ಎಂ.ಎಸ್.ಪುಟ್ಟಣ್ಣನವರು ೧೮೫೪ ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ಪೂರ್ಣಹೆಸರು ಮೈಸೂರು ಸೂರ್ಯ ನಾರಾಯಣಭಟ್ಟ. ಪುಟ್ಟಣ್ಣನವರು ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡು, ಮೈಸೂರಿನ ಸೋದರ ಮಾವನ ಮನೆಯಲ್ಲಿ ಬೆಳೆದರು. ಆಗ ಮೈಸೂರಿನಲ್ಲಿ ಪ್ರಭಾವಶಾಲಿಯಾಗಿದ್ದ ಮರಾಠಿ ಪಂತೋಜಿಗಳ ಮಠಗಳಲ್ಲಿ ವ್ಯಾಸಂಗ ಮಾಡಿದರು. ದೇಶದಲ್ಲಿ ತಲೆದೋರಿದ ಕ್ಷಾಮದ ಪರಿಣಾಮವಾಗಿ ಬಿ.ಎ ವ್ಯಾಸಂಗವನ್ನು ಮಧ್ಯದಲ್ಲಿ ಬಿಟ್ಟು ಎರಡುವರ್ಷಗಳ ನಂತರ ಮದರಾಸು ವಿಶ್ವವಿದ್ಯಾಲಯದಿಂದ ೧೮೮೫ ರಲ್ಲಿ ಬಿ.ಎ ಪದವಿ ಪಡೆದರು.

ಮೈಸೂರು ಚೀಫ್ ಕೋರ್ಟಿನಲ್ಲಿ ಭಾಷಾಂತರಕಾರರಾಗಿ, ರೆವಿನ್ಯೂ ಇಲಾಖೆಯಲ್ಲಿ ಅಮಲ್ದಾರರಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರಿನಲ್ಲಿ ಸ್ವಲ್ಪ ಕಾಲ ವಕೀಲರಾಗಿದ್ದರು. ಪುಟ್ಟಣ್ಣನವರ ಸಾಹಿತ್ಯ ಸೃಷ್ಟಿ ಅನುವಾದ ಮತ್ತು ಪಠ್ಯಗಳಿಂದ ಪ್ರಾರಂಭವಾಯಿತು. ಕಥೆ, ಕಾದಂಬರಿ, ಜೀವನಚರಿತ್ರೆ, ರೂಪಾಂತರ, ಭಾಷಾಂತರ, ಸಂಶೋಧನೆ, ಪತ್ರಿಕೋದ್ಯಮ, ಲೇಖನಗಳು- ಹೀಗೆ ಹಲವು ಪ್ರಕಾರಗಳಲ್ಲಿ ಅವರ ಸಾಧನೆ ಅಬಿವ್ಯಕ್ತಗೊಂಡಿದೆ.

ಮಾಡಿದ್ದುಣ್ಣೋ ಮಾರಾಯ(೧೯೧೫), ಮುಸುಕು ತೆಗೆಯೇಮಾಯಾಂಗನೆ(೧೯೨೮), ಹಾಗೂ ಅವರಿಲ್ಲದೂಟ(೧೯೫೯) ಕಾದಂಬರಿಗಳು ಪುಟ್ಟಣ್ಣನವರ ಅತ್ಯುತ್ತಮ ಉದಾಹರಣೆಗಳು. ಇವುಗಳಲ್ಲಿ ಜನಜೀವನದ ವಿವಿಧ ಮುಖಗಳನ್ನು ಅನಾವರಣ ಗೊಳಿಸಲಾಗಿದೆ. ಕುಣಿಗಲು ರಾಮಶಾಸ್ತ್ರಿಗಳ ಜೀವನ ಚರಿತ್ರೆಯ ಜೊತೆಗೆ ಕನ್‌ಫ್ಯೂಷಿಯಸ್, ಮಹಮದ್‌ಗವಾನ್, ಹೈದರಾಬಾದ್ ಸಂಸ್ಥಾನದ ಮಂತ್ರಿಯಾಗಿದ್ದ ಸಾಲಾರ್ ಜಂಗ್- ನ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಶೇಕ್ಸ್‌ಪಿಯರ್ ನ ಸಿಂಬಿಲೈನ್, ಮತ್ತು ಕಿಂಗ್ ಲಿಯರ್, ನಾಟಕಗಳನ್ನು ಜಯಸಿಂಹರಾಜಚರಿತ್ರೆ, ಮತ್ತು ಹೇಮಚಂದ್ರರಾಜ ವಿಲಾಸ, ಎಂಬ ಹೆಸರಿನಿಂದ ಕನ್ನಡಕ್ಕೆ ತಂದಿದ್ದಾರೆ. ಮಕ್ಕಳಿಗಾಗಿ ಇವರು ರಚಿಸಿರುವ ನೀತಿಚಿಂತಾಮಣಿ, ಮತ್ತು ಪೇಟೆ ಮಾತೇನಜ್ಜ, ಪುಸ್ತಕಗಳು ಜನಪ್ರಿಯವಾಗಿವೆ. ಇಕ್ಕೇರಿ ಸಂಸ್ಥಾನದ ಚರಿತ್ರೆ, ಚಿತ್ರದುರ್ಗದ ಪಾಳೆಯಗಾರರು, ಹಿಂದೂಚರಿತ್ರ ದರ್ಪಣ ಭಾಗ ೧,೨- ಈ ಕೃತಿಗಳು ಅವರ ಇತಿಹಾಸ ಪ್ರಜ್ಞೆಗೆ ಸಾಕ್ಷಿಯಾಗಿವೆ. ಹೀಗೆ ಇವರ ಕೃತಿಗಳು ಜನಜೀವನದ ಸಜೀವ ಚಿತ್ರಣಕ್ಕೂ ಹೊಸಗನ್ನಡದ ದೇಸಿಶೈಲಿಗೂ ಮಾದರಿಯಾಗಿವೆ.

ಇಂತಃ ಆಧುನಿಕ ಪ್ರಕಾರಗಳ ಸೃಷ್ಟಿಯಿಂದ ಎಂ.ಎಸ್.ಪುಟ್ಟಣ್ಣನವರು ಹೊಸಗನ್ನಡದ ಒಬ್ಬ ಮಹತ್ವದ ಲೇಖಕರು.