ಬಾಗಲಕೋಟೆ ಜಿಲ್ಲೆಯಲ್ಲಿ ಹುಟ್ಟಿ ಹೈದ್ರಾಬಾದ ಕರ್ನಾಟಕ ಭಾಗದ ರಾಯಚೂರು ಪಟ್ಟಣದಲ್ಲಿ ನೆಲೆಸಿ ಹಿಂದೂಸ್ಥಾನಿ ಸಂಗೀತವನ್ನು ಜನಪ್ರಿಯಗೊಳಿಸಿ, ಸಂಗೀತ ಶಾಲೆ ಸ್ಥಾಪಿಸಿ ಅನೇಕ ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಿ ಸಂಗೀತ ಸೇವೆಯಲ್ಲಿ ನಿರತರಾಗಿರುವ ಶ್ರೀ ಎಂ. ಲಕ್ಷ್ಮಣಗೌಡ ಅವರು ಕನ್ನಡ ನಾಡು ಕಂಡ ಅಪರೂಪದ ಕಲಾವಿದರು. ರಾಯಚೂರಿನ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಅಲ್ಲಿನ ಸಂಗೀತ ಪ್ರಿಯರಿಗೆ ಪ್ರತಿ ಶುಕ್ರವಾರವೂ ಆವ್ಯಾಹತವಾಗಿ, ಹೆಸರಾಂತ ಕಲಾವಿದರಿಂದ ಸಂಗೀತ ಸುಧೆಯನ್ನು ಹರಿಸುತ್ತಿರುವ ಕೀರ್ತಿ ಅಲ್ಲಿನ ಎಂ. ಲಕ್ಷ್ಮಣಗೌಡ ಗವಾಯಿಗಳಿಗೆ ಸಲ್ಲುತ್ತದೆ. ಬಾದಾಮಿಯ ಮಣ್ಣೀರಿ ಗ್ರಾಮದಲ್ಲಿ ೧೯೨೦ರಲ್ಲಿ ಜನಿಸಿದ ಶ್ರೀಯುತರಿಗೆ ಚಿಕ್ಕಂದಿನಿಂದ ಸಂಗೀತದತ್ತ ಒಲವು. ಅದು ಅವರ ಅಣ್ಣ ಬಸವನಗೌಡರ ಮಾರ್ಗದರ್ಶನದಿಂದ ಆವಿಷ್ಕಾರಗೊಂಡಿತು. ಮುಂದೆ ಆ ಕಲೆಯಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಮರೋಳ್‌ ರಾಮ ಬುವಾ ಹಾಗೂ ಅಪ್ಪಾ ಸಾಹೇಬ್‌ ಬೋರವಣೀಕರ್ ರಲ್ಲಿ ಶಿಷ್ಯ ವೃತ್ತಿ ಬೆಳೆಸಿ, ಹಿಂದೂಸ್ಥಾನಿ ಶೈಲಿಯ ಶ್ರೇಷ್ಠ ಗಾಯಕರೆನಿಸಿಕೊಂಡರು.

ಲಕ್ಷ್ಮಣಗೌಡರ ಪ್ರತಿಭೆಗೆ ಮೊದಲು ದೊರೆತ ಪುರಸ್ಕಾರ ಗದ್ವಾಲ್‌ ಸಂಸ್ಥಾನದ ಆಸ್ಥಾನ ಗಾಯಕರಾಗಿ ಸನ್‌ ೧೯೪೨ ರಿಂದ ಐದು ವರ್ಷಗಳ ಅವರ ಸಂಗೀತ ಸೇವೆ ಚಿರಸ್ಮರಣೀಯ.

ಮುಂದೆ ೧೯೫೬ ರಿಂದ ರಾಜ್ಯದ ಹಿಂದುಳಿದ ಜಿಲ್ಲೆ ಎನಿಸಿಕೊಂಡಿರುವ ರಾಯಚೂರಿಗೆ ತಮ್ಮ ಸಂಗೀತ ಸೇವೆಯನ್ನು ಮುಡುಪಾಗಿಟ್ಟರು. ಹಾಗೆ ಮೊದಲು ಸ್ಥಾಪಿತವಾದ ಶಾರದ ಸಂಗೀತ ಶಾಲೆ, ೧೯೬೭ರಲ್ಲಿ ಸ್ಥಾಪಿತವಾದ ಕಲಾನಿಕೇತ ಸಂಗೀತ ಸಂಸ್ಥೆ ಮತ್ತು ೧೯೯೦ರಲ್ಲಿ ರೂಪುಗೊಂಡ ಶೃತಿ ಕಲಾನಿಕೇತನ ಸಂಗೀತ ಶಾಲೆಗಳ ಮೂಲಕ ಅನೇಕ ಶಿಷ್ಯರನ್ನು ತಯಾರಿಸಿದ್ದಾರ. ಅವರಲ್ಲಿ ಹಲವಾರು ಸಂಗೀತದ ವಿವಿಧ ಪ್ರಕಾರಗಳಲ್ಲಿ ಹೆಸರನ್ನು ಗಳಿಸಿದ್ದಾರೆ. ಅಲ್ಲದೆ ೧೯೮೦ ರಿಂದ ಹತ್ತು ವರ್ಷಗಳ ಕಾಲ ಸ್ಥಳೀಯ ಪಂಚಾಕ್ಷರಿ ಗವಾಯಿಗಳ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.

ಇವರ ಗಾಯನ ಶೈಲಿಯ ವೈಶಿಷ್ಟ್ಯವೆಂದರೆ ಮಿಶ್ರ ರಾಗಗಳ ನಿವೇದನೆ. ಅಂತಹ ಅಪರೂಪದ ಜೋಡಿ ರಾಗಗಳಲ್ಲಿ ತಲ್ಲೀನರಾಗಿ ಅವರು ಹಾಡುವುದನ್ನು ಆಲಿಸಿದವರು. ಆ ಸೊಗಸಾದ ಶೈಲಿಯನ್ನು ಎಂದೂ ಮರೆಯುವಂತಿಲ್ಲ. ಶ್ರೀಯುತರ ಕಛೇರಿಗಳು ರಾಜ್ಯದ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿಯೂ ಜರುಗಿವೆ. ಅಂತೆಯೇ ಶ್ರೀಯುತರಿಗೆ ತಂದ ಸನ್ಮಾನ, ಪ್ರಶಸ್ತಿಗಳು ಅನೇಕ. ಇವರಿಂದ ಸನ್ಮಾನಿತರಾದ ಕಲಾವಿದರ ಸಂಖ್ಯೆ ಅಷ್ಟೇ ದೊಡ್ಡದು. ಅವರಲ್ಲಿ ಮಲ್ಲಿಕಾರ್ಜುನ ಮನ್ಸೂರ್, ಪುಟ್ಟರಾಜ ಗವಾಯಿ, ಬಸವರಾಜ ರಾಜಗುರು, ಪರವೀನ ಸುಲ್ತಾನ, ಅರ್ಜುನ ಸಾ ನಾಕೋಡ್‌, ರಘುನಾಥ ನಾಕೋಡ್‌, ವಿರೇಶ ಮದ್ರಿ ಮತ್ತು ಈಶ್ವರ ಮೊರಗೇರಿ ಪ್ರಮುಖರು.

ಅತ್ಯಂತ ಸರಳ, ಶುದ್ಧ ಸ್ವಭಾವದವರಾದ ಈ ಕಲಾ ತಪಸ್ವಿಗೆ ರಾಜ್ಯೋತ್ಸವದ ಪ್ರಶಸ್ತಿಯನ್ನು ನೀಡಲಾಗಿದೆ. ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೬-೯೭ನೇ ಸಾಲಿನ ವಾರ್ಷಿಕ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.