೧೯೪೭ರಲ್ಲಿ ಮೈಸೂರಿನಲ್ಲಿ ಜನಿಸಿದ ಸರಸ್ವತಿಯವರ ತಾಯಿ ಕಮಲಮ್ಮ ಪಿಟೀಲು ವಾದಕರು. ತಾಯಿಯಿಂದಲೇ ಆರಂಭಿಕ ಶಿಕ್ಷಣ ಪಡೆದು ಮುಂದೆ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ ಹಾಗೂ ಗೌರಿ ಕುಪ್ಪುಸ್ವಾಮಿ ಇವರುಗಳಲ್ಲಿ ಗಾಯನ, ವೀಣಾ ವಾದನಗಳೆರಡರಲ್ಲೂ ಪ್ರೌಢ ಶಿಕ್ಷಣ ಪಡೆದು ವೀಣೆ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಇವರು ಬಿ.ಎ. ಪದವೀಧರರೂ ಆಗಿದ್ದಾರೆ.

ಆಕಾಶವಾಣಿ-ದೂರದರ್ಶನ ಕೇಂದ್ರಗಳಿಂದಲೂ ಹಲವಾರು ಪ್ರತಿಷ್ಠಿತ ಸಭೆ-ಸಂಸ್ಥೆಗಳ  ಆಶ್ರಯದಲ್ಲೂ ಇವರ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ನಾದಮಾಧುರ್ಯ, ಶಾಸ್ತ್ರೀಯತೆ, ಭಾವಪೂರ್ಣತೆಗಳು ಇವರ ವಾದನದಲ್ಲಿನ ಪ್ರಧಾನ ಅಂಶಗಳು. ಹರಿದಾಸರ-ಶರಣರ ಸಾಹಿತ್ಯಗಳಿಗೆ ರಾಗ ಸಂಯೋಜಿಸಿ ಪ್ರಸ್ತುತ ಪಡಿಸಿರುತ್ತಾರೆ. ಉತ್ತಮ ಗುರುವಾಗಿ ಹಲವಾರು ಗಾಯಕರನ್ನು, ವೀಣಾ ವಾದಕರನ್ನು ಕ್ಷೇತ್ರಕ್ಕೆ ನೀಡುತ್ತಿದ್ದಾರೆ.

ಅನನ್ಯ ಪುರಸ್ಕಾರ ಪಡೆದಿರುವ ಇವರು ಕರ್ನಾಟಕ ಗಾನಕಲಾ ಪರಿಷತ್ತಿನ ತಜ್ಞರ ಸಮಿತಿಯ ಸದಸ್ಯೆಯಾಗಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಮೈಸೂರು ಶೈಲಿಯ ವೀಣಾ ಪರಂಪರೆಯನ್ನು ಉಳಿಸಲು ಆರಂಭಿಸಿರುವ ಯೋಜನೆಯಲ್ಲಿ ವೀಣಾ ಗುರುವಾಗಿ ಸಲ್ಲಿಸುತ್ತಿರುವ ಸೇವೆ ಗಣನೀಯ. ಬೆಂಗಳೂರಿನ ಆದರ್ಶ ಅಕಾಡೆಮಿ ಆಫ್‌ ಇಂಡಿಯನ್‌ ಕಲ್ಚರ್‍ನ ಹದಿಮೂರನೇ ಸಮ್ಮೇಳಾನಧ್ಯಕ್ಷೆಯಾಗಿ ಪಡೆದ ಸನ್ಮಾನ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸನ್ಮಾನ, ಹಲವಾರು ಇತರ ಪ್ರತಿಷ್ಠಿತ ಸಂಸ್ಥೆಗಳ ಸನ್ಮಾನ, ಗೌರವಗಳು ಶ್ರೀಮತಿಯವರ ಸಾಧನೆಗೆ ದೊರೆತಿರುವ ಪುರಸ್ಕಾರಗಳು.