೧೯೪೬ರಲ್ಲಿ ಅಮೆರಿಕದಲ್ಲಿ ನಡೆದ ಒಂದು ಸಂಗತಿ ಇದು.

ಅಮೆರಿಕ ಕೈಗಾರಿಕೆಗಳಲ್ಲಿ ಬಹಳ ಮುಂದುವರೆದ ದೇಶವಷ್ಟೆ? ಅಲ್ಲಿನ ಕಾರ್ಖಾನೆಗಳಿಗೆ ಭೇಟಿಕೊಟ್ಟು ನಮ್ಮ ದೇಶಕ್ಕೆ ಪ್ರಯೋಜನವಾಗುವಂತಹ ವಿಷಯಗಳನ್ನು ತಿಳಿದು ಬರಲು ಕೆಲವರು ಅಮೆರಿಕಕ್ಕೆ ಹೋದರು. ನಮ್ಮ ದೇಶದಲ್ಲಿ ಹಲವು ಬಗೆಯ ಸಾಮಾನುಗಳನ್ನು ತಯಾರುಮಾಡುತ್ತಾರಲ್ಲ, ಅವರ ಸಂಘ ಈ ಜನರನ್ನು ಕಳುಹಿಸಿತು. ಆ ಸಂಘದ ನಾಯಕರಿಗೆ ಆಗ ೯೧ ವರ್ಷ ವಯಸ್ಸು. !

ಒಂದು ಕಾರ್ಖಾನೆಗೆ ಹೋದಾಗ ಅಧಿಕಾರಿಗಳು ಅವರನ್ನೆಲ್ಲ ಕಾರ್ಖಾನೆಯ ಬೇರೆ ಬೇರೆ ಭಾಗಗಳಿಗೆ ಕರೆದುಕೊಂಡು ಹೋಗಿ ವಿಷಯಗಳನ್ನು ತಿಳಿಸುತ್ತಿದ್ದರು. ಒಂದು ಕಡೆ ನಡೆಯುತ್ತಿದ್ದ ಕೆಲಸವನ್ನು ವಿವರಿಸಿದರು. ಅದನ್ನು ಕಣ್ಣಾರೆ ನೋಡಬೇಕಾದರೆ ಮೇಲಕ್ಕೆ ಹತ್ತಿ ಹೋಗಬೇಕು.

ಎಷ್ಟು ಎತ್ತರ ಗೊತ್ತೆ? ೭೫ ಅಡಿಗಳು. ನಾಲ್ಕು ಅಂತಸ್ತುಗಳನ್ನು ದಾಟಿ ಹತ್ತಬೇಕು. ಹತ್ತುವುದಕ್ಕೆ ಸುಲಭವಾದ ಮೆಟ್ಟಿಲುಗಳಿಲ್ಲ, ಉಕ್ಕಿನ ಏಣಿ!

೯೧ ವರ್ಷದ ಆ ನಾಯಕರು ಅಧಿಕಾರಿಗಳು ಹೇಳಿದುದನ್ನೆಲ್ಲಾ ಕೇಳಿದರು. ’ಮೇಲೆ ಹೋಗಿ ನೋಡೋಣ” ಎಂದರು.

ಎಲ್ಲರಿಗೂ ಆಶ್ಚರ್ಯ, ಭಯ. ಆ ವೃದ್ಧರು ಸರಸರನೆ ಏಣಿಯನ್ನು ಹತ್ತಲು ಪ್ರಾರಂಭಿಸಿದರು.

ಅವರು ಹತ್ತಿದರೆಂದು ಇನ್ನು ಕೆಲವರು ಹತ್ತಿದರು. ಬಹುಮಂದಿ ಕೆಳಗೇ ಉಳಿದರು. ೯೧ ವರ್ಷದ ವೃದ್ಧರು ಮೇಲೆ ಹೋಗಿ ಎಲ್ಲವನ್ನೂ ನೋಡಿಕೊಂಡು ಸರಸರನೆ ಇಳಿದು ಬಂದರು. ಅವರ ಜೊತೆಗೆ ಹತ್ತಿ ಇಳಿದವರು ಮೂರೇ ಜನ.

ಮಾಡುವ ಕೆಲಸವನ್ನು ಸ್ವಲ್ಪವೂ ಲೋಪ ಮಾಡದೆ ಮುಗಿಸಬೇಕೆಂಬ ನಿಶ್ಚಯದ ಆ ನಾಯಕರು ಭಾರತರತ್ನ ಡಾಕ್ಟರ‍್ ಸರ‍್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಸಾಮಾನ್ಯವಾಗಿ ಜನ ಅವರನ್ನು ಕರೆಯುತ್ತಿದಿದ್ದು ’ಸರ‍್ ಎಂ.ವಿ. ’ ಎಂದೇ. (ಆಗ ಬ್ರಿಟಿಷ್ ಸರ್ಕಾರ ’ನೈಟ್ ಹುಡ್”ಎಂಬ ಪ್ರಶಸ್ತಿ ಕೊಟ್ಟವರ ಹೆಸರಿನ ಹಿಂದೆ ’ಸರ‍್”ಎಂದು ಸೇರಿಸುವುದು ಪದ್ಧತಿ)

ನಮ್ಮ ಕರ್ನಾಟಕ ವಿಷಯ ಯೋಚಿಸಿದಾಗ ಎಷ್ಟು ಮುಂದುವರೆದಿದ್ದೇವೆ ಎಂದು ಹೆಮ್ಮೆಯಾಗುತ್ತದೆ. ಅಲ್ಲವೇ? ಮೈಸೂರು ನಗರಕ್ಕೆ ಹತ್ತಿರ ಇರುವ ಕೃಷ್ಣರಾಜ ಸಾಗರ ಕೆ.ಆರ‍್.ಎಸ್. ಅಥವಾ ಬೃಂದಾವನ ನೋಡಿ ಬೆರಗಾಗದವರು ಯಾರು? ಇದು ಗಾತ್ರದಲ್ಲಿ ಪ್ರಪಂಚದಲ್ಲಿಯೇ ಎರಡನೆಯದು. ಇದರಿಂದ ಒಂದು ಲಕ್ಷ ಇಪ್ಪತ್ತು ಸಾವಿರ ಎಕರೆಗಳಿಗೆ ನೀರು. ಸಾವಿರಾರು ಊರುಗಳಿಗೆ ಮತ್ತು ಹಳ್ಳಿಗಳಿಗೆ ವಿದ್ಯುಚ್ಛಕ್ತಿ.

ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಇಡೀ ಭಾರತಕ್ಕೇ ಎಷ್ಟು ಪ್ರಯೋಜನ!

ಮೈಸೂರಿನ ಗಂಧದೆಣ್ಣೆ, ಮೈಸೂರಿನ ಸಾಬೂನು ಎಂದರೆ ಇಡೀ ಪ್ರಪಂಚದಲ್ಲಿಯೇ ಪ್ರಖ್ಯಾತಿ. ಇದಕ್ಕಾಗಿಯೇ ಇರುವುದು ಮೈಸೂರಿನ ಗಂಧದೆಣ್ಣೆ ಕಾರ್ಖಾನೆ. ಮೈಸೂರಿನ ಸಾಬೂನು ಕಾರ್ಖಾನೆ.

ಭಾರತದ ಬಹಳ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದು ಮೈಸೂರು ವಿಶ್ವವಿದ್ಯಾಲಯ. ಊರುಗಳಲ್ಲೆಲ್ಲಾ, ಕರ್ನಾಟಕ ಊರುಗಳಲ್ಲಿ ಮಾತ್ರವಲ್ಲ, ಭಾರತದ ದೊಡ್ಡ ದೊಡ್ಡ ಊರುಗಳಲ್ಲೆಲ್ಲಾ, ಸ್ಟೇಟ್ ಬ್ಯಾಂಕ ಆಫ್ ಮೈಸೂರಿನ ( ಹಿಂದೆ ಇದರ ಹೆಸರು ಮೈಸೂರು ಬ್ಯಾಂಕ್) ಶಾಖೆಗಳನ್ನು ನೋಡುತ್ತವೆ.

ಇವುಗಳಲ್ಲಿ ಒಂದೇ ಒಂದನ್ನು ನಮ್ಮ ದೇಶಕ್ಕೆ ಕೊಟ್ಟವರನ್ನು ಸಹ ನಾವು ಕೃತಜ್ಞತೆಯಿಂದ ಸ್ಮರಿಸಬೇಕು.

ಆದರೆ ಇಷ್ಟನ್ನೂ ಕೊಟ್ಟವರು ಒಬ್ಬರೇ ವ್ಯಕ್ತಿ. ಅದೂ ಭಾರತಕ್ಕೆ ಸ್ವಾತಂತ್ರ‍್ಯವಿಲ್ಲದೆ ಇದ್ದ ಕಾಲದಲ್ಲಿ, ನಮ್ಮ ದೇಶದಲ್ಲಿ ವಿಜ್ಞಾನದ ಅಭ್ಯಾಸ ಇನ್ನೂ ಕಡಿಮೆಯಾಗಿದ್ದ ಕಾಲದಲ್ಲಿ ಸುಮಾರು ೫೫ ವರ್ಷಗಳ ಹಿಂದೆ.

ಈ ಮಹಾಪುರುಷರು, ಕರ್ನಾಟಕದ ಭಗೀರಥ, ಭಾರತದ ರತ್ನ, ಸರ‍್ ಎಂ.ವಿ.

ವಿದ್ಯೆಗಾಗಿ ಶ್ರಮ

ವಿಶ್ವೇಶ್ವರಯ್ಯನವರು ಕೋಲಾರ ಜಿಲ್ಲೆಯ ಚಿಕ್ಕಬಳ್ಲಾಪುರ ತಾಲ್ಲೂಕಿನ ಮದ್ದೇನಹಳ್ಳಿಯಲ್ಲಿ ೧೮೬೧ರ ಸೆಪ್ಟಂಬರ‍್ ೧೫ ರಂದು ಹುಟ್ಟಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರಿಗಳು, ತಾಯಿ ವೆಂಕಾಚಮ್ಮ. ತಂದೆ ಒಳ್ಳೆಯ ಸಂಸ್ಕೃತ ವಿದ್ವಾಂಸರು. ತಂದೆ ತಾಯಿ ಇಬ್ಬರದೂ ಬಹು ಒಳ್ಳೆಯ ಪರೋಪಕರಾದ ಸ್ವಭಾವ. ನಮ್ಮ ದೇಶದ ಸಂಸ್ಕೃತಿ, ಆಚಾರಗಳು ಇವುಗಳಲ್ಲಿ ಭಕ್ತಿಯು ವಿಶ್ವೇಶ್ವರಯ್ಯನವರಿಗೆ ತಂದೆ, ತಾಯಿಯವರಿಂದ ಬಂದಿತು.

ವಿಶ್ವೇಶ್ವರಯ್ಯನವರು ಪ್ರಾರಂಭದ ವಿದ್ಯಾಭ್ಯಾಸವನ್ನು ಚಿಕ್ಕಬಳ್ಳಾಪುರದಲ್ಲಿ ಮಾಡಿ, ಹೈಸ್ಕೂಲಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಅಲ್ಲಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜನ್ನು ಸೇರಿದರು.

ಆದರೆ ಕೈಯಲ್ಲಿ ಕಾಸಿಲ್ಲ, ವಾಸಕ್ಕೆ ಮನೆ ಇಲ್ಲ.

ಕೊಡಗಿನಿಂದ ಬೆಂಗಳೂರಿಗೆ ಬಂದಿದ್ದ ಒಂದು ಸಂಸಾರದ ಮಕ್ಕಳಿಗೆ ಪಾಠ ಹೇಳುವವರು ಯಾರಾದರೂ ಬೇಕಾಗಿತ್ತು. ವಿದ್ಯಾರ್ಥಿ ವಿಶ್ವೇಶ್ವರಯ್ಯನವರು ಈ ಕೆಲಸ ಒಪ್ಪಿಕೊಂಡು ಒಂದಿಷ್ಟು ಹಣ ಸಂಪಾದಿಸಿದರು. ವಾಸವೂ ಅವರ ಮನೆಯಲ್ಲೆ. ಮುಂದೆ ದೊಡ್ಡವರಾದ ಮೇಲೆ ಬೆಂಗಳೂರಿನಲ್ಲಿ ಒಂದು ಪಾಲಿಟೆಕ್ನಿಕ್ ಶಾಲೆಯ ಸ್ಥಾಪನೆಗಾಗಿ ತಾವೇ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ಕೊಟ್ಟ ವಿಶ್ವೇಶ್ವರಯ್ಯನವರು ಅದೇ ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಒಂದೊಂದು ರೂಪಾಯಿಯನ್ನೂ ಕಷ್ಟಪಟ್ಟು ಸಂಪಾದಿಸಿದರು.

ವಿದ್ಯಾರ್ಥಿಯಾಗಿದ್ದ ದಿನಗಳಿಂದ ವಿಶ್ವೇಶ್ವರಯ್ಯನವರದು ಬಹು ಶಿಸ್ತಿನ ಜೀವನ. ಬೆಳಿಗ್ಗೆ ಗೊತ್ತಾದ ಕಾಲಕ್ಕೆ ಬೇಗನೆ ಎದ್ದು ಕೆಲಸ ಪ್ರಾರಂಭಿಸುವರು. ಅವತ್ತಿನ ಕೆಲಸ ಅವತ್ತೇ ಮಾಡಿ ಮುಗಿಸಬೇಕು. ಊಟ, ಉಡಿಗೆ ಎಲ್ಲ ಶುಭ್ರವಾಗಿ, ಶಿಸ್ತಾಗಿ ನಡೆಯಬೇಕು. ಇದೇ ರೀತಿ ನೂರು ವರ್ಷ ತುಂಬುವವರೆಗೆ ಬಾಳಿದರು ಈ ಮಹಾನುಭಾವ.

೧೮೮೧ರ ಬಿ.ಎ. ಪರೀಕ್ಷೆಯಲ್ಲಿ ಬಹು ಮೇಲಿನ ಸ್ಥಾನ ಬಂದಿತು. ಈ ಬಡ ಹುಡುಗನಿಗೆ. ಮೈಸೂರು ಸರ್ಕಾರದ ಸಹಾಯದಿಂದ ಪೂನಾದ ಸೈನ್ಸ್ ಕಾಲೇಜ್ ಸೇರಿ ಎಂಜಿನಿಯರಿಂಗ್ ಓದಿದರು. ೧೮೮೩ರಲ್ಲಿ ಎಲ್.ಸಿ.ಇ. ಮತ್ತು ಎಫ್.ಸಿ.ಇ. ಪರೀಕ್ಷೆಗಳಲ್ಲಿ (ಎಂದರೆ ಈಗಿನ ಬಿ.ಇ. ಪರೀಕ್ಷೆಯಂತೆ) ಮೊದಲನೆಯವರಾಗಿ ಉತ್ತೀರ್ಣರಾದರು.

ಪರೀಕ್ಷೆಯಲ್ಲಿ ಉತ್ತೀರ್ಣರಾದುದೇ ತಡ, ವಿಶ್ವೇಶ್ವರಯ್ಯನವರನ್ನು ಬೊಂಬಾಯಿ ಸರ್ಕಾರ ಕರೆದು ಕೆಲಸ ಕೊಟ್ಟಿತು. ನಾಸಿಕ್ ಜಿಲ್ಲೆಯಲ್ಲಿ ಅಸಿಸ್ಟೆಂಟ್ ಎಂಜಿನಿಯರಾಗಿ ನೇಮಿಸಿತು.

ಎಂಜಿನಿಯರಾಗಿ ಭಾಗ್ಯಶಿಲ್ಪಿಯ ಕೆಲಸ ಪ್ರಾರಂಭ

ಎಂ.ವಿ.ಗೆ ಇನ್ನೂ ಮೂವತ್ತೆರಡು ಷರ್ಷ. ಆಗಲೇ ಅವರು ಬಹುಕಷ್ಟದ ಕೆಲಸಗಳನ್ನು ನಿರ್ವಹಿಸಬೇಕಾಯಿತು. ಇಂತಹ ಹತ್ತಾರು ಕೆಲಸಗಳಲ್ಲಿ ಒಂದೆರಡು ಉದಾಹರಣೆಗಳನ್ನು ಕೊಡಬಹುದು. ಸಕ್ಕೂರು ಎಂಬ ಸ್ಥಳಕ್ಕೆ ಸಿಂಧು ನದಿಯಿಂದ ನೀರನ್ನು ತರುವ ಏರ್ಪಾಟು ಮಾಡಬೇಕಾಯಿತು. ಇದಕ್ಕೆ ವಿಶ್ವೇಶ್ವರಯ್ಯನವರು ತಾವೇ ಯೋಚನೆ ಮಾಡಿ ಹೊಸ ರೀತಿಯನ್ನು ಕಂಡು ಹಿಡಿದರು. ಅನೇಕ ಎಂಜಿನಿಯರುಗಳೇ ಅವರ ಯೋಜನೆಯನ್ನು ಮೆಚ್ಚಿ ಕೊಂಡರು.

ಭಾರತದಲ್ಲಿ ನೀರಾವರಿ ಬೇಸಾಯಕ್ಕೆ ಸಹಾಯ ಮಾಡಲು ಸರ್ಕಾರ ಒಂದು ಸಮಿತಿಯನ್ನು ಮಾಡಿತು. ಇಲ್ಲಿಯೂ ಕಷ್ಟವನ್ನು ಪರಿಹರಿಸಿದವರು ವಿಶ್ವೇಶ್ವರಯ್ಯನವರೇ. ಅವರು ವಿಭಾಗ ಪದ್ಧತಿಯೊಂದನ್ನು ಕಂಡು ಹಿಡಿದರು. ಇದಕ್ಕೆ ’ಬ್ಲಾಕ್ ಸಿಸ್ಟಂ’ ಎಂದು ಹೆಸರು. ಜಲಾಶಯಗಳಲ್ಲಿ ನೀರು ಉಪಯೋಗವಿಲ್ಲದೆ ಹರಿದು ಹೋಗುವುದನ್ನು ತಪ್ಪಿಸಲು ಅವರು ಹೊಸ ರೀತಿಯ ಉಕ್ಕಿನ ಬಾಗಿಲುಗಳನ್ನು ತಯಾರಿಸಿದರು. ಅವರ ಈ ಹೊಸ ರಚನೆಯನ್ನು ಬ್ರಿಟನ್ನಿನ ಅಧಿಕಾರಿಗಳು ಸಹ ಆಶ್ಚರ್ಯದಿಂದ ಹೊಗಳಿದರು.

ಕಷ್ಟವಾದ ಕೆಲಸಗಳನ್ನು ಸಾಧಿಸಿದಂತೆ ಅವರಿಗೆ ಸರ್ಕಾರದಲ್ಲಿ ಮೇಲೆ ಮೇಲಿನ ಸ್ಥಾನಗಳು ದೊರೆತವು. ಮೇಲಿನ ಸ್ಥಾನಗಳು ದೊರೆತಂತೆ ಇನ್ನಷ್ಟು ಕಷ್ಟದ ಕೆಲಸಗಳನ್ನು ಮಾಡಬೇಕಾಯಿತು. ಅದರೆ ಅವರ ಬುದ್ಧಿಶಕ್ತಿ ಯಾವ ಸವಲಾನ್ನಾದರು ಎದುರಿಸಲು ಸಿದ್ಧವಾಗಿತ್ತು.

ಏಡನ್ ನಗರ ಭಾರತದಿಂದ ಸೂಯಜ್ ಕಾಲುವೆಯನ್ನು ಪ್ರವೇಶಿಸುವಾಗ ಮೊದಲನೆಯ ಬಂದರು. ಅದರ ಸುತ್ತ ಮರುಭೂಮಿ. ಅಲ್ಲಿ ಕುಡಿಯುವ ನೀರು ಸಿಕ್ಕುವುದೇ ಕಷ್ಟ. ಸಮುದ್ರದ ನೀರನ್ನು ಕಾಯಿಸಿ ಉಗಿಯಿಂದ ಕುಡಿಯುವ ನೀರನ್ನು ಪಡೆಯಬೇಕು. ಏಡನ್ನಿನಿಂದ ಅರವತ್ತು ಮೈಲಿ ದೂರದಲ್ಲಿ ಬಿದ್ದ ಮಳೆಯ ನೀರನ್ನು ಆ ಊರಿಗೆ ಒದಗಿಸಲು ವಿಶ್ವೇಶ್ವರಯ್ಯನವರು ಒಂದು ಯೋಜನೆಯನ್ನು ಮಾಡಿದರು. ಕೊಲ್ಲಾಪುರ ನಗರದ ಸರೋವರದ ಒಂದು ಭಾಗ ಕುಸಿದು, ಅಪಾಯ ಒದಗಿತ್ತು. ಇದನ್ನೂ ಎಂ.ವಿ. ಸರಿಪಡಿಸಿದರು.

ಬೊಂಬಾಯಿ ಸರ್ಕಾರದ ಕೆಲಸವನ್ನು ಬಿಟ್ಟ ನಂತರ ವಿಶ್ವೇಶ್ವರಯ್ಯನವರು ಹೈದರಾಬಾದಿನಲ್ಲಿ ವಿಶೇಷ ಎಂಜಿನಿಯರಾದರು. ಹೈದರಾಬಾದಿಗೆ ಅವರು ಮಾಡಿದ ದೊಡ್ಡ ಉಪಕಾರ ಎಂದರೆ ಮೂಸಾ ನದಿಗೆ ಅಣೆಕಟ್ಟು ಕಟ್ಟಿದ್ದು. ಈ ನದಿ ಹೈದರಾಬಾದ್ ನಗರದ ಮಧ್ಯೆ ಹರಿಯುತ್ತದೆ. ೧೯೦೮ರಲ್ಲಿ  ಇದರಲ್ಲಿ ಅಸಾಧಾರಣ ಪ್ರವಾಹ ಬಂದಿತು. ನೀರು ಉಕ್ಕಿ ಹರಿದು ಎಷ್ಟೋ ಮನೆಗಳಿಗೆ ನುಗ್ಗಿತು. ಮನೆಗಳು ಕುಸಿದವು. ಜನ, ದನ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ನದಿಯನ್ನು ಪಳಗಿಸಿದವರು ವಿಶ್ವೇಶ್ವರಯ್ಯನವರು. ಮತ್ತೆ ಅನಾಹುತವಾಗದಂತೆ ಮೂಸಾ ನದಿಗೂ, ಈಸಾ ಎಂಬ ನದಿಗೂ ಅಣೆಕಟ್ಟುಗಳನ್ನು ಕಟ್ಟಲು ಯೋಜನೆಯನ್ನು ಸಿದ್ಧಮಾಡಿಕೊಟ್ಟರು. ಇವುಗಳ ದಡಗಳ ಮೇಲೂ ಸುಂದರವಾದ ಉದ್ಯಾನಗಳನ್ನು ರಚಿಸಬೇಕು ಎಂದು ಸಲಹೆ ಮಾಡಿದರು. ಇವತ್ತು ಹೈದರಾಬಾದಿಗೆ ಹೋದವರು ಅಣೆಕಟ್ಟನ್ನೂ, ಉದ್ಯಾನಗಳನ್ನೂ ನೋಡಬಹುದು.

ಈಗ ನಾವು ’ಮೈಸೂರು’ (ಕರ್ನಾಟಕ) ಎಂದು ಕರೆಯುತ್ತೇವಲ್ಲ, ಈ ರಾಜ್ಯ ಹಿಂದೆ ಇಷ್ಟಿರಲಿಲ್ಲ. ಈಗ ೨೭ ಜಿಲ್ಲೆಗಳಿವೆ, ಅಲ್ಲವೆ? ಆಗ ಇದ್ದದ್ದು ೭ ಜಿಲ್ಲೆಗಳು ಮೈಸೂರು, ಬೆಂಗಳೂರು, ತುಮಕೂರು, ಹಾಸನ, ಕಡೂರು ಚಿತ್ರದುರ್ಗ, ಶಿವಮೊಗ್ಗ ಮತ್ತು ಕೋಲಾರ. ಇದನ್ನು ಮಹಾರಾಜರೊಬ್ಬರು ಆಳುತ್ತಿದ್ದರು. ಇವರು ಬ್ರಿಟಿಷ್ ಸರ್ಕಾರಕ್ಕೆ ಅಧೀನ.

ವಿಶ್ವೇಶ್ವರಯ್ಯನವರು ಎಂಜಿನಿಯರಾಗಿ ಕಟ್ಟಡಗಳು, ರಸ್ತೆಗಳು, ಸೇತುವೆಗಳ ವಿಷಯದಲ್ಲಿ ಮಾತ್ರವೇ ಯೋಚಿಸಲಿಲ್ಲ. ಭಾರತದಲ್ಲಿ ಆಗ ಜನರ ಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಇದ್ದ ಶಾಲೆಗಳು ಬಹಳ ಕಡಿಮೆ. ಓದು ಬರಹ ಬಲ್ಲವರು ನೂರು ಜನಕ್ಕೆ ಆರು ಜನ. ಇದನ್ನು ೯೪ ಮಂದಿ ಅಕ್ಷರವೇ ತಿಳಿಯದವರು! ದೊಡ್ಡ ಕಾರ್ಖಾನೆಗಳಿಲ್ಲ, ಇದರಿಂದ ಜನರಿಗೆ ಕೆಲಸಗಳು ಸಿಕ್ಕುವುದು ಕಷ್ಟ. ಸರ್ಕಾರದಲ್ಲಿ ಕೆಲಸ ಸಿಕ್ಕಬೇಕು, ಇಲ್ಲವೇ ವ್ಯವಸಾಯ, ವ್ಯಾಪಾರ ಇದೇ ಆಧಾರ. ಅಲ್ಲದೆ ಎಲ್ಲ ಸಾಮಾನುಗಳನ್ನೂ ಬೇರೆ ದೇಶಗಳಿಂದ ತರಿಸಬೇಕು. ಬೇಸಾಯಕ್ಕೆ ಮಳೆಯೇ ಗತಿ. ಮಳೆ ಬಾರದೆ ಹೋದರೆ ಲಕ್ಷಾಂತರ ಸಂಸಾರಗಳು ನಿರ್ಗತಿಕ. ದೇಶಕ್ಕೆ ಆಹಾರದ ಅಭಾವ. ಬೇಸಾಯಕ್ಕೆ ಜನ ಉಪಯೋಗಿಸುತ್ತಿದ್ದುದು ನೂರಾರು ವರ್ಷಗಳ ಹಿಂದಿನ ರೀತಿಗಳನ್ನು ಮತ್ತು ಸಲಕರಣೆಗಳನ್ನು. ಹೀಗಾಗಿ ಈ ದೇಶದಲ್ಲಿ ಒಬ್ಬ ಮನುಷ್ಯನ ದಿನದ ಸರಾಸರಿ ಆದಾಯ ಒಂದಾಣೆ, ಎಂದರೆ ಈಗಿನ ಆರು ಪೈಸೆ. ಎಷ್ಟೋ ಹಳ್ಳಿಗಳಲ್ಲಿ ಆಸ್ಪತ್ರೆ ಇಲ್ಲ. ದೇಶದ ಹಲವು ಭಾಗಗಳಲ್ಲಿ ಒಳ್ಳೆಯ ರಸ್ತಗಳಿಲ್ಲ. ಅಜ್ಞಾನ, ಬಡತನ, ಅನಾರೋಗ್ಯ ಎಲ್ಲೆಲ್ಲೂ ಜನರನ್ನು ಕಾಡುತ್ತಿದ್ದವು. ಜನರನ್ನು ಅಜ್ಞಾನ, ಬಡತನ, ಅನಾರೋಗ್ಯ ಇವುಗಳಿಂದ ಬಿಡಿಸುವುದು ಹೇಗೆ ಎಂದು ಯೋಚಿಸಿ ತೀರ್ಮಾನಗಳನ್ನು ಮಾಡಲು ’ಸಂಪದಭಿವೃದ್ಧಿ ಸಮ್ಮೇಳನ’ ವೊಂದನ್ನು ಸ್ಥಾಪಿಸಬೇಕೆಂದು ವಿಶ್ವೇಶ್ವರಯ್ಯನವರು ಸಲಹೆ ಮಾಡಿದರು. ಮೈಸೂರಿನ ಹತ್ತಿರ ಇರುವ ಕೃಷ್ಣರಾಜ ಸಾಗರದ ವಿಷಯ ಆಗಲೇ ಪ್ರಸ್ತಾಪಿಸಿದೆ. ಇಲ್ಲಿ ಸುಮಾರು ಐವತ್ತು ಚದರ ಮೈಲಿ ವಿಸ್ತಾರದ ಕೃತಕ ಸರೋವರವನ್ನು ಮಾಡಿದರು. ಇದರಿಂದ, ನೀರೇ ಕಾಣದ ಮಂಡ್ಯ ಜಿಲ್ಲೆಯಲ್ಲಿ ಹೊಲಗದ್ದೆಗಳು ನಗುನಗುತ್ತಿರುವಂತಾಯಿತು. ಈ ಜಲಾಶಯವನ್ನು ಕಟ್ಟಿದಾಗ ನಮ್ಮ ದೇಶದಲ್ಲಿ ಸಿಮೆಂಟ್ ತಯಾರಾಗುತ್ತಿರಲಿಲ್ಲ. ಅದಕ್ಕಿಂತ ಗಟ್ಟಿಯಾದ ಗಾರೆಯನ್ನು ನಮ್ಮ ದೇಶದ ಎಂಜಿನಿಯರರ್‌ಗೆ ತರಿಸಿದರು. ಅಲ್ಲದೇ ಇದೇ ಯೋಜನೆಯಿಂದ ಸಮೃದ್ಧವಾಗಿ ವಿದ್ಯುಚ್ಛಕ್ತಿಯನ್ನು ಪಡೆಯಲು ಸಾಧ್ಯವಾಯಿತು.

ಮೂರು ವರ್ಷ ವಿಶ್ವೇಶ್ವರಯ್ಯನವರು ಮುಖ್ಯ ಎಂಜಿನಿಯರಾಗಿದ್ದರು.

ಹಿಂದಿನ ಮೈಸೂರಿನಲ್ಲಿ ಮಂತ್ರಿಗಳನ್ನು ಮಹಾರಾಜರೇ ನೇಮಿಸುತ್ತಿದ್ದರು. ಸಾಮಾನ್ಯವಾಗಿ ಮೂರು ಜನ ಮಂತ್ರಿಗಳಿರುತ್ತಿದ್ದರು. ಇವರಲ್ಲಿ ಮುಖ್ಯರಾದವರಿಗೆ ’ದಿವಾನ್’ ಎಂದು ಹೆಸರು. ೧೯೧೨ರಲ್ಲಿ ಮಹಾರಾಜರು ವಿಶ್ವೇಶ್ವರಯ್ಯನವರನ್ನು ದಿವಾನರನ್ನಾಗಿ ನೇಮಿಸಿದರು.

ಮೈಸೂರಿನ ದಿವಾನರಾಗಿ ಆದರ್ಶ ಅಧಿಕಾರಿ

ವಿಶ್ವೇಶ್ವರಯ್ಯನವರು ದಿವಾನರಾದ ಕೆಲವು ದನಗಳಿಗೆ ಅವರ ಹತ್ತಿರದ ನೆಂಟರೊಬ್ಬರು – ಅವರ ವಿಶ್ವಾಸ ಪಡೆದಿದ್ದವರು ಅವರ ಹತ್ತಿರ ಹೋದರು. ಆತ ಸರ್ಕಾರದ ಕೆಲಸದಲ್ಲಿದ್ದರು. ಅದಕ್ಕಿಂತ ಮೇಲಿನ ಕೆಲಸ ಕೊಡಿಸಬೇಕೆಂದು ಕೇಳಿಕೊಂಡರು. ಮೇಲಿನ ಕೆಲಸ ಕೊಡಿಸಿದರೆ ಆತನಿಗೆ ತಿಂಗಳಿಗೆ ಐವತ್ತು ರೂಪಾಯಿ ಹೆಚ್ಚು ಸಿಕ್ಕುತ್ತಿತ್ತು.

ವಿಶ್ವೇಶ್ವರಯ್ಯನವರು ’ಆಗುವುದಿಲ್ಲ’ ಎಂದರು

ಆದರೆ, ಆತ ಬದುಕಿರುವವರೆಗೆ, ತಿಂಗಳಿಗೆ ಒಂದು ನೂರು ರೂಪಾಯಿಯನ್ನು ತಮ್ಮ ಸಂಬಳದಿಂದ ಕಳುಹಿಸಿ ಕೊಡುತ್ತಿದ್ದರು.

’ದಿವಾನರು’ ಎಂದು ಅವರಿಗೆ ಒಂದು ಕಾರನ್ನು ಸರ್ಕಾರ ಕೊಟ್ಟಿತ್ತು. ಸರ್ಕಾರದ ಕೆಲಸಕ್ಕೆ ಹೋಗುವಾಗ ಅವರು ಸರ್ಕಾರದ ಕಾರನ್ನು ಬಳಸುತ್ತಿದ್ದರು. ಸ್ವಂತ ಕೆಲಸಕ್ಕ ಹೋಗುವಾಗ ತಮ್ಮ ಸ್ವಂತ ಕಾರು.

ಇಷ್ಟು ಪ್ರಾಮಾಣಿಕರು ಸರ‍್ ಎಂ.ವಿ. ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ಸ್ನಾನ ತೀರಿಸಿ ಶಿಸ್ತಾಗಿ ಉಡುಪು ಧರಿಸಿ ಕೆಲಸಕ್ಕೆ ಸಿದ್ಧ ದಿವಾನರು. ಒಂದು ಗಂಟೆಯವರೆಗೆ ಕೆಲಸ ಮಾಡುವರು. ಮತ್ತೆ ಮೂರು ಗಂಟೆಗೆ ಕೆಲಸ ಪ್ರಾರಂಭಿಸಿದರೆ ರಾತ್ರಿ ಎಂಟರವರಗೆ ಬಿಡುವೇ ಇಲ್ಲ. ಭೇಟಿಗೆ ಬರುವವರಿಗೆ ಇಷ್ಟು ಹೊತ್ತಿಗೆ ಬರಬೇಕು ಎಂದು ಮೊದಲೇ ತಿಳಿಸಿರುವರು. ಬಂದವರು ಬೇಡದ ಮಾತುಗಳಲ್ಲಿ ಕಾಲ ಕಳೆಯುವಂತಿಲ್ಲ. ಮಂತ್ರಿಗಳು ರಾಜ್ಯದ ಬೇರೆ ಬೇರೆ ಭಾಗಗಳಿಗೆ ಹೋಗಿ ಜನರ ಕಷ್ಟ, ಸುಖ ತಿಳಿದುಕೊಳ್ಳಬೇಕಲ್ಲವೆ? ವಿಶ್ವೇಶ್ವರಯ್ಯನವರು ಒಂದು ಜಿಲ್ಲೆಗೆ ಭೇಟಿ ಕೊಡುವ ಮೊದಲೇ, ಅಲ್ಲಿ ಸರ್ಕಾರದ ಬೇರೆ ಬೇರೆ ಇಲಾಖೆಯ ಅಧಿಕಾರಿಗಳಿಗೆ ಕಾಗದಗಳು ಹೋಗುವವು. ಜಿಲ್ಲೆಯಲ್ಲಿ ವ್ಯವಸಾಯಕ್ಕೆ ನೀರು ಹೇಗೆ ಒದಗುತ್ತದೆ, ಕೆರೆಗಳೆಷ್ಟು, ಭಾವಿಗಳೆಷ್ಟು, ಎಷ್ಟು ಎಕರೆ ಸಾಗುವಳಿ ಆಗುತ್ತಿದೆ, ಆಸ್ಪತ್ರೆಗಳೆಷ್ಟು, ಶಾಲೆಗಳೆಷ್ಟು ಹೀಗೆ ತಮ್ಮ ತಮ್ಮ ಇಲಾಖೆಯ ವಿವರಗಳನ್ನು ಅವರು ಕೊಡಬೇಕು. ಜನರಿಗೆ ಏನೇನು ಬೇಕು ಎಂಬುದನ್ನು ತಿಳಿಸಬೇಕು. ದಿವಾನರು ಹೋದಾಗ ಅಧಿಕಾರಿಗಳೊಡನೆ, ಜನರೊಡನೆ ಯೋಚಿಸುವರು, ತೀರ್ಮಾನ ಮಾಡುವರು, ಅವರು ಬೆಂಗಳೂರಿಗೆ ಬರುತ್ತಲೇ, ಪ್ರತಿ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಗೆ ಅವನು ಏನೇನು ಮಾಡಬೇಕು ಎಂದು ತಿಳಿಸಿ ಕಾಗದ ಹೋಗುವುದು. ಹೀಗೆ ದಿವಾನರ ಭೇಟಿಯಿಂದ ಸರ್ಕಾರಕ್ಕೆ ಮತ್ತು ಜನಕ್ಕೆ ಪೂರ್ಣ ಪ್ರಯೋಜನ.

ಅಧಿಕಾರ ತಮಗಾಗಿ ಅಲ್ಲ, ಜನಕ್ಕಾಗಿ ಎಂದು ವಿಶ್ವೇಶ್ವರಯ್ಯನವರು ಪ್ರತಿ ನಿಮಿಷ ನಡೆದುಕೊಳ್ಳುತ್ತಿದ್ದರು.

ವಿದ್ಯೆಯಲ್ಲಿ ವಿಶ್ವೇಶ್ವರಯ್ಯನವರಿಗೆ ತುಂಬ ಶ್ರದ್ದೆ. ಜನರ ಬಡತನ ಮತ್ತು ಕಷ್ಟಗಳಿಗೆ ಅವರಿಗೆ ವಿದ್ಯೆ ಇಲ್ಲದಿರುವುದು ಕಾರಣ ಎಂದು ಅವರ ಅಭಿಪ್ರಾಯ. ಆದುದರಿಂದ ಹೊಸದಾದ ಶಾಲೆಗಳನ್ನು ತೆರೆದರು. ಅವರು ದಿವಾನರಾದಾಗ (೧೯೧೨ರಲ್ಲಿ) ಸುಮಾರು ೪,೫೦೦ ಶಾಲೆಗಳಿದ್ದವು. ಆರು ವರ್ಷಗಳಲ್ಲಿ ಇನ್ನೂ ೬,೫೦೦ ಶಾಲೆಗಳನ್ನು ತೆರೆದರು. ಅವರು ದಿವಾನರಾದಾಗ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಮಂದಿ ಹುಡುಗರು, ಹುಡುಗಿಯರು ಓದುತ್ತಿದ್ದರು. ಅವರು ದಿವಾನ ಪದವಿ ಬಿಡುವ ಹೊತ್ತಿಗೆ ೧೯೧೮ರಲ್ಲಿ) ಸುಮಾರು ಮೂರು ಲಕ್ಷದ ಅರವತ್ತಾರು ಸಾವಿರ ಮಂದಿ ಹುಡುಗರು, ಹುಡುಗಿಯರು ಓದುತ್ತಿದ್ದರು. ಬಿ.ಎ., ಬಿ.ಎಸ್.ಸಿ, ಮೊದಲಾದ ತರಗತಿಗಳಲ್ಲಿ ಓದಲು ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಕಾಲೇಜ್ ಇರಲೇ ಇಲ್ಲ. ಮೈಸೂರಿನ ಮಹಾರಾಣಿ ಕಾಲೇಜನ್ನು ಮೊದಲನೆಯ ದರ್ಜೆಯ ಕಾಲೇಜಾಗಿ ಎಂದರೆ, ಬಿ.ಎ., ಬಿ.ಎಸ್.ಸಿ. ತರಗತಿಗಳಿರುವ ಕಾಲೇಜಾಗಿ ಮಾಡಿದರು. ಮೊಟ್ಟ ಮೊದಲನೆಯ ಬಾರಿಗೆ ವಿದ್ಯಾರ್ಥಿನಿಯರಿಗೇ ಹಾಸ್ಟೆಲ್ ಸ್ಥಾಪನೆಯಾಯಿತು. ಪ್ರತಿ ಕಾಲೇಜಿನ ಪಾಠಗಳ ರೀತಿ, ಪರೀಕ್ಷೆಗಳು ಎಲ್ಲದರ ಮೇಲ್ವಿಚಾರಣೆಯನ್ನು ಒಂದು ವಿಶ್ವವಿದ್ಯಾನಿಲಯ ನೋಡಿಕೊಳ್ಳಬೇಕು, ಅಲ್ಲವೆ? ಆಗ ಮೈಸೂರು ಸಂಸ್ಥಾನದ ಕಾಲೇಜುಗಳು ಮದರಾಸು ವಿಶ್ವವಿದ್ಯಾನಿಲಯಕ್ಕೆ ಸೇರಿದ್ದವು. ವಿಶ್ವೇಶ್ವರಯ್ಯನವರ ಸಾಹಸದಿಂದ, ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಭವಾಯಿತು. ಭಾರತೀಯ ರಾಜರು ಆಳುತ್ತಿದ್ದ ಸಂಸ್ಥಾನದಲ್ಲಿ ಮೊದಲನೆಯ ವಿಶ್ವವಿದ್ಯಾನಿಲಯ ಇದೇ. ಬುದ್ಧಿವಂತರಾದ ವಿದ್ಯಾರ್ಥಿಗಳು ಬೇರೆ ದೇಶಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸರ್ಕಾರ ’ಸ್ಕಾಲರ‍್ ಷಿಪ್’ ಕೊಡಲು ಏರ್ಪಟಾಯಿತು. ’ನಿರುದ್ಯೋಗ” ಎಂಬ ಮಾತನ್ನು ಆಗಾಗ ಕೇಳುತ್ತೇವೆ, ಅಲ್ಲವೆ? ಜೀವನ ಸಾಗಿಸಲು ಕೆಲಸ ಇಲ್ಲ ಎಂದು ಇದರ ಅರ್ಥ. ವಿಶ್ವೇಶ್ವರಯ್ಯನವರಿಗೆ, ಜೀವನ ನಡೆಸಲು ಸಾಧ್ಯವಾಗುವಂತಹ ವಿದ್ಯೆ ಕೊಡುವ ಶಾಲೆ ಕಾಲೇಜುಗಳು ಬೇಕು ಎಂದು ತೋರಿತು. ವ್ಯವಸಾಯದ ಹೊಸ ರೀತಿಗಳನ್ನು ಕಲಿಸಿಕೊಡಲು ವ್ಯವಸಾಯ ಶಾಲೆ ಪ್ರಾರಂಭವಾಯಿತು, ಎಂಜಿನಿಯರಿಂಗ್ ಕಾಲೇಜ್ ಪ್ರಾಋಂಭವಾಯಿತು. (ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ ಈ ಕಾಲೇಜಿಗೆ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯುರಿಂಗ್ ಎಂದು ಈಗ ಹೆಸರು) ಯಂತ್ರ ವಿಜ್ಞಾನದ ಶಾಲೆ ಪ್ರಾರಂಭವಾಯಿತು. ಪ್ರತಿ ಜಿಲ್ಲೆಯಲ್ಲಿ ಕೈಗಾರಿಕೆಯ ಕೆಲಸಗಳನ್ನು ಕಲಿಸುವ ಶಾಲೆಗಳಾದವು.

ಒಂದು ದೇಶ ಮುಂದುವರಿಯಬೇಕಾದರೆ ಅದರ ’ಕೈಗಾರಿಕೆಗಳು ಅಭಿವೃದ್ಧಿಯ’ಆಗಬೇಕು. ದೇಶದಲ್ಲಿ ಲೋಹ ಸಂಪತ್ತಿರುತ್ತದೆ; ನದಿಗಳಿರುತ್ತವೆ ವಿದ್ಯುಚ್ಛಕ್ತಿಯನ್ನು ಮಾಡಲು ಅನುಕೂಲವಿರುತ್ತದೆ; ಕಾಡುಗಳಿರುತ್ತವೆ; ಬಂದರುಗಳಿರುತ್ತವೆ. ಎಲ್ಲವನ್ನೂ ಬಳಸಿಕೊಂಡು, ಮನುಷ್ಯ ತನ್ನ ಬುದ್ಧಿಶಕ್ತಿ, ದೇಹಶಕ್ತಿಗಳನ್ನು ಸೇರಿಸಿ ಕೈಗಾರಿಕೆಗಳನ್ನು ಬೆಳೆಸಬೇಕು. ಕೈಗಾರಿಕೆ ಬೆಳೆದಂತೆ, ಹೆಚ್ಚು ಹೆಚ್ಚು ಜನರಿಗೆ ಕೆಲಸ ಇಕ್ಕುತ್ತದೆ. ಸಾಮಾನುಗಳು ತಯಾರಾಗಿ ದೇಶದ ಸಂಪತ್ತು ಹೆಚ್ಚುತ್ತದೆ. ಬೇರೆ ದೇಶಗಳಿಂದ ಸಾಮಾನುಗಳನ್ನು ತರಿಸುವುದು ಅಗತ್ಯವಾಗುವುದಿಲ್ಲ. ನಮ್ಮ ದೇಶದ ಸಾಮಾನುಗಳನ್ನು ಇತರ ದೇಶಗಳಿಗೆ ಮಾರಾಟ ಮಾಡಬಹುದು. ಹೀಗೆ ಈಗಿನ ಜಗತ್ತಿನಲ್ಲಿ ಕೈಗಾರಿಕೆ ದೇಶದ ಬೆನ್ನಲುಬು. ವಿಶ್ವೇಶ್ವರಯ್ಯನವರು ಇದನ್ನು ಗುರುತಿಸಿದರು. ಆಗಲೇ ಇದ್ದ ಕೈಗರಿಕೆಗಳು ಬೆಳೆಯಲು ಸಹಾಯ ಮಾಡಿದರು. ಉದಾಹರಣೆಗೆ, ರೇಷ್ಮೆ ಕೈಗಾರಿಕೆಯ ವಿಷಯ ಹೊಸ ವಿಷಯಗಳನ್ನು ಹೇಳಿಕೊಡಲು ಇಟಲಿ ಮತ್ತು ಜಪಾನ್ ಗಳಿಂದ ನಿಪುಣರನ್ನು ಕರೆಸಿದರು. ಎಷ್ಟೋ ಹೊಸ ಹೊಸ ಕಾರ್ಖಾನೆಗಳು ಹುಟ್ಟಿದುದು ಎಂ.ವಿ. ದಿವಾನರಾಗಿದ್ದಾಗಲೇ. ಗಂಧದೆಣ್ಣೆ ಕಾರ್ಖಾನೆ, ಸಾಬೂನು ಕಾರ್ಖಾನೆ, ಲೋಹದ ಕಾರ್ಖಾನೆ, ಚಮ್ ಹದಮಾಡುವ ಕಾರ್ಖಾನೆ ಎಲ್ಲ ಸ್ಥಾಪನೆಯಾದದ್ದು ಅವರ ಪ್ರಯತ್ನದಿಂದಲೇ. ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರಿಗೆ ದೊರೆತ ಕಾರ್ಖಾನೆಗಳಲ್ಲಿ ಬಹು ಮುಖ್ಯವಾದದ್ದು ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ. ಭಾರತ ಸ್ವತಂತ್ರವಾದ ಮೇಲೆ ನಮ್ಮ ಸರ್ಕಾರ ಎಷ್ಟು ಕಷ್ಟಪಟ್ಟು ಎಷ್ಟು ಖರ್ಚಿನಿಂದ ಹೊಸ ಉಕ್ಕಿನ ಕಾರ್ಖಾನೆಗಳನ್ನು ಪ್ರಾರಂಭಿಸಬೇಕಾಯಿತು! ಆದರೆ ಐವತ್ತೈದು ವರ್ಷಗಳ ಹಿಂದೆಯೇ ಸರ‍್ ಎಂ.ವಿ. ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಪ್ರಾರಂಭಿಸಿದರು.

ವಿಶ್ವೇಶ್ವರಯ್ಯನವರು ಕರ್ನಾಟಕದ ಭಾಗ್ಯಶಿಲ್ಪಿಯಾದರು

ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಮೈಸೂರಿನ ಭಾಗ್ಯ ಬೆಳೆಯುವಂತೆ ಮಾಡಿದ ಕೆಲಸಗಳನ್ನು ಸುಮ್ಮನೆ ಪಟ್ಟಿ ಮಾಡಿದರೆ ಪುಟಗಟ್ಟಲೆ ತುಂಬುತ್ತದೆ. ಒಂದು ದೇಶದ ವ್ಯಾಪಾರ ಮತ್ತು ಕೈಗಾರಿಕೆಗಳು ಹೆಚ್ಚಬೇಕಾದರೆ ಬ್ಯಾಂಕುಗಳು ಹೆಚ್ಚಬೇಕು. ಬ್ಯಾಂಕುಗಳು ಹಣವಿರುವವರಿಂದ ಬಡ್ಡಿ ಕೊಟ್ಟು ಹಣ ಪಡೆಯುತ್ತವೆ; ವ್ಯಾಪಾರಿಗಳಿಗೆ, ಕೈಗಾರಿಕೆ ನಡೆಸುವವರಿಗೆ, ಅಗತ್ಯವಾದಾಗ ಹಣ ಕೊಟ್ಟು ಸಹಾಯ ಮಾಡುತ್ತವೆ, ವ್ಯಾಪಾರಿಗಳು ಸಾಮಾನುಗಳನ್ನು ಊರಿಂದೂರಿಗೆ ಕಳುಹಿಸುವಾಗ, ಅವುಗಳ ಹಣವನ್ನು ಬ್ಯಾಂಕಿನ ಮೂಲಕ ಪಡೆದುಕೊಳ್ಳುವುದು ಸುಲಭ ಮತ್ತು ಕ್ಷೇಮ. ಎಂ.ವಿ. ಯವರ ಸಲಹೆ ಮತ್ತು ಪ್ರೋತ್ಸಾಹಗಳಿಂದ ಮೈಸೂರು ಬ್ಯಾಂಕ್ ಪ್ರಾರಂಭವಾಯಿತು. ಹೊರಗಿನಿಂದ ಬೆಂಗಳೂರಿಗೆ ಬರುವವರ ಅನುಕೂಲಕ್ಕಾಗಿ ಒಳ್ಳೆಯ ಹೋಟೆಲುಗಳು ಸ್ಥಾಪನೆಗೆ ಸಲಹೆ ಕೊಟ್ಟವರು ಸರ‍್ ಎಂ.ವಿ.  ಮೈಸೂರಿನಲ್ಲಿ ರೈಲುಗಳ ಸೌಕರ್ಯ ತಕ್ಕಷ್ಟಿರಲಿಲ್ಲ. ಇದ್ದ ರೈಲುಗಳ ಆಡಳಿತ ಭಾರತದ ಸರ್ಕಾರದ ಕೈಯಲ್ಲಿತ್ತು. ವಿಶ್ವೇಶ್ವರಯ್ಯನವರು ರೈಲುಗಳ ಆಡಳಿತ ಮೈಸೂರು ಸರ್ಕಾರಕ್ಕೆ ಬರುವಂತೆ ಮಾಡಿದರು. ಹೊಸ ರೈಲುಮಾರ್ಗಗಳನ್ನು ಹಾಕಿಸಿದರು.

ಇತರರು ಅರವತ್ತು ವರ್ಷಗಳಲ್ಲಿ ಮಾಡುವುದು ಸಾಧ್ಯವೇ ಎನ್ನುವಷ್ಟು ಕೆಲಸವನ್ನು ಆರು ವರ್ಷಗಳ ದಿವಾನಗಿರಿಯಲ್ಲಿ ಮಾಡಿದರು. ಎಂ.ವಿ. ಇವರೇನು ಮಾಂತ್ರಿಕರೊ  ಎಂದು ಬೆರಗಾಗುತ್ತೇವೆ  ಇವರ ಕೆಲಸವನ್ನು ನೆನೆಸಿಕೊಂಡಾಗ.

ವಿಶ್ರಾಂತ ದಿವಾನರಿಗೆ ನಿಮಿಷ ಬಿಡುವಿಲ್ಲ

೧೯೧೮ರಲ್ಲಿ ಸರ‍್ ಎಂ.ವಿ. ತಾವಾಗಿಯೇ ದಿವಾನ್ ಪದವಿಯನ್ನು ಬಿಟ್ಟರು. ಸಾಮಾನ್ಯವಾಗಿ ಹೇಳುವ ಹಾಗೆ, ರಿಟೈರ‍್ ಆದರು. ವಿಶ್ರಾಂತಿ ಪಡೆದರು.

ಸಾಧಾರಣವಾಗಿ ಕೆಲಸದಲ್ಲಿದ್ದವರು ’ರಿಟೈರ‍್’ ಆದರೆ ಮುಪ್ಪಿನಲ್ಲಿ ವಿಶ್ರಾಂತಿ ಪಡೆಯುತ್ತಾರೆ ಎಂದರ್ಥ. ವಿಶ್ರಾಂತರಾದ ನಂತರ ಸರ‍್ ಎಂ.ವಿ. ೪೪ ವರ್ಷಗಳ ಕಾಲ ಬದುಕಿದ್ದರು. ತೀರಿಕೊಂಡಾಗ ಅವರಿಗೆ ೧೦೨ ವರ್ಷ. ತೀರ ಕಡೆಯ ದಿನಗಳಲ್ಲಿ ನಿಶ್ಯಕ್ತಿ ಬರುವವರೆಗೆ ದೇಶಕ್ಕಾಗಿ ಒಂದೇ ಸಮನೆ ತಮ್ಮನ್ನೇ ತೇಯ್ದುಕೊಂಡರು.

ಬಾಲ್ಯದಿಂದ ವಿಶ್ವೇಶ್ವರಯ್ಯನವರಿಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಬಯಕೆ (ಅವರಿಗೆ ೧೦೦ ವರ್ಷ ದಾಟಿದ ಮೇಲೆ, ಅವರ ನೆಂಟರೊಬ್ಬರು ’ಮದರಾಸಿಗೆ ಹೊರಟಿದ್ದರು; ಮದರಾಸಿನಿಂದ ನಿಮಗೆ ಏನು ತರಲಿ? ’ ಎಂದು ಕೇಳಿದರಂತೆ. ಸರ‍್ ಎಂ.ವಿ. ಒಂದು ಇತ್ತೀಚೆಗಿನ ಇಂಗ್ಲಿಷ್ ನಿಘಂಟು ತನ್ನಿ ಎಂದರಂತೆ!) ದಿವಾನರಾಗಿದ್ದಾಗಲೇ ಎರಡು ಬಾರಿ ಬೇರೆ ದೇಶಗಳಿಗೆ ಹೋಗಿ ಬಂದಿದ್ದರು. ನಿವೃತ್ತರಾದ ಮೇಲೆ ಎಷ್ಟು ಬಾರಿ, ಎಷ್ಟು ಬಗೆಯ ಕೆಲಸಗಳಿಗಾಗಿ ದೇಶ ದೇಶ ಸುತ್ತಿದರೋ ಹೇಳುವುದು ಕಷ್ಟ. ಜಪಾನ್, ಅಮೆರಿಕ, ಇಂಗ್ಲೆಂಡ್, ಸ್ವೀಡನ್, ಇಟಲಿ, ಜರ್ಮನಿ, ಫ್ರಾನ್ಸ್ ಹೀಗೆ ಹಲವು ದೇಶಗಳಿಗೆ ಭೇಟಿಕೊಟ್ಟರು. ಎಲ್ಲಿ ಹೋದರೂ ಕೈಯಲ್ಲೊಂದು ಪುಸ್ತಕ, ಪೆನ್ಸಿಲ್ ಹೊಸ ಹೊಸ ವಿಷಯಗಳನ್ನು ತಿಳಿಯುವುದು, ಮುಖ್ಯವಾದುದನ್ನು ಗುರುತು ಹಾಕಿಕೊಳ್ಳುವುದು; ಆನಂತರ, ಹೊಸದಾಗಿ ತಿಳಿದಿದ್ದನ್ನು ಭಾರತದ ಅಭಿವೃದ್ಧಿಗೆ ಹೇಗೆ ಬಳಸುವುದು ಎಂದು ಚಿಂತೆ; ಹಿಂದಿರುಗಿದ ಮೇಲೆ, ಹೊಸ ಯೋಜನೆಗಳಿಗೆ ಕಾರ್ಯರೂಪ ಕೊಡಲು ಪ್ರಯತ್ನ. ತಮ್ಮ ವಿಷಯ ಯೋಚನೆ ಮಾಡಲು ಈ ವ್ಯಕ್ತಿಗೆ ಬಿಡುವೆಲ್ಲಿ?

ಅವರು ಸರ್ಕಾರಿ ಕೆಲಸದಿಂದ ನಿವೃತ್ತರಾಗಿ ಹತ್ತು ವರ್ಷಗಳಾದ ಮೇಲೆ ಭದ್ರಾ ನದಿಯಲ್ಲಿ ಪ್ರವಾಹ ಉಕ್ಕಿ ಕಬ್ಬಿಣದ ಕಾರ್ಖಾನೆಯ ಕೆಲಸ ನಿಂತುಹೋಯಿತು. ಇದನ್ನು ಸರಿಪಡಿಸುವ ಹೊಣೆ ಸರ‍್ ಎಂ.ವಿ.ಗೆ ಬಂದಿತು. ಕಾರ್ಖಾನೆಯ ಅಧಿಕಾರಿ ಅಮೇರಿಕದವನು, ಕೆಲಸವನ್ನು ಆರು ತಿಂಗಳ ಕಾಲ ನಿಲ್ಲಿಸಬೇಕು ಎಂ. ಅರ‍್. ಎಂ.ವಿ.ಗೆ ಇಷ್ಟ ಕಾಲ ಕೆಲಸ ನಿಲ್ಲಿಸುವ ಅಗತ್ಯ ಕಾಣಲಿಲ್ಲ. ಮುಖ್ಯಾಧಿಕಾರಿ ಹಠ ಹಿಡಿದ. ಅವನನ್ನು ಕೆಲಸದಿಂದ ತೆಗೆದು ಹಾಕಿದರು. ಎಂ.ವಿ. ಕಾರ್ಖಾನೆ ಯಾವ ತೊಂದರೆ ಇಲ್ಲದಂತೆ ಕೆಲಸ ಮಾಡುವ ಸ್ಥಿತಿಗೆ ತಂದರು. ಕಾರ್ಖಾನೆಯಲ್ಲಿ ಬೇರೆ ದೇಶಗಳಿಂದ ಬಂದವರು ಮೇಲಿನ ಅಧಿಕಾರಗಳಲ್ಲಿದ್ದವರು. ಇವರಿಗೆ ಸಹಜವಾಗಿ ಭಾರತೀಯರಷ್ಟು ಕಾರ್ಖಾನೆಯಲ್ಲಿ ಶ್ರದ್ಧೆ ಇರುವುದಿಲ್ಲ. ಎಂ.ವಿ. ಕ್ರಮೇಣ ಮೈಸೂರಿನ ಎಂಜಿನಿಯರರಿಗೆ ಬೇಕಾದ ಶಿಕ್ಷಣ ಕೊಡಿಸಿದರು. ಮೂರೇ ವರ್ಷಗಳಲ್ಲಿ ಹೊರಗಿನವರನ್ನು ಹಿಂದಕ್ಕೆ ಕಳುಹಿಸಿ ಎಲ್ಲ ಅಧಿಕಾರವನ್ನೂ ಮೈಸೂರಿನವರ ಕೈಯಲ್ಲಿಟ್ಟರು.

ಭಾರತದಲ್ಲಿ – ಅದರಲ್ಲಿಯೂ ಮೈಸೂರು ಸಂಸ್ಥಾನದಲ್ಲಿ ಮೋಟಾರು ವಾಹನಗಳನ್ನು ತಯಾರು ಮಾಡುವ ಕಾರ್ಖಾನೆಗಳನ್ನು ಸ್ಥಾಪಿಸಬೇಕು, ವಿಮಾನ ಕಾರ್ಖಾನೆಯನ್ನು ಸ್ಥಾಪಿಸಬೇಕು ಎಂಬ ಹಂಬಲ ಅವರಿಗೆ. ೧೯೩೫ರಿಂದ ಇದಕ್ಕಾಗಿ ದುಡಿದರು. ಬೆಂಗಳೂರಿನಲ್ಲಿ ವಿಮಾನ ಕಾರ್ಖಾನೆ, ಬೊಂಬಾಯಿಯಲ್ಲಿ ’ಪ್ರೀಮಿಯರ‍್’ ಆಟೋ ಮೊಬೈಲ್ ಕಂಪೆನಿ ’ ಇವು ಪ್ರಾರಂಭವಾದದ್ದು ವಿಶ್ವೇಶ್ವರಯ್ಯ ನವರು ದಾರಿ ತೋರಿಸಿದ್ದರಿಂದಲೇ.

ಸರ‍್ ಎಂ.ವಿ. ಅಧಿಕಾರದಲ್ಲಿದ್ದಾಗ ದೇಶಕ್ಕಾಗಿ ಮಾಡಿದ ಕೆಲಸಗಳನ್ನೂ, ಅನಂತರ ಮಾಡಿದ ಕೆಲಸಗಳನ್ನೂ,  ಪಟ್ಟಿ ಮಾಡಿದರೆ ಯಾವ ಪಟ್ಟಿ ಉದ್ದವಾಗುವುದೋ ಹೇಳುವುದು ಕಷ್ಟ.

ಒರಿಸ್ಸಾದಲ್ಲಿ ಮತ್ತೆ ಮತ್ತೆ ನದಿಗಳಲ್ಲಿ ಪ್ರವಾಹಗಳು ಉಕ್ಕಿ ಜನಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಿ, ನದಿಯ ನೀರನ್ನು ಜನರ ಒಳ್ಳೆಯದಕ್ಕೆ ಉಪಯೋಗಿಸಲು ವಿಶ್ವೇಶ್ವರಯ್ಯನವರು ಸಿದ್ಧಮಾಡಿದ ವರದಿಯು ಮುಂದೆ ಹಿರಾಕುಡ್ ಮತ್ತು ಇತರ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಲು ದಾರಿ ತೋರಿಸಿತು. ಭಾರತದ ರಾಜಧಾನಿಯಾದ ನವದೆಹಲಿಯನ್ನು ಇನ್ನೂ ಸುಂದರವಾಗಿ, ಸುವ್ಯವಸ್ಥಿತವಾಗಿ ಅಭಿವೃದ್ಧಿ ಮಾಡುವುದು ಹೇಗೆ ಎಂದು ಸರ್ಕಾರಕ್ಕೆ ಸಲಹೆ ಕೊಡಲು ಒಂದು ಸಮಿತಿ ನೇಮಕವಾಯಿತು. ಎಂ.ವಿ. ಇದರ ಸದಸ್ಯರಾಗಿ ಕೆಲಸ ಮಾಡಿದರು. ದೊಡ್ಡ ದೊಡ್ಡ ನಗರಗಳಿಗೆ ಪುರಸಭೆಗಳಿರುತ್ತವೆ, ಅಲ್ಲವೆ? ಎಷ್ಟೋ ಬಾರಿ ಇವುಗಳ ಹಣಕಾಸಿನ ಸ್ಥಿತಿ ಏರುಪೇರಾಗುತ್ತದೆ, ಆಡಳಿತದ ಕೆಟ್ಟುಹೋಗುತ್ತದೆ. ಇಂತಹ ಎಷ್ಟು ಪುರಸಭೆಗಳು ಸರ‍್ ಎಂ.ವಿ. ಯವರ ಸಹಾಯ ಬೇಡಿ, ತಮ್ಮ ಸ್ಥಿತಿಗತಿಗಳನ್ನು ಉತ್ತಮಗೊಳಿಸಿಕೊಂಡವು. ಎಷ್ಟು ನಗರಗಳಿಗೆ ಈ ಸಹಾಯವನ್ನು ಮಾಡಿದರು. ಎಂ.ವಿ. ಬೊಂಬಾಯಿ, ಕರಾಚಿ, ಬರೋಡ, ಸಾಂಗ್ಲಿ, ಮಾರ್ವಿ, ಪಂಢರಪುರ, ಅಹ್ಮದ್ ನಗರ, ಭೋಪಾಲ್, ನಾಗಪುರ, ಭಾವ್ ನಗರ, ರಾಜಕೋಟ್, ಗೋವಾ.

ಪಂಚವಾರ್ಷಿಕ ಯೋಜನೆಗಳ ವಿಷಯ ಈಗ ಪ್ರತಿನಿತ್ಯ ಕೇಳುತ್ತೇವೆ, ಅಲ್ಲವೆ? ದೇಶ ಮುಂದೆ ಬರಬೇಕಾದರೆ, ಕೆಲಸಗಳು ಒಂದು ಯೋಜನೆಯ ಪ್ರಕಾರ, ಮೊದಲೇ ತೀರ್ಮಾನವಾದ ಹಾಗೆ, ನಡೆಯಬೇಕು.ಮೊದಲು ಯಾವ ಕೆಲಸ, ಆಮೇಲೆ ಯಾವುದು, ಹಣ ಎಷ್ಟು ಬೇಕು, ಈ ಹಣವನ್ನು ತರುವುದು ಹೇಗೆ, ಪ್ರತಿ ಕೆಲಸಕ್ಕೆ ಬೇಕಾದ ಶಿಕ್ಷಣ ಪಡೆದವರು ತಕ್ಕಷ್ಟು ಇದ್ದಾರೆಯೇ, ಯಂತ್ರಗಳು ಇವೆಯೇ, ಇಲ್ಲದಿದ್ದರೆ ನಿಪುಣರನ್ನು ಯಂತ್ರಗಳನ್ನು ಎಲ್ಲಿಂದ ತರಬೇಕು, ಕೆಲಸ ಸರಿಯಾಗಿ ನಡೆಯಲು ಏನು ಏರ್ಪಾಟಾಗಬೇಕು, ಅದಕ್ಕಾಗಿ ಖರ್ಚು ಮಾಡಿದ ಹಣದಿಂದ ಪೂರ್ತಿ ಪ್ರಯೋಜನವಾಯಿತೆ ಎಂದು ನೋಡಿಕೊಳ್ಳುವುದು ಹೇಗೆ, ಇಂತಹ ನೂರಾರು ವಿಷಯಗಳನ್ನು ಯೋಚಿಸಿ ಮನೆ ಕಟ್ಟಲು ನಕ್ಷೆ ತಯಾರಿಸಿ, ಹಣ ಅಣಿಮಾಡಿಕೊಂಡು, ಸಾಮಗ್ರಿ ತಂದುಕೊಂಡು ಕೆಲಸ ಪ್ರಾರಂಭಿಸುವ ಹಾಗೆ – ದೇಶದ ಅಭಿವೃದ್ಧಿಯ ಕೆಲಸವನ್ನು ಪ್ರಾರಂಭಿಸಬೇಕು. ಪ್ರಪಂಚದ ಚರಿತ್ರೆಯಲ್ಲಿ ಹೀಗೆ ಯೋಜನೆಯನ್ನು ಸಿದ್ಧಗೊಳಿಸಿ ದೇಶವನ್ನು ಅಭಿವೃದ್ಧಿಗೆ ತಂದ ಮೊದಲನೆಯ ರಾಷ್ಟ್ರ ಸೋವಿಯತ್ ರಷ್ಯ ಎನ್ನುತ್ತಾರೆ. ಇದರ ಪಂಚವಾರ್ಷಿಕ ಯೋಜನೆ ೧೯೨೮ರಲ್ಲಿ ಪ್ರಾರಂಭವಾಯಿತು. ಇದಕ್ಕೆ ಎಂಟು ವರ್ಷ ಮೊದಲನೇ ೧೯೨೦ರಲ್ಲಿಯೇ ಈ ವಿಷಯ ಯೋಚಿಸಿ ಎಂ.ವಿ. ಒಂದು ಪುಸ್ತಕವನ್ನು ಬರೆದರು. ರಿಕನ್ ಸ್ಟ್ರಕ್ಟಿಂಗ್ ಇಂಡಿಯ ಎಂದು. ೧೯೩೪ರಲ್ಲಿ ಪ್ಲಾನ್ಡ್ ಇಕಾನಮಿ ಫಾರ‍್ ಇಂಡಿಯಾ ಎಂಬ ಪುಸ್ತಕ ಬರೆದರು. ಸರ‍್ ಎಂ.ವಿ. ಗೆ ೯೮ ವರ್ಷ ವಯಸ್ಸಾಗಿದ್ದಾಗಲೂ ಸಹ ಈ ವಿಷಯವಾಗಿ ಪುಸ್ತಕಗಳನ್ನು ಬರೆಯುತ್ತಿದ್ದರು!

ದೇಶಸೇವೆಯನ್ನೆ ತಪಸ್ಸನ್ನಾಗಿ ಮಾಡಿಕೊಂಡ ಈ ಮಹಾನುಭಾವರಿಗೆ ಒಂದು ನೂರು ವರ್ಷ ತುಂಬಿದಾಗ, ದೇಶದಲ್ಲೆಲ್ಲ ಜನ ಸಮಾರಂಭಗಳನ್ನು ನಡೆಸಿ ಗೌರವ ಮತ್ತು ಕೃತಜ್ಞತೆಗಳನ್ನು ಸೂಚಿಸಿದರು. ಭಾರತ ಸರ್ಕಾರ ಅವರ ಚಿತ್ರವಿದ್ದ ಒಂದು ಅಂಚೆ ಚೀಟಿಯನ್ನು ಪ್ರಕಟಿಸಿತು.

೧೯೬೨ರ ಏಪ್ರಿಲ್ ೧೪ರಂದು ವಿಶ್ವೇಶ್ವರಯ್ಯನವರು ತೀರಿಕೊಂಡರು. ಆಗ ಅವರಿಗೆ ೧೦೨ ವರ್ಷ ವಯಸ್ಸು.

ಭಾರತರತ್ನ

ವಿಶ್ವೇಶ್ವರಯ್ಯನಂತಹವರು ಮಂತ್ರಿಗಳಾಗುವುದು ರಾಜ್ಯದ ಪುಣ್ಯ. ಅಂತಹವರಿಗೆ ಎಷ್ಟು ಸಂಬಳ ಕೊಟ್ಟರೆ ತಾನೇ ಸಾಕು? ಅವರ ಸಂಬಳವನ್ನು ಹೆಚ್ಚಿಸಬೇಕು ಎಂದು ಅವರಿಗೆ ತಿಳಿಯದಂತೆ, ಅವರನ್ನು ಕೇಳದೆ ಮಹಾರಾಜರ ಕಾರ್ಯದರ್ಶಿ ಮಹಾರಾಜರಿಗೆ ಸೂಚಿಸಿದರು. ಮಹಾರಾಜರು ಒಪ್ಪಿದರು. ಈ ವಿಷಯ ತಿಳಿದಾಗ, ವಿಶ್ವೇಶ್ವರಯ್ಯನವರು ಮಹಾರಾಜರಿಗೆ ಕಾಗದ ಬರೆದರು – ”ನನಗೆ ಇದು ಇಷ್ಟವಿಲ್ಲ. ಸಂಬಳ ಹೆಚ್ಚು ಮಾಡಬೇಡಿ’ ಎಂದು.

ಭದ್ರಾವತಿಯ ಕಾರ್ಖಾನೆಯ ಅಧ್ಯಕ್ಷರಾಗಿ ಕೆಲಸ ಮಾಡಿದುದಕ್ಕೆ ಅವರಿಗೆ ಸಂಬಳ ಕೊಡಬೇಕಾಗಿತ್ತು. ಎಷ್ಟು ಎಂದು ತೀರ್ಮಾನವಾಗಲಿಲ್ಲ. ಎಷ್ಟೋ ವರ್ಷಗಳ ನಂತರ ತೀರ್ಮಾನವಾಯಿತು. ಸರ್ಕಾರದಿಂದ ಅವರಿಗೆ ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿಗಳು ಬರಬೇಕಾಯಿತು. ವಿಶ್ವೇಶ್ವರಯ್ಯನವರು ಒಂದು ಪೈಸೆಯನ್ನೂ ಮುಟ್ಟಲಿಲ್ಲ. ’ಹುಡುಗರು ಉದ್ಯೋಗಗಳನ್ನು ಕಲಿತುಕೊಳ್ಳಲು ಒಂದು ಶಾಲೆ ಕಟ್ಟಿಸಿಬಿಡಿ ’ಎಂದರು. ಶಾಲೆ ಸಿದ್ಧವಾಯಿತು. ಸರ್ಕಾರದವರು, ’ನಿಮ್ಮ ಹೆಸರನ್ನೇ ಶಾಲೆಗಿಡುತ್ತೇವೆ;’ ಎಂದರು. ಎಂ.ವಿ. ಹೇಳಿದರು ’ಬೇಡ, ಮೈಸೂರಿನ ಶ್ರೀಮನ್ಮಹರಾಜರ ಹೆಸರಿಡಿ. ಅ ಶಾಲೆಯೇ ಬೆಂಗಳೂರಿನ ಶ್ರೀ ಜಯಚಾಮರಾಜ ಪಾಲಿಟೆಕ್ನಿಕ್ ಇನ್ಸ್ ಟಿಟ್ಯೂಟ್.

ಎಷ್ಟು ಜನರಿದ್ದಾರೆ ಇಂತಹ ನಿಸ್ವಾರ್ಥ ದೇಶ ಸೇವಕರು?

ಸ್ವತಂತ್ರ ಭಾರತದಲ್ಲಿ ಪ್ರತಿವರ್ಷ ಕೆಲವರನ್ನು ಸರ್ಕಾರ ಪ್ರಶಸ್ತಿ ಕೊಟ್ಟು ಗೌರವಿಸುತ್ತದೆ. ದೇಶಕ್ಕೆ ಸೇವೆ ಸಲ್ಲಿಸಿದ ಹಿರಿಯರಿಗೆ ’ಪದ್ಮಭೂಷಣ’, ’ಪದ್ಮಶ್ರೀ’ ಮೊದಲಾದ ಅನೇಕ ಪ್ರಶಸ್ತಿಗಳನ್ನು ನೀಡುತ್ತದೆ. ಇವುಗಳಲ್ಲೆಲ್ಲ ಅತ್ಯುನ್ನತ ಪ್ರಶಸ್ತಿ ಭಾರತರತ್ನ. ೧೯೫೫ರಲ್ಲಿ ವಿಶ್ವೇಶ್ವರಯ್ಯನವರನ್ನು ಭಾರತ ಸರ್ಕಾರ ಭಾರತರತ್ನ ಎಂದು ಗೌರವಿಸಿತು.

ಈ ಭಾರತರತ್ನ ಮಾನವರತ್ನವೇ.

ವಿಶ್ವೇಶ್ವರಯ್ಯನವರದು ಅದ್ಭುತ ಬುದ್ಧಿಶಕ್ತಿ, ಜ್ಞಾಪಕಶಕ್ತಿ. ಭಾರತದಲ್ಲಿ ನೀರಾವರಿ ಬೇಸಾಯವನ್ನು ಉತ್ತಮಪಡಿಸಲು ಅವರ ಸಿದ್ಧಪಡಿಸಿದ ’ವಿಭಾಗ ಪದ್ಧತಿ; (ಬ್ಲಾಕ್ ಸಿಸ್ಟಮ್) ಕೋಡಿಯ ನೀರು ವ್ಯರ್ಥವಾಗದಂತೆ ತಡೆಯುವ, ತಾವಾಗಿಯೇ ಮುಚ್ಚಿ ತೆರೆದುಕೊಳ್ಳುವ ಬಾಗಿಲುಗಳ ವ್ಯವಸ್ಥೆ, ಏಡನ್ ನಗರದ ನೀರಿನ ಮತ್ತು ಒಳಚರಂಡಿಯ ವ್ಯವಸ್ಥೆ ಇವನ್ನು ಜಗತ್ತಿನ ಎಂಜಿನಿಯರುಗಳು ಮೆಚ್ಚಿದ್ದಾರೆ. ಕೃಷ್ಣರಾಜಸಾಗರ ಜಲಾಶಯವೇ ಸಾಕು ಅವರ ಬುದ್ಧಿಶಕ್ತಿಯ ಸಾಕ್ಷಿಯಾಗಿ!

ಅವರ ಬುದ್ಧಿಶಕ್ತಿಯಷ್ಟೇ ಬೆರಗುಗೊಳಿಸುವಂತಹುದು ಅವರ ಜ್ಞಾಪಕಶಕ್ತಿ. ೧೯೦೮ರಲ್ಲಿ ಅವರು ಮೂಸಾ ನದಿಯನ್ನು ಪಳಗಿಸಿದ ಸಂಗತಿ ನೋಡಿದೆವಲ್ಲ: ಇದಾಗಿ ಸುಮಾರು ಐವತ್ತು ವರ್ಷಗಳ ನಂತರ ಮೂಸಾ ನದಿಯ ವಿಷಯ ಚರ್ಚೆಗೆ ಬಂದಾಗ ಸರ‍್ ಎಂ.ವಿ. ಆಳನ್ನು ಕರೆದರಂತೆ. ಒಂದು ಬೀಗದ ಕೈಯನ್ನು ಕೊಟ್ಟು. ಒಂದು ಅಲಮಾರಿನ ಕಡೆ ಕೈ ತೋರಿಸಿ, ಅದರಲ್ಲಿ ಮೂರನೆಯ ಅರೆಯಲ್ಲಿ ಪುಸ್ತಕದ ಸಾಲಿನ ಮಧ್ಯಭಾಗದ ಮೂರು ನಾಲ್ಕು ಪುಸ್ತಕಗಳನ್ನು ತೆಗೆದುಕೊಂಡು ಬಾ ಎಂದರಂತೆ. ಅವುಗಳಲ್ಲಿ ಒಂದನ್ನು ತೆರೆದು, ಚರ್ಚೆಯಾಗುತ್ತಿದ್ದ ಸಂಗತಿಯ ವಿವರವನ್ನು ಒಂದು ಪುಟದಲ್ಲಿ ತೋರಿಸಿದರಂತೆ. ಇದು ನಡೆದಾಗ ಅವರಿಗೆ ೯೬-೯೭ ವರ್ಷ ವಯಸ್ಸು.

ಈ ಅಸಾಧಾರಣ ಬುದ್ಧಿಶಕ್ತಿ – ಜ್ಞಾಪಕಶಕ್ತಿಗಳನ್ನು ವಿಶ್ವೇಶ್ವರಯ್ಯನವರು ಹೇಗೆ ಉಪಯೋಗಿಸಿಕೊಂಡರು ಎಂಬುದು ಮುಖ್ಯ. ಶಿಸ್ತು, ಕೆಲಸ ಇವು ಮನುಷ್ಯರೂಪ ತಾಳಿ ಬಂದ ಹಾಗಿದ್ದರು ಅವರು. ಯಾವ ಕೆಲಸ ಮಾಡಲಿ, ಎಲ್ಲಿಗೆ ಹೋಗಲಿ, ಗೊತ್ತಾದ ಹೊತ್ತಿಗೆ ಸರಿಯಾಗಿ ಇರಬೇಕು. ಒಂದು ನಿಮಿಷ ತಡವಿಲ್ಲ. ಒಂದು ನಿಮಿಷ ವ್ಯರ್ಥವಿಲ್ಲ. ಅವರು ಎಲ್ಲಿಗೂ ಒಂದು ನಿಮಿಷ ತಡವಾಗಿ ಹೋದದ್ದಿಲ್ಲ. ಒಮ್ಮೆ ಮಂತ್ರಿಗಳೊಬ್ಬರು ಮೂರು ನಿಮಿಷ ತಡವಾಗಿ ಬಂದಾಗ  ಎಂ.ವಿ. ಅವರಿಗೆ ಬುದ್ಧಿ ಹೇಳಿದರು. ಮಾಡುವ ಕೆಲಸ ಏನೇ ಆಗಲಿ ಸರಿಯಾಗಿ, ಕ್ರಮವಾಗಿ ನಡೆಯಬೇಕು. ಕೆಲಸ ಮಾಡುವವರು ಜವಾಬ್ದಾರಿ ತಿಳಿದು, ತಮ್ಮಿಂದಾದಷ್ಟು ಚೆನ್ನಾಗಿ ಮಾಡಬೇಕು. ಇದು ಅವರ ನಂಬಿಕೆ. ಇದನ್ನು ಎಷ್ಟು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಿದ್ದರು ಎಂಬುದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ಅವರಿಗೆ ಎದ್ದು ಕುಳಿತುಕೊಳ್ಳಲು ಸಾಧ್ಯವಾಗುವಷ್ಟು ದಿನಗಳೂ, ಬಹು ಶಿಸ್ತಾಗಿ ಬಟ್ಟೆ ಧರಿಸುತ್ತಿದ್ದರು. ಅವರಿಗೆ ೯೫ ವರ್ಷ ವಯಸ್ಸಾಗಿದ್ದಾಗಲೂ ಅವರನ್ನು ನೋಡಲು  ಹೋದವರು ಅವರ ಉಡುಪಿನ ಶಿಸ್ತನ್ನು ಕಂಡು ಬೆರಗಾಗುತ್ತಿದ್ದರು. ಎಂ.ವಿ. ಎಷ್ಟೋ ಸಂದರ್ಭಗಳಲ್ಲಿ ಭಾಷಣಗಳನ್ನು ಮಾಡಬೇಕಾಗುತ್ತಿತ್ತು. ಅವರ ಬುದ್ಧಿಶಕ್ತಿ, ಅನುಭವ, ಜ್ಞಾನ ಇವುಗಳಿಂದ ಜನ ಅವರ ಮಾತನ್ನು ಕೇಳಲು ಬಯಸುತ್ತಿದ್ದರು. ಆದರೆ ಎಲ್ಲೇ ಭಾಷಣ ಮಾಡಬೇಕಾಗಲಿ, ಎಂ.ವಿ. ಮೊದಲೇ ಯೋಚಿಸಿ, ಭಾಷಣ ಬರೆಯುವರು, ಟೈಪ್ ಮಾಡಿಸಿ, ಪ್ರತಿ ಶಬ್ದವನ್ನೂ ಮತ್ತೆ ತೂಗಿ ನೋಡಿ, ಅಗತ್ಯವಾದ ಕಡೆ ತಿದ್ದುವರು. ಹೀಗೆ ನಾಲ್ಕೈದು ಬಾರಿ ತಿದ್ದಿ, ಆನಂತರ ಕಡೆಯ ಪ್ರತಿ ಸಿದ್ಧಮಾಡಿಕೊಳ್ಳುತ್ತಿದ್ದರು. ಅದನ್ನು ಮತ್ತೆ ಮತ್ತೆ ಓದಿ ನೆನಪಿಟ್ಟುಕೊಳ್ಳುತ್ತಿದ್ದರು. ಒಂದು ಬಾರಿ ಅವರು ತಮ್ಮ ಹಳ್ಳಿ ಮುದ್ದೇನಹಳ್ಳಿಗೆ ಹೋದಾಗ, ಪ್ರಾಥಮಿಕ ಶಾಲೆಗೆ ಹೋದರಂತೆ. ಅಲ್ಲಿ ಉಪಾಧ್ಯಾಯರಿಗೆ ಹತ್ತು ರೂಪಾಯಿ ಕೊಟ್ಟು ’ಹುಡುಗರಿಗೆ ಸಿಹಿ ತಿಂಡಿ ಹಂಚಿ’ ಎಂದರು. ಉಪಾಧ್ಯಾಯರು ’ದಯವಿಟ್ಟು ಹುಡುಗರಿಗೆ ಬುದ್ಧಿಯ ಮಾತು ಹೇಳಿ’ ಎಂದರು. ಎಂ.ವಿ. ಐದು ನಿಮಿಷ ಮಾತನಾಡಿ ಬಂದರು. ಅವರಿಗೆ ತುಂಬ ಬೇಸರವಾಯಿತಂತೆ – ಮೊದಲೇ ಯೋಚನೆ ಮಾಡದೆ, ಸಿದ್ಧಮಾಡಿಕೊಳ್ಳದೆ ಮಾತನಾಡಿದ್ದು ತಪ್ಪಾಯಿತು ಎಂದು. ಕೆಲವು ದಿನಗಳ ನಂತರ ಮತ್ತೆ ಅಲ್ಲಿಗೆ ಹೋದರು; ಇಪ್ಪತ್ತೈದು ರೂಪಾಯಿಗಳ ಸಿಹಿ ತಿಂಡಿ ಹಂಚಿದರು. ಮೊದಲೇ ಯೋಚಿಸಿ, ಸಿದ್ಧಮಾಡಿಕೊಂಡಿದ್ದಂತೆ ಬುದ್ಧಿಮಾತುಗಳನ್ನು ಹೇಳಿದರು. ೧೯೪೭ರಲ್ಲಿ ಅವರು ಅಖಿಲ ಭಾರತ ಉತ್ಪನ್ನಗಾರರ ಸಂಘದ ಅಧ್ಯಕ್ಷರಾಗಿದ್ದರು. ಒಂದು ಸಮಾರಂಭದ ಪ್ರಾರಂಭದಲ್ಲಿ ಅವರೇ ಭಾಷಣ ಮಾಡಬೇಕಾಗಿತ್ತು. ಅವರೂ ಅವರ ಸ್ನೇಹಿತರೂ ಒಂದು ಕಡೆ ಇಳಿದುಕೊಂಡಿದ್ದರು. ಬೆಳಗ್ಗೆ ನಾಲ್ಕೂವರೆ ಗಂಟೆ ಅವರ ಜೊತೆಯಲ್ಲಿದ್ದವರಿಗೆ ಎಚ್ಚರಿಕೆಯಾಯಿತು. ನೋಡುತ್ತಾರೆ ೮೭ ವರ್ಷ ವಯಸ್ಸಿನ ವಿಶ್ವೇಶ್ವರಯ್ಯನವರು ಆಗಲೇ ಎದ್ದು ಸ್ನಾನ ಮುಗಿಸಿ ಶಿಸ್ತಾಗಿ ಉಡುಪು ಧರಿಸಿ, ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಹೆಜ್ಜೆ ಹಾಕುತ್ತಿದ್ದಾರೆ; ಕೈಯಲ್ಲಿ ಅವತ್ತು ಅವರು ಮಾಡಬೇಕಾಗಿದ್ದ ಭಾಷಣದ ಪ್ರತಿ; ಓದಿಕೊಳ್ಳುತ್ತಿದ್ದಾರೆ!

೧೯೫೨ರಲ್ಲಿ ಅವರಿಗೆ ೯೨ ವರ್ಷವಾಗಿದ್ದಾಗ – ಗಂಗಾನದಿಗೆ ಸೇತುವೆ ಕಟ್ಟುವ ಯೋಜನೆಯ ಪರಿಶೀಲನೆಗಾಗಿ ಪಾಟ್ನಾಕ್ಕೇ ಹೋದರು. ಭತ್ತ ಬಿದ್ದರೆ ಅರಳಾಗುವ ಹಾಗೆ ಬಿಸಿಲು; ಸೆಖೆ ತಡೆಯಲು ಸಾಧ್ಯವಿಲ್ಲದಷ್ಟು. ಪರೀಕ್ಷೆ ಮಾಡಬೇಕಾದ ಸ್ಥಳಗಳಿಗೆ ಇವರನ್ನು ಡೋಲಿಯಲ್ಲಿ ಕೂಡಿಸಿಕೊಕಂಡು ಕರೆದುಕೊಂಡು ಹೋಗಲು ಸರ್ಕಾರ ಏರ್ಪಾಟು ಮಾಡಿತ್ತು.  ಎಂ.ವಿ. ಕಾರಿನಿಂದ ಇಳಿದವರೇ ಸರಸರ ನಡೆದು ಹೊರಟರು! ಈ ವೃದ್ಧರಿಗಾಗಿ ಸರ್ಕಾರ ಅತಿಥಿಗೃಹದಲ್ಲಿ ಅನುಕೂಲವಾಗಿ ಇಳಿದುಕೊಳ್ಳಲು ಏರ್ಪಾಟು ಮಾಡಿತ್ತು. ಎಂ.ವಿ. ವಿಶೇಷ ರೈಲಿನಲ್ಲಿ ತಮ್ಮ ಗಾಡಿಯಲ್ಲಿ ಕುಳಿತೇ ಕೆಲಸ ಮಾಡಿದರು.

ಒಂದೇ, ಎರಡೇ ಇಂತಹ ನೂರು ನಿದರ್ಶನಗಳನ್ನು ಕೊಡಬಹುದು. ಎಂ.ವಿ. ಯವರ ಶಿಸ್ತು, ಕಾರ್ಯಶ್ರದ್ಧೇ ಇವನ್ನು ವಿವರಿಸಲು. ಅವರೊಮ್ಮೆ ಹೇಳಿದರು ’ ನಮ್ಮ ದೇಶದ ಶಾಪ ಎಂದರೆ ಸೋಮಾರಿತನ. ಮೊದಲ ನೋಟಕ್ಕೆ, ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿರುವ ಹಾಗೆಯೇ ಕಾಣುತ್ತದೆ. ನಿಜವಾಗಿ ನೋಡಿದರೆ, ಒಬ್ಬ ಮಾಡುವ ಕೆಲಸವನ್ನು ಅನೇಕರು ನೋಡುತ್ತ ಕಾಲ ಕಳೆಯುತ್ತಿರುತ್ತಾರೆ. ತಿರಸ್ಕಾರದಿಂದ ಒಬ್ಬರು ಹೇಳಿದ ಹಾಗೆ: ’ಐದು ಜನ ಕೆಲಸ ಮಾಡುತ್ತಿದ್ದಾರೆ ಎಂದು ತೋರುವ ಕಡೆ, ಒಬ್ಬ ಏನನ್ನೂ ಮಾಡುತ್ತಿರುವುದಿಲ್ಲ. ಒಬ್ಬ ವಿಶ್ರಾಂತಿ ಪಡೆಯುತ್ತಿರುತ್ತಾನೆ, ಒಬ್ಬ ನೋಡುತ್ತಿರುತ್ತಾನೆ, ಮತ್ತೊಬ್ಬ ಈ ಮೂವರಿಗೆ ಸಹಾಯ ಮಾಡುತ್ತಿರುತ್ತಾನೆ!’

ಕೆಲಸದಲ್ಲಿ ಆಳವಾದ ಶ್ರದ್ಧೆಯೊಡನೆ ವಿಶ್ವೇಶ್ವರಯ್ಯನವರಲ್ಲಿ ನಿರ್ಮಲ ಪ್ರಾಮಾಣಿಕತೆ ಇದ್ದಿತು. ದಿವಾನರಾಗಿದ್ದಾಗಲೂ ತಮ್ಮ ನೆಂಟರಿಗೆ ಸರ್ಕಾರಿ ಕೆಲಸದಲ್ಲಿ ಸಹಾಯ ಮಾಡಲಿಲ್ಲ ಎಂಬ ಮಾತನ್ನು ಆಗಲೇ ಹೇಳಿದೆ. ಅವರು ದಿವಾನ್ ಪದವಿಗೆ ರಾಜೀನಾಮೆ ಕೊಡುವಾಗ ಮಹಾರಾಜರನ್ನು ನೋಡಲು ಅರಮನೆಗೆ ಹೋದರು. ಹೋಗುತ್ತ ಸರ್ಕಾರ ಕೊಟ್ಟ ಕಾರನ್ನು ಉಪಯೋಗಿಸಿದರು, ಹಿಂದಕ್ಕೆ ಬರುವಾಗ ತಮ್ಮ ಸ್ವಂತ ಕಾರು! ಆ ದಿನಗಳಲ್ಲಿ ವಿದ್ಯುಚ್ಛಕ್ತಿ ದೀಪಗಳಿರಲಿಲ್ಲ. ಮೊಂಬತ್ತಿಗಳನ್ನು ಬಳಸಬೇಕು. ಸರ್ಕಾರದ ಕೆಲಸಕ್ಕೆ ಸರ್ಕಾರ ಕೊಟ್ಟ ಕಾಗದ, ಮೋಂಬತ್ತಿ, ಸ್ವಂತ ಕೆಲಸಕ್ಕೆ ತಾವು ಕೊಂಡುಕೊಂಡ ಕಾಗದ, ಮೋಂಬತ್ತಿ ಒಮ್ಮೆ ಸ್ನೇಹಿತರೊಬ್ಬರು, ಕಾಯಿಲೆಯಾಗಿ ಚೇತರಿಸಿಕೊಳ್ಳುತ್ತಿದ್ದವರು ದಿವಾನರಿಗೆ ಕಾಗದ ಬರೆದರು, ವಾಸ ಮಾಡಲು ತಮಗೆ ಮನೆ ಬೇಕು ಎಂದು. ಅವರು ಸರ್ಕಾರದ ಮನೆಗಳಲ್ಲಿ ಒಂದನ್ನು ಬಾಡಿಗೆ ಇಲ್ಲದೆ ಕೊಡಬಹುದಲ್ಲ ಎಂದು ಭಾವಿಸಿದ್ದರು. ಅವರಿಗೆ ಸರ್ಕಾರದ ಮನೆ ಸಿಕ್ಕಿತು. ಅವರಿದ್ದಷ್ಟು ಕಾಲವೂ ವಿಶ್ವೇಶ್ವರಯ್ಯನವರು ತಿಂಗಳಿಗೆ ೨೫೦ ರೂಪಾಯಿಯಂತೆ ತಮ್ಮ ಜೇಬಿನಿಂದ ಸರ್ಕಾರಕ್ಕೆ ಬಾಡಿಗೆ ಕೊಟ್ಟರು!

ಸರಿಯಾದ ದಾರಿ ಎಂದು ಕಂಡದ್ದನ್ನು, ಏನೇ ವಿರೋಧ ಬರಲಿ, ಕಷ್ಟ ಬರಲಿ, ಬಿಡದೆ ಹಿಡಿಯುತ್ತಿದ್ದುದ್ದು ಎಂ.ವಿ. ಯವರ ಮತ್ತೊಂದು ಗುಣ. ಅವರು ಮೈಸೂರು ಸಂಸ್ಥಾನಕ್ಕಾಗಿ ಮಾಡಿದ ಮಹತ್ಕಾರ್ಯಗಳನ್ನು ಆಗಲೇ ಪಟ್ಟಿಮಾಡಿದೆವಲ್ಲವೆ? ಒಂದೊಂದಕ್ಕೂ ಅವರು ಎಷ್ಟೋ ವಿರೋಧವನ್ನು ಎದುರಿಸಿದರು. ಒಂದು ಕಡೆ ಆಳುವ ಬಿಳಿಯರ ಪ್ರಬಲ ವಿರೋಧ, ಮತ್ತೊಂದು ಕಡೆ ವಿಶ್ವೇಶ್ವರಯ್ಯ ದೂರದೃಷ್ಟಿ ಮತ್ತು ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲಾರದ ಮೈಸೂರಿನವರೇ ಆದ ಜನರ ಕುಚೊದ್ಯ, ಇನ್ನೊಂದು ಕಡೆ ಕೆಲವರು ಅಧಿಕಾರಿಗಳ ತಿರಸ್ಕಾರ ಮನೋಭಾವ. ಅವರು ಮೈಸೂರಿಗೆ ಒಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಪ್ರಯತ್ನಿಸಿದರು.  ಆಗ ಮೈಸೂರು ರಾಜ್ಯದ ಕಾಲೇಜುಗಳು ಮದರಾಸು ವಿಶ್ವವಿದ್ಯಾನಿಲಯದ ಮೇಲ್ವಿಚಾರಣೆಯಲ್ಲಿದ್ದವು. ಅಲ್ಲಿನ ಗವರ್ನರ‍್ ಇಂಗ್ಲಿಷರವನು, ದೊಡ್ಡ ಅಧಿಕಾರಿಗಳು ಇಂಗ್ಲಿಷರು. ಅವರಿಗೆ ಭಾರತೀಯ ಸಂಸ್ಥಾನ ಮೈಸೂರಿನಲ್ಲಿ ವಿಶ್ವವಿದ್ಯಾನಿಲಯವಾಗುವುದು ಇಷ್ಟವಿಲ್ಲ. ಮೈಸೂರಿನಲ್ಲೆ ಕೆಲಸದಲ್ಲಿದ್ದ ಇಂಗ್ಲಿಷರಿಗೂ ಇದು ಇಷ್ಟವಿಲ್ಲ. ಒಬ್ಬ ಪ್ರಿನ್ಸಿಪಾಲನಂತೂ, ’ದಿವಾನರಿಗೆ ಹುಚ್ಚು, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದ. ವಿಶ್ವೇಶ್ವರಯ್ಯನವರ ದೃಢಮನಸ್ಸೇ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆಗೆ ದಾರಿಮಾಡಿತು. ಎಂ.ವಿ. ಕೃಷ್ಣರಾಜ ಸಾಗರದ ನಿರ್ಮಾಣದ ಯೋಜನೆ ಮಾಡಿದರು. ಇದಕ್ಕೆ ೨೫೩ ಲಕ್ಷ ರೂಪಾಯಿಗಳಷ್ಟ ಹಣ ಬೇಕು ಎಂದಾಗ ಮೈಸೂರಿನ ಹಲವು ಅಧಿಕಾರಿಗಳೇ ಅದನ್ನು ತಳ್ಳಿಹಾಕಿದರು. ಕೆಲವು ವರ್ಷಗಳ ನಂತರ ಯೋಜನೆಯನ್ನು ಮೈಸೂರು ಸರ್ಕಾರ ಒಪ್ಪಿತು. ಆದರೆ ಮತ್ತೊಂದು ವಿಘ್ನ! ಇದರಿಂದ ಮದರಾಸಿಗೆ ನೀರು ಕಡಿಮೆಯಾಗುತ್ತದೆ ಎಂದು ಆ ರಾಜ್ಯದ ಸರ್ಕಾರ ವಿರೋಧಿಸಿತು. ಭಾರತ ಸರ್ಕಾರವು ೮೦ ಅಡಿಗಳ ಎತ್ತರದ ಕಟ್ಟೆ ಕಟ್ಟಲು ಒಪ್ಪಿಗೆ ಕೊಟ್ಟಿತು. ೧೩೦ ಅಡಿಗಳ ಎತ್ತರವಿರಲೇಬೇಕು ಕಟ್ಟೆ ಎಂದು ಎಂ.ವಿ. ಅಭಿಪ್ರಾಯ. ಭಾರತ ಸರ್ಕಾರ ಒಪ್ಪುವ ಮೊದಲೇ ವಿಶ್ವೇಶ್ವರಯ್ಯನವರು ೧೩೦ ಅಡಿ ಎತ್ತರದ ಕಟ್ಟೆಗೆ ಅಡಿಪಾಯ ಹಾಕಿದರು. ಕಡೆಗೆ ತಮ್ಮ ವಾದ ಸರಿ ಎಂದು ಭಾರತ ಸರ್ಕಾರಕ್ಕೆ ತೋರಿಸಿಕೊಟ್ಟರು. ಭದ್ರಾವತಿ ಕಬ್ಬಿಣದ ಕಾರ್ಖಾನೆಯನ್ನು ಪ್ರಾರಂಭಿಸಿದಾಗಲಂತೂ ಅವರನ್ನು ಹಾಸ್ಯ ಮಾಡಿದವರೆಷ್ಟು ಮಂದಿಯೋ. ಅದನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಿಸಿದೆ ಕಾರ್ಖಾನೆಯಿಂದ ನಷ್ಟವಾದಾಗ ಸಂತೋಷಪಟ್ಟವರು ಎಷ್ಟು ಮಂದಿಯೋ! ಇಂದು ಇಂತಹ ಕಾರ್ಖಾನೆ ದೇಶಕ್ಕೆ ಒಂದು ಆಸಕ್ತಿ ಎಂಬುದನ್ನು ತಿಳಿದಿದ್ದೇವೆ.

ಮೈಸೂರಿನ ಆಧುನಿಕ ಯುಗದ ಸೃಷ್ಟಿಕರ್ತರು ಎಂ.ವಿ. ಎನ್ನಬೇಕು. ಜನ ವಿದ್ಯೆ ಕಲಿಯಬೇಕು. ವಿಜ್ಞಾನ – ತಂತ್ರಜ್ಞಾನಗಳ ಪ್ರಯೋಜನ ಪಡೆಯಬೇಕು, ಮೂಢನಂಬಿಕೆಗಳನ್ನು ಬಿಡಬೇಕು ಎಂದು ಸತತವಾಗಿ ಜಪಿಸುತ್ತಿದ್ದವರು ಅವರು. ಆದರೆ, ಆಧುನಿಕವಾಗುವುದು ಎಂದರೆ ಹಿಂದಿನ ಕಾಲದ ಎಲ್ಲ ಸಂಪ್ರದಾಯಗಳನ್ನು ತಿರಸ್ಕರಿಸುವುದಲ್ಲ, ನಮ್ಮ ಸಂಸ್ಕೃತಿಯನ್ನು ಮರೆಯುವುದಲ್ಲ ಎಂಬುದನ್ನು ಚೆನ್ನಾಗಿ ಮನಗಂಡಿದ್ದರು.

ಒಂದು ಬಾರಿ ಯಾರು ಅವರಿಗೆ ’ನೀವು ನಮ್ಮ ದೇಶಕ್ಕೆ ತುಂಬ ಸೇವೆ ಸಲ್ಲಿಸಿದ್ದೀರಿ. ನೀವು ಭೀಷ್ಮಾಚಾರ್ಯರಂತಿದ್ದೀರಿ’ ಎಂದರಂತೆ.  ಸರ‍್ ಎಂ.ವಿ. ಅವರ ಮಾತನ್ನು ತಡೆದು, ’ನೀವು ನನ್ನ ಸಣ್ಣತನವನ್ನು ನೆನಸಿಕೊಳ್ಳುವಂತೆ ಮಾಡುತ್ತಿದ್ದೀರಿ, ಭೀಷ್ಮಾಚಾರ್ಯರೆಲ್ಲಿ, ನಾನೆಲ್ಲಿ? ಎಂದರಂತೆ. ಅಂತಹ ವಿನಯ ಅವರದು. ೯೫ ವರ್ಷದ ವೃದ್ಧರಾದಾಗಲೂ ತಮ್ಮನ್ನು ಯಾರಾದರೂ ನೋಡಲು ಬಂದರೆ ಎದ್ದು ನಿಂತು ಅವರನ್ನು ಬರಮಾಡಿಕೊಳ್ಳುವರು, ಎದ್ದುನಿಂತು ಅವರನ್ನು ಕಳುಹಿಸಿಕೊಡುವರು. ಆದರೆ ವಿನಯವೆಂದರೆ ಅವಮಾನವನ್ನು ಸಹಿಸುವುದಿಲ್ಲ ಎಂಬ ಅರಿವು ಅವರಿಗೆ ರಕ್ತಗತವಾಗಿತ್ತು. ಬೊಂಬಾಯಿ ಪ್ರಾಂತದಲ್ಲಿ ಇಂಗ್ಲಿಷರೇ ಮುಖ್ಯ ಎಂಜಿನಿಯರಾಗಬೇಕು, ಎಷ್ಟೇ ಬುದ್ಧಿವಂತನಾದರೂ ಭಾರತೀಯ ಆ ಕುರ್ಚಿಯಲ್ಲಿ ಕೂಡುವ ಹಾಗಿಲ್ಲ ಎಂದು ನಿಯಮ, ವಿಶ್ವೇಶ್ವರಯ್ಯನವರು ತಮ್ಮ ಕೆಲಸವನ್ನೇ ಬಿಟ್ಟರು.

ಮೈಸೂರಿನಲ್ಲಿ ಅತ್ಯಂತ ದೊಡ್ಡ ಸ್ಥಾನ ದಿವಾನರದು. ಅದನ್ನೂ ತಾವಾಗಿಯೇ ಬಿಟ್ಟರು ವಿಶ್ವೇಶ್ವರಯ್ಯನವರು.

ಅಹಂಕಾರವಿಲ್ಲದ ಆತ್ಮಗೌರವ ಎಂ.ವಿ. ಯವರದು. ಹಾಗೆಯೇ ನಿಶ್ಚಲ, ನಿರ್ಭಯ ದೇಶಾಭಿಮಾನ. ಆಂಗ್ಲರು ಇಲ್ಲಿ ಮಹಾಪ್ರಭುಗಳೆಂದು ಮೆರೆಯುತ್ತಿದ್ದ ಕಾಲ. ಮೈಸೂರಿನ ಅರಮನೆಯಲ್ಲಿ ದಸರಾ ಹಬ್ಬದ ಕಾಲದಲ್ಲಿ ಮಹಾರಾಜರ ದರ್ಬಾರ‍್ – ರಾಜಸಭೇ ನಡೆಯುತ್ತಿತ್ತು. ಐರೊಪ್ಯರಿಗಾಗಿ ಕುರ್ಚಿಗಳ ಮೇಲೆ ಕುಳಿತುಕೊಳ್ಳುವರು, ಭಾರತೀಯರು ಕೆಳಗೆ ಕುಳಿತುಕೊಳ್ಳಬೇಕು. ೧೯೧೦ರಲ್ಲಿ ಮೊದಲ ಬಾರಿಗೆ ವಿಶ್ವೇಶ್ವರಯ್ಯನವರು  ದರ್ಬಾರಿಗೆ ಹೋದರು. ಕುಳಿತು ಕೊಳ್ಳಲು ಏರ್ಪಾಟು ನೋಡಿ ಬೇಸರವಾಯಿತು. ಮರುವರ್ಷ ಹೋಗಲಿಲ್ಲ. ಅರಮನೆಯವರು ವಿಚಾರಿಸಿದಾಗ ಕಾರಣವನ್ನು ತಿಳಿಸಿದರು. ಮಾರನೆಯ ವರ್ಷದಿಂದ ಎಲ್ಲರಿಗೂ ಕುರ್ಚಿಯ ವ್ಯವಸ್ಥೆಯಾಯಿತು. ಬ್ರಿಟಿಷ್ ಅಧಿಕಾರಿಯೊಬ್ಬ ಮಹಾರಾಜರ ದರ್ಬಾರಿನಲ್ಲಿ ತನ್ನ ಕುರ್ಚಿಯ ಎತ್ತರ ಹೆಚ್ಚು, ಆದುದರಿಂದ ಪಾದಗಳನ್ನು ಇಟ್ಟುಕೊಳ್ಳಲು ಮೆತ್ತನೆಯ ದಿಂಬು ಬೇಕು ಎಂದು ಕೇಳಿದ. ಎಂ.ವಿ. ಅವನ ಕುರ್ಚಿಯ ಕಾಲನ್ನು ಸ್ವಲ್ಪ ಕತ್ತರಿಸಿ, ಎತ್ತರ ಇಳಿಸಿದೆ ಎಂದು ಉತ್ತರ ಬರೆದು. ೧೯೪೪ರಲ್ಲಿ ಒಂದು ಸಮ್ಮೇಳನ ನಡೆಯಬೇಕಾಗಿತ್ತು. ನಡೆಸುವ ಸಂಘದ ಅಧ್ಯಕ್ಷರು ವಿಶ್ವೇಶ್ವರಯ್ಯನವರು. ಅಧಿವೇಶನವನ್ನು ಬಿಹಾರ‍್ ಪ್ರಾಂತದ ಗವರ್ನರ‍್ ಅವನೂ ಇಂಗ್ಲಿಷರವನು ಪ್ರಾರಂಭಮಾಡಬೇಕು (ಆಗಿನ ಕಾಲದ ಬಿಳಿಯ ಗರ್ವನರಿಗೆ ಅಸಾಧಾರಣ ಅಧಿಕಾರ, ವೈಭವ) ಭಾರತಕ್ಕೆ ರಾಷ್ಟ್ರೀಯ ಸರ್ಕಾರವಿರಬೇಕು ಎಂಬ ನಿರ್ಣಯ ಸಮ್ಮೇಳನದ ಮುಂದೆ ಬರಬೇಕಾಗಿತ್ತು. ಅಂತಹ ನಿರ್ಣಯ ಬರುವುದಾದರೆ ತಾನು ಬರುವುದೇ ಇಲ್ಲ. ಎಂದ ಗವರ್ನ್‌ರ‍್. ವಿಶ್ವೇಶ್ವರಯ್ಯನವರು ಹೇಳಿದರು : ’ನಾವೇಕೆ ಕಾಯಬೇಕು? ಉದ್ಘಾಟನೆಯೇ ಬೇಡ, ಸಮ್ಮೇಳನ ನಡೆಸೋಣ’.

ಮೈಸೂರು ರಾಜ್ಯದಲ್ಲಿ ಸಾವಿರಾರು ಸಂಸಾರಗಳಿಗೆ ಆಹಾರ, ಸಹಸ್ರ ಸಹಸ್ರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಲಕ್ಷಾಂತರ ಮನೆಗಳಿಗೆ ಬೆಳಕು ಕೊಟ್ಟವರು ಸರ‍್ ಎಂ.ವಿ. ಅಲ್ಲದೆ ಇಡೀ ನಾಡಿನ ಸಂಪತ್ತೇ ಬೆಳೆಯುವ ದಾರಿಯನ್ನು ತೋರಿಸಿಕೊಟ್ಟವರು ಈ ಮಹಾನುಭಾವರು.

ಭದ್ರಾವತಿ ಕಬ್ಬಿಣದ ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಕೃಷ್ಣರಾಜಸಾಗರ, ಮೈಸೂರುಬ್ಯಾಂಕ್…,…. ಹೀಗೆ ವಿಶ್ವೇಶ್ವರಯ್ಯನವರ ಪ್ರತಿಯೊಂದು ಸೃಷ್ಟಿಯೂ ಹಿರಿದಾದದ್ದು, ಘನವಾದದ್ದು. ಆದರೆ ಇವೆಲ್ಲವನ್ನೂ ಮೀರಿ ನಿಂತ ಹಿರಿಮೆ, ಘನತೆ, ಈ ಕನಸುಗಾರ ಕಾರ್ಯಧೀರ ಭಾರತರತ್ನದ ವ್ಯಕ್ತಿತ್ವ.

ಅವರೊಮ್ಮೆ ಹೇಳಿದರು :

’ನೆನಪಿಡು, ಒಂದು ರೈಲ್ವೆ ಕ್ರಾಸಿಂಗನ್ನು ಗುಡಿಸುವುದಕ್ಕೆ ನಿನ್ನ ಕೆಲಸವಾಗಿದ್ದರೂ , ಪ್ರಪಂಚದಲ್ಲೇ ಇಷ್ಟು ಸ್ವಚ್ಛವಾದ ಕ್ರಾಸಿಂಗ್ ಇಲ್ಲ ಎನ್ನುವ ಹಾಗೆ ಇದನ್ನು ಇಟ್ಟುಕೊಳ್ಳುವುದು ನಿನ್ನ ಕರ್ತವ್ಯ’.