ಜನನ : ೩-೧೧-೧೯೩೫ ರಂದು ಮಡಿಕೇರಿಯಲ್ಲಿ ಕೊಡಗು ಜಿಲ್ಲೆ

ಮನೆತನ : ಹೆಸರಾಂತ ಗಾಯಕರ – ಸಾಹಿತಿಗಳ ಮನೆತನ. ತಾತ ಎಂ. ಶೇಷಗಿರಿರಾವ್ ಗಾಯಕರು. ತಂದೆ ಹೆಸರಾಂತ ಗಮಕಿ – ಸಾಹಿತಿ – ಕವಿಗಳಾಗಿದ್ದ ಮೈ. ಶೇ. ಅನಂತಪದ್ಮನಾಭರಾಯರು, ತಾಯಿ ಲಕ್ಷ್ಮೀದೇವಿ, ಗಾಯಕಿ. ಕಿರಿಯ ಸಹೋದರ ದಿ|| ಮಡಿಕೇರಿ ನಾಗೇಂದ್ರ ಹೆಸರಾಂತ ಸುಗಮ ಸಂಗೀತ ಗಾಯಕ.

ಶಿಕ್ಷಣ ಗುರುಪರಂಪರೆ : ಗಮಕ ಶಿಕ್ಷಣದಲ್ಲಿ ತಂದೆಯೇ ಗುರುಗಳು. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಚಕ್ರಕೋಡಿ ನಾರಾಯಣಶಾಸ್ತ್ರಿ ಹಾಗೂ ವೈ. ಎನ್. ಶ್ರೀನಿವಾಸಮೂರ್ತಿಯವರಲ್ಲಿ ಅಭ್ಯಸಿಸಿ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ಪ್ರೌಢ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ. ಸಾಮಾನ್ಯ ವಿದ್ಯಾಭ್ಯಾಸ ಎಸ್.ಎಸ್.ಎಲ್. ಸಿ. ವೃತ್ತಿಯಲ್ಲಿ ಪತ್ರಕರ್ತ.

ಕ್ಷೇತ್ರ ಸಾಧನೆ : ಸುಮಾರು ೫೮ ವರ್ಷಗಳಿಂದ ಗಮಕ ವಾಚನ – ವ್ಯಾಖ್ಯಾನದ ಅನುಭವ. ೧೯೪೯ ರಲ್ಲಿ ಉಡುಪಿಯ ನಾಡಹಬ್ಬದ ಸಂದರ್ಭದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಪ್ರೊ|| ರಂ. ಶ್ರೀ. ಮುಗಳಿ, ವಿ|| ಮೋ. ಶಂ. ಸುಬ್ರಹ್ಮಣ್ಯ ಶಾಸ್ತ್ರಿಗಳ ಸಮ್ಮುಖದಲ್ಲಿ ಗಮಕ ವಾಚನದೊಂದಿಗೆ ಗಮಕ ರಂಗಪ್ರವೇಶ. ಅವರುಗಳಿಂದ ಪ್ರಶಂಸೆ. ಅಲ್ಲಿಂದ ಮುಂದೆ ಹಿಂದಿರುಗಿ ನೋಡದೆ ಗಮಕ ಕಲೆಯಲ್ಲಿ ಅವಿರತ ಸೇವೆ. ಮುಂಬೈ ಕನ್ನಡ ಸಂಘ, ಕರ್ನಾಟಕ ಸಂಘ, ಜೈಹಿಂದ್ ಕಾಲೇಜ್ ಕನ್ನಡ ಸಂಘ, ನಾಗಪುರ, ಭಿಲಾಯಿ, ಮುಂತಾದ ಕಡೆ ಗಮಕ ವಾಚನ ಹಾಗೂ ರಾಜ್ಯದಾದ್ಯಂತ ಸಹಸ್ರಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ವಾಚನ – ವ್ಯಾಖ್ಯಾನಗಳನ್ನು ಏಕ ರೀತಿಯಾಗಿ ನಡೆಸಿಕೊಂಡು ಹೋಗುವ ಸಾಧನೆ ಇವರದು. ಮುಂಬೈ, ಬೆಂಗಳೂರು, ಧಾರವಾಡ, ಭದ್ರಾವತಿ ಹಾಗೂ ಮಡಿಕೇರಿ ಆಕಾಶವಾಣಿ ಕೇಂದ್ರಗಳಿಂದ ಹಾಗೂ ಬೆಂಗಳೂರು ದೂರದರ್ಶನ ಕೇಂದ್ರದಿಂದ ವಾಚನ ಕಾರ್ಯಕ್ರಮಗಳು ಪ್ರಸಾರವಾಗಿವೆ, ಆಗುತ್ತಿವೆ. ಕಾವೇರಿ ಚಾನೆಲ್‌ನವರು ಇವರ ಕುರಿತು ಸಂದರ್ಶನ ಪ್ರಸಾರ ಮಾಡಿದ್ದಾರೆ. ಮುಂಬೈನಲ್ಲಿದ್ದಾಗ ಗಮಕ ಕಾರ್ಯಕ್ರಮ ಮಾತ್ರವಲ್ಲದೆ ಸುಗಮ ಸಂಗೀತ – ನಾಟಕ ಕ್ಷೇತ್ರಗಳಲ್ಲೂ ದುಡಿದಿದ್ದಾರೆ. ಬಿ. ಎಸ್. ರಾಮಾಚಾರ್ ಹಾಗೂ ದಿ|| ಹೆಚ್. ಕೆ. ರಂಗನಾಥ್ ಅವರ ಮಾರ್ಗದರ್ಶನದಲ್ಲಿ ಅನೇಕ ಕನ್ನಡ ಗೀತೆಗಳನ್ನು ಅಭ್ಯಸಿಸಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕೊಡಗು ಕರ್ನಾಟಕ ಸಂಘ, ಮುಂಬೈ ಕನ್ನಡ ಸಂಘ, ಅಹಮದಾಬಾದ್ ಕರ್ನಾಟಕ ಸಂಘದ ಕಾರ್ಯಕಾರೀಗ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ. ಕರ್ನಾಟಕ ಗಾನ ಕಲಾ ಪರಿಷತ್ತಿನ ನಿರ್ದೇಶಕ ಹಾಗೂ ತಜ್ಞರ ಸಮಿತಿ ಸದಸ್ಯರಾಗಿ ಅದು ಹೊರತರುತ್ತಿರುವ ’ಗಾನ ಕಲಾಂ ಸಿರಿ’ ಪತ್ರಿಕೆಯ ಸಂಪಾದಕರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೨೦೦೧-೨೦೦೩ರ ಸಾಲಿನ ಸದಸ್ಯರಾಗಿ ’ನಾದ ನೃತ್ಯ’ ತ್ರೈಮಾಸಿಕದ ಸಂಪಾದಕರಾಗಿ ಸೇವೆ. ತಿರುಪತಿ ದಾಸ ಸಾಹಿತ್ಯ ಯೋಜನೆಯ ಸಲಹಾ ಮಂಡಳಿ ಸದಸ್ಯರು. ಆಕಾಶವಾಣಿ ಸ್ಥಳೀಯ ಆಡಿಶನ್ ಬೋರ್ಡ್‌‌ನ ಸದಸ್ಯತ್ವ ಹೀಗೆ ಬಹುಮುಖ ಪ್ರತಿಭೆಯ ಕಲಾವಿದರಾಗಿರುವ ಜಯರಾಮ್ ರಾವ್ ಅವರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹೊರತಂದಿರುವ ’ಗಮಕ ದಿಗ್ಗಜರು’ ಕಥಾ ಕೀರ್ತನಕಾರರು (ಎರಡು ಆವೃತ್ತಿ) ’ಹಿಂದುಸ್ತಾನಿ ಕಲಾವಿದರು’ ಗ್ರಂಥಗಳನ್ನು ಸಂಪಾದಿಸಿರುವುದೇ ಅಲ್ಲದೆ ಇತ್ತೀಚೆಗೆ ಪ್ರಕಟಿಸಿದ ’ಕಲಾ ಚೇತನ’ ಬೃಹದ್ಗ್ರಂಥದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅನೇಕ ದೈನಿಕ, ನಿಯತಕಾಲಿಕ ಪತ್ರಿಕೆಗಳಲ್ಲಿ ವ್ಯಕ್ತಿ ಚಿತ್ರ. ಸಂದರ್ಶನ, ವಿಮರ್ಶಕ ಲೇಖನಗಳು ಪ್ರಕಟಗೊಂಡಿವೆ. ಕರ್ನಾಟಕ ಗಮಕ ಕಲಾ ಪರಿಷತ್ತು, ಸಂಗೀತ ನೃತ್ಯ ಅಕಾಡೆಮಿ, ಕೀರ್ತನ ಕಲಾ ಪರಿಷತ್ತಿನ ವತಿಯಿಂದ ಅನೇಕ ಶಿಕ್ಷಣ ಶಿಬಿರಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾರ್ಗದರ್ಶನ ನೀಡಿದ್ದಾರೆ. ’ಗಮಕ ಸಂಪದ’ ಮಾಸಪತ್ರಿಕೆಯಲ್ಲಿ ಗಮಕಿಗಳ ಪರಿಚಯ ಲೇಖನ ಮೂಡಿಬರುತ್ತಿವೆ.

ಪ್ರಶಸ್ತಿ – ಪುರಸ್ಕಾರಗಳು : ಇವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಅವುಗಳಲ್ಲಿ ಗಮಕ ಕಲಾಕೇಸರಿ, ಗಮಕ ಕಲಾ ವಿದ್ವನ್ಮಣಿ, ಗಮಕ ಕಲಾಸಿಂಧು, ಗಮಕ ವಾಚನ – ವ್ಯಾಖ್ಯಾನ ದುರಂಧರ, ವಿಶ್ವ ವಿಠಲ ಸೇವಾ ಪ್ರಶಸ್ತಿ, ನಾದ ಚಿಂತಾಮಣಿ, ’ಕಲಾ ಜ್ಯೋತಿ’ ಪ್ರಮುಖವಾದುವು. ಇದಲ್ಲದೆ ೧೯೯೫ – ೧೯೯೬ ರ ಸಾಲಿನ ಕರ್ನಾಟಕ ’ಕಲಾಶ್ರೀ ಪ್ರಶಸ್ತಿ’ ಸಂಗೀತ ನೃತ್ಯ ಅಕಾಡೆಮಿಯಿಂದ ದೊರೆತಿದೆ. ಕರ್ನಾಟಕ ಗಾನ ಕಲಾ ಪರಿಷತ್ತಿನ ೩೦ ನೇ ಸಮ್ಮೇಳನದಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ.

ತಮ್ಮ ೭೪ರ ಹರೆಯದಲ್ಲೂ ಕುಂದದ ಉತ್ಸಾಹ, ವಾಚನ – ವ್ಯಾಖ್ಯಾನಗಳೆರಡನ್ನು ಒಬ್ಬರೇ ನಿರ್ವಹಿಸುತ್ತಾ ಇಂದಿಗೂ ಕಾರ್ಯಕ್ರಮ ನೀಡುತ್ತಿದ್ದಾರೆ.