೧೨-೪-೧೯೨೦ ರಂದು ಮೈಸೂರಿನಲ್ಲಿ ಜನಿಸಿದ ಸುಬ್ರಹ್ಮಣ್ಯಂ ಅವರ ಮನೆತನದವರೆಲ್ಲ ಸಂಗೀತಗಾರರೇ. ಮೊದಲಿಗೆ ಸುಬ್ಬರಾಯಪ್ಪ ಮತ್ತು ಎಸ್‌. ವೆಂಕಟರಮಣಯ್ಯನವರಲ್ಲಿ ಪಿಟೀಲು ವಾದನದಲ್ಲಿ ತರಬೇತಿ ಪಡೆದರು. ನಂತರ ಡಾ|| ಬಿ. ದೇವೇಂದ್ರಪ್ಪನವರಲ್ಲಿ ಹೆಚ್ಚಿನ ವ್ಯಾಸಂಗ ನಡೆಸಿ ಗುರುಗಳೊಡನೆ ದಕ್ಷಿಣ ಭಾರತದಲ್ಲೆಲ್ಲಾ ಸಂಚರಿಸಿದರು. ಅನಂತರ ಬೆಂಗಳೂರಿನಲ್ಲಿ ಎಲ್.ಎಸ್‌. ನಾರಾಯಣ ಸ್ವಾಮಿ ಭಾಗವತರು, ಎಲ್‌.ಎಸ್‌. ಶೇಷಗಿರಿರಾಯರು, ಡಿ. ಸುಬ್ಬರಾಮಯ್ಯ, ಪಲ್ಲವಿ ಚಂದ್ರಪ್ಪನವರಲ್ಲಿ ಮಾರ್ಗದರ್ಶನ ಪಡೆದು ಸಂಗೀತದ ಮರ್ಮಗಳನ್ನು ಅರಿತರು.

೧೯೪೫ರಲ್ಲಿ ಟಿ. ಚೌಡಯ್ಯನವರ ಪ್ರೋತ್ಸಾಹದಿಂದ ಮದರಾಸಿನ ಆಕಾಶವಾಣಿ ನಿಲಯದ ಕಲಾವಿದರಾಗಿ ಸೇರಿ ಮುಂದೆ ಮೈಸೂರು ಹಾಗೂ ಬೆಂಗಳೂರು ನಿಲಯಗಳ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ರಾಜ್ಯದ ಹಾಗೂ ಹೊರ ರಾಜ್ಯಗಳ ಪ್ರತಿಷ್ಠಿತ ಸಭೆಗಳಲ್ಲೂ, ಸಂಸ್ಥೆಗಳಲ್ಲೂ ಉತ್ಸವಾದಿಗಳಲ್ಲೂ, ಹೆಸರಾಂತ ಕಲಾವಿದರಿಗೆ  ಪಕ್ಕವಾದ್ಯಗಾರರಾಗಿಯೂ ತನಿ ವಾದಕರಾಗಿಯೂ ಜನಪ್ರಿಯತೆ, ಕೀರ್ತಿಗಳನ್ನು ಪಡೆದುಕೊಂಡರು. ಇವರ ಪುತ್ರ ಎಂ.ಎಸ್‌. ಗೋವಿಂದಸ್ವಾಮಿಯವರೂ ಸೇರಿದಂತೆ ಹಲವಾರು ಉತ್ತಮ ವಯೋಲಿನ್‌ ವಾ ದಕರಾಗಿ ಶಿಕ್ಷಣವಿತ್ತು. ಕಾಯವಳಿದರೂ ಕೀರ್ತಿ ಉಳಿಯುವಂತಹ ಕೆಲಸಗಳನ್ನು ಮಾಡಿದ್ದಾರೆ.

ಸಹೃದಯತೆ, ವಿನಯಶೀಲತೆ, ಸಾಧು ಸಜ್ಜನತೆ ತುಂಬಿದ ಸ್ನೇಹ ಪರ ಸುಬ್ರಹ್ಮಣ್ಯಂ ಅವರಿಗೆ ಹಲವಾರು ಸಂಘ-ಸಂಸ್ಥೆಗಳ ಸನ್ಮಾನಗಳು ಪ್ರಾಪ್ತವಾದುವು. ಅವರ ಸೇವೆಯನ್ನು ಗುರುತಿಸಿ ಮೈಸೂರಿನ ಹನುಮಜ್ಜಯಂತಿ ಉತ್ಸವದಲ್ಲಿ ‘ಪಿಟೀಲು ವಾದ್ಯ ಪ್ರವೀಣ’, ಚಿಂತಾಮಣಿ ಸಂಗೀತ ಸಭೆಯಿಂದ ‘ಸುನಾದ ಪ್ರವೀಣ ’, ರಾಜಾಜಿನಗರ ಸಂಗೀತ ಸಭೆಯಿಂದ ‘ಕಲಾ ಸಿಂಧು’, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿಗಳನ್ನು  ನೀಡಲಾಗಿದೆ.

ಸಂತೃಪ್ತ ಮನಸ್ಕರಾಗಿದ್ದ ಸುಬ್ರಹ್ಮಣ್ಯಂ ೨೧-೧೦-೨೦೦೫ ರಂದು ಇಹ ಬಂಧನದಿಂದ ವಿಮುಕ್ತಿ ಹೊಂದಿದರು.