ಸಂಗೀತದ ಮನೆತನದಿಂದ ಬಂದ ಶ್ರೀಮತಿ ಎಂ.ಎಸ್‌. ಶೀಲಾ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಇಂದು ಬಹುದೊಡ್ಡ ಹೆಸರು. ಅವರ ತಾಯಿ ಶ್ರೀಮತಿ ಎಂ.ಎನ್‌. ರತ್ನ ಜನಪ್ರಿಯ ಸಂಗೀತ ವಿದುಷಿಯಾಗಿದ್ದವರು. ಅವರಿಂದಲೇ ಶೀಲಾ ಅವರಿಗೆ ಪ್ರಾರಂಭಿಕ ಶಿಕ್ಷಣ ದೊರೆತದ್ದು. ನಂತರ ಸಂಗೀತ ಕಲಾನಿಧಿ ಡಾ|| ಆರ್. ಕೆ. ಶ್ರೀಕಂಠನ್‌ ಅವರ ಬಳಿ  ಶೀಲಾ ಪ್ರಬುದ್ಧ ಸಂಗೀತ ಕಲಾವಿದೆಯಾಗಿ ರೂಪುಗೊಂಡರು. ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದ ಪ್ರತಿಭಾವಂತರು ಶೀಲಾ ಶ್ರೀಮತಿ ಎಂ.ಎಸ್‌. ಶೀಲಾ ಸುಗಮ ಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಪರೂಪ ಮತ್ತು ವಿಶೇಷತೆಯೆಂದರೆ ಈ ಪ್ರತಿಭಾವಂತ ಕಲಾವಿದೆ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಎರಡೂ ವಿಭಾಗಗಳಲ್ಲಿ ಆಕಾಶವಾಣಿಯ ‘ಪ್ರಥಮ ಶ್ರೇಣಿಯ’ ಕಲಾವಿದೆಯಾಗಿರುವುದು. ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಸಮ್ಮೇಳನಗಳೂ ಸೇರಿದಂತೆ ಶೀಲಾ ದೇಶದಾದ್ಯಂತ ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಜೊತೆಗೆ ಅಮೆರಿಕಾ ಮತ್ತು ಕೆನಡಾ ಹಾಗೂ ಲಂಡನ್‌ ಮತ್ತು ಮಧ್ಯಪೂರ್ವ ದೇಶಗಳ ಪ್ರವಾಸ ಕೂಡಾ ಮಾಡಿ ಅಲ್ಲಿ ನಮ್ಮ ಕರ್ನಾಟಕ ಸಂಗೀತದ ಪರಂಪರೆಯನ್ನು ಉನ್ನತ ಮಟ್ಟದಲ್ಲಿ ಪರಿಚಯಿಸಿದ್ದಾರೆ.

ಕ್ಯಾಸೆಟ್‌ ಮತ್ತು ಸಿ.ಡಿ. ಮಾಧ್ಯಮದಲ್ಲಿ ಶ್ರೀಮತಿ ಎಂ.ಎಸ್‌. ಶೀಲಾ ಬಹುಜನ ಮನ್ನಣೆ ಪಡೆದಿರುವ ಸಂಗೀತ ವಿದುಷಿ. ಅವರು ಹೊರತಂದಿರುವ ಲಲಿತಾ ಸಹಸ್ರನಾಮ, ಶ್ರೀ ಶಾರದಾ ಸುಪ್ರಭಾತ, ಗಾನ ಸುಶೀಲಂ, ಆಡಿಸಿದಳು ಯಶೋಧಾ, ಪಾಲಿಂಚು ಕಾಮಾಕ್ಷಿ, ಹರಿದಾಸ ನಮನ, ಸೌಂದರ್ಯ ಲಹರಿ, ಶಿವಾನಂದ ಲಹರಿ, ವಚನಾಮೃತ ಮುಂತಾದ ಕ್ಯಾಸೆಟ್‌ ಮತ್ತು ಸಿಡಿಗಳು ಬಹಳ ಬೇಡಿಕೆಯನ್ನು ಹೊಂದಿವೆ. ಒಂದು ಅವಧಿಗೆ ಶ್ರೀಮತಿ ಶೀಲಾ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ತಮ್ಮ ಪತಿ ಶ್ರೀ ಬಿ.ಕೆ. ರಾಮಸ್ವಾಮಿ ಅವರೊಂದಿಗೆ ‘ಹಂಸಧ್ವನಿ ಕ್ರಿಯೇಷನ್ಸ್‌’ ಸಂಸ್ಥೆ ಸ್ಥಾಪಿಸಿ, ಕರ್ನಾಟಕ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ಅನೇಕ ಕ್ರಿಯಾಶೀಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಅವುಗಳಲ್ಲಿ ಹರಿದಾಸ ನಮನ ಸರಣಿ, ವಾದ್ಯ ವೈಭವ ಸರಣಿ, ನುಡಿ ನಮನ, ಮೈಸಠೂರು ವಾಗ್ಗೇಯಕಾರರನ್ನು ಕುರಿತ ವಾಗ್ಗೇಯ ವೈಭವ ಪ್ರಮುಖವಾದವು, ವಾಗ್ಗೇಯ ವೈಭವ ಮಾಲಿಕೆಯಲ್ಲಿ ಇತ್ತೀಚೆಗೆ ಶ್ರೀಮತಿ ಶೀಲಾ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೃತಿಗಳ ಸಿ.ಡಿ.ಯನ್ನು ಹೊರತಂದಿದ್ದಾರೆ. ಹಲವಾರು ಶಿಷ್ಯರುಗಳನ್ನೂ ತಯಾರು ಮಾಡಿರುವ ಈ ಅಭಿಜಾತ ಕಲಾವಿದೆ ತಮ್ಮ ಸಂಸ್ಥೆಯ ಮುಖಾಂತರ ಪ್ರತಿವರ್ಷ ಒಬ್ಬ ಹಿರಿಯ ಸಂಗೀತ ಕಲಾವಿದರನ್ನು ಗುರುತಿಸಿ, ಅವರಿಗೆ ‘ಹಂಸಧ್ವನಿ ಪುರಸ್ಕಾರ’ವನ್ನು ನೀಡಿ ಗೌರವಿಸುವ ಕೆಲಸವನ್ನೂ ಮಾಡುತ್ತಾ ಬಂದಿದ್ದಾರೆ.

ಶ್ರೀಮತಿ ಎಂ.ಎಸ್‌. ಶೀಲಾ ಅವರ ಸಂಗೀತ ಸಾಧನೆಯನ್ನು ಗುರುತಿಸಿ, ಸಂಗ ಸಂಸ್ಥೆಗಳು, ಮಠ ಮಂದಿರಗಳು ಅನೇಕ ಸ್ತರದಲ್ಲಿ ಅವರನ್ನು ಗೌರವಿಸಿವೆ. ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ ೧೯೯೭ ರಲ್ಲಿ ಶೀಲಾ ಅವರನ್ನು ಅತ್ಯುತ್ತಮ ಹಿರಿಯ ಗಾಯಕಿ ಎಂದು ಗೌರವಿಸಿವೆ. ಕರ್ನಾಟಕ ಸರ್ಕಾರ ತನ್ನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ೧೯೯೭-೯೮ರ ಸಾಲಿನಲ್ಲಿ ಕನ್ನಡ ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ಶ್ರೀಮತಿ ಶೀಲಾ ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಗಾನಕಲಾ ಪರಿಷತ್ತಿನ ೨೦೦೦ ರ ಸಾಲಿನ ಸಂಗೀತ ಸಮ್ಮೇಳನದಲ್ಲಿ ಸಮ್ಮೇಳನದ ಉತ್ತಮ ಸಂಗೀತ ವಿದುಷಿ ಎನ್ನುವ ಗೌರವದೊಂದಿಗೆ ಅನನ್ನಯ ಕಲ್ಚರಲ್‌ ಅಕಾಡೆಮಿಯ ‘ಅನನ್ನಯ ಪುರಸ್ಕಾರ’ ಪಡೆದ ಹೆಗ್ಗಳಿಕೆ ಶೀಲಾ ಅವರದು. ಶೃಂಗೇರಿಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ಶಾರದಾ ಪೀಠದ ‘ಆಸ್ಥಾನ ವಿದುಷಿ’ಯಾಗಿ ಶೀಲಾ ಗೌರವಿಸಲ್ಪಟ್ಟಿದ್ದಾರೆ. ಇವುಗಳಲ್ಲದೆ ಬೇರೆ ಬೇರೆ ಸಂಗೀತ ಸಂಸ್ಥೆಗಳು ಶೀಲಾ ಅವರನ್ನು ಗಾನಕಲಾಶ್ರೀ, ಗಾನ ವಾರಿಧಿ, ಸುಮಧುರ ಸಂಗೀತ ಧ್ರುವತಾರೆ, ಗುರು ಗೌರವಕಾರಿಣಿ, ಸಂಗೀತ ರಾಗ ಅಮೃತವರ್ಷಿಣಿ, ಸಂಗೀತ ಗಾನ ಕಲಾವಿಧಿ, ಸಂಗೀತ ಸಹ್ಯಾದ್ರಿ ಶಿಕಾರಿಣಿ, ಸಂಗೀತ ಸರಸ್ವತಿ, ಸಂಗೀತ ವಾಗ್ದೇವಿ ಮುಂತಾದ ಬಿರುದುಗಳೊಂದಿಗೆ ಸನ್ಮಾನಿಸಿವೆ. ಶ್ರೀಮತಿ ಎಂ.ಎಸ್‌. ಶೀಲಾ ಅವರ ಸಂಗೀತ ಸಾಧನೆಯನ್ನು ಗುರುತಿಸಿ ೨೦೦೭-೦೮ನೇ ಸಾಲಿನ ಗೌರವ ಪ್ರಶಸ್ತಿಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡಿ ಗೌರವಿಸಿದೆ.