“ಒಂದು ಜನಾಂಗದ ಕಣ್ಣು ತೆರೆಸಿದ ಕವಿ” ಎಂಬ ಗರಿಮೆಗೆ ಪಾತ್ರರಾದವರು ಡಾ|| ಮೊಗೇರಿ ಗೋಪಾಲಕೃಷ್ಣ ಅಡಿಗರು. ಇವರು ನವ್ಯಕಾವ್ಯ ಪ್ರವರ್ತಕರಲ್ಲಿ ಒಬ್ಬರು. ಪಂಪ ಪ್ರಶಸ್ತಿ ವಿಜೇತರು. ಇವರು ಬರೆದ “ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು” ಎಂಬ ಮಧುರ ಗೀತೆ ಇಂದಿಗೂ ನಾಡಿನ ಸಾಹಿತ್ಯಾಸಕ್ತರೆಲ್ಲರ ಅತ್ಯಂತ ಮೆಚ್ಚಿನ ಗೀತೆ.

ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತಂತೆ. “ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಕೈ ಹಾಕಿದೆನೆಂದು ತೋರುತ್ತದೆ. ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದ ಪದ್ಯಗಳನ್ನು ರಚಿಸುತ್ತಿದ್ದೆ” ಎಂದು ಅವರೇ ಹೇಳಿದ್ದಾರೆ.

ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಇವರು ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ತುಂಬಾ ಕಷ್ಟದದಿನಗಳಾನ್ನು ಎದುರಿಸಬೇಕಾಗಿತ್ತು. ಅದೇ ಅವಧಿಯಲ್ಲಿ ಇವರಿಗೆ ಚದುರಂಗರಂತಹ ಮೇಧಾವಿಗಳ ಗೆಳೆತನ ದೊರಕಿದ್ದು ಇವರ ವ್ಯಕ್ತಿತ್ವದ ವಿಕಾಸಕ್ಕೆ ಸಹಕಾರಿಯಾದಂತಾಯಿತು. ಬಿ.ಎ.(ಆನರ್ಸ್), ಎಂ.ಎ.(ಇಂಗ್ಲೀಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಅವರು ಮೈಸೂರು ಶಾರದಾವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಬುಕ್ ಟ್ರಸ್ಟ್‌ನ ನಿರ್ದೇಶಕರಾಗಿ, ಸಿಮ್ಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದರು. ಐವತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಹಾಗೂ ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. “ಸಾಕ್ಷಿ” ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು. ಗೋಪಾಲಕೃಷ್ಣ ಅಡಿಗರ ನೇತೃತ್ವದಲ್ಲಿ ಆರಂಭವಾದ “ಸಾಕ್ಷಿ” ಎಂಬ ಪತ್ರಿಕೆ ಅತ್ಯಂತ ವಿಚಾರಾತ್ಮಕವಾಗಿದ್ದು ನಾಡಿನ ಅಂದಿನ ಅನೇಕ ಯುವ ಬರಹಗಾರರನ್ನು ಗುರುತಿಸಿ ಅವರನ್ನು ಬೆಳೆಸಿತು. ಅಂದು “ಸಾಕ್ಷಿ” ಪತ್ರಿಕೆಯಲ್ಲಿ ತಮ್ಮ ಬರವಣಿಗೆ ಪ್ರಾರಂಭಿಸಿದ ಅನೇಕ ಹೊಸ ಬರಹಗಾರರು ಇಂದು ಪ್ರಖ್ಯಾತ ಲೇಖಕರಾಗಿದ್ದಾರೆ. ಅದು ಅಡಿಗರ ದೂರದೃಷ್ಟಿಯ ಫಲ.

ಅಡಿಗರಿಗೆ ಖ್ಯಾತಿ ತಂದಿತ್ತಿದ್ದು ಅವರ ಕವನಗಳು. ಅಡಿಗರೆಂದರೆ ಕವನಗಳ ಅಡಿಗರು ಎಂಬಷ್ಟು ಮಟ್ಟಿಗೆ ಅವರು ಕಾವ್ಯಕೃಷಿಯಲ್ಲಿ ಪ್ರಖ್ಯಾತರಾಗಿದ್ದರು. ೧೯೪೬ ರಲ್ಲಿ ಇವರು ಹೊರತಂದ “ಭಾವತರಂಗ” ಹಾಗೂ ಸುವರ್ಣ ಪುಥ್ಥಳಿ” ಇವರಿಗೆ ಅಪಾರ ಕೀರ್ತಿ ತಂದುಕೊಟ್ಟವು. ಅದಲ್ಲದೆ “ಕಟ್ಟುವೆವು ನಾವು”,”ನಡೆದು ಬಂದ ದಾರಿ”,”ಚಂಡೆಮದ್ದಳೆ”,”ಭೂಮಿಗೀತ”,”ವರ್ಧಮಾನ” ಮುಂತಾದ ಕವನ ಸಂಕಲನ ಅಡಿಗರಿಗೆ ಅಪಾರ ಜನಮನ್ನಣೆ ಯನ್ನು ತಂದವು.ಗದ್ಯದ ಬರವಣಿಗೆಯಲ್ಲೂ ಅಡಿಗರು ತಮ್ಮ ವೈಶಿಷ್ಟ್ಯವನ್ನು ಕಾಯ್ದುಕೊಂಡು ಬಂದಿದ್ದಾರೆ. “ಮಣ್ಣಿನ ವಾಸನೆ”,”ಕನ್ನಡದ ಆಭಿಮಾನ ವಿಚಾರಪಥ”,”ನಮ್ಮ ಶಿಕ್ಷಣ ಕೇಂದ್ರ” ಮುಂತಾದವು ಗದ್ಯ ಕೃತಿಗಳು, “ಸುವರ್ಣ ಕೀಟ”,”ಭೂಗರ್ಭಯಾತ್ರೆ”,”ರೈತರ ಹುಡುಗಿ” ಮೊದಲಾದ ಅನುವಾದಿತ ಕೃತಿಗಳು ಹಾಗೂ “ಆಕಾಶದೀಪ” ಮತ್ತು “ಆನಾಥೆ” ಕಾದಂಬರಿಗಳನ್ನು ಇವರು ಬರೆದಿದ್ದಾರೆ. ಇನ್ನು ಉಪನ್ಯಾಸಗಳಲ್ಲಿ ಅಡಿಗರು ತಮ್ಮ ಭಾವಪೂರ್ಣವಾದ ಕವಿತೆಗಳಿಂದ ಇಡೀ ಕನ್ನಡ ನಾಡಿನ ಸಾಹಿತ್ಯಾಸಕ್ತರ ಗಮನವನ್ನು ಸೆಳೆದರು.ಇವರ “ಸುವರ್ಣ ಪುಥ್ಥಳಿ” ಎಂಬ ಕವನಸಂಕಲನ ರಾಷ್ಟ್ರೀಯ ಭಾವೈಕ್ಯತೆಗೆ ಬಲವಾದ ಬುನಾದಿಯನ್ನು ಹಾಕಿದೆ.

ಮಧ್ಯಪ್ರದೇಶ ಸರ್ಕಾರ ಮೊದಲಬಾರಿಗೆ ನೀಡಿದ “ಕಬೀರ್ ಸಮ್ಮಾನ್” ಪ್ರಶಸ್ತಿ ಅಡಿಗರಿಗೆ ಸಂದಿದೆ. ಇವರ “ವರ್ಧಮಾನ” ಕವನಸಂಕಲನಕ್ಕೆ ೧೯೭೩ರ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,೧೯೭೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಪಂಪ ಪ್ರಶಸ್ತಿ ಇವರಿಗೆ ಸಂದ ಹಲವು ಪ್ರಶಸ್ತಿ ಗಳಲ್ಲಿ ಪ್ರಮುಖವಾದವುಗಳು.