ಜನನ : ೧೯೪೯ರಲ್ಲಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸಣ್ಣಗ್ರಾಮ ಹೆಡ್ಡಿಗೆಯಲ್ಲಿ

ಶಿಕ್ಷಣ: ಶ್ರೀ ಆರ್. ಗುರುರಾಜುಲು ನಾಯ್ಡು ಕಿರಣ್‌ಕುಮಾರ್ ಅವರ ಕಥಾಕೀರ್ತನ ಮಾಧ್ಯಮದ ಗುರುಗಳು. ವಿದ್ವಾನ ಶ್ರೀ ಬಿ.ಎಸ್. ಬಸವಲಿಂಗಪ್ಪ ಅವರಲ್ಲಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ.

ಕ್ಷೇತ್ರ ಸಾಧನೆ: ಶ್ರೀ ಎಂ. ಕಿರಣ್‌ಕುಮಾರ್ ಕಥಾಕೀರ್ತನ ಕ್ಷೇತ್ರದಲ್ಲಿ ಬೆಳೆದು ಬಂದ ಪರಿ ಅನನ್ಯವಾದುದು. ೧೯೬೫ ರಲ್ಲಿ ನಂಜನಗೂಡಿನ ದೇವಾಲಯದಲ್ಲಿ ತಮ್ಮ ಮೊದಲ ಕಥಾಕೀರ್ತನ ಕಾರ್ಯಕ್ರಮವನ್ನು ನೀಡಿದ ಕಿರಣ್‌ಕುಮಾರ್ ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. ಕರ್ನಾಟಕದಾದ್ಯಂತ ಗಣೇಶೋತ್ಸವ, ಶ್ರೀ ರಾಮನವಮಿ, ಶ್ರೀ ಬಸವ ಜಯಂತಿ, ಶ್ರೀ ಶಂಕರ ಜಯಂತಿ ಮುಂತಾದ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಸನಾತನ ಧರ್ಮ ಸಂಸ್ಕೃತಿಯ ಪ್ರಚಾರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ನವದೆಹಲಿ, ಮುಂಬಯಿ, ಆಂಧ್ರಪ್ರದೇಶ, ತಮಿಳುನಾಡು, ಕಾಶಿ ಮುಂತಾದ ಹೊರ ರಾಜ್ಯಗಳ ಪ್ರಮುಖ ನಗರಗಳಲ್ಲೂ ತಮ್ಮ ಧರ್ಮ ಪ್ರಚಾರ ಕಾರ್ಯವನ್ನು ವಿಸ್ತರಿಸಿಕೊಂಡ ಕಿರಣ್‌ಕುಮಾರ್ ಅವರು ಆಸ್ಟ್ರೇಲಿಯಾ, ಮಲೇಶಿಯಾ, ಅಮೇರಿಕಾ, ಶ್ರೀಲಂಕಾ ಮುಂತಾದ ಹೊರದೇಶಗಳಲ್ಲೂ ಪ್ರವಾಸ ಮಾಡಿ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ಕಥಾಕೀರ್ತನ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಆಕಾಶವಾಣಿಯ ’ಬಿ-ಹೈ’ ಶ್ರೇಣಿ ಕಲಾವಿದರಾದ ಡಾ. ಕಿರಣ್ ಕಥಾ ಕೀರ್ತನ ಮಾಧ್ಯಮದಲ್ಲಿ ಹಲವು ಧ್ವನಿಸುರುಳಿಗಳನ್ನು ತರುವ ಮುಖಾಂತರ ಆಧುನಿಕ ತಂತ್ರಜ್ಞಾನವನ್ನು ಪುರಾತನ ಧರ್ಮ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಅನೇಕ ಸಂಘ ಸಂಸ್ಥೆಗಳು ಮಠ ಮಂದಿರಗಳು ಇವರ ಕಥಾಕೀರ್ತನ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಕೀರ್ತನ ಕಲಾರತ್ನ, ಹರಿಕಥಾ ವಾಗ್ಭೂಷಣ ಚತುರ, ಶಿವಕೀರ್ತನಾ ಸಾರ್ವಭೌಮ, ಕೀರ್ತನ ಕಲಾಕೇಸರಿ, ಕೀರ್ತನ ವಾಚಸ್ಪತಿ ಮುಂತಾದ ಪುರಸ್ಕಾರಗಳಿಂದ ಸತ್ಕರಿಸಿದ್ದಾರೆ. ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸನ್ಮಾನಿಸಿದೆ.