ಮೂರೂ ಕಾದಂಬರಿಗಳ ಹೋಲಿಕೆಗಳು

‘ಮಾಡಿದ್ದುಣ್ಣೋ ಮಹಾರಾಯ’, ‘ಮುಸುಗ ತೆಗೆಯೇ ಮಾಯಾಂಗನೆ’ ಹಾಗೂ ‘ಅವರಿಲ್ಲದೂಟ’ – ಪುಟ್ಟಣ್ಣನವರ ಈ ಮೂರು ಕಾದಂಬರಿಗಳಲ್ಲೂ ಅನೇಕ ಮುಖ್ಯ ಹಾಗೂ ಆನುಷಂಗಿಕ ವಿಚಾರಗಳಲ್ಲಿ ಹೋಲಿಕೆಗಳು ಕಾಣುತ್ತವೆ. ಇವು ಆಕಸ್ಮಿಕವಲ್ಲ.

ಈ ಕಾದಂಬರಿಗಳಲ್ಲಿ ಯಾವುದಕ್ಕೂ ನಾಯಕ ಅಥವಾ ನಾಯಕಿಯ ಹೆಸರಿಲ್ಲ. ‘ಮಾಡಿದ್ದುಣ್ಣೋ ಮಹಾರಾಯ’ ಎಂಬುದು ಒಂದು ನಂಬಿಕೆ, ಗಾದೆ, ‘ಮುಸುಗ ತೆಗೆಯೆ ಮಾಯಾಂಗನೆ ಎಂಬುದು ಒಂದು ಸಂಬೋಧನೆ. ‘ಅವರಿಲ್ಲದೂಟ’ ಅಥವಾ ‘ಕೊಂಬೆಗೆ ರೆಂಬೇ ಸೇರಿತು’ ಎಂಬುದು ಒಂದು ಉದ್ಧಾರ ಹಾಗೂ ಸುಖಾಂತವಾದ ಒಂದು ಸ್ಥಿತಿ.

ಮೂರೂ ಕಾದಂಬರಿಗಳೂ ಶ್ಲೋಕ, ಹಾಡು ಮೊದಲಾದುವುಗಳಿಂದ ಪ್ರಾರಂಭವಾಗುತ್ತದೆ. ಮೂರರಲ್ಲೂ ಪ್ರಾಮಾಣಿಕತೆಯ ವಿವಿಧ ರೂಪಗಳ ಮೇಲೆ ದಾಳಿಯಿದೆ. ಘರ್ಷಣೆಯ ನಂತರ ಒಳ್ಳೆಯದಕ್ಕೆ ಗೆಲುವು, ಕೆಟ್ಟದ್ದಕ್ಕೆ ಸೋಲು, ‘ಮಾಡಿದ್ದುಣ್ಣೋ ಮಹಾರಾಯ’ದಲ್ಲಿ ಪಾತಿವ್ರತ್ಯದ ಮೇಲಿನ ಸಂಚು, ‘ಮುಸುಗ ತೆಗೆಯೇ ಮಾಯಾಂಗನೆ’ ಯಲ್ಲಿ ತಪ್ಪು ಮಾಡದವನ ಮೇಲೆ ಅಪವಾದ ಹೊರಿಸುವ ಹವಣಿಕೆ, ‘ಅವರಿಲ್ಲದೂಟ’ದಲ್ಲಿ ನಿರಪರಾಧಿಗಳನ್ನು ಮೋಸಕ್ಕೆ ಒಳಗಾಗಿಸುವ ಯತ್ನ. ಈ ವೈಯಕ್ತಿಕ ಸ್ವಾರ್ಥಗಳು ಕೊನೆಗೆ ಟೊಳ್ಳಾಗಿ ಬೀಳುತ್ತವೆ. ಅಂತಿಮ ಜಯ ಸತ್ಯಕ್ಕೆ ಒಲಿಯುತ್ತದೆ. ಅಲ್ಲದೆ ಈ ಕಾರ್ಯ ನಿರ್ವಹಣೆಗೆ ಬರಿಯ ಪುರುಷ ಪ್ರಯತ್ನವೊಂದೇ ಸಾಲದು. ದೈವೀಕೃಪೆಯ ರೂಪವಾಗಿ ಪಾರಮಾರ್ಥಿಕ ನೆರವನ್ನು ನೀಡುವ ನಿಸ್ವಾರ್ಥ ವ್ಯಕ್ತಿಯೊಬ್ಬನ ಸಹಾಯ ಈ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಕಾಣುವ ನಿಯಮ.

‘ಮಾಡಿದ್ದುಣ್ಣೋ ಮಹಾರಾಯ’ ಕಾದಂಬರಿಯ ಸೀತೆ ಹಾಗೂ ‘ಅವರಿಲ್ಲದೂಟ’ದ ಜಾನಕಿ ಇವರ ಗುಣ ಒಂದೇ ಅಚ್ಚಿನದು. ಕಾಲಮಾನ ಹಾಗೂ ಪಾತ್ರಗಳ ಮೂಲದ್ರವ್ಯ ಒಂದೇ. ಇವರಿಬ್ಬರೂ ಅನುಭವಿಸುವ ಕಷ್ಟ ಪರಂಪರೆಗಳು ಕೂಡ ತೀರ ಬೇರೆಯಾದವುಗಳಲ್ಲ. ಸೀತೆಯ ಮೇಲೆ ಅಪ್ಪಾಜಿಯ ವಕ್ರದೃಷ್ಟಿ, ಮಲ್ಲನಿಗೆ ಜಾನಕಿಯ ಮೇಲೆ ಕಣ್ಣು, ಒಟ್ಟಿನಲ್ಲಿ ಸಾತ್ವಿಕತೆಯ ಮೇಲೆ ತಾಮಸದ. ನಯ ನಾಜೂಕಿನ ಮೇಲೆ ರೂಕ್ಷತೆಯ ಕಣ್ಣು. ಸೀತೆಯ ಮೇಲೆ ಬಲಾತ್ಕಾರದ ಪ್ರಯತ್ನವಿದೆ. ಆನಕಿಯ ಮೇಲೆ ಅಂಥ ಪ್ರಯತ್ನವಿಲ್ಲ. ಎರಡೂ ಕಡೆಯೂ ಒಡವೆ. ಹಣ ಇವುಗಳ ಅಪಹರಣವಿದೆ. ಹೆಸರುಗಳ ಸಾಮ್ಯವೂ ಆಕಸ್ಮಿಕವಲ್ಲ.

ಫಲಾಪೇಕ್ಷೆಯಿಲ್ಲದ ನೆರವು ಮೂರು ಕಾದಂಬರಿಗಳಲ್ಲೂ ಕಾಣುತ್ತದೆ. ಸೀತೆಗೆ ಭಟಜಿಯ ಸಹಾಯ ಒದಗಿದಂತೆ ಮಲ್ಲನಿಗೆ ಫಕೀರನೊಬ್ಬನ ಒತ್ತಾಸೆ ಸಿಗುತ್ತದೆ. ಅಪ್ರಮೇಯನಲ್ಲಿ ಧೈರ್ಯ ತುಂಬಲು ಆತ್ಮಾರಾಂ ಬಾವಾಜಿ ಇದ್ದಾನೆ. ಸೀತೆಯನ್ನು ಗಂಡ, ಮಾವ, ಊರಿನ ಗುಡಿ, ರಾಜಾಸ್ಥಾನಗಳು ರಕ್ಷಿಸುವುದಿಲ್ಲ. ಹೊರಗಿನ ಶಕ್ತಿ ರಕ್ಷಿಸುತ್ತದೆ. ಜಾನಕಿಯನ್ನು ಸಹ ಗಂಡ, ತಂದೆ ರಕ್ಷಿಸಲಾಗುವುದಿಲ್ಲ. ಬದಲಾಗಿ ತಪ್ಪು ತಿಳಿಯುವ ಗಂಡನ ಮೂಲಕ ವ್ಯಂಗ್ಯದ ಸೂಚನೆಯಿದೆ. ಸೀತೆಯನ್ನು ಅಧಃಪತನಕ್ಕೆಳೆಯಲು ಅವರ ಮನೆಯ ಅನ್ನ ಉಂಡ ಉಪಾದ್ರಿ ಉದ್ಯುಕ್ತನಾಗಿದ್ದರೆ ಜಾನಕಿಯ ವಿನಾಶಕ್ಕೆ ಅವರ ಮನೆಯಲ್ಲಿದ್ದು ಊಟ ಮಾಡಿದ ಮಲ್ಲ ತೊಡಗುತ್ತಾನೆ. ಕಾದಂಬರಿಕಾರರ ಜೀವನದೃಷ್ಟಿ ಧೋರಣೆಗಳಿಂದ ಸೀತೆ ಜಾನಕಿಯರ ಮೇಲಿನ ಸಂಚು ಯಶಸ್ವಿಯಾಗುವುದಿಲ್ಲ.

‘ಮಾಡಿದ್ದುಣ್ಣೋ ಮಹಾರಾಯ’ ಹಾಗೂ ‘ಅವರಿಲ್ಲದೂಟ’ ಎರಡೂ ಕಾದಂಬರಿಗಳಲ್ಲಿ ಅತ್ತೆ ಸೊಸೆಯರ ವಾದವಿದೆ. ಎರಡೂ ಕಡೆ ಸೌಮ್ಯಸ್ವಭಾವಕ್ಕೇ ಪೆಟ್ಟು ಬೀಳುತ್ತದೆ. ಮೊದಲನೆಯದರಲ್ಲಿ ಸೊಸೆ ಅಸಹಾಯಕಳು. ಎರಡನೆಯದರಲ್ಲಿ ಅತ್ತೆ ಲೆಕ್ಕಕ್ಕಿಲ್ಲದ ವ್ಯಕ್ತಿ. ಒಂದು ಕಾದಂಬರಿಯಲ್ಲಿ ಅತ್ತೆ ಸೊಸೆಯ ಸೌಂದರ‍್ಯವನ್ನು ಕುರೂಪ ಎಂಬಂತೆ ವರ್ಣಿಸುತ್ತಾಳೆ ಇನ್ನೊಂದು ಕಾದಂಬರಿಯಲ್ಲಿ ಸೊಸೆ ರಸಗವಳವನ್ನು ಕದನ್ನು ಎಂಬಂತೆ ಹೇಳುತ್ತಾಳೆ. ಎರಡೂ ಕಡೆ ಮಿಕ್ಕ ಹೆಂಗಸರು ಇವರನ್ನು ಬೈದುಕೊಳ್ಳುತ್ತಾರೆ.

‘ಮಾಡಿದ್ದುಣ್ಣೋ ಮಹಾರಾಯ’ ಕಾದಂಬರಿಯಲ್ಲಿ ಪರಿವಾರದವರು ಹಾಗೂ ತೊರೆಯರ ಜಗಳ ಉಲ್ಬಣವಾಗಿ ಸ್ಫೋಟಗೊಳ್ಳುವ ಸನ್ನಿವೇಶ ಉಂಟಾಗುವುದು ಒಂದು ಮದುವೆಯ ಮೆರವಣಿಗೆಯ ಹೊತ್ತಿನಲ್ಲಿ. ‘ಮುಸುಗ ತೆಗೆಯೇ ಮಾಯಾಂಗನೆ’ಯಲ್ಲಿ ಶಿವಾಚಾರದವರ ಹಾಗೂ ಇತರರ ನಡುವಿನ ವಿವರ ಒಡೆದು ಕಾಣುವುದು ಒಬ್ಬ ಮಠಪತಿಗಳ ಮೆರವಣಿಗೆಯ ಹೊತ್ತಿನಲ್ಲಿ. ಎರಡೂ ಮೆರವಣಿಗೆಗಳು ಕೋಮು ವಿರಸದ ಸಾಕಾರರೂಪಗಳಾಗಿವೆ. ಎರಡರ ಗಲಭೆಯೂ ರಾಜಸನ್ನಿಧಿಗೆ ವಿಚಾರಣೆಗೆ ಬರುತ್ತವೆ. ಎರಡು ಬಾರಿಯು ರಾಜಾಸ್ಥಾನ ತನ್ನ ಹೊಣೆಯ ನಿರ್ವಹಣೆಯಲ್ಲಿ ಸೋಲುತ್ತದೆ.

ರಾಮಾಯಣದ ಹೋಲಿಕೆಗಳು – ‘ಮಾಡಿದ್ದುಣ್ಣೋ ಮಹಾರಾಯದೊಡನೆ

‘ಮಾಡಿದ್ದುಣ್ಣೋ ಮಹಾರಾಯ’ದಲ್ಲಿ ರಾಮಾಯಣದ ಹಲವು ಅಂಶಗಳು ಭಟ್ಟಿ, ಯಿಳಿದಿವೆ. “…ನಿರ್ಮಲ ಮೂರ್ತಿಗಳಾದ ಶ್ರೀರಾಮ, ಸೀತಾದೇವಿ, ಯುಧಿಷ್ಠಿರ, ದ್ರೌಪದಿ ಇವರುಗಳ ಗುಣಗಳಲ್ಲಿ ಕೆಲವು ಭಾಗವನ್ನು ಹೊಂದಿ ಲೋಕದ ಲತಾಡಿಗೆ ಸಿಕ್ಕಿ ಕಷ್ಟಕ್ಕೆ ಗುರಿಯಾದರೂ, ತಮ್ಮ ಧೀರೋದಾತ್ತ ಗುಣಗಳನ್ನು ಬಿಡದೇ ಇರತಕ್ಕ ಪಾತ್ರಗಳನ್ನು ಮನುಷ್ಯ ಮಾತ್ರದವರಲ್ಲಿ ಆರಿಸಿಕೊಂಡೋ ಊಹಿಸಿಕೊಂಡೋ ವರ್ಣಿಸುವುದು ಮನಸ್ಸನ್ನು ಚೆನ್ನಾಗಿ ಆಕರ್ಷಣ ಮಾಡುವುದರಲ್ಲಿ ಸಂಶಯವಿಲ್ಲ. ಪುರಾಣ ಪ್ರಸಿದ್ಧರು ವ್ಯಾಕರಣದ ಸೂತ್ರಗಳಾಗಿದಾರೆ. ಮನುಷ್ಯ ಸಾಮಾನ್ಯರಲ್ಲಿ ಸಿಕ್ಕುವ ಧೀರರು ಉದಾಹರಣೆಗಳಾಗಿದಾರೆ” (ಮಾಡಿದ್ದುಣ್ಣೋ ಮಹಾರಾಯ, ಪೀಠಿಕೆ, ಪು.೮) ಎಂಬ ಮಾತಿಗೆ ಲಕ್ಷ್ಯವಾಗಿ ಪುಟ್ಟಣ್ಣನವರು ರಾಮಾಯಣವನ್ನೇ ಮನಸ್ಸಿನಲ್ಲಿಟ್ಟುಕೊಂಡು ಈ ಕಾದಂಬರಿಯನ್ನು ಬರೆದಿರುವುದು ಖಚಿತವಾಗುತ್ತದೆ.

ಕಾದಂಬರಿಯ ಒಂದು ಮುಖ್ಯ ಪಾತ್ರದ ಹೆಸರು ಸೀತೆ ಎಂದು ಉದ್ದೇಶವಪೂರ್ವಕವಾಗಿ ಬಳಸಲಾಗಿದೆ. ಸೀತೆಯ ಪಾತ್ರ ಪರಂಪರಾಗತವಾದ ಸೌಶೀಲ್ಲದ ಅಚ್ಚಿಗೆ ಬಿದ್ದ ಪಾತ್ರ. ಈ ಹೆಸರು ಇಟ್ಟದ್ದು ಸಾರ್ಥಕವಾಯಿತು ಎಂದು ಮುಮ್ಮಡಿಯವರ ಬಾಯಲ್ಲಿ ಹೇಳಿಸುತ್ತಾರೆ” ಮಾಡಿದ್ದುಣ್ಣೋ ಮಹಾರಾಯ, ಪು.೭೯). ಸದಾಶಿವ ದೀಕ್ಷಿತ ಸಂಜೆಯ ಹೊತ್ತು ಹೇಳುವ ಪುರಾಣಗಳಲ್ಲಿ ರಾಮಾಯಣದ ಸೀತೆಯಂತಹ ಪತಿವ್ರತೆಯರ ಚರಿತ್ರೆಗಳಿಗೇ ಮಹತ್ತ್ವದಕ್ಕಿದೆ. ಇಂತಹ ಕಥನವಾದ ಮೇಲೆ ಒಂದು ದಿನ ಅರುಂದಮ್ಮನ ಚರಿತ್ರೆ – ಆಕೆಯ ಸರಿಯಾದ ಹೆಸರು ಅರುಂಧತಿ – ಹೆಂಗಸರ ಮಾತಿನಲ್ಲಿ ತಿಳಿಯುತ್ತದೆ. ಅರುಂಧತಿ ಎಂಬುದೂ ಒಬ್ಬ ಪತಿವ್ರತೆಯ ಹೆಸರೇ. ಇದೂ ಪ್ರಜಾಪೂರ್ವಕವಾಗಿ ಬಳಕೆಯಾದದ್ದೇ. ‘ಮಾಡಿದ್ದುಣ್ಣೋ ಮಹಾರಾಯ’ದ ಸೀತೆ ತನ್ನ ಅತ್ತೆಯ ಬೈಗಳೆಲ್ಲವನ್ನೂ ಸಹಿಸಿ ತನ್ನನ್ನು ಮೈಸೂರು ಸೂಳೆಗೆ ಹೋಲಿಸಿದಾಗ ಪ್ರತಿಯಾಗಿ ಉತ್ತರ ಕೊಟ್ಟಳು. ಅರುಂದಮ್ಮನಾದರೂ ತನ್ನ ಬಂಧು ಗೋಪಾಲನ ಎಲ್ಲ ಮಾತನ್ನೂ ಸಹಿಸಿದವಳು ತನ್ನನ್ನು ಸೂಳೆಗೆ ಹೋಲಿಸಿದಾಗ ಶಾಪ ಹಾಕಿದಳು. ಅದರಂತೆಯೇ ಗೋಪಾಲನ ಕಾಲುಗಳೆರಡೂ ಕುಷ್ಟ ರೋಗದಿಂದ ಬಿದ್ದು ಹೋಗಿ, ನಾಲಿಗೆ ಸೆಳೆದುಕೊಂಡು; ನೀರೂ ನೆರಳೂ ಇಲ್ಲದ ಕಡೆ ಪ್ರಾಣ ಬಿಡುತ್ತಾನೆ. ಇಂಥ ಘಟನೆಯ ಸಂಭವನೀಯತೆ ಏನೇ ಇರಲಿ, ಇದೆಲ್ಲ ಕಾದಂಬರಿಕಾರರ ಒಂದೇ ಪ್ರಮುಖ ಆಶಯವನ್ನು ಎತ್ತಿ ಹಿಡಿಯುತ್ತದೆ. ಸೀತೆಯ ಮೂಲಕ ಧ್ವನಿಸುವ ಸತ್ಯಕ್ಕೇ ಆರುಂದಮ್ಮನ ಪಾತ್ರವೂ ಬೆಂಬಲವನ್ನು ಕೊಡುತ್ತದೆ. ಜೊತೆಗೆ ಈಕೆ ಸಹಗಮನ ಮಾಡಿದಂತೆ ಹೇಳಲಾಗಿದೆ. ಅಮಾಸೆಯಿಂದ ಕಾಪಾಡಲ್ಪಟ್ಟ ಉಪ್ಪಲಗಿತ್ತಿಯೊಬ್ಬಳ ವೃತ್ತಾಂತವೂ ಇಂಥದ್ದೇ. ಆಕೆ ತನ್ನ ಗಂಡನನ್ನು ಬಿಟ್ಟು ಬೇರೆಯವರಿಗೆ ನಡೆದುಕೊಳ್ಳುವುದಿಲ್ಲ ಎಂಬ ತೀರ್ಮಾನವೇ – ಆಕೆ ಅಬಲೆಯಾದರೂ, ಆಕೆಯ ಗಂಡ ಎದುರು ಪಕ್ಷದವರ ಮುಂದೆ ಶಕ್ತಿಹೀನನಾದರೂ, ಅಮಾಸೆಯಂಥ ಹೊಸಬನ ಸಹಾಯವನ್ನು ಪಡೆಯುವುದರ ಮೂಲಕ – ಗೆಲ್ಲುತ್ತದೆ.

ಸೀತೆಯ ಮೇಲೆ ಆಕ್ರಮಣ ಮಾಡಲು ಬಂದ ಅಪ್ಪಾಜಿಯನ್ನು ಕುರಿತು ಕಾದಂಬರಿಕಾರರು “…ಆ ಸಿದ್ದನು ನವೀನ ರಾವಣನೋ ಕಲಿಯುಗದ ಕಾಲನೇಮಿಯೋ ಎನ್ನುವ ಹಾಗೆ ಕಾಣಿಸುತಾ…” ಎಂದು ಉದ್ಗರಿಸುತ್ತಾರೆ (ಮಾಡಿದ್ದುಣ್ಣೋ ಮಹಾರಾಯ, ಪು. ೧೪೮). ರಾಮಾಯಣದ ಸೀತೆಯಲ್ಲಿ ಇಲ್ಲಿನ ಸೀತೆ ತಾನೇ ಎಷ್ಟು ತಾದಾತ್ಮ್ಯ ಹೊಂದಿದ್ದಾಳೆಂದರೆ ತನ್ನ ಮೇಲೆ ಅಪ್ಪಾಜಿ ಕೈ ಮಾಡಿದಾಗ ಆಕೆ “ಸೀತಮ್ಮನವರನ್ನು ರಾವಣ ಕೈಯಾರ ಮುಟ್ಟಿ ಎತ್ತಿ ರಥದ ಮೇಲೆ ಕೂರಿಸಿಕೊಂಡು ಹೋದನಲ್ಲ? ಅದಾಗ್ಯೂ ಅವಳ ಪಾತಿವ್ರತ್ಯಕ್ಕೆ ಭಂಗ ಬರಲಿಲ್ಲವಲ್ಲ?” (ಮಾಡಿದ್ದುಣ್ಣೋ ಮಹಾರಾಯ, ಪು. ೧೫೦) ಎಂದು ಉದ್ಗರಿಸುತ್ತಾಳೆ. ಕಾದಂಬರಿಕಾರರ ಹಾಗೂ ಸೀತೆಯ ಈ ಮಾತುಗಳು ಅಪ್ಪಾಜಿಯನ್ನು ನೇರವಾಗಿಯೇ ರಾವಣನಿಗೆ ಹೋಲಿಸಿವೆ. ಮುಂದೆ ತಿಮ್ಮಮ್ಮ ಸೀತೆಯ ಬಗೆಗೆ ವಿಚಾರಿಸಲು ಅಪ್ಪಾಜಿಯ ಬಳಿಗೆ ಬಂದಾಗ “ಆಂಜನೇಯನು ಕಾಲನೇಮಿಯನ್ನು ಕುರಿತು ಸಂಜೀವನ ಪರ್ವತಕ್ಕೆ ದಾರಿಯನ್ನು ಕೇಳಿದ ಹಾಗಾಯಿತು” (ಮಾಡಿದ್ದುಣ್ಣೋ ಮಹಾರಾಯ, ಪು. ೧೫೪) ಎಂಬ ಕಾದಂಬರಿಕಾರರ ಮಾತು ನಮಗೆದುರಾಗುತ್ತದೆ. ಕೃತಿಯ ಮಂಗಳಾಂತ್ಯದಲ್ಲಿ ಮಿಥ್ಯಪವಾದಕ್ಕೆ ಸಿಲುಕಿದ್ದ ರಾಮಾಯಣದ ಸೀತೆ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದಂತೆ ‘ಮಾಡಿದ್ದುಣ್ಣೋ ಮಹಾರಾಯ’ದ ಸೀತೆಯೂ ಅಗ್ನಿಯಿಂದಲೇ ಎದ್ದು ಬರುತ್ತಾಳೆ.

ವೈಯಕ್ತಿಕ ಸಂಗತಿಗಳು

ಕೃತಿಕಾರನ ವ್ಯಕ್ತಿತ್ವ ಕೃತಿಯಲ್ಲಿ ಪ್ರತಿಫಲಿಸುವುದು ಅನೂಹ್ಯವಾದ ಸಂಗತಿಯಲ್ಲ. ಈ ಪರಿಚಿತ ವಿಚಾರವನ್ನು ಪುಟ್ಟಣ್ಣನವರ ಕಾದಂಬರಿಗಳಲ್ಲೂ ಹಲವೆಡೆಗಳಲ್ಲಿ ಕಾಣಬಹುದು. ಕುತೂಹಲಕರವಾದ ವಿಷಯವೆಂದರೆ ಪುಟ್ಟಣ್ಣನವರ ಜೀವನಕ್ಕೆ ಸಂಬಂಧಿಸಿದ ವಿವರಗಳು ಇಲ್ಲಿ ಒಂದೇ ಪಾತ್ರಕ್ಕೆ ಸಂಬಂಧಿಸದೆ ಹಲವು ಕಡೆ ಕಾಣುತ್ತದೆ. ಆದರೆ ಅನುಭವಗಳು ಚೆದರಿದಂತೆ ಕಾಣದು. ಅಲ್ಲದೆ ತನ್ನನ್ನೇ ಮುಖ್ಯಪಾತ್ರವನ್ನಾಗಿಸಿಕೊಳ್ಳುವ ಬಾಲಿಶತನದಿಂದ ಪುಟ್ಟಣ್ಣನವರು ಬಹುದೂರ ಸರಿಯುವುದರಿಂದ ನಿರೂಪಿತ ಸಂಗತಿಗಳಲ್ಲಿ ಬೆರಗು ಸಂಭ್ರಮಗಳಿಗಿಂತ ತೂಕ ತಪ್ಪದ ಹಾಳತ, ಒಪ್ಪು ಕಾಣುತ್ತದೆ.

ಪುಟ್ಟಣ್ಣನವರ ವೈಯಕ್ತಿಕ ಜೀವನದಲ್ಲಿ ಮೊದಲ ದಾಂಪತ್ಯಕ್ಕೆ ಸಂಬಂಧಿಸಿದಂತೆ ಒಂದು ನೋವಿನ ಸಂಗತಿ ನಡೆಯಿತೆಂದು ಈ ಮೊದಲು ಹೇಳಿದೆ. ಪುಟ್ಟಣ್ಣನವರಿಗೆ ತಗುಲಿದ ಈ ಪೆಟ್ಟು ಅವರನ್ನು ಕೆಳಗಿಳಿಸಲಿಲ್ಲ. ಕತ್ತಲು ಹೆಚ್ಚಾದಷ್ಟು ನಕ್ಷತ್ರಗಳು ಹೆಚ್ಚು ಮಿನುಗುತ್ತವೆ ಎಂಬ ಒಂದು ಹೇಳಿಕೆಯಿದೆ. ಈ ಅನುಭವ ಅವರ ತೀವ್ರತರವಾದ ಭಾವನೆಗಳಿಗೆ ಕಾವೇರಿಸಿ ಒಂದು ಪಕ್ವತೆಗೆ ತಂದಿತು. ಪುಟ್ಟಣ್ಣನವರಿಗೆ ಸ್ತ್ರೀಯ ಪಾತಿವ್ರತ್ಯ ಪ್ರಾಮಾಣಿಕತೆಯ ಒಂದು ರೂಪ. ಅವರು ನಂಬಿದ್ದ ಮೌಲ್ಯಗಳು ಖಚಿತ ಹಾಗೂ ಸಾಮಾಜಿಕವಾಗಿ ಸ್ವೀಕೃತವಾದುವು. ಈ ಹಿನ್ನೆಲೆಯಲ್ಲಿ ಪುಟ್ಟಣ್ಣನವರಂಥ ಸೂಕ್ಷ್ಮ ಮನಸ್ಸಿನ ಜೀವಿಗೆ ಆದ ಆಘಾತ ತೀವ್ರವಾಗಿಯೇ ಇತ್ತು. ಈ ಅರಕೆಯನ್ನು ತುಂಬಿಕೊಳ್ಳಲು ಸಾಹಿತ್ಯದಲ್ಲಿ ವಿರುದ್ಧ ಮುಕ್ತಾಯದ ಒಂದು ಕೃತಿಗೆ ಶರಣು ಹೋದರು. ರಾಮಾಯಣ ಅವರಿಗೆ ಅಚ್ಚುಮೆಚ್ಚಾದದ್ದು ಬಹುಶಃ ಸ್ತ್ರೀಯ ಪಾತಿವ್ರತ್ಯಕ್ಕೆ ಅಲ್ಲಿ ದೊರಕಿರುವ ಹಿರಿಮೆಯಿದೆ. ಪುಟ್ಟಣ್ಣನವರ ಜೀವನ ಸಾಹಿತ್ಯಗಳಲ್ಲಿ ಅಭೇದ ಕಲ್ಪನೆ ಬಂದಿದ್ದು ಹೀಗೆ. ಒಂದು ಸಂಸ್ಕೃತಿಯ ಧೋರಣೆಯನ್ನು ವೈಯಕ್ತಿಕವಾದ ನೆಲೆಗಟ್ಟಿನಲ್ಲಿ ಅನುಭವಿಸಿ, ಕುದಿದು, ಪಾಕಗೊಂಡು ಕಲಾತ್ಮಕವಾಗಿ ಅದನ್ನು ಒಂದು ಸಾಹಿತ್ಯ ಕೃತಿಯಾಗಿಸಿದ ಒಂದು ಶ್ರೇಷ್ಠ ಉದಾಹರಣೆ ‘ಮಾಡಿದ್ದುಣ್ಣೋ ಮಹಾರಾಯ’.

ಪುಟ್ಟಣ್ಣನವರು ಎಂದೂ ಸಿನಿಕರಾಗಿರಲಿಲ್ಲ ಎಂಬುದು ಗಮನಿಸಲೇಬೇಕಾದ ಒಂದು ವಿಶೇಷ ವಿಚಾರವಾಗಿದೆ. ವ್ಯಕ್ತಿ ಜೀವನದ ಈ ಅಹಿತಕರ ಘಟನೆಯ ನಂತರವೂ ಅವರಿಗೆ ಮಹಿಳೆಯರ ಬಗ್ಗೆ ಅಪಾರ ಗೌರವ, ಸಹಾನುಭೂತಿಗಳಿದ್ದವು.

ಕಾದಂಬರಿಯ ಹಲವು ಪಾತ್ರಗಳಲ್ಲಿ ಪುಟ್ಟಣ್ಣನವರ ವ್ಯಕ್ತಿತ್ವ ಪಡಿಮೂಡಿದೆ. ‘ಮಾಡಿದ್ದುಣ್ಣೋ ಮಹಾರಾಯ’ದ ಸದಾಶಿವ ದೀಕ್ಷಿತದ ಪಾತ್ರದಲ್ಲಿ ಪುಟ್ಟಣ್ಣನವರ ಪಾತ್ರ ಬಹುಮಟ್ಟಿಗೆ ಕಾಣುತ್ತದೆ. ದೀಕ್ಷಿತನ ರಾಜಪೂಜ್ಯತೆ, ವೈದ್ಯಜ್ಞಾನ, ಜ್ಯೋತಿಷಜ್ಞಾನ, ಸಂಸ್ಕೃತ ಪಾಂಡಿತ್ಯ, ಮಕ್ಕಳ ವಿದ್ಯಾಭ್ಯಾಸವನ್ನು ಕುರಿತ ವಿಚಾರಗಳು ಮುಂತಾದುವೆಲ್ಲ ಪುಟ್ಟಣ್ಣನವರ ರಕ್ತಗತ ಗುಣಗಳು. ದೀಕ್ಷಿತನಂತೆ ಪುಟ್ಟಣ್ಣನವರೂ ಎರಡನೆಯ ಮದುವೆ ಮಾಡಿಕೊಂಡವರು. ದೀಕ್ಷಿತನ ದ್ವಿತೀಯ ಪತ್ನಿಯ ತಂದೆ ಜೋಯಿಸರು. ಪುಟ್ಟಣ್ಣನವರ ಎರಡನೆಯ ಹೆಂಡತಿ ಗೌರವಮ್ಮನವರ ತಂದೆ ಸಹ ಜೋಯಿಸರು. ದೀಕ್ಷಿತನ ಮಗ ಮಹಾದೇವ ತಂದೆಯನ್ನು ಭಾವ ಎಂದು ಕರೆಯುತ್ತಿದ್ದಂತೆ ಪುಟ್ಟಣ್ಣನವರ ಮಕ್ಕಳೂ ತಂದೆಯನ್ನು ಭಾವ ಎನ್ನುತ್ತಿದ್ದರು. ಕಾದಂಬರಿ ಬರೆಯುವ ಕಾಲಕ್ಕೆ ಅವರಿಗೆ ಕಾದಂಬರಿಯಲ್ಲಿನ ದೀಕ್ಷಿತನಷ್ಟೆ ವಯಸ್ಸಾಗಿದ್ದುದು ಪರಿಗಣಿಸಬೇಕಾದ ಸಂಗತಿಯೇ.

ಕಾದಂಬರಿಯಲ್ಲಿ ಪುಟ್ಟಣ್ಣನವರ ಜೀವನದ ಕೆಲವು ನೈಜ ಘಟನೆಗಳು ಸಹ ಸ್ಥಳ ದೊರಕಿಸಿಕೊಂಡಿವೆ. ಕಾದಂಬರಿಯ ಮಹಾದೇವನ ಬಾಲ್ಯದ ಒಂದು ಘಟನೆ ಹೀಗಿದೆ : ತಾಯಿ ಇಲ್ಲದ ತಬ್ಬಲಿ ಮಗುವಿಗೆ ಕೂಲಿ ಹಾಲನ್ನು ಕೊಡಿಸುತ್ತಿದ್ದರು. ಹಾಲು ಕೊಡುತ್ತಿದ್ದ ದಾದಿ ವಿಪರೀತ ಹಿಂಸೆ ಕೊಡುತ್ತಿದ್ದಳು. ಒಂದು ದಿನ ಬೆಳಗಿನಿಂದ ರಾತ್ರಿ ಹತ್ತು ಗಂಟೆಯಾದರೂ ಬರಲಿಲ್ಲ. ಮಗು ಅತ್ತು ಅತ್ತು ಸೊರಗಿತು. ರಾತ್ರಿ ಹತ್ತು ಗಂಟೆಗೆ ದಾದಿ ಬಂದಾಗ ಅಜ್ಜಿ ರೋಸಿ, ಮಗುವನ್ನು ಕೊಂದು ಬಿಡು ಎನ್ನುತ್ತ ಮೇಲಿನಿಂದ ಮಗುವನ್ನೆತ್ತಿ ದಾದಿಯ ಕಾಲ ಮೇಲೆ ಹಾಕಿಬಿಟ್ಟಳು. ಮಗು ಮೂರ್ಛೆ ಹೋಯಿತು. ದಾದಿಯ ಶುಶ್ರೂಷೆಯಿಂದ ಎಚ್ಚೆತ್ತಿತು. ಇದು ಪುಟ್ಟಣ್ಣನವರ ಬಾಲ್ಯದ್ದೇ ಘಟನೆ. ಮಹಾದೇವನ ಬಾಲ್ಯ ಅಜ್ಜಿಯ ಪಾಲನೆಯಲ್ಲಿ ಕಳೆದಂತೆ ಪುಟ್ಟಣ್ಣನವರ ಬಾಲ್ಯವೂ ಅಜ್ಜಿಯ ಪೋಷಣೆಯಲ್ಲಿ ಕಳೆಯಿತು. ಮುಂದೆ ಮಹಾದೇವ ತನ್ನ ಹೆಂಡತಿಗೆ ಬಂದ ಅಪಾಯವನ್ನು ಗುರುತಿಸದೇ ಹೋದುದರಲ್ಲಿ ಪುಟ್ಟಣ್ಣನವರು ತಮ್ಮ ಪತ್ನಿಗೆ ಅಂಥದ್ದೇ ಸಂಚು ಕಾದಿದ್ದನ್ನು ತಪ್ಪಿಸಲಾಗದೆ ಹೋದ ಸೂಚನೆಯಿದೆ.

‘ಅವರಿಲ್ಲದೂಟ’ದ ಶ್ರೀಮಂತ ರಾಮಸ್ವಾಮಿ ತನ್ನ ಮಗಳನ್ನು ನಿರ್ಗತಿಕನಾದ ಗುಣ ಶಾಲಿಗೆ ಮದುವೆ ಮಾಡಿಕೊಡುತ್ತಾನೆ. ಅಳಿಯ ಬುದ್ಧಿವಂತ, ವಿದ್ಯಾವಂತ, ಗುಣವಂತ ಎಂಬುದು ಮುಖ್ಯವಾಗಿ ನಿರ್ಧನಿಕ ಎಂಬ ಅಂಶ ಮಸುಳಿಸಿತು. ಪುಟ್ಟಣ್ಣನವರು ಆಗಿನ ಕಾಲದ ತಾಲ್ಲೂಕು ಧಣಿಗಳಾದ ಅಮೆಲ್ದಾರರು, ಶ್ರೀಮಂತರು. ಆದರೂ ತಮ್ಮ ಹಿರಿಯ ಮಗಳನ್ನು ಅನಾಥಾಲಯದಲ್ಲಿ ಬೆಳೆದು ಉನ್ನತ ಸ್ಥಿತಿಗೇರಿದ ಹುಡುಗನಿಗೆ ಧಾರೆಯೆರೆದು ಕೊಟ್ಟರು. ಈ ಮಾವ ಅಳಿಯಂದಿರಲ್ಲಿ ಕಡೆಯವರೆಗೆ ಪ್ರೀತಿ ವಿಶ್ವಾಸಗಳಿದ್ದವು.

ಪುಟ್ಟಣ್ಣನವರದು ಅಸಾಮಾನ್ಯವಾದ ಧೈರ್ಯ. ಯಾರೂ ಮಾಡದ ಕೆಲಸವನ್ನು ತಾವು ಮಾಡಲು ಹಿಂಜರಿಯುತ್ತಿರಲಿಲ್ಲ. ಚಾಮರಾಜನಗರದಲ್ಲಿದ್ದಾಗ ಒಮ್ಮೆ ಬೇರೆ ಯಾವುದೋ ಕಡೆಗೆ ಹೋಗಿ ಜಮಾಬಂದಿ ಮುಗಿಸಿಕೊಂಡು ಹಿಂದಿರುಗಲಿದ್ದಾಗ, ರಾತ್ರಿ ಹೊತ್ತು ಕಳ್ಳರ ಕಾಟ. ಈಗ ಹೋಗುವುದು ಬೇಡ ಎಂದು ಯಾರು ಹೇಳಿದರೂ ಕೇಳದೆ “ನನ್ನ ಕೆಲಸ ಮುಗಿಯಿತು. ನಾನೇಕೆ ಇಲ್ಲಿ ಉಳಿಯಬೇಕು?” ಎಂದು ಹಠದಿಂದ ಗಾಡಿ ಕಟ್ಟಿಸಿಕೊಂಡು ಹೊರಟರು. ಚಾಮರಾಜನಗರದ ಸುತ್ತಮುತ್ತ ಆಗ ಕಳ್ಳರ ಕಾಟ ಜಾಸ್ತಿ. ದಾರಿಯಲ್ಲಿ ಅಮಾಸೆ ಎಂಬ ಕಳ್ಳ ಅವರಿಗೆ ಅಡ್ಡ ಹಾಕಿದ. ಎಲ್ಲವನ್ನೂ ದೋಚಲು ಬಂದಿದ್ದಾಗಿಯೂ ಅಡ್ಡಿ ಮಾಡಿದರೆ ತಲೆ ಒಡೆಯುವುದಾಗಿಯೂ ಕೈಲಿದ್ದ ಆಯುಧವನ್ನು ತೋರಿಸಿದ. ಪುಟ್ಟಣ್ಣನವರು ಹೆದರಲಿಲ್ಲ. “ಏನು ಬೇಕಾದರೂ ತಗೋ. ಆದರೆ ಇಂಥ ಕೆಲಸ ಯಾಕೆ ಮಾಡ್ತೀ? ದುಡಿದು ತಿನ್ನೋಕೆ ಆಗಲ್ವಾ? ನೋಡಿದರೆ ಗಟ್ಟಿಮುಟ್ಟಾಗಿದ್ದೀಯ” ಎಂದರು. “ಯಾಕೆ ಮಾಡ್ತೀನಿ ಅಂದರೆ ಹೊಟ್ಟೆಗಾಗಿ. ಕೆಲಸ ಯಾರು ಕೊಡ್ತಾರೆ?” ಎಂದ ಅವನು. “ಹಾಗಾದ್ರೆ ಇಂಥ ದಿನ ಇಷ್ಟು ಹೊತ್ತಿಗೆ ಬಾ ನನ್ನ ಹತ್ತಿರ. ಕೆಲಸ ಕೊಡ್ತೀನಿ, ಶಿಕ್ಷೆ ಅಲ್ಲ” ಎಂದರು. ಚಾಮರಾಜನಗರಕ್ಕೆ ಅವನನ್ನು ಕರೆಸಿಕೊಂಡರು. ಕುಪ್ರಸಿದ್ಧನಾಗಿದ್ದ ಆ ಪ್ರಾಯದ ಕಳ್ಳ ಮನೆಯಲ್ಲಿ ಪ್ರವೇಶ ಮಾಡುತ್ತಿದ್ದಾನೆಂದು ತಿಳಿದ ಕೂಡಲೇ ಪುಟ್ಟಣ್ಣನವರ ನಾದಿನಿ ಉಗ್ರಾಣದಲ್ಲಿ ಅವಿತುಕೊಂಡು ಬಿಟ್ಟರು. ಅಮಾಸೆ ಹೇಳಿದ ಹೊತ್ತಿಗೆ ಬಂದ, ಕೆಲಸಕ್ಕೆ ಸೇರಲು ಸಿದ್ಧನಾಗಿ ಬಂದ. ಮಕ್ಕಳನ್ನು ಎತ್ತಿಕೊಳ್ಳುವ ಕೆಲಸ, ಇತರ ಸಣ್ಣಪುಟ್ಟ ಕೆಲಸಗಳನ್ನು ಅವನು ಮಾಡುವಂತೆ ನಿಯಮಿಸಿಕೊಂಡಿರು. ಚಾಮರಾಜನಗರದಲ್ಲಿ ಪುಟ್ಟಣ್ಣನವರು ಅಮಲ್ದಾರರಾಗಿ ಇರುವವರೆಗೂ ನಿಯತ್ತಿನಿಂದ ಕೆಲಸ ಮಾಡಿದ. “ಕಳ್ಳನನ್ನು ಮನೇಲಿಟ್ಟು ಕೊಂಡು ಇಷ್ಟು ಧೈರ್ಯವಾಗಿದ್ದೀರಲ್ಲ?” ಎಂದು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು. ಈ ಅಮಸೆಯಂತಹ ಕಳ್ಳನನ್ನು ಋಜುಮಾರ್ಗಕ್ಕೆ ತಂದ ಪುಟ್ಟಣ್ಣನವರು ಅವನ ವೃತ್ತಾಂತವನ್ನು ‘ಮಾಡಿದ್ದುಣ್ಣೋ ಮಹಾರಾಯ’ದ ಒಂದು ಸುಂದರ ಆಖ್ಯಾನವನ್ನಾಗಿ ಸಿದ್ದಾರೆ.

ಮಾಡಿದ್ದುಣ್ಣೋ ಮಹಾರಾಯದಲ್ಲಿ ಬರುವ ಉಪ್ಪಲಿಗರ ತೊರೆಯರ ಜಗಳ, ಮದುವೆಯ ಮೆರವಣಿಗೆ ಕೂಡ ನೈಜ ಘಟನೆಗಳೇ. ‘ಮುಸುಗ ತೆಗೆಯೇ ಮಾಯಾಂಗನೆಯಲ್ಲಿ ಪುಟ್ಟಣ್ಣನವರ ಸೋದರ ಮಾವನವರ ಉಲ್ಲೇಖವಿದೆ (ಪುಟ ೧೧೫).

ವೈಯಕ್ತಿಕ ಸಂಗತಿಗಳು, ನಿಜ ಘಟನೆಗಳು ಇಷ್ಟೊಂದು ಕಿಕ್ಕಿರಿದಿರಲು ಹಲವು ಕಾರಣಗಳನ್ನು ಊಹಿಸಬಹುದು. ಕಲ್ಪನೆಯ ವೈಪರೀತ್ಯಕ್ಕೆ ಬೇಸರಿಸಿ ಈ ರೀತಿ ಆಗಿರಬಹುದು. ವಾಸ್ತವ ಚಿತ್ರಣದ ಬಗೆಗಿನ ಮೋಹವೂ ಕಾರಣವಿರಬಹುದು. ಸಪ್ಪೆಯಾಗಿ ಸವೆದು ……ಗಟ್ಟಿದ್ದ ಮಾರ್ಗ ಕಾವ್ಯಗಳಿಗೆ ಜನ ವಿಮುಖರಾಗತೊಡಗಿದ ಕಾಲದಲ್ಲೇ ಪುಟ್ಟಣ್ಣನವರು ಸುತ್ತಲ ಬದುಕಿನ ಅಪ್ಪಟ ವಿವರಗಳು, ಸೊಗಡು ಬೀರುವ ಸಂಗತಿಗಳನ್ನು ಯೋಗ್ಯವಾದ ರೀತಿಯಲ್ಲಿ ಆಕರ್ಷಕ ರೀತಿಯಲ್ಲಿ ತಂದದ್ದು ಕಾಲಕ್ಕೆ ತಕ್ಕಂತೆ ಪ್ರತಿಸ್ಪಂದಿಸುವ ಅವರ ಶಕ್ತಿಯ ದ್ಯೋತಕ, ತಾವು ಕಂಡ, ಕೇಳಿದ, ಅನುಭವಿಸದ ಸಂಗತಿಗಳೆಲ್ಲವನ್ನೂ ಪುಟ್ಟಣ್ಣನವರು ಅವುಗಳ ಎಲ್ಲ ಸತ್ತ್ವ, ಸ್ವತ್ತ್ವಗಳೊಡನೆ ತಮ್ಮ ಕಾದಂಬರಿಗಳಲ್ಲಿ ತಂದರು. ವರದಿಯಾಗುತ್ತಿದ್ದ ಅಪಾಯವನ್ನು ತಪ್ಪಿಸಿದ್ದು ಅವರ ಸಾಹಿತ್ಯಕ ಸಿದ್ದಿ.

ಜೀವನ ದೃಷ್ಟಿ

ತಮ್ಮ ಕಾದಂಬರಿಗಳಲ್ಲಿ ಪುಟ್ಟಣ್ಣನವರು ಚಿತ್ರಿಸುವುದು ತಮ್ಮ ಸುತ್ತಲಿನ ಸಮಾಜ. ಇದು ಮೇಲು ಮೇಲಿನ ವಿವರ ವರ್ಣನೆಗಳಿಗೆ ಸೀಮಿತವಾಗದೆ ಇನ್ನೂ ಹೆಚ್ಚಿನ ವ್ಯಾಪ್ತಿಯಲ್ಲಿ ನಿಜವಾದ ಮಾತಾಗುತ್ತದೆ. ಪುಟ್ಟಣ್ಣನವರ ಧೋರಣೆ ಅವರು ಚಿತ್ರಿಸುವ ಸಮಾಜದಿಂದ ಸ್ವೀಕೃತವಾದ ಧೋರಣೆಯೂ ಹೌದು. ಈ ಧೋರಣೆಯೇ ಕಾದಂಬರಿಯ ಎಲ್ಲ ಅಂಗಗಳ ಮೇಲೂ ನಿಯಂತ್ರಣವನ್ನು ಹೊಂದಿದೆ. ಮೂಲಭೂತ ವಿಶ್ವಾಸದಿಂದ ಈ ಧೋರಣೆ ರೂಪುಗೊಂಡಿರುವುದರಿಂದ ಅದು ಸಮರ್ಥವಾದ ನಿಯಂತ್ರಣವೇ ಹೊರತು ವಾದರಕ್ಷಣೆಗಾಗಿ ಹೊರಗಿನಿಂದ ಬಳಸುವ ಅಸ್ತ್ರವಲ್ಲ. ಸಂಪ್ರದಾಯದ ಚೌಕಟ್ಟಿನಲ್ಲಿ ಬಿಡಿಸಲಾಗದ ಸಮಸ್ಯೆಗಳನ್ನು ಪುಟ್ಟಣ್ಣನವರು ಸ್ವೀಕರಿಸುವುದಿಲ್ಲ. ಬೇರೆ ಬೇರೆ ಜೀವನದೃಷ್ಟಿಗಳ ಮುಖಾಮುಖಿ, ದ್ವಂದ್ವ ಇವುಗಳನ್ನು ಪುಟ್ಟಣ್ಣನವರು ಚಿತ್ರಿಸಲು ಹೋಗುವುದಿಲ್ಲ. ಆದ್ದರಿಂದ ಅವನ ನಂಬಿಕೆಗೆ ವಿರುದ್ಧವಾಗಿ ಅವರು ರಾಜಿ ಮಾಡಿಕೊಳ್ಳುವ ಪ್ರಸಂಗ ಇಲ್ಲವೇ ಇಲ್ಲ. ಅಲ್ಲದೆ ಅವರ ಮೌಲ್ಯಗಳು ಕೇವಲ ತಾತ್ತ್ವಿಕವೂ ಅಲ್ಲ. ಈ ದೃಷ್ಟಿಕೋನ ಬದುಕಿನಲ್ಲಿ ತೋರುವ ನಿಷ್ಠೆಯಿಂದ ಬೆಂಬಲಿತವಾಗಿದೆ. ಆದ್ದರಿಂದಿ ಮೌಲ್ಯ ಚಿತ್ರಣದಲ್ಲಿ ಅಸ್ಫುಟತೆ ಇಲ್ಲ. “ನಮ್ಮ ಹಿಂದಿನ ಬರಹಗಾರರಾದ, ಆದರೆ ಚಾರಿತ್ರಿಕ ದೃಷ್ಟಿಯಿಂದ ಈಚಿನವರಾದ ಎಂ.ಎಸ್.ಪುಟ್ಟಣ್ಣನವರಂತಹ ಬರಹಗಾರರ ಕೃತಿಗಳಲ್ಲಿ ನ್ಯಾಯನ್ಯಾಯಗಳ ಕಲ್ಪನೆಗೂ, ಕೇವಲ ತಾತ್ತ್ವಿಕ ಮತ್ತು ಲೌಕಿಕವಲ್ಲದ ಧರ್ಮಕ್ಕೂ ಅತಿ ನಿಕಟ ಸಂಬಂಧವಿತ್ತು. ಈ ಧರ್ಮದ ಕಲ್ಪನೆಯ ಪ್ರಭಾವದಿಂದಾಗಿ ವೈಯಕ್ತಿಕ ನ್ಯಾಯನ್ಯಾಯಗಳ ಕಲ್ಪನೆ ಒಂದು ಇಡೀ ಸಮಾಜವೇ ಒಪ್ಪಿಕೊಂಡ ನ್ಯಾಯನ್ಯಾಯಗಳ ಕಲ್ಪನೆಯಿಂದ ಬೇರಾಗಿ ಇರಲಿಲ್ಲ”[1] ಎಂದು ಎಂ.ಜಿ. ಕೃಷ್ಣಮೂರ್ತಿಯವರು ಹೇಳಿರುವುದು ಗಮನಾರ್ಹವಾಗಿದೆ.

ಸೌಶೀಲ್ಯದ ಮೇಲೆ ದೌರ್ಜನ್ಯ ಒಂದು ಪರಂಪರಾಗತವಾದ, ಸಾಹಿತ್ಯದಲ್ಲಿ ಆಕರ್ಷಣೀಯವಾದ ವಸ್ತು. ಅದು ಸ್ತ್ರೀಯ ಪಾತಿವ್ರತ್ಯವೋ, ನ್ಯಾಯವಾದ ಅಧಿಕಾರವೋ ಆಗಬಹುದು. ಸೌಶೀಲ್ಲದೊಡನೆ ಸರಳತೆ, ಅಮಾಯಕತೆಗಳು ಇಲ್ಲಿ ಮಿಳಿತವಾಗಿರುತ್ತವೆ. ಕೆಡುಕನ್ನು ಗುರುತಿಸದ, ಗುರುತಿಸಿದರೂ ಗೆಲ್ಲಲಾಗದ ಅಸಮರ್ಥತೆಯ ಮೂಲ ಇದು. ಆದರೂ ಕಾದಂಬರಿಕಾರರ ಜೀವನದೃಷ್ಟಿಯಿಂದ ಒಳ್ಳೆಯದಕ್ಕೆ ಗೆಲುವು, ಕೆಟ್ಟದಕ್ಕೆ ಸೋಲು. ‘ಮಾಡಿದ್ದುಣ್ಣೋ ಮಹಾರಾಯ’ದಲ್ಲಿ ಸೀತೆಯ ಮಾನವೋ ಪ್ರಾಣವೋ ಭಂಗವಾಗಿದ್ದರೆ ಪುಟ್ಟಣ್ಣನವರ ದೃಷ್ಟಿ ಸಿನಿಕತನದ್ದೋ, ನಿರಾಶಾವಾದಕ್ಕೆ ಬಗ್ಗುವಂತಹುದೋ ಆಗುತ್ತಿತ್ತು. ಅಂತಹ ಸಂಭವವಂತೂ ಇತ್ತು. ಧರ್ಮವನ್ನು ಪಾಲಿಸಿದವರನ್ನು ಧರ್ಮವೇ ಕಾಪಾಡುತ್ತದೆ ಎಂಬ ತತ್ತ್ವಕ್ಕೆ ಉದಾಹರಣೆ ಆಗುತ್ತಿರಲಿಲ್ಲ. ಇಲ್ಲಿ ಧರ್ಮ ತಾನಾಗಿ ಮೂರ್ತಿವೆತ್ತಂತೆ ಒದಗಿ ಬರುವುದು ಅಪರಿಗ್ರಹಣದ ಸಾಕಾರ ರೂಪವಾದ ಒಬ್ಬ ವ್ಯಕ್ತಿಯಿಂದ. ಈ ಆಶಯ ಪುಟ್ಟಣ್ಣನವರ ಮೂರು ಕಾದಂಬರಿಗಳಲ್ಲೂ ಇದೆ. ಅಂತೂ ಪಾರಮಾರ್ಥಿಕತೆಯ ಗೆಲುವಿಗೆ ಮೊದಲ ಮತ. ಕಷ್ಟಕ್ಕೆ ಸಿಲುಕಿದ ಸಾತ್ತ್ವಿಕ ಪಾತ್ರಗಳಿಗೆ ಮೂರ್ತಿಮಂತ ಸಾಂಸ್ಕೃತಿಕ ಬೆಂಬಲವನ್ನು ಕಡೆಯಲ್ಲಿ ಒದಗಿಸುತ್ತಾರೆ. ಇಂಥ ಬೆಂಬಲಕ್ಕೆ ಕಾದ ಪಾತ್ರಗಳು ಬೆಂಗಾಡಿನಲ್ಲಿ ಬಳಲಿದವರು ನೀರಿಗಾಗಿ ಕಾದಂತೆ ಕಾತರರಾಗಿರುತ್ತಾರೆ. ಪುರುಷ ಪ್ರಯತ್ನದಿಂದ ಸರ್ವಸಾಧನೆ ಆಗದು, ದೈವೀ ಅನುಗ್ರಹ ಅದಕ್ಕೆ ಅವಶ್ಯಕ ಎಂಬುದು ಇಲ್ಲಿಯ ಧೋರಣೆ.

ಪುಟ್ಟಣ್ಣನವರ ಕಾದಂಬರಿಗಳ ವಿವೇಚನೆಯಿಂದ ಅವರ ಮನಸ್ಸು ಹರಿಯುವ ದಿಕ್ಕನ್ನು ಸುಸ್ಪಷ್ಟವಾಗಿ ಕಾಣಬಹುದು. ಅವರ ವೈಯಕ್ತಿಕ ಸಾಧನೆ ಹಾಗೂ ಮಿತಿಗಳನ್ನು ಕೂಡ ಗುರುತಿಸಬಹುದು. ಇಂಥ ಕಡೆ ಕೃತಿಗಳ ವಿಮಶೆ ಕೃತಿಕಾರನ ವಿಮಶೆಯೂ ಆಗುತ್ತದೆ.

ಮುಕ್ತಾಯ

ವಸ್ತುವಿನ ದೃಷ್ಟಿಯಲ್ಲಿ ಪುಟ್ಟಣ್ಣನವರು ನಾವೀನ್ಯ ತೋರಿದ್ದಾರೆ. ಪುರಾಣಗಳು ವಸ್ತುವಾಗುತ್ತಿದ್ದ ಸ್ಥಿತಿಯಿಂದ ಲೌಕಿಕಕ್ಕೆ ಬಂದ ಸಾಹಿತ್ಯ ‘ಮಾಡಿದ್ದುಣ್ಣೋ ಮಹಾರಾಯ’ದಂತಹ ಕಾದಂಬರಿಗಳಿಂದ ಜನಸಾಮಾನ್ಯಕ್ಕೆ ಇನ್ನಷ್ಟು ಹತ್ತಿರವಾಯಿತು. ಪುಟ್ಟಣ್ಣನವರು ಒಳ್ಳೆಯದು ಎಲ್ಲಿದ್ದರೂ ಏನಿದ್ದರೂ ಬಿಡುವವರಲ್ಲ. ತಮ್ಮ ಕಾದಂಬರಿಗಳಲ್ಲಿ ಪುರಾಣದ ಸತ್ತ್ವವನ್ನು ತುಂಬಿದ್ದಾರೆ. ಪುರಾಣಗಳಲ್ಲಿ ಆಸಕ್ತಿ ಹೊಂದಿದವರಿಗೆ ಲೌಕಿಕ ವಿಷಯಗಳು ಜುಗುಪ್ಸಿತವಾಗದಂತೆ, ಜನಸಾಮಾನ್ಯರಿಗೆ ಪುರಾಣ ಎಂಬ ಬೇಸರವಾಗದಂತೆ ಸಾಮಾಜಿಕ ಸಂಗತಿಗಳ ನಡುವೆ ಪುರಾಣಸತ್ತ್ವವನ್ನು ಪೀಠಸ್ಥವಾಗಿರಿಸಿದರು. ಸಿದ್ಧ ಸೂತ್ರಗಳು ಸಂವಹನಕ್ಕೆ ಅನುಕೂಲ ಎಂಬುದನ್ನರಿತು ಹಳೆಯ ಬೇರಿಗೆ ಹೊಸ ಚಿಗುರನ್ನು ಕೂಡಿಸಿ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿದರು. ತಮ್ಮ ಮೇಲಾದ ಎಲ್ಲ ಪ್ರಭಾವಗಳನ್ನೂ ಅರಗಿಸಿಕೊಂಡು ಕೃತಿರಚನೆ ಮಾಡಿದರು. ಲೋಕಾಚಾರದ ನಂಬಿಕೆಗಳಿಂದ ಹಿಡಿದು ಯಾವುದನ್ನೂ ಹೊರದೂಡದೆ ಅಳವಡಿಸಿಕೊಂಡರು. ಯಾವುದೇ ವಿಚಾರವನ್ನು ಪೂರ್ಣ ಚೌಕಟ್ಟಿನೊಂದಿಗೆ ಗ್ರಹಿಸುವುದರಿಂದ ಅವರ ಕಾದಂಬರಿಗಳಲ್ಲಿ ಇತಿಹಾಸದ ಎಳೆಗಳು ಕಾಣುತ್ತವೆ. ಒಂದು ಕೇಂದ್ರ ಪ್ರಜ್ಞೆ ಇರುವುದರಿಂದ ಆಶಯಗಳ ಹರಹು ದೊಡ್ಡದಾದರೂ, ಆಳ ಕಡಿಮೆಯಾಗುವ ಭಯವಿಲ್ಲ. ಒಂದು ಸಾಹಿತ್ಯ ಕೃತಿ ಹಾಗೂ ಸುತ್ತಲಿನ ಜೀವನಾನುಭವಗಳ ಸಂಕೀರ್ಣ ಸಂಬಂಧ ಇಂಥ ಮೊದಲ ಕಾದಂಬರಿಗಳಲ್ಲೇ ಕಂಡು ಬಂದದ್ದು ಸಂತೋಷದ ಸಂಗತಿ. ಕಾದಂಬರಿಯ ಒಟ್ಟು ಶಿಲ್ಪವೇ ಇದನ್ನು ಧ್ವನಿಸುತ್ತದೆ.

ಇಲ್ಲಿ ವಿವೇಚಿಸಲ್ಪಟ್ಟ ಮೂರು ಕಾದಂಬರಿಗಳ ತಂತ್ರವೂ ಇಂದಿಗೆ ಒರಟಾದದ್ದು ಎಂಬುದು ನಿಜ. ಕೃತಿಗಳ ರಚನೆಯ ಕಾಲವನ್ನು ಗಮನಿಸಿದರೆ ಇದು ದೊಡ್ಡ ಕೊರೆ ಎನಿಸದು. ಅಲ್ಲದೆ ಜನಜೀವನದ ಸಹಜ ಚಿತ್ರಣ ಈ ಕೊರೆಯನ್ನು ಇನ್ನಷ್ಟು ಅಪ್ರಧಾನವನ್ನಾಗಿಸುತ್ತದೆ. ಹಲವು ದಶಕಗಳು ಸಂದಿದ್ದರೂ ಈ ಕಾದಂಬರಿಗಳ ಜನಪ್ರಿಯತೆ ಮಸುಳಿಸಿಲ್ಲ. ಆಡುನುಡಿಯನ್ನು ಕಾದಂಬರಿ ಪ್ರಕಾರದಲ್ಲಿ ಸಮರ್ಥವಾಗಿ ಬಳಸಿ ಕಥನ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ಜೋಡಿಸಿದ ಕೀರ್ತಿ ಪುಟ್ಟಣ್ಣನವರಿಗೆ ‘ಮಾಡಿದ್ದುಣ್ಣೋ ಮಹಾರಾಯ’ದಿಂದ ಮೊದಲು ದಕ್ಕಿತು. ಮುಂದಿನ ಎರಡು ಕಾದಂಬರಿಗಳು ಈ ಮಾತಿಗೆ ಹೆಚ್ಚಿನ ಪುರಾವೆಯನ್ನು ಒದಗಿಸಿದವು. ಇಂಥ ಪರಿಣಾಮಕಾರಿ ಸತ್ತ್ವವಿರುವುದರಿಂದಲೇ ಈ ಕಾದಂಬರಿಗಳು ಇಂದಿಗೂ ತಮ್ಮ ಕೊರತೆಗಳೊಡನೆಯೇ ಸ್ವೀಕೃತವಾಗಿವೆ. ಬಿ. ವೆಂಕಟಾಚಾರ್ಯರ ಹಾಗೂ ಗಳಗನಾಥರ ಅನುವಾದಗಳಿಂದ ಕನ್ನಡಿಗರಲ್ಲಿ ಕಾದಂಬರಿಯ ಬಗೆಗೆ ಹೊಸ ಆಸಕ್ತಿಗಳು ಚಿಗುರುತ್ತಿದ್ದ ಕಾಲದಲ್ಲಿ ಪುಟ್ಟಣ್ಣನವರ ಈ ಮೂರು ಕೃತಿಗಳು ಕನ್ನಡ ಕಾದಂಬರಿಗಳಿಗೆ ಮುಂದಿನ ದಾರಿ ದಿಕ್ಕುಗಳನ್ನು ತೋರಿಸಿ ಸುಭದ್ರ ಅಡಿಪಾಯವನ್ನು ಹಾಕಿದವು.

* * *

ಪುಟ್ಟಣ್ಣನವರು ಹೊಸಗನ್ನಡದ ಒಬ್ಬ ಮಹತ್ತ್ವದ ಲೇಖಕರು. ಅವರು ತಮ್ಮ ಸಾಹಿತ್ಯ ಕೃಷಿಯನ್ನು ಆರಂಭಿಸಿದಾಗ ಹೊಸಗನ್ನಡದ ನೆಲ ಉತ್ತ ಸಿದ್ಧವಾಗಿರಲಿಲ್ಲ. ಪ್ರಾರಂಭದ ಕಾರ್ಯಕರ್ತರಿಗೆ ಎದುರಾಗುವ ತೊಡಕುಗಳನ್ನೆಲ್ಲಿ ಅವರು ಸದ್ದಿಲ್ಲದೆ ಅನುಭವಿಸಬೇಕಾಯಿತು. ಅವರು ಸ್ವತಃ ಅಸಾಮಾನ್ಯರಾದರೂ ಜನಸಾಮಾನ್ಯರಿಗೆ ಅತಿ ಸಮೀಪದಲ್ಲಿದ್ದು ಕೊಂಡು ಕೆಲಸ ಮಾಡಿದ್ದರಿಂದ ಅವರ ಬರಹಗಳಲ್ಲಿ ಗಟ್ಟಿತನವೂ ಸೇರಿಕೊಂಡಿತು. ಗದ್ಯ ಕೃಷಿಯಲ್ಲಿ ಅವರದು ನಿಸ್ಸಂಶಯವಾಗಿ ಮೊದಲ ವರ್ಗದ ಫಸಲು.

ಬೆಂಗಳೂರಿನ ಬಸವನಗುಡಿಯಲ್ಲಿ ಪುಟ್ಟಣ್ಣನವರು ವಾಸವಾಗಿದ್ದ ಬೀದಿ ಹಾಗೂ ಹನುಮಂತನಗರದ ಒಂದು ಬೀದಿ ಇಂದು ಪುಟ್ಟಣ್ಣನವರ ಹೆಸರನ್ನು ಹೊತ್ತುಕೊಂಡಿವೆ. ಮೈಸೂರು ವಿಶ್ವವಿದ್ಯಾನಿಲಯದ ‘ರೈಟರ್ಸ್ ಕಾರ್ನರ್’ ಸಂಗ್ರಹಾಲಯದಲ್ಲಿ ಪುಟ್ಟಣ್ಣನವರ ಹಸ್ತಪ್ರತಿಗಳು, ಮುದ್ರಿತ ಪುಸ್ತಕಗಳು, ದಿನಚರಿ ಪುಸ್ತಕ, ಬ್ಯಾಂಕಿನ ಪಾಸ್‌ಬುಕ್, ಬರವಣಿಗೆಯ ಕಾಲದಲ್ಲಿ ಬಳಸುತ್ತಿದ್ದ ವಾಟಮೇಜು, ದೀಪ, ಉಡುಪು ಮೊದಲಾದುವುಗಳು ಶೇಖರಿಸಲ್ಪಟ್ಟಿವೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪುಟ್ಟಣ್ಣನವರ ಹೆಸರಿನಲ್ಲಿ ಒಂದು ದತ್ತಿನಿಧಿ ಸ್ಥಾಪನೆಯಾಗಿದ್ದು, ಪ್ರತಿ ವರ್ಷ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲಿ ‘ತೌಲನಿಕ ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಯ ಮೂಲತತ್ತ್ವಗಳು’ ವಿಷಯದಲ್ಲಿ ಅತ್ಯಂತ ಹೆಚ್ಚಿನ ಅಂಕಗಳನ್ನು ಗಳಿಸಿದವರಿಗೆ ನಗದು ಬಹುಮಾನ ನೀಡುವಂತೆ ಏರ್ಪಡಿಸಲಾಗಿದೆ.

ಎಂ.ಎಸ್.ಪುಟ್ಟಣ್ಣನವರ ಮೂರು ಕಾದಂಬರಿಗಳ ಗ್ರಾಂಥಿಕ ವಿವರಗಳು

. ಮಾಡಿದ್ದುಣ್ಣೋ ಮಹಾರಾಯ

ಕಾವ್ಯಾಲಯ, ಮೈಸೂರು ೫೭೦೦೧೪: ಮೂರನೆಯ ಮುದ್ರಣ, ೧೯೬೭: ಕಿರೀಟ ಅಷ್ಟದಳ, ೧೨+೨೨೧+೩.
ಮೊದಲ ಮುದ್ರಣ ೧೯೧೫ರಲ್ಲಿ.

. ಮುಸುಗ ತೆಗೆಯೇ ಮಾಯಾಂಗನೆ

ಕಾವ್ಯಾಲಯ, ಮೈಸೂರು ೫೭೦ ೦೧೪: ಎರಡನೆಯ ಮುದ್ರಣ, ೧೯೫೭; ಕಿರೀಟ ಅಷ್ಟದಳ, ೫ + ೨೦೨
ಮೊದಲ ಮುದ್ರಣ ೧೯೨೮ರಲ್ಲಿ.

. ಅವರಿಲ್ಲದೂಟ

ಕಾವ್ಯಾಲಯ, ಮೈಸೂರು ೫೭೦ ೦೧೪; ೧೯೫೯; ಕಿರೀಟ ಅಷ್ಟದಳ, ೩+೧೮೮.

ಹೆಚ್ಚಿನ ವಿವರಗಳಿಗೆ ನೋಡಿ

ಎಚ್.ಎಸ್. ಸುಜಾತಾ; ಎಂ.ಎಸ್.ಪುಟ್ಟಣ್ಣ : ಒಂದು ಅಧ್ಯಯನ ; ಐ.ಬಿ.ಎಚ್. ಪ್ರಕಾಶನ, ಐದನೆಯ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು ೫೬೦ ೦೦೯; ೧೯೮೧; ಡೆಮ್ಯ ಅಷ್ಟದಳ, ಪು. xvi + ೫೫೯.

 

[1]ಮಾವಿನಕೆರೆ ರಂಗನಾಥನ್ (ಸಂ.), ತಿ.ತಾ. ಶರ್ಮ (ಗೌರವ ಸಂ.); ಶ್ರೀನಿವಾಸ ಪುರೋಗಾಮಿ ಸಾಹಿತ್ಯ ಸಂಘ, ೧೦ನೆಯ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು ೫೬೦ ೦೦೩; ೧೯೭೨; ಮಾಸ್ತಿಯವರ ಸಣ್ಣಕತೆಗಳು (ಎಂ.ಜಿ.ಕೃಷ್ಣಮೂರ್ತಿ), ಪು. ೧೨೮.