ಜನನ : ೭-೩-೧೯೩೨ ರಂದು ಖಂಡೇನಹಳ್ಳಿಯಲ್ಲಿ ಹಿರಿಯೂರು ತಾಲೂಕು

ಮನೆತನ : ಶ್ರೀಮಂತ ಮುಸ್ಲಿಂ ಕುಟುಂಬ. ತಂದೆ ಎಂ. ಬುಡೇನ್ ಸಾಬ್.

ಶಿಕ್ಷಣ : ಆಲೂರಿನ ಗನ್ನಾಯ್ಕನಹಳ್ಳಿಯ ಕೃಷ್ಣಾಚಾರ್ ಎಂಬುವರ ಬಳಿ ಸಂಸ್ಕೃತ ವ್ಯಾಸಂಗ ಎಂ. ಸಿದ್ಧಯಸ್ವಾಮಿ ಅವರ ಬಳಿ ಸಂಗೀತ ಶಿಕ್ಷಣ. ಹಾರ್ಮೋನಿಯಂ ವಾದನದಲ್ಲೂ ಪರಿಶ್ರಮ. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ. ಗಮಕ ವಾಚನ ಕಲೆಯಲ್ಲೂ ಪರಿಣತರು. ಗುಡಿಕಲ್ ಅಲ್ಲಿ ಫೀರ್ ಸಾಬ್ ಅವರಲ್ಲಿ ಆಧ್ಯಾತ್ಮಿಕ ದೀಕ್ಷೆ. ನಾಟಕ ರಂಗದಲ್ಲೂ ಅನುಭವ.

ಕ್ಷೇತ್ರ ಸಾಧನೆ : ಸುಮಾರು ನಲವತ್ತು ವರ್ಷಗಳಿಂದ ಸಂಗೀತ, ಕಥಾ ಕೀರ್ತನ ನಾಟಕ ಕ್ಷೇತ್ರಗಳಲ್ಲಿ ಅವಿರತ ಸಾಧನೆ – ದುಡಿಮೆ ರಾಜ್ಯಾದಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಆಕಾಶವಾಣಿಯ ಕಲಾವಿದರು. ವಿಶ್ವ ಮಾನವ ಧರ್ಮದ ತತ್ವಗಳನ್ನು ಕೀರ್ತನ ಮಾಧ್ಯಮದ ಮೂಲಕ ಪ್ರಚಾರ ಮಾಡಿ ರಾಷ್ಟ್ರೀಯ ಭಾವೈಕ್ಯತೆಗೆ ತಮ್ಮದೇ ಆದ ರೀತಿಯಲ್ಲಿ ಶ್ರಮಿಸುತ್ತಿರುವವರು. ಸಾರ್ವಜನಿಕ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಅನೇಕ ಜನಹಿತ ಕಾರ್ಯಕ್ರಮಗಳನ್ನು ಸಹ ನಡೆಸಿರುತ್ತಾರೆ. ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಕಾರ್ಯಕಾರೀ ಸಮಿತಿ ಸದಸ್ಯರಾಗಿ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಕಲಾಕ್ಷೇತ್ರದ ಬಹುಮುಖ ಪ್ರತಿಭೆಯಾಗಿರುವ ಬುಡೇನ್ ಸಾಬ್ ಅವರಿಗೆ ಸಂದ ಪ್ರಶಸ್ತಿ ಗೌರವಗಳು ಅಪಾರ. ನಾಟಕ ನಿರ್ದೇಶನ ಚತುರ. ಹಾರ್ಮೋನಿಯಂ ವಾದ ವಿಚಕ್ಷಣ, ಕೀರ್ತನಾಚಾರ್ಯ, ಕೀರ್ತನ ಕಲಾತಿಲಕ, ಅಭಿನವ ಕಬೀರದಾಸ್ ಮುಂತಾಗಿ ಬಿರುದು – ಖಿಲ್ಲತ್ತುಳಗಳನ್ನು ಗಳಿಸಿರುವ ಇವರಿಗೆ ಆದಿಚುಂಚನಗಿರಿ ಸ್ವಾಮಿಗಳವರಿಂದ ’ಕರ್ನಾಟಕ ಕಲಾ ಭೂಷಣ’ ಎಂಬ ಬಿರುದಿನೊಂದಿಗೆ ಸನ್ಮಾನಿಸಲ್ಪಟ್ಟಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ ’ಸ್ವರ್ಣ ಪದಕ’, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿರುವುದು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೯-೨೦೦೦ ನೇ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.