ತಬಲಾ ವಿದ್ವಾಂಸರಾಗಿದ್ದ ವಿದ್ವಾನ್‌ ಸುಬ್ಬಣ್ಣನವರ ಸುಪುತ್ರರಾಗಿ ಮೈಸೂರಿನಲ್ಲಿ ೨೪-೦೫-೧೯೨೨ ರಂದು ಜನಿಸಿದ ರಾಮಯ್ಯನವರ ಕುಟುಂಬದ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂಗೀತ ವಿದ್ವಾಂಸರೇ. ಇವರ ತಾತ ಅನಂತಪ್ಪನವರು ತಬಲಾ ವಿದ್ವಾಂಸರಾಗಿದ್ದು ಅವರ ಕಾಲದ ನಾಟಕ ಹರಿಕಥೆಗಳಿಗೆ ನುಡಿಸುತ್ತಿದ್ದವರು. ಇವರ ಒಬ್ಬ ಸೋದರ ಸುಬ್ರಹ್ಮಣ್ಯ ಬೆಂಗಳೂರು ನಿಲಯದ ಕಲಾವಿದರಾಗಿದ್ದ ಪಿಟೀಲು ವಾದಕರು. ಇನ್ನೊಬ್ಬ ಸೋದರ ಶೇಷಪ್ಪ ಮೃದಂಗ ಮತ್ತು ಡೋಲಕ್‌ ವಾದಕರು. ಮತ್ತೊಬ್ಬ ಸೋದರ ಅನಂತಸ್ವಾಮಿ ಮೃದಂಗ ವಿದ್ವಾಂಸರು. ಚಿಕ್ಕಪ್ಪ ಚಿನ್ನಸ್ವಾಮಿ ಸಹ ಸಂಗೀತ ವಿದ್ವಾಂಸರು. ಇಂತಹ ಸಂಗೀತ ಕುಟುಂಬದಲ್ಲಿ ಜನಿಸಿದ ರಾಮಯ್ಯನವರು ಮೊದಲಿಗೆ ತಂದೆಯವರಿಂದಲೇ ಮೃದಂಗ ವಾದನದಲ್ಲಿ ಶಿಕ್ಷಣ ಆರಂಭಿಸಿದರು. ನಂತರ ಅಂದಿನ ಹೆಗ್ಗಳಿಕೆಯ ವಿದ್ವಾಂಸರಾಗಿದ್ದ ಮುತ್ತುಸ್ವಾಮಿ ದೇವರ್ ಹಾಗೂ ಅವರ ಪುತ್ರ ವೆಂಕಟೇಶ ದೇವರ್ ಅವರಲ್ಲಿ ಶಿಕ್ಷಣ ಹೊಂದಿ ಸಿದ್ಧಹಸ್ತರಾದರು. ವಿದ್ವಾನ್‌ ಪುಟ್ಟಾಚಾರ‍ ಹಾಗೂ ಶ್ರೀನಿವಾಸುಲು ನಾಯ್ಡು ಅವರಲ್ಲಿ ವಾದನದ ಸೂಕ್ಷ್ಮಗಳನ್ನು ಅರಿತರು. ಪಲ್ಲವಿ ಚಂದ್ರಪ್ಪನವರಿಂದ ಪಲ್ಲವಿಯ ಮರ್ಮಗಳನ್ನು ಅಭ್ಯಸಿಸಿದರು. ಡಾ|| ದೇವೇಂದ್ರಪ್ಪನವರಲ್ಲಿ ಗಾಯನ ಮತ್ತು ವಾದನದ ತಂತ್ರಗಳನ್ನು ಅರಿತರು. ಹೀಗೆ ಸಂಸಿದ್ಧರಾದ  ರಾಮಯ್ಯ ಸಂಗೀತ ಕ್ಷೇತ್ರದ ಮೂರು-ನಾಲ್ಕು ತಲೆಮಾರಿನ ಎಲ್ಲಾ ಕಲಾವಿದರೊಡನೆಯೂ ಕಚೇರಿ ಮಾಡಿ ಎಣೆಯಿಲ್ಲದ ಕೀರ್ತಿ ಪಡೆದರು.

ತಬಲಾ ವಾದನದಲ್ಲೂ ಪರಿಣತರಾಗಿದ್ದು, ಹಲವಾರು ಹಿಂದೂಸ್ಥಾನಿ ದಿಗ್ಗಜರಿಗೂ ತಬಲಾಸಾಥಿ ನೀಡಿ ಮೆಚ್ಚುಗೆ ಗಳಿಸಿದರು. ಡಾ|| ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ಆರಂಭಿಸಿದ ಆಕಾಶವಾಣಿಯಲ್ಲಿ ಸೇವೆಗೆ ಸೇರಿ ಮುಂದೆ ಕೇಂದ್ರ ಸರ್ಕಾರವು ಈ ಮಾಧ್ಯಮವನ್ನು ವಹಿಸಿಕೊಂಡ ನಂತರ ಸಂಪೂರ್ಣವಾಗಿ ನಿಲಯದ ಕಲಾವಿದರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು.

ಮುತ್ತಯ್ಯ ಭಾಗವತರು ಚಿಕ್ಕರಾಮರಾಯರಿಂದ ಆರಂಭಿಸಿ ಯುವ ಪೀಳಿಗೆಯ ಉದಯೋನ್ಮುಖ ಸಂಗೀತಗಾರರಿಗೂ ಪಕ್ಕವಾದ್ಯ ನಿರ್ವಹಿಸಿ ತಮ್ಮ ಸಜ್ಜನಿಕೆ, ಸರಳತೆ, ಸೌಮ್ಯ ಸ್ವಭಾವದಿಂದ ಅಜಾತಶತ್ರುವಾಗಿ ಬಾಳಿದರು. ಕಾಲಸರಿದ ಹಾಗೆ ಸಂಗೀತ ಕ್ಷೇತ್ರದಲ್ಲಿ ಕ್ರಮವಾಗಿ ಮೂಡಿದ ಬದಲಾವಣೆಗಳನ್ನು ಅನುಸರಿಸಿ ಕಾಲಾಯ ತಸ್ಮೈ ನಮಃ ಎಂದು ಕಾಲವನ್ನನುಸರಿಸಿದ ರಾಮಯ್ಯನವರು ೩೦-೧೧-೨೦೦೨ ರಂದು ಕಾಲಗತಿಯನ್ನೈದಿದರು.

ಕಥಾ ಕಾಲಕ್ಷೇಪಗಳಿಗೂ ಮೃದಂಗ ಸಹಕಾರ ನೀಡುತ್ತಿದ್ದ ಸಹೃದಯಿ ರಾಮಯ್ಯನವರು ಪ್ರತಿದಿನವೂ ಏಳೆಂಟು ಘಂಟೆಗಳು ಅಭ್ಯಾಸ ಮಾಡುತ್ತಿದ್ದ ನಿತ್ಯ ಸಾಧಕ. ಇವರ ವಿದ್ವತ್ತಿಗೆ ಪ್ರತಿಭೆಗೆ ದೊರಕಿದ ಪುರಸ್ಕಾರಗಳೂ ಅನೇಕ. ಹಲವಾರು ಸಭೆ-ಸಂಸ್ಥೆಗಳ ಸನ್ಮಾನ ಪಡೆದ ಶ್ರೀಯುತರಿಗೆ ಪ್ರಾಪ್ತವಾದ ಅನೇಕ ಪ್ರಶಸ್ತಿಗಳಲ್ಲಿ ‘ಕರ್ನಾಟಕ ಕಲಾ ತಿಲಕ’. ‘ಲಯವಾದ್ಯ ಚತುರ’, ‘ಸಂಗೀತ ಕಲಾರತ್ನ’, ‘ಕನಕ ಪುರಂದರ ಪ್ರಶಸ್ತಿ’, ‘ಕಲಾ ಜ್ಯೋತಿ ಪುರಸ್ಕಾರ’, ‘ಪಾಲ್ಘಾಟ್‌ ಮಣಿಅಯ್ಯರ್ ಪ್ರಶಸ್ತಿ’ ಉಲ್ಲೇಖಾರ್ಹವಾದುವು.