೧೩-೧೦-೧೯೪೩ ರಂದು ಬೆಂಗಳೂರಿನಲ್ಲಿ ಜನಿಸಿದ ವಾಸುದೇವರಾವ್‌ ಅವರ ತಂದೆ ಮನ್ನಾಜಿರಾವ್‌, ಅಣ್ಣ ಜೈಮುನಿರಾವ್‌ ಹಿಂದೂಸ್ಥಾನಿ ಸಂಗೀತ ವಿದ್ವಾಂಸರಾಗಿದ್ದವರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿನ ಲಯ ವಾದ್ಯದೆಡೆ ಆಕರ್ಷಿತರಾದ ವಾಸುದೇವರಾವ್‌ ಅವರಿಗೆ ಶಿಕ್ಷಣ ನೀಡಿ ಅವರು ಉತ್ತಮ ಮೃದಂಗ ವಾದಕರಾಗಲು  ಕಾರಣರಾದವರು ಹೆಚ್‌. ಪುಟ್ಟಾಚಾರ್. ದೀರ್ಘಕಾಲದ ಕಠಿಣ ಶಿಕ್ಷಣ ಸಾಧನೆಗಳಿಂದ ಶ್ರೀಯುತರು ಪಕ್ವ ಕಲಾವಿದರಾದರು. ವಿದ್ವತ್‌ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು.

ನಗರದ ಪ್ರತಿಷ್ಟಿತ ಜಿ.ಕೆ. ಫೌಂಡೇಶನ್ನಿನ ದಿ ವ್ಯಾಲಿ ಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಜ್ಞಾನೋದಯ ಪ್ರೌಢಶಾಲೆಯಲ್ಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ವಾಣಿ ಸಂಗೀತ ವಿದ್ಯಾಲಯ ಹಾಗೂ ಗಾನ ಮಂದಿರಂನಲ್ಲಿ ಲಯ ವಾದ್ಯಗಳಲ್ಲಿ ತರಬೇತಿ ನೀಡಿರುತ್ತಾರೆ. ಗಾಯನ ಹಾಗೂ ಡೋಲಕ್‌ ವಾದನದಲ್ಲೂ ಪರಿಶ್ರಮವಿರುವ ಇವರು ‘ಗಾಯನ ಗಂಗಾ’ ಸಂಗೀತ ಮಾಸಿಕ ಪತ್ರಿಕೆಯಲ್ಲಿ ಮೃದಂಗ ವಾದನದ ಬಗ್ಗೆ ಪಾಠಗಳನ್ನು ಧಾರಾವಾಹಿಯಾಗಿ ಬರೆಯುತ್ತಿದ್ದರು.

ರಾಜ್ಯದ, ನೆರೆ ರಾಜ್ಯಗಳ ಪ್ರತಿಷ್ಠಿತ ಸಂಘ-ಸಂಸ್ಥೆ-ಸಭೆಗಳಲ್ಲೂ ಕ್ಷೇತ್ರದ ಹೆಸರಾಂತ ಕಲಾವಿದರುಗಳಿಗೂ ಮೃದಂಗ ಸಹಕಾರ ನೀಡಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಸಂಗೀತ ಪರೀಕ್ಷಾ ಮಂಡಳಿಯಲ್ಲಿಯೂ ಇವರ ಸೇವೆ ಗಣನೀಯ. ಇವರ ಅನೇಕಾನೇಕ ಶಿಷ್ಯರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವುದು ಇವರು ಉತ್ತಮ ಗುರು ಎನ್ನುವುದಕ್ಕೆ ಸಾಕ್ಷಿಯಾಗಿದೆ.

‘ಲಯ ಸುರಭಿ’ ಲಯವಾದ್ಯ ತಂಡ ಇವರಿಂದ ಶಿಕ್ಷಣ ಪಡೆದಿರುವ ಘಟ, ತಬಲ, ಮೃದಂಘ, ಡೋಲಕ್‌, ಮೋರ್ಚಿಂಗ್‌, ಖಂಜಿರ ಇತ್ಯಾದಿ ಲಯವಾದ್ಯ ಕಲಾವಿದರಿಂದ ಕೂಡಿದ್ದು ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿ ಪ್ರಖ್ಯಾತವಾಗಿದೆ. ಕೆಲವು ವಿದೇಶಿ ವಿದ್ಯಾರ್ಥಿಗಳೂ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ಹಲವಾರು ಸಂಸ್ಥೆಗಳಿಂದ ‘ಮೃದಂಗ ವಾದನ ರತ್ನ’ ‘ಮೃದಂಗ ವಾದನ ಕಲಾ ಭೂಷಣ’ , ‘ಲಯ ವಾದ್ಯ ಚತುರ’, ‘ನಾದ ಚಿಂತಾಮಣಿ’ ಮುಂತಾದ ಗೌರವಗಳನ್ನು ಪಡೆದಿರುವ ಶ್ರೀಯುತರನ್ನು ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಎಂದೂ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಪ್ರಸ್ತುತ ವಾಸುದೇವರಾವ್‌ ಅವರು ಶಿಷ್ಯರಿಗೆ ಶಿಕ್ಷಣ ನೀಡುತ್ತ, ಕಛೇರಿಗಳಿಗೆ ನುಡಿಸುತ್ತ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ.