ಮೈಸೂರಿನ ಅಣ್ಣಾದೊರೈ ವಂಶದಲ್ಲಿ ದಿನಾಂಕ ೧೨.೮.೧೯೨೪ ರಂದು ಎಂ.ಎ..ಕೃಷ್ಣಸ್ವಾಮಿ ಐಯ್ಯಂಗಾರ್ಯರ ಮೊದಲ ಗಂಡು ಮಗುವಾಗಿ ಹುಟ್ಟಿದ ಶ್ಯಾಮ ಸುಂದರ, ಇವರು ಶ್ಯಾಮಲ ವರ್ಣದವರೇ ಆಗಿದ್ದು ತಿದ್ದಿದ ಮೂಗು, ಉದ್ದನೆಯ ಮುಖ, ಕಪ್ಪನೆಯ ದಟ್ಟ ಕೂದಲು ಇವರನ್ನು ಸುಂದರ ಎನ್ನುವ ಗುಂಪಿಗೆಕ ಸೇರಿಸಿತ್ತು. ವಂಶದ ಕೀರ್ತಿಯನ್ನು ಬೆಳಗುವ ಮೊದಲ ಮಗನನ್ನು ಕಂಡರೆ ಎಲ್ಲರಿಗೂ ಅಕ್ಕರೆ.

ಆಟ – ಪಾಠ: ಎಲ್ಲರ ಕಣ್ಮಣಿಯಾಗಿ ಬೆಳೆದ ಇವರು ಬೇರೆ ಹುಡುಗರಂತಲ್ಲದೆ ಆಟ ಪಾಠಗಳೆರಡರಲ್ಲೂ ಎತ್ತಿದ ಕೈ. ತೆಳ್ಳಗೆ, ಉದ್ದನೆಯ ಮೈಕಟ್ಟು ಹೊಂದಿದ್ದರೂ ಚೇಷ್ಟೆಗೇನೂ ಕಡಿಮೆ ಇಲ್ಲ. ಕ್ರಿಕೆಟ್ಟನಲ್ಲಂತೂ ಬಹಳ ಆಸಕ್ತಿ ಮತ್ತು ಆಗಿನ ಕಾಲದಲ್ಲಿಯೇ ಇವರು ಕ್ರಿಕೆಟ್‌ ಪಟು! ಹೀಗೆ ಇವರು ಆಟ ಪಾಠಗಳಲ್ಲಿ ಬಹಳ ಆಸಕ್ತಿ ವಹಿಸಿ ಮುಂದೆ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಮುಗಿಸಿದರು.

ಇವರ ತಂದೆ ಕೃಷ್ಣಸ್ವಾಮಿ ಐಯ್ಯಂಗಾರ್ಯರು ಹಾಗೂ ತಾಯಿ ರಾಜಮ್ಮ ಬಹಳ ಸಂಪ್ರದಾಯಸ್ಥರು, ದೈವ ಭಕ್ತರು. ಸಂಗೀತದಲ್ಲಿ ಬಹಳ ಆಸಕ್ತಿ. ಆಗಿನ ಕಾಲದಲ್ಲಿ ಇವರ ತಾಯಿ ಗುರುಮುಖೇನ ಸಂಗೀತ ಕಲಿಯದಿದ್ದರೂ ಸುಶ್ರಾವ್ಯವಾಗಿ ಕೀರ್ತನೆಗಳನ್ನು, ಸಂಪ್ರದಾಯದ ಹಾಡುಗಳನ್ನು ಹಾಡುತ್ತಿದ್ದರು. ಇವರ ತಂದೆ, ಬಿಡಾರಂ ಕೃಷ್ಣಪ್ಪನವರ ರಾಮಮಂದಿರಕ್ಕೆಕ ಸತತವಾಗಿ ಕಚೇರಿ ಕೇಳಲು ಹೋಗುತ್ತಿದ್ದುದರಿಂದ ತಮಿಳುನಾಡಿನ ಹಿರಿಯ ಸಂಗೀತಗಾರರ ಪರಿಚಯ ಸಾಕಷ್ಟು ಇವರಿಗಿತ್ತು. ಆಗಲೇ ತನ್ನ ಮಗನನ್ನು ಅಣ್ಣಾಮಲೈ ಯೂನಿವರ್ಸಿಟಿಗೆ ಸೇರಿಸಬೇಕೆಂಬ ಆಸೆ ಇವರಿಗೆ ಹುಟ್ಟಿತು. ಹಲವಾರು ಹಿರಿಯರು ಇದಕ್ಕೆ ವಿರೋಧಕ ವ್ಯಕ್ತಪಡಿಸಿದರು. ಅದಕ್ಕೆ ಕಾರಣ ಸಂಗೀತಗಾರ ಹಾಗೂ ನಾಟಕಕಾರನಿಗೆ ಬಹಳ ಹಣಗಳಿಸಲಾಗದು ಎಂಬ ನಂಬಿಕೆ ಹಾಗೂ

ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಲಾರರೆಂಬ ಶಂಕೆ. ಆದರೂ ಇವರ ತಂದೆಯವರು ತನ್ನ ಮಗ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಬೇಕೆಂಬ ಹಂಬಲವನ್ನು ಹೊಂದಿ ಅವರನ್ನು ಅಲ್ಲಿಗೆ ಕಳುಹಿಸಲು ಸಿದ್ಧತೆಗಳನ್ನು ಮಾಡಿಕೊಂಡರು.

ಇವರ ಅಕ್ಕ ತಿರುವೇಂಗಡಮ್ಮನವರು ಆಗ ಚೌಡಯ್ಯನವರ ತಮ್ಮಂದಿರಾದ ಟಿ. ಪುಟ್ಟಸ್ವಾಮಯ್ಯನವರಿಂದ ಸಂಗೀತ ಕಲಿಯುತ್ತಿದ್ದರು. ಅಕ್ಕನವರ ಯಜಮಾನರಾದ ಕೆ. ನರಸಿಂಹಾಚಾರ್ಯರೂ ಹೆಂಡತಿಯೊಂದಿಗೆ ಇದೇ ಗುರುಗಳ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದರು. ನಂತರ ಪಿಟೀಲು ವಾದನ ಕಲಿತರು. ಎಂ.ಎ.ಎನ್‌ ರವರಿಗೆ ಅಕ್ಕ ಮತ್ತು ಭಾವನವರೇ ಸಂಗೀತ ಕಲಿಸಿದ ಮೊದಲ ಗುರುಗಳು.

ಕಾಲೇಜಿನಲ್ಲಿ ಸಂಗೀತ: ತಂದೆ ಅಣ್ಣಾಮಲೈ ಯೀನಿವರ್ಸಿಟಿಗೆ ಸೇರಿಸಲು ಕರೆದುಕೊಂಡು ಹೋದಾಗ ಮೊದಲು ಕೆಲವು ಪರೀಕ್ಷೆಗಳಿಗೆ ಇವರನ್ನು ಒಳಪಡಿಸಿದರು. ಅದರಲ್ಲಿ ಮೆಡಿಕಲ್‌ ಟೆಸ್ಟ್‌ ಒಂದು. ಮೊದಲೇ ಹೇಳಿದ ಹಾಗೆ ತೆಳ್ಳಗಿದ್ದ ಇವರನ್ನು ಪರೀಕ್ಷಿಸಿದ ಡಾಕ್ಟರ್ ಇವರಿಗೆ ಪಿಜನ್‌ ಚೆಸ್ಟ್‌  ಇರುವುದಾಗಿ ತಿಳಿಸಿ ಇವರು ಹಾಡಲು ಸಾಧ್ಯವಿದೆಯೇ, ಹಾಗೆ ಹಾಡಿದರೂ ಕಷ್ಟಪಡಬೇಕಾಗುತ್ತದೆ ಎಂದು ತಿಳಿಸಿಬಿಟ್ಟರು. ಇದನ್ನು ಕೇಳಿದ  ಎಂ.ಎ.ಎನ್‌ರವರು ಮನ ನೊಂದರೂ, ಸಾಧಿಸಿ ತೋರಿಸಬೇಕೆಂಬ ಛಲದಿಂದ, ಅಡ್ಮಿಷನ್‌ ಟೆಸ್ಟ್‌ನಲ್ಲಿ ಇವರ ಭಾವನವರೇ ಹೇಳಿಕೊಟ್ಟಂತಹ ತೋಡಿ ರಾಗದ ಏರಾನಾಪೈ ವರ್ಣ ಹಾಗೂ ಕಾಮವರ್ಧಿನಿ ರಾಗದ ವಾಡೇರಾ ದೈವಮು ಮನಸಾ ಎಂಬ ತ್ಯಾಗರಾಜನರ ಕೀರ್ತನೆಯನ್ನು ಅಮೋಘವಾಗಿ ಹಾಡಿ ಪರೀಕ್ಷಕರ ಮನಗೆದ್ದು ಅಲ್ಲಿ ಸೀಟನ್ನು ಗಿಟ್ಟಿಸಿಯೇಬಿಟ್ಟರು.

ಮೊದಮೊದಲು ಎಂ.ಎ.ಎನ್‌. ರವರು ಮೈಸೂರಿನವರೆಂದು ಅಲ್ಲಿದ್ದವರೆಲ್ಲಾ ಇವರನ್ನು ತಾತ್ಸಾರದಿಂದ ಕಂಡರೂ ಇವರಿಗೆ ಸಂಗೀತ ಕಲಿಯಲು ಇದ್ದ ಆಸಕ್ತಿಯನ್ನು ಕಂಡು ಇವರ ಗುರುಗಳಾದ ಸಭೇಷಯ್ಯರ್ ರವರು ಬಹಳ ಸಂತೋಷಪಟ್ಟು ಪ್ರೋತ್ಸಾಹ ನೀಡಿದರು. ಚಿದಂಬರಂನ ಅಣ್ಮಾಮಲೈ ಯೂನಿವರ್ಸಿಟಿ ಸೇರಿದ ಹೊಸದರಲ್ಲಿ ಇವರಿಗೆ ಒಳ್ಳೆಯ ತಮಿಳು ಮಾತನಾಡಲು ಬರುತ್ತಿರಲಿಲ್ಲ ಬುಗುರಿ, ದಾಋ, ಎತ್ತಿನ ಗಾಡಿ ಎಂಬ ಕನ್ನಡ ಪದಗಳನ್ನು ಕೇಳಿ ಅಲ್ಲಿಯ ತಮಿಳು ಸ್ನೇಹಿತರು ಇವರನ್ನು ಹಾಸ್ಯ ಮಾಡಿದ್ದುಂಟು. ಆದರೂ ಇವರ ತಮಿಳು ಭಾಷೆಯನ್ನು ಓದಲು ಬರೆಯಲು ಕಲಿತು ತಮಿಳಿನಲ್ಲಿಯೇ ಸಂಗೀತ ಶಾಸ್ತ್ರದ ಪ್ರಶ್ನೆಪತ್ರಿಕೆಯನ್ನು ಉತ್ತರಿಸಿ ೫೦ ಅಂಕಗಳಿಗೆ ೪೦ ಅಂಕಗಳನ್ನು ಗಳಿಸಿದರು. ಕೆಲವೇ ದಿನಗಳಲ್ಲಿ ಇಷ್ಟೆಲ್ಲಾ ಸಾಧಿಸಿ ತೋಋಇಸಿದ ಇವರ ಛಲ ಪ್ರಶಂಸನೀಯ.

ಅಣ್ಣಾಮಲೈನಲ್ಲಿ ಓದುತ್ತಿದ್ದಾಗ ದಿನಾ ಬೆಳಿಗ್ಗೆ ೫ ಗಂಟೆಗೆ ಬಂದು ಟೈಗರ್ ವರದಾಚಾರ್ಯರು ಶಿಷ್ಯರನ್ನೆಲ್ಲಾ ಎಬ್ಬಿಸಿ ಅಕಾರ ಸಾಧಕ ಮಾಡಿಸುತ್ತಿದ್ದರು. ಎಂ.ಎ.ಎನ್‌. ರವರು ದಿನಾ ರಾತ್ರಿ ಊಟವಾದ ನಂತರ ಕೆ.ಎಸ್‌. ನಾರಾಯಣ ಸ್ವಾಮಿಯವರ ಮನೆಗೆ ಹೋಗಿ ಭಯ ಭಕ್ತಿಗಳಿಂದ ಕುಳಿತು ಅವರು ವೀಣೆ ನುಡಿಸುವುದನ್ನು ಕೇಳುತ್ತಿದ್ದರು. ಇದರ ಫಲವಾಗಿ ಅವರಿಗೆ ಗಮಕಗಳ ಪರಿಚಯವಾಯಿತು. ಹಾಗೂ ಅದನ್ನು ತಮ್ಮ ಹಾಡುಗಾರಿಕೆಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಯಿತು.

ಅಣ್ಣಾಮಲೈ ಯೂನಿವರ್ಸಿಟಿ ಸೇರಿದ ಮೂರು ವರ್ಷಗಳ ನಂತರ ಇವರಿಗೆ ಗುರುಗಳಾಗಿ ಶ್ರೀ ಟಿ.ಕೆ. ರಂಗಾಚಾರಿಯವರು ಹಾಗೂ ವೀಣೆ ಹೇಳಿಕೊಡಲು ಕೆ.ಎಸ್‌. ನಾರಾಯಣಸ್ವಾಮಿ ಬಂದರು. ಇವರಿಬ್ಬರೂ ಸಂಗೀತ  ಭಾಷಣ ಗಳಿಸಿದ ಮೊದಲ ತಂಡದ ವಿದ್ಯಾರ್ಥಿಗಳು. ಅವರಿಗೆ ಅಲ್ಲಿಯೇ ಶಿಕ್ಷಕರಾಗಿ ಕೆಲಸ ಸಿಕ್ಕಿದ್ದು ಬಹಳ ಹೆಮ್ಮೆಯ ವಿಷಯ.

ಟೈಗರ್ ವರದಾಚಾರ್ಯರಿಗೆ ಎಂ.ಎ.ಎನ್‌ ರವರನ್ನು ಕಂಡರೆ ಬಹಳ ಪ್ರೀತಿ. ಒಮ್ಮೆ ಇವರು ತಮಗಿದ್ದ ಕ್ರಿಕೆಟ್‌ ಹುಚ್ಚಿನಿಂದ ಆಡಲು ಹೋದಾಗ ಮೂಗಿನ ಮೇಲೆ ಏಟು ಬಿದ್ದು ರಕ್ತ ಬಂತಂತೆ. ಮಾರನೆಯ ದಿನ ತರಗತಿಗೆ ಬ್ಯಾಂಡೇಜ್‌ ಧರಿಸಿ ಬಂದ ಇವರನ್ನು ಕಂಡ ಟೈಗರ್ ರವರು ಇನ್ನು ಮುಂದೆ ಕ್ರಿಕೆಟ್‌ ಆಡಬಾರದೆಂದು ಆಜ್ಞಾಪಿಸಿದರು.

ವರ್ಷದ ಕೊನೆಯಲ್ಲಿ ಎಂ.ಎ.ಎನ್‌. ರವರು ಪರೀಕ್ಷೆ ಎದುರಿಸಬೇಕಾಯಿತು. ಇವರಿಗೆ ಪರೀಕ್ಷಕರಾಗಿ ಬಂದವರು ಸಂಗೀತ ಕ್ಷೇತ್ರದಲ್ಲಿ ಹೆಸರಾಂತ ಕಲಾವಿದರಾದ ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಟೈಗರ್ ವರದಾಚಾರ್ಯರು ಹಾಗೂ ಟಿ.ವಿ. ಸುಬ್ಬರಾವ್‌ ಅವರು ವೇಡುಕ ಚೆಲಿಯ ಕೊಲುವೈ ಯುನ್ನಾಡೆ ಎಂಬ ಆದಿತಾಳ, ಮಧ್ಯಮ ಕಾಲದ, ಅತೀತದಲ್ಲಿ ಪ್ರಾರಂಭವಾಗುವ ಸಾವೇರಿರಾಗದ ಪಲ್ಲವಿಯನ್ನು ಮುಸುರಿಯವರು ಒಮ್ಮೆ ಹಾಡಿ ತೋರಿಸಿ ಇವರನ್ನು ಹಾಡಲು ಹೇಳಿ, ವೇಡುಕ ಚೆಲಿಯ ಹಾಗೂ ಕೊಲುವೈ ಜಾಗಗಳಲ್ಲಿ ಸ್ವರ ಕಲ್ಪನೆ ಮಾಡಲು ಹೇಳಿದರು. ಪೂರ್ವ ಸಿದ್ಧತೆ ಇಲ್ಲದೆಯೆ ಒಂದೇ ಬಾರಿ ಹೇಳಿ ಹಾಡುವುದು ಬಹಳ ಕಠಿಣ. ಎಂ.ಎ.ಎನ್‌. ರವರು ಈ ಪಲ್ಲವಿಯನ್ನು ಬಹಳ ಚೆನ್ನಾಗಿ ಹಾಡಿದಾಗ ಎಲ್ಲರೂ ಇವರನ್ನು ಪ್ರಶಂಸಿಸಿದರು. ಟೈಗರ್ ರವರಂತೂ ಬಹಳ ಸಂತೋಷಗೊಂಡು “ಭಲೆ ನಚ್ಚು, ನೀನು ಅಸಾಧ್ಯ ಕಣಯ್ಯ” ಎಂದು ಹೊಗಳಿದರು.

ಶೆನ್ನೈ ಅಡೆಯಾರ್ ಕಲಾಕ್ಷೇತ್ರದಲ್ಲಿ ಸಂಗೀತ ವಿಭಾಗಕ್ಕೆ ಟೈಗರ್ ವರದಾಚಾರ್ಯರು ಪ್ರಾಂಶುಪಾಲರಾಗಿದ್ದರು. ಶ್ರೀಮತಿ ರುಕ್ಮಿಣಿ ಅರುಂಡೇಲ್‌ ಅಧ್ಯಾಪಕರಾಗಿದ್ದ ಕಾಲ. ಟೈಗರ್ ರವರು ಎಂ.ಎ.ಎನ್‌ರವರ ತಂದೆಯವರಿಗೆ ಪತ್ರ ಬರೆದು ಇವನ್ನು ಚೆನ್ನೈಗೆ ಕಳುಹಿಸಿಕೊಡಬೇಕೆಂದೂ, ತಮ್ಮ ಮಗನ ಹಾಗೆ ನೋಡಿಕೊಳ್ಳುವುದಾಗಿಯೂ ತಿಳಿಸಿದರು. ಮದ್ರಾಸ್‌ನಲ್ಲಿ ಸಂಗೀತಕ್ಕೆ ಹೆಚ್ಚು ಪ್ರೋತ್ಸಾಹವಿದೆ, ತನ್ನ ಶಿಷ್ಯ ಸಂಗೀತ ಕ್ಷೇತ್ರದಲ್ಲಿ ಮುಂದುವರೆಯಲು ಬಹಳ ಅವಕಾಶವಿದೆ ಎಂದು ತಿಳಿಸಿದರೂ ಎಂ.ಎ.ಎನ್‌. ತಂದೆಯವರು ಇವರನ್ನು ಕಳುಹಿಸಲು ಒಪ್ಪಲಿಲ್ಲ. ಇಷ್ಟು ವರ್ಷ ಮಗನನ್ನು ಬಿಟ್ಟದ್ದು ಸಾಕು ಹಾಗೂ ಇನ್ನೂ ಮದುವೆಯಾಗಿಲ್ಲ ಹೇಗೆ ಕಳುಹಿಸುವುದು ಎಂದು ಹಿಂದೇಟು ಹಾಕಿದರು.

ಸಂಗೀತ ಶಾಲೆ: ಎಂ.ಎ.ಎನ್‌.ರವರು ಮೈಸೂರಿನಲ್ಲಿ ಗಾನಕಲಾಮಂದಿರ ಎಂಬ ಸಂಗೀತಶಾಲೆಯನ್ನು ಪ್ರಾರಂಭಿಸಿ ಅನೇಕ ಶಿಷ್ಯರಿಗೆ ತರಬೇತಿ ನೀಡಿದ್ದಾರೆ. ಈ ಗಾನ ಕಲಾಮಂದಿರವೆಂದರೆ ಮದ್ರಾಸ್‌ನಿಂದ ಬರುವ ಹಿರಿಯ ಸಂಗೀತ ವಿದ್ವಾಂಸರಿಗೆ ಬಹಳ ಸಲಿಗೆ. ಅಲ್ಲಿಯೇ ಇಳಿದುಕೊಂಡು, ಇವರ ಮನೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದ (ಇವರ ಮನೆಯಲ್ಲಿ ಪ್ರತಿ ಶನಿವಾರ ಭಜನೆಯನ್ನು ಏರ್ಪಡಿಸುತ್ತಿದ್ದರು) ಗೋಕುಲಾಷ್ಟಮಿ, ನವರಾತ್ರಿ ಸಂದರ್ಭಗಳಲ್ಲಿ ಕಚೇರಿ ನಡೆಸಿಕೊಡುತ್ತಿದ್ದರು.

ವಾಸುದೇವಾಚಾರ್ಯರು, ಟೈಗರ್ ವರದಾಚಾರ್ಯರು, ರಾಧಾ ಜಯಲಕ್ಷ್ಮಿ, ಸಾವಿತ್ರಿ ಗಣೇಶನ್‌, ಅನಂತಲಕ್ಷ್ಮಿ ಷಡಗೋಪನ್‌, ಗೌರಿ ಕುಪ್ಪುಸ್ವಾಮಿಯವರು ಹಲವಾರು ಸಂದರ್ಭಗಳಲ್ಲಿ ಈ ಗಾನಕಲಾ ಮಂದಿರದಲ್ಲಿ ಕಚೇರಿ ನಡೆಸಿಕೊಟ್ಟಿದ್ದಾರೆ. ನರಸಿಂಹಾಚಾರ್ಯರು ಮೈಸೂರನ್ನು ಬಿಟ್ಟು ಬೆಂಗಳೂರಿಗೆ ಬಂದ ಮೇಲೆ ಗಾನ ಕಲಾಮಂದಿರ ಇಲ್ಲೇ ವ್ಯವಸ್ಥಿತವಾಯಿತು. ಜೊತೆಗೆ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ೧೯೭೨ರಿಂದ ೧೯೮೦ರಲ್ಲಿ ನಿವೃತ್ತರಾಗುವವರೆಗೂ ಸೇವೆ ಸಲ್ಲಿಸಿದ್ದರು.

ಸಂಗೀತ ಕೈಂಕರ್ಯ: ಟೈಗರ್ ರವರ ಪ್ರೋತ್ಸಾಹದಿಂದ ೧೯೪೧ರಲ್ಲಿ ಎ.ಐ.ಆರ್.ನಲ್ಲಿ ಆಡಿಷನ್‌ ಆದನಂತರ ಇವರಿಗೆ ರೇಡಿಯೊದಲ್ಲಿ ಹಾಡುವ ಅವಕಾಶ ದೊರೆಯಿತು. ಎಂ.ಎ.ಎನ್‌.ರವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸಂಗೀತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಇಂಡಿಯನ್‌ ಫಿಲಾಸಪಿಕಲೇ ಕಾಂಗ್ರೆಸ್‌ ಪ್ರತಿ ವರ್ಷ ನಡೆಸುವ ಕಾನಫರೆನ್ಸ್‌ಗೆ ಇವರನ್ನು ಡೆಲಿಗೇಟ್‌ ಆಗಿ ಆರಿಸಿ ಕಾಲೇಜಿನ ಮೂಲಕ ಶ್ರೀಲಂಕಾಕ್ಕೆ ಹೋಗುವ ಅವಕಾಶ ದೊರೆಯಿತು. ೧೯೫೪ರಲ್ಲಿ ಶ್ರೀಲಂಕಾದ ಕ್ಯಾಂಡಿಯಲ್ಲಿ ಮೂರು ದಿನಗಳ ಕಾಲ ಇದ್ದು ಶ್ರೀಲಂಕಾ ವಿಶ್ವವಿದ್ಯಾಲಯದ ಆತಿಥ್ಯವನ್ನು ಸ್ವೀಕರಿಸಿ ಹಲವಾರು ಕಚೇರಿಯನ್ನು ಮಾಡಿದರು. ರೇಡಿಯೋ ಸಿಲೋನಿನಲ್ಲಿ ಕರ್ನಾಟಕ ಸಂಗೀತ ಹಾಡಿ ಬಹಳ ಮೆಚ್ಚುಗೆ ಗಳಿಸಿದರು. ಈ ಕಾರ್ಯಕ್ರಮವನ್ನು ಕೇಳಿದ ನಂತರ ಕೆಲವರು ಬೇರೆ ಬೇರೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಬೇಕೆಂದು ಕೇಳಿಕೊಂಡರು. ಒಂದು ಕಾರ್ಯಕ್ರಮದಲ್ಲಿ ಇಡೀ ಕಚೇರಿ ಪುರಂದರ ದಾಸರ ರಚನೆಗಳನ್ನು, ಮತ್ತೊಂದು ಕಚೇರಿಯಲ್ಲಿ ತ್ಯಾಗರಾಜರ ರಚನೆಗಳನ್ನು, ಮೂರನೇ ಕಾರ್ಯಕ್ರಮದಲ್ಲಿ ಎಲ್ಲ ವಾಗ್ಗೇಯಕಾರರ ರಚನೆಗಳನ್ನು ಹಾಡಿದರು. ಶ್ರೀಲಂಕಾದ ದಿನಪತ್ರಿಕೆಗಳಲ್ಲಿ ಇವರ ಸಂಗೀತದ ಬಗ್ಗೆ ಪ್ರಶಂಸೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿ ಹಲವಾರು ಪತ್ರಕರ್ತರು ಬರೆದಿದ್ದರು.

ಇದಾದ ಎರಡು ವರ್ಷಗಳ ನಂತರ ಇಂಡಿಯನ್‌ ಫಿಲಾಸಫಿಕಲ್‌ ಕಾಂಗ್ರೆಸ್‌ ಮೂಲಕ ಶ್ರೀನಗರಕ್ಕೆ ಹೋಗಿ ಅಲ್ಲಿ ಕಿಕ್ಕಿರಿದ ಸಭೆಯಲ್ಲಿ ಹಾಡಿ ಕರ್ನಾಟಕದ ಕೀರ್ತಿ ಹೆಮ್ಮೆಗಳನ್ನು ಹಿಮಾಲಯದೆವರೆಗೆ ಮೆರೆಸಿದರು. ಇಲ್ಲಿ ಸ್ವಾಮಿ ಶಿವಾನಂದ ಸರಸ್ವತಿಯವರು ಎಂ.ಎ.ಎನ್‌ರವರನ್ನು ಸನ್ಮಾನಿಸಿ ಸಂಗೀತ ಜ್ಯೋತಿ ಎಂಬ ಬಿರುದನ್ನು ನೀಡಿದರು.

ಇವರಲ್ಲಿರುವಂತಹ ವಿಶಿಷ್ಟ ಗುಣವೆಂದರೆ ಏನಾದರೂ ಹೊಸದನ್ನು ಮಾಡಿ ಸಾಧಿಸಿ ತೋರಿಸಬೇಕೆನ್ನುವ ಉತ್ಸಾಹ. ಇದರ ಫಲವಾಗಿ ಹಲವಾರು ಕಾರ್ಯಕ್ರಮಗಳು ಹೊರಬಂದವು.

ಬೆಂಗಳೂರು ಗಾಯನ ಸಮಾಜದಲ್ಲಿ ನೌಕಾ ಚರಿತ್ರ, ಉತ್ಸವ ಸಂಪ್ರದಾಯ ಕೃತಿಗಳ ಪ್ರಾತ್ಯಕ್ಷಿಕೆಗಳು, ಭಾರತೀಯ ವಿದ್ಯಾಭವನದಲ್ಲಿ ಆನಯ್ಯನವರ ರಚನೆಗಳ ಬಗ್ಗೆ ಒಂದು ಕಾರ್ಯಾಗಾರ, ಆದರ್ಶ ಮಹಿಳಾ ವಿದ್ಯಾಲಯದಲ್ಲಿ ಒಂದು ವಾರದ ಅವಧಿಯಲ್ಲಿ ವೀಣಾ ಕುಪ್ಪಯ್ಯರ್ ರವರ ರಚನೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲು ಕಾರ್ಯಾಗಾರವನ್ನು ನಡೆಸಿದರು. ಜಯಚಾಮರಾಜೇಂದ್ರ ಒಡೆಯರ್ ರವರ ರಚನೆಗಳನ್ನು ಜಗನ್ಮೋಹನ ಅರಮನೆಯಲ್ಲಿ ನಡೆಸಿಕೊಟ್ಟರು. ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ಬೆಳಗಿನ ವಿದ್ವದ್ಗೋಷ್ಠಿಯಲ್ಲಿ ತ್ಯಾಗರಾಜರ ಪಟ್ಟ ಶಿಷ್ಯರಾದ ವಾಲಾಜಪೇಟೆ ವೆಂಕಟರಮಣ ಭಾಗವತರ ರಚನೆಗಳನ್ನು ಅವರ ಮಕ್ಕಳಿಂದ ಹಾಡಿಸಿ ಪ್ರಶಂಸೆ ಗಳಿಸಿದರು. ಇದೇ ಕಾರ್ಯಕ್ರಮವನ್ನು ವೆಂಕಟರಮಣ ಭಾಗವತರ ಹುಟ್ಟಿದೂರಾದ ಅಯ್ಯಂಪೇಟೆಯಲ್ಲಿ ನಡೆಸಿಕೊಡಬೇಕೆಂದು ಕರೆ ಬಂತು. ಅಲ್ಲಿಯೂ ಈ ಕಾರ್ಯಕ್ರಮವನ್ನು ಮೆಚ್ಚಿ ಇವರಿಗೆ ಸನ್ಮಾನ ಮಾಡಿದರು. ಕರ್ನಾಟಕ ಗಾನಕಲಾ ಪರಿಷತ್ತಿನ ವಾರ್ಷಿಕ ಸಂಗೀತ ಸಮ್ಮೇಳನದಲ್ಲಿ ಇವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಚುನಾಯಿಸಿದರು. ಬಳ್ಳಾರಿಯಲ್ಲಿ ನಡೆದ ವಿದ್ವದ್ಗೋಷ್ಠಿಯಲ್ಲಿ ಆಹಿರಿ ರಾಗ ಲಕ್ಷಣ, ಮತ್ತು ಅದೇ ರಾಗದಲ್ಲಿ ಬೇರೆ ಬೇರೆ ವಾಗ್ಗೇಯಕಾರರ ರಚನೆಗಳನ್ನು ಹಾಡಿಸಿ ಸಭಿಕರನ್ನು ಅಚ್ಚರಿಗೊಳಿಸಿದರು. ಆಹಿರಿ ರಾಗದಲ್ಲಿ ಅಟ್ಟತಾಳದ ವರ್ಣ, ಕೀರ್ತನೆಗಳು, ಅಷ್ಟಪದಿ, ತರಂಗಗಳನ್ನು ಮಗಳಿಂದ ಹಾಡಿಸಿ ಪ್ರಶಂಸೆಗೆ ಪಾತ್ರರಾದರು. ಇದೇ ಆಹಿರಿ ರಾಗದ ನಿರೂಪಣೆಯ ಕಾರ್ಯಕ್ರಮವನ್ನು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಹಿರಿಯ ಸಂಗೀತ ವಿದ್ವಾಂಸರ ಮುಂದೆ ಇವರ ಮಕ್ಕಳಾದ ನಾವು ಮೀರಾ ಮತ್ತು ಮೈಥಿಲಿ ನಡೆಸಿಕೊಟ್ಟೆವು.

ಪಲ್ಲವಿ ಪಟು: ಇವರಲ್ಲಿರುವ ಮತ್ತೊಂದು ವೈಶಿಷ್ಟ್ಯವೆಂದರೆ, ಯಾವುದೆ ಕಾರ್ಯಕ್ರಮವಾಗಲಿ ಅಲ್ಲಿ ಆದಷ್ಟು ಹೊಸದನ್ನು ಕೇಳುಗರಿಗೆ ನೀಡಬೇಕೆಂಬ ಉತ್ಸಾಹ. ಕಚೇರಿಗಳಲ್ಲಿ ಪಲ್ಲವಿಯನ್ನು ಹಾಡುವಾಗ ಹೊಸ ಹೊಸ ಪಲ್ಲವಿಗಳನ್ನು ಹಾಡುವುದು ವಾಡಿಕೆ. ಮೈಸೂರಿನಲ್ಲಿ ನಡೆಯುವ ದಸರಾ ವಸ್ತು ಪ್ರದರ್ಶನದ ಕಚೇರಿಯಲ್ಲಿ ಕನ್ನಡ ಭಾಷೆಯಲ್ಲಿ ಪಲ್ಲವಿಯನ್ನು ಹಾಡಬೇಕೆಂಬ ಹಂಬಲ ಕಚೇರಿ ಮಾಡುತ್ತಿದ್ದಂತೆ ಇವರ ಮನಸ್ಸಿಗೆ ಬಂತು. ಇದನ್ನೇ ಸವಾಲಾಗಿ ಸ್ವೀಕರಿಸಿ, ಸಮಯ ಸ್ಫೂರ್ತಿಯಿಂದ ಹಾಡಿಯೆ ಬಿಟ್ಟರು. ‘ಊರೆಲ್ಲಾ ನೋಡಿದರು ನಮ್ಮೂರೆ ವಾಸಿ’ ಎಂಬ ಪಲ್ಲವಿಯನ್ನು. ಹಾಡಿದರು. ‘ಮಲಯ ಮಾರುತಂ ವೀಸುದಡಿ ಕಲ್ಯಾಣಿ’. ಮಲಯ ಮಾರುತ ಹಾಗೂ ಕಲ್ಯಾಣಿಯಲ್ಲಿ ರಾಗ ಹಾಗೂ ತಾನಗಳನ್ನು ಹಾಡಿ ಜನರ ಹೊಗಳಿಕೆಗೆ ಪಾತ್ರರಾದರು. ಆಗಿನ ಕಾಲದಲ್ಲಿ ಇದು ಸ್ವಲ್ಪ ಅಪರೂಪದ ಪ್ರಯತ್ನ.

ವಿದ್ಯಾದಾನ: ನರಸಿಂಹಾಚಾರ್ಯರ ಮತ್ತೊಂದು ಬಹಳ ದೊಡ್ಡಗುಣವೆಂದೆರೆ ಶಿಷ್ಯರಿಗೆ ಹೇಳಿಕೊಡುವಾಗ ಇವರಿಗಿರುವ ತಾಳ್ಮೆ, ಶಿಷ್ಯರ ಮಟ್ಟಕ್ಕೆ ಇಳಿದು ಅವಗರಿಗೆ ರ್ಥವಾಗುವವರೆಗೂ ಬಿಡದೆ ಕಲಿಸುವ ವಿಧಾನ./ ಯಾವ ಸಮಯದಲ್ಲೆ ಆಗಲಿ ಯಾರಾದರೂ ಸಂಗೀತದ ಬಗ್ಗೆ ಇವರಲ್ಲಿ ಏನಾದರೂ ಪ್ರಶ್ನೆಗಳನ್ನು ಕೇಳಿದರೆ ಅದರ ಬಗ್ಗೆ ಪೂರ್ತಿ ವಿವರವನ್ನು ಸಿದ್ಧಪಡಿಸಿ ಅವರಿಗೆ ತಿಳಿಸುವವರೆಗೆ ಇವರಿಗೆ ನಿದ್ರೆಬಾರದು. ಇವರ ಪುಸ್ತಕ ಸಂಗ್ರಹವಂತೂ ಅಪಾರ. ಯಾವ ವಿಷಯದ ಬಗ್ಗೆ ಕೇಳಿದರೂ ಆ ಪುಸ್ತಕವನ್ನು ಹುಡುಕಿ ಅವರ ಸಂಶಯ ನಿವಾರಣೆ ಗೊಳಿಸುವರು. ಆಗಿನ ಕಾಲದಲ್ಲಿ ಇವರಿಗೆ ಪಾಕೆಟ್‌ ಮನಿ ಕೊಡುತ್ತಿರಲಿಲ್ಲ. ಇವರಿಗೆ ಕೊಡುತ್ತಿದ್ದ ಸ್ಟೈಪೆಂಡ್‌ ಹಣದಲ್ಲಿ ಮಸಾಲೆ ದೋಸೆ ತಿಂದರೆ ಮತ್ತು ಸಿನಿಮಾ ನೋಡಿದರೆ ಖರ್ಚಾಗುತ್ತದೆ ಎಂದು ಬಹಳ ಮಿತವ್ಯಯಮಾಡಿ ಉಳಿಸಿ, ಈ ಹಣದಿಂದಲೇ ಸಂಗೀತ ಪುಸ್ತಕಗಳನ್ನು ಖರೀದಿಸುತ್ತಿದ್ದರು.

ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿಸುವ ಸದವಕಾಶಕ ಇವರಿಗೆ (ತಿರುವಯ್ಯಾರ್ನಲ್ಲಿ) ಇವರಿಗೆ ದೊರೆಯಿತು. ದೆಹಲಿಯ ಮಿನಿಸ್ಟ್ರಿ ಆಫ್‌ ಕಲ್ಚರ್ ನಿಂದ ಇವರನ್ನು ಶಿಕ್ಷಕರನ್ನಾಗಿ ಆರಿಸಿ ಮೂರು ತಿಂಗಳ ಕಾಲ ತಿರುವಯ್ಯಾರಿನಲ್ಲಿಯೇ ಇದ್ದು ಕೆಲವೇ ಶಿಷ್ಯರನ್ನು ತರಬೇತಿ ಮಾಡಬೇಕಾಗಿತ್ತು.

ಎಂ.ಎ.ಎನ್‌.ರವರಿಗೆ ಸಂದ ಪ್ರಶಸ್ತಿಗಳಲ್ಲಿ ಪ್ರಧಾನವಾದುವು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ, ರಾಜ್ಯ ಸಂಗೀತ ವಿದ್ವಾನ್, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಗಾನಕಲಾ ಪರಿಷತ್ತಿನ ಗಾನಕಲಾ ಭೂಷಣ, ಸಂಗೀತರತ್ನ ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ ಮುಂತಾದವು.

ನಮ್ಮ ತಂದೆಯವರ ಎಲ್ಲ ಕಲಾಪಗಳಲ್ಲಿ ಸಹಚಾರಿಣಿಯಾಗಿ, ಸಹಧರ್ಮಿಣಿಯಾಗಿ, ಸಂಸಾರದ ಏರು ಪೇರುಗಳನ್ನು  ತೂಗಿಸಿಕೊಂಡು ಹೋಗಿ ನಮ್ಮ ತಂದೆಯವರ ಸಂಗೀತ ಸೇವೆ ಅನವರತ ನಡೆಸುವಂತೆ ನೋಡಿಕೊಂಡಿರುವವರು ನಮ್ಮ ತಾಯಿ ರಾಜಲಕ್ಷ್ಮಿ.

ಎಂಬತ್ತರ ಹರೆಯದಲ್ಲಿ ಈಗಲೂ ಉತ್ಸಾಹದಿಂದ ಸಂಗೀತ ಚಿಂತನೆಯಲ್ಲೇ ತೊಡಗಿರುವ ಈ ಹಿರಿಯ ಚೇತನ ಹೀಗೇ ಮುಂದುವರಿಯಲೆಂಬುದು ಎಲ್ಲರ ಆಶಯ.