Categories
ಯಕ್ಷಗಾನ ರಾಜ್ಯೋತ್ಸವ 2020

ಎಂ.ಕೆ. ರಮೇಶ್ ಆಚಾರ್ಯ

ಮಲೆನಾಡು ಕಂಡ ಪ್ರತಿಭಾಶಾಲಿ ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಎಂ.ಕೆ. ರಮೇಶ್ ಆಚಾರ್ಯ. ಬಡಗು ಮತ್ತು ತೆಂಕುತಿಟ್ಟು ಎರಡೂ ಪ್ರಕಾರದ ಸಮರ್ಥ ಪಾತ್ರಧಾರಿ.
ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಕಲು ಅಂಚೆಯ ಆಲ್ಮನೆ ಗ್ರಾಮದವರಾದ ಎಂ.ಕೆ. ರಮೇಶ್ ಆಚಾರ್ಯ ಐದನೇ ತರಗತಿಯಲ್ಲಿರುವಾಗಲೇ ಯಕ್ಷರಂಗ ಪ್ರವೇಶಿಸಿದ ಪಟು. ಬಡಗು ಮತ್ತು ತೆಂಕುತಿಟ್ಟು ಪ್ರಕಾರಗಳೆರಡರಲ್ಲೂ ಅನನ್ಯ ಸ್ತ್ರೀವೇಷ ಪಾತ್ರಧಾರಿ. ವೃತ್ತಿ ಕಲಾವಿದರಾಗಿ ಐದು ದಶಕಗಳ ಸಾರ್ಥಕ ಕಲಾಸೇವೆ. ಹತ್ತಾರು ಯಕ್ಷಗಾನ ಪ್ರಸಂಗಗಳಿಗೆ ಕಲಾ ನಿರ್ದೇಶನ ಮಾಡಿದ ಹೆಗ್ಗಳಿಕೆ. ಮಹಾಮಾತೆ ಕುಂತಿ, ಸಮಗ್ರ ವಿಶ್ವಾಮಿತ್ರ, ಅನಸೂಯಾ ಉಪಾಖ್ಯಾನ, ಶ್ರೀಕೃಷ್ಣ ತುಲಾಭಾರದಂತಹ ಪುರಾಣ ಪ್ರಸಂಗಗಳು, ಕಿಗ್ಗ ಕ್ಷೇತ್ರ ಮಹಾತ್ಮ, ಕಳಸ ಕ್ಷೇತ್ರ ಮಹಾತ್ಮ ಮುಂತಾದ ಕ್ಷೇತ್ರ ಮಹಾತ್ಮ ಪ್ರಸಂಗಗಳಲ್ಲಿ ಪಾತ್ರಧಾರಿ, ಮೂವತ್ತೈದು ಕಾಲ್ಪನಿಕ ಯಕ್ಷಗಾನ ಪ್ರಸಂಗಗಳ ಪದ್ಯ ರಚನಾಕಾರರು. ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರು.