ನಾಗಸ್ವರ ವಿದ್ವಾಂಸರ ಮನೆತನದವರಾಗಿ ಬೆಂಗಳೂರಿನಲ್ಲಿ ೮-೧-೧೯೪೯ ರಂದು ಜನಿಸಿದವರು ಕೋದಂಡರಾಂ. ತಂದೆ ಎಲ್‌. ಮುನಿಸ್ವಾಮಿಯವರು  ಸುಪ್ರಸಿದ್ದ ನಾಗಸ್ವರ ವಿದ್ವಾಂಸರಾಗಿದ್ದು ಮಗನಿಗೆ ಪ್ರಾರಂಭಿಕ ಶಿಕ್ಷಣ ನೀಡಿದರು. ಆಂಧ್ರದ ಕೆ.ಎಸ್‌. ನಂಜುಂಡಸ್ವಾಮಿ, ವೆಂಕಟೇಶುಲು, ಟಿ.ಆರ್. ಜಯರಾಮ ಪಿಳ್ಳೆ, ಮಾಯಾವರಂ ಸಹೋದರರಾದ ಸುಬ್ರಹ್ಮಣ್ಯಪಿಳ್ಳೆ- ಮಾಮಂಡಿಯಾ ಪಿಳ್ಳೆ ಇವರುಗಳ ಪ್ರೌಢ ಶಿಕ್ಷಣ , ಮಾರ್ಗದರ್ಶನಗಳಲ್ಲಿ ಕೋದಂಡರಾಂ ನಮ್ಮ ನಾಡಿನ ಸುವಿಖ್ಯಾತ ನಾಗಸ್ವರ ವಿದ್ವಾಂಸರಾಗಿ ಬೆಳೆದರು. ಜೊತೆಗೆ ಆನೂರು ರಾಮಕೃಷ್ಣ ಮತ್ತು ಡಿ.ಎನ್‌. ಗುರುದತ್ತ ಅವರಿಂದ ಗಾಯನವನ್ನೂ ಅಭ್ಯಾಸ ಮಾಡಿದರು.

ದಕ್ಷಿಣ ಭಾರತದ ಎಲ್ಲೆಡೆಯೂ ಈ ಮಂಗಳ ವಾದ್ಯವನ್ನು ಮೊಳಗಿಸಿ ಪ್ರತಿಷ್ಠಿತ ಉತ್ಸವಾದಿಗಳಲ್ಲಿಯೂ ಸೇವೆ ಸಲ್ಲಿಸಿ ಸಭೆ-ಸಂಸ್ಥೆಗಳ ಆಶ್ರಯದಲ್ಲಿ ಕಛೇರಿಗಳನ್ನು ನೀಡಿ ಜನಮನ್ನಣೆ ಪಡೆದಿರುತ್ತಾರೆ. ಆಕಾಶವಾಣಿ-ದೂರದರ್ಶನ ಕೇಂದ್ರಗಳಿಂದ ಇವರ ವಾದನ ಕೇಳಿ ಬರುತ್ತಿರುತ್ತದೆ.

ಮಲೇಶಿಯಾ, ಸಿಂಗಪುರ, ಅಮೇರಿಕಾ ದೇಶಗಳಲ್ಲಿ ಸಂಚರಿಸಿ ಕ್ಷೇತ್ರದ ಅತ್ಯಂತ ಹೆಮ್ಮೆಯ ಡೋಲು ವಾದಕರೂಡನೆ ನುಡಿಸಿರುವ ಹಿರಿಮೆಗೆ ಪಾತ್ರರಾಗಿದ್ದಾರೆ. ಸಾರ್ಕ್ ಸಮ್ಮೇಳನ, ರೇಡಿಯೋ ಸಂಗೀತ ಸಮ್ಮೇಳನಗಳಲ್ಲಿ ಭಾಗವಹಿಸಿರುವ ಕೀರ್ತಿ ಇವರದು. ಇವರ ವಾದನದ ಅನೇಕ ಧ್ವನಿಸುರುಳಿಗಳೂ ಅಡಕ ಚಕ್ರ (ಸಿ.ಡಿ) ಗಳೂ ಜನಪ್ರಿಯತೆ ಗಳಿಸಿವೆ.

ಇಂತಹ ಪ್ರತಿಭಾನ್ವಿತ ಕಲಾವಿದರಿಗೆ ಸಹಜವಾಗಿಯೇ ಅನೇಕ ಗೌರವ ಸನ್ಮಾನಗಳಲು ಲಭಿಸಿವೆ. ‘ಸುನಾದ ಸ್ವರಮಣಿ’, ‘ನಾಗಸ್ವರ ಕಲಾನಿ’, ‘ನಾಗಸ್ವರ ಕಲಾ ಪ್ರಪೂರ್ಣ’, ‘ನಾಗಸ್ವಾರ ಇಸೈಮಣಿ’, ‘ನಾಗಸ್ವರ ಚತುರ’, ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳೊಡನೆ ೨೦೦೫ರಲ್ಲಿ ಕೆಂಪೇಗೌಡ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಯೂ ಕೋದಂಡರಾಂ ಅವರಿಗೆ ಪ್ರಾಪ್ತವಾಗಿದೆ.

ಅನೇಕ ಪ್ರತಿಭಾನ್ವಿತ ನಾಗಸ್ವರ ವಾದಕರನ್ನು ತರಬೇತಿಗೊಳಿಸಿ ಕ್ಷೇತ್ರಕ್ಕೆ ನೀಡುತ್ತಿರುವ, ಇಂದಿಗೂ ಬೇಡಿಕೆಯಲ್ಲಿರುವ ಜನಪ್ರಿಯ ಸಹೃದಯ ಕಲಾವಿದರಾಗಿದ್ದಾರೆ.