ಅವರಿಲ್ಲದೂಟ

ರಾಮಸ್ವಾಮಯ್ಯಂಗಾರ ಮತ್ತು ರಂಗನಾಯಕಮ್ಮ ದಂಪತಿಗಳಿಗೆ ಅಪಾರ ಸಂಪತ್ತಿದ್ದರೂ ಸಂತಾನ ಭಾಗ್ಯವಿಲ್ಲದ್ದೊಂದೇ ಕೊರತೆ. ರಾಮಸ್ವಾಮಿಯ ತಂದೆಯ ಕಾಲದಲ್ಲಿ ಅವರ ಮನೆಯಲ್ಲಿ ಪೋಷಿತನಾದ ರಾಮಜಿ ಎಂಬಾತ ದೂರ ಪ್ರಾಂತ್ಯಗಳಲ್ಲಿ ಸೇವೆ ಸಲ್ಲಿಸಿ ಅನಂತರ ಈತನ ಆಶ್ರಯಕ್ಕೆ ಬರುತ್ತಾನೆ. ಅವನ ಹೆಂಡತಿ ತೀರಿ ಹೋಗಿದ್ದಾಳೆ, ಮಕ್ಕಳಿಲ್ಲವೆಂದು ಮಲ್ಲನೆಂಬ ಹುಡುಗನನ್ನು ಸಾಕಿಕೊಂಡಿದ್ದಾನೆ. ಈತನೂ ರಾಮಸ್ವಾಮಿಯ ಮನೆಗೆ ಬರುತ್ತಾನೆ. ರಾಮಸ್ವಾಮಿ ರಂಗನಾಯಕಮ್ಮ ಇವರುಗಳಿಗೆ ಜಾನಕಿ ಎಂಬ ಮಗಳಾಗಿ ಮುಂದೆ ಆಕೆಯ ಮದುವೆ ಒಬ್ಬ ಸದ್ಗುಣಿ, ವಿದ್ಯಾವಂತ, ಬಡವನ ಜೊತೆ ಆಗುತ್ತದೆ. ಗಂಡ ಹೆಂಡಿರು ಅನ್ಯೋನ್ಯವಾಗಿರುತ್ತಾರೆ. ಒಂದು ಗಂಡು ಮಗು ಆಗುತ್ತದೆ. ಆದರೆ ಬಾಲ್ಯದಿಂದಲೂ ಮಲ್ಲನಿಗೆ ಜಾನಕಿ ಹಾಗೂ ಅವಳ ಆಸ್ತಿಯ ಮೇಲೆ ಕಣ್ಣಿದ್ದು ಜಾನಕಿಯ ಮದುವೆಯಾದಾಗಿನಿಂದ ಆತ ಒಳಗೇ ವ್ಯಗ್ರನಾಗಿರುತ್ತಾನೆ. ರಂಗನಾಯಕಮ್ಮ ಕೋಟಿ ತುಳಸೀ ಪೂಜೆ ಮಾಡಿ ಉದ್ಯಾಪನೆಯನ್ನು ಮಾಡಲಿರುವಳೆಂದೂ ಅದಕ್ಕೆ ಮಗಳು ಅಳಿಯ ಮೊಮ್ಮಗನನ್ನು ಕರೆತರಲು ಹೇಳಿದ್ದಾಳೆಂದೂ ಮಲ್ಲ ಪೆಟ್ಟಿಗೆಗಾಡಿ ತೆಗೆದುಕೊಂಡು ಬರುತ್ತಾನೆ. ಬೇಕೆಂದು ಹೊತ್ತು ಮಾಡಿಕೊಂಡು ಹೊರಟು, ದಾರಿ ತಪ್ಪಿಸಿ ಅಡ್ಡದಾರಿಗೆ ಕರೆತರುತ್ತಾನೆ. ಜಾನಕಿಯ ಮಾತನ್ನು ಅಸಡ್ಡೆ ಮಾಡುತ್ತಾನೆ. ಜಾನಕಿಯ ಗಂಡ ನರಸಿಂಹಾಚಾರಿಯ ಮೈಯಲ್ಲಿ ಆರೋಗ್ಯವಿಲ್ಲದೆ ನರಳುತ್ತಿರುತ್ತಾನೆ. ಅವನಿಗೆ ನೀರು ತರಲು ಜಾನಕಿ ಮಲ್ಲನೊಡನೆ ಹೋಗುತ್ತಾಳೆ. ಮರುದಿನ ಬೆಳಗಿನ ಜಾವ ಅವಳು ಭಾವಿಯೊಳಗಿಂದ ಕಿರಿಚುವ ಸದ್ದು ಕೇಳಿ ದಾರಿಗರು ಅವಳನ್ನು ಮೇಲೆತ್ತುತ್ತಾರೆ. ನೀರು ತರಲು ಈ ಭಾವಿಯ ಬಳಿ ಬಂದಾಗ ಹಗ್ಗ ತರಲು ಮಲ್ಲ ಹೋದನೆಂದೂ, ಒಮದೆರಡು ನಿಮಿಷಕ್ಕೆ ಯಾವುದೋ ಭೂತ ಬಂದು ಒಡವೆಯನ್ನೆಲ್ಲಾ ಕಿತ್ತುಕೊಂಡು ಭಾವಿಯಲ್ಲಿ ನೂಕಿತೆಂದೂ ಜಾನಕಿ ಹೇಳುತ್ತಾಳೆ. ಅವಳನ್ನೂ ಅವಳ ಮಗುವನ್ನೂ ತಂದೆ ರಾಮಸ್ವಾಮಿ ತವರಿಗೆ ಕರೆದೊಯ್ಯುತ್ತಾನೆ. ಮಲ್ಲನ ದೇಹ ಅಲ್ಲೇ ಬಿದ್ದಿರುವುದು ಕಾಣುತ್ತದೆ. ನರಸಿಂಹಾಚಾರಿಯ ಸುಳಿವು ಸಿಗುವುದಿಲ್ಲ. ಮುಂದೆ ಮಲ್ಲನಿಗೆ ಹಾವಿನ ಕಡಿತದಿಂದ ವಿಷವೇರಿದೆಯೆಂದೂ ಪ್ರಾಣಿ ಹೋಗಿಲ್ಲವೆಂದೂ ತಿಳಿಸಿ ಅವನನ್ನು ಒಬ್ಬ ಫಕೀರ ಬದುಕಿಸುತ್ತಾನೆ. ಎದ್ದು ಹೋದ ಮಲ್ಲ ಹಿಂತಿರುಗುವುದಿಲ್ಲ. ಅಳಿಯನಿಗಾಗಿ ರಾಮಸ್ವಾಮಿ ಎಷ್ಟೇ ಹುಡುಕಿಸಿದರೂ ಫಲಕಾರಿಯಾಗುವುದಿಲ್ಲ. ಮೊಮ್ಮಗ ಓದಿ ವಿದ್ಯಾವಂತನಾಗುತ್ತಾನೆ.

ಬಳ್ಳಾರಿಯಲ್ಲಿದ್ದ ಒಬ್ಬ ಗುಜರಾತಿ ವರ್ತಕನ ಎರಡನೆಯ ಪತ್ನಿ ನಾಗರತ್ನಳಿಗೂ ಧೀರಾಜಿ ಎಂಬ ಶ್ರೀಮಂತ ಪಡ್ಡೆ ಯುವಕನಿಗೂ ಸಂಬಂಧ ಬೆಳೆಯುತ್ತದೆ. ವಿಟನಾದ ಧೀರಾಜಿಯೊಡನೆ ಸಂಬಂಧ ಬೆಳೆಸಲು ಸಹಕಾರಿಯಾದ ಮೋಟಜ್ಜಿಯ ದುರ್ಬೋಧನೆಗೂ ತನ್ನ ಮನಸ್ಸಿನ ದೌರ್ಬಲ್ಯಕ್ಕೂ ಮರುಳಾಗಿ ನಾಗರತ್ನ ತನ್ನ ಮುದಿ ಅತ್ತೆ ಸರಿಯಾದ ಶುಶ್ರೂಷೆ ಇಲ್ಲದೆ ಸಾಯುವಂತೆ ಮಾಡುತ್ತಾಳೆ. ಬಲ ಮಗ ಸೊಸೆ ಮನೆಬಿಟ್ಟು ಹೋಗುತ್ತಾರೆ. ರತನ್‌ಬಾಲಾಜಿ ಎಂಬ ಇವಳ ಮಗ ಕೂಡ ಅಣ್ಣನೊಡನೆ ಹೊರಟು ಹೋದಾಗ ಈಕೆ ತನ್ನ ಮಗ ರತನ್‌ಬಾಲಾಜಿಯ ಕೊಲೆ ಆಗಿದೆಯೆಂದೂ ಆ ಕೊಲೆಯನ್ನು ತನ್ನ ಗಂಡನಾದ ಧರ್ಮದಾಸ ಮಾಡಿದ್ದೆಂದೂ ಆರೋಪಿಸುತ್ತಾಳೆ. ಧರ್ಮದಾಸನ ಹಿರಿಮಗ ಬಚ್ಚಾಜಿ ಕೊಲೆಯಾದನೆಂದು ಆರೋಪಿಸಲಾದ ಬಾಲಕನನ್ನು ನ್ಯಾಯಾಲಯಕ್ಕೆ ಕರೆತರುತ್ತಾನೆ. ಧರ್ಮದಾಸನ ಆರೋಪ ತೊಲಗಿ ನಾಗರತ್ನಳನ್ನು ಹಿಡಿತರಲು ನ್ಯಾಯಾಲಯದ ಆಜ್ಞೆಯಾಗುತ್ತದೆ. ಆ ವೇಳೆಗೆ ಎಲ್ಲ ಸಂಪತ್ತಿನೊಡನೆ ನಾಗರತ್ನ ಹಾಗೂ ಧೀರಾಜಿ ಓಡಿ ಹೋಗುತ್ತಾರೆ. ಪುಣೆಯಲ್ಲಿ ಮದನಸಿಂಗ್ ಮತ್ತು ಕುಸುಮಾಕ್ಷಿ ಎಂಬ ಹೆಸರಿನಿಂದ ಜೀವಿಸುತ್ತಿರುತ್ತಾರೆ. ಬಚ್ಚಾಜಿಯ ಪ್ರಚೋದನೆಯಿಂದ ಕಿಸನ್ ಎಂಬಾತ ಶಿವಗನೆಂಬ ಹೆಸರಿನಲ್ಲಿ ಇವರ ಮನೆಯಲ್ಲಿ ಊಳಿಗಕ್ಕೆ ಸೇರಿ ತನ್ನ ನಟನೆಯಿಂದ ಇಬ್ಬರನ್ನೂ ನಂಬಿಸಿ ಆಪ್ತನಾಗಿ ಅವರ ಗುಟ್ಟುಗಳನ್ನು ಅರಿಯುವುದರ ಜೊತೆಗೆ ಅವರಿಬ್ಬರ ನಡುವೆ ವೈಮನಸ್ಯವುಂಟಾಗುವಂತೆ ಮಾಡುತ್ತಾನೆ. ಇಬ್ಬರೂ ಪರಸ್ಪರ ಆಪಾದನೆ ಮಾಡುತ್ತಿದ್ದಾಗ ಇವರ ಗುಟ್ಟು ಹೊರಬಿದ್ದು ನಾಗರತ್ನಳನ್ನು ಕಂದಾಚಾರದವರು ಹಿಡಿದು ಬಳ್ಳಾರಿಗೆ ಕರೆತರುತ್ತಾರೆ. ಧೀರಾಜಿ ಓಡಿ ಹೋಗುತ್ತಾನೆ, ವಿಚಾರಣೆ ಆಗುವ ಕಾಲಕ್ಕೆ ಚಂಡಮಾರುತ, ಮಳೆ ಪ್ರಾರಂಭವಾಗಿ ನಾಗರತ್ನ ಸಿಡಿಲು ಹೊಡೆದು ಸಾಯುತ್ತಾಳೆ.

ರಾಮಸ್ವಾಮಿ ತನ್ನ ಮಗಳು ಮೊಮ್ಮಗನೊಂದಿಗೆ ಅಳಿಯನ ತಾಯಿಯನ್ನು ಕರೆದು ಕೊಂಡು ದೇಶ ಸುತ್ತುತ್ತಾ, ಹೋದೆಡೆಯಲ್ಲೆಲ್ಲಾ ಮೊಮ್ಮಗನ ವಿದ್ಯೆಗೆ ರಾಜ ಮನ್ನಣೆಯನ್ನು ಪಡೆಯುತ್ತಾ ರೀವಾ ಸಂಸ್ಥಾನಕ್ಕೆ ಬರುತ್ತಾನೆ. ವಿದ್ವಾಂಸನಾದ ನರಸಿಂಹಾಚಾರಿ ಯಾವುದಾದರೂ ರಾಜಾಸ್ಥಾನದಲ್ಲಿ ಕಂಡಾನು ಎಂಬ ಗುಪ್ತ ಆಶೆ ಎಲ್ಲರಿಗೂ ಇರುತ್ತದೆ. ರೀವಾ ಸಂಸ್ಥಾನಕ್ಕೆ ಬಂದಾಗ ದೊಂಬರ ಗುಂಪಿನ ಒಂದು ವಿಚಾರಣೆ ಆಸ್ಥಾನಕ್ಕೆ ಬರುತ್ತದೆ. ತಮ್ಮ ಗುಂಪಿಗೆ ಹೊಸದಾಗಿ ಸೇರಿದ ಒಬ್ಬ ತಮ್ಮ ಮಾತನ್ನು ಮೀರಿದ್ದಾನೆಂದೂ ಅವನನ್ನು ತಮ್ಮ ಗುಂಪಿನಿಂದ ಉಚ್ಚಾಟಿಸಿದ್ದಾಗಿಯೂ ವಿಚಾರಿಸಿ ಶಿಕ್ಷಿಸುವ ಹೊಣೆ ಆಸ್ಥಾನದ್ದೆಂದೂ ವಿಚಾರಣೆ ನಡೆಯದಿದ್ದರೆ ತಾನೇ ಆತನನ್ನು ಕೊಲ್ಲುವುದಾಗಿಯೂ ಗುಂಪಿನ ಮುಖ್ಯಸ್ಥ ತಿಳಿಸುತ್ತಾನೆ. ತಪ್ಪು ಮಾಡಿದ ಹೊಸಬನ ವಿಚಾರಣೆಯ ಕಾಲದಲ್ಲಿ ಆತ ಬಳ್ಳಾರಿಯಲ್ಲಿ ಧೀರಾಜಿ ಎಂಬ ಹೆಸರಿಟ್ಟುಕೊಂಡಿದ್ದ ಮಲ್ಲ ಎಂಬುದು ಬೆಳಕಿಗೆ ಬರುತ್ತದೆ. ಜಾನಕಿಯನ್ನು ಭಾವಿಯಲ್ಲಿ ನೂಕಿ ಒಡವೆಗಳನ್ನು ಅಪಹರಿಸಿದ್ದಾಗಿ ಆತ ತಪ್ಪೊಪ್ಪಿಕೊಳ್ಳುತ್ತಾನೆ. ರಾಮಸ್ವಾಮಿ ತನ್ನ ಕುಟುಂಬಕ್ಕೆ ಒದಗಿದ ಪಾಡನ್ನು ರಾಜಸಭೆಯಲ್ಲಿ ತಿಳಿಸುತ್ತಾನೆ. ಅದೇ ಆಸ್ಥಾನದಲ್ಲಿ ರಾಜಗುರುವಾಗಿದ್ದಾತನೆ ನರಸಿಂಹಾಚಾರಿ ಎಂಬುದು ತಿಳಿದು ಬರುತ್ತದೆ. ಅಂದು ಗಾಡಿಯಲ್ಲಿ ಬಂದಾಗ ಪ್ರಜ್ಞೆ ತಪ್ಪಿದ್ದಾಗಿಯೂ ತಿಳಿವು ಬಂದಾಗ ತನ್ನ ಪತ್ನಿ, ಮಲ್ಲ ಇಬ್ಬರೂ ಇರದುದನ್ನು ಕಂಡು ತಾನು ಪತ್ನಿಯ ಶೀಲವನ್ನು ಶಂಕಿಸಿ ಹೊರಟುಬಿಟ್ಟದ್ದಾಗಿಯೂ ಈಗ ಆಕೆ ನಿರಪರಾಧಿನಿ ಎಂದು ಅರಿತಿದ್ದಾಗಿಯೂ ನರಸಿಂಹಾಚಾರಿ ಹೇಳುತ್ತಾನೆ. ಮಲ್ಲನಿಗೆ ಮರಣದಂಡನೆಯಾಗುತ್ತದೆ. ಗಂಡ ಹೆಂಡತಿ, ತಂದೆ ಮಕ್ಕಳು, ತಾಯಿ ಮಕ್ಕಳು ಮಾವ ಅಳಿಯಂದಿರ ಸಮಗಮ ರಾಜಾಸ್ಥಾನದಲ್ಲಿ ನಡೆಯುತ್ತದೆ.

ಈ ಕಾದಂಬರಿಯಲ್ಲಿ ಮೊದಲಿನ ಎರಡು ಕಾದಂಬರಿಗಳಿಗಿಂತ ಹೆಚ್ಚು ಹತ್ತ್ವ ಸಂಭಾಷಣೆಗೆ ಲಭಿಸಿದೆ. ಕಥೆ ಚುರುಕುಗತಿಯಲ್ಲಿ ನಡೆಯುತ್ತದೆಂದೋ ಅಥವಾ ನಾಟಕೀಯತೆಯ ತಿರುವುಗಳಿಗೆ ಹೆಚ್ಚು ಉಪಯುಕ್ತತೆ ದೊರಕುತ್ತದೆಂದೋ ಎರಡೂ ಕಾರಣಗಳಿಂದಲೋ ಪುಟ್ಟಣ್ಣನವರು ಈ ಮಾರ್ಗವನ್ನು ಅನುಸರಿಸಿದ್ದಾರೆಂದು ತೋರುತ್ತದೆ. ಆಗಿನ ರಂಗಭೂಮಿಯ ನಾಟಕಗಳಲ್ಲಿ, ಯಕ್ಷಗಾನಗಳಲ್ಲಿ ಸಂಭಾಷಣೆ ಬಹುಮುಖ್ಯವಾಗಿದ್ದು ಕಾದಂಬರಿಗೂ ಅಲ್ಲಿಂದಲೇ ಆಮದಾಗಿರಬಹುದು. ‘ಮಾಡಿದ್ದುಣ್ಣೋ ಮಹಾರಾಯ’ಕ್ಕಿಂತ ‘ಮುಸುಗ ತೆಗೆಯೇ ಮಾಯಂಗನೆ’ಯಲ್ಲಿ ಸಂಭಾಷಣೆ ಹೆಚ್ಚು ಪ್ರಮಾಣದಲ್ಲಿದೆ; ‘ಅವರಿಲ್ಲ ದೂಟ’ದಲ್ಲಿ ಇನ್ನೂ ಹೆಚ್ಚು ಪ್ರಮಾಣ ಕಾಣುತ್ತದೆ. ಮುಮ್ಮಡಿಯವರ ಕಾಲಮಾನಕ್ಕೆ ಸೇರುವ ಈ ಕಥೆ ಅಂದಿನ ಸಾಮಾಜಿಕ ಸ್ಥಿತಿಗತಿಗಳನ್ನು ಆ ಕಾಲದ ಆಶ್ಚರ್ಯಕರ ಸನ್ನಿವೇಶಗಳನ್ನು ನಿರೂಪಿಸುತ್ತದೆ.

ಯಾವುದೇ ಕಾದಂಬರಿಯಲ್ಲಿ ಉದ್ದವಾದ ನೀರಸವಾದ ಸ್ವಗತಗಳಿಲ್ಲ ‘ವಾಚಕರೇ’ ಮೊದಲಾದ ಸಂಬೋಧನೆಗಳಿಂದ ಕಾದಂಬರಿಕಾರರು ಮಧ್ಯೆ ತಲೆ ಹಾಕುವುದಿಲ್ಲ. ಅತಿರಂಜಿತ ನಾಟಕೀಯತೆ ಇಲ್ಲ. ನಗರ ಇಲ್ಲಿ ಅಧಿಕಾರ ಸ್ಥಾನ ಮಾತ್ರ, ಹಳ್ಳಿಗೆ ವಿರುದ್ಧವಲ್ಲ. ನಗರ ವಾಸಿಗಳು ಹಳ್ಳಿಗರು ಇವರಲ್ಲಿ ಪರಸ್ಪರ ಅಸಹನೆ ಇಲ್ಲ.

ಪಾತ್ರ ಚಿತ್ರಣ

ಸೀತೆ

ಪುಟ್ಟಣ್ಣನವರು ‘ಮಾಡಿದುಣ್ಣೋ ಮಹಾರಾಯ’ದ ಸೀತೆಯನ್ನು ಪರಂಪರೆಯ ಸೌಶೀಲ್ಲದ ಕುರುಹಾಗಿ ಚಿತ್ರಿಸಿದ್ದಾರೆ. ಒಂದು ಘಟ್ಟದಲ್ಲಿ ಆಕೆಯ ಸುತ್ತಲೇ ಕಥೆಯ ಹಂದ ನಿರ್ಮಿತವಾಗಿ ಸೀತೆಯೇ ಕೇಂದ್ರ ಬಿಂದುವಾಗಿದ್ದಾಳೆ. ಸೀತೆ ರಾಜಾಸ್ಥಾನದಲ್ಲಿ ಹೆಸರು ಗಳಿಸಿದ ಪಶುಪತಿ ಸಾಂಬಶಾಸ್ತ್ರಿಯ ಮೊಮ್ಮಗಳು, ರಾಜಪೂಜ್ಯತೆಯನ್ನು ಹೊಂದಿರುವ ಸದಾಶಿವ ದೀಕ್ಷಿತರ ಸೊಸೆ, ಮಹಾದೇವನ ಹೆಂಡತಿ, ತಿಮ್ಮ್ಮನ ಬಲ ಸೊಸೆ. ಹಿರಿಯರು ಕೇಳುವ ಗರತಿಯ ಲಕ್ಷಣಗಳಿಗೆಲ್ಲ ಲಕ್ಷ್ಯದಂತಿದ್ದಾಳೆ ಸೀತೆ. ಪತಿವ್ರತೆ, ಸುಮದರಿ, ಕೆಲಸದಲ್ಲಿ ಮುಂದು, ಮಾತು ಕಡಿಮೆ, ತನ್ನ ನೋವನ್ನು ತಾನೇ ನುಂಗಿ ನಗುನಗುತ್ತ ಇರುವುದು ಈಕೆಯ ರೂಢಿ, ಗಂಡನಲ್ಲಿ ಸಮರ್ಪಣ ಭಾವ, ಮಗುವಿನಲ್ಲಿ ಪ್ರಾಣ, ಮನೆಯ ಹಿರಿಯರಲ್ಲಿ ಗೌರವ, ತನ್ನನ್ನು ತಾನು ರಕ್ಷಿಸಿಕೊಳ್ಳಲಾರಳು. ಕುಟುಂಬದ ಒಂದು ಸೋಲನ್ನು, ನ್ಯಾಯಪರರ ಇಕ್ಕಟ್ಟು ಬಿಕ್ಕಟ್ಟುಗಳನ್ನು ಇದು ಸೂಚಿಸುವಂಥದು. ಮನೆಯಲ್ಲಿ ಇವಳಿಗೆ ದೊರಕಿದ್ದೆಲ್ಲ ಮೆಚ್ಚುಗೆ ಸಹಾನುಭೂತಿ, ಕಷ್ಟದಲ್ಲಿ ಜೊತೆಯಲ್ಲ. ಅತ್ತೆಯ ಕೆಟ್ಟ ಬೈಗುಳನ್ನು ಉಸಿರೆತ್ತದೆ ಸಹಿಸಿದಳು. ಆದರೆ ತನ್ನನ್ನು ಮೈಸೂರು ಸೂಳೆಗೆ ಹೋಲಿಸಿದಾಗ, ಮಹಾದೇವನನ್ನು ಬೈದಾಗ ಮಾತ್ರ ಅವಳು ಅತ್ತೆಗೆ, ವಿನಯದಿಂದಲೇ ಆದರೂ, ಉತ್ತರ ಕೊಡುವುದು ಅರ್ಥಗರ್ಭಿತವಾಗಿದೆ. ಎಂತಹ ಸಾತ್ತ್ವಿಕರೂ ತಮ್ಮ ವ್ಯಕ್ತಿತ್ವದ ಕೇಂದ್ರ ಬಿಂದುವಿನ ಅಪಮಾನವನ್ನು ಸಹಿಸಲಾರರೆಂಬ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು. ಸೀತೆಯ ಪಾತ್ರ ಬರಿಯ ಆದರ್ಶ ಪಾತ್ರವಾಗುವುದನ್ನು ತಪ್ಪಿಸಿ ಕೆಲಮಟ್ಟಿಗಾದರೂ ನಂಬಲರ್ಹವಾಗುವುದು ಈ ಕಾರಣದಿಂದಲೇ. ಅತ್ತೆ ನಾದಿನಿಯರ ಕಾಟದಿಂದಲೇ ಅವಳು ಮೆತ್ತಗಾಗಿದ್ದಾಳೆ. ಜೊತೆಗೆ ಹೊರಗಿನಿಂದ ಕಾಮದ ಬಲೆ ಅವಳಿಗೆ ಬೀಸಲಾಗಿದೆ. ಇಂಥ ಹೊತ್ತಿನಲ್ಲಿ ಅವಳ ನೆರವಿಗೆ ಬಂದದ್ದು ಅವಳ ತಾಯ್ತನದ ಹಿರಿಮೆ, ಅವಳ ಮನಸ್ಥೈರ್ಯ, ಅಪರೂಪಕ್ಕೆ ನೆರೆಮನೆಯಾಕೆಯ ಸಹಾನುಭೂತಿ, ಸೀತೆ ಸಾವಿತ್ರಿಯರ ಚರಿತ್ರೆಗಳು, ಅರುಂದಮ್ಮನ ವೃತ್ತಾಂತ. ತನ್ನನ್ನು ಸುತ್ತುವರಿದಿದ್ದ ಸಂಕಟಗಳ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದ ಸೀತೆ ಭಟಜಿಯ ನೆರವಿನಿಂದ ನಿಜವಾದ ಅಗ್ನಿಯಿಂದಲೂ ಎದ್ದು ಬಂದಳು. ಜನಪದ ಗೀತೆಗಳಲ್ಲಿ ಬರುವ ‘ಅತ್ತೆ ಮಾವರಿಗಂಜಿ, ಸುತ್ತೇಳು ನೆರೆಗಂಜಿ, ಮತ್ತೆ ನಲ್ಲನ ದನಿಗಂಜಿ’ ನಡೆದ ಗೃಹಿಣಿಯಂತಹುದು ಸೀತೆಯ ಪಾತ್ರ.

ಅಪ್ಪಾಜಿ

ಸಂಜವಾಡಿಯ ಅಮ್ಮನ ಗುಡಿಯ ಪೂಜಾರಿ ಸತ್ತಾಗ ಆತನ ಸಮೀಪದ ಬಂಧು ಎಂದು ಬಂದು ಸೇರಿಕೊಂಡ ಸಿದ್ದನೆಂಬ ವ್ಯಕ್ತಿ ಕ್ರಮೇಣ ಊರಿನಲ್ಲಿ ದೊಡ್ಡವನಾದುದನ್ನು “ಸಿದ್ದ ಸಿದ್ದಪ್ಪನಾದ, ಸಿದ್ದಪ್ಪ ಸಿದ್ದಪ್ಪಾಜಿಯವರಾದರು, ಸಿದ್ದಪ್ಪಾಜಿಯವರು ಹೋಗಿ ಅಪ್ಪಾಜಿಯವರಾದರು” ಎಂದು ಪುಟ್ಟಣ್ಣನವರು ವರ್ಣಿಸುತ್ತಾರೆ. ಇವನಿಗೆ ಕುರಿಗಳನ್ನು ಹಳ್ಳಕ್ಕೆ ಬೀಳಿಸುವ ಕಲೆ ಚೆನ್ನಾಗಿ ಗೊತ್ತು. ಕಿಡಿಗೇಡಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವುದೂ ಚೆನ್ನಾಗಿ ಗೊತ್ತು. ಸಾತ್ತ್ವಿಕರು ತಾವಾಗಿ ಇವನಿಂದ ದೂರ ಹೋಗುತ್ತಿದ್ದರು. ಇದರಿಂದ ಇವನ ಆಟ ಬಹುಪಾಲು ಸರಾಗ. ಇವನದು ಹತೋಟಿಯಿಲ್ಲದ ಕ್ರಮ. ಜೊತೆಗೆ ಪ್ರಾಯದ ಮದ, ಭಕ್ತರ ಕಾಣಿಕೆದುಡ್ಡು, ಕಳ್ಳರ ಕೂಟದ ಆದಾಯ. ಹಿಡಿತವಿಲ್ಲದ ಮನಸ್ಸು, ಶಕುನಿ ನಾರಪ್ಪಯ್ಯನ ಸಹವಾಸ, ಇವುಗಳು ಇನ್ನಷ್ಟು ಕೆಳಗಿಳಿಸಿದವು. ಕುರುಡುಕಾಮದಿಂದ ಪ್ರೇರಿತನಾಗಿ ಸೀತೆಯ ಮಾನಭಂಗಕ್ಕೆ ಹವಣಿಸಿದ ಅಪ್ಪಾಜಿಗೆ ಆದದ್ದು ಅಭಿಮಾನ ಭಂಗ, ಸಿಕ್ಕಿದ್ದು ಕಲ್ಲಿನೇಟು. ರೂಪ ಇರುವೆಡೆಯಲ್ಲೆಲ್ಲ ಕಲಂಕವೂ ನೆಲೆಗೊಂಡಿರಬಹುದು ಎಂಬ ಇವನ ಭ್ರಮೆಗೆ ಉಪಾದ್ರಿಯ ಮಾತು ಒತ್ತಾಸೆ ಕೊಟ್ಟಿತು. ಭಟಜಿಯಿಂದ ಸೋಲು ಅನುಭವಿಸಿ ಹಲ್ಲುದುರಿಸಿಕೊಂಡು ತನ್ನಿಂದ ಯಾರಿಗೂ ಕೇಡಾಗದಂತಾದ ಶೀಘ್ರದಲ್ಲೇ ಅವನಿಗೆ ಸೆರೆಮನೆಯ ಶಿಕ್ಷೆಯೂ ಲಭಿಸುತ್ತದೆ.

ಹೆಂಡತಿಯ ಬಾಯಿಗೆ ಹೆದರಿ ಗೃಹಕೃತ್ಯಗಳ ವಿಚಾರಗಳಲ್ಲಿ ಸೋತ ಸದಾಶಿವ ದೀಕ್ಷಿತ; ದರ್ಪಕ್ಕೆ ಕೊರೆ ತೋರಿದರೆ ತನ್ನ ಅಸ್ತಿತ್ವಕ್ಕೇ ಅನ್ಯಾಯ ಎಂಬ ಭಾವನೆಯ ಮೂರ್ತ ರೂಪವಾದ ದೀಕ್ಷಿತನ ಪತ್ನಿ ತಿಮ್ಮಮ್ಮ; ಬಲತಾಯಿಯ ಬಾಯಿ ತಂದೆಯಲ್ಲಿದ್ದ ಗೌರವಗಳ ನಡುವೆ ಹೆಂಡತಿಯನ್ನು ಅತಿಶಯವಾಗಿ ಪ್ರೀತಿಸುವ, ಹಿಂದೂ ಕುಟುಂಬದ ಕೆಲವು ನಿಯಮಗಳಿಂದಾಗಿ ಏನೂ ಮಾಡಲಾಗದ ಗಂಡನಾದ ಮಹಾದೇವ; ಸರ್ಕಾರದ ಉಪ್ಪು ತಿಂದು ದ್ರೋಹ ಬಗೆದು ಹೆಣ್ಣು ಹಣಗಳೆರಡರ ವಿಷಯದಲ್ಲೂ ನೀತಿ ತಪ್ಪಿ ನಡೆದು ಕಡೆಗೆ ಶಿಕ್ಷೆಗೊಳಗಾದ ಮಾರಮಣರಾಯ; ಅನಾವಶ್ಯಕ ಕ್ರೌರ್ಯದಿಂದ ಮಕ್ಕಳನ್ನು ಶಿಕ್ಷಿಸಿ, ತಾನೂ ಕಷ್ಟ ಅನುಭವಿಸಿದ ಹಾಗೂ ಬುದ್ಧಿ ಹೇಳಿದ ದೀಕ್ಷಿತನ ಮನೆಯಲ್ಲಿ ಅನ್ನವುಂಡು ಗಳುವೆಣಿಸಿದ ನಾರಪ್ಪಯ್ಯ; ಐಲುತನದ ಕಿಟ್ಟು; ತಾಯಿಯೊಡನೆ ಸೇರಿ ಅತ್ತಿಗೆಗೆ ನರಕಹಿಂಸೆ ಕೊಟ್ಟ ಸಾತಿ ಹಾಗೂ ಕೃತಿಯ ಮಂಗಳಾಂತ್ಯದ ಹರಿಕಾರನಾಗಿ ಬಂದು ಯಾವ ಫಲಾಪೇಕ್ಷೆಯನ್ನೂ ಒಲ್ಲದ ಭಟಜಿ ಇವರ ಚಿತ್ರಗಳು ಸ್ಫುಟವಾಗಿ ಮೂಡುತ್ತವೆ. ಯಾವ ಪಾತ್ರವೂ ಒಳ್ಳೆಯ ಅಥವಾ ಕೆಟ್ಟ  ಗುಣದ ಮೂರ್ತರೂಪವಾಗಿಲ್ಲದಿರುವುದು ಕೃತಿಯ ಹೆಗ್ಗಳಿಕೆಗೆ ಕಾರಣವಾಗಿದೆ. ಸಾತ್ತ್ವಿಕರಾದ ಸದಾಶಿವ ದೀಕ್ಷಿತ, ಸೀತೆ, ಮಹಾದೇವ ಇವರ ಒಳ್ಳೆಯತನದಲ್ಲಿ ಅಸಹಾಯಕತೆ ತುಂಬಿದೆ. ತಿಮ್ಮಮ್ಮನಲ್ಲಿ ಒಂದು ಕರುಣೆಯ ಎಳೆ ಇದೆ. ಅಮಾಸೆಯ ಮುಗ್ಧತೆ, ಮಾರಮಣ ರಾಯನ ಚಾಲೂಕಿನಲ್ಲದ ನಡವಳಿಕೆ ಇದೇ ವಿಚಾರವನ್ನು ಸಮರ್ಥಿಸುತ್ತದೆ. ಅಮಾಸೆಯ ಕಥನ, ಅರುಂದಮ್ಮನ ವೃತ್ತಾಂತ, ಶೇಷಯ್ಯ, ಕೃಷ್ಣಯ್ಯರ ವೃತ್ತಾಂತಗಳು ಬಿಡಿಯಾಗಿಯೂ ಓಡಬಹುದಾದ ಕಥಾನಕಗಳಾಗಿವೆ.

ಅಪ್ರಮೇಯ

‘ಮುಸುಗ ತೆಗೆಯೇ ಮಾಯಾಂಗನೆ’ಯ ಪ್ರಮುಖ ಪಾತ್ರ ಅಪ್ರಮೇಯ. ಅವನ ವಿದ್ಯಾಭ್ಯಾಸ ಗುಂಡಲುಪೇಟೆ, ಮಳವಳ್ಳಿಗಳಲ್ಲಿ ವಿಲಕ್ಷಣವಾಗಿ ನಡೆದು ರಣನವರೆಯಂಥ ಶೂರನ ಬಳಿ ಪ್ರಯೋಜನಕ್ಕೆ ಬಂದಿತು. ತಾನಾರೆಂಬುದನ್ನು ಮರೆಸಿ ತನ್ನ ಕೆಲಸವನ್ನು ಸಾಧಿಸಿಕೊಳ್ಳುವ ಚಾತುರ್ಯ ಅವನಲ್ಲಿ ನೆಲೆಯಾಗಿದ್ದುದಕ್ಕೆ ಮಳವಳ್ಳಿಯ ಮುಂಜಿಗೆ ಹೋಗಿದ್ದವನು ಫಾರ್ಸಿ ಉರ್ದುಗಳನ್ನು ಕಲಿತು ಪಾಂಡಿತ್ಯ ಪ್ರದರ್ಶನ ಮಾಡಿ ಹಿಂದೂ ಗಳಲ್ಲದೆ ಮುಸಲ್ಮಾನರ ಮೆಚ್ಚುಗೆಯನ್ನೂ ಗಳಿಸಿದ್ದೇ ಸಾಕ್ಷಿ. ಸುಸಂಸ್ಕೃತ, ಸಾತ್ತ್ವಿಕ, ಹಿಡಿದ ಕೆಲಸವನ್ನು ಮಾಡುವುದರಲ್ಲಿ ಗಟ್ಟಿಗ. ಪ್ರಾಮಾಣಿಕತೆಯಲ್ಲಿ ಯಾರಿಗೂ ಕಡಿಮೆಯಿಲ್ಲ. ಹನುಮಂತರಾವ್ ಹಾಗೂ ಅಪ್ರಮೇಯರಲ್ಲಿ ಹೇಳಿ ಮಾಡಿಸಿದಂತಹ ಹೊಂದಾಣಿಕೆಯಿದೆ. ಹನುಮಂತರಾವ್ ಬಾಹುಬಲಿ ಸಂಪನ್ನ, ಅಪ್ರಮೇಯ ಬಹು ಬುದ್ಧಿಶಾಲಿ. ಹಲವು ಯುದ್ಧಗಳಲ್ಲಿ ಹೋರಾಡಿ ಗೆದ್ದ ದೈಹಿಕ ಬಲದ ಸಾಧನೆ ರಣನವರೆಯದು. ಟೊಳ್ಳು ಸುದ್ದಿಯ ನಿಜಾನಿಜಗಳನ್ನರಿಯಲು ಅಸಮರ್ಥನಾಗಿ ಹನುಮಂತರಾವ್ ತನ್ನೆಲ್ಲ ಆಸ್ತಿಯನ್ನು ಬಿಟ್ಟು ಓಡಿದಾಗ ದೈಹಿಕ ಬಲದ ಮಿತಿಯನ್ನು ಪುಟ್ಟಣ್ಣನವರು ತಿಳಿಸುತ್ತಾರೆ. ಸೂಕ್ಷ್ಮಬುದ್ಧಿ, ಕೌಶಲ, ಸ್ವಾಮಿನಿಷ್ಠೆಗಳ ಅಪ್ರಮೇಯ ತನ್ನೊಡೆಯನ ಆಸ್ತಿ ಪರರ ಪಾಲಾಗದಂತೆ ಕಾಪಾಡಿ ಆತನ ಅನ್ವೇಷಣೆಗಾಗಿ ಹೊರಡುವುದು ಬುದ್ಧಿಬಲ ಸಾಧನೆ. ಕಡೆಯಲ್ಲಿ ಆತ್ಮಾರಾಂ ಬಾಲಾಜಿಯ ಸಹಾಯದಿಂದ ಯಶಸ್ಸು ತಡೆಯುವುದು ಬುದ್ಧಿಬಲದ ಮಿತಿಯನ್ನು ಸೂಚಿಸುವಂಥದು. ದೈಹಿಕಬಲ ಹಾಗೂ ಬುದ್ದಿಬಲಗಳ ತುಲನೆಯಲ್ಲಿ ಬುದ್ಧಿಬಲದ ಹೆಚ್ಚುಗಾರಿಕೆಯನ್ನು ತೋರಿಸಿ ಅನಂತರ ಅದು ಫಲಾಪೇಕ್ಷೆಯಿಲ್ಲದ ಪಾರಮಾರ್ಥಿಕತೆಗೆ ಶರಣಾಗುವುದು, ಪುರುಷಶಕ್ತಿಯೇ ಪ್ರಧಾನವಲ್ಲ ಎಂದು ತೋರಿಸುವುದು ಪುಟ್ಟಣ್ಣನವರ ಉದ್ದೇಶ, ಅಪ್ರಮೇಯನ ಯಶಸ್ಸು ಅವನ ಮುಂದಿನ ಹೊಣೆಯನ್ನು ನಿರ್ಧರಿಸುತ್ತದೆ. ಇವನಿಂದಲೇ ದೇಪಣ್ಣನ ಮೇಲಿನ ಕೊಲೆಯ ಅಪವಾದ ದೂರವಾಗುತ್ತದೆ. ಕೈತಪ್ಪಿದ್ದ ಮೈಸೂರಿನ ದೌಲತ್ತು ಮುಮ್ಮುಡಿಯವರ ಕೈಸೇರಲು ಬೇಕಾದ ಕಾರ್ಯಕ್ಕೆ ಹೊಸ ಚಲನೆ, ಬೆಂಬಲಗಳು ದೊರೆಯುತ್ತವೆ.

ಇಂಗ್ರೀಜಿ ಹಯಾತ್‌ಖಾನ್

ಈತನದು ಬಹು ಕುತೂಹಲಕರ ಪಾತ್ರ. ‘ಮಾಡಿದ್ದುಣ್ಣೋ ಮಹಾರಾಯ’ ಕಾದಂಬರಿಯ ಉಪಾದ್ರಿ ನಾರಪ್ಪಯ್ಯ, ಅಪ್ಪಾಜಿ ಹಾಗೂ ‘ಅವರಿಲ್ಲದೂಟ’ದ ಮಲ್ಲ ಇವರಿಗಿಂತ ಈತ ಚಾಣಾಕ್ಷ. ಮೇಲಿನ ಮೂವರಲ್ಲೂ ಒಂದೊಂದು ಮಿತಿಯಿದೆ. ಇಂಗ್ರೀಜಿ ಹಯಾತ್‌ಖಾನ್ ಇವರೆಲ್ಲರನ್ನೂ ಮೀರಿಸಿದವನು. ಇವನದು ನರಿಯ ಚಾತುರ್ಯ, ತೋಳನ ನೀಚತನ, ಹದ್ದಿನ ಕಣ್ಣು, ಹಾವಿನ ಛಲ, ಒಟ್ಟಿನಲ್ಲಿ ದಗಾಖೋರ, ಖದೀಮ., ಅವನ ಅತ್ತೆ ಕಾಸಿಂಬಿಯ ಸಹಾಯ ಪಡೆದು ಮುಗ್ಧರಾದ ಹಳ್ಳಿಯ ಜನರನ್ನು ವಂಚಿಸಿ ಸುಲಿಯುತ್ತಿದ್ದುದು ಅವನ ಧೂರ್ತತೆಗೆ ನಿದರ್ಶನ. ಪುಟ್ಟನಂಜಪ್ಪಾಜಿ ಅರಸು, ಆಸಪತ್ರೆ ತಿಮ್ಮಯ್ಯ ಮುಂತಾದವರಿಗೆ ಮಾಡಿದ ಮೋಸಗಳು ಚಮತ್ಕಾರ ಪೂರ್ಣವಾದುವ. ಆದರೆ ರಣನವರೆಗೆ ಮಾಡಿದ ವಂಚನೆ ಇನ್ನೂ ದೊಡ್ಡ ಹರಹಿನದು. ಅದು ದೊಡ್ಡ ವಂಚನೆಯ ಜಾಲ. ಹಯಾತ್‌ಖಾನನಂತಹ ಚತುರರು ಬಸಪ್ಪನಿಗೆ ಜೋಡಿಯಾದುದು ಮೊದಲೇ ತೊಳಲುತ್ತಿದ್ದ ರಣನವರೆಯ ಧೈರ್ಯ ಕುಸಿಯಲು ಕಾರಣವಾಯಿತು. ಈ ಹಯಾತ್‌ಖಾನನಿಗೆ ಜನರ ಯೋಗ್ಯತೆ ಅರ್ಹತೆಗಳ ನ್ನರಿಯುವ ಶಕ್ತಿಯ ಜೊತೆಗೆ ಅವರ ದೌರ್ಬಲ್ಯಗಳನ್ನರಿಯುವ ಗುಟ್ಟೂ, ಗೊತ್ತು. ಒಂದು ರೀತಿಯಲ್ಲಿ ಇದೇ ಅವನ ನಿಜವಾದ ಶಕ್ತಿ.

ಆಯಾಚಿತವಾಗಿ ತನ್ನ ಬಳಿ ಬಂದ ದೇಪಣ್ಣನಂಥವನ ಮಹತ್ತ್ವವನ್ನು ಅರಿಯದೆ ಹೊರ ಹೊಳಪಿಗೆ ಸೋತು ಮರುಳಾದ ನಾಗರತ್ನಾಸಾನಿ, ಪರಿಪೂರ್ಣ ಚಿತ್ರವನ್ನು ಒಂದು ಮಸಿ ಕೆಡಿಸಿತೆಂಬ ಗಾದೆಗೆ ಸಾಕ್ಷಿಯಾದ ಧೀರನೂ ಬುದ್ಧಿವಂತನೂ ಆದ, ಚಾಪಲ್ಯಕ್ಕೆ ಬಲಿಯಾಗುವ ದೇಪಣ್ಣ, ದೇಪಣ್ಣನ ಮೇಲಿನ ಕ್ರೋಧದಿಂದ ಉಂಡ ಮನೆಗೆ ದ್ರೋಹ ಬರೆಯುವ ಸಂಚಿಗೆ ಕೈಯಿಟ್ಟ. ಬಸಪ್ಪ ಇತ್ಯಾದಿಗಳು ಸ್ಫುಟವಾಗಿ ಮೂಡಿರುವ ಇತರ ಪಾತ್ರಗಳು.

ಜಾನಕಿ

‘ಅವರಿಲ್ಲದೂಟ’ದ ಬಹುಕಾಲ ಮಕ್ಕಳಿಲ್ಲದ ದಂಪತಿಗಳ ಬಾಳಿನಲ್ಲಿ ಬೆಳಕಿನ ಸೆಲೆಯಾಗಿ ನೆಲೆಯಾಗಿ ಹುಟ್ಟಿದ ಜಾನಕಿ ಗುಣವಂತೆ. ಸಂಪತ್ತಿನ ಸೋಗಿಗೆ ಮರುಳಾಗದ ತಾಯಿ ತಂದೆಗಳು ಅವಳನ್ನು ಸದಾಚಾರ ಸಂಪನ್ನವಾದ ಬಾಗಲೂರು ನರಸಿಂಹಾಚಾರಿಗೆ ಮದುವೆ ಮಾಡಿಕೊಟ್ಟರು. ಗಂಡನಿಗೂ ಅತ್ತೆಗೂ ಮೆಚ್ಚಿನವಳಾದ ಜಾನಕಿಯ ಗೌರವ ಅವಳು ತಾಯಿಯಾದ ಮೇಲೆ ಇನ್ನೂ ಒಂದು ಮೆಟ್ಟಿಲೇರಿತು. ಇಂಥ ಸುಖದ ಸುರಿಮಳೆಯಲ್ಲಿ ಅವಳು ಸೊಕ್ಕಲಿಲ್ಲ, ಬೀಗಲಿಲ್ಲ. ಆದರೆ ಅವಳ ಮೇಲೆ, ಅವಳ ಐಶ್ವರ್ಯದ ಮೇಲೆ ಅವಳ ಮನೆಯಲ್ಲಿ ನಿರ್ಗತಿಕನಾಗಿ ಬಂದು ಸೇರಿಕೊಂಡು ಬೆಳೆದ ಮಲ್ಲನ   ಕಣ್ಣು, ಅವಳು ತನಗೆ ದಕ್ಕಲಿಲ್ಲ ಎಂಬ ರೋಷ. ಅವಳ ಆಸ್ತಿಯನ್ನಾದರೂ ನುಂಗುವ ಛಲ. ಆದರೆ ಮಲ್ಲನ ಈ ಕಾಮದ ಕಣ್ಣಾಗಲೀ ರೋಷದ ಬಗೆಯಾಗಲೀ ಜಾನಕಿಗೆ ಪ್ರಾರಂಭದಲ್ಲಿ ತಿಳಿಯದು. ಅನಂತರ ಅಸ್ಪಷ್ಟವಾಗಿ ತಿಳಿದ ಸೂಚನೆ ಇದೆ. ಅಲ್ಲದೆ ಅವಳ ಮೇಲೆ ನೇರವಾದ ಬಲಾತ್ಕಾರವಿಲ್ಲ. ಈ ದೃಷ್ಟಿಯಿಂದ ಜಾನಕಿಯ ಪಾತ್ರ ಸೀತೆಯಷ್ಟು ಪರೀಕ್ಷಿತವಲ್ಲ. ಆದ್ದರಿಂದಲೇ ಕಷ್ಟದಲ್ಲಿ ನುರುಗಿ ಬರುವ ಗಟ್ಟಿತನವೂ ಹೊಳಪೂ ಕೂಡ ಸೀತೆಯದರಷ್ಟು ತೀವ್ರವಲ್ಲ. ಹಾಗೆಂದು ಗಂಡನಿಂದ ದೀರ್ಘಕಾಲದ ಅಗಲಿಕೆಯ ಕಷ್ಟ ಕಡಿಮೆಯದೂ ಅಲ್ಲ. ಈ ಕಾಲದಲ್ಲಿ ಅಲ್ಪ ಸ್ವಲ್ಪ ಉಳಿದಿರಬಹುದಾದ ಅವಳ ಮನಸ್ಸಿನ ಅಪಕ್ಷತೆಯೂ ಕಳಚಿ ಅವಳು ಪತಿಸಾನ್ನಿಧ್ಯಕ್ಕಾಗಿ ಜಾತಕ ಪಕ್ಷಿಯಂತೆ ಕಾದಿದ್ದಾಳೆ. ನಿರಪರಾಧಿನಿಯಾದ ಅವಳ ಮೇಲಿನ ಸಂಶಯದ ಪೊರೆ ಕಳಚಿದ ಕೂಡಲೇ ಅವಳ ಪತಿ ನರಸಿಂಹಾಚಾರಿ ತನ್ನ ಇರುವಿಕೆಯನ್ನು ಬಯಲುಗೊಳಿಸುತ್ತಾನೆ. ಸೀತೆಯ ಪಾತ್ರದಂತೆಯೇ ಜಾನಕಿಯದು ಸಹ ಸೌಶೀಲ್ಯದ ಅಚ್ಚಿಗೆ ಬಿದ್ದ ಪಾತ್ರ.

ಮಲ್ಲ

ತನ್ನ ಮಿತಿಯನ್ನರಿಯದೆ ತನ್ನದಲ್ಲದ ಪಾಲೂ ತನಗೇ ಸೇರಬೇಕೆಂದು ಬಯಸಿ ಅದಕ್ಕಾಗಿ ಇವನು ನಡೆಸಿದ ಪ್ರಯತ್ನಗಳು ಇವನನ್ನಲ್ಲದೆ ಇವನ ಸುತ್ತಲಿನವರನ್ನು ಹಲವು ಕಷ್ಟಗಳ ತಿರುಗಣಿಯಲ್ಲಿ ಸಿಲುಕಿಸಿದವು. ಅನಾಥ ಹುಡುಗನಾಗಿ ರಾಮಜಿಯ ಬಳಿ ಸೇರಿ ಅವನೊಡನೆ ರಾಮಸ್ವಾಮಿ ರಂಗನಾಯಕಮ್ಮ ಇವರ ಆಶ್ರಯ ಪಡೆದು ಮನೆಯ ಮಗನಂತೆ ಬೆಳೆದ ಈತ ಜಾನಕಿಯ ರೂಪ, ಸಂಪತ್ತುಗಳನ್ನು ಬಯಸಿದವ. ಅವನಿಂದ ಸಾಧ್ಯವಾದದ್ದು ಅವಳ ಒಡವೆಗಳ ಅಪಹರಣ ಮಾತ್ರ. ಬಳ್ಳಾರಿಗೆ ಹೋಗಿ ನೆಲೆಸಿದ ಇವನ ಕುತಂತ್ರದ ಬೀಜ ಅವಿವೇಕಿಯಾದ ನಾಗರತ್ನಳ ಮನಸ್ಸಿನಲ್ಲಿ ಆಕರ್ಷಕವಾಗಿ ಕಂಡು ಇವನು ಅಪೇಕ್ಷಿಸಿದ ಫಲಗಳನ್ನು ನೀಡಿತು. ಮೋಟಜ್ಜಿಯ ದುರ್ಬೋಧೆ ಸಹಾಯಕವಾಗಿ ಕೆಲಸ ಮಾಡಿತು. ನಾಗರತ್ನಗಳಂಥ ಹಲವರು ಅವನ ಆಕರ್ಷಣೆಯ ಕೇಂದ್ರವಾದರು. ಅವನ ನಿಜರೂಪ ಇತರರಿಗೆ ತಿಳಿಯುವ ವೇಳೆಗೆ ಅವನು ಅಲ್ಲಿಂದ ತಪ್ಪಿಸಿಕೊಂಡು ರೀವಾ ಸಂಸ್ಥಾನಕ್ಕೆ ದೊಂಬರ ಜೊತೆಯವನಾಗಿ ಬಂದ. ಇವನ ವೇಷ ಕಳಚಿ ಇವನ ನೀಚ ಕಾರ್ಯಗಳೆಲ್ಲ ಒಟ್ಟಿಗೇ ಬಹಿರಂಗಕ್ಕೆ ಬಂದುದು ಇವನಿಂದ ಕಷ್ಟಪಟ್ಟ ಜನರ ಹಾಗೂ ಇವನನ್ನು ಶಿಕ್ಷಿಸತಕ್ಕೆ ರಾಜನ ಸಮ್ಮುಖದಲ್ಲಿ. ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಹಾಗೆ ಮಾಡದೆ ವಿಧಿಯಿರಲಿಲ್ಲ ಇವನಿಗೆ. ಇವನ ಪಾಪಪಾತ್ರೆ ತುಂಬಿತ್ತು, ತಕ್ಕ ಶಿಕ್ಷೆಯೂ ದೊರಕಿತು.

ಸಾತ್ತಿಕತೆಯ ಅಪರಾವತಾರವಾಗಿದ್ದು ಹಾವಿಗೆ ಹಾಲೆರೆದ ರಾಮಸ್ವಾಮಿ ಮತ್ತು ರಂಗನಾಯಕಮ್ಮ : ನಿಷ್ಠಾವಂತ ಸೇವಕ ರಾಮಜಿ; ಸಲ್ಲದ ಸಂಶಯವನ್ನು ತಳೆದು ಹಲವು ವರ್ಷಗಳ ಕಾಲ ತೊಳಲಿದ ಪತಿ ನರಸಿಂಹಾಚಾರಿ; ಬಡತನದಲ್ಲಿ ಕಂದಿ ಸಿರಿತನ ಬಂದ ಮೇಲೆ ಬದಲಾಗದೆ ಉಳಿದ ಆತನ ಮುದಿ ತಾಯಿ ಮಂಗಮ್ಮ ಮುಂತಾದವರು ಕಥೆಯ ಬೆಳವಣಿಗೆಗೆ ಸಹಾಯಕರಾದ ಪಾತ್ರಗಳು.

ಪುಟ್ಟಣ್ಣನವರು ಪಾತ್ರರಚನೆಯಲ್ಲಿ ಗಟ್ಟಿಗದು. ಪಾತ್ರಗಳು ಒಂದೇ ಬಣ್ಣದಿಂದ ಕೂಡಿದುದಲ್ಲ, ಗಟ್ಟಿತನವಿಲ್ಲದೆ ನೆರಳುಗಳಂತೆ ಎಲ್ಲೂ ಸುಳಿಯುವುದಿಲ್ಲ. ಸಾಮಾಜಿಕ ಪರಿಸ್ಥಿತಿಯ ಭದ್ರ ನೆಲೆಗಟ್ಟಿನ ಮೇಲೆ ರಚಿತವಾದುದರಿಂದ ಅವುಗಳು ಎಲ್ಲೂ ಪೇಲವವಾಗದೆ ಸಶಕ್ತವಾಗಿವೆ. ವಿದೇಶೀಯರಾಗಲೀ ಪರಧರ್ಮೀಯರಾಗಲೀ ಪುಟ್ಟಣ್ಣನವರ ಕಾದಂಬರಿಗಳಲ್ಲಿ ಮುಖ್ಯಪಾತ್ರಗಳಾಗುವುದಿಲ್ಲ.  ಹಲವು ವೇಳೆ ವಾದಕ್ಕಾಗಿ ಹಾಗೂ ಆರ್ಯಧರ್ಮದ ಹಿರಿಮೆಯನ್ನು ತಿಳಿಸಲು ಇಂಥ ಪಾತ್ರಗಳ ಅಗತ್ಯವನ್ನು ಪೂರೈಸಿದರೂ ಅವು ಆನುಷಂಗಿಕವಾಗಿ ಮಾತ್ರ ಕಾಣುತ್ತವೆ. ಕಾದಂಬರಿಯ ಪಾತ್ರಗಳು ಪುಟ್ಟಣ್ಣನವರ ಜೀವನದೃಷ್ಟಿಗೆ ಮಾತ್ರ ಒಗ್ಗುತ್ತವೆ ಎನ್ನಬಹುದು.