ಮೈಸೂರು ನಗರ ಬಹಳ ಪ್ರಾಚೀನ ಕಾಲದಿಂದಲೂ ಕಲೆಗೆ ಹೆಸರಾದ ಸ್ಥಳ. ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಲಾವಿದರುಗಳು ಕಲಾಸೇವೆಮಾಡುವ ಮೂಲಕ ಕೀರ್ತಿಶೇಷರಾಗಿದ್ದಾರೆ. ಮೈಸೂರು ನಗರ ಕಲೆಗೆ ನೆಲೆ ಆಗಲು ಬಹುಷ : ಮೈಸೂರಿಗಿರುವ ಉತ್ತಮವಾದ ಐತಿಹಾಸಿಕ ಪರಂಪರೆ ಹಾಗು ಸಾಂಸ್ಕೃತಿಕ ಹಿನ್ನೆಲೆಯೇ ಕಾರಣವಿದ್ದಿರಬಹುದು. ಹಾಗೆಯೇ ಮೈಸೂರನ್ನು ಆಳಿದ ಒಡೆಯರುಗಳ ಕಲಾಪ್ರೋತ್ಸಾಹದಿಂದಲೂ ಕೂಡಾ ನೂರಾರು ಮಂದಿ ಉತ್ತಮ ಕಲಾವಿದರನ್ನು ಮೈಸೂರು ಆಕರ್ಷಿಸುತ್ತಿತ್ತು. ಎಲ್ಲೆಲ್ಲೋ ಹುಟ್ಟಿ ಬೆಳೆದು ವಿದ್ಯೆ ಅರ್ಜಿಸಿದ ಪ್ರತಿಭಾನ್ವಿತ ಕಲಾವಿದರುಗಳನ್ನು ಮೈಸೂರ ಉ ನಗರ ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತು. ಹೀಗಾಗಿ ಮೈಸೂರಿನಲ್ಲಿ ಕಲಾಪರಂಪರೆ ಇಂದಿಗೂ ಭದ್ರವಾಗಿ ಭವ್ಯವಾಗಿ ಉಳಿದು ಬೆಳೆದು ಬಂದಿದೆ.

ಮೈಸೂರಿನ ಕಲಾರಂಗದಲ್ಲಿ ಶಾಸ್ತ್ರೀಯ ನೃತ್ಯ ಕಲೆಯು ಉಳಿದು ಬೆಳೆದು ಬರಲು ಶ್ರಮಿಸಿದ ಹಲವು ಪ್ರಮುಖಕ ನೃತ್ಯಕಲಾವಿದರ ಪೈಕಿ ನಾಟ್ಯಾಚಾರ್ಯ ಎಂ. ವಿಷ್ಣುದಾಸ್‌ ಅವರ ಹೆಸರನ್ನು ಯಾರೂ ಕೂಡಾ ಮರೆಯಲು ಸಾಧ್ಯವಿಲ್ಲ. ಎಂ. ವಿಷ್ಣುದಾಸ್‌ರವರು ಮೂಲತಃ ಕಾಸರಗೋಡು ತಾಲ್ಲೂಕಿನ ಮುಟ್ಟತ್ತೋಡಿ ಎಂಬ ಗ್ರಾಮದ ಮರ್ಧಂಬೈಲ್‌ ಎಂಬ ಹಳ್ಳಿಯಲ್ಲಿ ೧೯೨೭ರಲ್ಲಿ ಜನಿಸಿದರು. ಕಾಸರಗೋಡಿನಲ್ಲಿದ್ದಾಗಲೇ ಯಕ್ಷಗಾನದ ಕುಣಿತಗಳಿಂದ ಪ್ರಭಾವತಿರಾದ ಇವರಿಗೆ ಶಾಸ್ತ್ರೀಯ ನೃತ್ಯ ಭರತನಾಟ್ಯವನ್ನು ತನ್ನ ಕಲಾಮಾಧ್ಯಮವನ್ನಾಗಿ ಆರಿಸಿಕೊಳ್ಳುವ ಆಸೆ ಚಿಗುರಿತು . ಶಾಸ್ತ್ರೀಯ ಸಂಗೀತ ಮತ್ತು ನೃತ್ಯಭ್ಯಾಸ ಮಾಡುವ ಹಂಬಲ ಹೊಂದಿ ತನ್ನ ಇಪ್ಪತ್ತನೆಯ ವಯಸ್ಸಿನಲ್ಲೇ ಮೈಸೂರಿಗೆ ವಲಸೆ ಬಂದ ವಿಷ್ಣುದಾಸ್‌ ಸುಮಾರು ಎಂಟು ವರ್ಷಗಳ ಕಾಲ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಮೈಸೂರಿನ ಹಿರಿಯ ಕಲಾವಿದರಾದ ವಿದ್ವಾನ್‌.ಕೆ.ಎಸ್‌. ರಾಜಗೋಪಾಲ್‌ ಅವರಿಂದ ಮೃದಂಗ ಹಾಗೂ ನೃತ್ಯದಲ್ಲಿ ಶಿಕ್ಷಣವನ್ನು ಆರಂಭಿಸಿದ ಅವರು ಆರುವರ್ಷಗಳ ಕಾಲ ರಾಜಗೋಪಾಲ್‌ ಅವರಲ್ಲಿ ಗುರುಕುಲ ಪದ್ಧತಿಯಂತೆ ಕಠಿಣ ಪರಿಶ್ರಮದೊಂದಿಗೆ ಶಿಕ್ಷಣ ಪಡೆದರು. ಇದರ ಜತೆಗೆ ಶ್ರೀರಾಜಶೇಖರಯ್ಯ (ಪುಟ್ಟೂ ಮಾಸ್ಟ್ರು) ಇವರಿಂದ ಸಂಗೀತದಲ್ಲೂ ಸಾಕಷ್ಟು ತರಬೇತಿ ಪಡೆದರು. ನಾಟ್ಯವಿದುಷಿ ಪುಟ್ಟಕ್ಕಯ್ಯನವರಿಂದ ನೃತ್ಯದಲ್ಲಿ ಮುಖ್ಯವಾಗಿ ಅಡವುಗಳಲ್ಲಿ ವಿಶೇಷ ತರಬೇತಿ ಇವರು ಪಡೆದಿರುವುದರಿಂದ ಇವರ ಶಿಷ್ಯ ಪರಂಪರೆ ಯವರಲ್ಲಿ ಇಂದೂ ಕೂಡಾ ನಾವು ನೃತ್ಯಭಾಗದಲ್ಲಿ ಉತ್ತಮವಾದ ಅಂಗಶುದ್ಧಿಯನ್ನು ಕಾಣಬಹುದಾಗಿದೆ.

‘ಶಿಷ್ಯಕೋಟಿ’: ತಮ್ಮ ಗುರುಗಳಿಂದ ಕಲಿತದ್ದನ್ನು ಮಾತ್ರವೇ ಇವರು ಶಿಷ್ಯರಿಗೆ ಹೇಳಿಕೊಡದೆ ತಮ್ಮ ಸೃಜನಶೀಲ ಗುಣದಿಂದಾಗಿ ಹಲವು ಹೊಸ ಹೊಸ ನೃತ್ಯಗಳನ್ನು ಸಂಯೋಜಿಸಿ ತಮ್ಮ ಶಿಷ್ಯರಿಗೆ ಬೋಧಿಸಿದ್ದಾರೆ. ೧೯೫೫ನೇ ಇಸವಿಯಿಂದ ಮೈಸೂರಿನಲ್ಲಿ ಶ್ರೀ ಸರಸ್ವತೀ ನೃತ್ಯಕಲಾಮಂದಿರ ಎಂಬ ನೃತ್ಯ ಶಾಲೆಯೊಂದನ್ನು ಆರಂಭಿಸಿ ೧೯೯೧ ರ ಡಿಸೆಂಬರ್ ವರೆಗೆ ಅಂದರೆ ಅವರ ನಿಧನದ ದಿನದ ವರೆಗೂ ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ. ೧೯೬೫ ರಿಂದ ಸುಮಾರು ೧೯೮೫ರ ವರೆಗೆ ಮೈಸೂರು ನಗರದ ಯಾವುದೇ ಶಾಲಾ ಕಾಲೇಜಿನ ವಾರ್ಷಿಕೋತ್ಸವವಾಗಲೀ ಅಥವಾ ಇತರ ಯಾವುದೇ ವಿಶೇಷ ಸಮಾರಂಭಗಳಿರಲಿ ಅಲ್ಲಿ ವಿಷ್ಣುದಾಸ್‌ ಅವರ ಶಿಷ್ಯರ ನೃತ್ಯಪ್ರದರ್ಶನ ಇದ್ದೇ ಇರುತ್ತಿತ್ತು. ಮೈಸೂರಿನ ಸರ್ಕಾರೀ ಮಹಾರಾಣೀ ಕಾಲೇಜಿನ ವಾರ್ಷಿಕೋತ್ಸವಗಳಲ್ಲಿ ತಪ್ಪದಂತೆ ಹದಿನೈದು  ವರ್ಷಗಳ ಕಾಲ ನೃತ್ಯ ಕಾರ್ಯಕ್ರಮ ತಮ್ಮ ಶಿಷ್ಯರ ಮೂಲಕ ಕೊಡಿಸಿದ ಕೀರ್ತಿ ಇವರದ್ದಾಗಿದೆ.

ಹಿಂದೆ ಗಣಪತಿ ಹಬ್ಬ ಬಂತೆಂದರೆ ಮೈಸೂರಿನಲ್ಲಿ ಎಲ್ಲೆಲ್ಲೂ ಸಾರ್ವಜನಿಕ ಗಣೇಶೋತ್ಸವದ ವೈಭವ ಪೂರ್ಣ ವ್ಯವಸ್ಥೆ ಇರುತ್ತಿತ್ತು. ಈಗಿನಂತೆ ಆರ್ಕೆಸ್ಟ್ರಾಗಳಿಗೆ ಅಲ್ಲಿ ಅಂತಹ ಪ್ರಾಶಸ್ತ್ಯ ವಿರುತ್ತಿರಲಿಲ್ಲ. ಶಾಸ್ತ್ರೀಯ ಸಂಗೀತ ಕಲಾವಿದರುಗಳನ್ನು ಹೊರ ಊರುಗಳಿಂದಲೂ ಸಂಘಟಕರು ಕರೆಸುತ್ತಿದ್ದರು. ಹಾಗೆಯೇ ವಿಷ್ಣುದಾಸ್‌ ಅವರ ಸರಸ್ವತೀ ನೃತ್ಯಕಲಾ ಮಂದಿರದ ಕಲಾವಿದರ ಪ್ರದರ್ಶನ ಹೆಚ್ಚು ಕಡಿಮೆ ಎಲ್ಲಾ ಪ್ರತಿಷ್ಠಿತ ವೇದಿಕಗೆಳಲ್ಲೂ ಏರ್ಪಾಟಾಗುತ್ತಿತ್ತು. ಅವರ ಶಿಷ್ಯರಲ್ಲೊಬ್ಬನಾಗಿ ಈಗಲೂ ಜ್ಞಾಪಕದಲ್ಲಿರುವಂತೆ ೧೯೭೩ ಅಥವಾ ೭೪ ಇರಬಹುದು ಆ ವರ್ಷದ ಗಣಪತಿ ಉತ್ಸವದ ಸಂದರ್ಭದಲ್ಲಿ ಒಟ್ಟು ೪೫ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟ ಕೀರ್ತಿ ವಿಷ್ಣುದಾಸ್‌ ಅವರದ್ದು. ಕೆಲವು ದಿನಗಳಂತೂ ಒಂದೇ ದಿನ ೬ರಿಂದ ೯ರ ವರೆಗೆ ಒಂದು ಕಡೆ ಕಾಯ್ಕ್ರಮ ಮುಗಿಸಿ ೯.೩೦ ರಿಂದ ೧೨.೩೦ರ ರಾತ್ರಿ ವರೆಗೆ ಇನ್ನೊಂದು ವೇದಿಕೆಯ ಮೇಲೆ ಕಾರ್ಯಕ್ರಮ ನಡೆಸಿಕೊಟ್ಟದ್ದೂ ಉಂಟು. ಅಂತಹ ಎಲ್ಲಾ ಸಂದರ್ಭಗಳಲ್ಲೂ ಆರು ಗಂಟೆಗಳ ಅವಧಿಯವರೆಗೂ ದಾಸ್‌ ಅವರೇ ನಟುವಾಂಗ ಹಾಡುಗಾರಿಕೆ ಎರಡನ್ನು ಒಬ್ಬರೇ ನಿರಾಯಾಸವಾಗಿ ನಿರ್ವಹಿಸುತ್ತಿದ್ದರು. ೧೯೮೫ರ ವರೆಗೂ ಅವರು ತಮ್ಮ ಯಾವುದೇ ನೃತ್ಯಕಾರ್ಯಕ್ರಮಕ್ಕೆ ಹಾಡುವವರನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಅವರೇ ಶುದ್ಧವಾಗಿ ಇಂಪಾಗಿ ಹಾಡುತ್ತಿದ್ದರು ತುಂಬಾ ಸ್ಫೂರ್ತಿದಾಯಕವಾಗಿ ನಟುವಾಂಗ ಮಾಡುತ್ತಿದ್ದರು. ಒಬ್ಬ ಪರಿಪೂರ್ಣ ನಾಟ್ಯಗುರು ಎನಿಸಿಕೊಳ್ಳಬೇಕಾದರೆ ಆತನಿಗೆ ಗಾಯನ, ನರ್ತನ, ಶಾಸ್ತ್ರ ಈ ಮೂರರಲ್ಲೂ ಸಾಕಷ್ಟು ಪರಿಶ್ರಮ ಇರಲೇಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.

೧೯೬೯ ರಲ್ಲೋ ಅಥವಾ ೧೯೭೦ರ ಸುಮಾರಿನಲ್ಲಿ ಒಂದು ದಿನ ಮೈಸೂರಿನ ರಂಗಾಚಾರ್ಲ ಪುರಭವನದಲ್ಲಿ ಚಿತ್ರನಟ ಕೆ.ಎಸ್‌. ಅಶ್ವಥ್ ಅವರಿಗೆ ಸನ್ಮಾನ ಸಮಾರಂಭವೊಂದು ಏರ್ಪಾಡಾಗಿತ್ತು. ಅಂದು ಸಮಾರಂಭದ ನಂತರ ವಿಷ್ಣುದಾಸ್‌ ಅವರ ಶಿಷ್ಯರಿಂದ ನೃತ್ಯ ಪ್ರದರ್ಶನವಿತ್ತು. ಪುರಭವನದ ಪೂರ್ತಿ ಜನ ಕಿಕ್ಕಿರಿದು ಸೇರಿದ್ದರು. ಇವರ ವಿಶೇಷ, ನೃತ್ಯ ಸಂಯೋಜನೆಗಳಲ್ಲೊಂದಾದ ಜನಪ್ರಿಯ ಶ್ರೀ ಕೃಷ್ಣಲೀಲಾತರಂಗಿಣಿ ಎಂಬ ನೃತ್ಯವೊಂದನ್ನು ಅಂದು ಅಲ್ಲಿ ಇಬ್ಬರು ಕಲಾವಿದರು ಆಕರ್ಷಕವಾಗಿ ಪ್ರದರ್ಶಿಸಿದರು. ಈ ನೃತ್ಯದ ಮೊದಲ ಭಾಗದಲ್ಲಿ ಶ್ರೀ ಕೃಷ್ಣನ ಬಾಲ ರೀತಿಗಳ ವರ್ಣನೆ. ಕೊನೆಯಲ್ಲಿ ಬಾಲಕೃಷ್ಣನು ಮಣ್ಣು ತಿಂದಾಗ ಯಶೋದೆ ಆತನ ತಾಯಿ ಬಿಡಿಸಿದಾಗ ಬಾಯಿಯಲ್ಲಿ ‘ವಿಶ್ವರುಪದರ್ಶನ’ ನೀಡುವ ಸನ್ನಿವೇಶ ಅಲ್ಲಿದ್ದ ಎಲ್ಲರನ್ನೂ ಮಂತ್ರಮುಗ್ದಗೊಳಿಸಿತ್ತು. ಕಿವಿಗಡಚಿಕ್ಕುವಂತೆ ಪ್ರೇಕ್ಷಕರಿಂದ ಕರತಾಡನ. ಹೊಸದಾಗಿ ನೃತ್ಯ ನೋಡಿದವರಿಗಂತೂ ಅದೊಂದು ಅಪೂರ್ವ ಅನುಭವ. ಕೆಲವರಿಗೆ ಕೃಷ್ಣ ಅಭಿನಯ ನೀಡಿದ ಪುಟಾಣಿ ಕಲಾವಿದೆಯ ಮುದ್ದು ಮುಖವನ್ನು ಕಂಡು ಆನಂದಬಾಷ್ಪವದರೆ ಇನ್ನು ಕೆಲವರಿಗೆ ವಿಶ್ವರೂಪದ ಸನ್ನಿವೇಶದ ಸಂಯೋಜನೆಯಲ್ಲಿನ ವಿಶೇಷತೆಯಿಂದಾಗಿ ರೋಮಾಂಚನ. ಈ ಕಿಕ್ಕಿರಿದ ವಾತಾವರಣದಲ್ಲಿ ಅಲ್ಲಿ ನೆರೆದಿದ್ದ ಪ್ರೇಕ್ಷಕರ ಪೈಕಿ ಒಬ್ಬ ಯುವತಿ ಭಾವೋದ್ವೇಗದಿಂದ ಸ್ಮೃತಿ ತಪ್ಪಿ ಬಿದ್ದುದೇನು ಅತಿಶಯೋಕ್ತಿಯಲ್ಲ. ಅಂತಹ ಅಂತಃಕರಣವನ್ನು ಪ್ರಚೋದಿಸಿ ಮನಮುಟ್ಟಿಸುವಂತಹ ನೃತ್ಯಕಾರ್ಯಕ್ರಮ ನಡೆಸಿಕೊಡುತ್ತಿದ್ದ ವಿಷ್ಣುದಾಸ್‌ ಅವರು ತಮ್ಮದೇ ಆದ ಅಭಿಮಾನಿ ಪ್ರೇಕ್ಷಕರ ದೊಡ್ಡ ಸಮೂಹವನ್ನೇ ಬೆಳೆಸಿ ನೃತ್ಯ ಕಲೆಯ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದರೆನ್ನಬಹುದು.

ರ‍್ಯಾಂಕುಗಳ ರಾಶಿ: ೧೯೬೫ನೆಯ ಇಸವಿಯಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ರಾಜ್ಯಮಟ್ಟದ ಶಾಸ್ತ್ರೀಯ ಭರತನಾಟ್ಯದ ಜೂನಿಯರ್, ಸೀನಿಯರ್ ಹಾಗೂ ವಿದ್ವತ್‌ ಗ್ರೇಡಿನ ಪರೀಕ್ಷೆಗಳನ್ನು ನಡೆಸಲಾರಂಭಿಸಿದರು. ಅದಕ್ಕೆ ಮೈಸೂರಿನಿಂದ ಪ್ರತಿವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಶಿಷ್ಯರನ್ನು ತಯಾರಿಗೊಳಿಸಿ ಹಾಜರ್ ಪಡಿಸುತ್ತಿದ್ದವರೆಂದರೆ ಎಂ. ವಿಷ್ಣುದಾಸ್‌. ಒಂದೆರಡು ವರ್ಷಗಳನ್ನು ಹೊರತು ಪಡಿಸಿದರೆ ಇನ್ನೆಲ್ಲಾ ವರ್ಷಗಳೂ ಇವರ ಶಿಷ್ಯರದೇ ಸಿಂಹಪಾಲು. ೧೯೯೧ರವರೆಗೆ ಒಟ್ಟು ೩೦ ಕ್ಕೂ ಹೆಚ್ಚು ಸಂಖ್ಯೆಯ ರ‍್ಯಾಂಕುಗಳನ್ನು ತನ್ನದಾಗಿಸಿಕೊಂಡಿರುವ ಇವರ ಸಂಸ್ಥೆ ರ‍್ಯಾಂಕುಗಳ ರಾಶಿಯನ್ನೇ ಬಾಚಿಕೊಂಡಿದೆ. ತಮ್ಮ ಕೊನೆಯ ಉಸಿರಿರುವ ವರೆಗೂ ನೃತ್ಯಕಲಾಸೇವೆಯನ್ನು ನಿಸ್ಪೃಹತೆಯಿಂದ ಮಾಡಿಕೊಂಡು ಬಂದ ವಿಷ್ಣುದಾಸ್‌ ಅವರು ಕಲೆಯನ್ನು ಎಂದು ಮಾರುವ ಸರಕಾಗಿ ಬಳಸಿಕೊಂಡಿರಲಿಲ್ಲ. ಎಷ್ಟೋ ಸಂದರ್ಭಗಳಲ್ಲಿ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನೂ ಅವರು ಅಪೇಕ್ಷಿಸುತ್ತಿರಲಿಲ್ಲ. ದೇಹಿ ಎಂದು ಬಂದವರಿಗೆ ಸಂತೋಷದಿಂದಲೇ ಬಿಚ್ಚುಮನಸ್ಸಿನಿಂದ ಪಾಠ ಹೇಳುವ ಪರಿಪಾಠವನ್ನು ಅವರು ಬೆಳೆಸಿಕೊಂಡಿರಲಿಲ್ಲ.

ಕಲಾವಿದರ ಸಂಘಟನೆ: ಕಲಾವಿದರನ್ನು ಸಂಘಟಿಸುವುದೆಂದರೆ ಕಪ್ಪೆಗಳನ್ನು ತಕ್ಕಡಿಗೆ ಹಾಕಿದಂಥೆ ಎಂಬ ಅಪವಾದವೊಂದಿದೆ ಹಾಗೆಯೇ ನೂರು ಜನಡೆಗಳನ್ನಾದರೂ ಸೇರಿಸಬಹುದು ಆದರೆ ಮೂರು ಮಂದಿ ಕಲಾವಿದರನ್ನು ಒಟ್ಟು ಸೇರಿಸುವುದು ಅಸಾಧ್ಯ ಎಂಬ ಮಾತೂ ಇದೆ. ಆದರೆ ಈ ಮಾತುಗಳಲ್ಲಿ ಖಂಡಿತಾ ಹುರುಳಿಲ್ಲ ಎನ್ನುತ್ತಿದ್ದ ವಿಷ್ಣುದಾಸ್‌ ಅವರು ನೃತ್ಯಕಲಾವಿದರನ್ನು ಸಂಘಟಿಸಿ ಒಂದೇ ವೇದಿಕೆಯಡಿ ತರಬೇಕೆಂಬ ಛಲದಿಂದ ಭಾರತೀಯ ನೃತ್ಯ ಕಲಾ ಪರಿಷತ್‌ ಎಂಬ ನೃತ್ಯ ಕಲಾವಿದರ ಒಕ್ಕೂಟವೊಂದನ್ನು ೧೯೭೭ರಲ್ಲಿ ಸ್ಥಾಪಿಸಿ ಅದರ ಗೌರವ ಸ್ಥಾಪಕ ಅಧ್ಯಕ್ಷರಾಗಿ ಹದಿನೈದು ವರ್ಷಗಳ ಕಾಲ ದುಡಿದರು. ಈ ಸಂಸ್ಥೆ ನೃತ್ಯಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುತ್ತ ಕಲಾವಿದರ ಹಿತಾಸಕ್ತಿಗೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತ, ಉದಯೋನ್ಮಖ ಕಲಾವಿದರಿಗೆ ಹಿತಾಸಕ್ತಿಗೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತ, ಉದಯೋನ್ಮಖ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಪ್ರತಿವರ್ಷವೂ ನೃತ್ಯಕಲಾರಂಗದ ಹಿರಿಯ ಚೇತನಗಳನ್ನು ಸನ್ಮಾನಿಸುತ್ತ ಹಲವಾರು ಸದಾಶಯಗಳಿನ್ನಿಟ್ಟುಕೊಂಡು ಇಂದಿಗೂ ಶಿಸ್ತಿನಿಂದ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕು ವಿಷ್ಣುದಾಸ್‌ ಅವರ ಶ್ರಮದ ಫಲವಾಗಿದೆ. ವಿಷ್ಣುದಾಸ್‌ ಅವರು ದಿನಾಂಕ ೨೭.೧೨.೧೯೯೧ರಂದು ದೈವಾಧೀನರಾದರು ಅಂದು ಬೆಳಿಗ್ಗೆ ಸುಮಾರು ೮.೩೦ ರಿಂದ ೧.೩೦ರ ವರೆಗೆ ಸತತವಾಗಿ ಬೇರೆ ವಿದ್ಯಾರ್ಥಿಗಳಿಗೆ ಪಾಠ ಹೇಳಿ ತಮ್ಜಮ ಸ್ವಗೃಹದಲ್ಲಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ನಿಧನರಾದರು. ಇವರ ಧರ್ಮ ಪತ್ನಿ ಶಾಂತಮ್ಮ ಇವರ ಎಲ್ಲಾ ಕಲಾಚಟುವಟಿಕೆಗಳಿಗೆ ಪ್ರೋತ್ಸಾಹಿಯಾಗಿದ್ದು ಇವರ ಯಶಸ್ಸಿಗೆ ಬಹುಪಾಲು ಕಾರಣರಾಗಿದ್ದರು. ಎಷ್ಟೋ ಮಂದಿಕ ಇವರ ಶಿಷ್ಯೆಯರು ವಾರಗಟ್ಟಲೆ ಇವರ ಮನೆಯಲ್ಲೇ ಇದ್ದು ಶಿಕ್ಷಣ ಪಡೆಯುತ್ತಿದ್ದರು. ಆಗ ಶಾಂತಮ್ಮನವರೇ ಸ್ವತಃ ಅಡುಗೆ ಮಾಡಿ ಶಿಷ್ಯರಿಗೆ ಸಾಕ್ಷಾತ್‌ ಅನ್ನಪೂರ್ಣೇಶ್ವರಿಯಂತೆ ಊಟ ಉಪಚಾರ ನೀಡಿ ಪ್ರೀತಿ ತೋರಿಸುತ್ತಿದ್ದುದನ್ನು ವಿಷ್ಣುದಾಸ್‌ ಅವರ ಶಿಷ್ಯರು ಇಂದೂ ನೆನೆಯುತ್ತಾರೆ.

ಇವರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ. ಮುಖ್ಯವಾಗಿ ಮಂಡ್ಯದ ಶಾಂತಲಾ ನೃತ್ಯ ಶಾಲೆಯು ಇವರಿಗೆ ನಾಟ್ಯಶಾಸ್ತ್ರ ಗೌತಮ ಎಂಬ ಪ್ರಶಸ್ತಿ ನೀಡಿದೆ. ೧೯೮೫ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯೂ ಇವರನ್ನು ಸನ್ಮಾನಿಸಿದೆ. ೧೯೯೨ರಿಂದ ಇಲ್ಲಿಯವರೆಗೆ ಪ್ರತಿವರ್ಷವೂ ತಪ್ಪದಂತೆ ‘ಭಾರತೀಯ ನೃತ್ಯಕಲಾಪರಿಷತ್‌’ ನಾಟ್ಯಾಚಾರ್ಯ ವಿಷ್ಣುದಾಸ್‌ ಸಂಸ್ಮರಣಾ ನೃತ್ಯೋತ್ಸವವನ್ನು ಮೈಸೂರಿನಲ್ಲಿ ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದೆ. ಪ್ರತಿವರ್ಷವೂ ಡಿಸೆಂಬರ್ ತಿಂಗಳ ೨೫,೨೬ ಹಾಗೂ ೨೭ (ವಿಷ್ಣುದಾಸ್‌ ನಿಧನರಾದ ದಿನ) ರಂದು ನಡೆಯುವ ಈ ಉತ್ಸವದಲ್ಲಿ ನಾಡಿನ ಹಿರಿಯ ಕಿರಿಯ ನೃತ್ಯಕಲಾವಿದರು ಸ್ವಪ್ರೇರಣೆಯಿಂದಲೇ ಬಂದು ನೃತ್ಯ ಸೇವೆ ಸಲ್ಲಿಸುತ್ತಿರುವುದು ವಿಷ್ಣುದಾಸ್‌ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರತಿವರ್ಷದ ಉತ್ಸವದಲ್ಲಿ ಈ ಪರಿಷತ್ತು ಕಿರಿಯ ಕಲಾವಿದರಿಗೆ ನೃತ್ಯಸ್ಪರ್ಧೆಗಳನ್ನು ನಡೆಸುತ್ತ ಬಂದಿದೆ. ಹಾಗೆಯೇ ಪ್ರತಿವರ್ಷವೂ ಇದು ಮಂದಿ ಕಲಾವಿದರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸುವ ಪರಿಪಾಠವನ್ನೂ ಇಟ್ಟುಕೊಂಡಿದೆ. ಬಹುಶಃ ಒಬ್ಬ ನಾಟ್ಯಗುರುಗಳ ಹೆಸರಿನಲ್ಲಿ ಮೂರುದಿನಗಳ ಕಾಲ ನಡೆಯುವ ಇಂತಹ ಉತ್ಸವ ನಾಡಿನಲ್ಲಿ ಇನ್ನೆಲ್ಲೂ ಇದ್ದಂತಿಲ್ಲ.

ನಾಟ್ಯಾಚಾರ್ಯ ವಿಷ್ಣುದಾಸ್‌ ಅವರದು ತುಂಬಾ ವಿಶಾಲ ಹೃದಯ, ಸರಳ ವ್ಯಕ್ತಿತ್ವ, ಹಾಗೂ ಸದಾ ಹಸನ್ಮುಖ. ಪ್ರೀತಿಯಿಂದ ವೈರಿಯನ್ನೂ ಗೆಲ್ಲಬಹುದು ಎಂಬ ಮಾತಿನಲ್ಲಿ ನಂಬಿಕೆ ಇಟ್ಟಿದ್ದ ಅವರು ಹಲವು ಸಂದರ್ಭಗಳಲ್ಲಿಕಲ ಅದನ್ನು ಸಾಧಿಸಿ ತೋರಿಸಿದವರು. ಧರ್ಮ ಶ್ರದ್ಧೆ, ಸಹನೆ, ದೇವರಲ್ಲಿ ಅಪಾರ ಭಕ್ತಿ ಇವರ ವ್ಯಕ್ತಿತ್ವದಲ್ಲಿ ಎದ್ದು ಕಾಣುತ್ತಿತ್ತು.