ಕನ್ನಡ ಭಾಷೆಯ ಮೊದಲ `ರಾಷ್ಟ್ರಕವಿ’ ಎಂಬ ಗೌರವಕ್ಕೆ ಪಾತ್ರರಾದವರು ಶ್ರೀ ಮಂಜೇಶ್ವರ ಗೋವಿಂದ ಪೈ ರವರು. ತುಳು-ಕೊಂಕಣಿ-ಮಲೆಯಾಳ ಭಾಷಾ ಸಮುದಾಯಗಳ ಮಧ್ಯೆ ಹುಟ್ಟಿ ಬೆಳೆದರೂ, ಕನ್ನಡ ಅಭಿಮಾನವನ್ನು ತಮ್ಮ ಸಾಹಿತ್ಯಿಕ-ಸಾಂಸ್ಕೃತಿಕ ಸಂಶೋಧನೆಗಳ ಮೂಲಕ ಮೆರೆದವರು.

ರಾಷ್ಟ್ರಕವಿ ಗೋವಿಂದ ಪೈಯವರು ೧೮೮೩ ಮಾರ್ಚ್ ೨೩ರಂದು ತಿಮ್ಮಪ್ಪ ಪೈ, ಹಾಗೂ ದೇವಕಿಯಮ್ಮ ಅವರ ಮೊದಲ ಮಗನಾಗಿ ಮಂಗಲೂ ಜನಿಸಿದರು.ಇವರ ಆರಂಭದ ವ್ಯಾಸಂಗ ಮಂಗಳೂರಿನಲ್ಲಿ ನಡೆಯಿತು. ಹೆಚ್ಚಿನ ವ್ಯಾಸಂಗಕ್ಕಾಗಿ ಮದರಾಸಿಗೆ ( ಈಗಿನ ಚೆನ್ನೈಗೆ) ತೆರಳಿದರು. ಅದರೆ ತಂದೆಯ ಮರಣದಿಂದಾಗಿ ಪದವಿ ಪಡೆಯದೆ ಮರಳಬೇಕಾಯಿತು. ಗೋವಿಂದ ಪೈಯವರು ನಂತರ ಕೇರಳ ರಾಜ್ಯದಲ್ಲಿ ಸೇರ್ಪಡೆಯಾದ ಮಂಜೇಶ್ವರದಲ್ಲಿ ನೆಲಸಿದ್ದರಿಂದ ಮಂಜೇಶ್ವರ ಗೋವಿಂದ ಪೈ ಎಂದೇ ಹೆಸರಾದರು.

ಬಾಲ್ಯದಲ್ಲಿಯೇ ಹಲವಾರು ಸ್ನೇಹಿತರ ಜತೆ ಸೇರಿ ಇಂಗ್ಲೀಷ್ ಪತ್ರಿಕೆಯೊಂದನ್ನು ಹೊರಡಿಸಿದ್ದರು. ಅದರಲ್ಲಿ ಪೈ ಯವರ ಬರಹಗಳು ಪ್ರಕಟವಾಗುತ್ತಿದ್ದವು. ಪೈ ಯವರು ಯಕ್ಷಗಾನದ ಹಿನ್ನೆಲೆಯಲ್ಲಿ ನಾಟಕಗಳನ್ನು ಬರೆಯಲು ಮುಂದಾದರು. ಕಾವ್ಯರಚನೆ ಯಲ್ಲಿ ಅವರನ್ನು ಕಾಡುತ್ತಿದ್ದ ಪ್ರಾಸ, ಛಂದಸ್ಸು ಗಳ ಬಗ್ಗೆ ಗುರುಗಳಾದ ಪಂಜೆಯವರಲ್ಲಿ ತಿಳಿದುಕೊಂಡು ಮುಣ್ದುವರೆಯಲು ಪ್ರಾರಂಭಿಸಿದರು. ಪೈ ಯವರ ತಮ್ಮನ ಮದುವೆಯಲ್ಲಿ ಹೇಳಿದ

ಹಾಡೊಂದು ಅವರ ಕಿವಿಗೆ ಬಿತ್ತು. “ಅಡವಿಗೆ ಪೋಪರೇನ್ | ಕಂದಯ್ಯಾ ಅಡವಿಯೊಳಗೆ ಬಲು | ಕಡುಬೂಳ ಮೃಗಗಳು ಬಿಡದೆ ಬಾಧಿಪವೊ ನಿನ್ನ” ಈ ಕವಿತೆ ಕೇಳಿದ ನಂತರ ಅವರ ಸಾಹಿತ್ಯಾಸಕ್ತಿ ಇನ್ನಷ್ಟು ಹೆಚ್ಚಿತು.

೧೯೦೦ ರಲ್ಲಿ ಪ್ರಾರಂಭವಾದ “ಸುವಾಸಿನಿ” ಎಂಬ ಮಾಸಪತ್ರಿಕೆಯಲ್ಲಿ ಕಾವ್ಯಸ್ಪರ್ಧೆಯ ಆಹ್ವಾನಕ್ಕೆ ಕಳಿಸಿದ ಅವರ ಕಂದಪದ್ಯಗಳಿಗೆ ಮೊದಲ ಬಹುಮಾನ ಸಂದಿತು. ೧೯೧೧ ರ ಸುಮಾರಿಗೆ ಪೈಗಳು ಸಾಕಷ್ಟು ಕಾವ್ಯದ ಬಗ್ಗೆ ಅಧ್ಯಯನ ಮಾಡಿದ್ದರಿಂದ ಬರೋಡಾ ದಲ್ಲಿದ್ದಾಗ ಟ್ಯಾಗೋರ್ ಹಾಗೂ ಇಕ್ಬಾಲರ ಕವಿತೆಗಳನ್ನು ಪ್ರಾಸರಹಿತವಾಗಿ ಅನುವಾದಿಸಿದರು. ಅದು “ಸ್ವದೇಶಾಭಿಮಾನಿ” ಯಲ್ಲಿ ಪ್ರಕಟವಾಯಿತು. ಜೊತೆಗೆ ಅನೇಕ ಸಂಶೋಧನಾ ಬರಹಗಳು ಪ್ರಕಟವಾಯಿತು.೧೯೨೭ ರಲ್ಲಿ ಅವರ ಪತ್ನಿ ತೀರಿಹೋದ ನಂತರ ಪೈಯವರು ಅಧ್ಯಯನ ದ ಕಡೆಗೆ ಹೆಚ್ಚು ಒತ್ತು ಕೊಟ್ಟರು. ತೀರಿಹೋದ ಪತ್ನಿಯ ನೆನಪಿನಲ್ಲಿ “ನಂದಾದೀಪ” ಎಂಬ ಸಂಸ್ಮರಣೀಯ ಕವನ ಸಂಕಲನವೊಂದನ್ನು ಹೊರತಂದರು.

ಗೋವಿಂದ ಪೈಗಳು ಗಿಳಿವಿಂಡು, ನಂದಾದೀಪ ಎಂಬ ಕಾವ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ವೈಶಾಖಿ ಹಾಗು ಗೊಲ್ಗೊಥಾ ಎನ್ನುವ ಎರಡು ಖಂಡಕಾವ್ಯಗಳನ್ನು ಬರೆದಿದ್ದಾರೆ. ಹೆಬ್ಬೆರೆಳು ಎನ್ನುವ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕವನ್ನೂ, ಚಿತ್ರಭಾನು ಎನ್ನುವ ಗದ್ಯನಾಟಕವನ್ನೂ ಬರೆದಿದ್ದಾರೆ.’ತಾಯಿ ಎನ್ನುವ ಸಾಮಾಜಿಕ ನಾಟಕವನ್ನು ಬರೆದದ್ದಲ್ಲದೆ, ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಆದರೆ ಸಂಶೋಧನೆ ಗೋವಿಂದ ಪೈಗಳ ಬರೆವಣಿಗೆಯ ಅತಿ ಮುಖ್ಯ ಭಾಗ. ತುಳುನಾಡಿನ ಇತಿಹಾಸ, ಗೌಡ ಸಾರಸ್ವತರ ಮೂಲ, ಬಸವೇಶ್ವರ ವಂಶಾವಳಿ, ಹಾಗು ಕರ್ನಾಟಕದ ಪ್ರಾಚೀನ ರಾಜಮನೆತನಗಳು, ಭಾರತೀಯ ಇತಿಹಾಸ, ಜೈನ, ಬೌದ್ಧ ಹಾಗು ವೀರಶೈವ ಧರ್ಮಗಳ ಬಗೆಗೆ ಮೌಲಿಕ ಸಂಶೋಧನೆ ಮಾಡಿ, ಅನೇಕ ಲೇಖನಗಳನ್ನು ಬರೆದಿದ್ದಾರೆ. ಗೋವಿಂದ ಪೈಗಳ ಪತ್ರಗಳನ್ನು ಜಿ.ಪಿ.ರಾಜರತ್ನಂರವರು ” ಮಂಜೇಶ್ವರ ಗೋವಿಂದ ಪೈಗಳ ಪತ್ರಗಳು” ಎನ್ನುವ ಪುಸ್ತಕರೂಪದಲ್ಲಿ ಹೊರತಂದಿದ್ದಾರೆ.

ಗೋವಿಂದ ಪೈಗಳು ಕೊಂಕಣಿ, ತುಳು, ಕನ್ನಡ, ಸಂಸ್ಕೃತ, ಮಲಯಾಳಂ, ತೆಲುಗು, ತಮಿಳು, ಮರಾಠಿ, ಒರಿಯಾ, ಬಂಗಾಳಿ, ಪಾಲಿ, ಅರ್ಧಮಾಗಧಿ, ಉರ್ದು, ಪರ್ಷಿಯನ್, ಗ್ರೀಕ್, ಲ್ಯಾಟಿನ್ ಹಾಗು ಜಪಾನಿ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದರು. ೧೯೪೯ರಲ್ಲಿ ಮದರಾಸು ಸರಕಾರವು (೧೯೫೬ರಲ್ಲಿ ಕರ್ನಾಟಕ ಏಕೀಕರಣಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯು ಆಗಿನ ಮದರಾಸು ರಾಜ್ಯದಲ್ಲಿ ಅಂದರೆ ಈಗಿನ ತಮಿಳುನಾಡಿನಲ್ಲಿ ಇತ್ತು) ಗೋವಿಂದ ಪೈಗಳಿಗೆ ರಾಷ್ಟ್ರಕವಿ ಎಂದು ಸನ್ಮಾನ ನೀಡಿ ಗೌರವಿಸಿತು.ಗೋವಿಂದ ಪೈಗಳು ೧೯೫೦ರಲ್ಲಿ ಮುಂಬಯಿಯಲ್ಲಿ ಜರುಗಿದ ೩೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ, ಕಿರಿಯರಿಗೆ, ಸಂಶೋಧನಕರ್ತರಿಗೆ ಕಾಶಿಯಾಗಿದೆ. ೧೯೬೩ರ ಸೆಪ್ಟೆಂಬರ್ ೦೬ ರಂದು ಗೋವಿಂದ ಪೈಯವರು ನಿಧನ ಹೊಂದಿದರು