ಬಾಲ್ಯದಿಂದಲೂ ಮೃದಂಗ ವಾದನ ಅಂದರೆ ಬಹಳ ಇಷ್ಟ ಪಡುತ್ತಿದ್ದ ಶ್ರೀ ತಂಗವೇಲು ಅವರು ಆ ಕಾರಣಕ್ಕಾಗಿಯೇ ಎಂಟನೇ ತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ಕೊನೆಗೊಳಿಸಿಕೊಂಡವರು. ಶ್ರೀ ರತ್ನಂ ಪಿಳ್ಳೈ, ಶ್ರೀ ರಾಧಾಕೃಷ್ಣರಾವ್, ಶ್ರೀ ಕೋಲಾರ ಲಕ್ಷ್ಮಣ ಮುಂತಾದ ಗುರುಗಳ ಬಳಿ ತಂಗವೇಲು ಅವರಿಗೆ ಮೃದಂಗ ಪಾಠವಾಗಿದೆ. ಸಂಗೀತ ಕಚೇರಿ, ಸುಗಮ ಸಂಗೀತಕ್ಕೆ ಮೃದಂಗ ಪಕ್ಕವಾದ್ಯ ಕಲಾವಿದರಾಗಿ ಬೇಡಿಕೆ ಇದ್ದಾಗಲೇ ತಂಗವೇಲು, ನೃತ್ಯಕ್ಕೆ ಮೃದಂಗ ನುಡಿಸಲು ಆಸಕ್ತಿ ವಹಿಸಿ ಆ ಕಡೆ ಕಾರ್ಯೋನ್ಮುಖರಾದರು.

ತಮ್ಮ ಸುದೀರ್ಘ ಸಂಗೀತ ಜೀವನದಲ್ಲಿ ತಂಗವೇಲು ಹಿರಿಯ ನೃತ್ಯ ಕಲಾವಿದರುಗಳಾದ ಶ್ರೀ ವಿ.ಸಿ. ಲೋಕಯ್ಯ, ಪದ್ಮಶ್ರೀ ಕೆ.ಪಿ. ಕಿಟ್ಟಪ್ಪ ಪಿಳ್ಳೈ, ಶ್ರಿ ಆನೂರು ಸೂರ್ಯನಾರಾಯಣ, ಶ್ರೀ ಮಾಣಿಕ್ಯ ಪಿಳ್ಳೈ, ಶ್ರೀಮತಿ ಮಾಯಾರಾವ್, ಪ್ರೊ. ಉಷಾ ದಾತಾರ್, ಶ್ರೀ ಹೆಚ್. ಆರ್. ಕೇಶವಮೂರ್ತಿ, ಶ್ರೀ ಕೆ. ಶಿವರಾವ್, ಶ್ರೀ ಮತಿ ಭಾನುಮತಿ, ಶ್ರೀಮತಿ ಪದ್ಮನಿ ರಾಮಚಂದ್ರನ್, ಶ್ರೀಮತಿ ಲಕ್ಷ್ಮೀ ರಾಜಾಮಣಿ, ಶ್ರೀಮತಿ ವೈಜಯಂತಿ ಕಾಶಿ ಮುಂತಾದವರಿಗೆ ಮೃದಂಗ ಪಕ್ಕವಾದ್ಯ ಕಲಾವಿದರಾಗಿ ಸಹಕರಿಸುತ್ತಾ ದೇಶವ್ಯಾಪಿ ಸಂಚಾರ ಮಾಡಿದ್ದಾರೆ. ಜೊತೆಗೆ ವಿದ್ವಾನ್ ಪೊಲ್ಲಾಚಿ ಶಂಕರನ್, ವಿದ್ವಾನ್ ಚಂಬೈಕೃಷ್ಣನ್, ಶ್ರೀಮತಿ ಸರೋಜಾ ನಟರಾಜನ್, ಶ್ರೀಮತಿ ಬಾಲಾಂಬಾಳ್ ಸುಬ್ರಮಣ್ಯಂ, ಶ್ರೀಮತಿ ಕಮಲಾ ವೈದ್ಯನಾಥನ್ ಮುಂತಾದ ಸಂಗೀತ ವಿದ್ವಾಂಸರುಗಳ ಸಂಗೀತ ಕಚೇರಿಗಳಿಗೂ ಮೃದಂಗ ಪಕ್ಕವಾದ್ಯ ನೀಡಿದ್ದಾರೆ.

ಶ್ರೀಯುತರಿಗೆ ಐವರು ಮಕ್ಕಳು, ಮೊದಲ ಮಗಳು ಮೃದಂಗ ವಾದಕಿ, ಎರಡನೆಯ ಮಗಳು ಪಿಟೀಲು ಕಲಾವಿದೆ. ಮೂರನೇ ಮಗಳು ಗಾಯನ ಅಭ್ಯಾಸ ಮಾಡಿದ್ದಾರೆ. ಇಬ್ಬರು ಗಂಡು ಮಕ್ಕಳಲ್ಲಿ ಮೊದಲನೆಯವರು ಮೋರ್ಚಿಂಗ್ ಅಭ್ಯಾಸ ಮಾಡಿದ್ದಾರೆ. ಎರಡನೆಯ ಮಗ ಖಂಜಿರಾ ಮತ್ತು ಘಟಂ ವಾದನಲ್ಲಿ ಶಿಕ್ಷಣ ಪಡೆದಿದ್ದಾರೆ. ಕುಟುಂಬದಲ್ಲಿ ಇಡೀ ಕಚೇರಿಗಾಗುವಷ್ಟು ವಿದ್ಯಾ ಸಂಪನ್ನ ಮಕ್ಕಳಿದ್ದು, ಎಲ್ಲರೂ ಒಟ್ಟಿಗೆ ಅನೇಕ ಸಂದರ್ಭಗಳಲ್ಲಿ ಸಂಗೀತ ಕಚೇರಿ ನೀಡಿ ಜನಪ್ರಿಯತೆ ಪಡೆದಿದ್ದಾರೆ.

ಶ್ರೀ ತಂಗವೇಲು ಅವರ ಸಂಗೀತ ಸೇವೆಯನ್ನು ಗುರುತಿಸಿ ಆರ್. ಬಿ.ಎ.ಎನ್, ಎಂ. ಎಸ್. ಭರತನಾಟ್ಯ ಕಲಾಶಾಲ, ಗೀತಾ ಸಂಗೀತ ಪ್ರಚಾರ ಮಂಡಳಿ, ಸರಸ್ವತಿ ಗಾಗನ ಸಭಾ, ದೇವಿ ಭಕ್ತಿ ಗಾನ ಸಭಾ, ಶಿವಮೊಗ್ಗದ ಪ್ರತಿಭಾ ರಂಗ ಮುಂತಾದ ಸಂಸ್ಥೆಗಳು ಬಿರುದು, ಸನ್ಮಾನ ಪತ್ರಗಳನ್ನು ನೀಡಿ ಸನ್ಮಾನಿಸಿವೆ. ಈ ಪಟ್ಟಿಗೆ ತನ್ನ ೨೦೦೫-೦೬ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಸೇರಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.