ಕರಾವಳಿಯ ಕುಮಟಾ ಬಂಡಿವಾಳ ಹಳ್ಳಿಯ ರಾಮಚಂದ್ರ ಹೆಗಡೆ(೨೭) ಎಂ.ಎ ಓದಿದ್ದಾರೆ. ಕೃಷಿ  ಆಸಕ್ತಿಯ ಹುಡುಗ ಈಗ ಹಳ್ಳಿಯಲ್ಲಿ ಉಳಿದಿದ್ದಾರೆ. ಇವರು ಪದವಿ ಓದುವ ಕಾಲಕ್ಕೆ ಅಡಿಕೆ ಕೊನೆ ಕೊಯ್ಯಲು ಕೆಲಸದವರು ಸಿಗಲಿಲ್ಲ, ಕಾಲೇಜಿಗೆ ಹೋಗಲು ಮನಸ್ಸು ಚಡಪಡಿಸುತ್ತಿತ್ತು, ಇತ್ತ ಕೃಷಿ ಕೆಲಸ ಹಾಳಾಗುತ್ತಿತ್ತು. ಆಗ ಹಳ್ಳಿಯ ಶಿವರಾಮ ಹೆಗಡೆ ಮರವೇರುವ ಕೆಲಸ ಆರಂಭಿಸಲು ಸಲಹೆ ನೀಡಿದರು, ಅಲ್ಲಿಂದ ನಿಧಾನಕ್ಕೆ ಮರವೇರುವ ಅಭ್ಯಾಸ. ಮಳೆಗಾಲದಲ್ಲಿ ಮರವೇರಿ ಬೋರ್ಡೊ ಸಿಂಪರಣೆ, ಬೇಸಿಗೆಯಲ್ಲಿ ಕೊನೆ ಕೊಯ್ಯವ ಕೆಲಸಗಳನ್ನು ಕಾಲೇಜಿನ ರಜಾ ದಿನಗಳಲ್ಲಿ ಆರಂಭಿಸಿದರು. ಈಗ ಸ್ನಾತಕೋತ್ತರ ಓದಿದ್ದರೂ ನೌಕರಿಯ ಹಿಂದೆ ಓಡಿ ನಗರ ಸೇರಿಲ್ಲ,   ಮರವೇರುವ ಮನಸ್ಸು ಬದಲಿಸಿಲ್ಲ! ೭೦-೮೦ ಅಡಿ ಎತ್ತರದ ಅಡಿಕೆ ಮರವೇರಿ ದಿನಕ್ಕೆ ೨೦೦-೨೨೫ ಕೊನೆ ಕೊಯ್ಯುವ ನೈಪುಣ್ಯ ಬೆಳೆಸಿಕೊಂಡಿದ್ದಾರೆ.

ಕರಾವಳಿಯಲ್ಲಿ ಊರಿಗೆ ಊರೇ ಖಾಲಿಯಾಗುತ್ತಿದೆ. ಒಳ್ಳೆಯ ವಿದ್ಯೆ ಕಲಿತ ನೀವೇಕೆ ಹೋಗಿಲ್ಲ? ಪ್ರಶ್ನಿಸಿದೆ. “ನಗರಕ್ಕೆ ಹೋಗಿ ದುಡ್ಡು ಗಳಿಸುವದೇ ಬದುಕಲ್ಲ, ಇರುವ ಕೃಷಿ ಭೂಮಿ ಸುಧಾರಿಸುವಲ್ಲಿ ಸಿಗುವ ನೆಮ್ಮದಿ ಮತ್ತೆ ಏಲ್ಲಿಯೂ ಸಿಗಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನ್ನು ಸಲಹಿದ ಹಿರಿಯರ ಜತೆ ಬದುಕುವಲ್ಲಿ ನೆಮ್ಮದಿಯಿದೆ. ಕಾಲೇಜು ಕಲಿತು ಕೃಷಿ ನೋಡಿದಾಗ ಇಲ್ಲಿನ ಅಭಿವೃದ್ಧಿ ದಾರಿ ಹುಡುಕಲು ನೆರವಾಗುತ್ತದೆ’ ಎಂದರು.  ಸಹೋದರ ಪರಮೇಶ್ವರ ಹೆಗಡೆ ವಿಟ್ಲದಲ್ಲಿ ಹೈಸ್ಕೂಲ್ ಮಾಸ್ತರ್, ರಜೆಯಲ್ಲಿ ಅವರು ಊರಿಗೆ ಮರಳಿದರೆ ತೋಟಕ್ಕೆ ಗೊಬ್ಬರ ಹೊರುವದು ಹಾಗೂ ಇನ್ನಿತರ ಕೃಷಿ ಕೆಲಸಗಳಲ್ಲಿ ಇಬ್ಬರೂ ಭಾಗವಹಿಸುತ್ತಾರೆ. ಇದೇ ಊರಿನ ಲಿಂಗಪ್ಪ ಹೆಬ್ಬಾರ್ ಮನೆಯವರದು ಇಂತಹುದೇ ಕತೆ. ಮನೆಯ ಐವರು ಮಕ್ಕಳು ಬ್ಯಾಂಕ್, ಕಾಲೇಜು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದುಡಿಯುತ್ತಾರೆ. ರಜೆ ಆರಂಭವಾದರೆ  ಎಲ್ಲ ಸೇರಿ ತೋಟಕ್ಕೆ ಗೊಬ್ಬರ ಹೊರಲು ಅಣಿಯಾಗುತ್ತಾರೆ!  ಈಗ ಎಷ್ಟು ಕುಟುಂಬಗಳಲ್ಲಿ ಇಂತಹ ಪರಿಸ್ಥಿತಿ ಉಳಿದಿದೆ? ಗಮನಿಸಬೇಕು.

ಕಲಿತವರು ಕೆಲಸ ಮಾಡಬಾರದು ಎಂಬ ಮಾತನ್ನು ೭೦ ದಶಕಗಳಲ್ಲಿ ಹೇಳುತ್ತಿದ್ದರು. ಕೃಷಿ ಕೆಲಸ  ಆರಂಭಿಸಿದರೆ ಮಗ ಏಲ್ಲಿ ನೌಕರಿಗೆ ನಗರ ಸೇರದೆ ಹಳ್ಳಿಯಲ್ಲಿ ಬೇರುಬಿಡಬಹುದೆಂಬ ಭಯದಲ್ಲಿ ಮಾತಾಡುತ್ತಿದ್ದರು. ಸುಮಾರು ೧೯೭೫-೮೦ರ ಸಮಯದಲ್ಲಿ ಕಾಲೇಜು ಮೆಟ್ಟಿಲೇರಿದವರು ಕೃಷಿ ಕೆಲಸ ಮಾಡಿದರೆ  ಜನ ನಗುತ್ತಿದ್ದರು, ಟೀಕಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಓದಿದವರೆಲ್ಲ ನೌಕರಿ ಮಾಡುವದು ಎಂಬ ನಿರ್ಧಾರ  ಬಲಿಯಿತು. ಡಿಗ್ರಿ ಯಾವುದೇ  ಇರಲಿ, ಉನ್ನತ ನೌಕರಿಯಲ್ಲಿರಲಿ ಕೃಷಿ ಕೆಲಸ ಕೂಡಾ ಅಭ್ಯಾಸದಲ್ಲಿರಲಿ. ಇಲ್ಲಿ ಸಿಗುವ ಖುಷಿ ಮತ್ತೆಲ್ಲಿಯೂ ನಮಗೆ  ದೊರೆಯಲು ಸಾಧ್ಯವಿಲ್ಲ. ಆದರೆ ಇಂದು ಕಲಿತ ತಲೆಮಾರಿನ ವರ್ತನೆ ವಿಚಿತ್ರವಾಗಿದೆ. ಕೆಸರು ಗದ್ದೆಯಲ್ಲಿ ನಡೆಯುವದು, ದೊಡ್ಡಿಯ ಸಗಣಿ ತೆಗೆಯುವದು, ಭಾರ ಹೊರುವ ಕೆಲಸ ನೋಡುವದಕ್ಕೂ ಮುಜುಗರ ಪಡುತ್ತಾರೆ. ಹವಾನಿಯಂತ್ರಿಕ ಕೊಠಡಿಯಲ್ಲಿ ಕುಳಿತು ಕಚೇರಿ ಕೆಲಸ ನಿರ್ವಹಿಸುವ ಮಾತ್ರಕ್ಕೆ ಕೃಷಿ ಕುರಿತ ಭಾವನೆಗಳು ಏಕೆ ಬದಲಾಗಬೇಕು? ಅರ್ಥವಾಗುತ್ತಿಲ್ಲ. ನಿತ್ಯ ನಾವು ಉಣ್ಣುವದು ಕೃಷಿ ಮೂಲದ ಅನ್ನವನ್ನು ಎಂಬುದನ್ನು ಕೃಷಿಕ ಕುಟುಂಬದವರು ಮರೆಯುತ್ತಿರುವ ಕಾಲ ನಮ್ಮೆದುರಿದೆ!

ಹಳ್ಳಿಯದು ಮಣ್ಣಿನ ಒಡನಾಟದಲ್ಲಿ ಬದುಕು ನೇಯ್ದ ನೆಲ. ಇಲ್ಲಿನ ಹಸಿರು ಬದುಕು ಅನ್ನದ ಅರಿವು ಬಿತ್ತುವ ಪಾಠ ಶಾಲೆ. ಕಲ್ಲು, ಹುತ್ತ, ನೀರು, ಮರ, ಕೃಷಿ ಫಲಗಳೆಂದರೆ ಕೇವಲ ವಸ್ತು, ಉತ್ಪಾದನೆ, ಉತ್ಪನ್ನ, ಲಾಭ ಎಂದಷ್ಟೇ ಗಮನಿಸಬೇಕಾಗಿಲ್ಲ. ಇದು ಭೂಮಿಯನ್ನು  ಭಾವನಾತ್ಮಕವಾಗಿ ಬೆಸೆದ ಪೂಜ್ಯ ಸಂಸ್ಕೃತಿ. ಮನೆ ಎಂದರೆ ಚದರ ಅಡಿಯ ವಿಸ್ತೀರ್ಣವಲ್ಲ, ಹೊಲವೆಂದರೆ ಬೆಳೆ ತೆಗೆಯುವ ಕಾರ್ಖಾನೆಯಲ್ಲ, ಬೆಳೆ ರಕ್ಷಣೆಯೆಂದರೆ ಸೆಕ್ಯರಿಟಿ ಗಾರ್ಡ್‌ನ ಪ್ರಮೇಯವಲ್ಲ! ಲಾಗಾಯ್ತಿನಿಂದ ಊರಲ್ಲಿ ಬೇರು ಬಿಟ್ಟ ಹಿರಿಯರು ಹಳ್ಳಿ ಕಟ್ಟುವ ಮನಸ್ಸು ಜೋಡಿಸಿದವರು.  ಉತ್ಸವ, ಜಾನಪದ ಚಟುವಟಿಕೆಗಳ ಮುಖೇನ ಪರಸ್ಪರ ಹೃದಯ ಹೃದಯ ಜೋಡಿಸುವ ಕೆಲಸ ನಡೆಸಿದವರು. ಕೃಷಿ, ನಿಸರ್ಗ ಜ್ಞಾನಗಳನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತ  ಸಲಹಿದ ರೀತಿಯಲ್ಲಿ  ನಮ್ಮ ಅನನ್ಯತೆಯಿದೆ. ಶಾಲೆ ಶಿಕ್ಷಣದಲ್ಲಿ ಮೇಷ್ಟ್ರ ಪಾಠಕ್ಕೂ, ಹೆತ್ತವರ ಬದುಕಿಗೂ ಸೇತುವೆ ಕಟ್ಟುವದನ್ನು ಯಾರೂ ಗಮನಿಸಲಿಲ್ಲ. ಪ್ರತಿ ತರಗತಿಯೂ ಹಳ್ಳಿ, ಕೃಷಿ ವಿಶ್ವಾಸ ಭಂಗದ  ರಂಗಸ್ಥಳವಾದ ಪರಿಣಾಮ ಇಂದು ನಮ್ಮ ವರ್ತನೆಯಲ್ಲಿ ಢಾಳಾಗಿ ಕಾಣುತ್ತಿದೆ.

ವಿದ್ಯೆ ಗೆದ್ದು, ಹಣ ಗೆದ್ದು  ಮೇಲೆದ್ದ  ‘ಮಣ್ಣು ಮಾರಿ’ಗಳೆಲ್ಲ ಈಗಲೂ ಉಣ್ಣುವದು ಅನ್ನವನ್ನು!  ಊರು ನುಂಗಿ, ನೀರು ನುಂಗಿ ನಗರ ಸೇರಿದ ನಾವು ಇಂದಿಗೂ ಅನ್ನ ಕೊಡುವ ಹಳ್ಳಿ ನೋಡುತ್ತಿಲ್ಲ ಏಕೆ? ಬಳಸುವ ಕಾರು, ಕನ್ನಡಕ, ಪೆನ್ನು, ಕೆಮರಾಕ್ಕೆಲ್ಲ ಚೆಂದದ ಕಂಪನಿಗಳಿವೆ, ಅದು ಏಲ್ಲಿ ದೊರೆಯುತ್ತದೆಂಬ ವಿಳಾಸಗಳಿವೆ. ಮೊನ್ನೆ ಬಿಡುಗಡೆಯಾದ ಕಾರಿನ ವಿಶೇಷತೆಗಳ ಬಗೆಗೆ ತಾಸುಗಟ್ಟಲೆ ಮಾತಾಡುತ್ತೇವೆ. ಮಣ್ಣಿನ ಮನಸ್ಸು ಅರಿತು ಕೃಷಿ ಹಸಿರು ಬರೆದವರ ವಿಳಾಸ ನಮಗೆ ಗೊತ್ತಿಲ್ಲ! ಕೃಷಿಕರ ಮನೆ ಮಕ್ಕಳ ಊಟದ ತಾಟಿನಲ್ಲಿ ಪ್ರಶ್ನೆಗಳಿವೆ. ಖರೀದಿ ತಾಕತ್ತಿದೆ ಎಂದು ಹಣ ಹಿಡಿದು ಮಾರುಕಟ್ಟೆಯಲ್ಲಿ ಮೆರೆಯುವವರು ಬೇರು ಮೂಲಕ್ಕೂ ಕೊಂಚ ಗಮನಿಸಬೇಕು.  ಸಮಯ ಉಳಿಸಿಕೊಂಡು ಹಳ್ಳಿಯ ಕೃಷಿ ಕಸುಬುಗಳಲ್ಲಿ ಒಂದಾಗಬೇಕು.

ದೂರದ ನೌಕರಿಗಾಗಿ ನಗರ ವಲಸೆ ಹೋಗಿದ್ದರೂ ಅವಕಾಶ ಸಿಕ್ಕಾಗ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವ ಅಭ್ಯಾಸ ಒಳ್ಳೆಯದು. ಇದು ಮನಸ್ಥಿತಿ ಸುಧಾರಿಸಲು ನೆರವಾಗುತ್ತದೆ. ಹಳ್ಳಿವಾಸಿಗಳಾಗಿ ನಗರಗಳಲ್ಲಿ ಕೆಲಸ ನಿರ್ವಹಿಸುವ ಕೆಲವರು ಇಂದಿಗೂ ಮುಂಜಾನೆ ಕೃಷಿ ಕೆಲಸ ಮಾಡುವದನ್ನು ಗಮನಿಸಬಹುದು. ಇಂತಹ ಕ್ರಮ ವ್ಯಾಪಕವಾಗಬೇಕು. ಕೂಲಿ ಬರದಲ್ಲಿ ಹೀಗೆ ಕೃಷಿ ಕೆಲಸ ನಿಭಾಯಿಸುವದು ಕೃಷಿ ನಿರ್ವಹಣೆ  ಮಾರ್ಗದಲ್ಲಿ  ಅನುಕೂಲವಾಗುತ್ತದೆ. ಇದಕ್ಕಿಂತ ಮುಖ್ಯವಾಗಿ ಮಣ್ಣಿನ ಜತೆಗಿನ ಒಡನಾಟ ಉಳಿಸಿಕೊಂಡಂತಾಗುತ್ತದೆ. ಅನ್ನದ ಅರಿವು ಪಡೆಯುವ ಕೆಲಸ ಸಾಧ್ಯವಾಗುತ್ತದೆ.