ಜನನ : ೬-೭-೧೯೪೩ ಬೆಂಗಳೂರಿನಲ್ಲಿ

ಮನೆತನ : ಸಂಗೀತಗಾರರ ಮನೆತನ. ತಂದೆ ಎಂ. ನಾಗಭೂಷಣ, ನಾದಸ್ವರ ವಿದ್ವಾಂಸರು. ಸೋದರ ಮಾವ ರಾಮಣ್ಣನವರು ಕ್ಲಾರಿಯೋನೆಟ್ ವಾದಕರು.

ಗುರುಪರಂಪರೆ : ತಂದೆ ನಾಗಭೂಷಣ ಅವರಿಂದ ನಾದಸ್ವರ ವಾದ ಕಲಿಕೆ. ಸೋದರ ಮಾವ ರಾಮಣ್ಣನವರಲ್ಲಿ ಕ್ಲಾರಿಯೋನೆಟ್ ನುಡಿಸುವ ಶಿಕ್ಷಣವಲ್ಲದೆ ವಿ|| ಚೆನ್ನಕೃಷ್ಣಪ್ಪ ಅವರ ಬಳಿ ಕರ್ನಾಟಕ ಸಂಗೀತವನ್ನು ಪಂ. ಶೇಷಾದ್ರಿ ಗವಾಯಿ ಅವರ ಬಳಿ ಹಿಂದೂಸ್ಥಾನಿ ಸಂಗೀತ ಅಭ್ಯಾಸವಾಗಿದೆ. ಪಾಶ್ಚಾತ್ಯ ಸಂಗೀತದ ಪರಿಚಯವೂ ತಕ್ಕಮಟ್ಟಗಿದೆ.

ಸಾಧನೆ : ತಮ್ಮ ೧೫ನೇ ವರ್ಷದಿಂದಲೇ ಸಂಗೀತ ಕಚೇರಿ ಮಾಡುತ್ತಾ ಬೇರೆ ಕಲಾವಿದರ ಕಾರ್ಯಕ್ರಮಗಳಿಗೇ ಕ್ಲಾರಿನೆಟ್ ಪಕ್ಕ ವಾದ್ಯ ನುಡಿಸುತ್ತಾ ಹೆಚ್ಚಿನಂಶ ಲಘು-ಭಕ್ತಿ ಸಂಗೀತಗಳಿಗೆ ಕ್ಲಾರಿಯೋನೆಟ್ ವಾದ್ಯ ನುಡಿಸುತ್ತಾ ಯಶಸ್ಸುಗಳಿಸಿದ್ದಾರೆ. ಗುಬ್ಬಿ ನಾಟಕ ಕಂಪೆನಿ, ಭಟ್ಟಿಮಹದೇವಪ್ಪ ಮಿತ್ರಮಂಡಳಿ, ವೀರಭದ್ರಸ್ವಾಮಿ ನಾಟಕ ಮಂಡಳಿಗಳಲ್ಲಿ ಕ್ಲಾರಿನೆಟ್ ವಾದಕಜರಾಗಿ ಸೇವೆಯಲ್ಲಿದ್ದರು. ಖ್ಯಾತ ಸಂಗೀತ ನಿರ್ದೇಶಕರುಗಳಾದ ಎಂ. ರಂಗರಾವ್, ಉಪೇಂದ್ರ ಕುಮಾರ್, ಟಿ.ಜಿ.ಲಿಂಗಪ್ಪ, ಹಂಸಲೇಖಾ, ವಿ.ಮನೋಹರ್ ಅವರ ನಿರ್ದೇಶನದಲ್ಲಿ ಅನೇಕ ಚಲನಚಿತ್ರಗಳಲ್ಲಿ ಕ್ಲಾರಿಯೋನೆಟ್ ವಾದಕರಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಾಳಪ್ಪ ಹುಕ್ಕೇರಿಯವರ ಅನೇಕ ಕಾರ್ಯಕ್ರಮಗಳಲ್ಲಿ ಇವರು ಪಕ್ಕವಾದ್ಯ ನುಡಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಸುಗಮ ಸಂಗೀತ ಹೆಚ್ಚು ಜನಪ್ರಿಯವಾದಾಗ ಆ ಕಾರ್ಯಕ್ರಮಗಳಲ್ಲಿ ಅನೇಕ ಗಾಯಕರ ಕಾರ್ಯಕ್ರಮಗಳಿಗೆ ಸೂಕ್ತ ರೀತಿಯಲ್ಲಿ ಕ್ಲಾರಿಯೋನೆಟ್ ನುಡಿಸಿ ಖ್ಯಾತರಾಗಿದ್ದಾರೆ. ರಮಣ ಮಹರ್ಷಿ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ವಿದೇಶ ಪ್ರವಾಸವನ್ನು ಮಾಡಿ ಪಾಶ್ಚಾತ್ಯ ವಾದ್ಯ ಕ್ಲಾರಿಯೋನೆಟ್‌ನಲ್ಲಿ ಭಾರತೀಯ ಸಂಗೀತವನ್ನು ಹೇಗೆ ನುಡಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಪ್ರಶಸ್ತಿ – ಸನ್ಮಾನ : ನಾದಕೋಕಿಲ, ನಾದಚತುರ, ವಾದ್ಯ ರತ್ನ ಶ್ರುತಿ ಬ್ರಹ್ಮ, ಕಲಾಕೋವಿದ ಇತ್ಯಾದಿ ಬಿರುದು= ಸನ್ಮಾನಗಳು ಇವರನ್ನು ಅರಸಿ ಬಂದಿವೆ. ೧೯೯೮-೯೯ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಇವರಿಗೆ ಸಂದಿದೆ.