Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಂ.ಎಸ್. ಹೆಳವರ್

ಅಲೆಮಾರಿ ಜನಾಂಗಕ್ಕೆ ಸೇರಿದ ಹೆಳವ ಪಿಚ್ಚಗುಂಟಲು ಸಮುದಾಯಕ್ಕೆ ಸೇರಿದ ಎಂ.ಎಸ್.ಹೆಳವ ಈ ಜನಾಂಗದಲ್ಲಿ ಮೊದಲ ಪದವೀಧರ ಹಾಗೂ ಮೊಟ್ಟಮೊದಲ ವಕೀಲರು. ವಿಜಯಪುರ ಜಿಲ್ಲೆಗೆ ಸೇರಿದವರಾದ ಎಂ.ಎಸ್.ಹೆಳವ ಸ್ವಂತ ಪರಿಶ್ರಮದಿಂದ ಉಚಿತ ವಿದ್ಯಾರ್ಥಿ ನಿಲಯಗಳಲ್ಲಿ ವಾಸ ಮಾಡುತ್ತ, ವಿಜ್ಞಾನ ಪದವಿಯನ್ನು ಹಾಗೂ ಕಾನೂನು ಪದವಿಯನ್ನು ಪಡೆದವರು.
ಕೇವಲ ೫೩,೦೦೦ ಜನಸಂಖ್ಯೆ ಉಳ್ಳ ಪಿಚ್ಚಗುಂಟಲು ಜನಾಂಗದ ಎಂ.ಎಸ್.ಹೆಳವರ್ ಅವರು ನಂತರ ವಕೀಲಿಕೆ ಕೈಗೊಂಡರು. ಡಿ.ದೇವರಾಜ ಅರಸು ಅವರ ಮಾರ್ಗದರ್ಶನದಲ್ಲಿ ಸಮಾಜಸೇವೆಗೆ ಕಾಲಿಟ್ಟ ಹೆಳವರ್, ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಜಿಲ್ಲಾ ಹಾಗೂ ತಾಲೂಕು ನ್ಯಾಯ ಮಂಡಳಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿರುವ ಎಂ.ಎಸ್. ಹೆಳವರ್ ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಯ ಅಲೆಮಾರಿ ಜನಾಂಗಕ್ಕಾಗಿ ಪುಟ್ಟ ಗ್ರಾಮಗಳನ್ನು ಸರ್ಕಾರದ ನೆರವಿನಿಂದ ಅಸ್ಥಿತ್ವಕ್ಕೆ ತಂದರು. ಅಲೆಮಾರಿ ಜನಾಂಗದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹಲವು ಬಗೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸಕ್ರಿಯರಾಗಿರುವ ಹೆಳವರ್ ಅವರು ಅಲೆಮಾರಿ ಜನಾಂಗಗಳಿಗೆ ಸಂವಿಧಾನದ ಸವಲತ್ತುಗಳನ್ನು ಕೊಡಿಸುವಲ್ಲಿ ಈಗಲೂ ಶ್ರಮಿಸುತ್ತಿದ್ದಾರೆ.