಿದ್ದುಣ್ಣೋ ಮಹಾರಾಯ, ಪು. ೩೯-೪೫) ಇವು ವಿವರವಾಗಿ ಬಂದಿವೆ.

ನಾಗರತ್ನಾಸಾನಿಯನ್ನು ಒಲಿಸಿಕೊಳ್ಳಲು ಬಸಪ್ಪ ಮಾಡಿಕೊಳ್ಳುವ ಶೃಂಗರ, ಉಡುಪಿನ ವೈವಿಧ್ಯ ಅಂದಿನ ಸೊಗಸುಗಾರ ಪುಟ್ಟಸ್ವಾಮಿಗಳ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ (ಮುಸುಗ ತೆಗೆಯೇ ಮಾಯಾಂಗನೆ, ಪು. ೩-೪). ದಸರೆಯ ದಿನಗಳಲ್ಲಿ ದುರ್ಗಾಷ್ಟಮಿಯೆಂದು ಕರಾಡಿಗರು ನರಬಲಿ ಕೊಡುವ ಪ್ರಸ್ತಾಪ ಒಂದೆಡೆ ಬಂದರೆ (ಮುಸುಗ ತೆಗೆಯೇ ಮಾಯಾಂಗನೆ, ಪುಟ ೧೪೫), ಸಹಗಮನದ ಚಿತ್ರ (ಮಾಡಿದ್ದುಣ್ಣೋ ಮಹಾರಾಯ, ಪು. ೧೨೦-೧೨೧) ಇನ್ನೊಂದೆಡೆ ಬರುತ್ತದೆ. ಈ ಪದ್ಧತಿಗಳು ಖಿಲವಾಗುತ್ತಿದ್ದರೂ ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದುದನ್ನು ಪುಟ್ಟಣ್ಣನವರು ತೀರಾ ಎಳೆಯರಾಗಿದ್ದಾಗ ನೋಡಿಯೋ, ನೋಡಿದವರಿಂದ ಕೇಳಿಯೋ ಇರಬಹುದು.ತಾವು ಬಾಳಿ ಬದುಕಿದ ಕಾಲಕ್ಕಿಂತ ಸ್ವಲ್ಪ. ಹಿಂದಿನ ಕಾಲದ ಚಿತ್ರಣ ಅವರ ಉದ್ದೇಶ. ಮುಖಕ್ಕೆ ಕರಿಬಲೆ ಹಾಕಿಕೊಂಡು ಕೈಯಲ್ಲಿ ಗೊರಹೆಕೊಳ್ಳಿಯನ್ನು ಹತ್ತಿಸಿ ಬೆಳಕು ಉಜ್ವಲವಾಗಿರಲೆಂದು ಅದನ್ನು ಬೀಸುತ್ತಾ ದಪ್ಪ ಗೆಜ್ಜೆಗಳು ಕಟ್ಟಿದ ಕೋಲನ್ನು ಹೆಗಲ ಮೇಲೆ ಇಟ್ಟುಕೊಂಡು ಅಂಚೆಯನ್ನು ತಲುಪಿಸಲು ಊರಿಂದೂರಿಗೆ ಓಡುತ್ತಾ ಹೋಗುವ ಅಂಚೆಯವರ ಚಿತ್ರಣವಿದೆ (ಅವರಿಲ್ಲದೂಟ, ಪು.೩-೫), ಅಂದಿನ ಕಾಲದಲ್ಲಿ ತೀರಾ ಸಾಮಾನ್ಯವಾಗಿದ್ದ ಕೊರವಂಜಿಯರು (ಅವರಿಲ್ಲದೂಟ, ಪು.೧೯), ದೊಂಬರು (ಅವರಿಲ್ಲದೂಟ, ಪು. ೧೭೫) ಇವರ ಪ್ರಸ್ತಾಪವಿದೆ. ಯಕ್ಷಗಾನದ ಆಟಗಾರರು, ಸಂಗೀತಗಾರರು, ನಾಟಕದವರು, ಯಕ್ಷಿಣಿ ಆಟದವರು, ಹಾಸ್ಯಗಾರರು, ಕುಸ್ತಿಯವರು ಇಂಥವರು ಊರಿಂದೂರಿಗೆ ಓಡಾಡತ್ತ ಪ್ರದರ್ಶನ ನೀಡುತ್ತಿದ್ದ ಪ್ರಸ್ತಾಪವಿದೆ (ಮಾಡಿದ್ದುಣ್ಣೋ ಮಹಾರಾಯ, ಪು. ೫೪). ಚೋರಶಾಸ್ತ್ರದ ವಿವರಗಳು ರೋಚಕವಾಗಿ ವರ್ಣಿತವಾಗಿವೆ. (ಮಾಡಿದ್ದುಣ್ಣೋ ಮಹಾರಾಯ, ಪು. ೬೧, ೧೮೪-೧೮೭). ಹಬ್ಬ ಹರಿದಿನಗಳ ದೇವಾಲಯಗಳ ಉತ್ಸವಾದಿಗಳ ವಿಚಾರವೂ ಕಾಣುತ್ತದೆ (ಮಾಡಿದ್ದುಣ್ಣೋ ಮಹಾರಾಯ, ಪು. ೧೧೧, ೧೩೧, ೧೪೩). ಆ ದಿನಗಳ ಕೆಲಸಗಳ್ಳರ ಕಾಡುಹರಟೆಯ ಚಿತ್ರಣ (ಮಾಡಿದ್ದುಣ್ಣೋ ಮಹಾರಾಯ, ಪು. ೧೩೬-೧೪೨, ೧೫೬-೧೬೫) ಸೊಗಸಾದ ಬರವಣಿಗೆಯಾಗಿದೆ. ಅಂದಿನ ಜಾತಿ ಮತಗಳ ವಿಚಾರ, ನಂಬಿಕೆಗಳು, ನವೋಢಾ ವಿವಾಹದ ವಿಚಾರಗಳು, ಸ್ತ್ರೀಯರಿಗೆ ಹಿಂದೂ ಧರ್ಮದಲ್ಲಿ ವಿಧಿಸಲ್ಪಟ್ಟ ಕಟ್ಟುಪಾಡುಗಳು (ಅವರಿಲ್ಲದೂಟ, ಪು. ೨೭-೩೨, ೭೪-೭೬, ೮೮-೯೦) ಕಾಣುತ್ತವೆ. ಹಳೆಯ ಕಾಲದಲ್ಲಿ ಕಟ್ಟುತ್ತಿದ್ದ ಕಟ್ಟಡಗಳ ಭದ್ರತೆ (ಮಾಡಿದ್ದುಣ್ಣೋ ಮಹಾರಾಯ, ಪು. ೨೮), ಯಂತ್ರೋದ್ಯಮ ನಾಗರಿಕತೆಗಳು ಬೇರು ಬಿಡುವ ಮುನ್ನ ಇದ್ದ ಪರಿಸ್ಥಿತಿ (ಮುಸುಗ ತೆಗೆಯೇ ಮಾಯಾಂಗನೆ, ಪು. ೧೧೩), ಅಂದಿನ ದಯೆಯುಳ್ಳ ಸಾಮಾಜಿಕ ಪರಿಸ್ಥಿತಿಗಳನ್ನು (ಮುಸುಗ ತೆಗೆಯೇ ಮಾಯಾಂಗನೆ, ಪು. ೧೪೬-೧೪೭) ಹೇಳುವಾಗ ಪುಟ್ಟಣ್ಣನವರಿಗೆ ಬಹಳ ಹುಮ್ಮಸ್ಸು.

ಸಮಕಾಲೀನ ಸಾಂಸ್ಕೃತಿಕ ಸಂವೇದನೆಗಳ ನೆಲೆ ಬೆಲೆಗಳೇನು ಎನ್ನುಉದನ್ನು ಪತ್ತೆ ಹಚ್ಚುವ ಕೆಲಸವನ್ನು ಸುಲಭವಾಗಿ ಪುಟ್ಟಣ್ಣನವರಂತಹ ನಿಷ್ಠಾವಂತರಾದ ಬರಹಗಾರರ ಕೃತಿಗಳಿಂದ ಮಾಡಬಹುದು. ಸಾಮಾಜಿಕ ಪರಿಸ್ಥಿತಿಯನ್ನು ಅದರ ಎಲ್ಲ ಗೊಂದಲಗಳೊಡನೆಯೇ ಸೆರೆ ಹಿಡಿಯುವುದು ಈ ಕಾದಂಬರಿಗಳ ಸಾಧನೆ. ಸಂಪ್ರದಾಯಬದ್ಧವಾದ ಕುಟುಂಬದಲ್ಲಿ ಸೀತೆ ಅರಕ್ಷಣೀಯಳಾಗಿರುವುದು, ಆಕೆಯನ್ನು ಹೊರಗಿನವನೊಬ್ಬ ರಕ್ಷಿಸುವುದು, ದೇವಸ್ಥಾನಗಳು ರಾಜರ ಉಸ್ತುವಾರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವು ಕಳ್ಳರ ಹುತ್ತಗಳೂ ಆಗಿರಬಹುದಾದ ಸಂಭವನೀಯತೆಯನ್ನು ತೋರಿಸುವುದು ಮುಂತಾದ ಘಟನೆಗಳ ಮೂಲಕ ಪುಟ್ಟಣ್ಣನವರು ವ್ಯವಸ್ಥೆಯ ಟೊಳ್ಳನ್ನು ಗುರುತಿಸುತ್ತಾರೆ.[2] ಒಂದು ವ್ಯವಸ್ಥೆಯನ್ನು ಪುರಸ್ಕರಿಸಿಯೂ ಆ ವ್ಯವಸ್ಥೆಯ ಸೋಲನ್ನು ತಿಳಿಸುವ ಹಲವು ಸಂಗತಿಗಳನ್ನು ರಾಜಾಸ್ಥಾನದ ಚಿತ್ರಣದಲ್ಲಿಯೂ ಗುರುತಿಸಿದೆ.

ಭಾಷೆಶೈಲಿ

ಆಡುನುಡಿಯ ಸಮರ್ಥ ಬಳಕೆಯಿಂದ ಸೊಗಡು ಬೀರುವ ಪುಟ್ಟಣ್ಣನವರ ಭಾಷೆ ಮೊದಲ ಸುತ್ತಿನಲ್ಲೇ ನಮಗೆ ಆಕರ್ಷಕವಾಗಿ ಕಾಣುವುದು ನಿಜ. ಇದರ ಮೂಲಕ ಘಟನೆಗಳ ಒಳಸಂಬಂಧಗಳಿಂದ ಹೊರಡುವ ಧ್ವನಿಗೂ ಹೊರಡಿಸುತ್ತಿರುವ ವ್ಯಕ್ತಿಗೂ, ಬಳಸಿರುವ ಭಾಷೆಗೂ ಬಿರುಕುಗಳಿಲ್ಲದೆ ಇರುವುದರಿಂದ, ಅವಿನಾಸಂಬಂಧ ಸ್ಥಾಪಿತವಾಗಿರುವುದರಿಂದ ಸಾಹಿತ್ಯಕ ಮಹತ್ವದ ಭದ್ರ ನೆಲೆಗಟ್ಟು ಲಭಿಸಿದೆ. ಪಾಂಡಿತ್ಯದ ಒಣಪ್ರದರ್ಶನ ಬೆರಗುಗೊಳಿಸುವ ಮೋಹಕ ಬರಹಗಳಲ್ಲಿ ಪುಟ್ಟಣ್ಣನವರಿಗೆ ಎಂದೂ ಒಲವಿರಲಿಲ್ಲ.

ಕಾದಂಬರಿಯ ಪ್ರಕಟವಾದ ಕಾಲವನ್ನು ಗಮನಿಸಿದರೆ ಇಲ್ಲಿನ ವ್ಯಾಕರಣಕ್ಕೆ ಹೆಚ್ಚು ಪ್ರಾಮುಖ್ಯ ಕೊಡದಿರುವ ಸಂಗತಿ ಅಚ್ಚರಿಯೆನಿಸುತ್ತದೆ. ಸಂವಹನವೊಂದೇ ಪುಟ್ಟಣ್ಣನವರ ಉದ್ದೇಶ. ಅವರಲ್ಲಿ ಭಾಷಾ ಸಂಬಂಧಿಯಾದಯಾವ ಸಂಕೋಚಗಳೂ ಇಲ್ಲ. ಪುಟ್ಟಣ್ಣನವರು ಸಂಪ್ರದಾಯದ ಸಂಕೋಲೆಯೊಳಗಿಂದ, ಜಿಗುಟುತನದಿಂದ ಕನ್ನಡ ಗದ್ಯವನ್ನು ಬಿಡಿಸಿ ಅದಕ್ಕೆ ಲಾಲಿತ್ಯವನ್ನೂ ಬಳುಕನ್ನೂ ನೀಡಿದರು. ಕಾಗುಣಿತಕ್ಕೆ ಕಡೆಯ ಮಣೆಯನ್ನು ದಯಪಾಲಿಸಿದರು. ಈ ಕಾದಂಬರಿಯ ಗದ್ಯವನ್ನೇನಾದರೂ ಭಾಷಾ ಶುದ್ಧಿಯ ಮುಸೆಯಲ್ಲಿ ಒಮ್ಮೆ ಹಾಯಿಸಿ ದೊರೆತಂದದ್ದಾದರೆ ಕಾದಂಬರಿಯ ಬನಿ, ಸೊಗಡು ಎಲ್ಲ ಜಾರಿ ಹೋಗಿ ಬರಿಯ ಅಳ್ಳಟ್ಟೆ ಮಾತ್ರ ಉಳಿಯುತ್ತದೆ. ಪುಟ್ಟಣ್ಣನವರ ಗದ್ಯಸಾಧನೆ ಈ ಕಾದಂಬರಿಗಳ ಸಿದ್ಧಿಯ ಒಂದು ಮುಖ್ಯ ಭಾಗ ಎಂಬುದು ನಿಸ್ಸಂದೇಹವಾದ ಮಾತು. ಅವರ ಗದ್ಯಶೈಲಿಯ ನಿರಾಯಾಸತೆಯನ್ನು ಕೆಲವು ಉದಾಹರಣೆಗಳ ಮೂಲಕ ನೋಡಬಹುದು.

“ಅದಕ್ಕೆ ತಿಮ್ಮಮ್ಮನು ಇನ್ನೂ ಆಗ್ರಹದಿಂದ ಹಾವಿಗೆ ಆಣೆ ಎಂದರೇನು, ಚೇಳಿಗೆ ಆಣೆ ಎಂದರೇನು, ನನ್ನ ಮಗವಿನ ಹಾಸಿಗೆಯ ಬಳಿಯಲ್ಲಿ ಕೂತು ನೀನು ಹಾಗೆ ಆಡುವುದಕ್ಕೆ ಕಾರಣವೇನು? ರಾತ್ರಿಯಿಂದಲೂ ಸಾತಿಗೆ ಚೆನ್ನಾಗಿಲ್ಲವಲ್ಲ; ತಲೆನೋವು, ಚಳಿಚಳಿ ಎನ್ನುತ್ತಾಳೆ, ಅವಳ ತಲೇ ಕಂಡರೆ ನಿನಗೆ ಆಗದು, ನೀನು ಏನೋ ಮಾಡಿದೀಯೆ, ಅದೇನು ಮಾಡಿದೆ ಹೇಳು, ಇಲ್ಲದಿದ್ದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ಹಿಡಿದ ಹಿಕಾಳಿಯನ್ನು ಬಿಡಿಸಿ ಬಿಡುತ್ತೇನೆ, ನನ್ನ ಮನೇ ಅನ್ನುವುಂಡು ನನ್ನ ಮನೇ ಬಟ್ಟೆ ಉಟ್ಟು-ನನ್ನ ಮಗಳ ಪ್ರಾಣಕ್ಕೆ ತಂದು ಇದ್ದೀಯಲ್ಲೆ, ಒಳ್ಳೇ ಮಾತಿನಿಂದ ಏನ ಮಾಡಿದ್ದೀಯ ಬೊಗಳು, ನಿವು ಹಾಲುಂಡ ಮನೆಕರು ಸಾಯಲಿ ಎನ್ನುವ ತಟವಾಣೀರು; ಅದೇನು ಮಾಡಿ ಇದ್ದೀಯೇ ಹೇಳೇ ಗಯ್ಯಾಳಿ, ಅವಳೇನು ನಿನ್ನ ಗೋಜಿಗೆ ಬಂದಳೇ, ನಿನ್ನ ಸೊಲ್ಲಿಗೆ ಬಂದಳೆ, ನಿನ್ನ ಗಂಧ ಗಾಳಿಗೆ ಬಂದಳೆ, ನಿನ್ನ ಕಂಣ ಚುಚ್ಚಿದಳೆ, ನಿನ್ನ ಹೊಟ್ಟೆ ಇರಿದಳೆ, ನಿನ್ನ ನಾಲಿಗೇ ಸೀಳಿ ಉಪ್ಪು ತುಂಬಿದಳೆ, ನಿಮ್ಮಪ್ಪನ ಮನೆಯಿಂದ ತಂದಿದ್ದ ಮಾಗಡಿ ಮಣಿಯನ್ನು ತೆಗೆದುಕೊಂಡಳೆ, ನಿಮ್ಮಪ್ಪನ ಮನೆಗೆ ಬೆಂಕಿ ಹಾಕಿದಳೆ, ನಿಮ್ಮಪ್ಪನ ಮುಖ ಸುಟ್ಟಳೆ, ನಿಮ್ಮ ಅವ್ವ ತಲೆಗೆ ಬೂದಿ ಸುರಿದಳೆ, ನಿನ್ನ ಮುಖಕ್ಕೆ ಮುಳ್ಳು ಬಡಿದಳೆ ಎಂದು ಬಗೆಬಗೆಯಾಗಿ ಕೆಲೆಯುತಾ ಬಂದಳು. ಅವಳ ಆಟೋಪವನ್ನು ನೋಡಿ ಇನ್ನೇನು ಮಾಡಿಬಿಡುತ್ತಾಳೆಯೋ ಎಂಬ ಹೆದರಿಕೆಯಿಂದ ಸೀತೆಗೆ ಕೈಕಾಲು ನಡುಗುವುದಕ್ಕೆ ಮೊದಲಾಯಿತು. ಗಾಬರಿಗೆ ಕೊಡವನ್ನು ಎತ್ತಿ ಹಾಕಿಕೊಂಡು ಬಿದ್ದು ಬಿಟ್ಟಳು. ಕೊಡಗಳೆರಡೂ ಬಿದ್ದು ತಗ್ಗಿ ಹೋದವು. ಸೀತೆಯು ಕುಕ್ಕರಿಸಿಕೊಂಡಳು, ಹಾಗೇ ಸೊಕ್ಕಿದ ಹಾಗಾಯಿತು” (ಮಾಡಿದ್ದುಣ್ಣೋ ಮಹಾರಾಯ, ಪು. ೧೨೬-೧೨೭).

“ಈ ಬಸಪ್ಪನು ಆ ಹೆಂಗಸಿನ ಗೀಳನ್ನು ಮನಸ್ಸಿಗೆ ಹತ್ತಿಸಿಕೊಂಡು ಪೇಚಾಡುತ್ತಾ ತನ್ನ ಕೋರಿಕೆ ನೆರವೇರುವುದಕ್ಕೆ ಬೇಕಾದ ಪ್ರಯತ್ನ ಒಂದನ್ನೂ ಬಿಡದೆ ಮಾಡಿದನು. ಒಂದು ದಿನ ಅಂಗರೇಖು ರುಮ್ಮಾಲು ಪಾಯಿಜಾಮ ಹಾಕಿಕೊಂಡು ಒಳ್ಳೇ ಪಂಚೆಯನ್ನು ಮೇಲೆ ಹೊದ್ದು ಆ ನಾಯಿಕಸಾನಿಯ ಮನೇ ಮುಂದೆ ಸುಳಿದಾಡುವುದು; ಇನ್ನೊಂದು ದಿನ ತಲೆಗೆ ಜೋಡೀ ವಸ್ತ್ರವನ್ನು ಕುಚ್ಚುಬಿಟ್ಟು ಸುತ್ತಿ ಪಟ್ಟೇ ಅಂಚಿನ ಪಮಚೆಯನ್ನು ಕಠಾರಿ ಕಚ್ಚೇ ಹಾಕಿ ಉಟ್ಟು ಅಗಸನ ಮನೆಯ ಮಡಿಪಂಚೆಯನ್ನು ಹೊದ್ದು ಹೋಗುವುದು; ಇನ್ನೊಂದು ದಿನ ವಜ್ರದ ಹತ್ತ ಕಡಕನ್ನೂಕೈ ಬೆರಳುಗಳಿಗೆ ಉಂಗುರಗಳನ್ನೂ ಇಟ್ಟು, ಮಲ್ಲಿಗೇ ಹೂವು, ಪಚ್ಚೇತೆನೆ, ಸಂಪಿಗೇ ಹೂವು, ಇರುವಂತಿಗೇ ಹೂವು ಮೊದಲಾದ ಪರಿಮಳದ ಹೂವು ಇವುಗಳಿಗೆ ಪನ್ನೀರನ್ನು ಚಿಮಕಿಸಿ ಅವುಗಳನ್ನು ಜವ್ವಾಜಿ ಸವರಿದ ನಾರಿನಿಂದ ಕಟ್ಟಿಸಿ ಅದನ್ನು ತನ್ನ ಎಣ್ಣೆಗಂಟಿಗೆ ದಟ್ಟವಾಗಿ ಸುತ್ತಿ, ಆ ಗಂಟನ್ನು ತನ್ನ ಬೆನ್ನ ಮೇಲೆ ಭುಜದಿಂದ ಭುಜಕ್ಕೆ ಉರುಳಾಡಿಸುತಾ, ಹುಬ್ಬಿನ ನಡುವೆ ಚುಕ್ಕಿ ಬಟ್ಟನಿಟ್ಟು ಒಲಪು ಮಾಡುತಾ, ಆ ಬೀದಿಯಲ್ಲಿ ಗುಜರೀ ಹೊತ್ತಿನಲ್ಲಿ ತಿರುಗಾಡುತಾ, ನೆವನೆವದಲ್ಲಿ ಆ ಹೆಂಗಸಿನ ಮನೆಯ ಮುಂದೆ ನಿಲ್ಲುತಾ ತಾಂಬೂಲವನ್ನು ದವಡೆ ಒಡೆಯುವ ಹಾಗೆ ಒತ್ತರಿಸಿಕೊಂಡು ಅಗಿಯುತಾ, ಸಿಕ್ಕಿದವರನ್ನು ಅಲ್ಲಲ್ಲಿ ನಿಲ್ಲಿಸಿಕೊಂಡು ಮಾತನಾಡುತಾ, ಕಾರಣವಿಲ್ಲದಿದ್ದಾಗ್ಯೂ ತಾನೇ ನಗುತಾ ಹೀಗೆಲ್ಲಾ ಒಲಪು ಮಾಡುತಾ ಬಂದನು” (ಮುಸುಗ ತೆಗೆಯೇ ಮಾಯಾಂಗನೆ, ಪು. ೩-೪).

ಪುಟ್ಟಣ್ಣನವರಲ್ಲಿ ಗಾದೆಗಳೂ ನುಡಿಗಟ್ಟುಗಳೂ ಹೇರಳವಾಗಿ ಸಿಗುತ್ತವೆ. ಆಡುವ ತನಕ ಅರಗಿಣಿ ನಡೆಯುವ ತನಕ ನಾಣ್ಯ (ಮುಸುಗ ತೆಗೆಯೇ ಮಾಯಾಂಗನೆ, ಪು.೩), ಆಂಜನೇಯನು ಕಾಲನೇಮಿಯನ್ನು ಕುರಿತು ಸಂಜೀವನ ಪರ್ವತಕ್ಕೆ ದಾರಿ ಕೇಳಿದಂತೆ (ಮಾಡಿದ್ದುಣ್ಣೋ ಮಹಾರಾಯ, ಪು.೧೫೪), ಕಾರಗಳ್ಳಿ ತೊರೆಯರು ಕೃಷ್ಣರಾಜ ಒಡೆಯರ ಮನೆಗೆ ಹೆಂಣು ಕೇಳುವುದಕ್ಕೆ ಹೋದ ಹಾಗೆ (ಅವರಿಲ್ಲದೂಟ, ಪು.೩೫) ಮೊದಲಾದ ಗಾದೆಗಳೂ ಎಕ್ಕಾಗುಳ್ಳ ಹುಟ್ಟಿ ಹೋಗು (ಮಾಡಿದ್ದುಣ್ಣೋ ಮಹಾರಾಯ, ಪು. ೧೨೮), ಕೈ ಆಸೆ ಬಾಯಾಸೆ (ಮುಸುಗ ತೆಗೆಯೇ ಮಾಯಾಂಗನೆ, ಪು. ೪೬), ಹತ್ತು ಬಾಯಲ್ಲಿ ಹೊಗಳು (ಅವರಿಲ್ಲದೂಟ, ಪು. ೧೧೧) ಮುಂತಾದ ನುಡಿಗಟ್ಟುಗಳೂ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ.

ತಮ್ಮ ಕಾದಂಬರಿಗಳಲ್ಲಿ ಪುಟ್ಟಣ್ಣನವರು ಚಿತ್ರಿಸಿರುವುದು ಮೈಸೂರು, ಶ್ರೀರಂಗಪಟ್ಟಣ, ನಂಜನಗೂಡು, ಚಾಮರಾಜನರ ಈ ಪ್ರದೇಶಗಳ ಜನಜೀವನವನ್ನು, ಆಡುನುಡಿಯ ಗತ್ತುಗಮ್ಮತ್ತುಗಳು ಇಲ್ಲಿ ಹರಳುಗೊಂಡಿರುವ ರೀತಿ ವಿಸ್ಮಯಕರವಾಗಿದೆ. ಪ್ರಾಮಾಣಿಕವಾದ ಭಾವತೀವ್ರವಾದ ಆಲೋಚನೆಗೆ ಮಾತ್ರ ದಕ್ಕುವಂತಹ ಸುಸ್ಪಷ್ಟ ಶೈಲಿಯನ್ನು ಮೇಲಿನ ಉದಾಹರಣೆಗಳಲ್ಲಿ ಕಾನಬಹುದು. ಹೊಸಗನ್ನಡ ಗದ್ಯದ ಬೆಳೆಯಲ್ಲಿ ಪುಟ್ಟಣ್ಣನವರದು ನಿಸ್ಸಂಶಯವಾಗಿಯೂ ಅರಿಬತ್ತ “The episodic novel does not have the feel of a fairy tale largely on account of the racy idiom puttanna employs and the succesful way in which it evokes a whole community. The experence it articulates has an authentic ring and the ‘density of specification’ prevents its becoming meeodrama[3] ಎಂಬ ಎಂ.ಜಿ.ಕೃಷ್ಣಮೂರ್ತಿಯವರ ಮಾತನ್ನು ಇಲ್ಲಿ ನೆನೆಯಬಹುದು.

 

[1]ತೀ.ನಂ.ಶ್ರೀಕಂಠಯ್ಯ : ಎಂ.ಎಸ್.ಪುಟ್ಟಣ್ಣನವರ ಕಾದಂಬರಿಗಳು : ಮೈಸೂರು ಆಕಾಶವಾಣಿ ಭಾಷಣ, ಅಪ್ರಕಟಿತ: ೧೯೪೭.

[2]ಕೆ.ವಿ.ನಾರಾಯಣ: ಘಟನೆಗಳ ನಿಷ್ಠುರತೆ ಮತ್ತು ಮಾಡಿದ್ದುಣ್ಣೋ ಮಹಾರಾಯ: ಸಾಕ್ಷಿ ೧೭; ಅಕ್ಟೋಬರ್ ೧೯೭೨: ಪು. ೧೧೧-೧೧೯.

[3] M.G. Krishnamurthy (Ed), Grammatical notes by A.K. Ramanujan : Modern Kannada Fiestion : A Critical Anthology : Department of Indian Studies, The University of Wisconin, Madison : 1967 ; Pregace P. xviii.