ನಾಗೇಂದ್ರಪ್ಪನವರು ೨೩-೭-೧೯೨೩ ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾತ ಆಸ್ಥಾನ ವಿದ್ವಾನ್‌ ಪಿಟೀಲು ದೊಡ್ಡವೆಂಕಟರಮಣಪ್ಪ ಹಾಗೂ ತಂದೆ ವೆಂಕಟಸುಬ್ಬಯ್ಯ ನಾಗಸ್ವರ-ಮುಖವೀಣೆ ವಿದ್ವಾಂಸರು. ಅಣ್ಣ ಎಂ.ವಿ. ರಾಮಯ್ಯ ಮತ್ತು ಎಂ.ವಿ. ಲಕ್ಷ್ಮೀನರಸಯ್ಯ ಅರಮನೆಯ ಕರ್ನಾಟಕ ವಾದ್ಯ ವೃಂದದಲ್ಲಿ ಕ್ರಮವಾಗಿ ಬ್ಯಾಂಡ್‌ಮಾಸ್ಟರ್- ಸಾಕ್ಸೋಫೋನ್‌ವಾದಕರಾಗಿದ್ದ ಕಲಾವಿದರು. ನಾಗೇಂದ್ರಪ್ಪನವರು ಅಣ್ಣ ರಾಮಯ್ಯನವರಿಂದ ಸಂಗೀತದಲ್ಲಿ ಶಿಕ್ಷಣ ಪಡೆದು ಪಾಶ್ಚಾತ್ಯ ವಾದ್ಯವಾದ ಸೆಲ್ಲೋವಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ನುಡಿಸಲು ಅಭ್ಯಾಸ ಮಾಡಿ ಸಾಧನೆಯಿಂದ ಸಿದ್ಧರಾದರು. ಮೃದಂಗ ವಾದನದಲ್ಲೂ ಪರಿಣತಿ ಪಡೆದರು.

ಬೆಂಗಳೂರು ಆಕಾಶವಾಣಿ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿದುದರ ಜೊತೆಗೆ ನಾಡಿನ ಹಲವಾರು ಸಮಾರಂಭಗಳಲ್ಲಿ ಸೆಲ್ಲೋ ವಾದನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ

ಆಕಾಶವಾಣಿಯ ವಾದ್ಯ ವೃಂದ ಕಾರ್ಯಕ್ರಮಗಳಲ್ಲಿಯೂ ನುಡಿಸಿರುತ್ತಾರೆ. ಸೆಲ್ಲೋ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿರುವ ಕನ್ನಡಿಗರು ಇವರೊಬ್ಬರೇ!

ಬೆಂಗಳೂರು ಗಾಯನ ಸಮಾಜ ಮತ್ತು ಕರ್ನಾಟಕ ಗಾನಕಲಾ ಪರಿಷತ್ತು ತಮ್ಮ ವಾರ್ಷಿಕ ಸಮ್ಮೇಳನಗಳ ಸಂದರ್ಭದಲ್ಲಿ ನಾಗೇಂದ್ರಪ್ಪನವರನ್ನು ಸನ್ಮಾನಿಸಿವೆ. ರಾಜ್ಯ ಸಂಗೀತ-ನೃತ್ಯ ಅಕಾಡೆಮಿ ೧೯೯೩-೯೪ರಲ್ಲಿ ‘ಕರ್ನಾಟಕ ಕಲಾ ತಿಲಕ’ ಎಂದು ಗೌರವಿಸಿತು.

ಶ್ರೀಯುತರ ನಿಧನದೊಡನೆ ಒಬ್ಬ ಅಪೂರ್ವ ಸೆಲ್ಲೋ ವಾದಕನ ಕೊರತೆ ಕ್ಷೇತ್ರಕ್ಕೆ ಒದಗಿತು.