ನಮ್ಮ ನಾಡಿನ ಹಿರಿಯ ಮೃದಂಗ ವಿದ್ವಾಂಸರಾಗಿದ್ದ ಎಂ.ಎಸ್‌. ರಾಮಯ್ಯನವರು ದಿನಾಂಕ ೨೪.೫.೧೯೨೨ರಲ್ಲಿ ಮೈಸೂರಿನಲ್ಲಿ ತಬಲಾ ವಿದ್ವಾಂಸರಾಗಿದ್ದ ವಿದ್ವಾನ್‌ ಸುಬ್ಬಣ್ಣನವರ ಸುಪುತ್ರರಾಗಿ ಜನಿಸಿದರು. ರಾಮಯ್ಯನವರ ತಾತ ಅನಂತಪ್ಪನವರೂ ತಬಲಾ ವಿದ್ವಾಂಸರಾಗಿದ್ದವರು. ಆ ಕಾಲದಲ್ಲಿ ನಾಟಕ, ಹರಿಕಥೆಗಳಿಗೆ ಹೆಚ್ಚಾಗಿ ಅವರು ನುಡಿಸುತ್ತಿದ್ದರು. ರಾಮಯ್ಯನವರ ಸಹೋದರ ವಿದ್ವಾನ್‌ ಎಂ.ಎಸ್‌. ಸುಬ್ರಹ್ಮಣ್ಯರವರು ಪಿಟೀಲು ವಿದ್ವಾಂಸರು ಹಾಗೂ ಆಕಾಶವಾಣಿ ನಿಲಯದ ಕಲಾವಿದರಾಗಿದ್ದರು. ಇನ್ನೊಬ್ಬ ಸಹೋದರ ವಿದ್ವಾನ್‌ ಎಂ.ಎಸ್‌. ಶೇಷಪ್ಪನವರು ಮೃದಂಗ ಮತ್ತು ಡೋಲಕ್‌ ವಾದಕರು. ಇವರು ಹರಿಕಥೆ, ನಾಟಕ, ಸಂಗೀತ ಕಚೇರಿಗಳಿಗೆ ನುಡಿಸುತ್ತಿದ್ದರು. ಮತ್ತೊಬ್ಬ ಸಹೋದರ ವಿದ್ವಾನ್‌ ಎಂ.ಎಸ್‌. ಅನಂತಸ್ವಾಮಿಯವರು ಮೃದಂಗ ವಿದ್ವಾಂಸರು. ಇವರ ಮಕ್ಕಳೂ ಮೃದಂಗ ಮತ್ತು ತಬಲಾ ವಿದ್ವಂಸರಾಗಿದ್ದಾರೆ. ರಾಮಯ್ಯನವರ ಚಿಕ್ಕಪ್ಪ ಚಿನ್ನಸ್ವಾಮಿಯವರೂ ಸಂಗೀತ ವಿದ್ವಾಂಸರು. ಹೀಗೆ ರಾಮಯ್ಯನವರ ಕುಟುಂಬ ಸಂಗೀತದ ಪರಂಪರೆಯನ್ನೇ ರೂಪಿಸಿದೆ.

ರಾಮಯ್ಯನವರು ಬಾಲ್ಯದಲ್ಲೇ ತಮ್ಮ ತಂದೆ ವಿದ್ವನ್‌ ಸುಬ್ಬಣ್ಣನವರಲ್ಲಿ ಮೃದಂಗಾಭ್ಯಾಸವನ್ನು ಪ್ರಾರಂಭಿಸಿದರು. ನಂತರ ಆ ಕಾಲಕ್ಕೆ ಪ್ರಖ್ಯಾತ ಮೃದಂಘ ವಿದ್ವಾಂಸರಾಗಿದ್ದ ವಿದ್ವಾನ್‌ ಮುತ್ತುಸ್ವಾಮಿ ತೇವರ್ ಅವರಲ್ಲೂ, ಅವರ ಕಾಲಾನಂತರ ಪುತ್ರ ವಿದ್ವಾನ್‌ ವೆಂಕಟೇಶ್‌ ದೇವರ್ ಅವರಲ್ಲೂ ಮೃದಂಗ ಶಿಕ್ಷಣ ಮುಂದುವರೆಸಿದರು. ಮುಂದೆ ವಿದ್ವಾನ್‌ ಪುಟ್ಟಾಚಾರ್ (ವಿದ್ವಾನ್‌ ಎಚ್.ಪಿ. ರಾಮಾಚಾರ್ ಅವರ ತಂದೆ) ಅವರಲ್ಲಿ ಮತ್ತು ವಿದ್ವಾನ್‌ ಶ್ರೀನಿವಾಸಲು ನಾಯ್ಡು ಅವರಲ್ಲಿ ಲಯ ಮತ್ತು ತಾಳಗಳ ಅಂತರಂಗ ಸೂಕ್ಷ್ಮಗಳನ್ನು ಅರಿತುಕೊಂಡರು. ಇದರ ಜೊತೆಗೆ ಅಲಿಜಾನ್‌ ಸಾಹೇಬ್‌ ಅವರಲ್ಲಿ ತಬಲಾವನ್ನು ಅಭ್ಯಾಸ ಮಾಡಿದರು. ಹಾಗೆಯೇ ವಿದ್ವಾನ್‌ ಪಲ್ಲವಿ ಚಂದ್ರಪ್ಪನವರಲ್ಲಿ ಪಲ್ಲವಿಯ ಮರ್ಮಗಳನ್ನೆಲ್ಲಾ ಕಲಿತು ಪ್ರವೀಣರಾದರು. ಇಷ್ಟೇ ಅಲ್ಲದೆ ಮೈಸೂರಿನ ಪ್ರಸಿದ್ಧ ವಿದ್ವಾಂಸರಾಗಿದ್ದ ಡಾ.ಬಿ. ದೇವೇಂದ್ರಪ್ಪನವರಲ್ಲಿ ಗಾಯನ ಮತ್ತು ವಾದನಗಳ ತಂತ್ರವನ್ನು ಮತ್ತದರ ಸೂಕ್ಷ್ಮಗಳನ್ನೆಲ್ಲಾ ಚೆನ್ನಾಗಿ ಅಭ್ಯಸಿಸಿದರು. ಈ ರೀತಿಯಾಗಿ ಸಾಧನೆ ಮಾಡಿದ ರಾಮಯ್ಯನವರ ಮೃದಂಗ ನುಡಿಸಾಣಿಕೆಯು ಪಕ್ವವಾಗಿದ್ದು ಗಾಯನ ಮತ್ತು ವಾದನಕ್ಕೆ ಪೂರಕವಾಗಿರುತ್ತಿತ್ತು. ಅಲ್ಲದೆ ಡಾ.ಬಿ. ದೇವೇಂದ್ರಪ್ಪನವರೊಂದಿಗೆ ಅವರ ಗಾಯನ, ವಾದನ ಕಚೇರಿಗಳಿಗೆ ಮೃದಂಗ ಸಹಕಾರ ನೀಡಲು ದೇಶದ ಅನೇಕ ಸಾಂಸ್ಕೃತಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದರು.

ಸರಳತೆ, ಸಹೃದಯತೆ, ಸಜ್ಜನಿಕೆಯಿಂದ ಕೂಡಿದ್ದ ರಾಮಯ್ಯನವರಿಗೆ ಯಾವ ರಾಜಕೀಯದ ಬಗ್ಗೆ ತಿಳಿಯುತ್ತಿರಲಿಲ್ಲ. ಮಗುವಿನಂತಹ ಮುಗ್ಧ ಮನಸ್ಸು, ಹಿರಿಯ ಕಿರಿಯರೆನ್ನದೆ ಎಲ್ಲರಿಗೂ ಏಕಪ್ರಕಾರವಾಗಿ ಮೃದಂಗ ಸಹಕರ ನೀಡುತ್ತಿದ್ದರು. ಹಾಗೆಯೇ ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹುರಿದುಂಬಿಸಿ ಅವರು ಚೆನ್ನಾಗಿ ಹಾಡುವಂತೆ ಮಾಡುತ್ತಿದ್ದರು.

ಆಗಿನ ಎಲ್ಲ ವಿದ್ವಾಂಸರಿಗೂ ಇದ್ದ ಆಸೆಯಂತೆ ರಾಮಯ್ಯನವರಿಗೆ ಮೈಸೂರಿನ ಆಸ್ಥಾನಕ್ಕೆ ಸೇರಬೇಕೆಂಬ ಹಂಬಲ ತುಂಬಾ ಇತ್ತು. ಅವರೇ ಹೇಳಿರುವಂತೆ ಪ್ರಭುಗಳ ದೃಷ್ಟಿ ಬೀಳಲು ಹಲವು ಹತ್ತು ಮಾರ್ಗಗಳನ್ನು ಹೊಕ್ಕಿ ಹೋಗಬೇಕಾಗಿತ್ತು. ಅದಕ್ಕೆ ಪರೀಕ್ಷೆಗಳು ಅನೇಕವಾಗಿದ್ದುವು. ಮೊದಲು ವೀಣಾಭಕ್ಷಿ ಸುಬ್ಬಣ್ಣನವರ ಮನೆಯಲ್ಲಿ ಕಚೇರಿ ನಡೆಯುತ್ತಿತ್ತು ನಂತರ ಮುತ್ತಯ್ಯ ಭಾಗವತರ ಮನೆಯಲ್ಲಿ ಸಂಗೀತ ಕಚೇರಿ ನಡೆಯುತ್ತಿತ್ತು . ಅನಂತರ ಬನುಮಯ್ಯನವರ ಶಾಲೆಯಲ್ಲಿ ಸಂಗೀತ ಕಚೇರಿ ನಡೆಯುತ್ತಿತ್ತು. ಎಲ್ಲ ಕಚೇರಿಗಳಿಗೂ ಮೈಸೂರು ವಾಸುದೇವಾಚಾರ್ಯರು, ವೀಣಾ ಭಕ್ಷಿ ಸುಬ್ಬಣ್ಣನವರು, ಮುತ್ತಯ್ಯ ಭಾಗವತರ್ ಎಲ್ಲರೂ ಬಂದು ತಲೆದೂಗಿ ಒಪ್ಪಿದರೆ ಮಾತ್ರ ದಸರಾ ಉತ್ಸವದಲ್ಲಿ, ಪ್ರಭುಗಳ ವರ್ಧಂತಿಗಳಲ್ಲಿ ಹಾಡಲು/ನುಡಿಸಲು ಅವಕಾಶ. ಇಲ್ಲದಿದ್ದರೆ ಪುನಃ ಅಭ್ಯಾಸಮಾಡಿ ಪ್ರಯತ್ನಿಸುವುದು ಅದೃಷ್ಟವಿದ್ದರೆ ಮಹಾರಾಜರ ಆಸ್ಥಾನದಲ್ಲೂ ವಿದ್ವಾಂಸರಾಗಿ ನೇಮಕವಾಗುತ್ತಿತ್ತು.

ರಾಮಯ್ಯನವರು ತಮ್ಮ ಕಾಲದಲ್ಲಿ ಹೆಸರು ಪಡೆದಿದ್ದ ಮೃದಂಗ ವಿದ್ವಾಂಸರ ನುಡಿಸಾಣಿಕೆ ಮತ್ತು ಶೈಲಿಯ ಬಗ್ಗೆ ಅನನ್ಯ ಅಭಿವ್ಯಕ್ತಿಯ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ. ತಮ್ಮ ಗುರುಗಳಾದ ಮುತ್ತು ಸ್ವಾಮಿ ತೇವರ್ ಅವರದ್ದು ತಂಜಾವೂರು ಶೈಲಿ. ಕೃತಿ ಕೀರ್ತನೆಗಳಿಗೆ ಪೂರಕವಾಗಿ ನುಡಿಸುತ್ತಿದ್ದರು ಮತ್ತು ಮುಂದೆ ಬರುವ ಸಂಗತಿಗಳನ್ನು ಊಹಿಸಿ ಅದೇ ರೀತಿ ನುಡಿಸುತ್ತಿದ್ದರು. ಒಟ್ಟಿನಲ್ಲಿ ನಾದ ಸೌಖ್ಯವಿರುತ್ತಿತ್ತು. ಈಗಿನಂತೆ ಕಲ್ಪನಾ ಸ್ವರಗಳ ಲೆಕ್ಕಾಚಾರಗಳು ಇರುತ್ತಿರಲಿಲ್ಲ. ದಕ್ಷಿಣಾಮೂರ್ತಿ ಪಿಳ್ಳೈ ಎಂಬ ಮೃದಂಗ, ಖಂಜರಿ ನುಡಿಸುತ್ತಿದ್ದ ವಿದ್ವಾಂಸರದು ನ ಭೂತೋ ನ ಭವಿಷ್ಯತಿ ಎಂಬಂತೆ ವಿದ್ವತ್‌ಪೂರ್ಣವಾಗಿ ಎಲ್ಲರಿಗೂ ಸಂತೋಷ ಕೊಡುವಂತಹ ನುಡಿಸಾಣಿಕೆ, ಅಷ್ಟು ಒಳ್ಳೆಯ  ಘನ ವಿದ್ವಾಂಸರು ಅವರು. ಮತ್ತೊಬ್ಬ ಘನ ವಿದ್ವಾಂಸ ಪಳನಿ ಸುಬ್ರಹ್ಮಣ್ಯ ಪಿಳ್ಳೈ ಎಂಬುವವರು. ಒಮ್ಮೆ ಪಳನಿಯವರು ಬೆಂಗಳೂರು ಟೌನ್‌ಹಾಲ್‌ನಲ್ಲಿ ಆಲತ್ತೂರು ಸಹೋದರರಿಗೆ ಪಕ್ಕವಾದ್ಯ ನುಡಿಸುವವರಿದ್ದರು. ಅದನ್ನು ಕೇಳಲು ರಾಮಯ್ಯನವರು ಮೈಸೂರಿನಿಂದ ಬೆಂಗಳೂರಿಗೆಕ ರೈಲಿನಲ್ಲಿ ಬಂದರೂ ಕಿಕ್ಕಿರಿದ ಜನರಿಂದಾಗಿ ಒಳಹೋಗಲು ಬಹಳ ಕಷ್ಟವಾಯಿತು. ನಂತರ ಕಾವಲಿನವನಿಗೆ ರೂ. ೫ ನ್ನು ಕೊಟ್ಟು ಅವನನ್ನು ಗೋಗರೆದು ಒಳಗೆ ನುಗ್ಗುವ ವೇಳೆಗೆ ಪಳನಿಯವರ ತನಿಯಾವರ್ತನ ಆರಂಭವಾಗಿತ್ತಂತೆ. ಆ ರೀತಿಯಾದ ತನಿಯಾವರ್ತನ ಮತ್ತೆ ಮತ್ತೆ ಮೆಲುಕುಹಾಕುವಂತೆ ಮೈನವಿರೇಳಿಸುವಂತಿತ್ತು ಎಂದು ಹೇಳಿಕೊಂಡಿದ್ದಾರೆ. ಹೀಗೆ ಅನೇಕ ಮೃದಂಗ ಕಲಾವಿದರನ್ನು ನೆನಪಿಸಿಕೊಂಡಿದ್ದಾರೆ.

ಮುಂದೆ, ಡಾ. ಗೋಪಾಲಸ್ವಾಮಿಯವರು ಆರಂಭಿಸಿದ ಆಕಾಶವಾಣಿ ಕೇಂದ್ರದಲ್ಲಿ ವಿದ್ವಾನ್‌ ಚೆನ್ನಕೇಶವಯ್ಯನವರ ಶಿಫಾರಸ್‌ನಿಂದ ನಿಲಯದ ಮೃದಂಗ ಕಲಾವಿದರಾಗಿ, ಗುತ್ತಿಗೆಯ  ಆಧಾರದ ಮೇಲೆ (Contract basis) ಸೇರಿದರು. ಆಕಾಶವಾಣಿ ಕೇಂದ್ರವನ್ನು ಸರ್ಕಾರವು ವಹಿಸಿಕೊಂಡ ಮೇಲೆ ಎಲ್ಲಾ ಕಲಾವಿದರ ಕೆಲಸವು ಖಾಯಂ ಆದವು. ರಾಮಯ್ಯನವರು ಆ ಕಾಲದಲ್ಲಿ ಆಕಾಶವಾಣಿಯಲ್ಲಿ ಹಾಡುತ್ತಿದ್ದ ಘಟಾನುಘಟಿ ಸಂಗೀತ ವಿದ್ವಾಂಸರುಗಳಾಗಿದ್ದ ಟೈಗರ್ ವರದಾಚಾರ್, ಪಲ್ಲಡಂ ಸಂಜೀವರಾವ್‌, ಆಲತ್ತೂರು ಸಹೋದರರು, ಶೆಮ್ಮಂಗುಡಿ ಶ್ರೀನಿವಾಸೈಯ್ಯರ್, ಚಿಂತಲಪಲ್ಲಿ ವೆಂಕಟರಾಯರು, ಆರ್.ಕೆ. ಶ್ರೀಕಂಠನ್‌ ಮುಂತಾದವರಿಗೆಲ್ಲ ಮೃದಂಗ ಪಕ್ಕವಾದ್ಯ ನುಡಿಸಿ ಸೈ ಎನಿಸಿಕೊಂಡಿದ್ದರು. ಹಾಗೆಯೇ ಸಂಗೀತದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ವೇಣುವಾದನ ಮಾಂತ್ರಿಕ ಮಾಲಿ, ಡಿ.ಕೆ. ಪಟ್ಟಮ್ಮಾಳ್‌, ಬಾಲಮುರುಳಿ ಕೃಷ್ಣ ಮುಂತಾದವರಿಗೆ ಮೃದಂಗ ಸಹಕಾರ ನೀಡಿದ್ದರು. ಗಾಯನವಾಗಲಿ, ವಾದನವಾಗಲಿ ಅದಕ್ಕೆ ಪೂರಕವಾಗಿ ಮೃದಂಗವನ್ನು ನುಡಿಸುತ್ತಿದ್ದರು ರಾಮಯ್ಯನವರು.

ಕಚೇರಿಕ ಅನುಭವ: ರಾಮಯ್ಯನವರಿಗೆ ಒಮ್ಮೆ ಮೈಸೂರು ಆಸ್ಥಾನದಲ್ಲಿ ನುಡಿಸುವ ಅವಕಾಶ ಒದಗಿತ್ತಂತೆ. ಆಗ ಮಹಾರಾಜರ ದರ್ಬಾರಿನಲ್ಲಿ ನುಡಿಸಬೇಕಾದರೆ ಗಾಯಕ, ವಾದಕರೆಲ್ಲರೂ ದರ್ಬಾರಿನ ಪೋಷಾಕನ್ನು ಧರಿಸಬೇಕಾದುದು ಕಡ್ಡಾಯವಾಗಿತ್ತು. ದರ್ಬಾರಿನಲ್ಲಿ ತೊಟ್ಟಿಲೊಂದಿತ್ತು. ಅದರಲ್ಲಿ ಸಂಗೀತ ಕಚೇರಿ ನಡೆಸುವವರು ಕುಳಿತು ಸಿದ್ಧವಾಗಿರುತ್ತಿದ್ದರು. ದರ್ಬಾರಿಗೆ ಪ್ರಭುಗಳ ಆಗಮನವಾದೊಡನೆ ಬಟನ್‌ ಒತ್ತುತ್ತಿದ್ದರು. ಕೂಡಲೆ ತೊಟ್ಟಿಲು ಮೇಲೆ ಬಂದು ಪ್ರಭುಗಳ ಎದುರಿಗೆ ಸರಿಯಾಗಿ ನಿಲ್ಲುತ್ತಿತ್ತು. ನಂತರ ಹಾಡಲು, ನುಡಿಸಲು ಆರಂಭಿಸುತ್ತಿದ್ದರು. ಆಗ ಪ್ರಭುಗಳಾಗಿದ್ದವರು ಸ್ವತಃ ಸಂಗೀತರಗಾರರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ಅವರ ಮುಂದೆ ಹಾಡುವುದು, ನುಡಿಸುವುದು ಸ್ವಲ್ಪ ಕಷ್ಟವೇ. ಸಂಗೀತ ಕಚೇರಿಗಳನ್ನು ಕೇಳುವಾಗ ನಾಲ್ವಡಿಯವರು ಕಾಲಿನಲ್ಲಿ ತಾಳ ಹಾರುತ್ತಿರುತ್ತಿದ್ದರಂತೆ. ಸಂಗೀತ ಕಚೇರಿ ಚೆನ್ನಾಗಿಲ್ಲದಿದ್ದರೆ ಹತ್ತು ನಿಮಿಷಕ್ಕೆ ಪರಾಕು. ಅರ್ಧಗಂಟೆ ಅಥವಾ ಮುಕ್ಕಾಲು ಗಂಟೆ ಸಂಗೀತ ಕಚೇರಿ ನಡೆದರೆ ಅದು ಬಹಳ ಚೆನ್ನಾಗಿತ್ತೆಂದು ಅರ್ಥ. ಒಮ್ಮೆ ಚಿಂತಲಪಲ್ಲಿ ವೆಂಕಟರಾಯರು ಮತ್ತು ಚಿಂತಲಪಲ್ಲಿ ರಾಮಚಂದ್ರರಾಯರು ಒಟ್ಟಿಗೆ ಹಾಡಿದ ದ್ವಂದ್ವ ಗಾಯನ ಕಚೇರಿಯನ್ನು ಪ್ರಭುಗಳು ಸುಮಾರು  ಒಂದುವರೆ ಗಂಟೆಗಳ ಕಾಲ ಕುಳಿತು ಕೇಳಿದರಂತೆ.

ರಾಮಯ್ಯನವರು ಸಂಗೀತ ಕಚೇರಿಗಳಿಗೆಕ ಪಕ್ಕವಾದ್ಯ ನುಡಿಸಲು ಆರಂಭಿಸಿದ ಕಾಲದಲ್ಲಿ ತಬಲಾ ನುಡಿಸುತ್ತಿದ್ದರೆ, ಕಾಲಕ್ರಮೇಣ ಮೃದಂಗಕ್ಕೆ ಬದಲಿಸಿಕೊಂಡರು. ಹಿಂದೆ ಸಂಗೀತ ಕಚೇರಿಗಳಿಗೆ ಹಾರ್ಮೋನಿಯಂ ಮತ್ತು ತಬಲಾ ಪಕ್ಕವಾದ್ಯವೇ ಹೆಚ್ಚಾಗಿದ್ದಿತು. ಸುಮಾರು ೧೯ನೇ ಶತಮಾನದ ವೇಳೆಗೆ ಸಂಗೀತ ಕಚೇರಿಗಳಲ್ಲಿ ಪಿಟೀಲು ಮತ್ತು ಮೃದಂಗವು ಪಕ್ಕವಾದ್ಯದ ಸ್ಥಾನವನ್ನು ಆಕ್ರಮಿಸಿಕೊಂಡವು.

ರಾಮಯ್ಯನವರಿಗೆ ತಬಲಾ, ಮೃದಂಗ ಎರಡೂ ಅಭ್ಯಾಸವಿದ್ದುದರಿಂದ ಪಂಡಿತ್‌ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್‌ ಭೀಮಸೇನ್‌ ಜೋಶಿ ಮುಂತಾದವರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಮೃದಂಗ ಸಹಕಾರವನ್ನೂ ನೀಡಿ ಸೈ ಎನಿಸಿಕೊಂಡಿದ್ದರು.

ರಾಮಯ್ಯನವರಿಗೆ ಮೈಸೂರು ಆಸ್ಥಾನಕ್ಕೆ ಸೇರಿ ಆಸ್ಥಾನ ವಿದ್ವಾಂಸರೆನಿಸಿಕೊಳ್ಳಲು ಬಹಳ ಆಸೆಯಿತ್ತು. ಅದಕ್ಕಾಗಿ ರಾಮಯ್ಯನವರು, ಮೈಸೂರು ಆಸ್ಥಾನ ವಿದ್ವಾಂಸರು, ಆಗಿನ ಪ್ರಭುಗಳ ವೀಣೆಯ ಗುರುಗಳೂ ಆಗಿದ್ದ ವೆಂಕಟಗಿರಿಯಪ್ಪನವರಿಗೆ ಪದೇ ಪದೇ ಹೇಳಿ ಒತ್ತಾಯಿಸುತ್ತಿದ್ದರಂತೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಒಮ್ಮೆ ವೆಂಕಟಗಿರಿಯಪ್ಪನವರು ಮಹಾರಾಣಿ ಬಾಲಕಿಯರ ಪ್ರೌಢಶಾಲೆಯ  ಹೆಣ್ಣು ಮಕ್ಕಳ ವೀಣಾ ವಾದನ ಕಾರ್ಯಕ್ರಮವನ್ನು ಪ್ರಭುಗಳ ಸಮಕ್ಷಮದಲ್ಲಿ ಏರ್ಪಡಿಸಿದರು. ಆ ವೀಣಾ ವಾದನಕ್ಕೆ ರಾಮಯ್ಯನವರ ಮೃದಂಗ ಸಹಕಾರವಿತ್ತು. ಕಾರ್ಯಕ್ರಮವು ಚೆನ್ನಾಗಿ ಬರಬೇಕೆಂಬ ದೃಷ್ಟಿಯಿಂದ ರಾಮಯ್ಯನವರನ್ನು ಕರೆಸಿ, ವೀಣಾ ವಾದನದ ತಾಲೀಮನ್ನು ಬಹಳವಾಗಿ ನಡೆಸಿದ್ದರು. ಎಲ್ಲಾ ತಯಾರಿಯ ನಂತರ ಪ್ರಭುಗಳ ಮುಂದೆ ನುಡಿಸುವ ದಿನ ಬಂದಿತು. ಪ್ರಭುಗಳ ಗಾಂಭೀರ್ಯ ಮತ್ತು ಠೀವಿಯನ್ನು ನೋಡಲು ಎಲ್ಲರನ್ನು ಹೆದರಿಸುವಂತೆಯೇ ಇತ್ತು. ಎಲ್ಲರೂ ತಮ್ಮ ತಮ್ಮ ವಾದ್ಯದೊಡನೆ, ನಿಗದಿಯಾದ ಸ್ಥಳದಲ್ಲಿ ಆಸೀನರಾಗಿ ಶ್ರುತಿಯನ್ನು ಸರಿಪಡಿಸಿಕೊಂಡು ಕೃತಿಯನ್ನು ಆರಂಭಿಸಿದರು. ಕೃತಿಯ ಪಲ್ಲವಿ, ಅನುಪಲ್ಲವಿಯ ನಂತರ ಕೊಡಬೇಕಾದ ಮುಕ್ತಾಯದಲ್ಲಿ ಸ್ವಲ್ಪ ಓಡಿ ಬಿಟ್ಟರಂತೆ. ಸೂಕ್ಷ್ಮವಾಗಿದ್ದ ಈ ತಪ್ಪು ಯಾರಿಗೂ ಅರ್ಥವಾಗಿಲ್ಲವೆಂದುಕೊಂಡಿದ್ದರು. ರಾಮಯ್ಯನವರು. ನಂತರ ಕಾರ್ಯಕ್ರಮವು ಮುಕ್ತಾಯವಾಯಿತು. ಮುಂದೊಂದು ದಿನ ವೆಂಕಟಗಿರಿಯಪ್ಪನವರು ಪ್ರಭುಗಳ ಮುಂದೆ ರಾಮಯ್ಯನವರ ಬಗ್ಗೆ ಪ್ರಸ್ತಾಪಮಾಡಿದಾಗ, ತಕ್ಷಣ ಪ್ರಭುಗಳು ಪ್ರತಿಕ್ರಿಯಿಸಿ “ಬಾಲಕನಿಗೆ ಲಯ ಶುದ್ಧವಿಲ್ಲ ಇನ್ನೂ ಚೆನ್ನಾಗಿ ಅಭ್ಯಾಸ ಮಾಡಬೇಕು” ಎಂದು ಹೇಳಿದರಂತೆ. ಇದರಿಂದಾಗಿ ರಾಮಯ್ಯನವರಿಗೆ ಮೈಸೂರು ಆಸ್ಥಾನ ಪ್ರವೇಶವಾಗಲಿಲ್ಲ. ಆದರೆ ಮುಂದೆಂದೂ ಇಂತಹ ದೌರ್ಬಲ್ಯ ಕಾಣಿಸದಂತೆ ಸಾಧನೆ ಮಾಡಿದ ಛಲ ರಾಮಯ್ಯನವರದು.

ನಾಲ್ವಡಿಯವರ ಮುಂದೆ ಸೇಲಂ ದೊರೆಸ್ವಾಮಿ ಅಯ್ಯಂಗಾರ್ ರವರ ಗಾಯನ ಕಚೇರಿಗೂ, ಇನ್ನೂ ಅನೇಕ ಸಮಗೀತ ಕಚೇರಿಗಳಿಗೂ ಮೃದಂಗ ಸಹಕಾರಕ ನೀಡಿದ್ದರು ರಾಮಯ್ಯ. ಹರಿಕಥೆಗಳಿಗೂ ಮೃದಂಗ ಸಹಕೃ ನೀಡಿದ್ದಾರೆ. ಅವರ ಕೊನೆ ಉಸಿರಿರುವವರೆಗೆ ಪ್ರತಿ ದಿನ ಏಳೆಂಟು ಗಂಟೆ ಸಾಧನೆ ಮಾಡುತ್ತಿದ್ದರಂತೆ.

ಜೀವನಾನುಭವ: ರಾಮಯ್ಯನವರು ಆಗ ಮೈಸೂರು ಆಸ್ಥಾನದಲ್ಲಿದ್ದ ಸಂಗೀತ ವಿದ್ವಾಂಸರುಗಳನ್ನು ಮತ್ತು ಅವರ ಸಂಗೀತವನ್ನು ನೆನಪಿಸಿಕೊಂಡಿದ್ದಾರೆ. ಮುತ್ತಯ್ಯ ಭಾಗವತರ್, ಮೈಸೂರು ವಾಸುದೇವಾಚಾರ್ಯರು, ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ, ವೀಣೆ ಶಿವರಾಮಯ್ರಯ, ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಮುಂತಾದವರು.

ಒಮ್ಮೆ ರಾಮಯ್ಯನವರು ಮೈಸೂರಿನ ಹಳೆ ಬಂಡಿಕೇರಿಯಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ಚಿಕ್ಕರಾಮರಾಯರೊಂದಿಗೆ ಮೃದಂಗ ಸಹಕಾರ ನೀಡಿದ್ದರು. ಅಂದು ರಾಯರು ತ್ರಿಶ್ರ ನಡೆ ಪಲ್ಲವಿಯನ್ನು ಪ್ರಸ್ತುಪಡಿಸಿದರು. ಅದು ಬಿಕ್ಕಟ್ಟಾಗಿದ್ದು ಬಹಳ ಸೊಗಸಾಗಿತ್ತು. ಅದಕ್ಕೆ ನುಡಿಸಿದ ಮೃದಂಗ ನಡೆಯು ತುಂಬಾ ಚೆನ್ನಾಗಿತ್ತೆಂದು ಅನೇಕ ಹಿರಿಯ ವಿದ್ವಾಂಸರು ಶ್ಲಾಘಿಸಿದರೆಂದು ಹೇಳಿದ್ದಾರೆ.

ಮುತ್ತಯ್ಯ ಭಾಗವತರನ್ನು ಮಹಾನುಭಾವರೆಂದು ಕರೆದಿದ್ದಾರೆ. ಅದಕ್ಕೆ ಕಾರಣವಿಷ್ಟೆ, ಭಾಗವತರು ಬಾಲ ಕಲಾವಿದನಿಗೂ ಗೌರವ ಕೊಡುತ್ತಿದ್ದರು. ಎಲ್ಲರನ್ನು ಬಹುವಚನದಲ್ಲೇ ಸಂಬೋಧಿಸುತ್ತಿದ್ದರು. ಒಂದು ಬಾರಿ ಭಾಗವತರ ಮನೆಗೆ ದಕ್ಷಿಣ ದೇಶದ ಒಬ್ಬ ವಿದ್ವಾಂಸರು ಬಂದು ತಂಗಿದ್ದರು. ಅವರ ಹೆಸರು ಗಂಧದಕಡ್ಡಿ ನಾರಾಯಣರಾಯರು, ಅವರು ಹುಡುಗ ರಾಮಯ್ಯನನ್ನು ಕರೆದು, “ಮರಿ ಅಂಗಡಿಗೆ ಹೋಗಿ ಉಂಡೆನೆಶ್ಯ ತೆಗೆದುಕೊಂಡು ಬಾ” ಎಂದು ಹೇಳಿ ಕಳುಹಿಸಿದರು. ಹುಡುಗ ಹೋಗಿ ತರುವಷ್ಟರಲ್ಲಿ ಲಾ ವಿದ್ವಾಂಸರಿಗೆ ಭಾಗವತರು ದಬಾಯಿಸಿ ತರಾಟೆಗೆ ತೆಗೆದುಕೊಂಡಿದ್ದರು. “ಆತ ಹುಡುಗನಾದರೂ ಅವನೊಬ್ಬ ಕಲಾವಿದ. ಕಲಾವಿದ ಹೋಗಿ ನಶ್ಯ ತರಬೇಕಾ, ಇದರಿಂದ ಸಂಗೀತಕ್ಕೆ ಅವಮಾನ, ಅವನಲ್ಲಿ ಕ್ಷಮೆ ಕೇಳಿ” ಎಂದು ಒತ್ತಾಯಿಸಿ ಹಿರಿಯ ವಿದ್ವಾಂಸರಿಂದ ಕ್ಷಮೆ ಕೇಳಿಸಿದರಂತೆ.

ಡಾ. ಬಿ. ದೇವೆಂದ್ರಪ್ಪನವರು ಉದಾತ್ತಗುಣವಿದ್ದ ಗುರುಗಳು ಜಗತ್ತಿನಲ್ಲಿದ್ದ ಎಲ್ಲ ವಾದ್ಯಗಳನ್ನು  ಅಭ್ಯಾಸ ಮಾಡಿ ನುಡಿಸಿದವರು. ಗುರುಗಳು ಯಾವಾಗಲು ಶ್ರುತಿಗೆ ಮಹತ್ವ ಕೊಡುತ್ತಿದ್ದರೆಂದು ಸ್ಮರಿಸಿ ಕೊಂಡಿದ್ದಾರೆ.

ರಾಮಯ್ಯನವರು ಸಂಗೀತ ಕ್ಷೇತ್ರದ ಎಲ್ಲ ರೀತಿಯ ಬದಲಾವಣೆಗಳನ್ನು ಕಂಡವರು. ಬಿಗಿಯಾಗಿದ್ದ ಸಂಗೀತ ಕಾಲಕ್ರಮೇಣ ತಿಳಿಯಾಗುತ್ತಾ ಬಂದದ್ದು ಸಂಗೀತ ಕಚೇರಿಗಳಲ್ಲಿ ಆಗುತ್ತಿದ್ದ ಬದಲಾವಣೆ. ಹಿಂದೆ ಧ್ವನಿವರ್ಧಕ ರಹಿತ ಸಂಗೀತ ಕಚೇರಿಗಳು ನಡೆಯುತ್ತಿದ್ದವು. ಕ್ರಮೇಣ ಧ್ವನಿವರ್ಧಕದಿಂದ ವಿದ್ವಾಂಸರಿಗೆ ಶ್ರಮ ಕಡಿಮೆಯಾಯಿತು. ಶೋತೃಗಳಿಗೂ ಇದರಿಂದ ಸಂತೋಷವುಂಟಾಯಿತು. ಹಿಂದೆ ೪, ೫ ಗಂಟೆ ಸಂಗೀತ ಕಚೇರಿಯಲ್ಲಿ ಹಾಡುತ್ತಿದ್ದರು. ಆದರೆ ಈಗ ಎರಡೂವರೆ ಗಂಟೆಯ ಸಂಗೀತ ಕಚೇರಿಗಳು ಜಾಸ್ತಿ, ಹಿಂದಾದರೆ ಶುದ್ಧ ಶಾಸ್ತ್ರೀಯ ಸಂಗೀತ ಸಂಪ್ರದಾಯ ಬದ್ಧವಾಗಿ ಕೇಳುತ್ತಿದ್ದ ಕಾಲವಾಗಿತ್ತು. ಆದರೆ ಈಗ ಅದು ಸ್ವಲ್ಪ ಮಟ್ಟಿಗೆ ಸಡಿಲಗೊಂಡಿದೆ. ಅಲ್ಲದೆ ಭಾವಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಈಗ ಲೆಕ್ಕಾಚಾರದ ಸ್ವರಗಳಿಗೆ ಒತ್ತು ಹೆಚ್ಚಾಗಿದೆ. ಈ ಅಭಿಪ್ರಾಯವನ್ನು ರಾಮಯ್ಯನವರು ಬೆಂಗಳೂ:ರು ಗಾಯನ ಸಮಾಜದ ಸಮ್ಮೇಳನಾಧ್ಯಕ್ಷರಾಗಿ ತಮ್ಮ ಭಾಷಣದಲ್ಲಿ ವ್ಯಕ್ತ ಪಡಿಸಿದ್ದಾರೆ. ಹಾಗೆಯೇ ಹಿಂದಿನ ಮತ್ತು ಈಗಿನ ಸಂಗೀತ ವಿನಿಕೆಯ ಬಗ್ಗೆ ತುಲನಾತ್ಮಕವಾಗಿ ವಿಶ್ಲೇಷಿಸಿ ಪಕ್ಕವಾದ್ಯಗಾರರ ನುಡಿಸಾಣಿಕೆಯ ಬಗ್ಗೆಯೂ ಅಭಿವ್ಯಕ್ತಿಸಿದ್ದಾರೆ. ಹಿಂದೆ ಮೃದಂಗ ವಾದಕರು ಗಾಯನ, ವಾದನಕ್ಕೆ ಪೂರಕವಾಗಿ ನುಡಿಸುತ್ತಾ ನಾದಸೌಖ್ಯವನ್ನು ಕಾಪಾಡುತ್ತಿದ್ದರು. ಈಗಿನ ಮೃದಂಗದಲ್ಲಿ ವಾದಕರು ಜಾಣ್ಮೆಯಿಂದ, ಚಮತ್ಕಾರಯುತವಾಗಿ, ಕ್ಲಿಷ್ಟ ಜತಿಗಳನ್ನು ಜೋಡಿಸಿ ಸ್ವಾರಸ್ಯಕರವಗಿ ನುಡಿಸುತ್ತಿದ್ದಾರೆ. ಕಲೆ ಬೆಳೆಯಬೇಕಲ್ಲವೆ, ಆದುದರಿಂದ ಬದಲಾವಣೆಗಳು ಸಹಜ, ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಗ ಮೈಸೂರಿನಲ್ಲಿ ಸಂಗೀತ ಕಚೇರಿಗಳು ನಡೆಯುತ್ತಿದ್ದ ಸ್ಥಳಗಳು ಬೆರಳೆಣಿಕೆಯಷ್ಟಿದ್ದವು. ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣನವರ ಮನೆಗಳಲ್ಲಿ ನಡೆಯುತ್ತಿದ್ದವು . ವೀಣೆ ಶೇಷಣ್ಣನವರು ಕೃಷ್ಣೋತ್ಸವವನ್ನೂ ಆರಂಭಿಸಿದ್ದರು. ಅಲ್ಲಿಯೂ ಅನೇಕ ಹಿರಿಯ ವಿದ್ವಾಂಸರು ಸಂಗೀತ ಕಚೇರಿಯನ್ನು ನಡೆಸಿದ್ದರು. ರಾಮಯ್ಯನವರು ಇಂಥ ಅನೇಕ ಸಂಗೀತ ಕಚೇರಿಗಳಿಗೆ ಮೃದಂಗ ಸಹಕಾರ ನೀಡಿದ್ದರು. ಅರಮನೆಯಲ್ಲಿ, ಬಿಡಾರಂ ಕೃಷ್ಣಪ್ಪನವರು ಕಟ್ಟಿದ ರಾಮಮಂದಿರದಲ್ಲಿ ರಾಮೋತ್ಸವವನ್ನು ಕೃಷ್ಣಪ್ಪನವರೇ ಆರಂಭಿಸಿದ್ದರು. ಡಾ.ಬಿ. ದೇವೇಂದ್ರಪ್ಪನವರು ಆರಂಭಿಸಿದ್ದ ಹನುಮಜ್ಜಯಂತಿ ಹೀಗೆ ಅನೇಕ ಖ್ಯಾತ ವಿದ್ವಾಂಸರ ಸಂಗೀತ ಕಚೇರಿಗಳಿಗೆ ರಾಮಯ್ಯನವರ ಮೃದಂಗ ವಾದನದ ಪಕ್ಕವಾದ್ಯವಿರುತ್ತಿತ್ತು.

ಪ್ರಶಸ್ತಿ, ಸನ್ಮಾನಗಳು: ೧೯೮೨-೮೩ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ-ಕರ್ನಾಟಕ ಕಲಾತಿಲಕ, ಮೈಸೂರು ಹನುಮಜ್ಜಯಂತಿ ಉತ್ಸವ, ಲಯವಾದ್ಯ ಚತುರ, ೧೯೯೦ ಕರ್ನಾಟಕ ಗಾನಕಲಾ ಪರಿಷತ್ ಬೆಂಗಳೂರು ಸನ್ಮಾನ, ೧೯೯೧ ಬೆಂಗಳೂರು ಗಾಯನ ಸಮಾಜ, ಬೆಂಗಳೂರು ಸಂಗೀತ ಕಲಾರತ್ನ, ಕರ್ನಾಟಕ ಸರ್ಕಾರದ ಕನಕ ಪುರಂದರ ಪ್ರಶಸ್ತಿ, ನಾದಜ್ಯೋತಿ ಶ್ರೀ ತ್ಯಾಗರಾಜ ಭಜನ ಸಭಾ, ಬೆಂಗಳೂರು ಕಲಾ ಜ್ಯೋತಿ ಪುರಸ್ಕಾರ, ಕರ್ನಾಟಕ ಪರ್ ಕಸ್ಸಿವ್‌ ಆರ್ಟ್‌ ಸೆಂಟರ್, ಬೆಂಗಳೂರು ಪಾಲ್ಘಾಟ್ ಮಣಿ ಅಯ್ಯರ್ ಪ್ರಶಸ್ತಿ

ವಿದ್ವಾನ್‌ ರಾಮಯ್ಯನವರು ದಿನಾಂಕ ನವೆಂಬರ್ ೩೦, ೨೦೦೨ರಂದು ದೈವಾಧೀನರಾದರು.