ಜನನ: ೧೫-೪-೧೯೨೨ ಉತ್ತರ ಕನ್ನಡದ ಭಟ್ಕಳದಲ್ಲಿ

ಮನೆತನ: ಸಂಗೀತ ಹಾಗೂ ರಂಗಭೂಮಿ ಕಲಾವಿದರ ಮನೆತನ. ತಂದೆ ರಂಗರಾವ್ ನಾಟಕ ಕಂಪೆನಿಗಳಲ್ಲಿ ವಾದ್ಯಗಾರರಾಗಿದ್ದರು. ಅಣ್ಣ ವಿಮಲಾನಂದ ದಾಸ್ ಹಿರಿಕಥಾ ವಿದ್ವಾಂಸರಾಗಿದ್ದವರು. ಸಹೋದರಿಯರಾದ ಎಂ. ಪಂಢರಿಬಾಯಿ, ಎಂ. ಮೈನಾವತಿ ಚಲನಚಿತ್ರರಂಗದ ಖ್ಯಾತ ನಟಿಯರಾಗಿ ದುಡಿದಿದ್ದಾರೆ.

ಗುರುಪರಂಪರೆ: ಗಾನ ವಿಶಾರದ ಬಿ. ದೇವೇಂದ್ರಪ್ಪನವರ ತಂದೆ ಬಿ.ಎಸ್. ರಾಮಯ್ಯನವರಲ್ಲಿ ಪ್ರಾರಂಭಿಕ ಶಿಕ್ಷಣ. ಅನಂತರ ಎಲ್.ಎಸ್.ನಾರಾಯಣಸ್ವಾಮಿ ಭಾಗವತರಲ್ಲಿ ಉನ್ನತ ಶಿಕ್ಷಣ.ಜೊತೆ ಜೊತೆಯಲ್ಲೇ ಸುಗಮ, ಭಕ್ತಿ ಸಂಗೀತಗಳಲ್ಲೂ ಸಾಕಷ್ಟು ಶಿಕ್ಷಣ ಪ್ರರಿಶ್ರಮ. ಹಾರ್ಮೋನಿಯಂ ವಾದನದಲ್ಲೂ ಪರಿಶ್ರಮವಿದೆ.

ಸಾಧನೆ: ಮೊದಮೊದಲು ಅಣ್ಣ ವಿಮಲಾ ನಂದದಾಸ್ ಹಾಗೂ ತಂಗಿ ಫಂಡರಿಬಾಯಿ ಅವರ ಹರಿಕಥೆಗಳಿಗೆ ಹಾರ್ಮೋನಿಯಂ ನುಡಿಸುವುದರ ಮೂಲಕ ಕಲಾರಂಗಕ್ಕೆ ಪಾದಾರ್ಪಣೆ. ಮುಂದೆ ಆಕಾಶವಾಣಿ ಕಲಾವಿದರಾಗಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಪ್ರಸಾರ. ರಾಜ್ಯದ ಹಲವು ಭಾಗಗಳೇ ಅಲ್ಲದೆ-ಮುಂಬೈ, ದೆಹಲಿ, ಆಂಧ್ರ, ಕೇರಳ, ತಮಿಳುನಾಡುಗಳಲ್ಲಿ ಸಂಚರಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಇವರ ಲಘು ಸಂಗೀತದ ಗಾಯನದಲ್ಲಿ ಶಾಸ್ತ್ರೀಯ ಸಂಗೀತದ ಸೊಗಡು ಎದ್ದು ಕಾಣುತ್ತದೆ. ಇವರ ಶಿಷ್ಯಪರಂಪರೆಯಲ್ಲಿ ಶಿವಮೊಗ್ಗ ಸುಬ್ಬಣ್ಣ, ಬಿ.ಕೆ. ಸುಮಿತ್ರ, ಕಸ್ತೂರಿ ಶಂಕರ್, ಆರ್.ರಮಾದೇವಿ ಪ್ರಮುಖ ಸ್ಥಾನದಲ್ಲಿದ್ದಾರೆ. ಅನೇಕ ಕನ್ನಡ ಗೀತೆಗಳಿಗೆ, ದೇವರನಾಮಗಳಿಗೆ ರಾಗ ಸಂಯೋಜನೆ ಮಾಡಿರುತ್ತಾರೆ.

ಪ್ರಶಸ್ತಿ-ಸನ್ಮಾನ: ಮೈಸೂರಿನ ಹನುಮ ಜುಯಂತಿ ಸಂದರ್ಭದಲ್ಲಿ ಬಿ.ದೇವೇಂದ್ರಪ್ಪನವರಿಂದ ಸನ್ಮಾನ. ಮಧುರಗಾನ ಪ್ರವೀಣ ಬಿರುದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ೧೯೮೯-೯೦ರ ಸಾಲಿನ ಕರ್ನಾಟಕ ಕಲಾತಿಲಕ, ೨೦೦೧ರಲ್ಲಿ ಸಂತ ಶಿಶುನಾಳ ಶರೀಫ ಪ್ರಶಸ್ತಿ ಇವರಿಗೆ ಸಂದಿದೆ.