ಕನ್ನಡ ನಾಡಿನ ಹೆಮ್ಮೆಯ ಪುತ್ರಿ ಎಂ. ಜೇಜಮ್ಮನವರಿಗೆ ನೃತ್ಯಕಲೆ ರಕ್ಷಗತ. ಜೊತೆಗೆ ನೃತ್ಯ ಕಲೆಯಲ್ಲಿ ಗಮನೀಯ ಸಾಧನೆ ಮಾಡಿ, ಅದರ ಸೂಕ್ಷ್ಮ ಸಂಗತಿಗಳನ್ನು ಅರಿತಿದ್ದ ಜೇಜಮ್ಮ ಜನಿಸಿದ್ದು ೧೮೯೯ರಲ್ಲಿ,

ಅವರ ಮೂಗೂರು ವಂಶ ನೃತ್ಯ-ಸಂಗೀತಗಳಿಗೆ ಹೆಸರಾದದ್ದು, ಸಂಗೀತ ಲೋಕದಲ್ಲಿ ಪ್ರಚಂಡರೆನಿಸಿದ್ದ ಸುಬ್ಬಣ್ಣನವರೂ. ನಾಟ್ಯರಂಗದಲ್ಲಿ ಅತ್ಯಂತ ನನಪ್ರಿಯತೆಗಳಿಸಿದ್ದ ಮೂಗೂರು ಅಮೃತಪ್ಪ ಜೇಜಮ್ಮನವರ ಹಿರಿಯರು. ಟಿಪ್ಪುಸುಲ್ತಾನ್ ಕಾಲದಿಂದ ಹಲವು ವರುಷಗಳವರೆಗೆ ಮೈಸೂರು ಅರಮನೆಯಲ್ಲಿ ಇವರ ವಂಶದವರಿಗೆ ನೃತ್ಯ ಮೀಸಲಾಗಿತ್ತು.

ಐದು ವರುಷದವರಿದ್ದಾಗಲೇ ಜೇಜಮ್ಮನವರಿಗೆ ತಾತ ಅಮೃತಪ್ಪನವರಿಂದ ನೃತ್ಯದಲ್ಲಿ ಶಿಕ್ಷಣ. ಜೊತೆಗೆ ಸುಬ್ಬಣ್ಣ, ತಮ್ಮಯ್ಯನವರುಗಳಿಂದ ಸಂಗೀತ ಪಾಠ. ಆದರೆ ಇವರ ಒಲವು ನೃತ್ಯದ ಕಡೆಗಿದ್ದು, ಆ ಕಲೆಯನ್ನು ಇವರು ಶ್ರದ್ಧೆಯಿಂದ ರೂಢಿಸಿಕೊಂಡು ಬಂದರು. ನೃತ್ಯದಲ್ಲಿ ಇವರ ಪಾಂಡಿತ್ಯ ಅಸದೃಶ. ಇದನ್ನು ತಮ್ಮ ಇಳಿವಯಸ್ಸಿನಲ್ಲಿ ಕಣ್ಣುಗಳನ್ನು ಕಳೆದುಕೊಂಡಾಗಲೂ ಕಾಣಬಹುದಿತ್ತು. ಆಗಲೂ ಇವರು ಅನೇಕ ಶಿಷ್ಯೆಯರಿಗೆ ಪಾಠ ಹೇಳುತ್ತಿದ್ದರು. ಇವರ ಅಭಿನಯವಂತೂ ಭಾವಪುರ್ಣ. ಅಷ್ಟೇ ಪ್ರಭಾವೀ ಇವರ ನೃತ್ಯ.

ಮಡಿಕೇರಿಯಲ್ಲಿ ಸಂಗೀತ-ನಾಟಕ ಅಕಾಡೆಮಿಗಾಗಿ ೧೯೬೦ರಲ್ಲಿ ನೃತ್ಯ ಶಿಕ್ಷಣವೀಯುತ್ತಿದ್ದಾಗ ಇವರು ೬೫ ವರ್ಷವನ್ನು ಸಮೀಪಿಸಿದ್ದರು. ಆದರೂ ಉತ್ಸಾಹ ಕಡಿಮೆಯಾಗಲಿಲ್ಲ. ಮಡಿಕೇರಿಯಲ್ಲಿ ೧೯೬೦ರಲ್ಲಿ ರವೀಂದ್ರ ಠಾಕೂರರ ಜನ್ಮ ಶತಮಾನೋತ್ಸವ ಕಾಲದಲ್ಲಿ ನರ್ತಿಸಿದ ಅಮೆರಿಕೆಯ ಕುಮಾರಿ ಡಾಲ್ಟನ್ ಅಲ್ಲದೇ ಮೈಸೂರಿನ ಮಾಧವರಾವ್ ಇವರ ಶಿಷ್ಯರಲ್ಲಿ ಪ್ರಮುಖರು.

ಇವರಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿ ತನ್ನ ೧೯೬೩-೬೪ನೇ ಸಾಲಿನ ಪ್ರಶಸ್ತಿಯನ್ನಿತ್ತು ಗೌರವಿಸಿದೆ.