ಹಾಸನ ಜಿಲ್ಲೆಯ ದೊಡ್ಡ ಮಗ್ಗೆ ಗ್ರಾಮದ ಮೂಲಸ್ಥರಾಗಿದ್ದ ಶ್ರೀ ಜನಾರ್ದನ ಅಯ್ಯಂಗಾರ್ -ಶ್ರೀಮತಿ ಜಾನಕಮ್ಮ ದಂಪತಿಗಳ ಸುಪುತ್ರರಾಗಿ ೨೦-೫-೧೯೨೪ರಂದು ಬೆಂಗಳೂರಿನಲ್ಲಿ ಜನಿಸಿದವರು ಶ್ರೀನಿವಾಸ ಅಯ್ಯಂಗಾರ್. ತಂದೆ ಶ್ರೇಷ್ಠ ವೈಣಿಕ ವೆಂಕಟ ಗಿರಿಯಪ್ಪನವರ ಶಿಷ್ಯರಾಗಿದ್ದು ಮಗನಿಗೆ ಬಾಲ್ಯದ ಪಾಠವನ್ನು ಅಭ್ಯಾಸ ಮಾಡಿಸಲು ಉಪಕ್ರಮಿಸಿದರು. ಹಾಡುಗಾರಿಕೆಯ ಅಭ್ಯಾಸ ಆರಂಭವಾದದ್ದು ಮುಂದೆ ಶ್ರೀನಿವಾಸ ಅಯ್ಯಂಗಾರ್ ಅವರಿಗೆ ಗಂಟಲು ಬೇನೆ ಪ್ರಾರಂಭವಾಗಿ ಅವರ ಕಂಠಶ್ರೀ ಮರೆಯಾದ ಕಾರಣ ವೀಣಾ ವಾದನ ಕಲಿಕೆಯತ್ತ ತಿರುಗಿತು.

ಮೈಸೂರಿಗೆ ಬಂದು ಎದುರಾದ ಕಷ್ಟ ಪರಂಪರೆಗಳನ್ನು ಸಹಿಸಿ ಶ್ರೀನಿವಾಸ ಅಯ್ಯಂಗಾರರು ವೆಂಕಟಗಿರಿಯಪ್ಪನವರಲ್ಲಿ ವೀಣಾ ವಾದನವನ್ನು ಅಭ್ಯಸಿಸಿ ಸಾಧನೆ, ಅನುಭವಗಳ ಬಲದಿಂದ ನಾಡಿನ ಅತ್ಯಂತ ಹಿರಿಯ ವೈಣಿಕರ ಪಂಕ್ತಿಗೆ ಸೇರುವವರಾದರು. ಮೈಸೂರಿನ ಅಯ್ಯನಾರ್ ಸಂಗೀತ ಕಲಾ ಶಾಲೆ ಹಾಗೂ ಭಗಿನಿ ಸಮಾಜಗಳಲ್ಲಿ ಶಿಕ್ಷಕರಾಗಿ ನೂರಾರು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಆಕಾಶವಾಣಿಯ ‘ಎ’ ಟಾಪ್‌ ಕಲಾವಿದರಾದ ಇವರು ವಿವಿಧ ಕೇಂದ್ರಗಳಿಂದ, ದೂರದರ್ಶನದಿಂದ ರಾಜ್ಯದ ಹಾಗೂ ದೇಶದ ಪ್ರಮುಖ ಸಭೆ-ಸಂಸ್ಥೆಗಳಿಂದ ವೀಣಾ ವಾದನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಗಾಯನದ ನವುರಾದ ಗಮಕಗಳು, ಸ್ಫುಟವಾದ ನಾದ ಮಾಧುರ್ಯ ತುಂಬಿದ ಪಾಂಡಿತ್ಯ ಇವರ ಏನಿಕೆಯಲ್ಲಿರುವ ವಿಶಿಷ್ಟತೆಗಳು. ಹಾಗೆಯೇ ಇವರಿಗೆ ದೊರಕಿರುವ ಸನ್ಮಾನಗಳೂ ಅಪಾರ. ‘ಗಾನ ಕಲಾ ಭೂಷಣ’, ‘ಕರ್ನಾಟಕ ಕಲಾ ತಿಲಕ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಚೌಡಯ್ಯ ಸ್ಮಾರಕ ಕಲಾ ಜ್ಯೋತಿ ಪ್ರಶಸ್ತಿ’, ‘ಸಂಗೀತ ಕಲಾ ಭೂಷಣ’, ‘ವೀಣಾ ಮಾಧುರ್ಯಗಿರಿ’, ‘ಗಾಯನ ಲಯ ಸಾಮ್ರಾಟ್‌’, ‘ಕಲಾಕೌಸ್ತುಭ’, ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಕನಕ-ಪುರಂದರ ಪ್ರಶಸ್ತಿ’ ಇವುಗಳಲ್ಲಿ ಉಲ್ಲೇಖಾರ್ಹವಾದುವು.

ವಿನಯ ಸಜ್ಜನಿಕೆ ‘ಸರಳತೆ’ ನಿಸ್ವಾರ್ಥ ಮನೋಭಾವ ತುಂಬಿದ ಶ್ರೀಯುತರು ತಮ್ಮ ಇಂದಿನ ಜೀವನ ಸಂಧ್ಯೆಯಲ್ಲಿ ಮುಂದಿನ ಸಂಗೀತಗಾರರ ತಲೆಮಾರಿನ ಬಗ್ಗೆ ವಿಶೇಷ ಆಸ್ಥೆ ಕಳಕಳಿ ಹೊಂದಿದ್ದಾರೆ.