ಎಂ.ಎಸ್. ಶ್ರೀನಿವಾಸಮೂರ್ತಿಯವರು ೮-೮-೧೯೩೧ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ದೊಡ್ಡ ತಾತ ಚಿಕ್ಕರಾಮರಾಯರು.ಮಾತಾಮಹ ಹರಿಕಾರ ವೆಂಕಟರಾಯರು ಸಂಗೀತ ವಿದ್ವಾಂಸರು. ಶ್ರೀನಿವಾಸಮೂರ್ತಿಯವರಿಗೆ ತಾಯಿ ರಾಜಮ್ಮನವರೇ ಆರಂಭದ ಗುರು, ತಾಯಿಯವರಲ್ಲಿ ಗಾಯನವನ್ನು ಅಭ್ಯಸಿಸಿದ ಶ್ರೀನಿವಾಸಮೂರ್ತಿ ಮುಂದೆ ಎಂ.ಆರ್. ದೊರೆಸ್ವಾಮಿಯವರಲ್ಲಿ ವೇಣು ವಾದನದಲ್ಲಿ ತರಬೇತಿಯನ್ನು ಪಡೆದರು.

ರಾಜ್ಯದ ಅನೇಕ ಭಾಗಗಳಲ್ಲಿ ಕೊಳಲು ವಾದನ ಕಚೇರಿಗಳನ್ನು ನೀಡಿರುವ ಶ್ರೀನಿವಾಸಮೂರ್ತಿ ಬೆಂಗಳೂರು ಆಕಾಶವಾಣಿ, ದೂರದರ್ಶನ ಅಲ್ಲದೆ ಬಿ.ಬಿ.ಸಿ ಕೇಂದ್ರಗಳಲ್ಲೂ ಕೊಳಲು ತನಿ ಕಚೇರಿ ನೀಡಿದ್ದಾರೆ. ಹಿಂದುಸ್ಥಾನಿ  ಶಾಸ್ತ್ರೀಯ ಸಂಗೀತದಲ್ಲೂ ಸಾಕಷ್ಟು ಪರಿಶ್ರಮ ಹೊಂದಿರುವುದೇ ಅಲ್ಲದೆ ಭಾರತೀಯ ನೃತ್ಯ ಪ್ರಕಾರಗಳ ಎಲ್ಲ ಕಾರ್ಯಕ್ರಮಗಳಲ್ಲೂ ಕೊಳಲಿನಲ್ಲಿ ಹಿನ್ನೆಲೆ ಸಂಗೀತ ಸಹಕಾರ ನೀಡಿದ್ದಾರೆ. ನೀಡುತ್ತಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲೂ ಪ್ರವಾಸ ಮಾಡಿ ಕೊಳಲು ವಾದನ ಕಚೇರಿ ಹಾಗೂ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಸಂಗೀತ ಶಿಕ್ಷಕರಾಗಿ ಅನೇಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಶಿಷ್ಯರೂ ಪ್ರವರ್ಧಮಾನಕ್ಕೆ ಬಂದಿದ್ದಾರೆ.

ಇವರ ಅಮೋಘ ಸಾಧನೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೩-೯೪ರ ಪ್ರಶಸ್ತಿಯೊಂದಿಗೆ “ಕರ್ನಾಟಕ ಕಲಾ ತಿಲಕ” ಎಂಬ ಬಿರುದು ನೀಡಿ ಗೌರವಿಸಿದೆ.