೬೦ರ ಪ್ರಾಯದ ನಾಟ್ಯಾಚಾರ್ಯ ಶ್ರೀ ಎಂ. ಜನಾರ್ಧನ್ ಭರತನಾಟ್ಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ವಿದ್ವಾಂಸರು. ನೃತ್ಯದ ಶಾಸ್ತ್ರ ಮತ್ತು ಪ್ರಯೋಗ ಎರಡರಲ್ಲೂ ಪರಿಣತರು. ಶ್ರೀ ರಾಜನ್ ಅಯ್ಯರ್ ಅವರಿಂದ ಕಥಕ್ಕಳಿ, ಶ್ರೀ ಮುರುಳೀಧರ ಅವರಿಂದ ಭರತನಾಟ್ಯ, ವಿದ್ವಾನ್ ಗೋಪಾಲಕೃಷ್ಣ ಅಯ್ಯರ್ ಅವರಿಂದ ಸಂಗೀತ ಕಲಿತರು ಶ್ರೀ ಜನಾರ್ಧನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರಾಂತ ಗುರುವಾಗಿ ಪ್ರಸಿದ್ಧರಾಗಿದ್ದಾರೆ.

ಇವರ ಕಲಾನಿಕೇತನದಲ್ಲಿ ಕಲಿತ ಅನೇಕ ಕಲಾವಿದರು ಹೊರ ದೇಶಗಳಲ್ಲಿ ನೃತ್ಯ ಶಾಲೆಗಳನ್ನು ತೆರೆದು ತಮ್ಮ ಗುರುಗಳ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಅಲ್ಲದೆ ಶ್ರೀ ಜನಾರ್ಧನ್ ಅವರು ಕರ್ನಾಟಕ ಸರ್ಕಾರದ ನೃತ್ಯದ ವಿದ್ವತ್ ಪರೀಕ್ಷೆಯ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಹಲವು ಪ್ರಬುದ್ಧ ನೃತ್ಯ ರೂಪಕಗಳನ್ನೂ ಸಂಯೋಜಿಸಿರುವ ಶ್ರೀ ಜನಾರ್ಧನ್ ಕೆಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಇವರಿಗೆ ೨೦೦೦-೦೧ನೇ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಸಂದಿದೆ.