ಹಿಂದುಸ್ಥಾನಿ ಸಂಗೀತದ ಹಿರಿಯ ಗಾಯಕರಾಗಿ ಸಂಗೀತದಲ್ಲಿ ಅಪಾರ ಸಾಧನೆ ಗೈದಿರುವ ಶ್ರೀ ಎಂ. ಗುರುಪಾದಸ್ವಾಮಿ ಗವಾಯಿಗಳು ಸಂಗೀತ ಶಾಲೆ ಸ್ಥಾಪಿಸಿ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡುತ್ತ ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಪ್ರಸಾರ ಮಾಡುವ ಕಲಾ ಕಾಯಕದಲ್ಲಿ ನಿರತರಾಗಿದ್ದಾರೆ.

ತಮ್ಮ ವಿಶಿಷ್ಟ ಶೈಲಿಯ ಹಾಡುಗಾರಿಕೆಯಿಂದ ಕನ್ನಡ ನಾಡಿನ ಹೈದರಾಬಾದ್‌- ಕರ್ನಾಟಕ ಪ್ರದೇಶಗಳಲ್ಲಿ ಹಿಂದೂಸ್ಥಾನಿ ಸಂಗೀತದ ಕಂಪನ್ನು ಹರಡುತ್ತಿರುವ ಶ್ರೀ ಎಂ. ಗುರುಪಾದಸ್ವಾಮಿ ಗವಾಯಿಗಳು ನೂರಾರು ಯುವ ಕಲಾವಿದರನ್ನು ಪರಿಣತಗೊಳಿಸಿ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

೬೫ರ ಹರೆಯದ ಗವಾಯಿಗಳಿಗೆ ಬಾಲ್ಯದ ೧೦ನೇ ವಯಸ್ಸಿನಲ್ಲೇ ಶಾಸ್ತ್ರೀಯ ಸಂಗೀತದಲ್ಲಿ ಅವರ ಹಿರಯಣ್ಣನವರಿಂದ ಶಿಕ್ಷಣ  ಪ್ರಾರಂಭವಾಯಿತು. ನಂತರ ಡಾ. ಪುಟ್ಟರಾಜ ಗವಾಯಿ ಅವರಿಂದ ಪ್ರೌಢ ಶಿಕ್ಷಣ ಪಡೆದ ಇವರು ಮರೋಳ ರಾಮ್‌ ಬುವಾ ಮತ್ತು ಮುರುಡೇಶ್ವರ ಗವಾಯಿಗಳಲ್ಲಿ ಅಭ್ಯಾಸ ಮಾಡಿ ಗ್ವಾಲಿಯರ್ ಘರಾಣಾ ಶೈಲಿಯನ್ನು ತಮ್ಮದಾಗಿಸಿಕೊಂಡರು.

ಗವಾಯಿಗಳ ಹಿಂದೂಸ್ಥಾನಿ ಸಂಗೀತ ಗಾಯನವನ್ನು ಶ್ರೀಮಂತಗೊಳಿಸಿದ್ದು ಹರಪನಹಳ್ಳಿ ನರಸಿಂಗರಾಯರಿಂದ ಅವರು ಮಾಡಿದ್ದ ಕರ್ನಾಟಕ ಸಂಗೀತ ಅಭ್ಯಾಸ. ಹಾರ್ಮೋನಿಯಂ ವಾದನದಲ್ಲೂ ಪರಿಶ್ರಮ ಮಾಡಿರುವ ಗವಾಯಿಗಳು ದೇಶದ ಅನೇಕ ಪ್ರಖ್ಯಾತ ಗಾಯಕರ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಂ ಸಹಕಾರ ನೀಡಿ ಖ್ಯಾತರಾಗಿದ್ದಾರೆ.

ರಾಯಚೂರಿನ ತಮ್ಮ ‘ಭಾರತೀ ಸಂಗೀತ ಪಾಠಶಾಲೆ’ಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಗಾಯನ ಹಾಗೂ ವಾದ್ಯ ವಾದನದಲ್ಲಿ ತರಬೇತು ನೀಡುತ್ತಿರುವ ಗವಾಯಿಗಳ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.

ಶ್ರೀ ಎಂ. ಗುರುಪಾದಸ್ವಾಮಿ ಗವಾಯಿಗಳ ಸಂಗೀತ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೭-೯೮ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.