೧೯೩೨ರಲ್ಲಿ ಸಂಗೀತಗಾರರ ವಂಶದಲ್ಲಿ ಹುಟ್ಟಿದ ಶ್ರೀ ಎಂ.ಎಸ್. ಶೇಷಪ್ಪ ಅವರ ತಂದೆ ಶ್ರೀ ಎಂ. ಎಸ್. ಸುಬ್ಬಣ್ಣನವರು ಸ್ವತಃ ತಬಲ ವಾದಕರು ಶ್ರೀಯುತರುಗಳಾದ ಶ್ರೀನಿವಾಸಲು ನಾಯ್ಡು, ಗೋವಿಂದಸ್ವಾಮಿ ಅಣ್ಣ ಎಂ.ಎಸ್. ರಾಮಯ್ಯ ಅವರುಗಳಲ್ಲಿ ಶೇಷಪ್ಪನವರು ವಿದ್ಯೆಯನ್ನು ಸಂಪಾದಿಸಿ, ಡಾ. ಬಿ. ದೇವೇಂದ್ರಪ್ಪನವರಿಂದ ಮಾರ್ಗದರ್ಶನವನ್ನು ಪಡೆದರು. ಮಡಿಕೇರಿಯ ಸಂಗೀತ ನಾಟಕ ಅಕಾಡೆಮಿಯಲ್ಲಿ ಸ್ವಲ್ಪ ಕಾಲ ಬೋಧಕರಾಗಿದ್ದ ಶ್ರೀಯುತರು ಕರ್ನಾಟಕ ಶಾಸ್ತ್ರೀಯ ಸಂಗೀತವಲ್ಲದೆ ಹಿಂದುಸ್ಥಾನಿ, ಭಾವಗೀತೆ, ಹರಿಕಥೆ, ನೃತ್ಯ, ನಾಟಕ, ಯಕ್ಷಗಾನಗಳಿಗೂ ಪಕ್ಕವಾದ್ಯ ನುಡಿಸಿದ್ದಾರೆ. ಮೃದಂಗವಲ್ಲದೆ ತಬಲ, ಡೋಲಕ್, ಖಂಜರಿ, ಘಟಿ ವಾದ್ಯಗಳಲ್ಲೂ ತಮ್ಮ ಕೈಚಳಕ ತೋರಿದ್ದಾರೆ. ಜಟ್ಟಿ ತಾಯಮ್ಮ ಡಾ.ಕೆ. ವೆಂಕಟಲಕ್ಷ್ಮಮ್ಮ, ಸುಂದರಮ್ಮ, ಜೇಜಮ್ಮ, ಸೋಹನ್‌ಲಾಲ್, ಹೀರಾಲಾಲ್, ಜಯಶಂಕರ್ ಮುಂತಾದವರ ನೃತ್ಯ ಮೇಳದಲ್ಲಿ ಲಯ ವಾದ್ಯಗಳನ್ನು ನುಡಿಸಿದ್ದಾರೆ. ಈ ಹಿರಿಯ ಲಯವಾದ್ಯಗಾರರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೦-೯೧ರ ಪ್ರಶಸ್ತಿಯನ್ನು “ಕರ್ನಾಟಕ ಕಲಾ ತಿಲಕ” ಬಿರುದಿನೊಂದಿಗೆ ನೀಡಿ ಗೌರವಿಸಿದೆ.