ಮೃದಂಗ-ತಬಲಾ ವಾದಕರಾಗಿ ಸುಪ್ರಸಿದ್ಧರಾಗಿದ್ದ ತಂದೆ ಎ. ಅನಂತಸ್ವಾಮಿ, ತಾತ ಬಚ್ಚಣ್ಣ. ದೊಡ್ಡ ತಾತ ಸುಬ್ಬಣ್ಣ ಹೀಗೆ ಸಂಗೀತವು ತುಂಬಿದ್ದ ಮನೆಯಲ್ಲಿ ೧೫-೩-೧೯೪೪ ರಂದು ಜನಿಸಿದವರು ಕೃಷ್ಣಮೂರ್ತಿ. ಮೊದಲ ಗುರು ತಂದೆಯೇ. ನಂತರ ಎಂ.ಆರ್. ರಾಜಪ್ಪ ಎಂ.ಎಸ್‌. ಶೇಷಪ್ಪ ಮತ್ತು ಪಿ.ಜಿ. ಲಕ್ಷ್ಮೀನಾರಾಯಣ ಅವರುಗಳಲ್ಲಿ ಮೃದಂಗ ವಾದನದ ಮರ್ಮಗಳನ್ನು ಅಭ್ಯಸಿಸಿ ವಿದ್ವತ್‌ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದರು. ಘಟ, ತಬಲ, ಖಂಜಿರ, ಮೋರ್ಚಿಂಗ್‌ ವಾದ್ಯಗಳ ನುಡಿಸುವಿಕೆಯಲ್ಲಿ ಪರಿಣತಿ ಪಡೆದರು.

ನಗರದ ಎಲ್ಲಾ ಪ್ರಸಿದ್ಧ ಸಂಸ್ಥೆ-ಸಭೆಗಳಲ್ಲೂ, ನಾಡಿನ ಹೊರ ನಾಡುಗಳ ನಾನಾ ಕಡೆಗಳಲ್ಲೂ, ದೇಶದ ಹಲವಾರು ಜನಪ್ರಿಯ ರಾಷ್ಟ್ರೀಯ ಉತ್ಸವಗಳಲ್ಲೂ ಕ್ಷೇತ್ರದ ಹಿರಿಯ ಕಿರಿಯ ವಿದ್ವಾಂಸರುಗಳೆಲ್ಲರಿಗೂ ಸಮಯಾನುಸಾರವಾಗಿ ಮೃದಂಗ – ಘಟ ವಾದನಗಳ ಸಹಕಾರವಿತ್ತಿದ್ದಾರೆ. ಉತ್ತರಾದಿ ಪದ್ಧತಿಯ ವಿದ್ವಾಂಸರಿಗೂ ತಬಲ ವಾದನದಲ್ಲಿ ಸಾಥಿ ನೀಡಿದ್ದಾರೆ. ಬಹು ಮುಖ ಪ್ರತಿಭೆಯ ಈ ಕಲಾವಿದರು ರಷ್ಯಾ, ಪ್ಯಾರೀಸ್‌, ಜರ್ಮನಿ ಮುಂತಾದ ಹೊರ ದೇಶಗಳಲ್ಲಿ ಡಾ. ದೊರೆಸ್ವಾಮಿ ಅಯ್ಯಂಗಾರರೊಡನೆ ಪ್ರವಾಸ ಮಾಡಿದ್ದಾರೆ.

ಬೆಂಗಳೂರು ಆಕಾಶವಾಣಿ ನಿಲಯದ ಕಲಾವಿದರಾಗಿದ್ದು ಹಲವಾರು ಆಕಾಶವಾಣಿಯ ರಾಷ್ಟ್ರೀಯ ಪ್ರಸಾರಗಳಲ್ಲಿ ನಿಲಯದ ವಾದ್ಯವೃಂದದಲ್ಲಿ ನುಡಿಸಿದ್ದಾರೆ. ಆಕಾಶವಾಣಿ-ದೂರದರ್ಶನ ಮಾಧ್ಯಮಗಳಲ್ಲಿ ಇವರ ವಾದನ ಪ್ರಸಾರವಾಗುತ್ತಿರುತ್ತದೆ. ಈಗ ಸೇವೆಯಿಂದ ನಿವೃತ್ತಿ ಹೊಂದಿರುವ ಶ್ರೀಯುತರ ಶಿಷ್ಯರ ತಂಡವೂ ಹಿರಿದಾದುದು.

‘ತಾಳವಾದ್ಯ ಪ್ರವೀಣ’, ‘ತಾಳ ವಾದ್ಯ ಚತುರ’, ‘ಮೃದಂಗ ಕಲಾ ವಸಂತ’, ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ‘ಆಸ್ಥಾನ ವಿದ್ವಾಂಸ’ ರಾಗಿರುವ ಕೃಷ್ಣಮೂರ್ತಿಯವರು ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ಪಡೆದಿದ್ದಾರೆ.