ಎಂ. ವೆಂಕಟಕೃಷ್ಣಯ್ಯ

ಶೇಷಾದ್ರಿ ಅಯ್ಯರ್ ಎಂಬುವರು ಹಿಂದಿನ ಮೈಸೂರಿನ ಬಹು ಬುದ್ಧಿವಂತ, ಸಮರ್ಥ ದಿವಾನರಲ್ಲಿ ಒಬ್ಬರು. (ಆಗ ಮುಖ್ಯಮಂತ್ರಿಯನ್ನು ದಿವಾನರು ಎಂದು ಕರೆಯುತ್ತಿದ್ದರು) ಮೈಸೂರಿನಲ್ಲಿ ಅವರ ಮನೆಗೆ ಬಂದವರು ಒಮ್ಮೊಮ್ಮೆ, “ಈ ಊರಿನಲ್ಲಿ ನೋಡಬೇಕಾದದ್ದು ಏನಿದೆ?” ಎಂದು ಕೇಳುತ್ತಿದ್ದರು.

ದಿವಾನರು ಹೇಳುತ್ತಿದ್ದರು: “ಎದುರು ಮನೆಯಲ್ಲಿ ರುವವರನ್ನು ನೀವು ನೋಡಬೇಕು. ಅವರು ನನ್ನ ಪ್ರತಿಕಕ್ಷಿ. ವಿಚಾರ ಶೀಲರು, ತುಂಬಾ ಪ್ರಾಮಾಣಿಕರು.”

ಎದುರು ಮನೆಗೆ ‘ಪದ್ಮಾಲಯ’ ಎಂದು ಹೆಸರು. ಆ ಮನೆ ಯಲ್ಲಿದ್ದವರನ್ನು ಶೇಷಾದ್ರಿ ಅಯ್ಯರ್ ಮೆಚ್ಚಿಕೊಳ್ಳುವುದಕ್ಕೆ ಇನ್ನೊಂದು ಕಾರಣ-ಆತ ಹರ್ಬರ್ಟ್ ಸ್ಪೆನ್ಸರ್ ಎಂಬ ಇಂಗ್ಲಿಷ್ ಬರಹಗಾರನ ಬರಹಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದುದ್ದು. ಹರ್ಬರ್ಟ್ ಸ್ಪೆನ್ಸರ್ (೧೮೨೦-೧೯೦೩) ಬಹು ದೊಡ್ಡ ತತ್ವಶಾಸ್ತ್ರಜ್ಞ. ಶೇಷಾದ್ರಿ ಅಯ್ಯರ್ ಹೇಳುತ್ತಿದ್ದರಂತೆ: “ಆತ ಹರ್ಬರ್ಟ್ ಸ್ಪೆನ್ಸರ್ ಬರೆದಿರುವುದನ್ನೆಲ್ಲ ಒಂದು ಚೂರೂ ಬಿಡದಂತೆ ಓದಿದ್ದಾರೆ; ಆ ಬರಹದ ವಿಷಯ ಅಧಿಕಾರದಿಂದ ಮಾತನಾಡಬಲ್ಲರು.”

ಸಮರ್ಥ ದಿವಾನರಿಂದ ಈ ಪ್ರಶಂಸೆ ಗಳಿಸಿದವರು ಬಿ.ಎ. ಪರೀಕ್ಷೆ ಸಹ ಮಾಡಿದವರಲ್ಲ, ದೊಡ್ಡ ಅಧಿಕಾರಿಗಳಲ್ಲ, ಶ್ರೀಮಂತರಲ್ಲ. ಉಪಾಧ್ಯಾಯರು, ಪತ್ರಿಕೆಗಳನ್ನು ನಡೆಸುತ್ತಿದ್ದರು; ಪ್ರಜಾಪ್ರತಿನಿಧಿ ಸಭೆಯ ಸದಸ್ಯರು. ಎಷ್ಟೋ ಬಾರಿ ದಿವಾನರನ್ನು ವಿರೋಧಿಸಿದವರು. ಆಗಿನ ಮೈಸೂರು ಸಂಸ್ಥಾನಕ್ಕೆಲ್ಲ ಅಚ್ಚು ಮೆಚ್ಚಾಗಿದ್ದರು. ಇವರು – ಎಂ.ವೆಂಕಟಕೃಷ್ಣಯ್ಯನವರು.

ವೃದ್ಧ ಪಿತಾಮಹ ಎಂ. ವೆಂಕಟಕೃಷ್ಣಯ್ಯನವರು ಕರ್ನಾಟಕಕ್ಕೆ ಮಾಡಿರುವ ಕೆಲಸ ಅಷ್ಟಿಷ್ಟಲ್ಲ. ಪತ್ರಿಕೋದ್ಯಮ ದಲ್ಲಿ ‘ಪತ್ತಿಕೋದ್ಯಮ ಪಿತಾಮಹ’ನೆಂಬ ಬಿರುದು. ವಿದ್ಯಾಭಿವೃದ್ಧಿಯಲ್ಲಿ ವಿದ್ಯಾರ್ಥಿಗಳಿಂದ ‘ತಾತಯ್ಯ’ ಎಂಬ ನಾಮಾಂಕಿತ, ಬಡ-ಬಗ್ಗರ ಸೇವೆಯನ್ನು ತೆಗೆದುಕೊಂಡರೆ ‘ದಯಾಸಾಗರ’ ಎಂಬ ಹಿರಿಮೆ. ಗಾಂಧಿಯವರಿಂದ ‘ಭೀಷ್ಮಾಚಾರ್ಯ’ ಎಂಬ ಪ್ರಶಂಸೆ. ‘ಜನ ಸೇವೆಯೇ ಜನಾರ್ಧನ ಸೇವೆ’ ಎಂದು ನುಡಿದುದನ್ನು ನಡೆಯಲ್ಲಿ ತೋರಿಸಿ ತಮ್ಮ ಹೆಸರನ್ನು ಮನೆಯ ಮಾತನ್ನಾಗಿಮಾಡಿ ಮಹತ್ವಪೂರ್ಣ, ಚಿರಸ್ಮರಣೀಯವಾದ ಜೀವನವನ್ನು ನಡೆಸಿದರು.

ಧರ್ಮನಿಷ್ಠ ತಂದೆತಾಯಿ

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ಮಗ್ಗೆ ಎಂಬುದು ಒಂದು ಸ್ಥಳ. ಅಲ್ಲಿ ಸುಬ್ಬಯ್ಯ ಮತ್ತು ಭಾಗೀರಥಮ್ಮ ಎಂಬ ಗಂಡಹೆಂಡತಿ. ೧೮೪೪ನೇ ಆಗಸ್ಟ್ ತಿಂಗಳ ೨೦ ನೆಯ ದಿನಾಂಕ ಶ್ರಾವಣ ಬಹುಳ ಗೋಕುಲಾಷ್ಟಮಿಯ ದಿನ ಅವರಿಗೆ ಗಂಡು ಮಗು ಜನಿಸಿತು. ಮಗುವಿಗೆ ವೆಂಕಟಕೃಷ್ಣಯ್ಯ ಎಂಬ ನಾಮಕರಣ ವನ್ನು ಮಾಡಿದರು.

ತಂದೆ ಸುಬ್ಬಯ್ಯನವರು ವೇದವನ್ನು ಅಭ್ಯಾಸ ಮಾಡಿದ್ದರು. ಸ್ವಲ್ಪ ಜಮೀನಿತ್ತು. ತಮ್ಮ ಮನೆಗೆ ಬೇಕಾದ ಸೌದೆ, ಊಟದೆಲೆಗಳನ್ನು ತಾವೇ ಕಾಡಿನಿಂದ ತರುತ್ತಿದ್ದರು. ದೊಡ್ಡ ಸಂಸಾರ. ಇವರಿಗೆ ಇಬ್ಬರು ಹೆಣ್ಣುಮಕ್ಕಳು, ಪೆದ್ದ ಅಮ್ಮಣಮ್ಮ ಮತ್ತು ಚಿನ್ನ ಅಮ್ಮಣಮ್ಮ.

ಸುಬ್ಬಯ್ಯನವರು ಕಾಲಕ್ಕೆ ಸರಿಯಾಗಿ ನಿತ್ಯ ಪೂಜೆಗಳನ್ನು ಮುಗಿಸಿ, ಎರಡು ಬಾರಿ ದೇವಾರ್ಚನೆಯನ್ನು ಮಾಡುತ್ತಿದ್ದರು. ಪ್ರತಿದಿನವೂ ಪೂರ್ವ ಸಂಪ್ರದಾಯದಂತೆ ವಾಲ್ಮೀಕಿ ರಾಮಾ ಯಣವನ್ನು ಪಾರಾಯಣ ಮಾಡುತ್ತಿದ್ದರು. ಈ ಗ್ರಂಥದಲ್ಲಿ ಅವರಿಗೆ ಬಹು ಭಕ್ತಿ, ಪ್ರೀತಿ. ಮಕ್ಕಳಿಗೆ ಸಂಸ್ಕೃತ, ತೆಲುಗು, ಕನ್ನಡವನ್ನು ಹೇಳಿಕೊಡುತ್ತಿದ್ದರು. ಜೀವನಕ್ಕೆ ಉಪಯುಕ್ತ ವಾದ ಪದ್ಯಗಳನ್ನು ಕಂಠಪಾಠ ಮಾಡಿಸುತ್ತಿದ್ದರು.

ಬಾಲ್ಯ

ವೆಂಕಟಕೃಷ್ಣಯ್ಯ ಬಾಲಕರಾಗಿದ್ದಾಗ ಆ ಊರಿನಲ್ಲಿ ತೊಂಬತ್ತು ವರ್ಷ ವಯಸ್ಸಿನ ಅರುಣಾಚಲ ಶಾಸ್ತ್ರಿಗಳು ಅನೇಕ ಶಾಸ್ತ್ರಗಳ ಪಂಡಿತರಾಗಿದ್ದು ಪುಣ್ಯ ಕಥೆಗಳನ್ನು ಹೇಳುತ್ತಿದ್ದರು. ಆಗ ಬಾಲಕ ವೆಂಕಟಕೃಷ್ಣಯ್ಯ ಅಲ್ಲಿಗೆ ಹೋಗಿ ಕಥೆ-ಪುರಾಣಗಳನ್ನು ಕೇಳುತ್ತಾ ಅವುಗಳಲ್ಲೇ ತಲ್ಲೀನ ನಾಗುತ್ತಿದ್ದ. ಇದು ಆತನ ಮೇಲೆ ಬಹಳ ಪ್ರಭಾವವನ್ನುಂಟು ಮಾಡಿತು.

೧೮೫೫ರಲ್ಲಿ ಸುಬ್ಬಯ್ಯನರು ನಿಧನರಾದರು. ಆಗ ವೆಂಕಟ ಕೃಷ್ಣಯ್ಯನಿಗೆ ಒಂಬತ್ತು-ಹತ್ತು ವರ್ಷ.

ಕಷ್ಟದ ಜೀವನ

ಭಾಗೀರಥಮ್ಮನವರು ತಮ್ಮ ನಾಲ್ಕು ಮಕ್ಕಳನ್ನು ಕರೆದು ಕೊಂಡು ಮೈಸೂರಿಗೆ ಬಂದರು. ಅರಮನೆಯಲ್ಲಿ ಕೆಲಸದಲ್ಲಿದ್ದ ಭಾಗವತ ಸುಬ್ಬರಾಯರು ಇವರಿಗೆ ತಮ್ಮ ಮನೆಯ ಲಾಯದಲ್ಲಿದ್ದ ಒಂದು ಚಿಕ್ಕ ಮನೆಯನ್ನು ಕೊಟ್ಟರು. ಹೆಣ್ಣುಮಕ್ಕಳು ಬೇರೆಯವರ ಮನೆಗೆ ಕಾರಂಜಿ ಕೆರೆಯಿಂದ ನೀರು ತಂದು ಕೊಡುತ್ತಿದ್ದರು; ಅದಕ್ಕೆ ಅವರು ಕೊಡ ಒಂದಕ್ಕೆ ಒಂದು ಕಾಸನ್ನು ಕೊಡುತ್ತಿದ್ದರು. ಇದರಿಂದ ಬಂದ ಆದಾಯದಲ್ಲಿ ಜೀವನ ಸಾಗಬೇಕಾಗಿತ್ತು. ಹೀಗೆ ತಾಯಿ ಮತ್ತು ಅಕ್ಕ ವೆಂಕಟಕೃಷ್ಣಯ್ಯನನ್ನು ಬೆಳೆಸಿದರು. ಭಾಗವತ ಸುಬ್ಬರಾಯರಿಂದ ಈತನಿಗೆ ಉಪನಯನ ಆಯಿತು.

 

‘ನನಗೆ ವಿದ್ಯೆ ಬೇಕು, ಇನ್ನೇನೂ ಬೇಡ.’

ಹುಡುಗನಿಗೆ ಇಂಗ್ಲಿಷ್ ಕಲಿಯಬೇಕೆಂಬ ಆಸೆ. ಬಡ ಹುಡುಗ. ತಂದೆ ಇಲ್ಲ. ಯಾರ ಹತ್ತಿರ ತನ್ನ ಆಸೆಯನ್ನು ಹೇಳಿ ಕೊಳ್ಳುವುದು?

ಒಂದು ದಿನ ಹುಡುಗ ಸುಬ್ಬರಾಯರ ಮುಂದೆ ಕೈಮುಗಿದು ಮಾತಿಲ್ಲದೆ ನಿಂತ.

ಸುಬ್ಬರಾಯರಿಗೆ ‘ಅಯ್ಯೋ ಪಾಪ’ ಎನ್ನಿಸಿತು. “ಏನು ಬೇಕಪ್ಪ?” ಎಂದು ಕೇಳಿದರು.

“ನನಗೆ ವಿದ್ಯೆ ಬೇಕು, ಕೊಡಿಸಿ. ಇನ್ನೇನೂ ಬೇಡ” ಎಂದು ಹುಡುಗ. ಅವನ ಕಣ್ತುಂಬ ನೀರು. “ನಾನು ಅನಾಥ, ನೀವೇ ತಂದೆಯ ಹಾಗೆ” ಎಂದ.

ಸುಬ್ಬರಾಯರಿಗೆ ಕನಿಕರವಾಯಿತು. ಮೆಚ್ಚಿಗೆಯಾಯಿತು. “ಅಳಬೇಡ ಮಗೂ, ವಿದ್ಯಾಭ್ಯಾಸ ಮಾಡಿಸುತ್ತೇನೆ” ಎಂದರು. ಆತನನ್ನು ರಾಜಾ ಸ್ಕೂಲ್ ಎಂಬ ಶಾಲೆಗೆ ಸೇರಿಸಿದರು. ಆಗ ವೆಂಕಟಕೃಷ್ಣಯ್ಯನಿಗೆ ಹದಿನಾಲ್ಕು ವರ್ಷ. ಅಲ್ಲಿದ್ದ ಇತರ ಹುಡುಗರು ಈತನಿಗಿಂತ ಬಹಳ ಚಿಕ್ಕವರಾಗಿದ್ದರು. ಮೊದ ಮೊದಲು ಅವರೊಡನೆ ಓದಲು ಸ್ವಲ್ಪ ನಾಚಿಕೆಯಾದಂತೆ ಆದರೂ ಅನಂತರ ಅವರೊಡನೆ ಕಲೆತು ವಿದ್ಯಾಭ್ಯಾಸವನ್ನು ಮುಂದುವರಿಸಿದ.

ಮೂರು ವರ್ಷಗಳಾದ ಮೇಲೆ ವೆಸ್ಲಿನ್ ಮಿಷನ್ ಶಾಲೆ ಯಲ್ಲಿ ವ್ಯಾಸಂಗ ನಡೆಯಿತು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಯಿತು. ಈತನಿಗೆ ಯಾವಾಗಲೂ ಓದುವುದರ ಮೇಲೆ ಮಮತೆ. ಗಂಭೀರವಾದ ವಿಚಾರಗಳನ್ನೊಳಗೊಂಡ ಪುಸ್ತಕಗಳನ್ನು ಯಾರಿಂದ ಲಾದರೂ ತಂದು ಓದುತ್ತಿದ್ದ. ಪಠ್ಯಪುಸ್ತಕಗಳ ಜೊತೆಗೆ ಮತ, ವಿಜ್ಞಾನ ಮುಂತಾದ ವಿಷಯಗಳನ್ನು ಕುರಿತು ಇಂಗ್ಲಿಷ್ ಗ್ರಂಥಗಳನ್ನು ಓದುತ್ತಿದ್ದ. ಕೆಲವು ವೇಳೆ ರಾತ್ರಿ ಎಲ್ಲ ಓದಿ ಬೆಳಗ್ಗೆ ಪುಸ್ತಕಗಳನ್ನು ಹಿಂತಿರುಗಿಸುತ್ತಿದ್ದನು.

ಬಡತನದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೂ ಬರೆಯುವ ಶಕ್ತಿ, ಮಾತನಾಡುವ ಚಾತುರ್ಯ, ಜ್ಞಾನಸಂಪತ್ತು ಇವುಗಳಲ್ಲಿ ಯಾವ ಪದವೀಧರ ನಿಗೂ ಏನು ಕಡಿಮೆ ಇರಲಿಲ್ಲ.

ಮೆಟ್ರಿಕ್ಯುಲೇಷನ್ ಆದಮೇಲೆ ಕೆಲಸ ಸಿಕ್ಕುವವರೆಗೂ ಮನೆ ಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಜೀವನ ಸಾಗಿಸ ಲಾರಂಭಿಸಿದರು.

ಉಪಾಧ್ಯಾಯರು

ಆಗ ಸಿ. ರಂಗಾಚಾರ್ಲು ಮೈಸೂರು ಅರಮನೆಯ ಮೇಲ್ವಿ ಚಾರಕರಾಗಿದ್ದರು. ನಜರಾಬಾದ್ ಹತ್ತಿರದ ಕುಪ್ಪಣ್ಣ ತೋಟದಲ್ಲಿದ್ದ ಟೆನಿಸ್ ಕ್ಲಬ್‌ನಲ್ಲಿ ಸ್ತ್ರೀ ವಿದ್ಯಾಭ್ಯಾಸದ ಬಗ್ಗೆ ಒಂದು ಚರ್ಚೆ ಆಯಿತು. ಅದರಲ್ಲಿ ವೆಂಕಟಕೃಷ್ಣಯ್ಯನವರೂ ಭಾಗವಹಿಸಿದ್ದರು. ಇವರ ಭಾಷಣವನ್ನು ಕೇಳಿ ರಂಗಾಚಾರ್ಲು ಅವರು ತುಂಬಾ ಮೆಚ್ಚಿಕೊಂಡರು. ಹೀಗೆ ಅವರ ಪರಿಚಯ ಆಯಿತು. ಅವರು ವೆಂಕಟಕೃಷ್ಣಯ್ಯನವರಿಗೆ, “ನೀನು ಸರ್ಕಾರಿ ಕೆಲಸಕ್ಕೆ ಸೇರಬೇಡ, ಖಾಸಗಿ ಶಾಲೆಯ ಉಪಾಧ್ಯಾಯನಾಗಿ ಪತ್ರಿಕೋದ್ಯಮವನ್ನು ಆರಂಭಿಸಿ ಪತ್ರಿಕೋದ್ಯಮಿಯಾಗು” ಎಂದು ಹೇಳಿದರು. ಅಂದಿನಿಂದ ವೆಂಕಟಕೃಷ್ಣಯ್ಯನವರು ದೇಶಸೇವಾ ದೀಕ್ಷೆಯನ್ನು ವಹಿಸಿದರು.

ಮೈಸೂರಿನ ಗುರಕಾರ್ ಮರಿಮಲ್ಲಪ್ಪ ಎಂಬವರು ಒಂದು ಶಾಲೆಯನ್ನು ಕಟ್ಟಿಸಿದರು. ರಂಗಾಚಾರ್ ಎಂಬುವರನ್ನು ಮುಖ್ಯ ಉಪಾಧ್ಯಾಯರನ್ನಾಗಿಯೂ ವೆಂಕಟಕೃಷ್ಣಯ್ಯ ನವರನ್ನು ಸಹ ಉಪಾಧ್ಯಾಯರನ್ನಾಗಿಯೂ ನೇಮಿಸಿದರು. ಮುಖ್ಯ ಉಪಾಧ್ಯಾಯರಿಗೆ ಹದಿನೈದು ರೂಪಾಯಿ ಸಂಬಳ, ವೆಂಕಟಕೃಷ್ಣಯ್ಯನವರಿಗೆ ಹತ್ತು ರೂಪಾಯಿ ಸಂಬಳ. ಕೆಲವು ದಿನಗಳನಂತರ ರಂಗಾಚಾರ್ ಸರ್ಕಾರಿ ನೌಕರಿಗೆ ಸೇರಿದ ಮೇಲೆ, ವೆಂಕಟಕೃಷ್ಣಯ್ಯನವರೇ ಶಾಲೆಯ ಮುಖ್ಯ ಉಪಾಧ್ಯಾಯರಾದರು. ಆಗ ಇಪ್ಪತ್ತೈದು ರೂಪಾಯಿಗಳ ಸಂಬಳವಾಯಿತು.

ವೆಂಕಟಕೃಷ್ಣಯ್ಯನವರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮುಡಿಪಾಗಿ ಹೋದರು. ೧೮೭೯ರಲ್ಲಿ ಮದರಾಸು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಇವರು ತಯಾರು ಮಾಡಿದ ವಿದ್ಯಾರ್ಥಿಗಳೆಲ್ಲಾ ಮೊದಲನೇ ಬಾರಿಗೆ ತೇರ್ಗಡೆಯಾದರು. ಆಗ ವ್ಯವಸ್ಥಾಪಕ ಮಂಡಳಿಗೆ ಸಂತೋಷವೋ ಸಂತೋಷ. ವೆಂಕಟಕೃಷ್ಣಯ್ಯನವರ ಕೀರ್ತಿ ಹಬ್ಬುತ್ತಿತ್ತು. ಶಾಲೆಗೆ ಸೇರಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿತ್ತು. ಸ್ಥಳ ಸಾಲದ ಹಾಗಾಯಿತು. ಈ ಹೊತ್ತಿಗೆ ಮರಿಮಲ್ಲಪ್ಪನವರೂ ತೀರಿಕೊಂಡಿದ್ದರು. ಇನ್ನಷ್ಟು ಹಣ ಕೊಟ್ಟು ಶಾಲೆಗೆ ಸಹಾಯ ಮಾಡಬೇಕೆಂದು ವೆಂಕಟ ಕೃಷ್ಣಯ್ಯನವರು ಮರಿಮಲ್ಲಪ್ಪನವರ ಹೆಂಡತಿಯವರನ್ನು ಪ್ರಾರ್ಥಿಸಿದರು. ಅವರು ಹನ್ನೆರಡು ಸಾವಿರ ರೂಪಾಯಿಗಳನ್ನು ಕೊಟ್ಟರಲ್ಲದೆ, ಸಂತೇಪೇಟೆಯ ಶಾಲೆಯನ್ನು ಮಾರಿ ಉಪಯೋಗಿಸಿಕೊಳ್ಳಿ ಎಂದು ಉದಾರವಾಗಿ ದಾನ ಮಾಡಿದರು. ವ್ಯವಸ್ಥಾಪಕ ಮಂಡಳಿಯವರ ಸಹಾಯದಿಂದ ವೆಂಕಟ ಕೃಷ್ಣಯ್ಯನವರು ರಮಾವಿಲಾಸದ ಅಗ್ರಹಾರದಲ್ಲಿ ಶಾಲೆಯನ್ನು ಕಟ್ಟಿಸಿದರು.

ಮಕ್ಕಳಲ್ಲಿ ಆದರ

ಶಾಲೆಯಲ್ಲಿ ಇವರೊಬ್ಬರು ಆದರ್ಶ ಉಪಾಧ್ಯಾಯ ರಾಗಿದ್ದರು. ಅವರ ಪಾಠಪ್ರವಚನ ಹೇಳುವ ಕ್ರಮವೇ ವಿಶಿಷ್ಟವಾದದ್ದು. ವಿದ್ಯಾರ್ಥಿಗಳ ಕಾಲಕಾಲಕ್ಕೆ ಬರಬೇಕು.

ಉಪಾಧ್ಯಾಯರುಗಳಿಗೆ ಮರ್ಯಾದೆ ಕೊಡಬೇಕು, ಗುರುಭಕ್ತಿ ಇಡಬೇಕೆಂದು ಹೇಳುತ್ತಿದ್ದರು. ಶಾಲೆಯಲ್ಲಿ ದಡ್ಡರಿಗೂ ಪ್ರವೇಶವಿರಬೇಕು, ಬರೇ ಜಾಣರನ್ನು ವಿದ್ಯಾವಂತ ರನ್ನಾಗಿ ಮಾಡುವುದು ದೊಡ್ಡ ಕೆಲಸವಲ್ಲ; ಬುದ್ಧಿವಂತ ರಲ್ಲದವರಿಗೆ ಪಾಠ ಕಲಿಸುವುದು ನಿಜವಾಗಿ ದೊಡ್ಡ ಕೆಲಸ ಎಂದು ಹೇಳುತ್ತಿದ್ದರು. ಹಾಗೆಯೇ ಬುದ್ದಿವಂತರಲ್ಲದವರನ್ನೂ ಶಾಲೆಗೆ ಸೇರಿಸಿಕೊಳ್ಳುತ್ತಿದ್ದರು. ಶಾಲೆಯಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಧಾನ್ಯತೆಯನ್ನು ಕೊಟ್ಟಿದ್ದರು. ವೆಂಕಟಕೃಷ್ಣಯ್ಯನವರು ಇಂಗ್ಲಿಷ್ ಗದ್ಯ ಮತ್ತು ಪದ್ಯ, ಚರಿತ್ರೆ ಪಾಠಗಳನ್ನು ಸೊಗಸಾಗಿ ಹೇಳುತ್ತಿದ್ದರು. ಶಾಲೆಯಲ್ಲಿ ವೀರ ಬ್ರಹ್ಮಚಾರಿ ಭೀಷ್ಮ, ಭೀಮ, ಅರ್ಜುನ, ಧ್ರುವ, ಪ್ರಹ್ಲಾದ, ಆಂಜನೇಯ ಮೊದಲಾದ ಪುರಾಣಗಳ ಆದರ್ಶ ವ್ಯಕ್ತಿಗಳ ಕಥೆಗಳನ್ನು ಹೇಳುತ್ತಿದ್ದರು. ರಾಣಾ ಪ್ರತಾಪ, ಶಿವಾಜಿ, ಬಾಲ ಗಂಗಾಧರ ತಿಲಕರು ಮೊದಲಾದ ಭಾರತದ ಸ್ವಾತಂತ್ರ್ಯದ ಹೋರಾಟದ ವೀರರ ಕಥೆಗಳನ್ನು ಹುಡುಗರು ಮೈ ಮರೆಯು ವಂತೆ ಹೇಳುತ್ತಿದ್ದರು.

ವೆಂಕಟಕೃಷ್ಣಯ್ಯನವರದು ಬಹು ಶಿಸ್ತು. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಿಸದಿದ್ದರೆ ಅವರು ತಿದ್ದಿಕೊಳ್ಳುವುದಿಲ್ಲ ಎಂದು ಅವರ ನಂಬಿಕೆ. ವಿದ್ಯಾರ್ಥಿಗಳು ತಡವಾಗಿ ಬಂದರೆ ಏಟುಗಳು, ಏಟು ಜೋರಾಗಿ ಬಿದ್ದ ವಿದ್ಯಾರ್ಥಿ ಅತ್ತರೆ, ತಮ್ಮ ಕೋಣೆಗೆ ಹೋಗಿ ಸೀಸೆಯಲ್ಲಿಟ್ಟಿರುತ್ತಿದ್ದ ಪೆಪ್ಪರ್‌ಮೆಂಟ್ ಗಳನ್ನು ಕೊಟ್ಟು ಸಂತೈಸಿ ಕಳುಹಿಸುತ್ತಿದ್ದರು. ಉಪಾಧ್ಯಾಯರು

ತಡವಾಗಿ ಬಂದರೆ ತಮ್ಮ ಕೊಠಡಿಗೆ ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದುದರಿಂದ ಉಪಾಧ್ಯಾಯರೂ ವಿದ್ಯಾರ್ಥಿಗಳೂ ಹತ್ತು-ಹದಿನೈದು ನಿಮಿಷಗಳ ಮೊದಲೇ ಶಾಲೆಗೆ ಬರುತ್ತಿದ್ದರು. ತಾತಯ್ಯನವರು ಪ್ರತಿದಿನವೂ ಎಲ್ಲಾ ತರಗತಿಗಳ ಕಡೆಗೂ ಒಂದು ಸುತ್ತು ಹೋಗಿ ನೋಡಿ ಬರುತ್ತಿದ್ದರು.

ವೆಂಕಟಕೃಷ್ಣಯ್ಯನವರದು ತುಂಬಾ ಮೃದುಮನಸ್ಸು. ಹಲವರು ಹುಡುಗರು ಅವರಿವರ ಮನೆಗಳಲ್ಲಿ ವಾರಾನ್ನ ಮಾಡಿಕೊಂಡಿರುವುದನ್ನು ನೋಡಿದರು. ಹುಡುಗರಿಗೆ ಅನಾಥಾಲಯವನ್ನು ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಸ್ಥಾಪಿಸಿದರು. ಬಡ ಹುಡುಗರಿಗೆ ತಮ್ಮ ಸಂಬಳದಿಂದಲೇ ಫೀಸನ್ನು ಕೊಡುತ್ತಿದ್ದರು, ಪುಸ್ತಕ ತೆಗೆದುಕೊಡುತ್ತಿದ್ದರು. ವೆಂಕಟಕೃಷ್ಣಯ್ಯನವರು ತಮ್ಮ ಶಾಲೆಯಲ್ಲಿ ಸೊಗಸಾದ ಗ್ರಂಥ ಭಂಡಾರವನ್ನೂ ವಾಚನಾಲಯವನ್ನೂ ವ್ಯವಸ್ಥೆ ಮಾಡಿದ್ದರು. ಕಾಲೇಜುಗಳಲ್ಲಿಯು ಅಷ್ಟು ಒಳ್ಳೆಯ ಗ್ರಂಥಭಂಡಾರವಾಗಲೀ ವಾಚನಾಲಯವಾಗಲೀ ಇರಲಿಲ್ಲವಂತೆ.

ಗರಡಿ, ಕ್ರಿಕೆಟ್, ಬ್ಯಾಡ್ ಮಿಂಟನ್, ಫುಟ್ ಬಾಲ್ ಆಟಗಳಿಗೆ ಪ್ರೋತ್ಸಾಹ ಕೊಟ್ಟರು. ಚರ್ಚಾಕೂಟಗಳನ್ನು ಏರ್ಪಡಿಸುತ್ತಿದ್ದರು.

ಹಲವು ಸಂಸ್ಥೆಗಳಿಗೆ ಆಧಾರ

ವೆಂಕಟಕೃಷ್ಣಯ್ಯನವರು ಹಲವು ಶಾಲೆಗಳ ಬೆಳವಣಿಗೆಗೆ ನೆರವಾದರು. ಮಾಧ್ಯಮಿಕ ಶಾಲೆಯಾಗಿದ್ದ ‘ಶಾರದಾ ವಿಲಾಸ ಸ್ಕೂಲ್’ ಇವರ ಪ್ರಯತ್ನದಿಂದ ಪ್ರೌಢಶಾಲೆಯಾಯಿತು. ಮೈಸೂರಿನ ಕೃಷ್ಣಮೂರ್ತಿಪುರದಲ್ಲಿ ವಿಶಾಲವಾದ ನಿವೇಶನ ದಲ್ಲಿ ಸೊಗಸಾದ ಕಟ್ಟಡನಿರ್ಮಾಣಕ್ಕೆ ಪ್ರಯತ್ನ ಮಾಡಿದರು. ತಾವು ನಡೆಸುತ್ತಿದ್ದ ಅನಾಥಾಲಯದಲ್ಲಿ ಆಗಿನ ಕಾಲಕ್ಕೆ ಟೈಪ್ ರೈಟಿಂಗ್, ಶೀಘ್ರಲಿಪಿ, ಅಕೌಂಟೆನ್ಸಿ, ಹೊಲಿಗೆ, ನೇಯುವುದು ಮೊದಲಾದ ಜೀವನ ಸಂಪಾದನೆಗೆ ನೆರವಾಗುವ ವಿಷಯಗಳನ್ನು ಹೇಳಿಕೊಡಲು ವ್ಯವಸ್ಥೆ ಮಾಡಿದರು. ಮೈಸೂರಿನಲ್ಲಿ ಅರ್ಯಬಾಲಿಕಾ ಪಾಠಶಾಲೆ, ಸದ್ವಿದ್ಯಾ ಶಾಲೆ, ದಳವಾಯಿ ಮಾಧ್ಯಮಿಕ ಶಾಲೆ, ಕೈಗಾರಿಕಾ ಶಾಲೆ, ಚಾಮ ರಾಜೇಂದ್ರ ಟಿಕ್ನಿಕಲ್ ಇನ್‌ಸ್ಟಿಟ್ಯೂಟ್, ಕುರುಡು-ಕಿವುಡು-ಮೂಗರ ಶಾಲೆಇವೆಲ್ಲ ಸ್ಥಾಪನೆಯಾಗಲು ಶ್ರಮಿಸಿದರು. ವೈದ್ಯಕೀಯ ಕಾಲೇಜ್ ಆಗಬೇಕೆಂದು ಸರ್ಕಾರವನ್ನು ಒತ್ತಾಯಮಾಡಿ ಯಶಸ್ವಿಗಳಾದರು.

೪೩ ವರ್ಷಗಳ ಅವಧಿಯಲ್ಲಿ ವೆಂಕಟಕೃಷ್ಣಯ್ಯನವರು ಸುಮಾರು ಇಪ್ಪತ್ತು ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಪಾಠ ಹೇಳಿದರು.

ಒಮ್ಮೆ, ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿಬನ್ನಿ ಎಂದು ಮಿತ್ರರೊಬ್ಬರು ಇವರಿಗ ಐದು ಸಹಸ್ರ ರೂಪಾಯಿಗಳನ್ನು ಕೊಟ್ಟರು. ಇವರು ಆ ಹಣವನ್ನು ತಾವೇ ೧೯೧೯ರಲ್ಲಿ ಪ್ರಾರಂಭಿಸಿದ್ದ ಶಾರದಾ ವಿಲಾಸ ವಿದ್ಯಾ ಸಂಸ್ಥೆಗೆ ದಾನವಾಗಿ ನೀಡಿದರು.

ರಾಜಕೀಯ ರಂಗ

ಅನೇಕ ತತ್ವಶಾಸ್ತ್ರಜ್ಞರ ಜೀವನ ಚರಿತ್ರೆಯನ್ನು ಓದಿದ್ದುದ ರಿಂದ, ವೆಂಕಟಕೃಷ್ಣಯ್ಯನವರಲ್ಲಿ ಸ್ವತಂತ್ರ ಮನೋಭಾವ ಬೇರೂರಿತ್ತು. ದಾದಾಭಾಯಿ ನವರೋಜಿಯವರಂತಹ ಅನೇಕ ಮಂದಿ ಭಾರತೀಯ ನಾಯಕರ ಪುಸ್ತಕಗಳನ್ನು ಓದಿದ್ದರು. ದೇಶಕ್ಕೆ ಬ್ರಿಟಿಷರಿಂದ ಆಗುತ್ತಿದ್ದ ಅನ್ಯಾಯದ ಪೂರ್ಣ ಅರಿವು ಅವರಿಗಿತ್ತು.

ಮೈಸೂರಿನ ಮೊದಲ ದಿವಾನರಾಗಿದ್ದ ಸಿ.ರಂಗಾಚಾರ್ಲು ಅವರು ಇವರ ಮೊದಲ ರಾಜಕೀಯ ಗುರು. ಎರಡನೆಯ ದಿವಾನರಾದ ಶೇಷಾದ್ರಿ ಅಯ್ಯರ್ ಅವರು ರಾಜಕೀಯದಲ್ಲಿ ಇವರಿಗೆ ವಿರೋಧಿಗಳು, ಆದರೂ ಇವರಲ್ಲಿ ತುಂಬಾ ಗೌರವ. ವೆಂಕಟಕೃಷ್ಣಯ್ಯನವರು ೧೮೯೨ ರಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸ್ಥಾಯೀ ಸಮಿತಿಗೆ ಕಾರ್ಯದರ್ಶಿಯಾದರು. ಆಗ ಶೇಷಾದ್ರಿ ಅಯ್ಯರ್ ಮತ್ತು ವೆಂಕಟಕೃಷ್ಣಯ್ಯನವರಿಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದವು. ಮೊದಲು ಈ ಸಮಿತಿಯ ರಚನೆಗೆ ಒಪ್ಪಿಗೆ ಕೊಟ್ಟ ಶೇಷಾದ್ರಿ ಅಯ್ಯರ್ ಅವರೇ ಈ ಸಮಿತಿಯನ್ನು ಕಡೆಗಣಿಸಲು ಪ್ರಯತ್ನಿಸಿದರು. ವೆಂಕಟಕೃಷ್ಣಯ್ಯನವರೂ ಇತರ ಸದಸ್ಯರೂ ತಮ್ಮ ಕೆಲಸವನ್ನು ಮುಂದುವರಿಸಿಕೊಂಡೇ ಹೋದರು. ಮಳೆ ಸರಿಯಾಗಿ ಬರದಿದ್ದರೂ ಸರ್ಕಾರ ಕಂದಾಯ ವಸೂಲು ಮಾಡಿದಾಗ, ರೈತರ ಪರವಾಗಿ ಸರ್ಕಾರಕ್ಕೆ ಮನವಿ ಕಳುಹಿಸಿದರು. ದಿವಾನರು, “ಆ ಸಮಿತಿ ಸತ್ತುಹೋಗಿದೆ; ಅದನ್ನು ಹೂಳಿಯಾಯಿತು; ಸುಟ್ಟಾ ಯಿತು” ಎಂದೆಲ್ಲ ಸಿಟ್ಟಿನಿಂದ ಮಾತನಾಡಿದರು. “ಅದರ ಭೂತ ಎದ್ದುಬರುತ್ತದೆ” ಎಂದರು ತಾತಯ್ಯ ದಿವಾನರಿಗೆ. ಸಮಿತಿ ತನ್ನ ಕೆಲಸವನ್ನು ಮುಂದುವರಿಸಿಕೊಂಡೇ ಹೋಯಿತು. ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಮದರಾಸಿನ ಕಡೆಯವರು ಅನೇಕರಿಗೆ ಮೈಸೂರು ಸಂಸ್ಥಾನದಲ್ಲಿ ಕೆಲಸಗಳು ದೊರೆತವು. ಆಗ ವೆಂಕಟಕೃಷ್ಣಯ್ಯನವರು ಪ್ರತಿನಿಧಿ ಸಭೆಯಲ್ಲಿ, ‘ನಮ್ಮ ಸಂಸ್ಥಾನದ ಪ್ರಜಾವರ್ಗದವರೇ ನಮ್ಮಲ್ಲಿ ಅಧಿಕಾರ ಪದವಿಗಳನ್ನು ಅಲಂಕರಿಸಬೇಕು. ಮೈಸೂರು ಮೈಸೂರಿ ನವರಿಗೇ’ ಎಂಬ ನೀತಿಯನ್ನು ಬಹು ಸ್ಪಷ್ಟವಾಗಿ ಪ್ರತಿಪಾದಿಸಿದರು. (ಶೇಷಾದ್ರಿ ಅಯ್ಯರ್ ಅವರು ತೀರಿಕೊಂಡ ಮೇಲೆ ೧೯೧೨ರಲ್ಲಿ ಈ ಹೋರಾಟದಲ್ಲಿ ವೆಂಕಟಕೃಷ್ಣಯ್ಯ ನವರು ಜಯಗಳಿಸಿದರು.)

ಶೇಷಾದ್ರಿ ಅಯ್ಯರ್ ಅವರ ರೀತಿನೀತಿಗಳನ್ನು ಹಲವು ವರ್ಷಗಳ ಕಾಲ ವೆಂಕಟಕೃಷ್ಣಯ್ಯನವರು ನಿಷ್ಠುರವಾಗಿ ವಿರೋಧಿಸಿದ್ದರು. ಅವರು ಸತ್ತಮೇಲೆ ಪತ್ರಿಕೆಯಲ್ಲಿ ಹೊಗಳಿ ಲೇಖನವನ್ನು ಬರೆದು, ‘ಅವರೊಬ್ಬರು ನನ್ನ ರಾಜಕೀಯ ವಿರೋಧಿಯಾಗಿದ್ದರೇ ಹೊರತು ವೈಯಕ್ತಿಕ ವೈರಿಯಲ್ಲ’ ಎಂದರು. ಶೇಷಾದ್ರಿ ಅಯ್ಯರ್ ಅವರ ಪ್ರತಿಮೆಯನ್ನು ನಿರ್ಮಿಸಬೇಕೆಂದು ಸಲಹೆ ಇತ್ತರು. ಶೇಷಾದ್ರಿ ಅಯ್ಯರ್ ಸಹ ವೆಂಕಟಕೃಷ್ಣಯ್ಯನವರ ಶಾಲೆಗೇ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದರು.

ವೆಂಕಟಕೃಷ್ಣಯ್ಯನವರು ತಮ್ಮ ಜೀವಿತ ಕಾಲದಲ್ಲಿ ರಂಗಾಚಾರ್ಲು ಅವರಿಂದ ಮಿರ್ಜಾ ಇಸ್ಮಾಯಿಲ್‌ರವರೆಗೆ ಹತ್ತು ಮಂದಿ ದಿವಾನರುಗಳನ್ನು ನೋಡಿದರು. ಯಾವಾಗಲೂ ಅವರು ಒಳ್ಳೆಯ ಕೆಲಸವನ್ನು ಮೆಚ್ಚುವರು, ತಪ್ಪು ಎಂದು ಕಂಡದ್ದನ್ನು ನಿರ್ಭಯವಾಗಿ ಟೀಕಿಸುವರು.

ಪತ್ರಿಕಾರಂಗ ಪ್ರವೇಶ

ಇಂದು ಕನ್ನಡನಾಡಿನಲ್ಲಿ ಪತ್ರಿಕೆಗಳಿಗೆ ಎಷ್ಟು ಮಹತ್ವವಿದೆ! ಪತ್ರಿಕೆಗಳು ಇನ್ನೂ ಹೆಚ್ಚಾಗಿಲ್ಲದಿದ್ದ ಕಾಲದಲ್ಲಿ, ಬಹು ಕಷ್ಟ ಗಳನ್ನು ಎದುರಿಸಬೇಕಾಗಿದ್ದ ಕಾಲದಲ್ಲಿ ವೆಂಕಟಕೃಷ್ಣಯ್ಯ ನವರು ಪತ್ರಿಕೆಗಳನ್ನು ನಡೆಸಿದರು. ಪತ್ರಿಕಾಕರ್ತರಾಗಿ, ಧೀರರಾಗಿ ನಡೆದುಕೊಂಡರು. ಕನ್ನಡ ಪತ್ರಿಕೆಗಳ ಇತಿಹಾಸದಲ್ಲಿ ಬಹು ಹಿರಿಯ ಸ್ಥಾನವನ್ನು ಗಳಿಸಿಕೊಂಡರು.

ಆಗಿನ ಕಾಲದಲ್ಲಿ ಈಗಿನಂತೆ ಗಂಟೆಗೆ ಸಾವಿರಾರು ಪ್ರತಿ ಗಳನ್ನು ಅಚ್ಚು ಮಾಡುವ ಮುದ್ರಣಾಲಯಗಳಿರಲಿಲ್ಲ. ಇಡೀ ಸಂಸ್ಥಾನಕ್ಕೆ ನಾಲ್ಕೈದು ಕಾಲೇಜುಗಳು, ಇಡೀ ಜಿಲ್ಲೆಗೆ ಒಂದು ಪ್ರೌಢಶಾಲೆ ಇದ್ದರೆ ಹೆಚ್ಚು. ಆದುದರಿಂದ ಓದುಬರಹ ಬಲ್ಲ ವರು ನೂರಕ್ಕೆ ಹತ್ತು ಮಂದಿ, ಅವರಲ್ಲಿ ಪತ್ರಿಕೆ ಓದುವವರು ಒಬ್ಬರೇ ಅದೂ ಇಲ್ಲವೋ. ಎಷ್ಟೋ ಹಳ್ಳಿಗಳಿಗೆ ವಾರಕ್ಕೆ ಒಂದು ಸಲ, ಎರಡು ಸಲ ಅಂಚೆ ತಲುಪುವುದು. ಆದುದ ರಿಂದ ಹಳ್ಳಿಗಳಿಗೆ ವೃತ್ತಪತ್ರಿಕೆ ಹೋಗುವುದೇ ಅಪರೂಪ. ಈಗಿನಂತೆ ಅನುಕೂಲವಾಗಿ ಬಸ್‌ಗಳಿರಲಿಲ್ಲ. ರೈಲುಗಳೂ ಕಡಿಮೆ, ಪ್ರಯಾಣ ನಿಧಾನ. ಹೀಗಾಗಿ ವೃತ್ತಪತ್ರಿಕಗೆಳನ್ನು ಹಳ್ಳಿಗಿರಲಿ, ಸಾಕಷ್ಟು ದೊಡ್ಡ ಊರುಗಳಿಗೆ ಕಳುಹಿಸುವುದೂ ಕಷ್ಟವಾಗಿತ್ತು. ಈಗಿನಂತೆ ಕೈಗಾರಿಕೆಗಳಿರಲಿಲ್ಲ, ಕಾರ್ಖಾನೆ ಗಳಿರಲಿಲ್ಲ, ಇಷ್ಟು ವ್ಯಾಪಾರ ವ್ಯವಹಾರಗಳಿರಲಿಲ್ಲ. (ಹೋಟೆಲುಗಳೇ ಇಲ್ಲದ ಕಾಲ! ಸಿನಿಮಾ ಅಂತೂ ಇಲ್ಲವೇ ಇಲ್ಲ) ಆದುದರಿಂದ ಪತ್ರಿಕೆಗಳಿಗೆ ಜಾಹಿರಾತುಗಳೇ ಕಡಿಮೆ. ಇಂತಹ ಕಾಲದಲ್ಲಿ ಪತ್ರಿಕೆಗಳನ್ನು ನಡೆಸಬೇಕಾದರೆ ಸರ್ಕಾರದ ಪ್ರೋತ್ಸಾಹ ಒಂದು ಆಧಾರ. ಆದರೆ ವೆಂಕಟಕೃಷ್ಣಯ್ಯನವರು ಸರ್ಕಾರವನ್ನು ಟೀಕಿಸುವವರು. ಅವರಿಗೆ ಪತ್ರಿಕೆಗಳಿಂದ ಬಹು ನಷ್ಟವೇ ಆಯಿತು.

 

‘ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದರಿಂದ ಜನತೆಯ ಜನ್ಮಸಿದ್ಧ ಹಕ್ಕುಗಳಿಗೆ ಕುಂದು ಬರುವುದು.’

ಇಂತಹ ಸನ್ನಿವೇಶದಲ್ಲಿ ನಿರ್ಭಯವಾಗಿ ಮಾತನಾಡಿ, ಬರೆದು ಪತ್ರಿಕೆಗಳನ್ನು ನಡೆಸಿದ ಗಂಡುಗಲಿ ವೆಂಕಟ ಕೃಷ್ಣಯ್ಯನವರು, ಸತ್ಯನಿಷ್ಠೆ, ನಿರ್ಭೀತಿಗಳಿಂದ ಪತ್ರಿಕೋದ್ಯಮಕ್ಕೇ ಅಂದೂ ಇಂದೂ ಮೇಲ್ಪಂಕ್ತಿಯಾದವರು.

ವೆಂಕಟಕೃಷ್ಣಯ್ಯನವರು ೧೮೮೫ರಲ್ಲಿ ‘ವೃತ್ತಾಂತ ಚಿಂತಾ ಮಣಿ’ ಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ಇದರ ಯಶಸ್ಸಿನಿಂದಾಗಿ ಕನ್ನಡ ಮತ್ತು ಇನ್ನೂ ಅನೇಕ ಪತ್ರಿಕೆಗಳನ್ನು ಪ್ರಕಟಿಸುವ ಹುಮ್ಮಸ್ಸು ಬಂತು. ಎಂ.ಎಸ್.ಪುಟ್ಟಣ್ಣನವರು ನಡೆಸುತ್ತಿದ್ದ ‘ಹಿತ ಬೋದಿನಿ’ ಎಂಬುದನ್ನು ವೆಂಕಟ ಕೃಷ್ಣಯ್ಯನವರು ನಡೆಸಿಕೊಂಡು ಬಂದರು. ಅನಂತರ ‘ವೇದಾ ಮತ ಚಿಂತಾಮಣಿ’, ‘ಸಂಪದಭ್ಯುದಯ’, ‘ಸಾಧ್ವಿ’, ‘ಪೌರ ಸಾಮಾಜಿಕ ಪತ್ರಿಕೆ’ ಎಂಬುವನ್ನು ಕನ್ನಡದಲ್ಲಿಯೂ ‘ಮೈಸೂರು ಪೇಟ್ರಿಯಟ್’, ‘ಮೈಸೂರು ಹೆರಾಲ್ಡ್’ ಎಂಬುವನ್ನು ಇಂಗ್ಲಿಷಿನಲ್ಲಿಯೂ ನಡೆಸಿದರು.

ತಾತಯ್ಯನವರು ಲೇಖನಗಳಲ್ಲಿ ಹೇಳಬೇಕಾದುದನ್ನು ಸರಳವಾದ ಭಾಷೆಯಲ್ಲಿ ಸ್ಪಷ್ಟವಾಗಿ ಹೇಳುತ್ತಿದ್ದರು. ಅವರದು ಶಕ್ತಿಯುತವಾದ ಭಾಷೆ. ನಿರ್ಭಯವಾಗಿ ನಿರ್ದಾಕ್ಷಿಣ್ಯವಾಗಿ ಸರ್ಕಾರದ ಮತ್ತು ಸಮಾಜದ ನೀತಿಗಳನ್ನು ಟೀಕಿಸುತ್ತಿದ್ದರು, ಮತ್ತು ಸತ್ಯ ನ್ಯಾಯಗಳನ್ನು ಎತ್ತಿ ಹಿಡಿಯುತ್ತಿದ್ದರು. ಅಧಿಕಾರಿ ತಪ್ಪು ಮಾಡಿದರೆ ಅದನ್ನು ನಿರ್ಭಯವಾಗಿ ತೋರಿಸುತ್ತಿದ್ದರು.

ಹೋರಾಟ

ದಿವಾನ್ ಪಿ.ಎನ್.ಕೃಷ್ಣಮೂರ್ತಿ ಮತ್ತು ವಿ.ಪಿ.ಮಾಧವ ರಾಯರು ಪತ್ರಿಕೆಗಳ ಸಂಪಾದಕರುಗಳಿಗೆ ಸರ್ಕಾರವನ್ನು ಕಟು ವಾಗಿ ಟೀಕಿಸಬಾರದು ಎಂದು ಎಚ್ಚರಿಕೆ ನೀಡಿದರು. ಆದರೂ ಅವರು ಬಿಡಲಿಲ್ಲ. ಆಗ ಮೈಸೂರಿನ ನ್ಯಾಯ ವಿಧಾಯಕ ಸಭೆಯು ೧೯೦೮ ರಲ್ಲಿ ಒಂದು ಶಾಸನವನ್ನು ಮಾಡಿತು. ಇದರ ಪ್ರಕಾರ, ಪತ್ರಿಕೆ ನಡೆಸಲು ಬಯಸುವವನು ಸರ್ಕಾರದ ಅನುಮತಿ ಪಡೆಯಬೇಕು. ಸರ್ಕಾರ, ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಮೂಲಕ ಅವನ ವಿಷಯ ತಿಳಿದುಕೊಂಡು ಅವನಿಗೆ ಅನುಮತಿ ಕೊಡಬೇಕೋ ಇಲ್ಲವೋ ಎಂದು ತೀರ್ಮಾನಿಸುವುದು. ಎಂದರೆ, ಅ ತೀರ್ಮಾನ ನಿಜವಾಗಿ ಒಬ್ಬ ಪೊಲೀಸ್ ಕಾನ್ಸ್‌ಟೇಬಲ್‌ನ ಕೈಯಲ್ಲಿರುವುದು. ಪತ್ರಿಕೆ ಹೊರಡಿಸಬಹುದು ಎಂದು ಸರ್ಕಾರ ಒಪ್ಪಿದರೂ ಯಾವಾಗ ಬೇಕಾದರೂ ನಿಲ್ಲಿಸಬಹುದು. ಪತ್ರಿಕೆ ಸರ್ಕಾರವನ್ನು ಟೀಕಿಸಿದರೆ, ವಿರೋಧಿಸಿದರೆ ‘ಪತ್ರಿಕೆ ನಿಲ್ಲಿಸಿ’ ಎಂದು ಸರ್ಕಾರ ಆಜ್ಞೆ ಮಾಡಬಹುದು. ನಿಲ್ಲಿಸದಿದ್ದರೆ ಸಂಪಾದಕನ ಆಸ್ತಿಯನ್ನು ಕಿತ್ತುಕೊಂಡು ಅವರನನ್ನು ಮೈಸೂರು ಸಂಸ್ಥಾನದಿಂದಾಚೆಗೆ ಕಳುಹಿಸಬಹುದು. ಸರ್ಕಾರವು ‘ಕನ್ನಡ ನಡೆಗನ್ನಡಿ’ ಸಂಪಾದಕರನ್ನು ಗಡೀಪಾರು ಮಾಡಿತು. ಶಾಸನವನ್ನು ಟೀಕಿಸಿ ಬರೆದುದಕ್ಕೆ ‘ಸೂರ್ಯೋದಯ ಪ್ರಕಾಶಿಕಾ’ ಪತ್ರಿಕೆಯನ್ನು  ನಿಲ್ಲಿಸಿತು. ವೆಂಕಟಕೃಷ್ಣಯ್ಯನವರ ಮುದ್ರಣಾಲಯವನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿತು. ಮೈಸೂರು ಸರ್ಕಾರ ಮತ್ತು ಬ್ರಿಟಿಷ್ ಸರ್ಕಾರದ ಕ್ರಮಗಳಿಂದ ಪ್ರಸಿದ್ಧ ಪತ್ರಿಕೆಗಳು ನಿಂತವು. ಇದಕ್ಕಾಗಿ ಪತ್ರಿಕೆಗಳನ್ನು ನಡೆಸುತ್ತಿದ್ದವರು ವೆಂಕಟಕೃಷ್ಣಯ್ಯ ನವರ ನೇತೃತ್ವದಲ್ಲಿ ಸಭೆ ಸೇರಿ ಎಲ್ಲಾ ಪತ್ರಿಕೆಗಳನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದರು. ವೆಂಕಟಕೃಷ್ಣಯ್ಯನವರೇ ಮತ್ತೆಮತ್ತೆ ದಿವಾನರುಗಳನ್ನು ಕಂಡು, “ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದರಿಂದ ಜನತೆಯ ಜನ್ಮಸಿದ್ಧ ಹಕ್ಕುಗಳಿಗೆ ಕುಂದು ಬರುವುದು” ಎಂದರು. ಅದಕ್ಕೂ ಸರ್ಕಾರ ಒಪ್ಪಲಿಲ್ಲ.

ಹೋರಾಟ ಮುಂದುವರಿಯಿತು. ಕೈಬರಹದ ಭಿತ್ತಿಪತ್ರಗಳು ಸರ್ಕಾರದ ವಿರುದ್ಧವಾಗಿ ಹೊರಬಂದವು. ವೆಂಕಟಕೃಷ್ಣಯ್ಯ ನವರು ಆರೋಗ್ಯಕ್ಕೆ ಸಂಬಂಧಪಟ್ಟ ‘ನೇಚರ್ ಕ್ಯೂರ್’ ಎಂಬ ಪತ್ರಿಕೆಯನ್ನು ಪ್ರಕಟಿಸಿದರು. ಇದು ಸುದ್ದಿ ಕೊಡುವ ಪತ್ರಿಕೆಯಲ್ಲ. ಆರೋಗ್ಯ, ನೀತಿ, ಜನ ಜೀವನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಹಾಕಲು ಸರ್ಕಾರದ ಅಪ್ಪಣೆ ಬೇಕಿಲ್ಲ ಎಂದು ಅವರು ಸರ್ಕಾರದ ಅಪ್ಪಣೆ ಕೇಳದೆ ಪ್ರಕಟಿಸಿದರು. ಮತ್ತೆ ಅದನ್ನು ನಿಲ್ಲಿಸಬೇಕಾಯಿತು. ೧೯೧೧ರಲ್ಲಿ ವೆಂಕಟಕೃಷ್ಣಯ್ಯ ನವರು ‘ಸಾಧ್ವಿ’ (ಕನ್ನಡ) ಮತ್ತು ‘ಮೈಸೂರ್ ಪೇಟ್ರಿಯಟ್’ (ಇಂಗ್ಲಿಷ್) ವಾರಪತ್ರಿಕೆಗಳನ್ನು ಪ್ರಾರಂಭಿಸಿದರು. ವಿಶ್ವೇಶ್ವರಯ್ಯನವರು ದಿವಾನರಾದ ಮೇಲೆ ಪತ್ರಿಕಾ ಶಾಸನವನ್ನು ಬದಲಾಯಿಸಿ ಪತ್ರಿಕೆ ನಡೆಸುವವರಿಗೆ ಇನ್ನಿಷ್ಟು ಸ್ವಾತಂತ್ರ್ಯವಿರುವಂತೆ ಅವಕಾಶ ಮಾಡಿಕೊಟ್ಟರು.

ನಿಷ್ಠೆ

ಪತ್ರಿಕೆಯ ಬಗ್ಗೆ ವೆಂಕಟಕೃಷ್ಣಯ್ಯನವರ ಕರ್ತವ್ಯನಿಷ್ಠೆಗೆ ಒಂದು ನಿದರ್ಶನ: ೧೯೦೩ರಲ್ಲಿ ಪುತ್ರ ವಿಯೋಗವಾಯಿತು. ಆಗ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವ ಮೊದಲು, “ಈ ಹೊತ್ತಿನ ಲೇಖನ ಬರೆಯಲಿಲ್ಲವೇನೋ ಕಾಗದ ಕಡ್ಡಿ ತೆಗೆದುಕೊಂಡು ಬಾ” ಎಂದು ಹೇಳಿ ಲೇಖನ ಬರೆದು ಮುಗಿಸಿ ನಡೆದರು.

ವೆಂಕಟಕೃಷ್ಣಯ್ಯನವರು ಎಷ್ಟು ನಿರ್ಭಯವಾಗಿ ಬರೆಯುತ್ತಿದ್ದರೆಂದರೆ, ಇವರು ಪ್ರಜಾಪ್ರತಿನಿಧಿ ಸಭೆಯಿಂದ ನ್ಯಾಯ ವಿಧಾಯಕ ಸಭೆಗೆ ಚುನಾಯಿತರಾದಾಗ ದಿವಾನ್ ವಿ.ಪಿ. ಮಾಧವರಾಯರು ಚುನಾವಣೆಯನ್ನೇ ರದ್ದು ಮಾಡಿದರು. ಇವರ ಟೀಕೆಗಳನ್ನು ತಾಳಲಾರದೆ ದಿವಾನರೊಬ್ಬರು ಇವರನ್ನು ಮೈಸೂರು ಸಂಸ್ಥಾನದಿಂದ ಗಡೀಪಾರು ಮಾಡಬೇಕು ಎಂದು ಯೋಚಿಸಿದರು. ಆಗ ನಾಲ್ಮಡಿ ಕೃಷ್ಣರಾಜ ಒಡೆಯರು ಮಹಾರಾಜರು. ಅವರಿಗೆ ವೆಂಕಟಕೃಷ್ಣಯ್ಯನವರಲ್ಲಿ ಗೌರವ. ಅವರು ಒಪ್ಪಲಿಲ್ಲ.

ವೆಂಕಟಕೃಷ್ಣಯ್ಯನವರೇ ಮೈಸೂರು ಪತ್ರಿಕೋದ್ಯಮದ ಆದಿಗುರು. ವಿಶ್ವವಿದ್ಯಾನಿಲಯದ ಮಟ್ಟದಲ್ಲೂ ಪತ್ರಿಕೋದ್ಯಮ ಶಿಕ್ಷಣ ಕೊಡಬೇಕು ಎಂದು ಅದಕ್ಕಾಗಿ ಎರಡು ಸಾವಿರ ರೂಪಾಯಿಗಳ ದತ್ತಿಯನ್ನು ಕೊಟ್ಟರು. ಇದರಿಂದ ಪತ್ರಿಕೋದ್ಯಮದಲ್ಲಿ ಯಶಸ್ಸು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಕೊಡಬೇಕೆಂದು ತಿಳಿಸಿದರು. ಆದರೆ ಅದು ಅವರು ತೀರಿಹೋದ ಮೇಲೆ ಅಂದರೆ ೧೯೫೦ರಲ್ಲಿ ಆರಂಭವಾಯಿತು. ಈಗಲೂ ‘ವೃದ್ಧಪಿತಾಮಹ ವೆಂಕಟ ಕೃಷ್ಣಯ್ಯ ಬಹುಮಾನ’ ಎಂದು ಅವರ ಜ್ಞಾಪಕಾರ್ಥವಾಗಿ ಕೊಡುತ್ತಿದ್ದಾರೆ.

ಸಮಾಜ ಸೇವೆ

ವೆಂಕಟಕೃಷ್ಣಯ್ಯನವರು ಸಮಾಜಕ್ಕೆ ಹಲವು ರೀತಿಗಳಲ್ಲಿ ಸೇವೆ ಸಲ್ಲಿಸಿದರು. ಹೆಂಗಸರಿಗೆ ವಿದ್ಯಾಭ್ಯಾಸವಾಗುವುದು ದೇಶದ ದೃಷ್ಟಿಯಿಂದ ಅತ್ಯಗತ್ಯ ಎಂದು ಭಾವಿಸಿದ್ದರು. ಸ್ತ್ರೀ ವಿದ್ಯಾಭ್ಯಾಸ ಬಹಳ ಹಿಂದುಳಿದಿದ್ದಾಗ ಅವರ ಹೆಂಡತಿ ಪುಟ್ಟಲಕ್ಷ್ಮಮ್ಮನವರನ್ನು ಉಪಾಧ್ಯಾಯಿನಿಯನ್ನಾಗಿ ಮಾಡಿ, ಬಾಲಿಕಾ ಪಾಠಶಾಲೆ ಮತ್ತು ವಿದ್ಯಾರ್ಥಿನಿಲಯಗಳನ್ನು ತೆರೆದರು. ಹಿಂದುಳಿದವರ ಮತ್ತು ಹರಿಜನರ ವಿದ್ಯಾಭ್ಯಾಸಕ್ಕೆ ನೆರವು ನೀಡಿದರು. ಅಸ್ಪೃಶ್ಯತೆ ಕೊನೆಗಾಣಬೇಕೆಂದು ಸ್ಪಷ್ಟವಾಗಿ ಹೇಳುತ್ತಿದ್ದರು. ಇವರಿಗೆ ಜಾತಿಬೇಧವಿರಲಿಲ್ಲ. ಬಾಲ್ಯ ವಿವಾಹಕ್ಕೆ ಅವಕಾಶವಿರಬಾರದೆಂದೂ ವಿಧವಾ ವಿವಾಹಕ್ಕೆ ಅವಕಾಶ ಇರಬೇಕೆಂದೂ ಹೋರಾಡಿದರು. ‘ನಿರ್ಗತಿಕರು, ಅನಾಥರು ನನ್ನ ದೇವರು, ಅವರಿಗಾಗಿ ದುಡಿಯುವುದೇ ನನ್ನ ಕರ್ತವ್ಯ’ ಎನ್ನುತ್ತಿದ್ದರು.

ತಮಗೆ ಪರಿಚಯವಿದ್ದು ಒಳ್ಳೆಯ ಸ್ಥಾನಗಳಲ್ಲಿದ್ದವರಿಗೆ ಹೀಗೆ ಹೇಳುತ್ತಿದ್ದರು:

“ನಿನ್ನ ಮಾತನ್ನು ಅನೇಕ ಜನ ನಡೆಸುತ್ತಾರೆ. ಐದಾರು ಕೈಚೀಲಗಳನ್ನು ಹೊಲಿಸಿ ಕೊಡುತ್ತೇನೆ. ಅವುಗಳನ್ನು ಅದರ ಲ್ಲಿಟ್ಟು ದಿನವೂ ಅವರೊಳಗೆ ಒಂದಿಷ್ಟು ಅಕ್ಕಿ ಹಾಕಿ ಎಂದು ಹೇಳು. ಅವು ತುಂಬಿದ ಮೇಲೆ ಅನಾಥಾಲಯದ ಹುಡುಗ ರನ್ನು ಕಳುಹಿಸುತ್ತೇನೆ. ಅನಾಥಾಲಯ ನಡೆಯಲು ತುಂಬಾ ಸಹಾಯವಾಗುವುದು.”

ಒಮ್ಮೆ ಕಡಕೊಳದ ಪ್ರಾಥಮಿಕ ಶಾಲೆಯ ಬಡ ಉಪಾಧ್ಯಾಯರೊಬ್ಬರು ತಾಯಿಯಿಲ್ಲದ ಮಗುವನ್ನು ಕರೆತಂದು ತಾತಯ್ಯನವರ ಮನೆಯಲ್ಲಿರಿಸಿ, ತಾವು ವ್ಯಾಜ್ಯಕ್ಕಾಗಿ ಸುತ್ತಾಡಬೇಕಾಗಿದೆ ಎಂದಾಗ ಅವರು ಒಪ್ಪಿದರು. ಎರಡು ತಿಂಗಳ ಕಾಲ ತಮ್ಮಲ್ಲೇ ಮಗುವನ್ನು ಇಟ್ಟುಕೊಂಡರು. ಅನಂತರ ಅವರ ಮನಸ್ಸು, ‘ಬಾಲಕರಿಗೆ ಅನಾಥಾಲಯವಿದೆ; ಮಕ್ಕಳಿಗೆ ಇಲ್ಲ. ವಿಧವೆಯರಿಗಿಲ್ಲ; ವಿಧವೆಯರನ್ನು ಕರೆಸಿ ಇರಿಸಿದರೆ ಇಬ್ಬರಿಗೂ ಆಶ್ರಯ ಸಿಕ್ಕಿದಂತಾಗುತ್ತದೆ’ ಎಂದು ನುಡಿಯಿತು. ಅದಕ್ಕಾಗಿ ಪ್ರಯತ್ನವನ್ನೂ ಪಟ್ಟರು.

೧೯೧೮ರಲ್ಲಿ ಸಾಂಕ್ರಾಮಿಕ ರೋಗ ಹರಡಿ ನೂರಾರು ಜನ ಸತ್ತರು. ವೆಂಕಟಕೃಷ್ಣಯ್ಯನವರು ರೋಗಿಗಳಿಗೆ ಗಂಜಿ ಮತ್ತು ಔಷಧ ಹಂಚಲು ಏರ್ಪಾಟು ಮಾಡಿದರು, ತಾವೇ ಅದರಲ್ಲಿ ಭಾಗವಹಿಸಿದರು. ಸತ್ತವರ ನೆಂಟರಿಗೆ ಶವಗಳನ್ನು ಸಾಗಿಸು ವುದು, ಸಂಸ್ಕಾರ ಮಾಡುವುದು ಒಂದು ದೊಡ್ಡ ಕಷ್ಟವೇ ಆಯಿತು. ಆಗ ಉದಾರಿಗಳಾಗಿದ್ದ ನಾಟಕ ಶಿರೋಮಣಿ ವರದಾಚಾರ್ಯರ ಒಂದು ನಾಟಕವನ್ನು ಸಹಾಯಾರ್ಥವಾಗಿ ಆಡಿ ಅದರಿಂದ ಬಂದ ಐದುನೂರು ರೂಪಾಯಿ ಕೊಟ್ಟರು. ಇದರ ಜೊತೆಗೆ ಹಣ ಕೂಡಿಸಿ ಕಷ್ಟದಲ್ಲಿರುವವರಿಗೆ ನೆರವಾಗಲು ಏರ್ಪಾಟು ಮಾಡಿದರು.

ಪ್ರಜೆಗಳ ಹರ್ಷಗಳೇನು, ಬಾಧ್ಯತೆಗಳೇನು, ಸಮಾಜದಲ್ಲಿನ ಕುಂದುಕೊರತೆಗಳೇನು, ಅವನ್ನು ಸರಿಪಡಿಸುವುದು ಹೇಗೆ? ಇವೆಲ್ಲ ಪ್ರಶ್ನೆಗಳನ್ನು ವಿದ್ಯಾವಂತರು ಸೇರಿ ಚರ್ಚಿಸುವುದು ಅಗತ್ಯ ಎಂದು ಅವರಿಗೆ ಎನ್ನಿಸಿತು. ಅವರೂ ಅವರ ಸ್ನೇಹಿತರೂ ಸೇರಿ ಇದಕ್ಕಾಗಿ ‘ನಾಗರಿಕ ಮತ್ತು ಸಾಮಾಜಿಕ ಪ್ರಗತಿ ಸಂಘ’ ಎಂಬ ಸಂಘವನ್ನೇ ಸ್ಥಾಪಿಸಿದರು.

ಸಾಹಿತ್ಯ ಸೇವೆ

ಮೊದಲಿನಿಂದಲೂ ವೆಂಕಟಕೃಷ್ಣಯ್ಯನವರು ಸಾಹಿತ್ಯ ಪ್ರಿಯರು. ಸ್ವತಃ ಕನ್ನಡದಲ್ಲಿ ಅನೇಕ ಪುಸ್ತಕಗಳನ್ನು ಬರೆದರು. ‘ಆರೋಗ್ಯ ವಿಧಾನ ಪ್ರಕಾಶಿಕ’ ಎಂಬ ಪುಸ್ತಕ ಆರೋಗ್ಯವನ್ನು ಕಾಪಾಡಿಕೊಳ್ಳುವ ರೀತಿಯನ್ನು ಸರಳ ಶೈಲಿಯಲ್ಲಿ ವಿವರಿ ಸುತ್ತದೆ. ‘ಬೂಕರ್ ಟಿ.ವಾಷಿಂಗ್‌ಟನ್ ಚರಿತ್ರೆ’ ಎಂಬುದು ಅಮೆರಿಕದ ಬಹು ದೊಡ್ಡ ವ್ಯಕ್ತಿಯೊಬ್ಬನ ಜೀವನ ಚರಿತ್ರೆ. ‘ವಿದ್ಯಾರ್ಥಿ ಕರಭೂಷಣ’ ವಿದ್ಯಾರ್ಥಿಗಳಿಗೆ, ಉಪಾಧ್ಯಾಯರಿಗೆ, ತಂದೆ ತಾಯಿಯರಿಗೆ ನೆರವಾಗುವ ಪುಸ್ತಕ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ದೇಶವನ್ನು ಕಟ್ಟುವವರು. ಇದಕ್ಕೆ ಜ್ಞಾನಾರ್ಜನೆ ಮುಖ್ಯ. ಇದನ್ನು ಬಾಲ್ಯದಿಂದಲೂ ಮಾಡಬೇಕು ಎಂಬುದನ್ನು ಇದರಲ್ಲಿ ಆಂಗ್ಲರ ಉದಾಹರಣೆಗಳನ್ನು ಕೊಟ್ಟು ನಿರೂಪಿಸಿದ್ದಾರೆ.

ವೆಂಕಟಕೃಷ್ಣಯ್ಯನವರು ಬರೆದ ‘ನವೀನ ಭರತಖಂಡ’ ಎಂಬ ಪುಸ್ತಕ ಆಸಕ್ತಿಯನ್ನುಂಟುಮಾಡುವ ಕೃತಿ. ಅವರು ತುಂಬ ಆಚಾರನಿಷ್ಠರು, ಆದರೆ ಬರಿಯ ಸಂಪ್ರದಾಯ ಪ್ರಿಯರಲ್ಲ. ‘ನವೀನ ಭರತಖಂಡ’ ಸಂಭಾಷಣೆಗಳ ಸಂಗ್ರಹ. ಒಂದೊಂದು ಭಾಗದಲ್ಲಿ ಎರಡು ಮೂರು ಪಾತ್ರಗಳ ಸಂಭಾಷಣೆ. ಯಾವ ನಂಬಿಕೆಯನ್ನೂ ಸ್ವಂತ ಯೋಚನೆ ಇಲ್ಲದೆ ಸ್ವೀಕರಿಸಬಾರದು ಎಂಬುದು ಎಲ್ಲ ಸಂಭಾಷಣೆಗಳ ಕೇಂದ್ರ ತತ್ವ. ಒಂದೊಂದು ಸಂಭಾಷಣೆಯಲ್ಲಿ ಒಂದೊಂದು ನಂಬಿಕೆಯನ್ನು ಕುರಿತು ಚರ್ಚೆ. ಉದಾಹರಣೆಗೆ, ಒಂದು ಸಂಭಾಷಣೆಯಲ್ಲಿ ಶುಭ ದಿವಸ, ಗಳಿಗೆಗಳನ್ನು ಪ್ರತಿ ಕೆಲಸಕ್ಕೂ ನೋಡುವ ಅಭ್ಯಾಸದ ಚರ್ಚೆ. ವಿದ್ಯಾರ್ಥಿಗಳು ಪಾತ್ರಗಳನ್ನು ವಹಿಸಿಕೊಂಡು ಸಂಭಾಷಣೆಯನ್ನು ನಡೆಸಿದರೆ ಸುಮಾರು. ಹತ್ತು ನಿಮಿಷ ಬೇಕಾಗುವುದು. ತಾತಯ್ಯನವರ ಉದ್ದೇಶ, ಶಾಲೆಗಳಲ್ಲಿ ವಿದ್ಯಾರ್ಥಿಗಳು ಇವನ್ನು ಓದಿ ವಿಚಾರ ಮಾಡ ಬೇಕು, ವಾರ್ಷಿಕೋತ್ಸವ ಮೊದಲಾದ ಸಂದರ್ಭಗಳಲ್ಲಿ ಬಳಸ ಬೇಕು ಎಂದು. ಇವುಗಳಲ್ಲಿ ಅವರು ಎಷ್ಟು ಸ್ವತಂತ್ರ ವಿಚಾರ ಪ್ರಿಯರು ಎಂಬುದು ಇಂದೂ ಮೆಚ್ಚಬೇಕಾದ ಸಂಗತಿ. ಅವರು ತಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದುದೂ ಇದೇ ಮಾತನ್ನೇ: ‘ನೀವೇ ಸ್ವತಂತ್ರವಾಗಿ ಯೋಚಿಸಿ. ಹಿಂದಿನಿಂದ ಬಂದ ಪದ್ಧತಿ ಅಥವಾ ನಂಬಿಕೆ ಎಂದೇ ಒಪ್ಪಬೇಕಾಗಿಯೂ ಇಲ್ಲ, ತಿರಸ್ಕರಿಸಬೇಕಾಗಿಯೂ ಇಲ್ಲ.’

ಕನ್ನಡ ನಾಡು, ನುಡಿಗಳಿಗಾಗಿ ದುಡಿಯುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ೧೯೧೫ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತ ವಾಯಿತು. ವೆಂಕಟಕೃಷ್ಣಯ್ಯನವರು ಈ ಸಂಸ್ಥೆಯ ಕೆಲಸದಲ್ಲಿ ಸಹಕರಿಸಿದರು. ೧೯೨೨ರಲ್ಲಿ ದಾವಣಗೆರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು.

ಅಘಾತಗಳು

ಪತ್ರಿಕಾ ರಂಗದಲ್ಲಿ, ರಾಜಕೀಯ ರಂಗದಲ್ಲಿ ವೆಂಕಟ ಕೃಷ್ಣಯ್ಯನವರದು ಹೋರಾಟದ ಬದುಕು. ಸಂಸಾರದಲ್ಲಿ ತುಂಬಾ ಕಷ್ಟವನ್ನೂ ದುಃಖವನ್ನೂ ಅನುಭವಿಸಿದವರು ಅವರು. ಇದನ್ನೆಲ್ಲ ನುಂಗಿಕೊಂಡು ಅವರು ರಾಜ್ಯಕ್ಕೆ ಎಷ್ಟು ಸೇವೆ ಮಾಡಿದರು ಎಂಬುದು ಆಶ್ವರ್ಯಕರವಾದ ಸಂಗತಿ.

ವೆಂಕಟಕೃಷ್ಣಯ್ಯನವರ ಮೊದಲ ಹೆಂಡತಿ ಸಾವಿತ್ರಮ್ಮ ನವರು ೧೮೮೨ರಲ್ಲಿ ತೀರಿಕೊಂಡರು. ಬುದ್ಧಿವಂತ ಅಳಿಯ ದಕ್ಷಿಣಾಮೂರ್ತಿ ೧೮೯೬ರಲ್ಲಿ ಓದುತ್ತಿದ್ದು, ಆಕಸ್ಮಿಕವಾಗಿ ಮರಣಕ್ಕೀಡಾದ. ಪಾಪ, ಆತ ಕಟ್ಟಿದ ಪರೀಕ್ಷೆಯಲ್ಲಿ ಮೊದಲನೆಯ ತರಗತಿಯಲ್ಲಿ ಉತ್ತೀರ್ಣನಾಗಿದ್ದ. ೧೮೯೮ರಲ್ಲಿ ಎರಡನೇ ಹೆಂಡತಿಯೂ ನಿಧನ ಹೊಂದಿದರು. ವಿಧವೆಯಾದ ಚಿಕ್ಕ ಮಗಳು ೧೯೦೨ರಲ್ಲಿ ಕಾಲಾಧೀನ ನಾದಳು. ಹಿರಿಯ ಮಗ ಸುಬ್ಬಯ್ಯ ತತ್ವಶಾಸ್ತ್ರ ಪ್ರವೀಣನಾಗಿದ್ದನಲ್ಲದೆ, ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದ; ಮಿದುಳು ಕೆಟ್ಟು ರಾಜೀನಾಮೆ ಕೊಟ್ಟ. ಮೊಮ್ಮಕ್ಕಳಾದ ರಾಮ-ಲಕ್ಷ್ಮಣ ಎಂಬುವರು ಇವರ ಮನೆಯಲ್ಲೇ ಬೆಳೆಯುತ್ತಿದ್ದು, ೧೯೧೭ರಲ್ಲಿ ಪ್ಲೇಗಿನಿಂದ ತೀರಿಕೊಂಡರು. ವೆಂಕಟಕೃಷ್ಣಯ್ಯನವರ ಕಿರಿಯ ಮಗ ವೆಂಕಟರಾಮು ಹದಿನೈದನೇ ವಯಸ್ಸಿನಲ್ಲೇ ಮರಣ ಹೊಂದಿದ. ಇಂಥ ಕಷ್ಟ ಕಾಲದಲ್ಲಿ ಪತ್ರಿಕೆ ಮುದ್ರಣಾಲಯಗಳನ್ನು ಮುಚ್ಚಿ ಏಳೆಂಟು ಸಾವಿರ ರೂಪಾಯಿಗಳಿಗೆ ‘ಪದ್ಮಾಲಯ’ವನ್ನೂ ಮಾರಿ, ರಮಾವಿಳಾಸ ಅಗ್ರಹಾರದಲ್ಲಿ ಬಾಡಿಗೆ ಮನೆ ಮಾಡಿಕೊಂಡು, ವಿಧವೆಯಾದ ಸಹೋದರಿಯೊಂದಿಗೆ ವಾಸಿಸ ತೊಡಗಿದರು. ೧೯೧೮ರಲ್ಲಿ ಎರಡನೆಯ ಮಗ ನಾರಾಯಣ ರಾವ್ ಬೆಂಗಳೂರಿನಲ್ಲಿ ಸಬ್ ರಿಜಿಸ್ಟಾರ್ ಆಗಿದ್ದು ಅಮಲ್ದಾರನಾಗಿ ನೇಮಕವಾದ; ಹೊಸ ಕೆಲಸಕ್ಕೆ ಹಾಜರಾದ ಮೊದಲನೆಯ ದಿನವೇ ಆಕಸ್ಮಿಕದಲ್ಲಿ ಸಿಕ್ಕು ಸತ್ತ. ಇಷ್ಟೆಲ್ಲಾ ದುರ್ಘಟನೆಗಳೂ ಇವರ ಕಣ್ಣೆದುರಿಗೆ ನಡೆದರೂ ವೆಂಕಟಕೃಷ್ಣಯ್ಯನವರು ‘ಎಲ್ಲಾ ಆ ಜಗದೀಶ್ವರನ ಚಿತ್ತ’ ಎಂದು ಸಹಿಸಿಕೊಂಡರು.

ಹಳ್ಳಿಗಳಲ್ಲಿ ಅಭಿಮಾನ

ತಾತಯ್ಯನವರಿಗೆ ಹಳ್ಳಿಗಳಲ್ಲಿ ತುಂಬಾ ಅಭಿಮಾನ, ಅವರು ಒಮ್ಮೆ ತಮ್ಮ ಸ್ನೇಹಿತರಿಗೆ ಹೇಳಿದರಂತೆ: “ನಮ್ಮ ದೇಶವೇ ಹಳ್ಳಿಗಳ ದೇಶ. ಹಳ್ಳಿಗಳೆಲ್ಲಾ ಹಿಂದೆ ಬಿದ್ದಿವೆಯಲ್ಲಾ ಅವು ಅಭಿವೃದ್ಧಿ ಸ್ಥಿತಿಗೆ ಬರದೆ ದೇಶ ಮುಂದೆ ಬರೋದಿಲ್ಲ. ಹಳ್ಳಿಗಳ ಹಿಂದಿನ ಸ್ಥಿತಿಯನ್ನು ನಮ್ಮ ಹಿಂದಿನವರು ಬಣ್ಣಿಸುತ್ತಿದ್ದುದನ್ನು ನಾನು ಕೇಳಿದ್ದೇನೆ, ಹಳ್ಳಿಗಳನ್ನು ನೋಡಿದ್ದೇನೆ. ಉಪ್ಪು, ಗೋಧಿ, ರವೆ, ಸೀಮೆ ಎಣ್ಣೆ ಮಾತ್ರ ಹೊರಗಿನಿಂದ ಬರುತ್ತಿತ್ತು. ಉಳಿದದ್ದೆಲ್ಲಾ ಅವರೇ ಬೆಳೆದು ಕೊಳ್ಳುತ್ತಿದ್ದರು. ಬಟ್ಟೆಗಳನ್ನು ತಾವೇ ನೇಯ್ದುಕೊಳ್ಳುತ್ತಿದ್ದರು. ಜೀವನಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನೂ ಒದಗಿಸಿ ಕೊಳ್ಳುತ್ತಿದ್ದರು ಸ್ಥಳದಲ್ಲೇ. ಈಗ ಅಚ್ಚಳ್ಳೆಣ್ಣೆ, ಎಳ್ಳೆಣ್ಣೆಗಳೂ ಪಟ್ಟಣದಿಂದ ಹಳ್ಳೀಗೆ ಬರಬೇಕಾಗಿದೆ.”

ನಮ್ಮ ಹಳ್ಳಿಗರಿಗೆ ತಿಳಿದಿರುವ ಒಳ್ಳೆಯ ಔಷಧಗಳು ಸಾಕಷ್ಟು ಬೆಳಕಿಗೆ ಬಂದಿಲ್ಲ ಎಂದು ಅವರಿಗೆ ನೋವು. ಅವರೇ ಒಂದು ನಿದರ್ಶನ ಕೊಡುತ್ತಿದ್ದರು. ಅವರಿಗೆ ಕಾಮಾಲೆ ರೋಗವಾಗಿ, ಯಾವ ಔಷಧದಿಂದಲೂ ಪ್ರಯೋಜನ ವಾಗಲಿಲ್ಲವಂತೆ.

ಮೊಸರು ಮಾರುವ ಹಳ್ಳಿಯವನೊಬ್ಬನು ಔಷಧ ಕೊಡುತ್ತೇನೆ ಎಂದಾಗ ಅನುಮಾನಿಸಿ ಕಡೆಗೆ ಒಪ್ಪಿಕೊಂಡರಂತೆ. ಔಷಧದಿಂದ ಗುಣವಾಯಿತು. ತಾತಯ್ಯನವರು ಆತನಿಗೆ ಹಣ ಕೊಡಲು ಹೋದಾಗ ಆತ, ‘ನನಗೆ ಹಣ ಬೇಡ, ನಿಮಗೆ ಗುಣ ಆಯ್ತಲ್ಲ ಅದೇ ನನಗೆ ಕೋಟಿ ರೂಪಾಯಿ ಸಿಕ್ಕಹಾಗೆ!’ ಎಂದನಂತೆ. ಅವನ ನಿಷ್ಠೆ ಮತ್ತು ಔದಾರ್ಯಗಳನ್ನು ತಾತಯ್ಯನವರು ಮತ್ತೆ ಮತ್ತೆ ಹೊಗಳುತ್ತಿದ್ದರು.

ದಯಾಸಾಗರ

ತಾತಯ್ಯನವರನ್ನು ಜನ ‘ದಯಾಸಾಗರ’ ಎಂದೂ ಕರೆಯುತ್ತಿದ್ದರು. ಇದಕ್ಕೆ ಕಾರಣ ಅವರ ಅಸಾಧಾರಣ ಕರುಣೆ, ಇತರ ರಿಗೆ ಸಹಾಯ ಮಾಡುವ ಮಾನವೀಯತೆ.

ಇವರ ಮುದ್ರಣಾಲಯದಲ್ಲಿ ಒಬ್ಬ ಯುವಕ ಕೆಲಸ ಮಾಡುತ್ತಿದ್ದ. ಆತ ಅವರ ಜೇಬಿನಿಂದ ಮುನ್ನೂರು ರೂಪಾಯಿಗಳನ್ನು ತೆಗೆದುಕೊಂಡು ಹೊರಟುಹೋದ. ಮುಂಬಯಿ ಯಲ್ಲಿ ಒಂದು ದೊಡ್ಡ ವೃತ್ತ ಪತ್ರಿಕೆಯ ಕಚೇರಿ ಯಲ್ಲಿ ಕೆಲಸಕ್ಕೆ ಸೇರಿಕೊಂಡ. ಕೆಲವು ವರ್ಷಗಳಾದಮೇಲೆ ಮೈಸೂರಿಗೆ ಬಂದ. ತಾತಯ್ಯನವರ ಬಳಿ ಬಂದು, ತಾನು ತೆಗೆದುಕೊಂಡಿದ್ದ ಹಣ ಮತ್ತು ಅದಕ್ಕೆ ಅಷ್ಟು ವರ್ಷಗಳಿ ಗಾಗುವ ಬಡ್ಡಿಯನ್ನೂ ಸೇರಿಸಿ ಅವರ ಮುಂದೆ ಇಟ್ಟು, “ನಾನು ನಿಮ್ಮಿಂದ ಮುನ್ನೂರು ರೂಪಾಯಿ ಕದ್ದುಕೊಂಡು ಹೋಗಿದ್ದೆ.

ಈಗ ಅದರ ಹಣ ಮತ್ತು ಬಡ್ಡಿಯನ್ನು ಸೇರಿಸಿ ತಂದಿದ್ದೇನೆ. ಇದನ್ನು ಸ್ವೀಕರಿಸಿ, ನಾನು ಮಾಡಿದ ತಪ್ಪನ್ನು ಕ್ಷಮಿಸಬೇಕು” ಎಂದು ಪ್ರಾಥಿಸಿಕೊಂಡನು.

ತಾತಯ್ಯನವರು ಅವನನ್ನು ಆಶೀರ್ವದಿಸಿ, “ನೀನು ಏನೂ ತಪ್ಪುಮಾಡಿಲ್ಲ. ಈ ಹಣವನ್ನು ಬಡಬಗ್ಗರಿಗೆ ಸಹಾಯ ಮಾಡುವುದಕ್ಕೆ ಉಪಯೋಗಿಸು” ಎಂದರು. ಅನಂತರ ಆತ ಒಬ್ಬ ಸುಪ್ರಸಿದ್ಧ ಪತ್ರಿಕಾಕರ್ತನಾಗಿ ತಾತಯ್ಯನವರ ಸೇವೆ ಯನ್ನು ಮಾಡಿದ.

ಮತ್ತೊಬ್ಬ ಕೆಲಸಗಾರ ಸಾವಿರಾರು ರೂಪಾಯಿಗಳನ್ನು ಹಾಳುಮಾಡಿಬಿಟ್ಟ. ತಾತಯ್ಯನವರಿಗೆ ವಿಷಯ ತಿಳಿಯಿತು. ಅವನಿಗೆ ಶಿಕ್ಷೆಕೊಟ್ಟರೆ ಅವನ ಹೆಂಡತಿ-ಮಕ್ಕಳು ನಿರ್ಗತಿಕರಾಗುವರೆಂದು ಕರುಣೆ ತೋರಿ, ಅವನನ್ನು ಕರೆಸಿ, “ಮುಂದೆ ಯಾದರೂ ನೀನು ಧರ್ಮಮಾರ್ಗದಲ್ಲಿ ಹಣವನ್ನು ಸಂಪಾದಿಸಿ ಯೋಗ್ಯ ಮನುಷ್ಯನಾಗು” ಎಂದು ಬುದ್ಧಿ ಹೇಳಿ ಕಳುಹಿಸಿ ಬಿಟ್ಟರು.

ಶಿಸ್ತಿನ ದಿನಚರಿ

ತಾತಯ್ಯನವರದು ಬಹು ಶಿಸ್ತಿನ ಜೀವನ. ವೃದ್ಧಾಪ್ಯದಲ್ಲೂ ಶಿಸ್ತಿನಿಂದ ಯುವಕರೂ ಅಚ್ಚರಿ ಪಡುವಷ್ಟು ಕೆಲಸ ಮಾಡಿ ಮುಗಿಸುತ್ತಿದ್ದರು.

ದಿನವೂ ತಾತಯ್ಯನವರು ಐದು ಘಂಟೆಗೆ ಎದ್ದು ಪತ್ರಿಕೆ ಗಳಿಗೆ ಲೇಖನಗಳನ್ನು ತಮ್ಮ ಶಿಷ್ಯರಿಗೆ ಹೇಳಿ ಬರೆಸುತ್ತಿದ್ದರು. ಪತ್ರಿಕೆಯ ಕಚೇರಿಗೆ ಹೋಗುವುದು, ಕೆಲಸ, ವಿಶ್ರಾಂತಿ ಎಲ್ಲ ನಿಖರವಾಗಿ. ಆಹಾರ ಬಹು ಮಿತ. ತಾತಯ್ಯ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಬರುತ್ತಿದ್ದರು. ವಯಸ್ಸಾಗುತ್ತಾ ಬಂದರೂ ಚಾಮುಂಡಿ ಬೆಟ್ಟವನ್ನು ನಿರಾಯಾಸವಾಗಿ ಹತ್ತುತ್ತಿದ್ದರು. ತೊಂಬತ್ತರ ವಯಸ್ಸಿನಲ್ಲೂ ನಡು ಬಗ್ಗಿರಲಿಲ್ಲ. ಕಣ್ಣು, ಕಿವಿ ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಜ್ಞಾಪಕಶಕ್ತಿ ಅಗಾಧವಾಗಿತ್ತು.

 

 

‘ಈ ಹಣವನ್ನು ಬಡಬಗ್ಗರಿಗೆ ಸಹಾಯ ಮಾಡಲು ಉಪಯೋಗಿಸು.’

ತೊಂಬತ್ತರ ಹತ್ತಿರಕ್ಕೆ ಬಂದಿದ್ದು ತಮ್ಮ ಬಾಳಿನ ಕಡೆಯ ದಿನಗಳಲ್ಲಿದ್ದಾಗಲೂ ತಾತಯ್ಯನವರಿಗೆ ದೇಶದ ಚಿಂತೆ. ಮುಖ್ಯ ಸಂಗತಿಗಳನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ತಮ್ಮ ಸಹಾಯಕರಿಗೆ ಹೇಳಿ ಬರೆಸುತ್ತಿದ್ದರು. ಪ್ರಜಾಮತ, ಹಿಂದೂ, ಸ್ವರಾಜ್ಯ, ಬಾಂಬೆ ಕ್ರಾನಿಕಲ್ ಹೀಗೆ ಎಷ್ಟೋ ಪತ್ರಿಕೆಗಳಲ್ಲಿ ಅವರ ಲೇಖನಗಳು ಕಡೆಯವರೆಗೆ ಪ್ರಕಟವಾಗುತ್ತಿದ್ದವು. ‘ನನಗೆ ವಯಸ್ಸಾಯಿತು, ಈ ಆಡಳಿತ ವಿಷಯಗಳ ಗೊಡವೆ ನನಗೇಕೆ?’ ಎಂದು ಅವರಿಗೆ ಎಂದೂ ಅನ್ನಿಸಲಿಲ್ಲ.

ಎಲ್ಲರಿಗೂ ನಮಸ್ಕಾರ

ವೆಂಕಟಕೃಷ್ಣಯ್ಯನವರು ೧೯೩೩ರಲ್ಲಿ ಕಾಯಿಲೆ ಮಲಗಿದರು. ಕೊನೆಯ ದಿನಗಳಲ್ಲಿ ಬಂಧುಮಿತ್ರರಿಗೆ, ಅನಾಥಾಲಯವನ್ನು ನಡೆಸಿಕೊಂಡು ಹೋಗಿ’ ಎಂತಲೂ ಮೊಮ್ಮಕ್ಕಳಿಗೆ, ’ವೃತ್ತ ಪತ್ರಿಕೆಯನ್ನು ಮುಂದುವರಿಸಿಕೊಂಡು ಹೋಗಿ’ ಎಂತಲೂ ಹೇಳುತ್ತಿದ್ದರು.

೧೯೩೩ನೇ ಇಸವಿ ನವೆಂಬರ್ ೫ನೇ ದಿನಾಂಕವೇ “ನಾನು ೮ನೇ ದಿನಾಂಕ ಇಹಲೋಕವನ್ನು ತ್ಯಜಿಸುತ್ತೇನೆ. ಎಲ್ಲರಿಗೂ ನಮಸ್ಕಾರ” ಎಂದು ಹೇಳಿದರು. ೮ನೇ ದಿನಾಂಕ ಮುಂಜಾನೆ ನಾಲ್ಕು ಘಂಟೆಗೆ ನಿಧನ ಹೊಂದಿದರು. ಅವರ ದೇಹವನ್ನು ಸ್ಮಶಾನಕ್ಕೆ ಒಯ್ದಾಗ ಸಾವಿರಾರು ಮಂದಿ ಸೇರಿ ಕಣ್ಣೀರು ಸುರಿಸಿದರು.

ಜಾಗೃತ ಪ್ರಜಾಭಿಪ್ರಾಯದ ಸಂಕೇತ

ವೆಂಕಟಕೃಷ್ಣಯ್ಯನವರು ಸ್ವಾತಂತ್ರ್ಯಕ್ಕಾಗಿ ಹೋರಾಡಿರುವ ವೀರರು. ಬಡತನ ಅನ್ಯಾಯಗಳಿಂದ ಕಷ್ಟಪಡುತ್ತಿದ್ದವರ ಕಣ್ಣೀರುಗಳ ಮಧ್ಯೆ, ಆಶಾವಾದಿಗಳಾಗಿ ಕಾಲ ಕಳೆದವರು. ಅವರನ್ನು ಕಂಡಾಗ ಗಾಂಧಿಯವರು, “ನಿಮ್ಮ ಕೀರ್ತಿ ನಿಮಗಿಂತ ಮೊದಲೇ ನಮ್ಮ ಬಳಿ ಬಂದಿದೆ” ಎಂದು ಕೈಜೋಡಿಸಿ, ಅವರನ್ನು ‘ಭೀಷ್ಮಾಚಾರ್ಯ’ ಎಂದು ಕರೆದರು.

ವೆಂಕಟಕೃಷ್ಣಯ್ಯನವರ ಯೌವನ, ಮಧ್ಯವಯಸ್ಸು ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಬಹು ಮೊದಲೇ ಕಳೆದವು. ಶಾಲೆಗಳು ಕೆಲವೇ ಇದ್ದು ಅಕ್ಷರಸ್ಥರ ಸಂಖ್ಯೆ ಬಹು ಕಡಮೆ ಯಾಗಿದ್ದ ಕಾಲ. ಅಧಿಕಾರಿಗಳಿಗೆ ತುಂಬಾ ಅಧಿಕಾರ ಇದ್ದ ಕಾಲ. ಇಂತಹ ಕಾಲದಲ್ಲಿ ಅವರು ಪ್ರಬಲವಾದ ಜನಾಭಿಪ್ರಾಯದ ಅಗತ್ಯವನ್ನು ಕಂಡರು. ಜನರು ಎಚ್ಚೆತ್ತಿದ್ದರೆ, ಸರ್ಕಾರವಾಗಲಿ ಸ್ವಯಂ ಅಧಿಕಾರಿಗಳೇ ಆಗಲಿ ಅನ್ಯಾಯ ಮಾಡಿದಾಗ ಟೀಕೆ ಮಾಡಿ ದರೆ, ಪ್ರತಿಭಟಿಸಿದರೆ ಸರ್ಕಾರವೂ ಅಧಿಕಾರಿಗಳೂ ನ್ಯಾಯವಾಗಿ ವರ್ತಿಸುತ್ತಾರೆ; ಎಂತಹ ಒಳ್ಳೆಯವನಿಗೇ ಆಗಲಿ ಅಧಿಕಾರ ಬಂದು ಅವನು ತಪ್ಪು ಮಾಡಿದರೂ ತೋರಿಸುವವರು ಇಲ್ಲವಾದರೆ ಮದಿಸಿಹೋಗುತ್ತಾನೆ. ಅನಕ್ಷರತೆ, ಅಜ್ಞಾನ, ಬಡತನಗಳು ತುಂಬಿದ್ದ ಆ ಕಾಲದಲ್ಲಿ ವೃತ್ತಿಯಿಂದ ಉಪಾಧ್ಯಾಯ ರಾಗಿದ್ದ ವೆಂಕಟಕೃಷ್ಣಯ್ಯನವರು ಅಗತ್ಯವಾದಾಗ ಪ್ರಬಲ ಮಂತ್ರಿಗಳನ್ನೂ ದಿವಾನರನ್ನೂ ವಿರೋಧಿಸಿದರು, ಜನತೆಯ ವಾಣಿಯಾದರು. ನೂರಾರು ಮಂದಿ ಅಧಿಕಾರಿಗಳೂ ರಂಗಾಚಾರ್ಲು, ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಇವರಂತಹ ಪ್ರಬಲ ದಿವಾನರೂ ಅವರಲ್ಲಿ  ಗೌರವವನ್ನಿಟ್ಟುಕೊಂಡಿದ್ದರೂ ತಮಗಾಗಿ ತಮ್ಮ ಮಕ್ಕಳಿಗಾಗಿ ಏನನ್ನೂ ಬಯಸಲಿಲ್ಲ, ಬೇಡಲಿಲ್ಲ. ನಿರ್ವಂಚನೆಯಾಗಿ, ಆತ್ಮಸಾಕ್ಷಿಯಾಗಿ ಸಾವಿರಾರು ಮಂದಿ-ಎಲ್ಲ ಜಾತಿಯ ವಿದ್ಯಾರ್ಥಿಗಳಿಗೆ ವಿದ್ಯೆ ಹೇಳಿಕೊಟ್ಟರು. ಅನಾಥಾಲಯ ಗಳನ್ನೂ ವಿದ್ಯಾರ್ಥಿನಿಲಯಗಳನ್ನೂ ಕಟ್ಟಿಸಲು ಕಾರಣ ರಾದರು. ಇಂಗ್ಲಿಷ್ ಅಭ್ಯಾಸ, ವಿಜ್ಞಾನದ ಅಭ್ಯಾಸ, ವೃತ್ತಿ ಶಿಕ್ಷಣ, ವೈದ್ಯ ವಿಜ್ಞಾನದ ಶಿಕ್ಷಣ ಇವುಗಳ ಮಹತ್ವವನ್ನು ಗುರುತಿಸಿ ಸರ್ಕಾರಕ್ಕೆ ಒತ್ತಾಯ ಮಾಡಿದರು. ತಮ್ಮ ಸಂಸ್ಥೆಗಳಲ್ಲಿ ಸಾಧ್ಯವಾದಮಟ್ಟಿಗೆ ಇವುಗಳಿಗೆ ಪ್ರಾಧಾನ್ಯಕೊಟ್ಟರು. ಅನ್ಯಾಯಕ್ಕೆ ಸಿಕ್ಕ ಸಣ್ಣಪುಟ್ಟ ಅಧಿಕಾರಿಗಳು, ರೈತರು, ಬಡಬಗ್ಗರು ಇವರ ಪರವಾಗಿ ಪತ್ರಿಕೆಗಳಲ್ಲಿ ಬರೆದರು, ಪ್ರಜಾಪ್ರತಿನಿಧಿ ಸಭೆಯಲ್ಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದರು. ನ್ಯಾಯಕ್ಕಾಗಿ ಸತತವಾಗಿ ಹೋರಾಡಿದರು.

ಮೈಸೂರಿನಲ್ಲಿ ‘ಲ್ಯಾನ್ಸ್ ಡೌನ್ ಬಿಲ್ಡಿಂಗ್’ ಬಳಿ ಇವರ ಶಿಲಾಪ್ರತಿಮೆ ಇದೆ. ವಿದ್ಯಾಪ್ರೇಮಿಗಳು, ಪ್ರಜಾಪ್ರಭುತ್ವದ ಪ್ರೇಮಿಗಳು, ಶುಭ್ರ ಜೀವನವನ್ನು ಮೆಚ್ಚುವವರು ಇಂತಹವರೆಲ್ಲರ ಹೃದಯದಲ್ಲಿ ಇವರ ನೆನಪು ಉಳಿಯುತ್ತದೆ.