೭-೫-೧೯೪೫ ರಂದು ಬೆಂಗಳೂರಿನಲ್ಲಿ ಜನಿಸಿದವರು ಶೆಲ್ವನಾರಾಯಣ. ಚಿಕ್ಕಮ್ಮ ತಂಗಮ್ಮನವರೇ ಬಾಲಕನಲ್ಲಿದ್ದ ಸಂಗೀತಾಸಕ್ತಿಗೆ ಪೋಷಣೆ ನೀಡಿ ಆರಂಭದ ಶಿಕ್ಷಣ ನೀಡಿ ವೃದ್ಧಿಯ ಹಾದಿಗೆ ನಡೆಸಿದರು. ನಂತರ ಸಂಗೀತ ಚೂಡಾಮಣಿ ಚಿಂತಲಪಲ್ಲಿ ರಾಮಚಂದ್ರರಾಯರ ಕಠಿಣವಾದ ಶಿಕ್ಷಣದಲ್ಲಿ ಹದಿನೈದು ವರ್ಷಗಳು ಸಾಧನೆ ಮಾಡಿ ಶೆಲ್ವನಾರಾಯಣರವರು ನಮ್ಮ ನಾಡಿನ ಉತ್ತಮ ಸಂಗೀತಗಾರರ ಸಾಲಿಗೆ ಸೇರುವವರಾದರು.

ಆಕಾಶವಾಣಿ ಬೆಂಗಳೂರು ಕೇಂದ್ರದ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಶ್ರೀ ಆರ್. ಕೆ. ಶ್ರೀಕಂಠನ್‌ಅವರ ಮಾರ್ಗದರ್ಶನದ ಲಾಭವೂ ಸೇರಿತು. ಸಂಪ್ರದಾಯ ಬದ್ಧವಾದ ಭಾವಪೂರ್ಣವಾದ, ಸಾಹಿತ್ಯ ಶುದ್ಧವಾದ ಉತ್ತಮ ಮನೋಧರ್ಮವುಳ್ಳ ಗಾಯಕರಾಗಿ ಶ್ರೀಯುತರು ಮೂರು ದಶಕಗಳಿಗೂ ಮೇಲ್ಮಟ್ಟು ಕ್ಷೇತ್ರದಲ್ಲಿ ಸೇವಾ ನಿರತರಾಗಿದ್ದಾರೆ. ಇವರು ಹಾಡಿದ ‘ಶ್ರೀ ಕೃಷ್ಣ ವೈಭವಂ’ ಗೇಯ ರೂಪಕ ಚೆನ್ನೈ ದೂರದರ್ಶನದಿಂದ ಪ್ರಸಾರವಾಯಿತು.

ನಾಡಿನ ಹಾಗೂ ಹೊರ ನಾಡಿನ ಹಲವಾರು ಪ್ರತಿಷ್ಠಿತ ಸಂಸ್ಥೆಗಳ , ಸಭೆಗಳ ಆಶ್ರಯದಲ್ಲಿ ಗಾಯನ ಕಛೇರಿ ನಡೆಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ‘ಗಾನ ಗಂಧರ್ವ’, ‘ಕಲಾ ಭೂಷಣ’, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿಗಳನ್ನು ನೀಡಲಾಗಿದೆ.

ಆಕಾಶವಾಣಿಯಿಂದ ನಿವೃತ್ತಿ ಪಡೆದ ನಂತರವೂ ಸಂಗೀತ ಶಿಕ್ಷಕರಾಗಿ ಶ್ರೀಯುತರು ಸಲ್ಲಿಸುತ್ತಿರುವ ಸೇವೆ ಗಣನೀಯ.