ಕೃಷ್ಣಸ್ವಾಮಿ ಅಯ್ಯಂಗಾರ್- ರಾಜಮ್ಮ ದಂಪತಿಗಳ ಸುಪುತ್ರರಾಗಿ ೧೨-೮-೧೯೨೪ ರಲ್ಲಿ ಜನಿಸಿದವರು ನರಸಿಂಹಾಚಾರ್. ಬಾಲ್ಯ ಪಾಠಗಳನ್ನು ತಾಯಿ ರಾಜಮ್ಮನವರಿಂದ ಪಡೆದು , ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಟೈಗರ್ ವರದಾಚಾರ್, ತಂಜಾವೂರು ಪೊನ್ನಯ್ಯಪಿಳ್ಳೆ ಸಭೇಶ ಐಯ್ಯರ್, ಸಾತ್ತೂರು ಕೃಷ್ಣ ಅಯ್ಯಂಗಾರ್, ಟಿ.ಕೆ. ರಂಗಾಚಾರಿ ಇವರುಗಳ ಮಾರ್ಗದರ್ಶನ ಪಡೆದು ಗಾಯನದಲ್ಲಿ ಪ್ರಬುದ್ಧತೆ, ಪಾಂಡಿತ್ಯಗಳನ್ನು ಗಳಿಸಿದರು. ‘ಸಂಗೀತ ಭೂಷಣ’ ಪದವಿಯನ್ನೂ ಪಡೆದರು. ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪಾಶ್ಚಿಮಾತ್ಯ ಸಂಗೀತ ಪದ್ಧತಿಯಲ್ಲೂ ಪರಿಣತರಾದರು. ಶಾಸ್ತ್ರಜ್ಞಾನದಲ್ಲೂ ಪಂಡಿತರಾಗಿದ್ದ ಶ್ರೀಯುತರು ಸಂಶೋಧನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಮೊದಲು ಮೈಸೂರಿನಲ್ಲಿ ನಂತರ ಬೆಂಗಳೂರಿನಲ್ಲಿ ವಾಸಿಸುತ್ತ ‘ಗಾನ ಕಲಾ ಮಂದಿರಂ’ ಎಂಬ ಶಾಲೆಯನ್ನು ಸ್ಥಾಪಿಸಿ ಅನೇಕಾನೇಕ ಶಿಷ್ಯರಿಗೆ ತರಬೇತಿ ನೀಡಿದರು. ಆಕಾಶವಾಣಿಯಿಂದ ಇವರ ಗಾಯನ ಪ್ರಸಾರವಾಗುತ್ತಿತ್ತು. ಎರಡು ಬಾರಿ ಶ್ರೀಲಂಕಾಗೆ ತೆರಳಿ ವಿಶೇಷ ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯತೆ ಗಳಿಸಿದ್ದು ಇವರ ವೈಶಿಷ್ಟ್ಯ ಸಮ್ಮೇಳನಗಳಲ್ಲಿ ಉಪನ್ಯಾಸ ನೀಡುವುದು, ಲೇಖನಗಳನ್ನು ಬರೆಯುವುದು, ಹೊಸ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸ್ತುತ ಪಡಿಸುವದು ಇವರಿಗೆ ಹೆಚ್ಚಿನ ಸಂತಸ ನೀಡುತ್ತಿದ್ದವು.

ಗುರುಕಾಲ ಪದ್ಧತಿಯಲ್ಲಿ ಶಿಕ್ಷಣ ನೀಡುವ ಸದಾವಕಾಶ ಶ್ರೀಯುತರಿಗೆ ತಿರುವಯ್ಯಾರಿನಲ್ಲಿ ಮೂರು ತಿಂಗಳುಗಳ ಮಟ್ಟಿಗೆ ದೊರಕಿತ್ತು. ಇವರ ಸಾಧನೆಗೆ ‘ಗಾನ ಕಲಾ ಭೂಷಣ’, ‘ಕರ್ನಾಟಕ ಕಲಾ ತಿಲಕ’, ‘ಗಾಂಧರ್ವ ವಿದ್ಯಾನಿಧಿ’ ಮುಂತಾದ ಗೌರವಗಳು ದೊರಕಿದ್ದುವು. ಇದಕ್ಕೆ ಕಲಶವಿಟ್ಟಂತೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರವನ್ನು ಸ್ವೀಕರಿಸಿದ್ದ ಶ್ರೀ ನರಸಿಂಹಾಚಾರ್ ಅವರು ೭-೭-೨೦೦೪ ರಂದು ನಾದ ದೇವತೆಯ ಅಡಿದಾವರೆಗಳನ್ನು ಸೇರಿದರು.